ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆನಪಿನ ದೋಣಿಯಲ್ಲಿ ನಿರ್ದಿಗಂತವಾದ ಚೇತನ.. 

ನವಂಬರ್ 10 ಕುವೆಂಪುರವರು ವಿಧಿವಶರಾದ ದಿನ

ಈ ಪ್ರಯುಕ್ತ ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಅವರ ಬರಹ ಇಲ್ಲಿದೆ.

–ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್

ನಾನು ನಾಲ್ಕನೇ ತರಗತಿ ಓದುತ್ತಿದ್ದ ದಿನಗಳು.ನನ್ನ ಅಕ್ಕನೊಂದಿಗೆ ಶಾಲೆಗೆ ಹೋಗಿದ್ದೆ. ಕೆಲವು ಅವಧಿಗಳ ನಂತರ ಶಾಲೆಯಲ್ಲಿ ಮೌನಾಚರಣೆ.ನಂತರ ರಜೆ. ‘ಸೂಟಿ’ ಏಕೆ ಕೊಟ್ಟರೆಂದು ನನಗೆ ಗೊತ್ತಾಗಲೇ ಇಲ್ಲ. ಆ ದಿನ 1994 ನೇ ಇಸವಿ ನವೆಂಬರ್ 10.

ಕನ್ನಡಿಗರು ಅಮೂಲ್ಯ ಸಾಹಿತ್ಯ ರತ್ನವನ್ನು ಕಳೆದುಕೊಂಡು ಅನಾಥರಾದ ದಿನ. ಕನ್ನಡ ಕಾವ್ಯದ ಆಶಾಕಿರಣ,ವೈಚಾರಿಕ ಪ್ರಜ್ಞೆ ಶೂನ್ಯದಲ್ಲಿ ಲೀನವಾದ ದಿನ. ರಸಋಷಿ ಕುವೆಂಪು ತೀರಿಕೊಂಡು ಇಂದಿಗೆ 32 ವರ್ಷಗಳು ಕಳೆದವು ಎಂದು ಅರ್ಥವಾದ ಸಮಯ.ಕನ್ನಡದ ಕುಲಪತಿ ಮರೆಯಾದ ದಿನ. ಬೆಳಕಿನ ಹಬ್ಬ ದೀಪಾವಳಿಯನ್ನು ಕನ್ನಡಿಗರು ಈ ದಿನ ಆಚರಿಸುತ್ತಿದ್ದೇವೆ. ಸಾಹಿತ್ಯದ ದೀಪ ಹಾರಿ ಹೋದ ದಿನವನ್ನು ನೆನೆಯುವ ದಿನವೂ ಇದಾಗಿದೆ.ಈ ದಿನ ಸೂತಕವೆಂದು ಭಾವಿಸದೆ ಕುವೆಂಪು ಅವರ ವಿಚಾರಗಳ ಬೆಳಕಿನಿಂದ ಸಮಾಜದ ಕಗ್ಗತ್ತಲನ್ನು ಓಡಿಸುವ ಪ್ರತಿಜ್ಞೆಯನ್ನು ಕೈಗೊಳ್ಳುವ ದಿನವಾಗಲಿ. ಕನ್ನಡದ ಅಭಿಮಾನವನ್ನು ಮೆರೆಯುತ್ತಿರುವ ಕನ್ನಡಿಗರು ಕೇವಲ ಭಾಷಣದ ಸುನಾಮಿಯಲ್ಲಿ ಕನ್ನಡತನ ಕೊಚ್ಚಿ ಹೋಗಬಾರದು.ಕುವೆಂಪುರವರ ವಿಚಾರಗಳನ್ನು ಅನ್ವಯಿಸಿಕೊಳ್ಳಬೇಕು. ಕನ್ನಡ ಭಾಷೆ ಸಮುದ್ರದ ಅಲೆಗಳಂತೆ ಅನುರಣಿಸುತ್ತಿರಬೇಕು. ಈ ಹೊತ್ತಿನಲ್ಲಿ ಪುಟ್ಟಪ್ಪನವರ ಜೀವಿತದ ಕೆಲವು ಪ್ರಸಂಗಗಳನ್ನು, ವಿಚಾರಗಳನ್ನು ನೆನೆಯೋಣ ಬನ್ನಿ.

ಬಾಳೆ ಹಣ್ಣಿನ ಸಿಪ್ಪೆಯ ಪ್ರಸಂಗ :

ಕುವೆಂಪುರವರು ಬಾಲ್ಯದಲ್ಲಿದ್ದಾಗ ಪ್ರಕೃತಿಯ ಚಮತ್ಕಾರಕ್ಕೆ ಬೆರಗಾಗಿ ಭಗವಂತನ ವಜ್ರನಿಯಮಕ್ಕೆ ತಲೆಬಾಗಬೇಕೇ? ಗುಡ್ಡ, ಬೆಟ್ಟ, ಸೂರ್ಯ,ಚಂದ್ರ,ನಕ್ಷತ್ರವೆಲ್ಲವನು ದೇವರು ಹೇಳಿದ ಹಾಗೆ ಕೇಳುತ್ತವೆಯೇ? ಎಂಬ ಪ್ರಶ್ನೆಗಳು ಬಾಲಕನಲ್ಲಿ ಮೂಡುತ್ತಿದ್ದವು. ಒಂದು ದಿನ ತಾನು ತಿಂದ ಬಾಳೆಹಣ್ಣಿನ ಸಿಪ್ಪೆಯನ್ನು ರಸ್ತೆಯಲ್ಲಿ ಬಿಸಾಕಿ ಮುನ್ನಡೆದನು. ಈ ಸಿಪ್ಪೆ ಅಲ್ಲಿಯೇ ಬೀಳಬೇಕೆಂದು ದೇವರು ನಿಯಮಿಸಿದ್ದಾನೆಯೇ? ಎಂಬ ಪ್ರಶ್ನೆ ಹಾವಿನ ಹೆಡೆಯಂತೆ ಎದ್ದಿತು. ಇಲ್ಲ ಇಲ್ಲ ಅದು ಹಾಗಾಗಲು ಸಾಧ್ಯವಿಲ್ಲವೆಂದು ಹೇಳಿ ತಿರುಗಿ ತಾನು ಬಿಸಾಕಿದ ಜಾಗದಲ್ಲಿದ್ದ ಸಿಪ್ಪೆಯನ್ನು ಹುಡುಕಿ ತಂದು ಬೇರೊಂದು ಜಾಗಕ್ಕೆ ಎಸೆಯುತ್ತಾನೆ .ಆದರೂ ಮತ್ತೆ ವಿಧಿ ಬಾಲಕನನ್ನು ಕೆಣಕುತ್ತದೆ. ನೋಡಿದೆಯಾ ಅದು ಆ ಮೊದಲಿನ ಜಾಗದಲ್ಲಿ ಬೀಳದೆ ಈ ಜಾಗದಲ್ಲಿಯೇ ಬೀಳಬೇಕೆಂಬ ನಿಯಮವನ್ನು ನಾನೇ ರೂಪಿಸಿದೆ ಎಂದು ವಿಧಿ ಮೂದಲಿಸ ತೊಡಗಿದಂತೆ ಭಾಸವಾಗುತ್ತದೆ.ಈ ಸಣ್ಣ ಸಣ್ಣ ಪ್ರಶ್ನೆಗಳೇ ಕುವೆಂಪು ವೈಚಾರಿಕವಾಗಿ ಬೆಳೆಯಲು ಸಾಧ್ಯವಾಗಿರಬಹುದೆನಿಸುತ್ತದೆ. ಮಕ್ಕಳು ಮನೆ, ಶಾಲೆಗಳಲ್ಲಿ ಹೆಚ್ಚು ಪ್ರಶ್ನೆಗಳು ಕೇಳುತ್ತಲೇ ಇರುತ್ತಾರೆ. ಅದನ್ನ ನಾವು ಪ್ರೋತ್ಸಾಹಿಸಬೇಕು. ‘ವಿಶ್ವ ಮಾನವನಾಗಿ ಹುಟ್ಟುವ ಮಗವನ್ನು ನಾವು ಅಲ್ಪ ಮಾನವನನ್ನಾಗಿ ಮಾಡುತ್ತೇವೆ’ ಎಂಬ ಅವರ ಬಾಲ್ಯದ ಅನುಭವವೇ ನುಡಿಗಟ್ಟಾಗಿದೆ. ಬಾಳೆಯ ಸಿಪ್ಪೆ ಹಾಗೆ ನಮ್ಮ ಜೀವನ.ನಾವೆಲ್ಲಿರಬೇಕು,ನಮ್ಮ ಬದುಕು ಎಲ್ಲಿ ಕೊನೆಣೆಗಾಣಬೇಕೆಂಬ ನಿಯಮಗಳು ಈ ಮೊದಲೇ ನಿರ್ಣಯಿಸುತ್ತಿರುತ್ತವೆ ಎಂಬ ಅಗೋಚರ ಶಕ್ತಿಯ ಕುರಿತಾಗಿ ಕವಿ ಮನಸಿನ ಪ್ರಶ್ನೆ, ಚಿಂತನೆ ಗಮನಾರ್ಹ.

ಸಿಡಿಲಿನ ಪ್ರಸಂಗ : 1926-27 ಇಸವಿಯಲ್ಲಿ ಕುವೆಂಪು ಮೈಸೂರಿನಲ್ಲಿ ಓದುತ್ತಿದ್ದರು.ಬೇಸಿಗೆ ರಜೆಯಲ್ಲಿ ಕುಪ್ಪಳಿಗೆ ಆಗಮಿಸಿದ್ದರು. ಆಗ ಗುಡುಗು ಮಿಂಚು ಸಿಡಿಲಿನ ಆರ್ಭಟ ದೊಂದಿಗೆ ಅಡಿಕೆ, ಬಾಳೆ ತೋಟಕೆ ಹಾನಿ ಉಂಟಾಯಿತು. ಇದರಿಂದ ವಿಚಲಿತರಾದ ಇವರ ದೊಡ್ಡ ಚಿಕ್ಕಪ್ಪಯ್ಯನವರು ಮನೆಗೆ ಶಾಂತಿ ಮಾಡಿಸಬೇಕೆಂದು ನಿಶ್ಚಯಿಸಿದರು.ಪೂಜೆ, ಹೋಮ-ಹವನ ಎಂದು ಇಲ್ಲ ಸಲ್ಲದ ಮೌಡ್ಯ ಬಿತ್ತುವ ಪುರೋಹಿತ ಶಾಯಿ ವರ್ಗವನ್ನು ಕುವೆಂಪು ಬಲವಾಗಿ ತಿರಸ್ಕರಿಸುತ್ತಿದ್ದರು.ಪ್ರಕೃತಿಯಿಂದ ಆದ ಹಾನಿಗೆ ದೇವರು, ಧರ್ಮದ ಹೆಸರೇಳಿ ಸುಲಿಗೆ ಮಾಡುವ ಬಂಡುಕೋರರನ್ನು ಕುವೆಂಪು ಸಹಿಸುತ್ತಿರಲಿಲ್ಲ. ಇದು ಕೇವಲ ಒಂದು ಧರ್ಮಕ್ಕೆ ಮಾತ್ರ ಸೀಮಿತ ವಾಗಿಲ್ಲ. ಎಲ್ಲಾ ದೇಶಗಳಲ್ಲಿಯೂ ಎಲ್ಲಾ ಕಾಲಗಳಲ್ಲಿಯೂ ಎಲ್ಲಾ ಮತಗಳಲ್ಲಿಯೂ ಇರುವ ಒಂದು ಶೋಷಕ ವರ್ಗ ಎಂಬುದನ್ನು ಕುವೆಂಪು ಹೇಳ ಬಯಸಿದ್ದರು . ಏಕೆಂದರೆ ಪೂಜೆ ಎಂದರೆ ಕೇವಲ ಗಂಟೆ ಜಾಗಟೆ ಮಂತ್ರಘೋಷ ಮಂಗಳಾರತಿಗಳ ಸಾಂಪ್ರದಾಯಿಕ ಬದ್ಧವಾದ ಕಟ್ಟಳೆಗಳಲ್ಲ.

‘ಸೂರ್ಯ ಚಂದ್ರರ ಉದಯಾಸ್ತಮಾನಗಳನ್ನು,ಹೂಬಳ್ಳಿ ಹಸಿರಿಡಿದ ಕಾನನ ಸ್ತ್ರೀಯನ್ನು, ಜೋಗದ ಜಲಪಾತವನ್ನು ನೋಡುವುದೇ ಪೂಜೆ. ಹಕ್ಕಿಗಳ ಇಂಚರವನ್ನು ಕೇಳುವುದು ಪೂಜೆಯೆ. ಮಹತ್ವದ್ದನ್ನು ಕುರಿತು ಆಲೋಚಿಸುವುದು,ಅನುಭವಿಸುವುದು ಪೂಜೆ’ಎಂದು ಹೇಳುತ್ತಾ ವೈಚಾರಿಕ ನಿಲುವನ್ನು ಸ್ಪಷ್ಟಪಡಿಸುತ್ತಾರೆ.

‘ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?’ಎಂಬ ಸಾಲುಗಳು ಮನುಷ್ಯತ್ವದ ಸಂಕೇತಗಳಾಗಿವೆ. ‘ಶಾಸ್ತ್ರವೆಂಬುದು ಸಂತೆಯ ಸುದ್ಧಿ, ಪುರಾಣವೆಂಬುದು ಪುಂಡರಗೋಷ್ಠಿ ‘ಎಂಬ ವಚನಕಾರರ ಬಂಡಾಯ ಮನೋಧರ್ಮ ಕುವೆಂಪು ಅನ್ವಯಿಸಿಕೊಂಡಿದ್ದರು. ಶಂಬೂಕ, ಜಲಗಾರ ಪಾತ್ರಗಳ ಮೂಲಕ ಅವರ ದೃಷ್ಟಿಕೋನ ವಿಭಿನ್ನ. ಹಾಗಾಗಿ ಅವರು ತಮ್ಮನ್ನು ‘ಸಮಾನತಾವಾದಿ’ಎಂದು ಹೇಳಿಕೊಂಡಿದ್ದರು. ಹಾಗೆಯೇ ಜೀವಿಸಿದ್ದರು. ಮದುವೆಯ ಹೆಸರಿನಲ್ಲಿ ಉಂಟಾಗುತ್ತಿದ್ದ ಅನಾಮದೇಯ ಖರ್ಚು ವೆಚ್ಚಗಳನ್ನು ಕಡಿತಗೊಳಿಸಿ ‘ಮಂತ್ರ ಮಾಂಗಲ್ಯ’ವೆಂಬ ಸರಳ ವಿವಾಹವನ್ನು ಪ್ರಚುರಪಡಿಸಿದರು.

ಕನ್ನಡಕ್ಕೆ ಕಂಕಣ ಕಟ್ಟಿಕೊಂಡ ಪ್ರಸಂಗ :

1924 ಜುಲೈ 2ನೇ ತಾರೀಕು.ಕನ್ನಡದ ಕಂದ ಕನ್ನಡಕ್ಕೆ ತಿರುಗಿದ ಶುಭದಿನ.ಈ ದಿನ ಕುವೆಂಪು ಮೈಸೂರಿನಲ್ಲಿ ಜೆ.ಎಚ್ ಕಜಿನ್ಸ್ ಎಂಬ ಐರಿಷ್ ಕವಿಯನ್ನು ಭೇಟಿಯಾಗಿ ತಾವು ಬರೆದ ಇಂಗ್ಲಿಷ್ ಕವಿತೆಗಳನ್ನು ಪ್ರಸ್ತುತಪಡಿಸಿದರು.ಈ ಸಂದರ್ಭದಲ್ಲಿ ‘ನೀವು ನಿಮ್ಮ ಭಾಷೆಯಲ್ಲಿ ಬರೆದರೆ ನಿಮ್ಮ ಸೃಜನಾತ್ಮಕ ಅಭಿವ್ಯಕ್ತಿ ಗಟ್ಟಿಗೊಳ್ಳುವುದು’ಎಂಬ ಸಲಹೆ ನೀಡಿದರು. ಇಂಗ್ಲೀಷನ ವ್ಯಾಮೋಹಿಯಾಗಿ ‘ಬಿಗಿನರ್ಸ್ ಮ್ಯೂಸ್ ‘ ಎಂಬ ಇಂಗ್ಲಿಷ್ ಕವನ ಸಂಕಲನ ಪ್ರಕಟಿಸಿದ್ದು 18ನೇ ವಯಸ್ಸಿನಲ್ಲಿ. 1930ರಲ್ಲಿ ಇವರ ಕನ್ನಡದ ಮೊದಲ ಕವನ ಸಂಕಲನ

‘ಕೊಳಲು’ ಪ್ರಕಟವಾಯಿತು. ಕಜಿನ್ಸ್ ರವರ ಸಲಹೆಯನ್ನು ಕುವೆಂಪು ತಿರಸ್ಕರಿಸಿದ್ದೆ ಆದರೆ ಏನಾಗುತ್ತಿತ್ತು ಎಂಬ ಊಹೆ ಕೂಡ ಕಲ್ಪನೆಗೆ ದೊರಕದು. ಇಂಗ್ಲಿಷ್ ನಲ್ಲಿ ಬರೆದು ವಿಶ್ವವಿಖ್ಯಾತಿ ಗಳಿಸಬಹುದಿತ್ತೇನೋ?

 ಆದರೆ ಕುವೆಂಪು ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಪ್ರವೇಶ ದೊರಕುತ್ತಿತ್ತೋ ಇಲ್ಲವೋ? ಗೊತ್ತಿಲ್ಲ. ಕಸಿನ್ಸ್ ರವರಿಗೆ ನೆಲದ ಭಾಷೆಯ ಪ್ರಜ್ಞೆ ಜಗದ ಇತರ ಭಾಷೆಗಳಲ್ಲಿ ಸಿಗಲು ಸಾಧ್ಯವಿಲ್ಲವೆಂಬ ದಿವ್ಯದರ್ಶನದ ಫಲವೇ ಕುವೆಂಪು ಕನ್ನಡದ ನಿರ್ದಿಗಂತದ ಕವಿಯಾದರು. ಬಿ.ಎ ತರಗತಿಯಲ್ಲಿ ತತ್ವಶಾಸ್ತ್ರವನ್ನು ಓದಿದ್ದ ಕುವೆಂಪುರವರನ್ನು ಕನ್ನಡ ತರಗತಿಗಳಿಗೆ ಬರುವಂತೆ ಮನವೊಲಿಸಿದ್ದು ಎ.ಆರ್. ಕೃಷ್ಣಶಾಸ್ತ್ರಿಯವರು. ಕನ್ನಡದ ಸಾಹಿತ್ಯ ತತ್ವ ಕಲಿಯಲು ಅಣಿ ಇಟ್ಟ ಸಮಯವನ್ನು ಕುವೆಂಪು ಹೀಗೆ ನೆನೆಯುತ್ತಾರೆ. 1927ರಲ್ಲಿ ‘ಕನ್ನಡ ಎಂ ಎ ತೆಗೆದುಕೊಂಡದ್ದರಿಂದ ಸಾಹಿತ್ಯದ ಸಕ್ರಮ ಅಧ್ಯಯನದ ಅವಕಾಶ ದೊರೆಯಿತು.ನಮ್ಮ ಪರಂಪರೆಯ ಶಾಸ್ತ್ರೀಯವಾದ ಅಭ್ಯಾಸದಿಂದ ಕವಿಯ ಸೃಜನ ಪ್ರತಿಭೆಯ ತಾಯಿ ಬೇರಿಗೆ ಅಮೃತಾಹಾರ ಒದಗಿ ತಾಯಿ ನೆಲಕ್ಕೆ ಆಳವಾದ ಪ್ರವೇಶ ದೊರಕಿತ್ತು.’ ಎಂಬ ಅವರ ನುಡಿ ಕನ್ನಡ ಸಾಹಿತ್ಯದ ಮಹತ್ವ ಸಾರುತ್ತದೆ. ಈ ಕ್ಷಣವನ್ನು ಅವರು ಅಮೃತ ಘಳಿಗೆ ಎಂದು ‘ನೆನಪಿನ ದೋಣಿ’ಯಲ್ಲಿ ನೆನೆಯುವರು. ಕಸಿನ್ಸ್ ಮತ್ತು ಆರ್. ಕೃಷ್ಣ ಶಾಸ್ತ್ರಿಗಳ ಪ್ರೇರಣೆಯ ಮಾತುಗಳಿಂದ 

ರಸಋಷಿ ನಮ್ಮವರಾದರು. ಈ ಮಾತುಗಳಿಗೆ ದೇವರು ರುಜು ಮಾಡಿರಲುಬಹುದುಲ್ಲವೇ?

ತೇಜಸ್ವಿ ಕಂಡ ಕುವೆಂಪು :

ಪೂರ್ಣಚಂದ್ರ ತೇಜಸ್ವಿಯವರು ‘ಅಣ್ಣನ ನೆನಪು’ ಕೃತಿಯಲ್ಲಿ ‘ಕುವೆಂಪು ನಮ್ಮ ಕಾಲದ ಅತಿ ಸಂಕೀರ್ಣ ವ್ಯಕ್ತಿತ್ವದ ಪ್ರತಿಭೆ. ಅವರನ್ನು ಕವಿಯಾಗಿಯೂ ಕಾದಂಬರಿಕಾರರನ್ನಾಗಿಯೂ ತತ್ವ ಮಿಮಾಂಸಕರನ್ನಾಗಿಯೂ ವಿಚಾರವಾದಿಯನ್ನಾಗಿಯೂ ಅಥವಾ ಬಿಡಿ ಬಿಡಿಯಾಗಿ ಕತೆಗಳನ್ನು ಅವಲೋಕಿಸಿದಾಗ ಸ್ಪಷ್ಟವಾಗಿ ಸರಳವಾಗಿ ಕಾಣುವ ವ್ಯಕ್ತಿತ್ವ, ನೋಡಿದ ಕೂಡಲೇ ಅತ್ಯಂತ ಸಂಕೀರ್ಣವಾಗಿ ಕಾಣುತ್ತದೆ. ಒಂದು ಕಡೆ ಇಂಗ್ಲಿಷ್ ಜ್ಞಾನ ಅತಿ ಮುಖ್ಯವೆಂದು ಶೂದ್ರರನ್ನೆಲ್ಲ ಎಚ್ಚರಿಸುತ್ತಾರೆ. ಕನ್ನಡದ ವಿಷಯಕ್ಕೆ ಬಂದಾಗ ಇಂಗ್ಲಿಷನ್ನು ಪೂತನಿ ಎಂದು ಕಟುವಾಗಿ ಟೀಕಿಸುತ್ತಾರೆ . ಭಾರತೀಯ ಸನಾತನ ಧರ್ಮದ ಅತ್ಯಂತ ಕಟು ವಿಮರ್ಶೆ ಕುವೆಂಪುರವರಲ್ಲಿ ಕಾಣಬಹುದು. ಅಂತಯೇ ಉಪನಿಷದ್ ದರ್ಶನಗಳ ಆರಾಧನೆಯನ್ನು ಕಾಣಬಹುದು.ಅವರ ಜೀವನದಾದ್ಯಂತ ಎಂದು ಯಾವ ದೇವಸ್ಥಾನಕ್ಕೂ ಕಾಲಿಡಲಿಲ್ಲ.ಆದರೆ ಅಷ್ಟೇ ಗಾಢವಾಗಿ ಧ್ಯಾನ,ತಪಸ್ಸು, ಪ್ರಾರ್ಥನೆಗಳನ್ನು ಪ್ರತಿಪಾದಿಸಿದರು. ಆದ್ದರಿಂದಲೇ ಅನೇಕ ವೇಳೆ ಸನಾತನಿಗಳು, ದೈವ ಭಕ್ತರು, ವಿಚಾರವಾದಿಗಳು ನಾಸ್ತಿಕರು ಎಲ್ಲರೂ ತಮ್ಮ ಪ್ರತಿಪಾದನೆಯನ್ನು ಕುವೆಂಪುರವರಲ್ಲಿ ಕಾಣುತ್ತಾ ಹೋದರು’. ಎನ್ನುತ್ತಾರೆ.

‘ನಿಶ್ಯಬ್ದದಲ್ಲಿ ನಿಂತು ನೆನೆಯುತ್ತೇನೆ 
ನಿಮ್ಮಿಂದ ನಾ ಪಡೆದ ಹೊಸ ಹುಟ್ಟುಗಳ ಗುಟ್ಟುಗಳ ‘ಎಂದು ಜಿ.ಎಸ್.ಶಿವರುದ್ರಪ್ಪನವರು ತಮ್ಮ ಗುರುಗಳಾದ ಕುವೆಂಪುರವರನ್ನು ನೆನೆಯುತ್ತಾರೆ.

 ನೀವು ಕೊಟ್ಟ ಕನ್ನಡದ ದೀಕ್ಷೆಯನ್ನು ಜ್ಞಾನದ ನಿಧಿಯನ್ನು ಹಂಚುವ ಪರಿಚಾಲಕನಾಗಿ ನನ್ನನ್ನ ನಿರ್ಮಿಸಿದ್ದಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುವುದೆಂದು ಕರೆಕೊಟ್ಟ ಕುವೆಂಪುರವರು ನಮ್ಮಿಂದ ಕಣ್ಮರೆಯಾದ ದಿನವಿಂದು. ‘ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ’ ಎನ್ನುತ್ತಾ ಕವಿಶೈಲದಲ್ಲಿ ಲೀನವಾದರು.ಆದರೆ ಅವರ ಆಲೋಚನೆಗಳು ನಮ್ಮ ಕಣ್ಣ ಬೆಳಕಾಗಿವೆ. ಕವಿಶೈಲ ಕನ್ನಡ ಮನಸುಗಳಿಗೆ ಸ್ಪೂರ್ತಿಧಾಮವಾಗಿ ಬೆಳೆಯುತ್ತಿದೆ.

‍ಲೇಖಕರು Admin

10 November, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading