ಹೊನ್ನಪ್ಪ ಕರೆಕನ್ನಮ್ಮನವರ ‘ನಂಜಿಲ್ಲದ ಉಸಿರು’
ಹೆಗಡೆ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತ ನಾಮದೇವ ಕಾಗದಗಾರ ಅವರ ಬರಹ ಇಲ್ಲಿದೆ.
–ನಾಮದೇವ ಕಾಗದಗಾರ
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗುಡ್ಡದ ಚನ್ನಾಪುರದ ಹೊನ್ನಪ್ಪ ನೀಲಪ್ಪ ಕರೆಕನ್ನಮ್ಮನವರ ಪ್ರಾಥಮಿಕ ಶಾಲಾ ಶಿಕ್ಷಕರು. ಇವರ ‘ನಂಜಿಲ್ಲದ ಉಸಿರು’ ಹನಿಗವಿತೆಗಳ ಸಂಕಲನವು ಮಣ್ಣಿನ ಸೊಗಡು ಮತ್ತು ಬದುಕಿನ ಸತ್ಯಗಳನ್ನು ಕಟ್ಟಿಕೊಡುವ ಒಂದು ಸುಂದರ ಕೃತಿಯಾಗಿದೆ. ಇಲ್ಲಿನ ಕವಿತೆಗಳು ಕೇವಲ ಸಾಲುಗಳ ಜೋಡಣೆಯಾಗದೇ ಉತ್ತರ ಕರ್ನಾಟಕದ ಗ್ರಾಮೀಣ ಬದುಕಿನ ಬೆವರು, ಕಣ್ಣೀರು ಮತ್ತು ನಿಸ್ವಾರ್ಥ ಪ್ರೀತಿಯ ಜೀವಂತ ಉಸಿರಾಗಿದೆ.
ಕೃತಿಯುದ್ದಕ್ಕೂ ಹರಿದುಬಂದಿರುವ ಪ್ರಮುಖ ಎಳೆಯೆಂದರೆ ತಾಯಿಯ ವಾತ್ಸಲ್ಯ ಮತ್ತು ಆಕೆಯ ಶ್ರಮ. ಹಾವೇರಿ ನೆಲದ ಹಳ್ಳಿಗಳಲ್ಲಿ ಬಡತನದ ನಡುವೆಯೂ ಮಕ್ಕಳನ್ನು ಸಾಕಿ ಸಲಹುವ ಅವ್ವನ ತ್ಯಾಗವನ್ನು ಕವಿ ಅತ್ಯಂತ ಆರ್ದ್ರವಾಗಿ ದಾಖಲಿಸಿದ್ದಾರೆ. ತಾಯಿಯ ನಿಸ್ವಾರ್ಥ ಬದುಕನ್ನು ನೆನೆಯುತ್ತಾ ಅವರು ಬರೆಯುವ ಸಾಲುಗಳು ಕರುಳನ್ನು ಕಲಕುತ್ತವೆ.
“ಅರ್ಧ ಉಸಿರಿನಲ್ಲಿಯೇ ಬದುಕಿಬಿಟ್ಟೆ / ಇನ್ನರ್ದ ನನಗೆ ಕೊಟ್ಟು…”
“ಕಡ ತಂದು ಬೇಯಿಸಿದ ಹಿಟ್ಟಿನ ರೊಟ್ಟಿ
ನನ್ನ ಗಂಟಲಲ್ಲಿಳಿಯುವಾಗ ನಿನ್ನ ಮುಖದಲ್ಲಿ
ಹುಣ್ಣಿಮೆಯ ಚಂದ್ರ ಕುಣಿಯುತಿತ್ತು“
ಮನೆಯಲ್ಲಿ ಏನೂ ಇಲ್ಲದಿದ್ದಾಗ ಅಕ್ಕಪಕ್ಕದವರಿಂದ ಹಿಟ್ಟು ಕಡ ತಂದು, ಒಲೆ ಹೊತ್ತಿಸಿ ರೊಟ್ಟಿ ತಟ್ಟಿ ಮಗನಿಗೆ ತಿನ್ನಿಸುವ ತಾಯಿಯ ಮುಖದ ತೃಪ್ತಿಯನ್ನು ಕವಿ ಇಲ್ಲಿ ಹಿಡಿದಿಟ್ಟಿದ್ದಾರೆ. ಅವ್ವನ ಅಗಲಿಕೆಯ ನಂತರ ಉಂಟಾಗುವ ಒಂಟಿತನವನ್ನು
“ಅವ್ವ ನೀನಿದ್ದಾಗ ಭೂಮಿ
ತಿರುಗುವ ಸದ್ದೂ ಕೇಳುತ್ತಿತ್ತು..! /
ಈಗ ನನ್ನ ಹೃದಯದ ಸದ್ದೇ ನನಗೆ ಕೇಳದಾಗಿದೆ..!!”
ಎಂದು ಹೇಳುವ ಮೂಲಕ ತಾಯಿಯ ನೆರಳಿಲ್ಲದ ಬದುಕು ಎಷ್ಟು ಶೂನ್ಯ ಎಂಬುದನ್ನು ಬಿಂಬಿಸಿದ್ದಾರೆ. ವೃದ್ಧಾಪ್ಯದಲ್ಲಿ ಹೆತ್ತವರನ್ನು ಕಡೆಗಣಿಸುವ ಇಂದಿನ ಸಮಾಜದ ಸ್ವಾರ್ಥವನ್ನು “ಜಗದಲಿ ಯಾವ ತಾಯಿಯೂ ಇಡುವುದಿಲ್ಲ ಮಕ್ಕಳು ತಿಂದ ರೊಟ್ಟಿ ಲೆಕ್ಕ, ಕೊನೆಗೆ ಒಂದೊಂದು ರೊಟ್ಟಿಗೇಕೆ ಅನುಭವಿಸುತ್ತಾಳೆ ಮಕ್ಕಳಿಂದ ನೂರೆಂಟು ಶಿಕ್ಷೆ?” ಎಂದು ತೀಕ್ಷ್ಣವಾಗಿ ಪ್ರಶ್ನಿಸುತ್ತಾರೆ. ಕೃತಿಯ ಆಶಯವು ತಾಯಿಯ ತ್ಯಾಗವನ್ನು ಕೇವಲ ವೈಯಕ್ತಿಕ ದುಃಖವಾಗಿ ಕಾಣದೆ, ಸಮಗ್ರ ಗ್ರಾಮೀಣ ಸ್ತ್ರೀ ಸಂಕುಲದ ಶ್ರಮದ ಸಂಕೇತವಾಗಿ ಪರಿಭಾವಿಸುತ್ತದೆ. ಹಾವೇರಿ ಪರಿಸರದ ಬಡತನದ ಒಲೆಯುರಿ, ರೊಟ್ಟಿಯ ಹಂಚಿಕೆ, ಮಕ್ಕಳನ್ನು ಸಲಹುವಲ್ಲಿನ ತಾಯಿಯ ಅಸಹಾಯಕತೆ ಮತ್ತು ಅಪಾರ ವಾತ್ಸಲ್ಯಗಳು ಇಲ್ಲಿನ ಕವಿತೆಗಳಲ್ಲಿ ಜೀವತುಂಬಿಕೊಂಡಿವೆ. ತಾಯಿಯ ಅಗಲಿಕೆಯ ನಂತರ ಉಂಟಾದ ಶೂನ್ಯತೆಯನ್ನು ಕವಿ ಕೇವಲ ಕಣ್ಣೀರಾಗಿ ದಾಖಲಿಸದೆ, ತಾಯ್ತನವೇ ಒಂದು ಜೀವಂತ ದೈವತ್ವವೆಂಬ ದರ್ಶನವನ್ನು ಕಟ್ಟಿಕೊಡುತ್ತಾರೆ.
ಕೇವಲ ತಾಯಿಯ ಮಮತೆಯಷ್ಟೇ ಅಲ್ಲದೆ, ಸಮಾಜದಲ್ಲಿರುವ ಹುಸಿ ನಡವಳಿಕೆಗಳು ಮತ್ತು ಡಾಂಭಿಕತೆಯನ್ನು ಕವಿ ನಿರ್ದಾಕ್ಷಿಣ್ಯವಾಗಿ ಬಯಲುಮಾಡುತ್ತಾರೆ. ಗಾಂಧಿ ಜಯಂತಿಯಂದು ಕೇವಲ ಪ್ರಚಾರಕ್ಕಾಗಿ ಕಸ ಗುಡಿಸುವವರನ್ನು ವ್ಯಂಗ್ಯವಾಡುತ್ತಾ,
“ಮಡಿವಂತ ಕೈಗಳೂ ಕೂಡಾ
ಗಾಂಧಿ ಜಯಂತಿಯಂದು ಚರಂಡಿಗೆ ಕೈ ಹಾಕಿದವು..!
ಕ್ಯಾಮರಾ ನಕ್ಕ ಕೂಡಲೇ
ಮಿಕ್ಕಿದ್ದು ಗಾಂಧೀಜಿಗೆ ಬಿಟ್ಟು ಕೈತೊಳೆದುಕೊಂಡವು..!!”
ಎ0ದು ಚುಚ್ಚುತ್ತಾರೆ. ಹಾಗೆಯೇ, ಜಾತಿ ಬೇಧಗಳನ್ನು ಕಿತ್ತೊಗೆಯಲು ಶ್ರಮಿಸಿದ ಶರಣರನ್ನು ಸಮಾಜ ಕೇವಲ ಪೂಜೆಗೆ ಸೀಮಿತಗೊಳಿಸಿರುವುದನ್ನು “ಅಂದು ಶರಣ ಸಂತರು ಆಗಿಹೋದರು ಜಾತಿ ಗೋಡೆಯನ್ನು ಒಡೆದು ಹಾಕಿ, ಇಂದು ಅವರನ್ನು ಪೂಜಿಸುತ್ತಿದ್ದೇವೆ ಅದೇ ಗೋಡೆಗೆ ನೇತು ಹಾಕಿ” ಎಂದು ವಿಡಂಬಿಸುತ್ತಾರೆ. ಸಮಾಜದಲ್ಲಿರುವ ಶ್ರೀಮಂತ ಮತ್ತು ಬಡವರ ನಡುವಿನ ಕಂದಕವನ್ನು, ಹಸಿದವರ ಒಡಲ ಬೇಗೆಯನ್ನು ಕವಿತೆಗಳಲ್ಲಿ ಕಟುವಾಗಿ ಎತ್ತಿಹಿಡಿಯಲಾಗಿದೆ.
ಈ ಸಂಕಲನವು ಸಮಾಜದ ಕಪಟತನ, ಜಾತೀಯತೆ ಮತ್ತು ರಾಜಕೀಯ ಮುಖವಾಡಗಳನ್ನು ಅತ್ಯಂತ ತೀಕ್ಷ್ಣವಾದ ವ್ಯಂಗ್ಯದ ಮೂಲಕ ಮುಖಾಮುಖಿಯಾಗುತ್ತದೆ. ಸ್ವಚ್ಛತೆಯ ಹೆಸರಿನಲ್ಲಿ ನಡೆಯುವ ಪ್ರಚಾರಪ್ರಿಯತೆ, ಜಾತಿಯ ಗೋಡೆಗಳನ್ನು ಕೆಡವಿದ ಶರಣ-ಸಂತರ ವಿಚಾರಗಳನ್ನು ಮರೆತು ಅವರನ್ನೇ ಕೇವಲ ಫೋಟೋಗಳ ರೂಪದಲ್ಲಿ ಪೂಜಿಸುವ ಜಾಣ ಮರೆವುಗಳನ್ನು ಕೃತಿಯು ನಿರ್ದಾಕ್ಷಿಣ್ಯವಾಗಿ ತಿವಿಯುತ್ತದೆ. ಭಕ್ತಿ ಮತ್ತು ಆಚರಣೆಗಳ ಹಿಂದಿರುವ ಜಾತಿಯ ಹುನ್ನಾರವನ್ನು ಬಯಲುಮಾಡುವ ಕವಿಯ ಸಾಮಾಜಿಕ ಬದ್ಧತೆ ಇಲ್ಲಿ ಪ್ರಶಂಸನೀಯ. ಹಾಗೆಯೇ, ಉಳ್ಳವರು ಮತ್ತು ಇಲ್ಲದವರ ನಡುವಿನ ವರ್ಗ ಕಂದಕವನ್ನು, ದುಡಿಮೆಯಿಲ್ಲದ ಸಿರಿವಂತರ ಜಡತ್ವವನ್ನು ವಿಡಂಬಿಸುವಲ್ಲಿ ಕವಿಯ ವಿವೇಕ ಎದ್ದು ಕಾಣುತ್ತದೆ.
ಇನ್ನು ಪ್ರೇಮದ ವಿಚಾರಕ್ಕೆ ಬಂದರೆ, ಇಲ್ಲಿನ ಸಾಲುಗಳು ಆಡಂಬರವಿಲ್ಲದ ಪರಿಶುದ್ಧ ಪ್ರೀತಿಯನ್ನು ಎತ್ತಿಹಿಡಿಯುತ್ತವೆ. ಪ್ರೀತಿಯ ಗಾಢತೆಯನ್ನು:
“ನೀನೊಂದು ಕ್ಯಾಲೆಂಡರ್‌ದೊಳಗಿನ ಶುಭದಿನವಿದ್ದಂತೆ..!
ಹಾಗಾಗಿ ತಿಂಗಳು ಕಳೆದು ವರ್ಷ ಮುಗಿದರೂ
ಪುಟ ತಿರುವಲಾರದೇ ನಾನು ಅಲ್ಲೇ ಉಳಿದು ಬಿಟ್ಟೆ…!!”
ಎಂಬ ರೂಪಕದ ಮೂಲಕ ಅತ್ಯಂತ ನವಿರಾಗಿ ಕಟ್ಟಿಕೊಡುತ್ತಾರೆ. ಪ್ರೀತಿಯಲ್ಲಿನ ನೋವು ಮತ್ತೊಬ್ಬರಿಗೆ ಕೇಡು ಬಯಸದೆ, ನೊಂದ ಜೀವಗಳಿಗೆ ನೆರಳಾಗುವ ಹಂಬಲವನ್ನು ಹೊಂದುವುದೇ ನಿಜವಾದ ಕಾವ್ಯಧರ್ಮ. ಸಂಕಲನದಲ್ಲಿ ಬರುವ ಒಲವಿನ ಅಭಿವ್ಯಕ್ತಿಗಳು ಬಾಲಿಶ ಶೃಂಗಾರವನ್ನು ದಾಟಿ, ಮೌನ, ವಿರಹ ಮತ್ತು ತ್ಯಾಗದ ಘನತೆಯನ್ನು ಸಾರುತ್ತವೆ. ಪ್ರೀತಿಯು ಕೇವಲ ಪಡೆಯುವುದಲ್ಲ, ಬದಲಾಗಿ ಸೋಲಿನಲ್ಲೂ ಮತ್ತೊಬ್ಬರಿಗೆ ನೆರಳಾಗುವ ಔದಾರ್ಯ ಎಂಬ ತತ್ವ ಇಲ್ಲಿದೆ. ಆಧುನಿಕ ಧಾವಂತದ ಬದುಕಿನಲ್ಲಿ ನಶಿಸಿಹೋಗುತ್ತಿರುವ ಮನುಷ್ಯ ಸಂಬಂಧಗಳ ಬಿರುಕು, ಹೆತ್ತವರನ್ನು ವೃದ್ಧಾಪ್ಯದಲ್ಲಿ ಕಡೆಗಣಿಸುವ ಸ್ವಾರ್ಥ ಮನೋಭಾವ ಹಾಗೂ ಮಾನವೀಯತೆಯ ಕೊರತೆಯನ್ನು ಕವಿ ಆರ್ದ್ರವಾಗಿ ಬಿಂಬಿಸಿದ್ದಾರೆ.
ಕಲುಷಿತ ಸಮಾಜದ ಸ್ವಾರ್ಥ ಮತ್ತು ನಂಜಿನ ನಡುವೆ ಮುಗ್ಧವಾದ, ಶುದ್ಧವಾದ ಮಾನವೀಯತೆಯನ್ನು ಹುಡುಕುವ ‘ನಂಜಿಲ್ಲದ ಉಸಿರು’ ಕೃತಿಯು ತನ್ನ ಮಣ್ಣಿನ ಸತ್ವ, ಗ್ರಾಮೀಣ ಸೊಗಡು ಹಾಗೂ ನೇರ-ನಿಷ್ಠುರ ಸಾಮಾಜಿಕ ಪ್ರಜ್ಞೆಯಿಂದಾಗಿ ಸಮಕಾಲೀನ ಕನ್ನಡ ಕಾವ್ಯಲೋಕದಲ್ಲಿ ಅತ್ಯಂತ ಮೌಲಿಕ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಇಂದಿನ ಧಾವಂತದ ಮತ್ತು ಕಲುಷಿತ ದಿನಗಳಲ್ಲಿ, ಕಲ್ಮಶವಿಲ್ಲದ ಹಾವೇರಿ ನೆಲದ ಭಾಷೆಯ ಗಂಧವನ್ನು ಹೊತ್ತು ಬಂದಿರುವ ‘ನಂಜಿಲ್ಲದ ಉಸಿರು’ ಸಂಕಲನವು ಮನುಷ್ಯನ ಅಂತಃಕರಣವನ್ನು ತಟ್ಟಿ ಎಬ್ಬಿಸುವ ಒಂದು ಅರ್ಥಪೂರ್ಣ ಕೃತಿಯಾಗಿದೆ.






0 Comments