ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಲಗಿ ಮರೆತಿದ್ದಾರೆ ಲೋಕವನು

-ಜಿ ಪಿ ಬಸವರಾಜು

ಮೇರು

ನೆತ್ತರ ನದಿಗಳೆಲ್ಲ ಬತ್ತಿ, ಹದ್ದುಮೀರಿ
ತಿಂದು ತೇಗಿ ಮಾಯವಾಗಿವೆ ರಣಹದ್ದು
ಗುಡ್ಡಬಿದ್ದ ಹೆಣ ಕರಗಿ ರಣರಂಗ ಖಾಲಿಖಾಲಿ

ಹರಿದ ಕಣ್ಣೀರು ಉಕ್ಕುಕ್ಕಿ ಮಿಕ್ಕಿಮೀರಿ
ಬರಿದಾಗಿದೆ ನಗರ, ಹೊರಟಿದ್ದಾರೆ ಗೆದ್ದ-
ವೀರರು- ದೇವಪುತ್ರರು, ಜೊತೆಗೆ ಬೆಂಕಿಯ
ಮಗಳು, ನಡೆದಿದ್ದಾರೆ ಕೊನೆಯ ಪಯಣಕೆ

ದಾರಿ ದೂರ, ಎತ್ತರೆತ್ತರ ಮೇರು
ದಾಟಬೇಕು ಎಲ್ಲವನು, ಕಟ್ಟಿಕೊಂಡ
ಕೆರೆಕಟ್ಟೆಗಳನು, ಸುಟ್ಟು ಕರುಕಾದ
ಮರಗಿಡಗಳ ಹಸಿರಿಲ್ಲದ ಸೀಮೆಯನು

ಉರಿಬಿಸಿಲು ಬರಿಗಾಲು ನಾಲಗೆ ಒಣಗಿ
ಕಣ್ಮುಂದೆ ಓಡುತಿವೆ ಬಿಸಿಲುಕುದುರೆ
ಮಂಜು ಮಂಜಾಗಿ ಕಣ್ಣು, ಮಸುಕು
ಮಸುಕು ನೋಟ, ಮೇರು ಭ್ರಮೆಯ ಆಟ

ಹೊರಲಾರರು ಭಾರ ದೇಹವನು
ದೇವಪುತ್ರರು ತತ್ತರಿಸುತ್ತಿದ್ದಾರೆ
ಹೆಜ್ಜೆಹೆಜ್ಜೆಗು, ಹಾಸಿಕೊಂಡಿದೆ
ಹಾದಿ- ದೂರ ದಿಗಂತದವರೆಗೆ

ಎಲ್ಲಿ ಜಾರಿಕೆಯೊ ಎಲ್ಲಿ ಪ್ರಪಾತವೊ
ಎಲ್ಲಿ ಸುಡುವ ಮರಳುಗಾಡೊ
ಕಂಡವರು ಯಾರೊ ಸ್ವರ್ಗವನು

ತೀರದ ದಣಿವು, ಇಂಗದ ನೀರಡಿಕೆ
ಕೊಳವಿಲ್ಲ ಬೊಗಸೆತುಂಬಲು
ಯಕ್ಷನೂ ಇಲ್ಲ ಪ್ರಶ್ನೆಗಳಿಗೆ
ಮುಂದಿದ್ದಾನೆ ಪೊರೆವ ಧರ್ಮ

ಬಿದ್ದವಳು ದ್ರೌಪದಿಯೇ?- ಏಳಲಾರಳು
ಅವಳು, ಸುತ್ತಿಕೊಂಡಿದೆ ಪಾರ್ಥಪ್ರೀತಿ
ನಕುಲ ಸಹದೇವರೊ, ಸುಂದರರು
ಜ್ಞಾನಿಗಳು, ಮಮಕಾರದ ಚಿಪ್ಪಲ್ಲಿ
ಮಲಗಿ ಮರೆತಿದ್ದಾರೆ ಲೋಕವನು

ಏಕಲವ್ಯನ ಕತ್ತರಿಸಿದ ಬೆರಳು
ಸುರಿಸುತ್ತಿದೆ ನೆತ್ತರನು, ಅರ್ಜುನನ
ನೋಟ ಮಸುಕು ಮಸುಕು; ಭೀಮ
ಬೇರಲ್ಲ, ದಾಟಲಾರ ತನ್ನ ತೋಳ-
ಬಲದ ಬೆಟ್ಟದಹಂಕಾರವನು

ಮುಟ್ಟಿದೆವೆ ಶಿಖರ, ಸ್ವರ್ಗದ್ವಾರ ?
ನೋಡುತ್ತಾನೆ ಧರ್ಮ, ಹಿಂದಿಂದೆ
ನೆರಳಾಗಿ ಬಂದ ನಿಷ್ಠೆಯ ಜೀವ,
ಬೆರಗಾಗಿ ಸವರುತ್ತಾನೆ ಬೆನ್ನ
ʼಬಂದೆಯಾ ಜೀವವೇ ಬಾ ಜೊತೆ-
ಯಲ್ಲೆ ಸೇರೋಣ ಸ್ವರ್ಗವನುʼ

ʼಆಗದಾಗದು, ಬಿಟ್ಟು ಬರಬೇಕು
ಎಲ್ಲವನು, ಇದು ಸ್ವರ್ಗದ ನಿಯಮʼ

ʼಬಿಡಲಾದೀತೆ ನಿಷ್ಠೆಯ ನೇಹಿಗನು
ಬೆನ್ನುಬಿಡದೆ ಹಿಂದೆಹಿಂದೆ ಬಂದವನುʼ

ಧರ್ಮಸಂಕಟ ಸುಡುವುದು ಒಳ-
ಹೊರಗನ್ನು; ನಿಲ್ಲುತಾನೆ ಧರ್ಮ
ಮುಂದಡಿ ಇಡದೆ ಧರ್ಮ ಬಿಡದೆ

‍ಲೇಖಕರು Admin

26 June, 2026

1 Comment

  1. Vijayendra Patil

    ನೆರಳಂತೆ ಜೊತೆಯಲ್ಲಿ ಬರುವ ವ್ಯಾಮೋಹ, ಪಾಪಕರ್ಮ,ಅವುಗಳ ನೆನಪು; ಬಲವಿದ್ದಾಗ ಮಾಡಿದ ಅತಿರೇಕಗಳು;
    ಸ್ವರ್ಗದ ದಾರಿಯಲ್ಲಿ ಮಾತ್ರವಲ್ಲ, ಸ್ವರ್ಗ ಸೇರಿದರೂ ಅವು ನಮ್ಮನ್ನು ಬಿಡುವುದಿಲ್ಲ…
    ಇವೆಲ್ಲವುಗಳನ್ನು ತೊರೆಯುವುದಾದರೆ ಸ್ವರ್ಗ ಇದ್ದಲ್ಲೇ ಸಿಗುವುದಲ್ಲವೇ?
    ಆದರೆ ಇದ್ದಲ್ಲಿಯ ಸ್ವರ್ಗಕ್ಕಿಂತ ದೂರದ ಸ್ವರ್ಗದ ಆಸೆಯೇ ಬಹಳ, ಮನುಷ್ಯನಿಗೆ..
    ನಾಯಿಯಂತೆ ನಮ್ಮ ನೆರಳೆಂಬ ಭೂತ ನಮ್ಮ ಬೆನ್ನು ಹತ್ತುವುದೇ ಅಂತಿಮ ನಿಜ..
    ತುಂಬಾ ಒಳ್ಳೆಯ ಕವಿತೆ,ಸರ್…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading