-ಡಾ.ಪಾರ್ವತಿ ಜಿ.ಐತಾಳ್
ಕುಂದಾಪುರದಲ್ಲಿ ‘ ಸುರಗಂಗಾ ಕಲಾ-ಸಾಹಿತ್ಯ ಮಹಿಳಾ ವೇದಿಕೆ’ ಮಹಿಳೆಯರ ಚಟುವಟಿಕೆಗಳಿಗಾಗಿಯೇ ಹುಟ್ಟಿಕೊಂಡ ಒಂದು ಸಂಘಟನೆ. ಇತ್ತೀಚೆಗೆ ‘ ಕನ್ನಡ ರಾಜ್ಯೋತ್ಸವ’ ಆಚರಣೆಯ ಸಂದರ್ಭದಲ್ಲಿ ವೇದಿಕೆಯ ನೃತ್ಯ – ಸಂಗೀತ ಕಲಾವಿದೆಯರು ‘ಕರ್ನಾಟಕ ವೈಭವ’ ಎಂಬ ರೂಪಕವನ್ನು ಅಚ್ಚುಕಟ್ಟಾಗಿ ಪ್ರಸ್ತುತ ಪಡಿಸಿ ಪ್ರೇಕ್ಷಕರ ಮನಗೆದ್ದರು. ಕನ್ನಡ ಮಾತೆಯ ಕುರಿತಾಗಿ ಪ್ರಸಿದ್ದ ಕವಿಗಳು ರಚಿಸಿದ ಭಾವಗೀತೆಗಳ ಹಿನ್ನೆಲೆ ಮತ್ತು ಉದ್ದೇಶಗಳನ್ನು ಮೊದಲು ನಿರೂಪಿಸುತ್ತ ಅನಂತರ ಆ ಗೀತೆಗಳ ಗಾಯನ ಮತ್ತು ನೃತ್ಯಪ್ರಸ್ತುತಿಯೊಂದಿಗೆ ಒಂದು ಸಂದರ್ಭೋಚಿತವೂ ಅರ್ಥಪೂರ್ಣವೂ ಆದ ಚಿತ್ರಕ್ಕೆ ರೂಪುಗೊಟ್ಟರು. (ಪರಿಕಲ್ಪನೆ : ಪಾರ್ವತಿ ಜಿ.ಐತಾಳ್. ಭಾಗವಹಿಸಿದವರು : ಸುಪ್ರೀತಾ ಪುರಾಣಿಕ್ ಮತ್ತು ಮಹಾಲಕ್ಷ್ಮಿ ಸೋಮಯಾಜಿ. ಮೀನಾ ಕಾರಂತ್, ಸಮೀಕ್ಷಾ, ರಮ್ಯಾ ರಾವ್, ಸರಿತಾ ರಾವ್ ಮತ್ತು ಸುಮನಾ ಹೇರ್ಳೆ).
ಮೊದಲಿಗೆ ರಂಗದ ಮೇಲೆ ಇಬ್ಬರು ನಿರೂಪಕಿಯರು ಕಾಣಿಸಿಕೊಳ್ಳುತ್ತಾರೆ. ಒಬ್ಬರಾದ ನಂತರ ಇನ್ನೊಬ್ಬರಂತೆ ಸರದಿಯಲ್ಲಿ ಅವರು ಭಾರತಮಾತೆಯ ಮತ್ತು ಆಕೆಯ ತನುಜಾತೆಯ ಬಗ್ಗೆ ಭಾವಪೂರ್ಣವಾಗಿ ಸಂಭಾಷಣೆಗಳನ್ನು ಬಿತ್ತರಿಸುತ್ತಾರೆ.:
‘ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂಬಂತೆ ಜನನಿ ಮತ್ತು ಜನ್ಮಭೂಮಿಗಳು ಸ್ವರ್ಗಕ್ಕಿಂತ ಮಿಗಿಲು ಎಂದು ತಿಳಿದುಕೊಂಡು ಹೆತ್ತ ತಾಯಿ ಮತ್ತು ಹುಟ್ಟಿದ ನಾಡನ್ನು ಸಮಾನವಾಗಿ ಪ್ರೀತಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ತಾಯಿಯನ್ನು ಗೌರವಿಸುವಲ್ಲಿ, ತಾಯ್ನಾಡಿನ ಬಗ್ಗೆ ಹೆಮ್ಮೆ ಪಡುವಲ್ಲಿ ಪ್ರಜ್ಞಾವಂತಿಕೆಯ ಜತೆಗೆ ಭಾವುಕತೆಯೂ ಸೇರಿಕೊಂಡಿರುತ್ತದೆ. ಕೋಟಿ ಕೋಟಿ ಹೃದಯಗಳಲ್ಲಿ ಮೊಳಗುತ್ತಿರುವ ತಾಯ್ನಾಡಿನ ಮೇಲಿನ ಅಭಿಮಾನದ ಕಹಳೆಯೇ ನಾಡಿಗೋಸ್ಕರ ಸಾವನ್ನು ಕೂಡಾ ಲೆಕ್ಕಿಸದೆ ಮುನ್ನುಗ್ಗುವಲ್ಲಿ ಸ್ಫೂರ್ತಿಯ ಸೆಲೆಯಾಗುತ್ತದೆ ‘ ಎನ್ನುತ್ತ ಒಂದನೇ ನಿರೂಪಕಿ ಪ್ರೇಕ್ಷಕರ ಗಮನ ಸೆಳೆದರೆ ಎರಡನೇ ನಿರೂಪಕಿ ‘ಭಾರತಮಾತೆಯ ತನುಜಾತೆಯೆಂದು ನಾವು ಹೆಮ್ಮೆ ಪಡುವ ಕನ್ನಡಮಾತೆ ಜನ್ಮ ತಳೆದದ್ದು ಸಾವಿರಾರು ವರ್ಷಗಳ ಹಿಂದೆಯೇ ಆದರೂ ಕರ್ನಾಟಕವೆಂಬ ಪ್ರತ್ಯೇಕ ರಾಜ್ಯವಾಗಿ ರೂಪುಗೊಂಡದ್ದು ೧೯೫೬ ನವೆಂಬರ್ ೧ರಂದು. ಬ್ರಿಟಿಷರ ಕೈಕೆಳಗೆ ದಾಸ್ಯ ಶೃಂಖಲೆಯಲ್ಲಿ ಸಿಲುಕಿ ಶತಮಾನಗಳಿಂದ ನರಳುತ್ತಿದ್ದು ೧೯೪೭ ಆಗಸ್ಟ್ ೧೫ ರಂದು ಸ್ವತಂತ್ರಗೊಂಡ ಭಾರತಮಾತೆಯ ಗರ್ಭದಿಂದ ೯ ವರ್ಷಗಳ ನಂತರ ಮೈದಾಳಿ ಬಂದ ಕನ್ನಡ ಭುವನೇಶ್ವರಿಯ ಮುಂದೆ ಪ್ರೀತಿಯ ದೀಪವನ್ನು ಬೆಳಗೋಣವೆಂದು ಹಾಡಿದ ಕವಿ ಡಿ.ಎಸ್.ಕರ್ಕಿಯವರ ‘ಹಚ್ಚೇವು ಕನ್ನಡದ ದೀಪ’ ಎಂಬ ಮೈಮನಗಳನ್ನು ನವಿರೇಳಿಸುವ ಹಾಡನ್ನು ನೀವು ಕೇಳಿದ್ದೀರಾ?’ ಎಂದು ಪ್ರೇಕ್ಷಕರನ್ನುದ್ದೇಶಿಸಿ ಕೇಳುತ್ತಿದ್ದಂತೆ ಲಯಬದ್ಧವಾದ ಚಲನೆಯೊಂದಿಗೆ ತಾಳಬದ್ಧವಾದ ಹಾಡಿಗೆ ಹೆಜ್ಜೆ ಹಾಕುತ್ತ ನೃತ್ಯಗಾತಿಯರು ವೇದಿಕೆಯನ್ನು ಪ್ರವೇಶಿಸುತ್ತಾರೆ.
ಜಾನಪದ ಶೈಲಿಯಲ್ಲಿ ಬರೆಯುವ ಕವಿಗಳೆಂದೇ ಪ್ರಸಿದ್ಧರಾದ ಚಂದ್ರಶೇಖರ ಕಂಬಾರರು ಕನ್ನಡ ಮಾತೆಯ ಮೈತುಂಬಾ ಚೆಲ್ಲಿಕೊಂಡಿರುವ ರಮ್ಯ ಮನೋಹರ ಪ್ರಕೃತಿಯ ವರ್ಣನೆ ಮಾಡುತ್ತ ಹಾಡಿರುವ ‘ಮುಂಗೋಳಿ ಕೂಗ್ಯಾವು ಮೂಡಲ ಬೆಳಗಿ’ ಎಂಬ ಗೀತೆಯನ್ನು ಮಧುರ ಕಂಠದ ಗಾಯಕಿ ಮೀನಾ ಕಾರಂತ್ ಮತ್ತು ಬಳಗದವರು ಸುಶ್ರಾವ್ಯವಾಗಿ ಅಭಿನಯಪೂರ್ವಕ ಹಾಡುತ್ತಾರೆ. ಮುಂದೆ ಕನ್ನಡವನ್ನೇ ತನುಮನಗಳಲ್ಲಿ ತುಂಬಿಕೊಂಡರೂ ರಾಜಕೀಯವಾಗಿ ನಡೆದ ವಾದ ವಿವಾದಗಳಿಂದಾಗಿ ಕೇರಳಕ್ಕೆ ಸೇರಿಹೋದ ಕಾಸರಗೋಡು ಜಿಲ್ಲೆಯ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರು ಕನ್ನಡಮಾತೆಯ ಮುಂದೆ ನಿಂತು ಭಕ್ತಿಪೂರ್ವಕವಾಗಿ ಬೇಡಿಕೊಳ್ಳುವ ಕವಿತೆ ‘ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ’ ಎಂಬ ಹಾಡಿಗೆ ಗಾಯಕಿಯರು ಧ್ವನಿ ನೀಡುತ್ತಾರೆ. ಆ ಹಾಡಿನಲ್ಲಿ ವ್ಯಕ್ತವಾಗುವ ದೈನ್ಯಧ್ವನಿ ಕೇಳುಗರ ಅಂತಃಕರಣವನ್ನು ಕಲಕುವಂತಿದೆ.
ಗಂಧದ ಸಿರಿನಾಡು, ಹಚ್ಚಹಸಿರಿನ ವನರಾಜಿಯ ಬೀಡು, ನಿಸರ್ಗ ಸೊಬಗಿನ ನಿತ್ಯಹರಿದ್ವರ್ಣದ ಕಾಡುಗಳಿಂದ ಕಂಗೊಳಿಸುವ, ಜೋಗದ ಚೆಲುವಿನ ಜಲಪಾತ, ತುಂಬಿ ಹರಿಯುವ ತುಂಗೆ-ಕಾವೇರಿಯಂಥ ನೂರಾರು ನದಿಗಳು, ಬೇಲೂರು, ಹಳೇಬೀಡು, ಹಂಪಿ, ಚಿತ್ರದುರ್ಗ ಮೊದಲಾದ ಇತಿಹಾಸ ಪ್ರಸಿದ್ಧ ಸ್ಥಳಗಳನ್ನು ಹೊಂದಿ ನಿತ್ಯೋತ್ಸವವನ್ನು ಆಚರಿಸುತ್ತಿರುವ ಕನ್ನಡ ಮಾತೆಯ ಕುರಿತು ಕವಿ ಕೆ.ಎಸ್.ನಿಸಾರ್ ಅಹಮ್ಮದರ ‘ಜೋಗದ ಸಿರಿ ಬೆಳಕಿನಲ್ಲಿ’ ಎಂಬ ಹಾಡಿನ ಜಾಡು ಹಿಡಿದು ನೃತ್ಯಗಾತಿಯರು ನರ್ತಿಸುತ್ತಾರೆ. ಕನ್ನಡಾಂಬೆಯ ಬಗ್ಗೆ ಹೆಮ್ಮೆಯ ಭಾವನೆ ಹುಟ್ಟಿಸುವಂಥ ಹಾಡದು. ಕೊನೆಯಲ್ಲಿ ನಿರೂಪಕಿಯರು ಮತ್ತೆ ಕಾಣಿಸಿಕೊಂಡು ‘ನಾವು ಕನ್ನಡ ತಾಯಿಯನ್ನು ಹೀಗೆ ಸ್ತುತಿಸುತ್ತ ಹಾಡಿ ಕುಣಿದರೆ ಸಾಕೆ? ದಿನಬೆಳಗಾದರೆ ಏನಾದರೊಂದು ಸಮಸ್ಯೆಗಳನ್ನು ಹುಟ್ಟಿಸಿ ತಾಯಿಗೆ ನೋವನ್ನು ಕೊಡುತ್ತಿರುವವರಿಂದ, ತಾಯ ಒಡಲನ್ನು ಛಿದ್ರಗೊಳಿಸುತ್ತಿರುವವರಿಂದ ಅವಳನ್ನು ರಕ್ಷಿಸುವುದು ಬೇಡವೇ?’ ಎನ್ನುತ್ತ ಕವಿ ಗೋಪಾಲಕೃಷ್ಣ ಅಡಿಗರ ‘ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು’ ಎಂಬ ಹಾಡಿಗೆ ಹೆಜ್ಜೆ ಹಾಕುತ್ತಾರೆ.
ರೂಪಕವು ಅಯ್ದುಕೊಂಡ ಎಲ್ಲ ಗೀತೆಗಳೂ ಕನ್ನಡ ಮಾತೆಯ ಮೇಲಿನ ಪ್ರೇಮ ಭಾವವನ್ನು ಉಕ್ಕಿಸುವಂಥವು. ಹಾಡಿದವರಾಗಲಿ ನರ್ತಿಸಿದವರಾಗಲಿ ತಮ್ಮ ಔಚಿತ್ಯಪೂರ್ಣ ವಸ್ತ್ರಾಲಂಕಾರ- ವೇಷಭೂಷಣ ಹಾಗೂ ಸಮರ್ಥ ಅಭಿನಯ-ಹಾವಭಾವಗಳಿಂದ ಆ ಭಾವಕ್ಕೆ ಜೀವ ತುಂಬಿದರು. ಪ್ರೇಕ್ಷಕರನ್ನು ಒಂದಷ್ಟು ಹೊತ್ತು ರಸೋಲ್ಲಾಸದಲ್ಲಿ ಮುಳುಗಿಸಿದರು. ಕನ್ನಡ ರಾಜ್ಯೋತ್ಸವದ ಆಚರಣೆಯು ನಿಜ ಅರ್ಥದಲ್ಲಿ ಕಳೆಗಟ್ಟುವಂತೆ ಮಾಡಿದರು.






0 Comments