ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಸೀದಿ ಮುಂದಿನ ಗುಡಿ..

ತಿರುಪತಿ ಭಂಗಿ

ರಾತ್ರಿ ಬಿದ್ದ ಕನಸ್ಸು ಡೋಂಗ್ರಿಸಾಬನ ನಿದ್ದೆಗೆಡಿಸಿ ಎದೆ ʼಜಲ್‌ʼ ಅನಿಸಿತ್ತು. ಹಾಸಿಗೆಯಲ್ಲಿಯೇ ಎದ್ದು ಕುಳಿತ. ತಾನು ನಿಜವಾಗಲೂ ಮುಸ್ಲಿಮ್‌ನೋ ಅಥವಾ ಹಿಂದೂವೋ ಅವನ ಮನದಲ್ಲಿ ಮೂಡಿದ ಗೊಂದಲಕ್ಕೆ ಅರ್ಥವೇ ಇರಲಿಲ್ಲ. ಇಂಥ ಕನಸೇಕೆ ನನಗೆ ಬೀಳಬೇಕು? ಪಕ್ಕದಲ್ಲಿ ಇದ್ದ ಅವನ ಹೆಂಡತಿ ಬಾಯಿ ತೆರೆದು ಮಲಗಿದ್ದಳು. ಸೀರೆ ಮನಕಾಲು ದಾಟಿ ಮೇಲೆ ಸರದಿತ್ತು. “ಮೈಮೇಲೆ ಕಬರಿಲ್ಲದೆ ಮಲಗಿದೆ ಬೇಬರಸಿ” ಅಲ್ಲಿ ತನ್ನ ಬಿಟ್ಟು ಯಾರೂ ಇರದಿದ್ದರೂ ಹೆಂಡತಿಗೆ ಶಪಿಸಿದ. ಕಾಲದಸಿ ಇದ್ದ ಹಾಸಿಗೆ ಅವಳ ಮೇಲೆ ಎಳೆದ. ತಗೆದ ಬಾಯಿ ಮುಚ್ಚಿ ಅವನ ಹೆಂಡತಿ ಮಗ್ಗಲು ಬದಲಿಸಿ ಮಲಗಿದಳು. ರಾತ್ರಿ ಗೋರಿಯಲ್ಲಿ ಎದ್ದು ಕುಳಿತ ಹೆಣದಂತೆ ಆ ರಾತ್ರಿ ಎದ್ದು ಕುಳಿತು ಆಗ ತಾನೆ ಹೆದರಿಸಿದ ಕನಸಿನ ಬಗ್ಗೆ ತಲೆ ಕೆಡಸಿಕೊಂಡನು. ಆಗ ಟೇಬಲ್‌ ಮೇಲೆ ಟಿಕ್‌ಟಿಕ್‌ ಅನ್ನುವ ಗಡಿಯಾರದಲ್ಲಿ ಸಮಯ ರಾತ್ರಿ ಒಂದು ಗಂಟೆ ನಲವತ್ತೆಂಟು ನಿಮೀಷವಾಗಿತ್ತು.

ನಾನು ಕಟ್ಟಾ ಮುಸ್ಲಿಮ್‌. ದಿನವೂ ಐದು ಹೊತ್ತು ನಾಮಾಜ್‌ ಮಾಡುತ್ತೇನೆ, ವರುಷದಲ್ಲಿ ಎರಡು ಬಾರಿ ಜಮಾತ್‌ ಗೆ ಹೋಗುತ್ತೇನೆ, ಮೌಲ್ವಿಗಳು ಹೇಳಿದ ಉಪದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಿದ್ದೇನೆ. ಅದರಂತೆ ದುಡಿದ ದುಡಿಮೆಯಲ್ಲಿ ಒಂದನೇ ಭಾಗದಷ್ಟು ದಾನ ಧರ್ಮವನ್ನೂ ಮಾಡುತ್ತಿದ್ದೇನೆ. ಎಲ್ಲ ಜಾತಿ ಬಾಂದವರೊಂದಿಗೂ ಸ್ನೇಹ ಸಂಬಂದ ಮನುಷ್ಯ ಸಂಬಂದಗಳನ್ನು ಮೈಗೂಡಿಸಿಕೊಂಡೂ ಬದಕುತ್ತಿದ್ದೇನೆ ಅಲ್ಲಾವು ಒಬ್ಬನೇ ದೇವರು ಎಂದು ನಮ್ಮ ಮುಸ್ಲಿಮ್‌ ಧರ್ಮ ಶಾಸ್ತ್ರ ಹೇಳಿದಂತೆ ಏಕದೇವೋ ಭಾವದಲ್ಲಿ ಜೀವಿಸುತ್ತಾ ನೆರೆಹೊರೆಯವರ ಮೇಲೆ ನಂಬಿಕೆ ವಿಶ್ವಾಸ ಇಟ್ಟು ಬದುಕಿದರೂ ನನಗೆ ಇಂಥದೊಂದು ಕನಸು ಯಾಕೆ ಬಿದ್ದಿತು? ಡೋಂಗ್ರಿಗೆ ಆ ಕನಸು ಪರಿಪರಿಯಾಗಿ ಜೀವ ಹಿಂಡತೊಡಗಿತು.

ನಮ್ಮ ತಂದೆಯಂತೂ ಅಲ್ಲವೇ ಅಲ್ಲಾ,ನಮ್ಮಜ್ಜನೂ ಹೂಂ ಹೂಂ ಅಲ್ಲ. ನಮ್ಮಜನ್ನ ಅಜ್ಜನೋ, ಮುತ್ತಜ್ಜನೋ, ಮುತ್ತಜ್ಜನ ಮುತ್ತಜ್ಜನೋ ಯಾರಾದರೂ ನಮ್ಮ ಮನೆತನದವರು ಮೊದಲು ಹಿಂದೂಗಳೇ ಆಗಿರಬೇಕು. ಯಾರದೋ ರಾಜರ ಒತ್ತಾಯಕ್ಕೋ ಇಲ್ಲವೆ ಸ್ವ ಇಚ್ಚೆಯಿಂದಲೋ ಮುಸ್ಲಿಮ್‌ ಧರ್ಮ ಸ್ವಿಕರಿಸಿರಬೇಕು. ಆ ಕಾರಣದಿಂದಲೇ ನನಗೆ ಕನಸು ಬಿದ್ದದ್ದು ಆ ಕನಸಲ್ಲಿ ಆಂಜನೇಯ ಬಂದು ದರುಶನ ಮಾಡಿ ನನಗೊಂದು ಗುಡಿಕಟ್ಟು ಎಂದು ಪೀಡಿಸಿದ್ದು.

ಕನಸಲ್ಲಿ ದೇವರು ಹೇಳಿದಂತೆ ಗುಡಿ ಕಟ್ಟಿ ಅವನನ್ನು ಪ್ರತಿಷ್ಟಾಪಣೆ ಮಾಡಿ ನಿತ್ಯವೂ ಸ್ವಾಮಿಗೆ ಪೂಜೆ ನೆರವೆರಿಸುವುದು, ಅಭಿಷೇಕ ಮಾಡುವುದು, ಬಂದ ಭಕ್ತರಿಗೆ ತೀರ್ಥ ಪ್ರಸಾದ ನೀಡುವುದು ಎಲ್ಲವನ್ನೂ ನಾನೇ ಮಾಡುತ್ತಿದ್ದೆ. ಭಕ್ತರು ದಂಡೊಪದಂಡವಾಗಿ ಗುಡಿಗೆ ಬರುತ್ತಿರುವುದೇನೋ, ನಾನು ದಾಸರ ಪದ ಹಾಡುತ್ತಾ ಭಜಿಸುತ್ತ ಪೂಜಿಸುವುದೇನೋ ಎಲ್ಲವೂ ಬರಿ ಕನಸು ಕನಸು. ಈ ವಿಚಿತ್ರವಾಗಿ ಬಿದ್ದ ಕನಸನ್ನು ನಂಬಬೇಕೋ ಬಿಡಬೇಕೋ ಒಂದು ಗೊತ್ತಾಗುತ್ತಿಲ್ಲ. ಡೋಂಗ್ರಿಗೆ ಇಡೀ ರಾತ್ರಿ ಕರಗಿ ಚುಮುಚುಮು ಬೆಳಕು ಮೂಡಿದರೂ ಕಣ್ಣಿಗೆ ಕಣ್ಣು ಹತ್ತಿರಲಿಲ್ಲ. ಮೂಡನ ಕೆಂಪೇರುವ ಹೊತ್ತಿಗೆ ಒಂದು ಜೊಂಪು ಹತ್ತಿತು.

*****

ಎಂದಿನಂತೆ ಜಾವದಲ್ಲಿ ಮಸೀದಿ ಮೇಲಿನ ಮೈಕ್‌ಲ್ಲಿ “ಅಲ್ಲಾ ಹೋ ಅಕ್ಬರ್‌ ಅಲ್ಲಾ ಹೋ ಅಕ್ಬರ್” ಅಮೀನನ ಅಜಾ ಕೊಡುವ ದನಿ ಕೇಳಿಸಿದ್ದೆ ತಡ ಲಗುಬಗೆಯಿಂದ ಡೋಂಗ್ರಿಸಾಬ ಮುಖ ತೊಳೆದು ತಲೆಗೊಂದು ಗುಂಡು ಟೊಪ್ಪಿಗೆ ಸಿಕ್ಕಿಸಿಕೊಂಡು ಬರಗುಡುತ್ತ ಮಸೀದೆಗೆ ಹೋದ. ಅಲ್ಲಿ ಆಗಲೇ ಕೆಲವರು ನಮಾಜ್‌ ಮಾಡುತ್ತಿದ್ದರು. ತಾನೂ ಅಲ್ಲಾವುನ ದ್ಯಾನ ಮಾಡಲು ಒಂದು ಮೆಟ್ಟು ಹುಡುಕಿ ಮಸೀದಿಯಲ್ಲಿ ಕುಳಿತು ನಮಾಜ್‌ ಮಾಡತೊಡಗಿದ. ಕಣ್ಣು ಮುಚ್ಚಿ ಕಲ್ಮಾ ಪಠಿಸುವಾಗ ಅವನ ಎದುರಿಗೆ ಆಂಜನೇಯ ಸ್ವಾಮಿ ನಿಂತುಕೊಂಡಂತೆ ಅನಿಸಿತು.ಓದುವ ಕಲ್ಮಾ ಅರ್ಧಕ್ಕೆ ಬಿಟ್ಟು ಪಟ್ಟನೇ ಕಣ್ಣು ತೇರೆದು ನೋಡಿದ ಮುಂದೆ ಸುಣ್ಣದ ಗೋಡೆ ಕಾಣುತ್ತಿತ್ತು. ಅವನ ಮನದಲ್ಲಿ ಮೂಡಿದ ಆಂಜನೇಯ ಅಗೋಚರವಾಗಿದ್ದ. ಮತ್ತೆ ಡೋಂಗ್ರಿ ಆ ಜಾವದಲ್ಲೂ ಬೆವತ. ಪಕ್ಕದಲ್ಲಿದ್ದ ತನ್ನ ಜನರಿಗೆ ತನ್ನ ಮನದಲ್ಲಿ ನಡೆಯುವ ರಹಸ್ಯವನ್ನು ಹೇಳಿ ಮನಸ್ಸು ಹಗರುಗೊಳಿಸಿಕೊಳ್ಳಬೇಕು ಅಂತ ಅನಿಸಿದರೂ ಹೇಳಿದರೆ ಅವರಿಂದ ಅಪಹಾಸ್ಯಕ್ಕೆ ಒಳಗಾಗುವುದು ಖಚಿತ ಅನ್ನುವುದು ಅರಿತುಕೊಂಡು ಸುಮ್ಮನಾದ. ಮತ್ತೆ ಕಣ್ಣು ಮುಚ್ಚಿ ಅಲ್ಲಾವುನ ದ್ಯಾನ ಮಾಡತೊಡಗಿದ. ಮತ್ತೆ ಆಂಜನೇಯನ ರೂಪ ಅವನ ಕಣ್ಣ ಪರದೆಯಲ್ಲಿ ಬಂದು ಹೋದಂತೆ ಅನಿಸತೊಡಗಿತು. ರಾತ್ರಿ ಕನಸಲ್ಲಿ ಕಾಡುವದಷ್ಟೇ ಅಲ್ಲದೇ ನಮಾಜ್‌ ಮಾಡುವಾಗಲೂ ದೇವರು ಉಪ್ಪದರ ಮಾಡುತ್ತಿರುವುದು ಡೋಂಗ್ರಿಗೆ ದೊಡ್ಡ ಕಿರಿಕಿರಿ ಅನಿಸಿತು.

ಮನೆಯಲ್ಲಿ ಮಲಗಿದರೆ ಸಾಕು ನಿದ್ದೆಯಲ್ಲಿ ಒಂದು ಕನಸು, ಕನಸಲ್ಲಿ ಅದೇ ದೇವರು. ಮಸೀದಿಗೆ ನಮಾಜ್‌ಗೆ ಹೋದರೂ ಅಷ್ಟೇ ದಿನವೂ ಅದೇ ರೂಪ ಎದರುಗೊಂಡು ಡೋಂಗ್ರಿಯಲ್ಲೊಂದು ತಳಮಳ ಹುಟ್ಟಿಸಿತ್ತು. ಕನಸಲ್ಲಿ ಬಂದು ಕಾಡುವ ದೇವರನ್ನು ಬೈಯ್ಯಬೇಕು ತರಾಟಗೆ ತಗೆದುಕೊಳ್ಳಬೇಕು ಇಲ್ಲದಿದ್ದರೆ ಈ ದೇವರು ನನ್ನ ನಿದ್ದೆ ಮಾಡಲೂ ಬಿಡುವುದಿಲ್ಲಾ, ನಮಾಜ ಮಾಡಲೂ ಬಿಡುವುದಿಲ್ಲ ಡೋಂಗ್ರಿ ಮನದಲ್ಲಿ ಏನೇನೋ ಅಂದುಕೊಂಡ. ಅಂದುಕೊಂಡಂತೆ ಮಾಡುವುದೂ ಆಗದೇ ವಿಲವಿಲ ಗುಟ್ಟುತ್ತಿದ್ದ. ಅವನ ಮನದಲ್ಲಿ ನೆಮ್ಮದಿಯೇ ನಾಪತ್ತೆಯಾಗಿತ್ತು.

ನಾಳೆಯಿಂದ ಈ ಮಸೀದಿಯ ಸಹವಾಸವೂ ಬೇಡಾ, ನಮಾಜ್‌ ಗೊಡವೆಯೂ ಬೇಡ ತಣ್ಣಗೆ ಉಳ್ಳಾಗಡ್ಡಿ ಹೇರಿಕೊಂಡು ಹುಬ್ಬಳಿಗೋ ಬೆಳಗಾವಿಗೋ ದೂರ ದೂರದ ಊರ ಕಡೆ ಗಾಡಿ ಓಡಿಸಿಕೊಂಡು ತಿರುಗಿದರಾಯಿತೆಂದು ತೀರ್ಮಾನಿಸಿಕೊಂಡ. ಊರಿನ ರೈತ ಶಿವಣ್ಣ ಡೋಂಗ್ರಿಯ ಮನಿ ತನಕ ಬಂದು “ಐವತ್ತ ಪೀಸಿ ಉಳ್ಳಾಗಡ್ಡಿ ಅದಾವು ಗಾಡಿ ಯಾವೂ ಸಿಗವಲ್ಲೂ ಅಪೋ ಒಂದ ಲೋಡ ಇಳಿಸಿ ಬಂದ ಪುಣ್ಯಾ ಕಟಗೋ” ಎಂದು ಎಷ್ಟು ಪರಿತಪಿಸಿದರೂ ಅವನಿಗೆ ನೆವಾ ಹೇಳಿ ಜಾರಿಕೊಂಡಿದ್ದ. ಶಿವಣ್ಣ ಬಂದು ಹೋದ ಮೇಲೆ ಈಶ್ಯಾ, ಮಾದಪ್ಪಾ, ರಮಣ್ಣಾ ಊರಿನ ಅನೇಕ ರೈತರು ಡೋಂಗ್ರಿಯ ಕ್ಯಾಂಟರ್‌ ಗಾಡಿಗೆ ಎಡತಾಕಿದರೂ ಬಂದವರಿಗೆಲ್ಲರಿಗೂ ಒಂದೊಂದು ಕುಂಟುನೆವಾ ಹೇಳಿ ಕಳಿಸಿದ್ದ. ಊರಿನ ರೈತರು “ಡೋಂಗ್ರಿ ಬಾಡಗಿ ಹೊಡಿಯುವ ಮನಷ್ಯಾ ಅಲ್ಲಾ, ಸುಮ್ನೆ ಗಾಡಿ ತಗೊಂದು ಮನಿ ಮುಂದ ನಿಲ್ಲಸೇತಿ ಬೇಬರಸಿ” ಅಂತ ಗೊಣಗಿ ಗೊಣಗಿ ಸುಮ್ಮನಾಗಿದ್ದರು.

 ಮದವೆಯಾಗಿ ಎರಡು ವರ್ಷ ಆಗಿತ್ತು. ಹೆಂಡತಿಯನ್ನು ಒಬ್ಬಳನ್ನೇ ಬಿಟ್ಟು ದೂರ ದೂರಕ್ಕೆ ಬಾಡಗಿಗೆ ಡೋಂಗ್ರಿ ಹೋಗುತ್ತಿರಲಿಲ್ಲ. ವಸ್ತಿಯಂತೂ ಎಲ್ಲೂ ಉಳಿಯುತ್ತಿರಲಿಲ್ಲ. ಐದು ಹೊತ್ತು ಮಸೀದಿಗೇ ಹೋಗಿ ನಮಾಜ್‌ ಮಾಡಬೇಕು ಅನ್ನುವ ಅವನ ದೃಡವಾದ ಭಕ್ತಿಯೋ ಅಥವಾ ಹೆಂಡತಿಯ ಮೇಲಿನ ಅತಿಯಾದ ವ್ಯಾಮೋಹಕ್ಕೋ ಊರು ಬಿಟ್ಟು ಅವನ ಕ್ಯಾಂಟರ್‌ ನೂರು ಕಿಲೋಮಿಟರ್‌ ದೂರವೆಂದೂ ದಾಟಿರಲಿಲ್ಲ.

ಆದರೆ ಇಂದು ಡೋಂಗ್ರಿಗೆ ಊರ ಬಿಟ್ಟು, ಮನೆ ಬಿಟ್ಟು ದೂರ ಹೋಗಬೇಕು, ಕನಸಿನ ಕಾಟದಿಂದ ತಪ್ಪಿಸಿಕೊಳ್ಳಬೇಕು ಅನಿಸತೊಡಗಿತ್ತು. ಅದಕ್ಕಾಗಿಯೇ ಊರಲ್ಲಿ ತಾನೇ ಅಡ್ಡಾಡಿ ಹುಬ್ಬಳಿ, ಬೆಳಗಾವಿ, ಬೆಂಗಳೂರಿಗೆ ಬಾಡಗಿ ಹುಡುಕಿಕೊಂಡು ಊರ ಸುತ್ತತೊಡಗಿದ. ಊರಿನ ರೈತರು ಬೇರೆ ಊರಿನ ಬಾಡಗಿ ಗಾಡಿ ತರಿಸಿ ತಮ್ಮ ಮಾಲನ್ನು ಹೇರಿ ಸಾಗಿಸಿದ್ದರು. ಯಾರನ್ನೂ ಕೇಳಿದರೂ ನಮ್ಮ ಮಾಲು ನಿನ್ನೆ ಖಾಲಿಯಾಯಿತು, ಮೊನ್ನೆ ಖಾಲಿಯಾಯಿತು ಎಂದು ಹೇಳಿ ಡೋಂಗ್ರಿಯನ್ನು ಕಳಿಸಿದರು. ಡೋಂಗ್ರಿ ಮಾರಿ ಸಣ್ಣಗೆ ಮಾಡಿಕೊಂಡು ಮನೆಯತ್ತ ಹೋರಟಿದ್ದಾಗ ದಾರಿಯಲ್ಲಿ ಅಪ್ಪಣ್ಣಾ ಎದುರಾಗಿ “ಡೋಂಗ್ರಿ ಅರವತ್ತು ಪೀಸಿ ಉಳ್ಳಾಗಡ್ಡಿ ಅದಾವು ಹುಬ್ಬಳಿ ತನಕಾ ಏನಾರ ಬರ್ತಿಯೇನು?” ಅಂದ. ಆಗ ಕುಂಟನಿಗೆ ಕಾಲು ಬಂದಾಗ ಕುರುಡನಿಗೆ ಕಣ್ಣುಬಂದಾಗ ಆಗುವ ಸಂತೋಷ ಡೋಂಗ್ರಿಗೆ ಬಾಡಗಿ ಸಿಕ್ಕಾಗ ಆಯಿತು. “ಅಂದ್ಹಂಗ ಉಳ್ಳಾಗಡ್ಡಿ ಪೀಸಿ ಎಲ್ಲಿ ಅದಾವು?” ಅಂತ ಡೋಂಗ್ರಿ ಕೇಳಿದ.

“ಮ್ಯಾಲಿನ ಹೊಲದಾಗ ಅದಾವು”

“ಅಯ್ಯೋ ಆ ಹೊಲಕ್ಕ ಹೋಗಾಕ ದಾರಿ ಬಾಳ ಇಟಗರ ಐತೆಲ್ಲ”

“ನಾಕೈದ ಕಡೆ ಅಷ್ಟss ಎಡಜಾಂವ ಐತಿ, ದಾರಿಗೆ ಕಂಟಿ ಅಡ್ಡ ಗಟ್ಯಾವು, ನಾನು ಈಗ ಹೋಗಿ ಅವನ ಸವರಿ ಬೈಲ್‌ ಮಾಡ್ತಿನಿ ಕಾಳಜಿ ಬಿಡು”

“ತಗ್ಗ ಮಿಟ್ಟಿ ಇದ್ರ, ದಾರಿಗೆ ಯಾರ ಹೊಲದಾಗಿಂದರಾ ನೀರಗೀರ ಬಂದಿದ್ರ ಗಾಡಿ ಸಿಕ್ಕೊಂಡ ಪಜೀತಿ ಆಗೂದ ಆದೀತ ನೋಡು”

“ನೀ ಕಾಳಜಿ ಬಿಡು ಮಾರಾಯಾ, ಎರಡ ಕಡೆ ಅಷ್ಟss ಎರಡು ಹುಂಡಿ ಅದಾವು, ನಾನು ನನ್ನ ಮಗಾ ಹೋಗಿ ಆ ಹುಂಡಿಗೂ ಕಲ್ಲ ಮಣ್ಣ ಸುರುವಿ ಸಾಪ ಮಾಡ್ತಿವಿ, ನಿನ್ನ ಗಾಡಿಗೆ ಒಟ್ಟೊಟ್ಟ ಏನೂ ತೊಂದರಿ ಯಾಗದ್ಹಂಗ ಮಾಡ್ತಿವಿ, ನೀ ಚಿಂತಿ ಬಿಟ್ಟ ಬಾರಪೋ”

“ನನಗ ಆ ಗಾಡಿ ಒಂದ ಆಸ್ತಿಯಪೋ ಅಪ್ಪಣ್ಣ ಯಣ್ಣಾ ಅದಕss ಕಾಕೊಂಡ ಹೊಡಿಬೇಕಲ್ಲ”

“ನೀ ಕಾಳಜಿ ಬಿಡು, ಪಾಪ ನಿನ್ನಂತಾ ಬಡವನ ಹೊಟ್ಟಿಮ್ಯಾಲ ಹೊಡದ ನಾವು ಬದುಕಾಕ ಆದಿತೇನೂ?” ಅಂತ ಅಪ್ಪಣ್ಣ ನಗತೊಡಗಿದ. ಡೋಂಗ್ರಿ ಹೆಂಗಾರ ಯಾಕಾಗ್ವಲ್ದು ಊರ ಬಿಟ್ಟು ದೂರ ಹೋಗಾಕ ಒಂದ ಬಾಡಗಿ ಸಿಕ್ಕತಿ ಅಷ್ಟ ಸಾಕು ಅಂತ ಹುರುಪಿನಲ್ಲಿ ಮನಿ ಮುಟ್ಟಿದ.

                                                           *****

ಡೋಂಗ್ರಿ ಮದುವೆಯಾದ ಮೇಲೆ ಹೆಂಡತಿಯ ಊರಿನಲ್ಲಿಯೇ ಟಿಕಾಣಿ ಹೂಡಿದ್ದ. ಹೆಂಡತಿಗೆ ಅಣ್ಣತಮ್ಮಂದಿರು,ಅಕ್ಕತಂಗಿಯರು ಯಾರೂ ಇರಲಿಲ್ಲ. ಅವಳ ತಂದೆ   ತಾಯಿಗಳಿಗೆ  ಇವಳೊಬ್ಬಳೇ ಮುದ್ದಿನ ಮಗಳಾಗಿದ್ದಳು. ಅವಳ ತಂದೆ ಮಗಳ ಮದುವೆಯ ಮುನ್ನವೇ ತೀರಿಕೊಂಡಿದ್ದ. ತಾಯಿಯೊಬ್ಬಳೇ ಇದ್ದಳು. ಅವಳಿಗೂ ಲಕ್ಕವಾ ಆಗಿ ಮೂಲುಗುಂಪಾಗಿದ್ದಳು. ಅವಳನ್ನು ಸಾಯುವ ತನಕ ಜೋಪಾನ ಮಾಡುವುದು ಮಗಳು ಮತ್ತು ಅಳಿಯನ ಜವಾಬ್ದಾರಿಯಾಗಿತ್ತು. ನಾಕು ಎಕರೆ ಜಮೀನು, ಒಂದು ದೊಡ್ಡ ಮನೆ ಇತ್ತು. ಡೋಂಗ್ರಿಸಾಬನ ತಂದೆ ಹುಸೇನಿ ಮದುವೆಯಾದ ಮೇಲೆ ಮಗನನ್ನು ಸೊಸೆಯ ಆಸ್ತಿಯ ಆಸೆಗಾಗಿ ಅವಳ ಬೆನ್ನು ಹಚ್ಚಿ ಕಳಿಸಿದ್ದ. ಊರಲ್ಲಿರುವ ಉಳಿದ ಇಬ್ಬರು ಗಂಡು ಮಕ್ಕಳೊಂದಿಗೆ ಹೋಟೆಲ್‌ ವ್ಯಾಪಾರ ಮಾಡಿಕೊಂಡು ತಾನು ಸುಖವಾಗಿದ್ದ.    

ಡೋಂಗ್ರಿ ಲೋನ್‌ ಮಾಡಿ ಕ್ಯಾಂಟರ್‌ ಖರಿದಿಸಿದ್ದ. ಅದರ ದುಡಿಮೆಯಲ್ಲಿಯೇ ಅದರ ಕಂತು ಕಟ್ಟುತ್ತಾ ಮನೆತನವನ್ನು ಸಾಗುಹಾಕಿಕೊಂಡು ಹೊರಟಿದ್ದ. ಆ ಊರಿನ ಎಲ್ಲ ಜಾತಿಯ ಜನರೊಂದಿಗೆ ಸ್ನೇಹಮಯವಾಗಿ, ಒಳ್ಳೆಯ ಬಾಂದವ್ಯವನ್ನು ಬೆಳಸಿಕೊಂಡಿದ್ದ. ಮುಸ್ಲಿಮ್‌ ಸಮುದಾಯದವರಂತು ಡೋಂಗ್ರಿಸಾಬನ ಮೇಲೆ ತುಂಬಾ ನಂಬುಗೆ ವಿಶ್ವಾಸ ಹೊಂದಿದ್ದರು. “ಸರಳ ಸಜ್ಜನಿಕೆಯ ಮನುಷ್ಯ  ಡೋಂಗ್ರಿಸಾಬ” ಜನರಾಡುವ ಮಾತು ಆ ಊರಿನಲ್ಲಿ ಪ್ರಚಲಿತದಲ್ಲಿತ್ತು ಹೆಂಡತಿಯ ನಾಕು ಎಕರೆ ಜಮೀನನ್ನು ಅದೇ ಊರಿನ ಕುರುಬರ ಸಿದ್ಧಪ್ಪನಿಗೆ ಸಮಪಾಲಿನಂತೆ ಕೊಟ್ಟಿದ್ದ. ನೆಮ್ಮದಿಯ ಜೀವನವನ್ನು ಸಾಗಿಸಿದ್ದ. ಆದರೆ ಕನಸಲ್ಲಿ ಆಂಜನೇಯ ಸ್ವಾಮಿ ಬಂದು ಕಾಡತೊಡಗಿದಾಗಿನಿಂದಲೂ ಡೋಂಗ್ರಿಸಾಬ ನಿದ್ದೆ ಮಾಡುವುದೂ ಕಡಿಮೆ ಮಾಡಿದ್ದ. ಈ ವಿಷಯ ಹೆಂಡತಿ ಮುಂದೆಯೂ ಪ್ರಸ್ತಾಪಿಸದೇ ಮನದಲ್ಲಿ ತಾನೋಬ್ಬನೇ ಕೊರಗುತ್ತಿದ್ದ. ಮನೆ ಬಿಟ್ಟು ಊರು ಬಿಟ್ಟು ನಾಕಾರು ದಿನ ಹೋದರೆ ದೇವರ ಹಾವಳಿ ಕಡಿಮೆಯಾದಿತೆಂದು ಭಾವಿಸಿಯೇ ಅಪ್ಪಣ್ಣನ ಅರವತ್ತು ಪೀಸಿ ಉಳ್ಳಾಗಡ್ಡಿ ಹೇರಿಕೊಂಡು ಹುಬ್ಬಳ್ಳಿಗೆ ಹೋಗಲು ಸಜ್ಜಾಗಿದ್ದ.

ಅಪ್ಪಣ್ಣನ ಮ್ಯಾಲಿನ ಹೊಲದಿಂದ ತನ್ನ ಕ್ಯಾಂಟರ್‌ನಲ್ಲಿ ಉಳ್ಳಾಗಡ್ಡಿ ಪೀಸಿ ಹೇರಿಕೊಂಡು ಲೋಡಾದ ಗಾಡಿಯನ್ನು ನಿಧಾನವಾಗಿ ದಾರಿಯಲ್ಲಿ ಕಾಳಜಿಯಿಂದ ನಡೆಸಿಕೊಂಡು ಊರ ತುದಿ ತಲುಪಿದಾಗ ಡೋಂಗ್ರಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ. ಅಪ್ಪಣ್ಣ ಎಡಚಾದ ದಾರಿಯಲ್ಲಿಯೂ ಡೋಂಗ್ರಿ ತನ್ನ ಮಾಲನ್ನು ಸಾಗಿಸಿದ ಅನ್ನುವ ಖುಷಿಯಲ್ಲಿ ಅವನಿಗೆ ದಾರಿಯಲ್ಲಿ ಬಿರಿಯ್ಯಾನಿ ತಿನ್ನಲು ಒಂದು ದೊಡ್ಡನೋಟು ಮಡಚಿ ಅವನ ಅಂಗಿಯ ಜೋಬಿಗೆ ಹಾಕಿದ್ದ. ಆಗ ಡೋಂಗ್ರಿಗೆ ಮತ್ತಷ್ಟು ಆನಂದ ಹೆಚ್ಚಿತ್ತು. ಜಳಕಾ ಊಟ ಮಾಡಿ ಹೊರಟರಾಯಿತು ಎಂದುಕೊಂಡು ಲೋಡಾದ ಗಾಡಿಯನ್ನು ತಂದು ತಮ್ಮ ಮನೆಯ ಮುಂದಿನ ಬಯಲಿನಲ್ಲಿ ನಿಲ್ಲಿಸಿದ.  “ಹುಷಾರಿಗಿ ಹೋಗಪೋ, ನಾನು ನಾಳೆ ಸವಾಲದ ಹೊತ್ತಿಗೆ ಬರ್ತಿನಿ” ಅಂತ ಅಪ್ಪಣ್ಣ ಹೇಳಿ ಹೊರಟು ಹೋದ.

“ಹೊರಗ ಮಂಗ್ಯಾಗೋಳ ಕಾಟ ಭಾಳ ಆಗೇತಿ, ಮಾಳಗಿ ಮ್ಯಾಲ ಇಟ್ಟ ಕೊಬರಿ, ಹಪ್ಪಳಾ ಸ್ಯಾಂಡಗಿ ನಾಪತ್ತೆ ಮಾಡಿರ್ತಾವು, ಮಸೀದಿ ಮುಂದಿನ ಗಿಡದ ತುಂಬಾ ಅವುಗಳದೇ ಹಾವಳಿ ಹೆಚ್ಚಾಗೇತಿ, ಪಟಾಕಿ ಹೊಡದ್ರೂ ಹೋಗಿಲ್ಲಾ, ಕಲ್ಲು ಒಗದ್ರೂ ಜಪ್ಪಂದಿಲ್ಲಾ ಊರ ಮಂದಿಗೆ ಅವುಗಳ ಸಮಂದ ದೊಡ್ಡ ಕಿರಕಿರಿ ಆಗೇತಿ” ಡೋಂಗ್ರಿ ಹೆಂಡತಿ ಹೇಳುವ ಮಾತಿನ ಕಡೆ ಅಷ್ಟೊಂದು ಗಮನ ಹರಿಸದೇ ತನ್ನ ಲೈಸನ್ಸ್‌ ರಿನಿವಲ್‌ ಡೇಟ್‌ ಮುಗಿದು ಹೋಗಿದ್ದು ಚಿಂತೆ ಕಾಡತೊಡಗಿತು. “ಹುಬ್ಬಳ್ಳಿಗೆ ಬ್ಯಾರೆ ಹೊಂಟಿನಿ, ನಡುದಾರ್ಯಾಗ ಪೊಲೀಸ್‌ ಮಾಮಾ  ಕೈ ಒಗದ್ರ ಹೆಂಗಪಾ, ಲೋಡಬ್ಯಾರೆ ಮಾಡ್ಕೊಂದ ಕುಂತ್ಯಾ, ಬಿಡಾಕೂ ಬರಂಗಿಲ್ಲಾ, ಏನಕ್ಕೈತೋ ಆಗ್ಲಿ ಮೊದಲ ಈ  ಮನಿ, ಊರಾ ಬಿಟ್ಟ ನಾಕ ದಿನಾ ತಣ್ಣಗss ಇರ್ಬೇಕು” ಜಳಕಾ ಮಾಡಿ ಮೈಯ್ಯ ವರಸುತ್ತಿದ್ದ. ಹೊರಗ ಅಂಗಳದಾಗ ಹೆಂಡತಿ ಹುಷ್ಯಾ ಹುಷ್ಯಾ ಮಾಡುತ್ತಿದ್ದಳು. ಏನಾತು ಅಂದ. ಮತ್ತೇನಕತಿ ಉಳ್ಳಾಗಡ್ಡಿ ಪೀಸಿಮ್ಯಾಲ ಮಂಗ್ಯಾಗೋಳು ಮುಕ್ಕರಿದ್ದು ಹೊಡದ ಬಂದ್ಯಾ ಅಂದ್ಳು. ಲಗೂನ ಊಟಕ್ಕ ಹಾಕಿ ಕೊಡು ಅಂತ ಡೋಂಗ್ರಿ ಹೋಗುವ ಅವಸರ ಹೆಚ್ಚಿಸಿಕೊಂಡ. ಹೆಂಡತಿ ಬಿಸಿ ರೊಟ್ಟಿ, ನಿನ್ನೆ ಮಾಡಿದ್ದು ಮಟನ್‌ ಸಾರು ಹಾಕಿ ಕೊಟ್ಟಳು. ಗಬಗಬ ತಿಂದವನೇ “ಮನೆಕಡೆ ಹುಷಾರು” ಹೆಂಡತಿಗೆ ಹೇಳುತ್ತಾ ಡೋಂಗ್ರಿ ಗಾಡಿಯ ಚಾವಿ ತಗೆದುಕೊಂಡು ಬಾಗಿಲು ದಾಟಿದನು. ಅಂಗಳದಲ್ಲಿ ನಿಲ್ಲಿಸಿದ ಲೋಡಾಗ ಗಾಡಿಯ ಸುತ್ತಲೂ ಹುಡುಗರು ನಿಂತುಕೊಂಡು ಗಾಡಿಯ ಗಾಲಿ, ನಂಬರ್‌ ಪ್ಲೇಟ್‌ ತೂಗುತ್ತಿದ್ದರು, ಮುಂದಿನ ಬಂಪರ್‌ಗೆ ಇದ್ದ ಸಣ್ಣ ಸಣ್ಣ ಕಬ್ಬಿನ ಸರಪಳಿಯನ್ನು ತೊಟ್ಟಿಲಂತೆ ತೂಗಾಡಿಸುತ್ತ ಹುಡುಗರು ಮಜಾ ತಗೆದುಕೊಳ್ಳುತ್ತಿದ್ದರು. ಇನ್ನೂ ಕೆಲವು ಹುಡುಗರು ಮನೆಗಳ ಕುಂಬಿಯ ಮೇಲೆ ಬಾಲ ಜೋತು ಬಿಟ್ಟಿಕೊಂಡು ಮರಿಮಂಗನ ತಲೆಯಲ್ಲಿಯ ಹೇಣು ಆರಿಸಿ ಬಾಯಿಗೆ ಹಾಕಿಕೊಳ್ಳುವ ಮಂಗನನ್ನು ಬೆರಗಾಗಿ ನೋಡುತ್ತಿದ್ದರು.

ಸುತ್ತಲಿದ್ದ ಹುಡುಗರನ್ನು ಗದರಿಸಿ ಡೋಂಗ್ರಿ ಗಾಡಿ ಶುರು ಮಾಡಿದ. ಬಾಗಿಲದಲ್ಲಿ ಹೆಂಡತಿ ನಿಂತು ಅವನನ್ನು ನೋಡುತ್ತ ನಿಂತುಕೊಂಡಿದ್ದಳು. ಹೆಂಡತಿಗೆ ಕೈಬೀಸಿ ಒಂದು ನಗೆಯನ್ನು ಚೆಲ್ಲಿ ಡೋಂಗ್ರಿ ನಿಧಾನವಾಗಿ ಗಾಡಿ ನೆಡೆಸತೊಡಗಿದ. ಹುಡುಗರು ಒಂದೇ ಸಮನೇ ಕಿರಚಾಡತೊಡಗಿದರು, ಕುಂಬಿಯ ಮೇಲೆ ಕುಳಿತ ಮಂಗಗಳು ದಿಕ್ಕಾಪಾಲಾಗಿ ಓಡತೊಡಗಿದವು. ಡೋಂಗ್ರಿಯ ಗಾಡಿ ಮಸೀದಿಯ ಮುಂದೆ ನಿಧಾನವಾಗಿ ಹೊರಟಿತ್ತು. ಅಡ್ಡ ದಾರಿಗೆ ಮಂಗಗಳ ಹಿಂಡುಗಟ್ಟಿಕೊಂಡು ಜಿಗಿಯುತ್ತ ಓಡುತ್ತಿದ್ದವು. ಡೋಂಗ್ರಿ ಮಸೀದೆಯತ್ತ ಹೊರಳಿ ಅಲ್ಲಾವುನನ್ನು ನೆನೆಯಲೆಂದು ಚೂರು ಕತ್ತು ಹೊರಳಿಸುವುದೇ ತಡ, ಅವನ ಗಾಡಿಯ ಟಯರ್‌ ಒಂದು ಸಣ್ಣ ಮಂಗನ ಮರಿಮೇಲೆ ಹರಿದು ಹೋಯಿತು. ಸುತ್ತಮುತ್ತಲಿದ್ದ ಜನರು ಡೋಂಗ್ರಿಯ ಗಾಡಿಯನ್ನು ಅಡ್ಡಗಟ್ಟಿ ಬಾಯಿಗೆ ಬಂದಂತೆ ಬೈಯ್‌ ತೊಡಗಿದರು. ಅದರಲ್ಲೂ ಹಿಂದೂ ಜನರಂತು ಡೋಂಗ್ರಿಯನ್ನು ಹೊಡೆಯಲು ಈರಾಡತೊಡಗಿದರು. ಮರಿ ಮಂಗನ ತಲೆ ಮಣ್ಣಲ್ಲಿ ಮಣ್ಣಾಗಿತ್ತು. 

“ಮಂಗ ಅಂದರೆ ಹನುಮಂತ ಅದು ಸತ್ತ ಜಾಗದಲ್ಲಿಯೇ ಗುಡಿ ನಿರ್ಮಾಣ ಮಾಡಬೇಕು ಇಲ್ಲವೆಂದರೇ ಆ ಪಾಪ ನಮ್ಮನ್ನು ನಮ್ಮೂರನ್ನು ಸುಮ್ಮನೇ ಬಿಡಲಾರದು” ಎಂದು ಊರಿನ ಹಿರಿಯ ಗಂಗಯ್ಯಸ್ವಾಮಿ ತನಗನಿಸಿದ್ದು ಹೇಳುವದೇ ತಡಾ. ಕೆಲವು ಹಿಂದೂ ಹುಡುಗರಿಗೆ ಅಷ್ಟೇ ಸಾಕಿತ್ತು. ಇದೇ ಜಾಗದಲ್ಲಿ ಹನಮಪ್ಪನ ಗುಡಿ ಕಟ್ಟುವುದಷ್ಟೇ ಅಲ್ಲ ಅದಕ್ಕೇ ತಗಲುವ ಕರ್ಚು ಡೋಂಗ್ರಿನೇ ಕೊಡಬೇಕೆಂದು ಹಠಹಿಡಿದರು. ಮುಸ್ಲಿಮ್‌ ಕೆಲವು ಮುಖಂಡರು “ಮಸೀದಿಯ ಮುಂದೆ ಹನಮಪ್ಪನ ಗುಡಿ ಕಟ್ಟುವುದು ಬೇಡಾ, ಬೇಕಾದರೆ ಅದಕ್ಕೆ ತಗಲುವ ಕರ್ಚು ನಾವು ಜಮಾತದವರೂ ಹೊಂದಿಸಿ ಕೊಡುತ್ತೇವೆ ಬೇರೆ ಕಡೆ ಕಟ್ಟಿಕೊಳ್ಳಿರೆಂದು”  ಹೇಳಿದರೂ ಹಿಂದೂಗಳು ಒಪ್ಪಲಿಲ್ಲ. ಬರೀ ಹತ್ತಾರು ಮನಿಗಳಿರುವ ಮುಸ್ಲಿಮರು ಇಡೀ ಊರನ್ನು ಎದುರು ಹಾಕಿಕೊಂಡುವು ಜೀವನೆಡೆಸುವುದು ಕಷ್ಟವೆಂದು ಅರಿತುರು.

 ಗಂಗಯ್ಯಸ್ವಾಮಿ “ನಮ್ಮ ಹಿಂದೂ ಧರ್ಮದ ಪ್ರಕಾರ ಮಂಗ ಸತ್ತ ಜಾಗದಲ್ಲಿಯೇ ಹನುಮಂತನ ಗುಡಿಕಟ್ಟುವ ಸಂಪ್ರದಾಯವಿದೆ, ಬೇರೆ ಕಡೆ ಕಟ್ಟಿದರೆ ಅದು ಕಟ್ಟಿದವರಿಗೂ, ಮಂಗನ ಸಾಯಿಸಿದವರಿಗೂ,ತಕರಾರು ಮಾಡಿದವರಿಗೂ ಕೆಡಕಾಗುವುದು ನಿಶ್ಚಿತ” ಎಂದು ಉಪದೇಶಿಸಿದನು. ಆಗ ಮುಸ್ಲಿಮ್‌ ಜನರೆಲ್ಲರೂ ಡೋಂಗ್ರಿಸಾಬನನ್ನು ಬಾಯಿಗೆ ಬಂದಂತೆ ಬೈದು ತಮ್ಮ ಸಿಟ್ಟು ಆರಿಸಿಕೊಂಡರು. ಅಪಣ್ಣ ತನ್ನ ಉಳ್ಳಾಗಡ್ಡಿ ಸವಾಲು ತಪ್ಪಿದರೆ ಮತ್ತೆ ನಾಕೈದು ದಿನ ಕಾಯಬೇಕು. ಲೋಡಾಗಿ ನಿಂತ ಗಾಡಿಯಲ್ಲಿದ್ದರೇ ಕೋಳೆತು ನಾರುತ್ತವೆ ಎಂದು ಹಳಹಳಿಸುತ್ತಿದ್ದ.  “ತನ್ನ ಕನಸಲ್ಲಿ ಬರುವ ಆಂಜನೇಯಸ್ವಾಮಿಯ ಕಿರಿಕಿರಿ ತಾಳದೆ ಊರುಬಿಟ್ಟು ಹೊರಟದ್ದಕ್ಕೆ ಆತನೇ ನನಗೆ ಊರು ಬಿಟ್ಟು ಹೋಗದಂತೆ  ಈ ರೀತಿ ಶಿಕ್ಷೆಕೊಟ್ಟು ಅವಗಡ ಮಾಡಿದನೆನೋ” ಎಂದು ಡೋಂಗ್ರಿಸಾಬ ಆದ ಘಟನೆ ಕಂಡು ಭಯಗೊಂಡು ನಡಗತೊಡಗಿದ.

ಈ ಮಂಗನ ಮರಿಯ ಸಾವಿನಿಂದ ಇಡೀ ಊರಲ್ಲಿ ಧರ್ಮದ ಹೆಸರಲ್ಲಿ ಕ್ರೌರ್ಯ ಹೊಗೆಯಾಡಿ ಇಡೀ ಊರನ್ನೇ ಸರ್ವನಾಶ ಮಾಡಿಕೊಳ್ಳುವುದರಲ್ಲಿ ಯಾವ ಸಂದೇಹವೂ ಇಲ್ಲ. ಈ ಹಗೆತನ ಧರ್ಮ ಸಂಘರ್ಷದಿಂದ ಸಾದಿಸುವುದಾದರೇನಿದೆ. ನಾವು ವಿರೋಧಿಸಿದರೂ ನಮಗೆ ನ್ಯಾಯವೂ ಸಿಗದು. ವಿರೋಧ ಮಾಡುತ್ತ ಹೋದರೆ ಈ ಸಣ್ಣ ಸಮಸ್ಯೆ ರಾಷ್ಟ್ರಮಟ್ಟದವರೆಗೂ ಹಬ್ಬಿ ಮನಕುಲಕ್ಕೆ ಪಟ್ಟಾಗುವುದು ಎಂದು ಅರಿತುಕೊಂಡು ಊರಿನ ಹತ್ತುಮನೆತನದ ಮುಸ್ಲಿಮರು ಗುಡಿಕಟ್ಟಲು ಒಪ್ಪಿಗೆಕೊಟ್ಟರು. ಆಗ ಡೋಂಗ್ರಿಸಾಬನಿಗೆ ತಂಬಿಗೆ ಹಾಲು ಗಟಗಟ ಕುಡಿದಷ್ಟು ನೆಮ್ಮದಿ ಸಿಕ್ಕಿತು. ಇಡೀ ಊರ ಜನರೆಲ್ಲರೂ ಮಂಗನ ಮರಿಯನ್ನು ಶಾಸ್ತ್ರೋಕ್ತವಾಗಿ ಮಣ್ಣು ಮಾಡಿದರು. ಡೋಂಗ್ರಿಸಾಬ ಹುಬ್ಬಳಿಗೆ ತನ್ನ ಗಾಡಿಕೊಟ್ಟು ಮತ್ತೊಬ್ಬ ಡ್ರೈವರನನ್ನು ಕಳಿಸಿ ತಾನು ಹನುಮಂತನ ಗುಡಿಕಟ್ಟಲು, ಊರಲ್ಲಿ ಮನೆಮನೆಗೆ ಹೋಗಿ ಪಟ್ಟಿಯತ್ತಲು ಅಡ್ಢಾಡತೊಡಗಿದನು.

ಊರ  ಮಸೀದಿಯ ಮುಂದೆ ಐದಾರು ತಿಂಗಳಲ್ಲಿಯೇ ಆಂಜನೇಯ ಸ್ವಾಮಿಯ ಪುಟ್ಟಗುಡಿ ನಿರ್ಮಾನಗೊಂಡಿತು. ಆ ಗುಡಿಗೆ ಬೇವಿನ ಗಿಡವೇ ಛತ್ರಿಯಂತೆ ನೆರಳಾಗಿತ್ತು. ಊರಿನ ಜನರೆಲ್ಲರೂ ಒಂದೇ ಅಂಗಳದಲ್ಲಿದ್ದ ಮಸೀದಿ ಮಂದಿರಗಳ ದರುಶನ ನಿತ್ಯವೂ ಪಡೆಯುತ್ತ ನೆಮ್ಮದಿಯ ಜೀವನ ಮಾಡುತ್ತಿದ್ದರು. ದಿನುವೂ ಡೋಂಗ್ರಿಸಾಬ ಮಸೀದಿಗೆ ನಮಾಜ್‌ ಮಾಡಲು ಹೋದಾಗ ತಪ್ಪದೇ ಆಂಜನೇಯಸ್ವಾಮಿ ದರುಶನ ಮಾಡುತ್ತಿದ್ದ. ಮಸೀದಿಯಲ್ಲಿ ನಮಾಜ್‌ ಮಾಡುವಾಗ ರಾತ್ರಿ ಹೊತ್ತು ಮಲಗಿದಾಗ ಡೋಂಗ್ರಿಸಾಬನ ಕನಸಿನಲ್ಲಾಗಲೀ  ಮನಸಿನಲ್ಲಾಗಲೀ ಆಂಜನೇಯಸ್ವಾಮಿ ಮತ್ತೆಂದೂ ಕಾಣಿಸಿಕೊಳ್ಳಲಿಲ್ಲ. ಅದಕ್ಕೆ ದೇವರು ತನ್ನ ಕನಸಲ್ಲಿ ಯಾಕೆ ಬರುತ್ತಿಲ್ಲವೆಂದು ಇಡೀ ರಾತ್ರಿ ನಿದ್ದೆಗೆಟ್ಟು ಡೋಂಗ್ರಿಸಾಬ ಮತ್ತೆ ಹಳಹಳಿಸತೊಡಗಿದ.

‍ಲೇಖಕರು Admin

13 April, 2026

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading