–ಮಾಲಾ ಮ ಅಕ್ಕಿಶೆಟ್ಟಿ
ಅಂದು ಜನವರಿ 26ರ ಮಾರನೆಯ ದಿನ.ಜನವರಿ 26ರ ಪತ್ರಿಕೆ ತುಂಬಾ ವರ್ಣ ರಂಜಿತವಾಗಿ, ವಿವಿಧ ಮಾಹಿತಿಗಳಿಂದ ಕೂಡಿತ್ತು. ಎಂದಿನಂತೆ ಜನವರಿ 27ರ ಪತ್ರಿಕೆಯ ನಿರೀಕ್ಷೆಯಲ್ಲಿ ಬೆಳಿಗ್ಗೆಯಿಂದ ಕಾಯುತ್ತಿದ್ದೆವು. ಸುಮಾರು 8:30 ಆದರೂ ಪತ್ರಿಕೆ ಬರಲಿಲ್ಲ. ಯಾಕೋ ಪತ್ರಿಕೆ ಬರಲಿಲ್ಲವೆಂದು ನಾನು ಮನೆಯಲ್ಲಿ ಜನರ ಜೊತೆ ಮಾತನಾಡುತ್ತಿದ್ದೆ. ಪತ್ರಿಕೆ ನಾಳೆ ಇಲ್ಲವಾದರೆ ಪತ್ರಿಕೆಯಲ್ಲಿ ಮೊದಲೇ ಅದರ ಬಗ್ಗೆ ಮಾಹಿತಿ ಇರುತ್ತದೆ. ನಿನ್ನೆ ಇರಲಿಲ್ಲ ಹಾಗಾದರೆ ಪೇಪರ್ ಯಾಕೆ ಬರಲಿಲ್ಲವೆಂದು ಯೋಚಿಸುತ್ತಿದ್ದೆ.
ದಿನಾಲೂ ಶಾಲೆಗೆ ಹೋಗಲು ಆಗಲೇ ತಯಾರಾಗಿ, ತಿಂಡಿ ತಿಂದು ಕುಳಿತಿದ್ದ ನಾಲ್ಕುವರೆ ವರ್ಷ ಚಂದು ಒಮ್ಮೆಲೇ, “ಅವನಿಗೂ ರಜೆ ಬೇಕಲ್ವಾ? ಅದಕ್ಕೆ ಆತ ರಜೆ ತೆಗೆದುಕೊಂಡಿರಬೇಕು. ಹೀಗಾಗಿ ಪೇಪರ್ ಹಾಕಿಲ್ಲ” ಎಂದ.
ತತ್ತಕ್ಷಣ ಬಂದ ಪ್ರತಿಕ್ರಿಯೆಯಿಂದ ಆಶ್ಚರ್ಯಚಕಿತರಾದ ಮನೆಯವರು ಆತನ ಮಾತುಗಳಲ್ಲಿ ಮುಳುಗಿದರು.
“ಯಾರಿಗೆ ರಜೆ ಬೇಕು” ಎಂದರು ಚಂದುನ ಅತ್ತೆ. ಅದಕ್ಕೆ ಚಂದು “ಅವನೇ ನಮ್ಮ ಮನೆಗೆ ದಿನವೂ ಪೇಪರ್ ಹಾಕ್ತಾರಲ್ಲಾ ಆ ಅಂಕಲ್ ಗೆ. ಅವರಿಗೆ ನಮ್ಮಂತೆಯೇ ರಜೆ ಬೇಕು. ನಾವೆಲ್ಲಾ ಸಂಡೇ ಮತ್ತು ಇತರ ಹಬ್ಬಗಳಲ್ಲಿ ರಜೆ ತೆಗೆದುಕೊಂಡಂತೆ ಅವರಿಗೂ ರಜೆ ಬೇಕು” ಎಂದು ಚಂದು ದೊಡ್ಡವರ ಹಾಗೆ ದೊಡ್ಡ ಧ್ವನಿಯಲ್ಲಿ ಹೇಳಿದ.
“ಪೇಪರ್ ಅಂಕಲ್ ಹಾಕದೇ ಇದ್ದರೆ ಆ ದಿನ ಅವರಗೆ ದುಡ್ಡು ಕೊಡಲ್ಲ ಅವರ ಮಾಲೀಕರು. ಇದರಿಂದ ಅವನಿಗೆ ಲುಕಸಾನ್ ಆಗುತ್ತದೆ” ಎಂದು ಅತ್ತೆ ಅವನಿಗೆ ತಿಳಿಯುವಂತೆ ತಿಳಿಸಿದಾಗ,
“ದುಡ್ಡು ಸಿಗಲಿಲ್ಲವೆಂದರೆ ಏನಾಯ್ತು? ರಜೆ ಸಿಗುತ್ತದೆಯಲ್ಲಾ, ಆರಾಮವಾಗಿ ಮನೆಯಲ್ಲಿ ಇರಬಹುದು” ಎಂದ. ಆತನ ಮಾತುಗಳು ಅತ್ತೆಗೆ ಆಶ್ಚರ್ಯದ ಜೊತೆ ಕುತೂಹಲವನ್ನು ಮೂಡಿಸುತ್ತಿದ್ದವು. ಹಾಗೆಯೇ ಮುಂದುವರೆದು “ಮನೆಯಲ್ಲಿದ್ದು ಏನು ಮಾಡುವುದು? ಪಾಪ ಆತನ ದುಡ್ಡು ಹೋಗುತ್ತದೆಯಲ್ಲಾ?” ಅಂದಾಗ “ಮನೆಯಲ್ಲಿದ್ದು ತನಗೆ ಬೇಕಾದ ತಿಂಡಿ ತಿನ್ನಬಹುದು, ಹೊರಗೆ ಆಡಲು ಹೋಗಬಹುದು, ಟಿವಿಯಲ್ಲಿ ತನ್ನ ಫೇವರೆಟ್ ಕಾರ್ಟೂನ್ ನೋಡಬಹುದು” ಎಂದ.
ಮುಗ್ಧ ಮಗುವಿನ ವಿಚಾರಗಳು ನಿಜವಾಗಲೂ ದೊಡ್ಡವರಲ್ಲಿ ಸಂಘರ್ಷವನ್ನೇ ಮಾಡುತ್ತಿದ್ದವು. ದೊಡ್ಡವರ ಗಮನಕ್ಕೆ ಬರದ ವಿಚಾರಗಳನ್ನು ಮಗು ವ್ಯಕ್ತಪಡಿಸುತ್ತಿತ್ತು. “ದುಡ್ಡು ಬರದೇ ಇದ್ದರೆ ನಡೆಯುತ್ತದಾ?” ಅಂದಾಗ “ಒಂದು ದಿನ ದುಡ್ಡು ಬರದಿದ್ದರೆ ಆಯ್ತು. ಒಂದು ದಿನ ರೆಸ್ಟ್ ಆಗುತ್ತದೆಯಲ್ಲಾ? ಪ್ರತಿ ದಿನವೂ ಒಂದೇ ಕೆಲಸ ಮಾಡಿ ಬೋರ್ ಆಗುತ್ತದೆ. ಅದು ಹೆಂಗೆ ಗೊತ್ತಾ ನಾನು ಪ್ರತಿದಿನ ಶಾಲೆಗೆ ಹೋಗುತ್ತೇನೆ ಸಂಡೇ ಯಾವಾಗ ಬರುತ್ತದೆಂದು ಕಾಯುತ್ತೇನೆ. ಆ ಪೇಪರ್ ಅಂಕಲ್ ತನಗೆ ಯಾವಾಗ ರಜೆ ಎಂದು ಕಾಯುತ್ತಿರಬಹುದು ಅಲ್ವಾ? ಅದಕ್ಕೆ ಅಂದೆ, ಆತನಿಗೂ ರಜೆ ಬೇಕು ಅಂತ” ಎಂದು ಮಾರ್ಮಿಕವಾದ ಉತ್ತರವನ್ನು ನೀಡಿದ. ಹಾಗೆ ಮುಂದುವರೆದು “ಅತ್ತೆ ಆ ಅಂಕಲ್ ಒಮ್ಮೆಯೂ ರಜೆ ತೆಗೆದುಕೊಂಡಿಲ್ಲ. ದಿನಾಲೂ ಬೆಳಿಗ್ಗೆ 6:30ಗೆ ಅಥವಾ 7:00ಕ್ಕೆ ಪೇಪರ್ ಹಾಕುತ್ತಾರೆ. ಮಳೆ ಬರಲಿ, ಚಳಿ ಇರಲಿ ಯಾವಾಗಲೂ ನಮ್ಮ ಮನೆಗೆ 6:30ಗೆ ಪೇಪರ್ ಇರುತ್ತದೆ. ಕೆಲವೊಮ್ಮೆ ನಾನು ಇನ್ನೂ ಎದ್ದಿರಲ್ಲ ಅವಾಗಲೇ ಬಂದಿರುತ್ತದೆ. ಪಾಪ ಅಂಕಲ್ ಗೆ ರಜೆ ಕೊಟ್ಟರೆ ಅಥವಾ ಅಂಕಲ್ ತೆಗೆದುಕೊಂಡು ಏನಾಗುತ್ತದೆ? ಅವರಿಗೂ ರಜೆ ಬೇಕು” ಎಂದು ತನ್ನ ವಿಚಾರದ ಮಂಡನೆಯನ್ನು ಮುಂದುವರಿಸಿದ್ದ.
ಆತನ ಮಾತುಗಳನ್ನು ಕೇಳಿದ ಮನೆಯ ಹಿರಿಯರೆಲ್ಲರೂ ಹಾಗೆ ಕೇಳುತ್ತಿದ್ದರು.” ಆಯ್ತು ಅಂಕಲ್ ರಜೆ ತೆಗೆದುಕೊಳ್ಳಲಿ. ನೀನು ಶಾಲೆಗೆ ಲೇಟ್ ಹೋಗುವುದು ಬೇಡ. ಬೇಗನೆ ನಡೆ ಶಾಲೆಗೆ ಹೋಗೋಣ” ಎಂದು ಚಂದುನ ಅಪ್ಪ ಆತನನ್ನು ಶಾಲೆಗೆ ಕಳುಹಿಸಲು ನಡೆದರು.






0 Comments