-ನಾ ದಿವಾಕರ
ದೀಪಾವಳಿಯ ಸಂಭ್ರಮದಲ್ಲಿ ಕತ್ತಲಯುಗದ ದುಷ್ಡ ದನಿಗಳು ಕೈಬೀಸಿ ಕರೆಯುತ್ತಲೇ ಇವೆ
ಮೌಢ್ಯದಿಂದ ಅತಿಮೌಢ್ಯಕ್ಕೆ, ಕ್ರೌರ್ಯದಿಂದ ಅತಿಕ್ರೌರ್ಯಕ್ಕೆ, ಭಕ್ತಿಯಿಂದ ಉನ್ಮಾದಕ್ಕೆ, ಹಿಂಸೆಯಿಂದ ಅತಿಹಿಂಸೆಗೆ, ಪ್ರೀತಿಯಿಂದ ದ್ವೇಷಕ್ಕೆ ಸತತವಾಗಿ ಕುಸಿಯುತ್ತಲೇ ಇರುವ ಒಂದು ಸಮಾಜದಲ್ಲಿ ನಾವು ದೀಪಗಳನ್ನು ಬೆಳಗುವ ಮೂಲಕ ಪೌರಾಣಿಕ ಅಸುರ ಸಂಹಾರಗಳನ್ನು ಸಂಭ್ರಮಿಸುತ್ತಿದ್ದೇವೆ. “ಯಾವೆಣ್ಣೆಯಾದರೂ ಬೆಳಗುವುದೆ ಗುರಿ” ಎಂಬ ಕವಿವಾಣಿಯ ದೃಷ್ಟಿಯಿಂದಲೇ ನೋಡಿದರೂ, ನಾವು ಹಚ್ಚುವ ಹಣತೆಗಳು ದೀಪದ ಬೆಳಕು ನೀಡುತ್ತವೆ ಆದರೆ ಈ ಸಣ್ಣ ಬೆಳಕಿನಲ್ಲಿ ನಾವು ಕಾಣಬೇಕಿರುವುದೇನು ? ಈ ಪ್ರಶ್ನೆಯೇ ನಮ್ಮನ್ನು ನೂರಾರು ಜಿಜ್ಞಾಸೆಗಳ ಗೂಡಾಗಿಸುತ್ತದೆ. ಧಾರ್ಮಿಕವಾಗಿ ಹಬ್ಬದಂತೆ, ಸಾಂಸ್ಕೃತಿಕವಾಗಿ ಆಚರಣೆಯ ರೂಪದಲ್ಲಿ ದೇಶಾದ್ಯಂತ ದೀಪಗಳು ಬೆಳಗುತ್ತಿವೆ. ಇದೊಂದು ದೃಶ್ಯರೂಪಕವಾಗಿ ಮುದಗೊಳಿಸುತ್ತದೆ.
ಆದರೆ ಈ ಸಂಭ್ರಮಾಚರಣೆಯ ಹಿಂಬದಿಯಲ್ಲಿ ನಮ್ಮ ಸಮಾಜವನ್ನು ಆವರಿಸುತ್ತಿರುವ ಕತ್ತಲೆಯ ನೆರಳನ್ನು ಗುರುತಿಸುವುದು ಹೇಗೆ ? ಅಯೋಧ್ಯೆಯಲ್ಲಿ 36 ಲಕ್ಷ ಹಣತೆಗಳನ್ನು ಬೆಳಗಿಸುವ ಮೂಲಕ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ವೈಭವಯುತ ಪ್ರದರ್ಶನವಾಗಿ (Spectacle) ಆಚರಿಸಿದ್ದೇವೆ. ಈ ಸಾಲು ದೀಪಗಳ ಬೆಳಕಿನಲ್ಲಾದರೂ ರಾಮಮಂದಿರವನ್ನು ದೋಚಿದ ದುಷ್ಟರನ್ನು ಕಾಣಲು ಸಾಧ್ಯವೇ ? ಅಥವಾ ಲಕ್ಷಾಂತರ ಹಣತೆಗಳನ್ನು ತಯಾರಿಸುವ ದುಡಿಮೆಗಾರರ ಬೆವರಿನ ಗುಳ್ಳೆಗಳನ್ನು ಗುರುತಿಸಲು ಸಾಧ್ಯವೇ ? ಬೆಳಗಿ ಕರಕಲಾಗಿ ಅಸ್ತಂಗತವಾಗುವ ದೀಪದ ಬತ್ತಿಗಳ ಅಂತರಂಗದಲ್ಲಿ ಅಡಗಿರುವ ಅಸಂಖ್ಯಾತ ಜನರ ನೋವು-ಸಂಕಟಗಳು ನಮಗೆ ಕಾಣುತ್ತದೆಯೇ ? ಏನಿಲ್ಲವೆಂದರೂ ದೇಶದ ಮೂಲೆ ಮೂಲೆಯಲ್ಲೂ ಕಾಣುತ್ತಿರುವ ಕ್ರೌರ್ಯ, ಹಿಂಸೆ, ಅಸಹನೆ ಮತ್ತು ದ್ವೇಷದ ಛಾಯೆಯಾದರೂ ಕಂಡೀತೇ ?
ಪುರಾಣ- ಕಲ್ಪನೆ ಮತ್ತು ವಿವೇಚನೆ
ಕೊನೆಯ ಪ್ರಶ್ನೆಗೆ ಕಾರಣವೆಂದರೆ ನಾವು ದೀಪಾವಳಿಯ ದಿನಗಳಂದು ಸಂಭ್ರಮಿಸುವುದು ಪುರಾಣದ ಅಸುರ ಸಂಹಾರಗಳನ್ನು. ನರಕಾಸುರ, ಬಲಿ ಚಕ್ರವರ್ತಿಯ ವಧೆಯನ್ನು . ಭಾರತೀಯ ಪುರಾಣಗಳಲ್ಲಿ ಅಸುರ ಶಕ್ತಿಗಳೂ ಸಹ ಹುಟ್ಟುತ್ತಲೇ ವಧೆಗೆ ಅರ್ಹರಾದ ವ್ಯಕ್ತಿಗಳಾಗಿಯೇ ಕಾಣುತ್ತಾರೆ. ರಾವಣ, ಮಹಿಷ, ಹಿರಣ್ಯ , ಬಲಿ, ನರಕಾಸುರ ಇತ್ಯಾದಿ. ಪುರಾಣ ಕಥನಗಳಲ್ಲಿ ಬರುವ ಈ ಅಸುರರು ಅಥವಾ ರಾಕ್ಷಸರು ಜನ್ಮತಃ ಕ್ರೌರ್ಯ, ಹಿಂಸೆ, ದ್ವೇಷ, ಅಸಹನೆಯನ್ನು ಮೈಗೂಡಿಸಿಕೊಂಡೇ ಹುಟ್ಟಿರುತ್ತಾರೆ. ಇವರನ್ನು ʼ ಅಸುರ ʼ ಎಂದು ವರ್ಗೀಕರಿಸುವ ಒಂದು ಮೇಲ್ವರ್ಗದ, ಮೇಲ್ಜಾತಿಯ ಸಮಾಜ ತನ್ನದೇ ಆದ ವಿವೇಕ-ವಿವೇಚನೆಯನ್ನು ಬಳಸಿ, ಈ ವ್ಯಕ್ತಿಗಳಲ್ಲಿರುವ ದುಷ್ಟ ಗುಣಗಳನ್ನು, ದುರ್ಬುದ್ಧಿಗಳನ್ನು ಗುರಿಯಾಗಿಟ್ಟುಕೊಂಡು ʼ ಅಸುರರು ʼ ಎಂದು ನಿರ್ವಚಿಸಿರುತ್ತಾರೆ.
ಆಳುವ ವರ್ಗಗಳ ಭಾಷೆ ಯಾವುದೇ ಕಾಲಘಟ್ಟದಲ್ಲಾದರೂ ಆಯಾ ಸಮಾಜಗಳ ಬಲಾಢ್ಯ ಅಥವಾ ಪ್ರಬಲ ವರ್ಗಗಳ ಭಾಷೆಯೇ ಆಗಿರುತ್ತದೆ. ಇದು ವರ್ತಮಾನದ ಸತ್ಯವೂ ಹೌದು. ಈ ಅಸುರರನ್ನು ಸಂಹರಿಸುವ ದೈವಿಕ ಶಕ್ತಿಗಳು ಅಥವಾ ಅವತಾರಗಳು ಇದೇ ಬಲಾಢ್ಯ ವರ್ಗಗಳನ್ನೇ ಪ್ರತಿನಿಧಿಸುತ್ತವೆ. ಹಾಗಾಗಿ ನರಕಾಸುರನ ಅಥವಾ ಮಹಿಷನ ವಧೆಯನ್ನು ವರ್ತಮಾನದ ಸಮಾಜಗಳಲ್ಲೂ ಸಂಭ್ರಮದಿಂದ ಕಾಣಲಾಗುತ್ತದೆ. ವಿಜಯದಶಮಿಯಂದು ರಾವಣನ ಪ್ರತಿಕೃತಿಯನ್ನು ಸುಡುವುದು ಇದರ ಒಂದು ಆಧುನಿಕ ರೂಪ. ಈ ವಧಿಸಲ್ಪಟ್ಟ ಅಸುರರಲ್ಲಿ ಪುರಾಣಗಳು ಉಲ್ಲೇಖಿಸುವ ದುರ್ಗುಣಗಳು ಇತ್ತೋ ಇಲ್ಲವೋ ಇದು ಸಂಶೋಧನೆಗೆ ನಿಲುಕದ ವಿಚಾರ, ಏಕೆಂದರೆ ಇವೆಲ್ಲವೂ ಹೇಳಿಕೇಳಿ ಪುರಾಣಗಳೇ ಹೊರತು ದಾಖಲಿತ ಚರಿತ್ರೆಯಲ್ಲ. ʼ ಅವರು ʼ ಹೇಳುತ್ತಾ ಬಂದಿದ್ದಾರೆ ʼ ನಾವು ʼ ನಂಬುತ್ತಾ ಬಂದಿದ್ದೇವೆ.
ವರ್ತಮಾನದ ಕತ್ತಲ ಜಗತ್ತಿನಲ್ಲಿ
ವ್ಯಕ್ತಿಗತ ವಿವೇಕ ಮತ್ತು ವಿವೇಚನೆಗೆ ಸಂಬಂಧಿಸಿದ ಈ ಅಂಶಗಳನ್ನು ಬದಿಗಿಟ್ಟು ವರ್ತಮಾನದಲ್ಲಿ ನಮಗೆ ಎದುರಾಗುತ್ತಿರುವ ವಿಕೃತಿಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಾವು ನೋಡುವುದೇನು ? ಇಡೀ ಸಮಾಜ ಕತ್ತಲಲ್ಲಿರುವಂತಿದೆ. ಈ ಕತ್ತಲೆ ಹೊರಗಿನ ವಾತಾವರಣದಲ್ಲಿ ಮಾತ್ರವೇ ಅಲ್ಲ. ಭೌತಿಕವಾಗಿ ಮನುಷ್ಯ ಸಮಾಜದಲ್ಲೂ ಆವರಿಸುತ್ತಿದೆ. ಮೌಢ್ಯ, ಹಿಂಸೆ, ಕ್ರೌರ್ಯ, ದ್ವೇಷ ಎಲ್ಲವನ್ನೂ ಸಹಜೀಕರಿಸಿಕೊಂಡು (Natuarlise), ನಮ್ಮ ಸುತ್ತ ನಡೆಯುವ ಅಮಾನುಷ ಕೃತ್ಯಗಳನ್ನು, ಸಮಾಜಘಾತುಕ ಚಟುವಟಿಕೆಗಳನ್ನು ಸಾಪೇಕ್ಷವಾಗಿ (Relative terms) ಸಾಮಾನ್ಯೀಕರಿಸಿಕೊಂಡು (Genaralise), ಸಾಂಕೇತಿಕವಾಗಿ ದಹಿಸುವ ಅಸುರ ಲಕ್ಷಣಗಳನ್ನು ಪುರಸ್ಕರಿಸುತ್ತಿದ್ದೇವೆ.
ಇದರ ಒಂದು ನಿದರ್ಶನವನ್ನು ರಾವಣನಲ್ಲೇ ಕಾಣಬಹುದು. ಸೀತಾಮಾತೆಯನ್ನು ಅಪಹರಿಸಿದ ತಪ್ಪಿಗಾಗಿ ಇಂದಿಗೂ ಸಾಂಕೇತಿಕ ದಹನ ಎದುರಿಸುವ ರಾವಣ ನಮಗೆ ಈಗಲೂ ದುಷ್ಟನಾಗಿಯೇ ಕಾಣುತ್ತಾನೆ. ಆದರೆ ಆಧುನಿಕ ಡಿಜಿಟಲ್ ಯುಗದಲ್ಲೂ ಕಾಣೆಯಾಗುತ್ತಿರುವ ಲಕ್ಷಾಂತರ ಹೆಣ್ಣು ಮಕ್ಕಳು ನಮ್ಮನ್ನು ಕಾಡುವುದೇ ಇಲ್ಲ. ಪುರಾಣ ಕಥನಗಳನ್ನು ರಚಿಸಿದ ಕಾಲಘಟ್ಟದಲ್ಲಿ ಮಹಿಳೆಯನ್ನು ಗುಲಾಮಳಂತೆ ಅಥವಾ ಅಧೀನಳಾಗಿ ಕಾಣುವ ಸಮಾಜ ಅಸ್ತಿತ್ವದಲ್ಲಿತ್ತು. ಪಿತೃಪ್ರಧಾನತೆ ಮತ್ತು ಪುರುಷಾಳ್ವಿಕೆ ಆ ವ್ಯವಸ್ಥೆಯ ವಾರಸುದಾರಿಕೆಯನ್ನು ಹೊತ್ತಿದ್ದವು. ಆದರೆ 2026ರಲ್ಲಿ ನಾವು ಮಹಿಳಾ ಸಬಲೀಕರಣ, ವಿಮೋಚನೆ, ಶಿಕ್ಷಣ ಮತ್ತು ರಕ್ಷಣೆ, ಉನ್ನತೀಕರಣ ಈ ಕನಸುಗಳನ್ನು ಕಟ್ಟಿಕೊಂಡಿರುವ ಪ್ರಜಾಪ್ರಭುತ್ವದಲ್ಲಿದ್ದೇವೆ.
ಈ ಸುಶಿಕ್ಷಿತ ನಾಗರಿಕತೆಯಲ್ಲೂ ನಡೆಯುತ್ತಿರುವ ಭೀಕರ ಘಟನೆಗಳನ್ನು ಗಮನಿಸಿದಾಗ ನಮ್ಮ ದೇಶ ಇನ್ನೂ ಅದೇ ಪೌರಾಣಿಕ ಕಾಲಘಟ್ಟದ ಸುಳಿಯಲ್ಲಿ ಸಿಲುಕಿದೆಯೇ ಎಂಬ ಅನುಮಾನ ಸಹಜವಾಗಿ ಮೂಡುತ್ತದೆ. ದೆಹಲಿಯಲ್ಲಿ ವರದಿಯಾಗಿರುವ ಒಂದು ಘಟನೆಯಲ್ಲಿ 16 ವರ್ಷದ ಬಾಲಕಿಯ ಮೇಲೆ ನಡೆದಿರುವ ದೌರ್ಜನ್ಯ ನಾಗರಿಕ ಪ್ರಜ್ಞೆ ಇದ್ದವರಿಗೆ ನಾಚಿ ತಲೆ ತಗ್ಗಿಸುವ ವಿಚಾರ. ಮನೆ ಕೆಲಸದಾಕೆಯಾಗಿ ದುಡಿಯುತ್ತಿದ್ದ ಈ ಅಪ್ರಾಪ್ತೆಯ ಮಾಲೀಕರು ದಿನಕ್ಕೆ 20 ಗಂಟೆ ದುಡಿಯುವಂತೆ ಬಲಾತ್ಕಾರ ಮಾಡುತ್ತಿದ್ದುದೇ ಅಲ್ಲದೆ, ಆ ಬಾಲಕಿಗೆ ಅನ್ನ ನೀರು ನೀಡದೆ ಚಿತ್ರಹಿಂಸೆ ನೀಡಿರುವುದು ವರದಿಯಾಗಿದೆ. ಈ ಬಾಲಕಿಯ ದೇಹದ ಮೇಲೆ ಕಾದ ಐರನ್ ಬಾಕ್ಸ್, ಕಾದ ಚಾಕುವಿನಿಂದ ಸುಟ್ಟಿರುವ ಆರೋಪವೂ ಕೇಳಿಬಂದಿದೆ. ಈ ಘಟನೆ ತನಿಖೆಯ ಹಂತದಲ್ಲಿದೆ.
ಮತ್ತೊಂದು ಘಟನೆಯಲ್ಲಿ ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ 16 ವರ್ಷದ ದಲಿತ ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ವರದಿಯಾಗಿದೆ. ಹೊಲವೊಂದರಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಬಾಲಕಿಯನ್ನು ರಕ್ಷಿಸಲೂ ಸಾಧ್ಯವಾಗಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ಈ ಬಾಲಕಿ ಅತ್ಯಾಚಾರಕ್ಕೊಳಗಾಗಿರುವುದು ದೃಢಪಟ್ಟಿದೆ. ಕಳೆದ ಮೂರು ತಿಂಗಳಲ್ಲಿ ರಾಜಧಾನಿ ದೆಹಲಿಯಲ್ಲೇ ಅಪ್ರಾಪ್ತ ಬಾಲಕಿಯರು, ಹರೆಯದ ಹೆಣ್ನು ಮಕ್ಕಳು ಅತ್ಯಾಚಾರ, ದೌರ್ಜನ್ಯಕ್ಕೊಳಗಾಗಿರುವುದು ವರದಿಯಾಗಿದೆ. ಅತಿ ಹೆಚ್ಚು ಪೊಲೀಸ್ ರಕ್ಷಣೆ ಇರುವ ರಾಜಧಾನಿ ದೆಹಲಿಯಲ್ಲಿ 2024ರ ಒಂದು ವರ್ಷದಲ್ಲೇ 1,058 ಅತ್ಯಾಚಾರ ಪ್ರಕರಣಗಳು, 13,396 ಮಹಿಳಾ ದೌರ್ಜನ್ಯಗಳು ವರದಿಯಾಗಿವೆ. ಭಾರತದ ಜಿಡಿಪಿ ಆರ್ಥಿಕತೆಗೆ ಸಮಾನಾಂತರವಾಗಿ ಮಹಿಳಾ ದೌರ್ಜನ್ಯಗಳೂ ಏರುಗತಿಯಲ್ಲಿರುವುದನ್ನು ಹೇಗೆ ವ್ಯಾಖ್ಯಾನಿಸುವುದು ?
ಹಿಂಸೆ ಮತ್ತು ಕ್ರೌರ್ಯ ಸಾಮಾಜಿಕ ವ್ಯಾಧಿ
ಕರ್ನಾಟಕದ ರಾಜಧಾನಿಯಲ್ಲಿ ವರದಿಯಾಗಿರುವ ಒಂದು ಘಟನೆ ಇಡೀ ರಾಜ್ಯದ ಪ್ರಜ್ಞಾವಂತರನ್ನು ಕಂಗೆಡಿಸಿದೆ. ಒಂದೇ ಕುಟುಂಬದ ಏಳು ಜನರನ್ನು ಬಗೆಬಗೆಯಾಗಿ ಹತ್ಯೆ ಮಾಡಿ ಮೃತ ದೇಹಗಳನ್ನು ಎಲ್ಲೆಂದರಲ್ಲಿ ಬಿಸಾಡಿರುವ ಈ ಘಟನೆ ನಮ್ಮ ಸಮಾಜದಲ್ಲಿ ಅಂತರ್ಗತವಾಗುತ್ತಿರುವ ಕ್ರೌರ್ಯ ಮತ್ತು ಹಿಂಸೆಯ ಪ್ರತೀಕವಾಗಿ ಕಾಣುತ್ತದೆ. NCRB 2025ರ ವರದಿಯ ಅನುಸಾರ 2025ರ ಒಂದು ವರ್ಷದಲ್ಲೇ ದೇಶದಲ್ಲಿ 4,41,534 ಮಹಿಳಾ ದೌರ್ಜನ್ಯಗಳು ದಾಖಲಾಗಿವೆ. ಇವುಗಳ ಪೈಕಿ ಶೇಕಡಾ 30ರಷ್ಟು ಅಂದರೆ 1,20,227 ಕೌಟುಂಬಿಕ ದೌರ್ಜನ್ಯಗಳೆಂದು ವರದಿಯಾಗಿವೆ. 5,737 ವರದಕ್ಷಿಣೆ ಸಾವುಗಳು ಸಂಭವಿಸಿವೆ. ಪುರಾಣದ ನರಕಾಸುವ ವಧೆಯನ್ನು ಸಂಭ್ರಮಿಸುವ ಸಮಾಜವೇ ಈ ದುಷ್ಟ ಕೃತ್ಯಗಳಿಗೆ ಮೌನ ವಹಿಸಿರುವುದನ್ನು ಹೇಗೆ ಅರ್ಥೈಸುವುದು ?
ಪುರಾಣ ಕಥನಗಳ ಕರ್ತೃಗಳು ಬಹುಮಟ್ಟಿಗೆ ಪುರುಷರೇ ಆಗಿರುತ್ತಾರೆ. ಈ ಕಥನಗಳಲ್ಲಿ ಸೃಷ್ಟಿಸಲಾಗುವ ಅಸುರ ಗುಣಲಕ್ಷಣಗಳನ್ನೂ ಈ ಪುರುಷಾಧಿಪತ್ಯದ ವ್ಯವಸ್ಥೆಯೇ ಹುಟ್ಟುಹಾಕಿರುತ್ತದೆ. ಈ ಕಾಲ್ಪನಿಕ ಕಥನಗಳನ್ನು ಚರಿತ್ರೆಯಾಗಿಸುವ ಪ್ರಯತ್ನಗಳ ನಡುವೆಯೇ ನಾವು ಗಮನಿಸಬೇಕಾದ ಅಂಶ ಎಂದರೆ, ಯಾವುದೇ ಸಮಾಜದಲ್ಲಿ ಇಂತಹ ದುಷ್ಟ ಪ್ರವೃತ್ತಿಗಳು ಹುಟ್ಟಿಕೊಳ್ಳುವುದು ಒಂದು ಸಾಮಾಜಿಕ ವಾತಾವರಣದಲ್ಲಿ, ಸಾಂಸ್ಕೃತಿಕ ಪರಿಸರದಲ್ಲಿ ಹಾಗೂ ವ್ಯವಸ್ಥೆಯ ಗರ್ಭದಲ್ಲಿ. ಈ ಅಸುರರ ಸಂಹಾರವನ್ನು ಸಂಭ್ರಮಿಸುವ ನಮಗೆ, ಕಣ್ಣೆದುರಿನಲ್ಲೇ ಕಾಣುತ್ತಿರುವ ದುಷ್ಟ ಪ್ರವೃತ್ತಿಗಳು ಹೇಗೆ ಕಾಣಬೇಕು ? ಈ ಲಕ್ಷಾಂತರ ದೌರ್ಜನ್ಯಗಳು ಧಿಮಾಗಿ ನಕ್ಸಲರ ಕೃತ್ಯವಂತೂ ಆಗಿರಲಿಕ್ಕಿಲ್ಲ. ಅಥವಾ ಕಾಡಿನ ನಕ್ಸಲರೂ ಇಲ್ಲಿ ಕಾಣುವುದಿಲ್ಲ.
ಅಂದರೆ ನಾವು ಬೆಳೆಸುತ್ತಿರುವ ನಾಗರಿಕ ಸಮಾಜದಲ್ಲೇ (Civil Society ) ಇಂತಹ ದುಷ್ಟ ಪ್ರವೃತ್ತಿಗಳೂ ಹುಟ್ಟಿಕೊಳ್ಳುತ್ತವೆ. ಇದಕ್ಕೆ ಪೂರಕವಾದ ವಾತಾವರಣವನ್ನು ನಮ್ಮ ಸಾಂಸ್ಕೃತಿಕ ರಾಜಕೀಯ, ಅಧಿಕಾರ ರಾಜಕಾರಣ ಮತ್ತು ಸಾಮಾಜಿಕ ವ್ಯವಸ್ಥೆ ಕಾಪಾಡಿಕೊಂಡೇ ಬಂದಿದೆ. ಇತ್ತೀಚೆಗೆ ಕರ್ನಾಟಕದ ಬಿಜೆಪಿ ಶಾಸಕರು “ ಕಾಂಗ್ರೆಸ್ ನಾಯಕರನ್ನು ತುಂಡು ತುಂಡು ಮಾಡಿ ಸಮುದ್ರಕ್ಕೆ ಎಸೆಯಬೇಕು ” ಎಂಬ ಹೇಳಿಕೆ ನೀಡಿದರು. ತದನಂತರ ಸಮಜಾಯಿಷಿ ನೀಡಿ ತಾವು ಪಕ್ಷವನ್ನು ತುಂಡು ಮಾಡುವಂತೆ ಹೇಳಿದ್ದು ಎಂದು ನುಣುಚಿಕೊಂಡರು. ಭೌತಿಕ ರೂಪ ಇಲ್ಲದ ರಾಜಕೀಯ ಪಕ್ಷವನ್ನು ವಿಭಜಿಸಬಹುದು ತುಂಡುತುಂಡು ಮಾಡುವುದು , ಸಮುದ್ರಕ್ಕೆ ಎಸೆಯುವುದು ಹೇಗೆ ? ಇದು ವೈಜ್ಞಾನಿಕ ಅನ್ವೇಷಣೆಯ ವಿಚಾರ. ಆದರೆ ಇದೇ ಸಮುದ್ರಕ್ಕೆಸೆಯುವ ಮಾತನ್ನು ಅಯೋಧ್ಯೆ ಗಲಭೆಗಳ ಸಂದರ್ಭದಲ್ಲಿ ಮಹಾರಾಷ್ಟ್ರದ ಶಿವಸೇನೆ ನಾಯಕರೂ ಆಡಿದ್ದರು. ಅಂದರೆ ಈ ರೀತಿಯ ಒಂದು ಕ್ರೂರ ರಾಜಕೀಯ ಪರಿಭಾಷೆಯನ್ನು ನಾವು ರೂಢಿಸಿಕೊಂಡು ಬಂದಿದ್ದೇವೆ ಎಂದರ್ಥ ಅಲ್ಲವೇ ?
ಮನಸ್ಥಿತಿ ಮತ್ತು ಮನೋವೃತ್ತಿ
ಯಾವುದೇ ಸಮಾಜದಲ್ಲಾದರೂ ದುಷ್ಟ ಪ್ರವೃತ್ತಿಗಳು ಹುಟ್ಟಿಕೊಳ್ಳುವುದು ಇಂತಹ ಸಾಮಾಜಿಕ-ರಾಜಕೀಯ ವಾತಾವರಣದಲ್ಲಿ (Socio—Political Ecosystem). ಹಿಂದುತ್ವ ಸಂಘಟನೆಗಳ ತ್ರಿಶೂಲ ದೀಕ್ಷೆ, ಮುಸ್ಲಿಂ ಮೂಲಭೂತವಾದಿಗಳ ತಲ್ವಾರ್ ಸಂಸ್ಕೃತಿ ಮತ್ತು ಈ ಆಯುಧಗಳ ಮುಕ್ತ ಬಳಕೆಗೆ ಇರುವ ಅವಕಾಶ ಸಮಾಜಕ್ಕೆ ಯಾವ ಸಂದೇಶವನ್ನು ನೀಡಲು ಸಾಧ್ಯ ? ಶಾಲಾ-ಕಾಲೇಜುಗಳಲ್ಲಿ ಬಾಲಕರು ಚಾಕುವಿನಿಂದ ಇರಿದು ಹಲ್ಲೆ ನಡೆಸುವ ಘಟನೆಗಳು ವರದಿಯಾಗುತ್ತಲೇ ಇವೆ. ಇತ್ತೀಚೆಗೆ ಹರಿಯಾಣದ ಪಂಚಕುಲದಲ್ಲಿರುವ ಸಂಸ್ಕೃತಿ ಮಾಡರ್ನ್ ಸ್ಕೂಲ್ನಲ್ಲಿ ( ಎರಡೂ ಇಲ್ಲದ ಶಾಲೆ ಎನ್ನಬಹುದು) 8 ವರ್ಷದ ಮೂರನೆ ತರಗತಿಯ ಬಾಲಕ 6 ವರ್ಷದ ಎಳೆ ಬಾಲಕಿಯ ಮೇಲೆ ಹೂ ಕುಂಡ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿರುವುದು ವರದಿಯಾಗಿದೆ.
ಈ ಎಳೆಯ ವಯಸ್ಸಿನಲ್ಲಿ ಮಕ್ಕಳಲ್ಲಿ ಅಂತಹ ಕ್ರೌರ್ಯ ಹೇಗೆ ಸೃಷ್ಟಿಯಾಗುತ್ತದೆ ? ನಾವು ಕೂಡಲೇ ಪೋಷಕರನ್ನು ದೂಷಿಸುತ್ತೇವೆ. ಆದರೆ ಹೊರಗಿನ ಸಮಾಜದಲ್ಲಿ ಸಂಭವಿಸುವ ಘಟನೆಗಳನ್ನೂ ಗುರುತಿಸಬೇಕಲ್ಲವೇ ? ತನ್ನ ಸಹವರ್ತಿಯ ದೇಹವನ್ನು ತುಂಡರಿಸಿ ರೆಫ್ರಿಜರೇಟರ್ನಲ್ಲಿಟ್ಟಿದ್ದ ಶ್ರದ್ಧಾ ವಾಲ್ಕರ್ ಪ್ರಕರಣ ಇನ್ನೂ ವಿಸ್ಮೃತಿಗೆ ಜಾರಿಲ್ಲ. ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇದ್ದರೂ, ಸರ್ಕಾರಗಳ ದೃಷ್ಟಿಯಲ್ಲಿ ಇದು ಕೇವಲ ಕಾನೂನು ಸುವ್ಯವಸ್ಥೆಯ ಪ್ರಶ್ನೆಯಾಗಿ ಕಾಣುತ್ತದೆ. ಜಾತಿ-ಧರ್ಮದ ಸೋಂಕಿಲ್ಲದಿದ್ದರೆ ರಾಜಕೀಯ ಪಕ್ಷಗಳಿಗೆ ಇದು ಗಂಭೀರ ವಿಷಯ ಎನಿಸುವುದೇ ಇಲ್ಲ. ಅಂತರ್ಜಾತಿ ವಿವಾಹವಾದ ಕಾರಣಕ್ಕೆ ಮಗಳನ್ನೇ ಹತ್ಯೆ ಮಾಡಿದ ಹುಬ್ಬಳ್ಳಿಯ ವ್ಯಕ್ತಿ ಸಮಾಜಕ್ಕೆ ಯಾವ ಸಂದೇಶ ರವಾನಿಸುತ್ತಾನೆ ?
ಇಂತಹ ದುಷ್ಟ ಗುಣಗಳನ್ನೇ ʼ ಅಸುರ ಲಕ್ಷಣಗಳು ʼ ಎಂದು ಪುರಾಣಗಳಲ್ಲಿ ಗುರುತಿಸಲಾಗುತ್ತದೆ. ಆದರೆ ಈ ಅಸುರ ವ್ಯಕ್ತಿತ್ವಗಳು ಅನಾಗರಿಕ ಸಮಾಜದಲ್ಲಿ ಹುಟ್ಟಿಕೊಂಡಿದ್ದವು. ಶಿಕ್ಷಣ, ಅರಿವು, ಜ್ಞಾನ, ಸಾಮಾಜಿಕ ಪ್ರಜ್ಞೆ ಇದಾವುದೂ ಇಲ್ಲದ ಪ್ರಾಚೀನ ಸಮಾಜದಲ್ಲಿ ಸೃಷ್ಟಿಯಾದ ಪಾತ್ರಗಳಿವು. ದೌರ್ಜನ್ಯ ಅಥವಾ ಕ್ರೌರ್ಯದ ಸ್ವರೂಪವನ್ನು ಗುರುತಿಸುವುದಕ್ಕಿಂತಲೂ ಹೆಚ್ಚಾಗಿ, ಅದರ ಹಿಂದಿನ ಕ್ರೂರ ಮನಸ್ಥಿತಿಯತ್ತ ನೋಡಿದಾಗ, ಅಸ್ಪೃಶ್ಯತೆಯನ್ನು ಆಚರಿಸುವ ಮೇಲ್ಜಾತಿ ಮನಸ್ಸುಗಳಲ್ಲಿ ಇಂತಹ ಕ್ರೌರ್ಯ ಈಗಲೂ ಗಟ್ಟಿಯಾಗಿದೆ. ಮರ್ಯಾದೆಗೇಡು ಹತ್ಯೆ, ಸಾಮಾಜಿಕ ಬಹಿಷ್ಕಾರಗಳು ನವ ಭಾರತೀಯ ಸಮಾಜದಲ್ಲೂ ಸಹಜ ಘಟನೆಗಳಾಗಿ ವರದಿಯಾಗುತ್ತಲೇ ಇವೆ.
ದೀಪದ ಬೆಳಕಲ್ಲಿ ಕತ್ತಲೆ
ನಾವು ಮನೆಗಳಲ್ಲಿ ಹಚ್ಚುವ ಹಣತೆಗಳಾಗಲೀ, ಅಯೋಧ್ಯೆಯ ಲಕ್ಷಾಂತರ ದೀಪಗಳಾಗಲೀ ಈ ಕತ್ತಲ ಜಗತ್ತಿನೊಳಗೆ ಕಿರಣಗಳನ್ನು ಚೆಲ್ಲಲು ಸಾಧ್ಯವೇ ? ಸರ್ಕಾರದ ವಿರೋಧಿ ದನಿಗಳನ್ನು ಧಿಮಾಗಿ ನಕ್ಸಲ್ ಎಂದು ಮೂದಲಿಸುವ ಬದಲು, ಭಾರತೀಯ ಸಮಾಜವನ್ನು ನಿರಂತರವಾಗಿ ಕಾಡುತ್ತಿರುವ ಈ ಕ್ರೂರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಸರ್ಕಾರಗಳ ಆದ್ಯತೆಯಾಗಬೇಕಲ್ಲವೇ ? ನರಕಾಸುರ, ಮಹಿಷ, ರಾವಣ, ಬಲಿ ಚಕ್ರವರ್ತಿ ಇವರ ಬದುಕು ಅಥವಾ ಸಾವು ವರ್ತಮಾನದ ಸಮಾಜಕ್ಕೆ ಅಪ್ರಸ್ತುತ. ಆದರೆ ಪ್ರಸ್ತುತವಾಗುವುದು ಮನುಷ್ಯರನ್ನು ತುಂಡು ತುಂಡು ಮಾಡುವ, ವಿರೋಧಿಗಳ ಶಿರಚ್ಛೇದನ ಮಾಡುವ, ಕತ್ತು ಕತ್ತರಿಸುವ ಸಾಮಾಜಿಕ-ರಾಜಕೀಯ ಮನೋಭಾವ ಮತ್ತು ಪರಿಭಾಷೆ (Socio-Political Attitude).
ಈಗ ತಾನೇ ಹೊರಪ್ರಪಂಚಕ್ಕೆ ಕಣ್ತೆರೆಯುತ್ತಿರುವ ಹರೆಯದ ಬಾಲಕರಿಗೆ ಈ ಮನೋಭಾವವೇ ಅನುಕರಣೀಯ ಎನಿಸುತ್ತದೆ. ಇದನ್ನು ಪುಷ್ಟೀಕರಿಸುವ ಸಿನೆಮಾಗಳು, ಟಿವಿ ಧಾರಾವಾಹಿಗಳು ಹೇರಳವಾಗಿವೆ. ಗಾಂಧಿ ಹತ್ಯೆಯನ್ನು ಸಮರ್ಥಿಸುವ ಭರದಲ್ಲಿ ಈಗ ಹಂತಕನನ್ನು ವೈಭವೀಕರಿಸುವ ದಾರಿದ್ರ್ಯ ರಂಗಭೂಮಿಯನ್ನೂ ಪ್ರವೇಶಿಸಿದೆ. ಈ ದುಷ್ಟ ಗುಣಗಳನ್ನು ನಮ್ಮ ಒಡಲಲ್ಲೇ ಭದ್ರವಾಗಿ ಕಾಪಿಟ್ಟುಕೊಂಡು, ನರಕಾಸುರ-ಬಲಿಚಕ್ರವರ್ತಿಯ ಸಂಹಾರವನ್ನು ಸಂಭ್ರಮಿಸುವುದು ಬೂಟಾಟಿಕೆ (Hypocricy) ಅಲ್ಲವೇ ? ನಮ್ಮ ಸಾಮಾಜಿಕ ಚಟುವಟಿಕೆಗಳ ಮೂಲಕ, ಸಾಂಸ್ಕೃತಿಕ ಪ್ರಯೋಗಗಳಲ್ಲಿ, ರಾಜಕೀಯ ಹೇಳಿಕೆಗಳಲ್ಲಿ ಎಳೆಯರಿಗೆ ನಾವು ಎಂತಹ ಸಂದೇಶ ರವಾನಿಸುತ್ತಿದ್ದೇವೆ ?
ಸಾಲು ದೀಪಗಳ ಬೆಳಕಿನಲ್ಲಿ ,,,
ದೀಪಾವಳಿಯ ಮೂರು ದಿನ ದೇಶಾದ್ಯಂತ ಕೋಟ್ಯಾನುಕೋಟಿ ದೀಪಗಳು ಉರಿಯುತ್ತವೆ. ಪಟಾಕಿಯ ಸಿಡಿಮದ್ದು ಸಾರ್ವಜನಿಕರ ನಿದ್ರೆ ಕೆಡಿಸುತ್ತವೆ. ಈ ಪಟಾಕಿಯಿಂದ ಉಂಟಾಗುವ ಹವಾಮಾನ ವೈಪರೀತ್ಯ, ವಾಯು ಮಾಲಿನ್ಯ ರಾಜಧಾನಿ ದೆಹಲಿಯ ಜನರಿಗೆ ನಡುಕ ಹುಟ್ಟಿಸಿದೆ. ಈ ಬಾರಿ ಮಾಲಿನ್ಯದ ಪ್ರಮಾಣ ಶೇಕಡಾವ 69ರಷ್ಟು ಹೆಚ್ಚಾಗಿರುವುದಾಗಿ ವಿಜ್ಞಾನಿಗಳು ಹೇಳುತ್ತಿದ್ದಾರೆ. ಆದರೆ ಪಶ್ಚಿಮ ಬಂಗಾಲದ ಟಾಲಿಗಂಜ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಪಟಾಕಿಗಳನ್ನು ಸಿಡಿಸುವುದರಿಂದ ಮನುಷ್ಯರ ದೇಹದ ಕೆಲವು ರೀತಿಯ ರೋಗಗಳು ವಾಸಿಯಾಗುತ್ತವೆ ಎಂದು ಹೇಳುತ್ತಾರೆ. ಕರ್ನಾಟಕದ ಅಸೂಕ್ಷ್ಮತೆ ಮತ್ತು ಪಶ್ಚಿಮ ಬಂಗಾಲದ ಅವೈಜ್ಞಾನಿಕ ಮನೋವೃತ್ತಿ ಎರಡನ್ನೂ ಹೊಸೆಯುವ ಒಂದು ಸಮಾನ ಎಳೆ ಎಂದರೆ ರಾಜಕೀಯ ಅಸ್ತಿತ್ವ ಮತ್ತು ತಾತ್ವಿಕ ಮೌಢ್ಯ.
ಅರುಣಾಚಲ ಪ್ರದೇಶದಲ್ಲಿ ತಮ್ಮ ಬದುಕು, ಅಸ್ತಿತ್ವ ಮತ್ತು ನಾಳೆಗಳನ್ನು ಉಳಿಸಿಕೊಳ್ಳಲು 40 ಗ್ರಾಮಗಳ ಬುಡಕಟ್ಟು ಜನರು ಹೋರಾಡುತ್ತಿದ್ದಾರೆ. ಒಂದು ಬೃಹತ್ ಅಣೆಕಟ್ಟು , ಜಲವಿದ್ಯುತ್ ಯೋಜನೆ ಈ ಸಮುದಾಯಗಳ ಸಾವಿರಾರು ಜನರನ್ನು ಶಾಶ್ವತ ನಿರ್ಗತಿಕರನ್ನಾಗಿ ಮಾಡುತ್ತದೆ. ಈಗ ವಿವಾದಾಸ್ಪದವಾಗಿರುವ ಎಸ್ಐಆರ್ ಪ್ರಕ್ರಿಯೆಯ ಭವಿಷ್ಯದಲ್ಲಿ ಇವರ ಪೌರತ್ವವನ್ನೇ ಪ್ರಶ್ನಾರ್ಹವಾಗಿಸುತ್ತದೆ. ಅಂದಹಾಗೆ ಎಸ್ಐಆರ್ (SIR) ಈಗಾಗಲೇ ಮತವಂಚಿತರಾಗಿರುವ 13 ಕೋಟಿಗೂ ಹೆಚ್ಚು ಜನರು ಸುದೀರ್ಘ ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಇವರ ನಾಳೆಗಳು ಅನಿರೀಕ್ಷಿತವಾಗುತ್ತಿವೆ. ಮೂರು ವರ್ಷಗಳ ಸತತ ಅಂತರ್ ಕದನದ ಪರಿಣಾಮವಾಗಿ ಮಣಿಪುರದ ಜನರು ತತ್ತರಿಸುತ್ತಿದ್ದಾರೆ. ಅತ್ಯಾಚಾರ ದೌರ್ಜನ್ಯಕ್ಕೊಳಗಾಗುತ್ತಿರುವ ಲಕ್ಷಾಂತರ ಹೆಣ್ಣು ಮಕ್ಕಳು ನಿತ್ಯ ಕತ್ತಲೆಯಲ್ಲಿ ಬದುಕು ಸವೆಸುತ್ತಿದ್ದಾರೆ.
ಹಚ್ಚಬೇಕಾದ ದೀಪ ಮತ್ತು ಬೆಳಕು
ನಾವು ಹಚ್ಚುವ ದೀಪಾವಳಿಯ ಹಣತೆಯ ದೀಪಗಳು ಬೆಳಕು ನೀಡುತ್ತವೆ. ಆದರೆ ಬೆಳಕು ನೀಡುವ ಉದ್ದೇಶ-ಗುರಿ ನಮ್ಮದಾಗಿರುತ್ತದೆ. ದೀಪಗಳು ನಮ್ಮ ಅಣತಿಯಂತೆ ನಡೆಯುತ್ತವೆ. ನಂದಿಸಿದರೆ ಬತ್ತಿಗಳು ಸುರುಟಿಹೋಗುತ್ತವೆ. ಈ ದೀಪ ಹಚ್ಚುವವರ ಮನಸ್ಸುಗಳಲ್ಲಿ ಎಂತಹ ಸಂಸ್ಕೃತಿ ಅಡಗಿದೆ ? ದ್ವೇಷ. ಅಸೂಯೆ, ಹಿಂಸೆ, ದೌರ್ಜನ್ಯಗಳನ್ನು ತೊಡೆದುಹಾಕುವ ಸಂಕಲ್ಪದೊಂದಿಗೆ ದೀಪ ಹಚ್ಚಲು ಸಾಧ್ಯವೇ ? ಇದು ಸಾಧ್ಯವಾಗಿದ್ದರೆ ನಮ್ಮ ಸಮಾಜ ಹೀಗಿರುತ್ತಿರಲಿಲ್ಲ. ದೀಪಾವಳಿಯ ಸಂದೇಶ “ ಕತ್ತಲೆಯನ್ನು ನಿವಾರಿಸಿ ಬೆಳಕು ಪಸರಿಸುವುದು ”. ಇದು ನಾವೇ ಹಚ್ಚುವ/ನಂದಿಸುವ ದೀಪಗಳ ಕೆಲಸ ಅಲ್ಲ ನಾಗರಿಕತೆಯ ಮುಸುಕು ಧರಿಸುವ ನಮ್ಮ ಆದ್ಯತೆಯಾಗಬೇಕು.
ರಾಜಕೀಯ ವಿರೋಧಿಗಳನ್ನು, ಭಿನ್ನ ಸಿದ್ಧಾಂತಿಗಳನ್ನು, ಒಟ್ಟು ಸಮಾಜದ ಅಭ್ಯುದಯಕ್ಕಾಗಿ ತಮ್ಮದೇ ಆದ ತಾತ್ವಿಕ ನಿಲುವು ಪ್ರತಿಪಾದಿಸುವವರನ್ನು ʼಅಸುರರುʼ ಎಂಬ ಅರ್ಥದಲ್ಲಿ ವ್ಯಾಖ್ಯಾನಿಸುವ ಬದಲು ಅಥವಾ ಧಿಮಾಗಿ ನಕ್ಸಲರು ಎಂದು ದುಷ್ಟೀಕರಿಸುವ ̈(Villainise) ಬದಲು , ನಮ್ಮ ಸುತ್ತಲಿನ ಪರಿಸರದಲ್ಲೇ ನಿತ್ಯ ಸಂಭವಿಸುತ್ತಿರುವ ದೌರ್ಜನ್ಯಗಳನ್ನು, ಕೊಲೆಗಳನ್ನು, ಅತ್ಯಾಚಾರಗಳನ್ನು, ಅಸ್ಪೃಶ್ಯತೆಯ ಕ್ರೌರ್ಯವನ್ನು ಸೂಕ್ಷ್ಮವಾಗಿ ಗಮನಿಸುವುದು ನಾಗರಿಕತೆಯ ಲಕ್ಷಣ. ಇದನ್ನು ಗುರುತಿಸಲು ದೀಪಾವಳಿ ಬರಬೇಕಿಲ್ಲ. ನಮ್ಮ ಮನದೊಳಗಿನ ಹಣತೆ ನಿತ್ಯ ಬೆಳಗುತ್ತಿದ್ದರೆ, ಮನಸ್ಸುಗಳನ್ನು ಆವರಿಸುವ ದುಷ್ಟ ಗುಣಗಳನ್ನು ನಿವಾರಿಸಿ, ಸಮಾಜವನ್ನು ಕವಿಯುವ ಕತ್ತಲನ್ನು ಹೋಗಲಾಡಿಸಲು ನೆರವಾಗುತ್ತದೆ.
ಮನಸ್ಸುಗಳನ್ನು, ಸಮಾಜವನ್ನು ಕವಿದಿರುವ ಕತ್ತಲೆಯನ್ನು ಹೋಗಲಾಡಿಸಲು ಲಕ್ಷಾಂತರ ಹಣತೆ ದೀಪಗಳು ಬೇಕಿಲ್ಲ. ಕಾರ್ಗತ್ತಲಿನಲ್ಲೂ ಮನದಾಳದಲ್ಲಿ ಇರಬಹುದಾದ ಸಣ್ಣ ಬೆಳಕಿಂಡಿಯ ಕಿರಣಗಳೇ ಸಾಕಲ್ಲವೇ ? ಇದೇ ನಿಜವಾದ ದೀಪಾವಳಿ !






0 Comments