ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕರ್ಬಲಾದ ಕಣ ಕಣಗಳು ಬರೆದಿಹವು

-ಫರ್ಹಾನಾಜ್ ಮಸ್ಕಿ

ಕರ್ಬಲಾ ಕವನ

ಕರ್ಬಲಾದ ಕಣ ಕಣಗಳು ಬರೆದಿಹವು
ಪ್ರಾಮಾಣಿಕತೆಯ ಕಥೆಯನು,
ಸತ್ಯದ ಸನ್ಮಾರ್ಗದಲಿ ಸಾಗಿದಾಗ
ಸುಳ್ಳಿನ ಮುಂದೆ ಬಾಗಿಸದಿರಿ ಶಿರಗಳನು!!

ದಣಿವು ದಾಹದ ಕಡಲ ಮುಂದೆ
ಜಲ ಮೂಲಗಳೆಲ್ಲಾ ಜಖಮುಗೊಂಡವು
ಗುಡಾರಗಳಿಗೆ ಕಿಡಿ‌ ಗುರಿಯಾದಾಗ
ಕಗ್ಗತ್ತಲೆಯಲಿ ಕೊಲೆಗಳು ಗಾಢವಾದವು!

ದ್ರೋಹಿಗಳ ಪಾಲಿಗೆ ದಾಹವೇ ದಾತ್ರವಾದಾಗ
ಪಕ್ಕದ ಫುರಾತ್ ಒದ್ದಾಡುತಲಿತ್ತು,
ಅಹ್ಲೇಬೈತ್ ಬೀರರು ಬೇಡಿದರೆ ಆಪವಲ್ಲ
ಅಮೃತವೇ ಆಗಸದಿಂದ ಅವತರಿಸಬಹುದಿತ್ತು!!

ಹಸುಗೂಸು ಅಸುನೀಗುತಿರಲು
ಕ್ರೌರ್ಯದ ಕರಾಳತೆ ಪಾತಾಳಕ್ಕಿಳಿಯುತಲಿತ್ತು
ಕರ್ಬಲಾ ಮೈದಾನದಲಿ, ಪವಿತ್ರ ಪ್ರಾಣಗಳಲ್ಲ, ಮಾನವೀಯತೆಯ ಮಾರಣಹೋಮ ನಡೆದಿತ್ತು!!

ಬಾಯಾರಿಕೆಯ ಬದಲಿಗೆ
ಬಾಣಗಳ ಬಣವೆ ಬಾಯಿಗೆ ಬಿದ್ದಾಗ,
ಕೈ, ಕಾಲು, ಶಿರಗಳ ಬಾಕಿ ಮೊತ್ತ ಎಷ್ಟಾಗಬೇಕಿತ್ತು?
ತಲೆ ಕಡಿದರೂ ತತ್ವಗಳು ಬಾಗದೇ,
ದೇಹಗಳೆಲ್ಲಾ ಧರ್ಮದ ದಂಡ ಹಿಡಿದು ಸಾಗುತಿರಲು
ಸಜ್ದಾ ಶಹೀದ್ ಹುಸೇನ್ ಕುಲದ ಕುಡಿಗಳ
ಕೆಚ್ಚೆದೆಯ ಕದನ ನಿಷ್ಠೆ ನೋಡಿ
ಕರುಣೆಯೇ ಕತ್ತುಹಿಸುಕಿಕೊಂಡಿತ್ತು!!

ಮೊಹಮ್ಮದರ ಮೊಮ್ಮಕ್ಕಗಳ ಮರಣ ಕಾವ್ಯ
ಕೆಂಪು ಕೆಂಪಾಗಿ ಮೈದಾನದ ಮರಳಿನಲಿ ಅರಳಿತ್ತು,
ಮನುಕುಲದ ಪರೀಕ್ಷೆಯಲಿ ಮನುಷ್ಯತ್ವವೇ
ಮೃಗವಾಗಿ ಮೆರೆಯುತಲಿತ್ತು!!

ಮಡಿಲ ಕನಸು ಕಾಣುವ ಹೊತ್ತಲಿ ಮಡಿದ, ಮಖಮಲ್ಲಿನಂಥ ಅಸ್ಗರನ ಜಲಾಪೇಕ್ಷೆ
ಅನಘನಂಥ ಅಲಿ ಅಕ್ಬರನ ಪ್ರಾಣ ನಿರಪೇಕ್ಷೆ
ಸಂಕಲೆಯಲಿ ಮೆರೆದ ಸಕೀನಾಳ ಸಕ್ಷಮತೆ
ಜೀವರಾಶಿಯೇ ಝಲ್ ಎಂದ ಜೈನಬರ ಭಾಷಣದ ಜ್ವಾಲೆ!
ನಬೀರವರ ನಸಲಿನ ನಿದರ್ಶನವಾಗಿದೆ,
ಈ ಜಗದ ನೋವೇನು ? ಅನ್ಯಾಯಕೆ ಸಮವೇ??
ಹೇಗಿದ್ದರೇನಂತೆ ಮೈದಾನ್ ಎ ಕರ್ಬಲಾದ ವೇದನೆ
ನಾಜ಼್!!!
ಇತಿಹಾಸ ಉದ್ದಕೂ ಹಿರಿದಾಗಿದೆ ನ್ಯಾಯ ರಕ್ಷಕರ ಸಹನೆ!!

‍ಲೇಖಕರು Admin

27 June, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading