ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಬ್ಬಿದ ತಾಯಬೇರಿನ ಮಮತೆ?

ಕೆ ಎನ್ ಲಾವಣ್ಯಪ್ರಭಾ

ಏನನ್ನು ಚಿತ್ರಿಸುವಿರಿ?

ನೆಲದಾಳದಲ್ಲಿ ಅವಿತುಕೊಂಡು
ದಣಿದ ದಾಹಕೆ ನೀರುಣಿಸಿ
ಹಬ್ಬಿದ ತಾಯಬೇರಿನ ಮಮತೆ?

ಆಕಾಶದಷ್ಟೆತ್ತರ ಬೆಳೆದು ನಿಂತು
ಆಸರೆ ನೀಡಿ ಪೊರೆವ ಅಪ್ಪನ ಘನತೆ?

ಅವಕಾಶದುದ್ದಕ್ಕೂ ತೋಳು ಚಾಚಿದ ಕೊಂಬೆರೆಂಬೆಗಳ
ವಾತ್ಸಲ್ಯದ ನೆರಳು?

ಬಳ್ಳಿ ಹಸಿರೆಲೆಗಳ ತೂಗಾಟದಲಿ
ಭುಜ ಸವರುವ ಆಪ್ತ ಸುಳಿಗಾಳಿ?

ಹೂವಿನೆಸಳುಗಳ ಅರಳಿನಲ್ಲಿ
ಮನವ ಮುಟ್ಟುವ ಗಂಧ ಸುಗಂಧ?
ದುಂಬಿ ಹೀರುವ ಮಧುವಿನ ಸವಿ?

ಹೆಜ್ಜೆ ಇಟ್ಟಲ್ಲೆಲ್ಲಾ ಮೈಚಾಚಿಕೊಂಡ
ಹುಲ್ಲುಹಾಸಿನ ಮೃದು ಸ್ಪರ್ಶ?

ಗಿಡಮರದ ಟೊಂಗೆಯಲಿ
ಗೂಡಕಟ್ಟಿ ತತ್ತಿಯಿಟ್ಟು
ನಲಿವ ಬಣ್ಣಬಣ್ಣದ ಹಕ್ಕಿ ಕಲರವ?

ಹುಲ್ಲು ಮರ ಕೊಂಬೆ ಎಲೆ ಹೂಗಳ
ಭದ್ರ ಹಿಡಿದಿಡುವ ಮಣ್ಣ ಕಣ್ಣಿನ ಹೊಳಪು?

ಸೊಂಪಾದ ಕಾಡ ದಟ್ಟವಾಗಿಸುವ
ಇರುಳ ಮಳೆಯ ಸಪ್ಪಳ
ಜೀರುಂಡೆ ಸದ್ದು?

ದಟ್ಟ ಕಾನನದೊಳಗಿಂದ ನುಸುಳುವ
ಬೆಳ್ಳಿ ಬೆಳಕು?
ಸುತ್ತ ಆವರಿಸಿದ ದಿವ್ಯ ಮೌನ?

ಆತ್ಮದೊಳಗಿಳಿದು
ದಣಿದ ಶಬ್ದಗಳಿಗೆ ಲಾಲಿ ಹಾಡಿ
ಮಲಗಿಸಿ ಉಯ್ಯಾಲೆಯಾಡುತ್ತಾ
ರಮಿಸುವ ಸುಂದರ ಏಕಾಂತ?

ಏನನ್ನು ಚಿತ್ರಿಸುವಿರಿ ಹೇಳಿ ಈಗ?

‍ಲೇಖಕರು Admin

26 June, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading