-ನಾಗರಾಜ ಬಿ ನಾಯ್ಕ
ನೀರವ ಮೌನದ
ಕತ್ತಲೆಯ ನೆರಳಿಗೆ
ಕನಸುಗಳು ಹರಡಿ ನಿಂತರೆ
ಹಣತೆ ಹಚ್ಚಿದ ದೀಪ
ಬೆಳಗಿ ಬೆಳಕಾಗಿ
ಉಳಿದು ಹಬ್ಬಲಿ ಸುಮ್ಮನೇ
ಕರಗಿದ ನಂತರ
ಉಳಿವ ನೀರಿನ ಹನಿಗೆ
ಇಬ್ಬನಿಯ ಗುರುತು
ಸಾಲಲ್ಲಿ ನಿಂತು
ಕೊನೆಯಲ್ಲಿ ಉಳಿವ
ಒಂಟಿತನದ ಜಾಡು ಹಿಡಿದು
ಹೊರಟರೆ ಮತ್ತೆ
ದಿಕ್ಕು ದಿಕ್ಕಿಗೆ
ಹರಡುವ ಮುಗಿಲು
ಸರಸರನೆ ಸರಿವ
ದಿನಗಳ ನಡಿಗೆಗೆ ಕರಗಿ
ಬಿಡುವ ಸಹಜತೆಯ ಸ್ತಂಭಗಳು
ಒಂಟಿ ಮನೆಗಳ
ಮುಖ ಕಾಣದ ಬಾಗಿಲು
ನೆರಿಗೆಯ ಮೊಗದಲ್ಲಿ
ಕಳೆದುಹೋದ ಅನುಭವದ
ಸಾಲುಗಳು ಸಣ್ಣದಾಗಿ
ಇಲ್ಲವಾಗುವ ಕಥೆಗಳು ಮರು
ಹುಟ್ಟು ಪಡೆಯಲಿ
ಪ್ರಶ್ನೆ ಪ್ರಶ್ನೆಗೆ
ಉತ್ತರ ಹುಡುಕಾಟದ
ಕಥನಗಳು ಕರಗಳಲ್ಲಿ
ಉಳಿದು ಚಿತ್ರವಾಗಿ
ರೂಪ ಪಡೆಯಲಿ
ಚಕ್ರಾಕಾರದ ಚಕ್ರ
ತಿರುಗುವುದಂತೆ ಮಾತಿಗೆ
ಸಿಕ್ಕಲ್ಲಿ ಉಳಿದು
ಜೀವವಾಗುವುದಂತೆ
ಕಾಲನ ದಾಳ
ಒಂದೊಂದು ಸಾರಿ
ಊಹಿಸದ ರೀತಿ
ತಿರು ತಿರುಗಿ ಬರುವುದಂತೆ
ನೀರವ ಮೌನದ
ಕಾಲ ಹೆಜ್ಜೆಗಳಾಚೆ
ನಿಂತು ಮಾತನಾಡುವ
ಅಂಚಿಗೆ ಸರಿದು
ಸುಮ್ಮನೇ ಹೋಗುವುದಂತೆ
ನಾವು ಇರುವಂತೆ






0 Comments