ಮನೋಹರ್ ಪೈ ಅವರ ಕಥಾ ಸಂಕಲನ ‘ಲಾಧಾಕ್ಲಿಷ್ಣ ಮತ್ತು ಇಂದಿಲಾ ಕ್ಯಾಂಟೀನು’
‘ಸಸಿ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತ ಕಾವೇರಿ ಮುತ್ತಪ್ಪ ಅವರ ಬರಹ ಇಲ್ಲಿದೆ.
-ಕಾವೇರಿ ಮುತ್ತಪ್ಪ
ಮನೋಹರ್ ಪೈ ಅವರ ಎಲ್ಲಾ ಪುಸ್ತಕಗಳ ಶೀರ್ಷಿಕೆ ಕೂಡ ವಿಶಿಷ್ಟವಾಗಿ ಗಮನ ಸೆಳೆಯುವಂತೆ ಇರುತ್ತದೆ; ಅದರಂತೆ ಇದೂ ಕೂಡ.
ಸಂಕಲನದ ಶೀರ್ಷಿಕೆ ಇರುವ ಕಥೆಯ ಬಗ್ಗೆ ಕುತೂಹಲ ಇದ್ದಿದ್ದರಿಂದ ಮೊದಲೆರಡನ್ನು ಬಿಟ್ಟು ಮೂರನೇ ಕಥೆಯನ್ನು ಮೊದಲು ಓದಿದೆ. ನಿಜಕ್ಕೂ ಮನಸ್ಸನ್ನು ಕಾಡುವ ಕಥೆ. ಹೀಗೆಲ್ಲಾ ಮಾಡುವ ಹೆಂಗಸರು ಇಂಥಾ ಕಥೆಗಳನ್ನು ಓದುವುದಿಲ್ಲವೇ? ಅಥವಾ ಓದಿದರೂ ಅದೊಂದು ಕಥೆ ಎಂದಷ್ಟೇ ಭಾವಿಸುವರೇ? ಇಂತಹ ಕಥೆಗಳು ಸಮಾಜದಲ್ಲಿ, ಜನರಲ್ಲಿ ಸ್ವಲ್ಪವಾದರೂ ಬದಲಾವಣೆ ತರಲಿ ಎಂಬ ಆಶಯ ಲೇಖಕರಲ್ಲಿ ಇರುತ್ತದೆ. ಬದಲಾಗುವ ಮನಸ್ಥಿತಿ ಓದುಗರಲ್ಲಿ ಇದೆಯೇ…? ಅದೇ ಪ್ರಶ್ನೆ.
ಉಡುಮಲೈ… ಓದಿದಾಗ ಮಂಜರಿಗಿಂತ ಹೆಚ್ಚು ನನಗೇ ಕೋಪ ಬಂದಿತ್ತು….. ಅದೇಕೆ ಹಾಗೆ ನಗಬೇಕು ಅವಳು? ಆದರೆ…., ಕೊನೆಯಲ್ಲಿ ನನ್ನ ಕೋಪ ಕರಗಿತು. ಹರಿಣಿಯ ಬಗ್ಗೆ ಅನುಕಂಪವೂ ಮೂಡಿತು ಜೊತೆಗೆ ಹೆಣ್ಣಾಗಿ ಎಚ್ಚರ ತಪ್ಪಿದ್ದಕ್ಕೆ ಕೋಪವೂ ಬಂತು. ಪ್ರತೀ ಹೆಣ್ಣಿಗೂ ಮುಳ್ಳು ಮತ್ತು ಬಟ್ಟೆಯ ವಿಷಯ ಗೊತ್ತಿರಬೇಕು. ಹರಿಣಿ ಹಳೆಯ ನೆನಪನ್ನು ಹುದುಗಿಸಿಟ್ಟು ಜೀವನ ಕಟ್ಟಿಕೊಂಡ ರೀತಿಗೆ ಪ್ರಶಂಸಿಸದೇ ಇರಲಾಗಲಿಲ್ಲ.
ಮುಚ್ಚಳವಿಲ್ಲದ ಬಾಟಲಿ…, ಲೇಖಕರ ಸೃಜನಶೀಲತೆಗೆ ಸಾಕ್ಷಿಯಾದಂತೆ ತೋರಿತು. ಹೆಣ್ಣು ಕೆಲವೊಮ್ಮೆ ಸಂಧರ್ಭಕ್ಕೆ ಸಿಲುಕಿ ದಾರಿ ತಪ್ಪಬಹುದು ಆದರೆ ಶೀಲವಂತಳಾಗಿ ಬಾಳುವ ಮನಸು ಮಾಡಬೇಕಷ್ಟೆ.
ಬ್ರಹ್ಮ ಮುಹೂರ್ತ ಕ್ಕೆ ‘ಇದು ಬುದ್ಧಿವಂತರಿಗೆ ಮಾತ್ರ” ಎಂಬ ಬೋರ್ಡ್ ಬೇಕಿತ್ತು ಅನಿಸಿತು. ಎರಡು ಸಲ ಓದಿದ ನಂತರ ಅರ್ಥವಾಯಿತು. ಎಂಡೋಸಲ್ಫಾನ್ ಸಂತ್ರಸ್ತರನ್ನು ಮನದಲ್ಲಿ ಇಟ್ಟುಕೊಂಡು ಹೆಣೆದ ಕಥೆ ಮನೋಹರ್ ಅವರ ಪ್ರಬುದ್ಧ ಬರವಣಿಗೆಗೆ ಹಿಡಿದ ಕನ್ನಡಿ ಅನಿಸಿತು. ಆಧುನಿಕ ಪೀಳಿಗೆಯ ಅವಸರದ ನಿರ್ಧಾರ, ಅತಂತ್ರ ಬದುಕು, ಧಾವಂತ, ಅನಿಶ್ಚತೆ ಎಲ್ಲವೂ ಮಿಳಿತಗೊಂಡ ವಾವ್! ಅನಿಸುವ ಕಥೆ.
ಜನರ ಸಿದ್ಧ ಉಡುಪಿನ ವ್ಯಾಮೋಹದ ನಡುವೆ ಹೆಣಗಾಡುತ್ತಿರುವ ಚಿಕ್ಕ ಪುಟ್ಟ ದರ್ಜಿಗಳ ಮಾನಸಿಕ ಸ್ಥಿತಿಯನ್ನು ಮಾರ್ಮಿಕವಾಗಿ ಚಿತ್ರಿಸಿರುವ ಕಥೆ ಬೊಂತೆ, ಗುಬ್ಬಿ, ಬ್ಲೇಡು…
ಪ್ರಯಾಣಿಕರೇ, ದಯವಿಟ್ಟು ಗಮನಿಸಿ… ಕಥೆಯಲ್ಲಿ ರೈಲ್ವೆ ನಿಲ್ದಾಣದಲ್ಲಿಯೆ ನಿರ್ಧಾರವಾಗುವ ಅನೇಕರ ಭವಿಷ್ಯಗಳು, ಯುವಜನತೆಯ ದುಡುಕು ನಿರ್ಧಾರಗಳು, ಇವೆಲ್ಲವನ್ನೂ ಕಂಡರೂ ಸತ್ಯ ಹೇಳಲಾಗದ ಪರಿಸ್ಥಿತಿಯಲ್ಲಿರುವ ರೈಲು… ಇವೆಲ್ಲಾ ನೋಡಿದಾಗ ರೈಲು ನಿಲ್ದಾಣವೇ ಒಂದು ರಾಜ್ಯ, ರೈಲುಗಳೆಲ್ಲ ಒಂದೊಂದು ಹಳ್ಳಿಗಳು, ಒಂದೊಂದು ಭೋಗಿ ಕೂಡ ಒಂದೊಂದು ಕುಟುಂಬ, ಅದರಲ್ಲೆಲ್ಲ ನೂರೆಂಟು ಘಟನೆಗಳು… ಕಥೆಗಳು… ನಡೆಯುತ್ತವೆ ಅನಿಸಿತು.
ಹೆಣ್ಣು ತನ್ನ ಗಂಡನಿಗೆ ನೀಡಿದ ಸ್ಥಾನವನ್ನು ಬೇರೆಯವರಿಗೆ ನೀಡಿದಳೆಂದರೆ ಒಂದೋ ಅವಳಂದುಕೊಂಡ ಪ್ರೀತಿ ಕಾಳಜಿ ಅವನಿಂದ ದೊರಕದೇ ಇದ್ದು, ಮನಸು ಸ್ಥಿಮಿತ ಕಳೆದುಕೊಂಡಾಗ ಅಥವಾ ಅವಳು ಅಕ್ಷರಶಃ ಏಕಾಂಗಿ ಆದಾಗ ಒಂದು ಆಶ್ರಯಕ್ಕಾಗಿ ಬಯಸುವ ದುರ್ಬಲ ಕ್ಷಣ ಎದುರಾಗಬಹುದು. ಅಂಥದ್ದೇ ಒಂದು ಸಂದರ್ಭ ಜಗದಿ ಎದುರಿಸಬೇಕಾಗಿ ಬಂದಾಗ ಶ್ರೀಕಾಂತ ಎಚ್ಚೆತ್ತುಕೊಂಡದ್ದು ಒಳ್ಳೆಯದೇ ಆಯಿತು. ಆದರೆ ಅವನು ಅವಳ ಬಗ್ಗೆ ತಪ್ಪು ತಿಳಿದನೆ? ಕದವ ತಟ್ಟಿ ಹೋದವ…. ಓದಿ ನೋಡಿ.
ಮುಂಡಪ್ಪಣ್ಣ ನಗುತ್ತಿದ್ದಾನಂತೆ…. ಎಂದರೆ ನಗಲಿ ಬಿಡಿ…ಅದರಲ್ಲೇನು ತಪ್ಪು ಎನ್ನಬಹುದು. ಆದರೆ ಕಾರಣವಿಲ್ಲದೆ ನಗುವುದು ಅಳುವುದು ಮಾಡಿದರೆ?
ಮೌನ ಮಾತಾಗದೆ, ಮನದೊಳಗೆ ಎಲ್ಲಾ ಹೆಪ್ಪುಗಟ್ಟಿದಾಗ ತನಗರಿಯದೆ ಯಾವ ಯಾವುದೋ ಸಂದರ್ಭದಲ್ಲಿ ಆ ನಗು, ಅಳು ಎಲ್ಲ ಅಪ್ಪಣೆ ಇಲ್ಲದೆ ಹೊರಗೆ ಬಂದೀತು. ಮುಂಡಪ್ಪಣ್ಣನಿಗೂ ಅದೇ ಆಯಿತು.
2026 ರ ಈ ಹೊತ್ತಿಗೆ ಕಥಾ ಪ್ರಶಸ್ತಿ ಪಡೆದ ಕಥಾಸಂಕಲನ ಲಾಧಾಕ್ಲಿಷ್ಣ ಮತ್ತು ಇಂದಿಲಾ ಕ್ಯಾಂಟೀನು ಎಂಟು ವಿಭಿನ್ನ ಕಥಾವಸ್ತುಗಳನ್ನೂ, ವಿಶಿಷ್ಟ ಶೈಲಿಯನ್ನೂ, ಉತ್ತಮ ನಿರೂಪಣೆಯನ್ನೂ ಹೊಂದಿದೆ. ಉತ್ತಮ ಪುಸ್ತಕ ನೀಡಿದ ಶ್ರೀ ಮನೋಹರ್ ಪೈ ಅವರಿಗೆ ಅಭಿನಂದನೆಗಳು. ಎಲ್ಲರೂ ಪುಸ್ತಕ ಕೊಂಡು ಓದಿ ಹರಸಿ ಹಾರೈಸಿ. ಇದೇ ಲೇಖಕನೊಬ್ಬನಿಗೆ ಪ್ರಶಸ್ತಿ.






0 Comments