ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮ್ಮ ಮಾತುಗಳ ಮಾಧುರ್ಯಕ್ಕೆ ಸಂವಿಧಾನದ ಅಂಕುರ

ಡಾ. ಸಂತೋಷ ಹಾನಗಲ್ಲ ಅವರ ಕೃತಿ ‘ಸಂವಿಧಾನ ನುಡಿ ಸಂಹಿತೆ’

ಈ ಕೃತಿಯ ಮುನ್ನುಡಿ ಇಲ್ಲಿದೆ.

-ಡಾ. ಸಂತೋಷ ಹಾನಗಲ್ಲ

ಭಾರತೀಯ ಸಂವಿಧಾನವು ಇಡೀ ರಾಷ್ಟçದ ಸಾಮುದಾಯಿಕ ಆಶಯಗಳನ್ನು ಪ್ರತಿನಿಧಿಸುವ ಮಹತ್ವದ ಕೃತಿ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳನ್ನು ಸರ್ಕಾರದ ಮೂರು ಮುಖ್ಯ ಅಂಗಗಳನ್ನಾಗಿ ಸೃಷ್ಟಿಸಿ ಪ್ರತಿ ಅಂಗದ ಅಧಿಕಾರ ವ್ಯಾಖ್ಯೆಯನ್ನು ನೀಡುವುದಲ್ಲದೇ ಅವುಗಳ ಜವಾಬ್ದಾರಿಯನ್ನು ಖಚಿತಗೊಳಿಸಿರುವ ಸಂವಿಧಾನವು ತನ್ನ ಸರಳ ಅಳವಡಿಕೆಯ ವಿನ್ಯಾಸದಿಂದಲೇ ವಿಶ್ವದ ಅತ್ಯುತ್ಕೃಷ್ಟ ಕೃತಿಗಳಲ್ಲಿ ಮುಖ್ಯವಾದದ್ದಾಗಿ ರೂಪುಗೊಂಡಿದೆ.

೧೯೫೦ರಲ್ಲಿ ಭಾರತವು ಸಂವಿಧಾನವನ್ನು ಅಳವಡಿಸಿಕೊಂಡ ಸಂದರ್ಭದಲ್ಲಿದ್ದ ಅನೇಕ ಸವಾಲುಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಎದುರಿಸಲು ಈ ಕೃತಿ ಶಕ್ತವಾಗಿತ್ತು ಎನ್ನುವುದಷ್ಟೇ ಇದರ ಹೆಗ್ಗಳಿಕೆಯಲ್ಲ. ಅಧುನಿಕ ಯುಗದ ಸಂದಿಗ್ಧತೆಗಳಿಗೆ ಕೂಡ ಈ ಕೃತಿ ತನ್ನ ಪರಿಹಾರಗಳನ್ನು ಅಗಲೇ ಒದಗಿಸಿತ್ತು ಎನ್ನುವುದಕ್ಕೆ ಸಾಕ್ಷಿಯೆಂಬ೦ತೆ ಈ ಪುಸ್ತಕವನ್ನು ನಿಮ್ಮ ಮುಂದಿಡಲು ಯತ್ನಿಸಿದ್ದೇನೆ. ಭಾಷಾ ಸವಾಲುಗಳು ಇಂದು ಹಿಂದೆ೦ದಿಗಿ೦ತಲೂ ಮುನ್ನಲೆಯಲ್ಲಿವೆ. ಏಕಭಾಷಾ, ದ್ವಿಭಾಷಾ, ತ್ರಿಭಾಷಾ ಸೂತ್ರಗಳನ್ನು ನಾವು ಹೆಚ್ಚು ಹೆಚ್ಚು ಚರ್ಚಿಸಿದ್ದೇವೆ. ಯಾವುದು ಮುಖ್ಯವೆನ್ನುವ ಬಗ್ಗೆ ಚಿಂತನೆಯನ್ನು ಕೂಡ ಜಾರಿಯಲ್ಲಿಟ್ಟಿದ್ದೇವೆ. ಅದರೆ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಸಂವಿಧಾನ ಅಳವಡಿಕೆಯ ಕುರಿತಾದ ಚರ್ಚೆಯ ಸಂದರ್ಭದಲ್ಲಿ ಅಡಿದ ಮಾತು ಗಮನಾರ್ಹ. ಅವರು ಅಂದೇ “ಹಿಂದಿ ದೇವನಾಗರಿ ಲಿಪಿಯಲ್ಲಿ ರಾಷ್ಟ್ರಭಾಷೆ ಅಥವಾ ಆಡಳಿತ ಭಾಷೆಯಾಗಬೇಕೆಂಬ ಅನುಚ್ಛೇದವನ್ನು ಅನುಸರಿಸಲು ಅಭಿವೃದ್ಧಿ ಪಡಿಸುವ ಸ್ವಾತಂತ್ರ್ಯವನ್ನು ಪ್ರಾಂತ್ಯಕ್ಕೆ ಬಿಟ್ಟುಕೊಡಬೇಕು” ಎಂದು ಹೇಳಿ ಒಕ್ಕೂಟ ವ್ಯವಸ್ಥೆಗೆ ಭಾಷಾ ಸ್ವಾತಂತ್ರ್ಯದ ಸ್ಪಷ್ಟ ದಿಕ್ಕನ್ನು ಕಲ್ಪಿಸಿದ್ದರು. ಈ ಕೃತಿಯಲ್ಲಿ ಅಡಕಗೊಳಿಸಲಾಗಿರುವ ಭಾರತದ ಸಂವಿಧಾನ ರಚನಾ ಸಭೆಯ ಸುದೀರ್ಘ ಚರ್ಚೆಗಳ ದಾಖಲೆಗಳು ಈ ನಿಟ್ಟಿನಲ್ಲಿ ಸ್ಪಷ್ಟ ಒಳನೋಟವನ್ನು ನಮಗೆ ದಕ್ಕಿಸುತ್ತವೆ.

ಹಾಗಾಗಿ ಈ ಕೃತಿಯಲ್ಲಿ ನಾನು ದಾಖಲಿಸಿರುವ ವಿಷಯಗಳು ಸಂವಿಧಾನದಲ್ಲಿ ಭಾಷೆಗಳ ಕುರಿತು ನೀಡಲಾದ ಸ್ಥಾನಮಾನ, ಹಕ್ಕುಗಳು, ಜವಾಬ್ದಾರಿಗಳು ಮತ್ತು ಮೌಲ್ಯಗಳು ದೇಶದ ಏಕತೆಯನ್ನು ಕಾಪಾಡುತ್ತಾ, ವೈವಿಧ್ಯತೆಯನ್ನು ಗೌರವಿಸುವ ನಮ್ಮ ಸಂಸ್ಕೃತಿಯ ವಿಶೇಷತೆಯನ್ನು ಪ್ರತಿಬಿಂಬಿಸುತ್ತವೆ ಎನ್ನುವುದನ್ನು ಮನಗಂಡಿದ್ದೇನೆ.

ಅ೦ತೆಯೇ ಸಂವಿಧಾನದ ಭಾಷಾ ವಿಧಿಗಳು ಕೇವಲ ಕಾನೂನು ಪರವಾದ ಅಂಶಗಳಲ್ಲ, ಅವು ನಮ್ಮ ಸಮಾಜದ ನಂಬಿಕೆಯನ್ನು ಹಿಡಿದಿಡುವ ಸಾಂಸ್ಕೃತಿಕ ದಾಖಲೆಗಳೆಂಬ ಅರಿವು ಸಹ ಈ ಕೃತಿ ರಚಿಸುವ ಸಂದರ್ಭದಲ್ಲಿ ನನ್ನಲ್ಲಿ ಮೂಡಿದೆ.

ಇಡೀ ಸಂವಿಧಾನದ ಸ್ಥೂಲ ಪರಿಚಯದೊಂದಿಗೆ ಭಾರತದ ಅಧಿಕೃತ ಭಾಷಾ ವಿವರಣೆಯನ್ನು ನೀಡುವ ಸಂವಿಧಾನದ ೩೪೩ ರಿಂದ ೩೫೧ನೇ ವಿಧಿಗಳ ಕುರಿತಂತೆ ಈ ಕೃತಿಯು ಸಮಗ್ರವಾಗಿ ಚರ್ಚಿಸಿದ್ದು, ದಾಖಲೆಗಳ ಮೂಲಕವೇ ಇಂದಿನ ಪರಿಸ್ಥಿತಿಯನ್ನು ಓದುಗರಿಗೆ ಸುಲಭವಾಗಿ ಮನಗಾಣಿಸುವ ಯತ್ನವನ್ನು ಮಾಡಿದ್ದೇನೆ. ಹಾಗೆಯೇ ಭಾಷಾ ಆಯೋಗ, ರಾಜ್ಯಗಳ ಪುನರ್ವಿಂಗಡಣೆ, ಭಾಷೆಗಳ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿನಿಯಮಗಳು ಹೀಗೆಯೂ ಅವಲೋಕಿಸುವ ಪ್ರಯತ್ನವನ್ನು ಸಹಾ ನಡೆಸಿದ್ದೇನೆ.

ಕೃತಿಯನ್ನು ಹೊರತರಲು ನನಗೆ ಮೊದಲು ಅಂಕುರ ಹಾಕಿದ್ದು, ಹಿರಿಯ ಭಾಷಾತಜ್ಞರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಆದ ಡಾ. ಪುರುಷೋತ್ತಮ ಬಿಳಿಮಲೆ ಅವರು. ಅಲ್ಲದೇ ಕೃತಿಯನ್ನು ಸಂಪೂರ್ಣವಾಗಿ ನೋಡಿ ತಮ್ಮ ನುಡಿಗಳನ್ನು ಬರೆದುಕೊಟ್ಟು ನನಗೆ ಆಶೀರ್ವದಿಸಿದ್ದಾರೆ. ಅವರಿಗೆ ನಾನು ಸದಾಋಣಿಯಾಗಿರುವೆ. ಈ ಕೃತಿಯನ್ನು ಮುದ್ರಿಸಲು ನಮಗೆ ಅನುಮೋದಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸರ್ವ ಸದಸ್ಯರಿಗೆ ನನ್ನ ಮನದಾಳದ ನಮನಗಳು. ಈ ಕೃತಿಯನ್ನು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಾದ ಶ್ರೀ ಎಚ್.ಎನ್. ನಾಗಮೋಹನದಾಸ್ ಹಾಗೂ ಹಿರಿಯ ಭಾಷಾ ತಜ್ಞರಾದ ಪ್ರೊ. ಅಬ್ದುಲ್ ರೆಹಮಾನ್ ಪಾಷ ಅವರಿಗೆ ಪರಾಮರ್ಶನಕ್ಕಾಗಿ ಪ್ರಾಧಿಕಾರದಿಂದ ಕಳುಹಿಸಲಾಗಿತ್ತು. ಅವರುಗಳು ಕೃತಿ ಉತ್ತಮವಾಗಿದ್ದು, ಪ್ರಾಧಿಕಾರದಿಂದ ಅವಶ್ಯ ಪ್ರಕಟಿಸಬಹುದು ಎಂದು ತಮ್ಮ ಅನಿಸಿಕೆಯನ್ನು ನೀಡಿದ್ದಾರೆ. ಅವರಿಗೆ ನಾನು ಅಭಾರಿಯಾಗಿದ್ದೇನೆ.

ಈ ಕೃತಿಯ ಮೆರಗನ್ನು ಹೆಚ್ಚಿಸಿದ್ದು ತಮ್ಮ ವಿದ್ವತ್‌ನಿಂದ ಅವರೇ ಅಧ್ಯಕ್ಷರ ಆಪ್ತ ಕಾರ್ಯದರ್ಶಿಯಾದ ಶ್ರೀ ಟಿ.ಎಸ್. ಫಣಿಕುಮಾರ್ ಅವರಿಗೆ ನನ್ನ ಕೃತಜ್ಞತೆಗಳು. ಹಾಗೆಯೇ ಅಂದವಾಗಿ ಮತ್ತು ತುಂಬಾ ಸಹನೆಯಿಂದ ಅಕ್ಷರ ಜೋಡಣೆ ಮಾಡಿರುವ ಶ್ರೀ ಎಚ್. ಸತೀಶ ಅವರಿಗೆ ನನ್ನ ಧನ್ಯವಾದಗಳು.
ಭಾಷೆ ಎಂದರೆ ಕೇವಲ ಸಂವಹನದ ಸಾಧನ ಮಾತ್ರವಲ್ಲ, ಅದು ಆತ್ಮೀಯತೆಯ, ಅಸ್ತಿತ್ವದ, ಪರಂಪರೆಯ ಮತ್ತು ಜನಸಾಮಾನ್ಯರ ಬದುಕಿನ ಅರಿವಿನ ಆಧಾರವಾಗಿದೆ. ಆದ್ದರಿಂದ ಸಂವಿಧಾನದ ಭಾಷಾ ಪ್ರಕ್ರಿಯೆಗಳು ಜನಜೀವನದ ಮೇಲೆ ಬೀರಿರುವ ಪರಿಣಾಮವನ್ನು ಸಮಗ್ರವಾಗಿ ಅರ್ಥೈಸಿಕೊಳ್ಳುವುದು ಇಂದು ಅತ್ಯಗತ್ಯವಾಗಿದೆ.

ಈ ನಿಟ್ಟಿನಲ್ಲಿ ನನ್ನ ಈ ಕೃತಿ ಸಂಶೋಧಕರು, ವಿದ್ಯಾರ್ಥಿಗಳು, ನೀತಿ ನಿರ್ಧಾರಕರು ಮತ್ತು ಭಾಷಾಭಿಮಾನಿಗಳಿಗೆ ಉಪಯುಕ್ತವಾಗಲಿ ಎನ್ನುವುದು ನನ್ನ ಆಶಯವಾಗಿದೆ.

‍ಲೇಖಕರು Admin

26 June, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading