ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನೆದೆಯೇ ನಿನ್ನ ಪಾದದ ನೆಲವಾಗಿ..

-ಡಿ.ಎಮ್. ನದಾಫ್

೧ . ನನ್ನೆದೆಯೇ ನಿನ್ನ ಪಾದದ ನೆಲವಾಗಿ..

ಈ ಮೃಗಾಲಯದ ರತ್ನಪಕ್ಷಿಯನ್ನು ನೋಡಿ
ಏನು ಕಿಲಕಿಲವೇ!
ಒಂದಿನಿತಾದರೂ ಇಣುಕು ನನ್ನೆದೆಯೊಳಗೆ
ಕಂಡೀತು ನಿನಗೆ ದಾವಾನಲವೇ!

ನಿರಿಗೆಯೆತ್ತಿ ಕಾಲು ತಾಗಸಬೇಡವೇ ನೆಲಕ್ಕೆ
ನನ್ನೆದೆಯೇ ನಿನ್ನ ಪಾದದ ನೆಲವಾಗಿ
ನಿನ್ನ ಹೆಜ್ಜೆಯ ಹೂ ಹೊರಲು ಸಿದ್ಧ
ನನ್ನ ಜೀವಹಂಸ ಹಾರಿಬಿಡಲೇ ಹೊರಕ್ಕೆ

ಕಣ್ಣು ಚಂಚಲಿಸಬೇಡವೇ ನಲ್ಲೇ
ಎದುರಿಗಿದೆ ಹುಲ್ಲೆ!
ಅದಕಿಂತ ನಿನ್ನ ಸ್ವಭಾವ
ಚಲ್ಲು-ಚಲ್ಲೇ!

ಇದು ಮೃಗಾಲಯವೇ ಮುಗುದೆ
ಬಳಿಯೇ ಇರುವೆನೇ ಭ್ರಮರೇ
ಅರೆಗಳಿಗೆಯಿತ್ತ ಹೊರಳಿಸೇ ಅಕ್ಷಿಪಟಲ
ನನ್ನೆದೆಯೊಳಗಿದೆ ಪ್ರೀತಿ ಬಾನಗಲ

ವಿಜಯಪುರದ ವೈಭವದಗೋಳಗುಮ್ಮಟ
ಮೈಸೂರು ಬೀದಿಗಳ ವಿಶಾಲತೆ
ಅರಮನೆಯ ಕೃತಕ ಬೆಳಕೆಲ್ಲ
ಮರೆತು ಇರು ಇಲ್ಲೇ ನನ್ನ ಪ್ರೀತಿಯ ಹುಲ್ಲೆ.

ನಾನು ಕೊಡಲಾರದ ಗುಟುಕು ಕೊಡುತ್ತದೆ
ಈ ರತ್ನ ಪಕ್ಷಿ ನಿನಗೆ,
ನಾನಿಡಲಾಗದ ಕಾವಲಿಡುತ್ತದೆ
ಈ ಜಿರಾಫೆ, ನೊಡದರ ಕುತ್ತಿಗೆ

ನೀನಿಲ್ಲಿಯೇ ಇರೆ ನನ್ನ “ಪರಿ”
ಪ್ರಾಣಿಗಳೆಂದು ಕರೆಸಿಕೊಳ್ಳುವ “ಫರಿಸ್ತೆ”ಗಳೊಂದಿಗೆ
ನಾನಿರುವೆನಲ್ಲಿ ಮನುಷ್ಯರೆಂಬ”ಸೈತಾನ”ರೊಂದಿಗೆ

೨ . ಧರ್ಮದ ಗೋಡೆ ಒಡೆದು

ಈ ಭೂಮಿ ಅಷ್ಟು ಚಿಕ್ಕದೇನಲ್ಲ ಗೆಳೆಯ
ಕಟ್ಟಿಕೊಂಡ ಗೂಡು ಬಿಟ್ಟು ಬಾ ಹೊರಗೆ

ಈ ಮನಸ್ಸು ಅಷ್ಟು ಸಂಕುಚಿತವೇನಲ್ಲ ಗೆಳೆಯ
ಈ ಧರ್ಮದ ಗೋಡೆಯ ಒಡೆದು ಬಾ ದಾರಿಗೆ
.
ಬರೀ ವಿಷವನು ಬಸಿಯುವದೇ ಅದರ ಮರ್ಮ
ಕೋಣೆಯ ಮೂಲೆಗೊತ್ತಿ ಕೀಲಿ ಜಡಿದು ಬಾ ಕೇರಿಗೆ

ಶಾಂತಿ ಸಾರುತಲೇ ಕೊಳ್ಳಿಯಿಡುವ ಹುನ್ನಾರವರಿಯದೇ
ಕೊಲ್ಲುತ್ತಲೇ ಕಾಯುವ ಮಾತಾಡುವಲ್ಲಿಂದ ಬಾ ಮನುಜಮತದ ತವರಿಗೆ

ಮಾತು ಮಂಥನದ ಸಂಘರ್ಷದಲಿ ಸೋತುಹೋದ ಸೇಡಿಗೆ
ಕೈ ಹಾಕದಿರು ಚಾಕು-ಚೂರಿಗೆ

ಅಲ್ಲಳಿದುಳಿದ ಅರಸರ ಇತಿಹಾಸಕ್ಕೆ
ಕೇಳು ಪ್ರಶ್ನೆ ನ್ಯಾಯ ಸಿಕ್ಕಿತಲ್ಲಿ ಯಾವ ನಾರಿಗೆ?

ಸ್ವರ್ಗ ನರಕಗಳ ಸೃಷ್ಟಿಸಿ ತ್ರಿಶಂಕುವಿನಲ್ಲಿ ತಾವು ಬದುಕುತ್ತ
ಜೀವ ತೆಗೆಯುವ ಜೀವಗಳ್ಳರ “ದಮನ”ಮಾಡಲು ಗೆಳೆಯ ಬಾ ಹೊರಗೆ

‍ಲೇಖಕರು Admin

26 June, 2026

1 Comment

  1. ಡಿ ಎಂ ನದಾಫ್

    ನನ್ನ ಕವನಗಳನ್ನು ಪ್ರಕಟಿಸಿದ ಅವಧಿ ಯ ಸಂಪಾದಕರು ಮತ್ತು ಸಿಬ್ಬಂದಿ ಮಿತ್ರರಿಗೆ ಕೃತಜ್ಞತೆಗಳು.
    ಡಿ ಎಂ ನದಾಫ್ ಅಫಜಲಪುರ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading