ಆರ್.ಬಿ. ಗುರುಬಸವರಾಜ ಅವರು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಸರಕೋಡು ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಎಂ.ಎ. ಇಂಗ್ಲಿಷ್ ಮತ್ತು ಪತ್ರಿಕೋಧ್ಯಮ ಹಾಗೂ ಬಿ.ಇಡಿ ಪದವೀಧರರು. ಬೋಧನೆಯ ಜೊತೆಗೆ ಸಾಹಿತ್ಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ೨೦ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿ ಮತ್ತು ಅಂಕಣಕಾರ.
ಕೃತಕ ಬುದ್ಧಿಮತ್ತೆಯು ಮನುಷ್ಯನ ಆಲೋಚನೆ ಮತ್ತು ಸೃಜನಶೀಲತೆಯ ಮೇಲಿನ ಪ್ರಭಾವವನ್ನು ಬಿಚ್ಚಿಡುವ ಇವರ ‘ಮ್ಯೂಸ್: ಅಂತಿಮ ಅಧ್ಯಾಯ’ ಕಾದಂಬರಿ ಇದೀಗ ಧೈನಿಕ ಧಾರಾವಾಹಿಯಾಗಿ ಪ್ರಕಟಗೊಳ್ಳುತ್ತಿದೆ.
ಭಾಗ – ೨೪
ಸಂಜೆ ಆರು ಗಂಟೆ ಹದಿನೈದು ನಿಮಿಷಕ್ಕೆ ಈಶಾನ್ ಮತ್ತು ವಿನಯ್ ಹಳೆಯ ಮುದ್ರಣಾಲಯದ ಎದುರು ನಿಂತಿದ್ದರು. ಧಾರವಾಡದ ಹಳೆಯ ವ್ಯಾಪಾರ ಪ್ರದೇಶದಲ್ಲಿದ್ದ ಆ ಕಟ್ಟಡದ ಮುಂಭಾಗದಲ್ಲಿ ಯಾವುದೇ ಫಲಕವಿರಲಿಲ್ಲ. ಬಾಗಿಲಿನ ಮೇಲ್ಭಾಗದಲ್ಲಿ ಒಮ್ಮೆ ಹೆಸರು ಬರೆದಿದ್ದ ಜಾಗದಲ್ಲಿ ಬಣ್ಣ ಉದುರಿತ್ತು. ಕಿಟಕಿಗಳ ಗಾಜುಗಳ ಮೇಲೆ ಧೂಳು ಆವರಿಸಿತ್ತು. ಕಟ್ಟಡದೊಳಗೆ ವಿದ್ಯುತ್ ಸಂಪರ್ಕವಿದೆಯೇ ಎಂಬುದೂ ಹೊರಗಿನಿಂದ ತಿಳಿಯುತ್ತಿರಲಿಲ್ಲ.
ಈಶಾನ್ಗೆ ಬಂದಿದ್ದ ಸಂದೇಶದಲ್ಲಿ ಒಬ್ಬನೇ ಬರಬೇಕೆಂದು ಸ್ಪಷ್ಟವಾಗಿ ಹೇಳಲಾಗಿತ್ತು. ಆದರೆ ಅವನು ಆ ಸೂಚನೆಯನ್ನು ಪಾಲಿಸಲಿಲ್ಲ. ವಿನಯ್ ಅವನೊಂದಿಗೆ ಬಂದಿದ್ದರೂ, ಕಟ್ಟಡದ ಒಳಗೆ ತಕ್ಷಣ ಪ್ರವೇಶಿಸದೆ ಎದುರಿನ ಚಹಾ ಅಂಗಡಿಯ ಬಳಿ ನಿಂತು ಪರಿಸ್ಥಿತಿಯನ್ನು ಗಮನಿಸಲು ನಿರ್ಧರಿಸಿದರು.
ಆರು ಮೂವತ್ತಕ್ಕೆ ಸರಿಯಾಗಿ ಈಶಾನ್ನ ಮೊಬೈಲ್ಗೆ ಮತ್ತೊಂದು ಸಂದೇಶ ಬಂತು.“ನೀವು ಬಂದಿದ್ದೀರಿ. ಒಳಗೆ ಬನ್ನಿ. ನಿಮ್ಮ ಸ್ನೇಹಿತನನ್ನು ಹೊರಗೇ ಬಿಡಿ.” ಈಶಾನ್ ಸಂದೇಶವನ್ನು ವಿನಯ್ಗ ತೋರಿಸಿದ.
“ನೀನು ಒಳಗೆ ಹೋಗಬೇಡ, ಮೊದಲು ಕರೆ ಮಾಡೋಣ. ಯಾರಾದರೂ ಹೊರಗೆ ಬಂದರೆ ಅವರ ಗುರುತು ಮತ್ತು ವರ್ತನೆಯನ್ನು ಗಮನಿಸಬಹುದು.”ಎಂದ ವಿನಯ್.
ಆದರೆ ಕರೆ ಮಾಡಲು ಸಾಧ್ಯವಾಗುವ ಮೊದಲೇ ಕಟ್ಟಡದ ಬಾಗಿಲು ಒಳಗಿನಿಂದ ತೆರೆದಿತು. ಸುಮಾರು ಐವತ್ತು ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಹೊರಗೆ ಬಂದರು. ಬಿಳಿ ಅಂಗಿ, ಕಂದು ಬಣ್ಣದ ಪ್ಯಾಂಟ್, ಕಣ್ಣಿಗೆ ಸಾಮಾನ್ಯ ಕನ್ನಡಕ. ಅವರ ಮುಖದಲ್ಲಿ ಆತಂಕಕ್ಕಿAತ ಆಯಾಸವೇ ಹೆಚ್ಚಾಗಿ ಕಾಣಿಸುತ್ತಿತ್ತು. ಅವರು ಈಶಾನ್ನತ್ತ ನೋಡಿದರು.
“ಈಶಾನ್ ಭಟ್?” ಎಂದರು.
“ಹೌದು. ನೀವು ಯಾರು?” ಕೇಳಿದ ಈಶಾನ್.
“ನನ್ನ ಹೆಸರು ಶಶಿಧರ. ನಾನು ಈ ಮುದ್ರಣಾಲಯದಲ್ಲಿ ಕೆಲಸ ಮಾಡುತ್ತಿದ್ದೆ. ಈಗ ಇಲ್ಲಿ ಕೆಲಸ ನಡೆಯುವುದಿಲ್ಲ. ನಿಮಗೆ ಬಂದ ಸಂದೇಶವನ್ನು ನಾನೇ ಕಳುಹಿಸಿದೆ.”
ವಿನಯ್ ಕೂಡ ಅವರ ಬಳಿಗೆ ಬಂದ.ಶಶಿಧರ ಇಬ್ಬರನ್ನೂ ನೋಡಿದರು. “ನೀವು ಒಬ್ಬರೇ ಬರುತ್ತೀರಿ ಎಂದು ಭಾವಿಸಿದ್ದೆ.”
“ಈಗ ಯಾರನ್ನೂ ಸುಲಭವಾಗಿ ನಂಬುವ ಸ್ಥಿತಿಯಲ್ಲಿ ನಾವಿಲ್ಲ,” ಎಂದ ಈಶಾನ್.ಶಶಿಧರ ಅದಕ್ಕೆ ವಿರೋಧಿಸಲಿಲ್ಲ. ಬದಲಿಗೆ, ಸ್ವಲ್ಪ ತಲೆಯಾಡಿಸಿ ಬಾಗಿಲು ತೆರೆದರು.“ಅದು ಸರಿಯೇ. ಆದರೆ ಇಲ್ಲಿ ನೀವು ನೋಡುವುದನ್ನು ನಂಬಬೇಕೆ೦ದು ನಾನು ಹೇಳುವುದಿಲ್ಲ. ದಾಖಲೆಗಳನ್ನು ಮಾತ್ರ ನೋಡಿ.”
ಅವರ ಮಾತಿನಲ್ಲಿ ಏನೋ ಪರಿಚಿತವಾದ ಎಚ್ಚರಿಕೆ ಇತ್ತು. ಅನಿರುದ್ಧನ ಪತ್ರದಲ್ಲಿದ್ದ ಧಾಟಿಯನ್ನು ಈಶಾನ್ ನೆನಪಿಸಿಕೊಂಡ. ಯಾರನ್ನೂ ನಂಬಬೇಡ ಎನ್ನುವುದಕ್ಕಿಂತ, ಸಾಕ್ಷ್ಯವನ್ನು ಹುಡುಕು ಎಂಬ ಸೂಚನೆ.ಅವರು ಒಳಗೆ ಪ್ರವೇಶಿಸಿದರು.ಮುದ್ರಣಾಲಯದ ಒಳಗೆ ದೊಡ್ಡ ಯಂತ್ರವೊ೦ದನ್ನು ಬಟ್ಟೆಯಿಂದ ಮುಚ್ಚಲಾಗಿತ್ತು. ಗೋಡೆಯ ಪಕ್ಕದಲ್ಲಿ ಹಳೆಯ ಕಂಪ್ಯೂಟರ್ ಮೇಜುಗಳಿದ್ದವು. ನೆಲದ ಮೇಲೆ ಕಾಗದದ ತುಂಡುಗಳು ಮತ್ತು ಮಸುಕಾದ ಶಾಯಿಯ ಗುರುತುಗಳಿದ್ದವು. ಮೇಲ್ಛಾವಣಿಯ ಒಂದು ಭಾಗದಿಂದ ನೀರು ಸೋರಿದ ಗುರುತು ಗೋಡೆಯ ಮೇಲೆ ಹರಡಿತ್ತು.
ಶಶಿಧರ ಅವರನ್ನು ಹಿಂಭಾಗದ ಕೊಠಡಿಗೆ ಕರೆದುಕೊಂಡು ಹೋದರು. ಅಲ್ಲಿ ಲೋಹದ ಕಪಾಟೊಂದಿತ್ತು. ಅದರೊಳಗೆ ಕಡತಗಳು, ಹಳೆಯ ಮುದ್ರಣದ ಮಾದರಿಗಳು ಮತ್ತು ಲೆಕ್ಕಪತ್ರದ ಪುಸ್ತಕಗಳನ್ನು ಕ್ರಮವಾಗಿ ಇಡಲಾಗಿತ್ತು.
“ಈ ಮುದ್ರಣಾಲಯವನ್ನು ಹಲವು ವರ್ಷಗಳ ಹಿಂದೆ ಸಂಶೋಧನಾ ತಂಡವೊ೦ದು ಬಳಸುತ್ತಿತ್ತು. ಅವರು ಸಾಮಾನ್ಯ ಪುಸ್ತಕಗಳನ್ನೂ ಮುದ್ರಿಸುತ್ತಿದ್ದರು. ಆದರೆ ಕೆಲವು ದಿನಗಳಲ್ಲಿ ರಾತ್ರಿ ಹೊತ್ತಿನಲ್ಲೂ ಕೆಲಸ ನಡೆಯುತ್ತಿತ್ತು. ವಿಶೇಷವಾಗಿ ಕೆಲವು ಪ್ರತಿಗಳನ್ನು ಮಾತ್ರ ಮುದ್ರಿಸಿ, ಉಳಿದ ಪ್ರತಿಗಳನ್ನು ನಾಶಪಡಿಸಲು ಹೇಳುತ್ತಿದ್ದರು.”ಎಂದರು ಶಶಿಧರ.
“ಯಾವ ಸಂಶೋಧನಾ ತಂಡ?” ಎಂದು ವಿನಯ್ ಕೇಳಿದ.
“ಅವರ ಹೆಸರು ಎಲ್ಲ ದಾಖಲೆಗಳಲ್ಲೂ ಒಂದೇ ರೀತಿಯಾಗಿರಲಿಲ್ಲ. ಕೆಲವೊಮ್ಮೆ MUSE ಎಂದು, ಇನ್ನೊಮ್ಮೆ CMS ಎಂದು ಬಳಸುತ್ತಿದ್ದರು. ಅವರ ಕೆಲಸದ ಸಂಪೂರ್ಣ ಸ್ವರೂಪ ನನಗೆ ತಿಳಿದಿರಲಿಲ್ಲ. ನಾನು ಮುದ್ರಣದ ಕೆಲಸ ಮಾಡುತ್ತಿದ್ದೆ. ಅವರು ಕೊಟ್ಟ ಕಡತಗಳನ್ನು ಮುದ್ರಿಸುವುದು, ಪುಟಗಳನ್ನು ಜೋಡಿಸುವುದು ಮತ್ತು ಪ್ರತಿಗಳನ್ನು ಒಪ್ಪಿಸುವುದು ನನ್ನ ಕೆಲಸವಾಗಿತ್ತು.”
ಈಶಾನ್ಗೆ ತಂದೆಯ ಫೈಲ್ನಲ್ಲಿದ್ದ C.M.S.-ARCHIVE 03 ಎಂಬ ಗುರುತುನೆನಪಾಯಿತು.“ಈಶಾನ್ ಭಟ್ ಎಂಬ ಹೆಸರಿನ ಕಡತಗಳು ಇಲ್ಲಿ ಮುದ್ರಿಸಲ್ಪಟ್ಟಿದ್ದವೆಯೇ?” ಎಂದು ಅವನು ಕೇಳಿದ.
ಶಶಿಧರ ತಕ್ಷಣ ಉತ್ತರಿಸಲಿಲ್ಲ. ಕಪಾಟಿನ ಕೆಳಗಿನ ಡ್ರಾಯರ್ ತೆರೆದು ಹಳೆಯ ನೋಂದಣಿ ಪುಸ್ತಕವೊಂದನ್ನು ಹೊರತೆಗೆದರು. ಅದರ ಪುಟಗಳು ಹಳದಿಯಾಗಿದ್ದವು. ಕೆಲವು ಪುಟಗಳ ಅಂಚುಗಳನ್ನು ಇಲಿಗಳು ಕಚ್ಚಿದ್ದವು.
ಅವರು ನಿರ್ದಿಷ್ಟ ದಿನಾಂಕದ ಪುಟವನ್ನು ತೆರೆದರು.ಅಲ್ಲಿ ಒಂದು ಸಾಲಿನಲ್ಲಿ DRAFT_FINAL_04 ಎ೦ದು ನಮೂದಿಸಲಾಗಿತ್ತು. ಅದರ ಎದುರು ಹದಿನಾಲ್ಕು ಪುಟಗಳ ಮುದ್ರಣದ ವಿವರ. ಮುಂದಿನ ಕಾಲಂನಲ್ಲಿ ಪ್ರತಿಯನ್ನು ಸ್ವೀಕರಿಸಿದ ವ್ಯಕ್ತಿಯ ಹೆಸರಿನ ಬದಲು “ವಿಶೇಷ ವಿತರಣೆ” ಎಂದು ಬರೆಯಲಾಗಿತ್ತು.
ಅದರ ಕೆಳಗಿನ ಸಾಲಿನಲ್ಲಿ ಮತ್ತೊಂದು ಕಡತದ ಹೆಸರು ಕಾಣಿಸಿತು.POSTHUMOUS_WORKS-R.B. ಈಶಾನ್ನ ಕಣ್ಣುಗಳು ಆ ಅಕ್ಷರಗಳ ಮೇಲೆ ನಿಂತವು.“R.B. ಎ೦ದರೆ ಡಾ. ರಾಘವೇಂದ್ರ ಭಟ್ ಆಗಿರಬಹುದೇ?” ಎಂದು ಕೇಳಿದ.
“ಬಹುಶಃ, “ಆದರೆ ಆ ಹೆಸರಿನ ಪೂರ್ಣ ರೂಪವನ್ನು ನಾನು ಬರೆಯಲಿಲ್ಲ. ಸೂಚನೆ ಕೊಟ್ಟವರು ಸಂಕ್ಷಿಪ್ತ ರೂಪ ಬಳಸಲು ಹೇಳಿದರು.”ಎಂದ ಶಶಿಧರ.
“ಮರಣೋತ್ತರ ಕೃತಿಗಳು ಎಂದರೆ ಏನು?” ಕೇಳಿದ ಈಶಾನ್.
ಶಶಿಧರ ನೋಂದಣಿ ಪುಸ್ತಕವನ್ನು ಮುಚ್ಚಲಿಲ್ಲ. ಅವರು ಅದರ ಮುಂದಿನ ಪುಟವನ್ನು ತೆರೆದರು. ಅಲ್ಲಿ ಅದೇ ಕಡತದ ಬಗ್ಗೆ ಮತ್ತೊಂದು ದಾಖಲೆಯಿತ್ತು. ಅದರ ದಿನಾಂಕವು ಡಾ. ರಾಘವೇಂದ್ರ ಭಟ್ ಸಾವನ್ನಪ್ಪಿದ ದಿನಾಂಕಕ್ಕಿ೦ತ ಹಲವು ವರ್ಷಗಳ ಹಿಂದಿನದು.
“ಇದೇ ನನಗೆ ಅನುಮಾನ ಹುಟ್ಟಿಸಿದ ಸಂಗತಿ, ಅವರು ಬದುಕಿದ್ದಾಗಲೇ ‘ಮರಣೋತ್ತರ ಕೃತಿಗಳು’ ಎಂಬ ಹೆಸರಿನ ಕಡತವನ್ನು ಮುದ್ರಿಸಲು ಹೇಳಲಾಗಿತ್ತು. ಮೊದಲು ಅದು ಯಾವುದೋ ಪುಸ್ತಕದ ತಾತ್ಕಾಲಿಕ ಶೀರ್ಷಿಕೆ ಎಂದುಕೊ೦ಡೆ. ಆದರೆ ಅದರೊಳಗೆ ಇದ್ದ ಪುಟಗಳು ಸಾಮಾನ್ಯ ಪುಸ್ತಕದಂತಿರಲಿಲ್ಲ.”ಎ೦ದರು.
ವಿನಯ್ ನೋಂದಣಿಯ ಫೋಟೋ ತೆಗೆದುಕೊಂಡ.“ಆ ಪುಟಗಳು ಇನ್ನೂ ಇಲ್ಲಿವೆಯೇ?”
ಶಶಿಧರ ಕಪಾಟಿನ ಮೇಲ್ಭಾಗದಲ್ಲಿದ್ದ ಸಣ್ಣ ಪೆಟ್ಟಿಗೆಯನ್ನು ಕೆಳಗಿಳಿಸಿದರು. ಅದರ ಮೇಲೆ R.B.-ARCHIVE COPY ಎಂದು ಬರೆಯಲಾಗಿತ್ತು.ಪೆಟ್ಟಿಗೆಯೊಳಗೆ ಹಳೆಯ ಮುದ್ರಿತ ಪುಟಗಳ ಕಟ್ಟು ಇತ್ತು. ಪ್ರತಿಯೊಂದು ಪುಟದ ಕೆಳಭಾಗದಲ್ಲಿ ಪುಟ ಸಂಖ್ಯೆ, ಮುದ್ರಣದ ದಿನಾಂಕ ಮತ್ತು ಚಿಕ್ಕ ಗುರುತುಗಳಿದ್ದವು. ಕೆಲವು ಪುಟಗಳಲ್ಲಿ ಕೆಂಪು ಪೆನ್ನಿಂದ ತಿದ್ದುಪಡಿ ಮಾಡಲಾಗಿತ್ತು.
ಈಶಾನ್ ಮೊದಲ ಪುಟವನ್ನು ತೆರೆದ.ಅದರ ಶೀರ್ಷಿಕೆ:“ಮರಣೋತ್ತರ ಕೃತಿಗಳು: ಬರಹಗಾರನ ಅನುಪಸ್ಥಿತಿಯಲ್ಲಿ ಉಳಿಯುವ ಧ್ವನಿ.”ಮೊದಲ ಕೆಲವು ಪುಟಗಳಲ್ಲಿ ಒಬ್ಬ ಲೇಖಕನ ಸಾವಿನ ನಂತರ ಅವನ ಹೆಸರಿನಲ್ಲಿ ಪ್ರಕಟವಾಗುವ ಕೃತಿಗಳ ನೈತಿಕತೆ ಕುರಿತು ಚರ್ಚಿಸಲಾಗಿತ್ತು. ಆದರೆ ನಂತರದ ಪುಟಗಳಲ್ಲಿ ವಿಷಯ ಬದಲಾಗಿತ್ತು. ಒಂದು ಲೇಖಕನ ಬರಹದ ಶೈಲಿಯನ್ನು ವಿಶ್ಲೇಷಿಸಿ, ಅವನ ಹೆಸರಿನಲ್ಲಿ ಹೊಸ ಬರಹಗಳನ್ನು ರಚಿಸುವ ತಂತ್ರದ ಬಗ್ಗೆ ವಿವರಿಸಲಾಗಿತ್ತು.
ಅದರ ಕೆಳಗೆ ಒಂದು ವಾಕ್ಯವಿತ್ತು:“ಲೇಖಕನ ಧ್ವನಿಯನ್ನು ಅನುಕರಿಸುವುದು ಸಾಧ್ಯವಾದಾಗ, ಅವನ ಅನುಮತಿಯಿಲ್ಲದೆ ಅವನ ಪರವಾಗಿ ಮಾತನಾಡುವ ಅಪಾಯವೂ ಆರಂಭವಾಗುತ್ತದೆ.”
ಈಶಾನ್ ಪುಟವನ್ನು ಕೆಳಗಿಟ್ಟ. ಮ್ಯೂಸ್ನ ಕೆಲಸವೂ ಇದೇ ತತ್ವದ ಸುತ್ತ ನಡೆಯುತ್ತಿತ್ತೇ? ಹಿಂದಿನ ಬರಹಗಳನ್ನು ವಿಶ್ಲೇಷಿಸಿ ಹೊಸ ಕಥೆಗಳನ್ನು ರಚಿಸುವುದರಿಂದ ಆರಂಭವಾದ ಪ್ರಯೋಗ, ನಂತರ ವ್ಯಕ್ತಿಯ ನೆನಪುಗಳು ಮತ್ತು ಅವುಗಳಿಗೆ ನೀಡುವ ಅರ್ಥದ ಮೇಲೂ ಪ್ರಭಾವ ಬೀರುವ ಪ್ರಯತ್ನವಾಗಿ ಬದಲಾಗಿತ್ತೇ? ಇದು ಸಾಧ್ಯವಾಗಿತ್ತು. ಆದರೆ ಈ ಪುಟಗಳು ಆ ನಿರ್ಧಾರವನ್ನು ಸಾಬೀತುಪಡಿಸುತ್ತಿರಲಿಲ್ಲ.
ವಿನಯ್ ಕೂಡ ಅದೇ ವಿಚಾರವನ್ನು ಗಮನಿಸಿದ.“ಇಲ್ಲಿ ಎರಡು ವಿಭಿನ್ನ ವಿಷಯಗಳಿವೆ,” ಎಂದನು. “ಒಂದು, ಬರಹಗಾರನ ಶೈಲಿಯನ್ನು ಅನುಕರಿಸುವ ತಂತ್ರಜ್ಞಾನ. ಮತ್ತೊಂದು, ವ್ಯಕ್ತಿಯ ನೆನಪುಗಳ ವ್ಯಾಖ್ಯಾನವನ್ನು ಪ್ರಭಾವಿಸಲು ಪ್ರಯತ್ನಿಸುವ ಸಂಶೋಧನೆ. ಇವೆರಡೂ ಒಂದೇ ಯೋಜನೆಯಲ್ಲಿ ಸೇರಿದ್ದವೆಯೇ ಎಂಬುದನ್ನು ಈ ಪುಟಗಳಿಂದ ಮಾತ್ರ ನಿರ್ಧರಿಸಲು ಸಾಧ್ಯವಿಲ್ಲ.” ಎಂದ.
ಶಶಿಧರ ಅವರ ಮಾತುಗಳನ್ನು ಕೇಳುತ್ತಿದ್ದರು. ನಂತರ ಅವರು ನಿಧಾನವಾಗಿ ಹೇಳಿದರು. “ಆದರೆ ಈ ಪುಟಗಳನ್ನು ಮುದ್ರಿಸಲು ಬಂದವರು, ಅವುಗಳನ್ನು ಪುಸ್ತಕವಾಗಿ ಪ್ರಕಟಿಸಬಾರದು ಎಂದು ಹೇಳಿದ್ದರು.”
ಈಶಾನ್ ಅವರತ್ತ ತಿರುಗಿ “ಏಕೆ?” ಎಂದ.
“ಅವರ ಪ್ರಕಾರ, ಕೆಲವು ಪುಟಗಳಲ್ಲಿ ನೈಜ ವ್ಯಕ್ತಿಗಳ ಹೆಸರುಗಳಿದ್ದವು. ಆ ಹೆಸರುಗಳನ್ನು ತೆಗೆದುಹಾಕದೆ ಪ್ರಕಟಿಸಿದರೆ ಸಮಸ್ಯೆಯಾಗುತ್ತದೆ ಎಂದರು. ನಂತರ ಅವರು ಕೆಲವು ಪುಟಗಳನ್ನು ಮರಳಿ ತೆಗೆದುಕೊಂಡು ಹೋದರು. ಆದರೆ ಎಲ್ಲವನ್ನೂ ತೆಗೆದುಕೊಂಡು ಹೋಗಲಿಲ್ಲ.” ಎಂದರು ಶಶಿಧರ.
“ಯಾರು ಬಂದಿದ್ದರು?” ಕೇಳಿದ ಈಶಾನ್.
ಶಶಿಧರ ಉತ್ತರಿಸುವ ಮೊದಲು ಪೆಟ್ಟಿಗೆಯೊಳಗಿನ ಪುಟಗಳನ್ನು ಮತ್ತೊಮ್ಮೆ ಪರಿಶೀಲಿಸಿದರು.“ಒಬ್ಬ ವಯಸ್ಸಾದ ವ್ಯಕ್ತಿ. ಇನ್ನೊಬ್ಬ ಯುವಕ. ವಯಸ್ಸಾದವರು ರಾಘವೇಂದ್ರ ಭಟ್ ಆಗಿರಬಹುದು. ಯುವಕನ ಮುಖ ಸ್ಪಷ್ಟವಾಗಿ ನೆನಪಿಲ್ಲ. ಆದರೆ ಅವನು ತನ್ನ ಹೆಸರನ್ನು ಹೇಳಿದ್ದ.” ಎಂದರು.
“ಯಾವ ಹೆಸರು?” ಈಶಾನ್ ಕೇಳಿದ.
“ವಿಜಯ್.”
ಈಶಾನ್ ಮತ್ತು ವಿನಯ್ ಪರಸ್ಪರ ನೋಡಿಕೊಂಡರು.
“ವಿಜಯ್ ಶೆಣೈ?”
“ಆಗಿರಬಹುದು. ಪೂರ್ಣ ಹೆಸರು ನೆನಪಿಲ್ಲ.” ಶಶಿಧರ ಹೇಳಿದರು. ಮತ್ತೊಮ್ಮೆ ಅದೇ ಹೆಸರು. ಆದರೆ ಈ ಬಾರಿ ಅದು ಹಳೆಯ ನೋಂದಣಿ ಪುಸ್ತಕದಲ್ಲಿ ಮಾತ್ರವಿರಲಿಲ್ಲ. ಮುದ್ರಣಾಲಯದಲ್ಲಿ ನಡೆದ ಘಟನೆಯ ನೆನಪಿನಲ್ಲಿಯೂ ಕಾಣಿಸಿಕೊಂಡಿತ್ತು. ಈಶಾನ್ ತನ್ನ ನೋಟ್ಬುಕ್ನಲ್ಲಿ ಅದನ್ನು ದಾಖಲಿಸಿದ. ಶಶಿಧರ ಎಂಬ ಮಾಜಿ ಮುದ್ರಣಾಲಯದ ನೌಕರ, ರಾಘವೇಂದ್ರ ಭಟ್ ಆಗಿರಬಹುದಾದ ವ್ಯಕ್ತಿಯೊಂದಿಗೆ ವಿಜಯ್ ಎಂಬ ಯುವಕ ಬಂದಿದ್ದನೆ೦ದು ನೆನಪಿಸಿಕೊಂಡಿದ್ದಾರೆ. ಗುರುತು ದೃಢಪಟ್ಟಿಲ್ಲ.ಅವನು ಬರೆಯುವುದನ್ನು ಮುಗಿಸಿದಾಗ, ಶಶಿಧರ ಮತ್ತೊಂದು ಹಾಳೆಯನ್ನು ಹೊರತೆಗೆದರು.
“ನಾನು ಈ ದಾಖಲೆಯನ್ನು ನಿಮಗೆ ತೋರಿಸಬೇಕೆಂದು ಕಾಯುತ್ತಿದ್ದೆ. ಇದನ್ನು ನಾನು ಸ್ವತಃ ಮರೆಮಾಚಿದ್ದೆ. ಏಕೆಂದರೆ ಅವರು ಉಳಿದ ಪುಟಗಳನ್ನು ತೆಗೆದುಕೊಂಡು ಹೋದ ನಂತರ, ಈ ಒಂದು ಹಾಳೆ ನನ್ನ ಬಳಿ ಉಳಿದಿತ್ತು.”
ಆ ಹಾಳೆಯ ಮೇಲ್ಭಾಗದಲ್ಲಿ FINAL AUTHORSHIP REVIEW ಎಂದು ಬರೆಯಲಾಗಿತ್ತು. ಅದರ ಕೆಳಗೆ ಮೂರು ಹೆಸರುಗಳು ಮತ್ತು ಒಂದು ಗುರುತು ಇತ್ತು.
E.B. — SUBJECT / WRITER
A.N. — ORIGINAL NARRATIVE
R.B. — SUPERVISION
ನಾಲ್ಕನೆಯ ಸಾಲಿನಲ್ಲಿ ಕೇವಲ U-೦೪ಎಂದು ಬರೆಯಲಾಗಿತ್ತು.
ಅದರ ಎದುರು ಹೀಗೆ ನಮೂದಿಸಲಾಗಿತ್ತು:“POSTHUMOUS GENERATION AUTHORIZATION-PENDING.”
ಕೆಳಭಾಗದಲ್ಲಿ ಕೈಬರಹದ ಟಿಪ್ಪಣಿ:“ಮೂಲ ಬರಹಗಾರನ ಅನುಮತಿ ಇಲ್ಲದೆ ಅವನ ಹೆಸರಿನಲ್ಲಿ ಅಂತಿಮ ಆವೃತ್ತಿಯನ್ನು ಸೃಷ್ಟಿಸಬಾರದು. ವ್ಯಕ್ತಿಯ ಮರಣ ಅಥವಾ ಕಾಣೆಯಾಗುವಿಕೆ ಆ ಅನುಮತಿಗೆ ಪರ್ಯಾಯವಲ್ಲ.”
ಈಶಾನ್ನ ಗಂಟಲು ಒಣಗಿತು.“ಇದು ಯಾರ ಕೈಬರಹ?” ಎಂದು ಕೇಳಿದ.
“ನನಗೆ ಗೊತ್ತಿಲ್ಲ,” ಎಂದ ಶಶಿಧರ. “ಆದರೆ ಈ ಹಾಳೆಯನ್ನು ನೋಡಿದಾಗ ನನಗೆ ನೆನಪಿರುವುದು ಒಂದು. ಅವರು ಇದನ್ನು ಮುದ್ರಿಸಲು ಹೇಳಲಿಲ್ಲ. ಕೇವಲ ಒಂದು ಪ್ರತಿಯನ್ನು ತಯಾರಿಸಿ, ನಂತರ ಅದನ್ನು ನಾಶಮಾಡಲು ಹೇಳಿದರು. ನಾನು ನಾಶಮಾಡಲಿಲ್ಲ.”
ವಿನಯ್ ಹಾಳೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ. ಅದರ ಮೇಲಿದ್ದ ದಿನಾಂಕ ಮತ್ತು ಮುದ್ರಣಾಲಯದ ನೋಂದಣಿಯ ದಿನಾಂಕಗಳ ನಡುವೆ ವ್ಯತ್ಯಾಸವಿತ್ತು. ಹಾಳೆ ಹಳೆಯದಾಗಿರಬಹುದು, ಆದರೆ ಅದರಲ್ಲಿನ ಕೆಲವು ಗುರುತುಗಳು ನಂತರ ಸೇರಿಸಲ್ಪಟ್ಟಿರಬಹುದಿತ್ತು.
“ಇದನ್ನು ಪರಿಣಿತರಿಂದ ಪರಿಶೀಲಿಸಬೇಕು, ಈಗಲೇ ಇದನ್ನು ನಿಜವಾದ ಅನುಮತಿ ಪತ್ರವೆಂದು ಪರಿಗಣಿಸಲು ಸಾಧ್ಯವಿಲ್ಲ. ಆದರೆ ಇದರಲ್ಲಿ ಕಾಣುವ ಪದಗಳು ನಮ್ಮ ಇತರ ದಾಖಲೆಗಳೊಂದಿಗೆ ಹೊಂದಿಕೆಯಾಗುತ್ತವೆ.” ಎಂದನು ವಿನಯ್.
ಈಶಾನ್ ಹಾಳೆಯಲ್ಲಿದ್ದ ಒಂದು ಪದದ ಮೇಲೆ ಗಮನ ಹರಿಸಿದ. POSTHUMOUS.ಮರಣೋತ್ತರ.ಡಾ. ರಾಘವೇಂದ್ರ ಭಟ್ ಸತ್ತ ನಂತರ ಅವರ ಹೆಸರಿನಲ್ಲಿ ದಾಖಲೆಗಳು ಸೃಷ್ಟಿಯಾಗಿದ್ದವೆಯೇ? ಅಥವಾ ಅವರ ಸಾವಿಗೂ ಮುನ್ನವೇ ಅವರ ಹೆಸರಿನಲ್ಲಿ ಬರಹಗಳನ್ನು ರಚಿಸಲು ಯೋಜನೆ ರೂಪಿಸಲಾಗಿತ್ತೇ?ಅನಿರುದ್ಧನ ಹೆಸರಿನಲ್ಲಿಯೂ ಇದೇ ರೀತಿ ಏನಾದರೂ ನಡೆದಿತ್ತೇ? ಅವನು ಕಾಣೆಯಾದ ನಂತರ, ಅವನ ಹೆಸರಿನಲ್ಲಿ ಕಥೆಯ ಅಂತ್ಯವನ್ನು ಯಾರಾದರೂ ಬರೆದಿದ್ದರೇ?
ಮ್ಯೂಸ್ ಸೃಷ್ಟಿಸಿದ “Original Narrator: A.N.”ಎAಬ ಗುರುತು ಈಗ ಹೊಸ ಅರ್ಥವನ್ನು ಪಡೆದುಕೊಂಡಿತ್ತು. ಅದು ಅನಿರುದ್ಧನ ನಿಜವಾದ ಬರಹಗಾರಿಕೆಯ ಹಕ್ಕನ್ನು ಸೂಚಿಸುತ್ತಿತ್ತೇ, ಅಥವಾ ಸಾಫ್ಟ್ವೇರ್ ಬಳಸಿದ ತಾಂತ್ರಿಕ ವರ್ಗೀಕರಣವಷ್ಟೇ ಆಗಿತ್ತೇ?ಈಶಾನ್ ತನ್ನೊಳಗೆ ಹುಟ್ಟಿದ ಎರಡನೆಯ ಪ್ರಶ್ನೆಯನ್ನು ಹೆಚ್ಚು ನಂಬಲು ಬಯಸಿದ. ಆದರೆ ಮೊದಲನೆಯ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲು ಅವನಿಂದ ಸಾಧ್ಯವಾಗಲಿಲ್ಲ.
ಶಶಿಧರ ಕಪಾಟಿನ ಕೆಳಭಾಗದಿಂದ ಇನ್ನೊಂದು ತೆಳುವಾದ ಲಕೋಟೆಯನ್ನು ಹೊರತೆಗೆದರು.“ಇದನ್ನು ನಾನು ನಿಮಗೆ ಮೊದಲು ಕೊಡಲು ಇಷ್ಟಪಡಲಿಲ್ಲ, ಏಕೆಂದರೆ ಇದರೊಳಗೆ ಏನಿದೆ ಎಂಬುದು ನನಗೂ ಸಂಪೂರ್ಣವಾಗಿ ಗೊತ್ತಿಲ್ಲ. ಆದರೆ ಈಗ ನೀವು ಈ ದಾಖಲೆಗಳನ್ನು ನೋಡಿದ ಮೇಲೆ, ಇದನ್ನು ನಿಮ್ಮ ಬಳಿ ಇಡುವುದು ಉತ್ತಮವೆಂದು ಅನಿಸುತ್ತಿದೆ.”ಎಂದರು.
ಲಕೋಟೆಯ ಮೇಲೆ ಯಾವುದೇ ಹೆಸರು ಇರಲಿಲ್ಲ. ಅದರ ಅಂಚಿನಲ್ಲಿ ಕೇವಲ ಒಂದು ಗುರುತು:R.B.—೧೨/೦೮ದಿನಾಂಕದ ವರ್ಷ ಕಾಣೆಯಾಗಿತ್ತು.ಈಶಾನ್ ಅದನ್ನು ತೆರೆಯಲು ಮುಂದಾದಾಗ ವಿನಯ್ ತಡೆದ.“ಮೊದಲು ಅದರ ಎರಡೂ ಬದಿಗಳ ಫೋಟೋ ತೆಗೆದುಕೊಳ್ಳೋಣ. ನಂತರ ತೆರೆದು ನೋಡೋಣ.”ಅವರು ಹಾಗೆಯೇ ಮಾಡಿದರು.ಲಕೋಟೆಯೊಳಗೆ ಒಂದು ಪುಟ ಮತ್ತು ಸಣ್ಣ ಯುಎಸ್ಬಿ ಸಾಧನ ಇತ್ತು. ಪುಟದಲ್ಲಿ ಕೆಲವು ಸಾಲುಗಳು ಮಾತ್ರ ಇದ್ದವು.
“ನನ್ನ ಮರಣದ ನಂತರ ಈ ಕಡತಗಳನ್ನು ಪ್ರಕಟಿಸಬೇಡಿ. ನನ್ನ ಹೆಸರಿನಲ್ಲಿ ಬರೆಯಲ್ಪಡುವ ಯಾವುದೇ ಹೊಸ ಕೃತಿಯನ್ನು ನನ್ನ ಮೂಲ ಬರಹವೆಂದು ಪರಿಗಣಿಸಬಾರದು. ನಾನು ಮಾಡಿದ ತಪ್ಪುಗಳನ್ನು ವಿವರಿಸಲು ಈ ದಾಖಲೆಗಳು ಅಗತ್ಯವಾಗಬಹುದು. ಆದರೆ ನನ್ನ ಪರವಾಗಿ ಕಥೆಯನ್ನು ಪೂರ್ಣಗೊಳಿಸುವ ಹಕ್ಕು ಯಾರಿಗೂ ಇಲ್ಲ.”ಕೆಳಗೆ ಸಹಿ ಇತ್ತು:ಡಾ. ರಾಘವೇಂದ್ರ ಭಟ್
ಸಹಿ ನಿಜವಾದದ್ದೇ ಎಂದು ಹೇಳಲು ಸಾಧ್ಯವಿರಲಿಲ್ಲ. ಆದರೆ ಪತ್ರದ ವಿಷಯ ಸ್ಪಷ್ಟವಾಗಿತ್ತು. ಕನಿಷ್ಠ ಈ ಪತ್ರವನ್ನು ಬರೆದ ವ್ಯಕ್ತಿ, ತನ್ನ ಹೆಸರಿನಲ್ಲಿ ನಂತರ ಬರೆಯಲ್ಪಡುವ ಕೃತಿಗಳ ಬಗ್ಗೆ ಆತಂಕ ಹೊಂದಿದ್ದ.“ಅವರು ತಮ್ಮ ಮರಣದ ನಂತರ ಏನಾಗಬಹುದು ಎಂಬುದನ್ನು ಮುಂಚಿತವಾಗಿ ಊಹಿಸಿದ್ದರೇ?” ಎಂದು ಈಶಾನ್ ಕೇಳಿದ.
“ಅಥವಾ ಇದು ಅವರ ಹೆಸರಿನಲ್ಲಿ ಯಾರಾದರೂ ನಂತರ ಬರೆದ ಪತ್ರವಾಗಿರಬಹುದು, ದಿನಾಂಕವಿಲ್ಲದೆ, ಸಹಿಯನ್ನು ಪರಿಶೀಲಿಸದೆ, ಯುಎಸ್ಬಿಯ ಮೂಲವನ್ನು ತಿಳಿಯದೆ ನಾವು ಯಾವುದನ್ನೂ ಖಚಿತಪಡಿಸಬಾರದು.”ಎಂದ ವಿನಯ್.
ಯುಎಸ್ಬಿಯನ್ನು ತಕ್ಷಣ ಕಂಪ್ಯೂಟರ್ಗೆ ಜೋಡಿಸದಿರಲು ಅವರು ನಿರ್ಧರಿಸಿದರು. ಅದರಲ್ಲಿರುವ ಮಾಹಿತಿಯನ್ನು ಸುರಕ್ಷಿತವಾಗಿ ಪರಿಶೀಲಿಸಲು ಪ್ರತ್ಯೇಕ ಸಾಧನ ಮತ್ತು ಸರಿಯಾದ ವಿಧಾನ ಬೇಕಿತ್ತು.
ಶಶಿಧರ ಅವರತ್ತ ನೋಡುತ್ತಿದ್ದರು.“ನಾನು ಇಷ್ಟು ವರ್ಷ ಇದನ್ನು ಉಳಿಸಿಕೊಂಡಿದ್ದಕ್ಕೆ ಒಂದು ಕಾರಣವಿತ್ತು, ಅವರು ನನ್ನಿಂದ ಮುದ್ರಿಸಿದ ಪ್ರತಿಗಳನ್ನು ಕೇಳಿದಾಗ, ಅವುಗಳಲ್ಲಿ ಕೆಲವು ಪುಟಗಳನ್ನು ಈಗಾಗಲೇ ಬೇರೆಡೆಗೆ ಕಳುಹಿಸಲಾಗಿದೆ ಎಂದು ಹೇಳಿದರು. ಆದರೆ ಆ ಪ್ರತಿಗಳು ಎಲ್ಲಿವೆ ಎಂದು ಅವರು ಹೇಳಲಿಲ್ಲ. ನಂತರ ರಾಘವೇಂದ್ರ ಭಟ್ ಸತ್ತ ಸುದ್ದಿ ಕೇಳಿದೆ. ಆಗ ಈ ಹಾಳೆಗಳನ್ನು ನಾಶಮಾಡಬಾರದೆಂದು ನಿರ್ಧರಿಸಿದೆ.”ಎಂದರು.
“ನೀವು ಪೊಲೀಸರಿಗೆ ಏಕೆ ತಿಳಿಸಲಿಲ್ಲ?” ಎಂದು ವಿನಯ್ ಕೇಳಿದ.
ಶಶಿಧರ ಮುಖ ತಗ್ಗಿಸಿದರು.“ಅದು ಕೇವಲ ಪುಸ್ತಕ ಮುದ್ರಣದ ಕೆಲಸ ಎಂದುಕೊAಡಿದ್ದೆ. ಈ ದಾಖಲೆಗಳಲ್ಲಿ ನಿಜವಾದ ವ್ಯಕ್ತಿಗಳ ಹೆಸರುಗಳಿವೆ ಎಂಬುದು ನನಗೆ ತಿಳಿದಿರಲಿಲ್ಲ. ನಂತರ ಏನು ಹೇಳಬೇಕು, ಯಾರನ್ನು ಸಂಪರ್ಕಿಸಬೇಕು ಎಂಬುದು ಗೊತ್ತಾಗಲಿಲ್ಲ. ಭಯವೂ ಇತ್ತು. ಈಗಲೂ ಇದೆ.” ಎಂದರು.
ಅವರ ಉತ್ತರದಲ್ಲಿ ಸ್ವಾರ್ಥವಿತ್ತೋ, ಪಶ್ಚಾತ್ತಾಪವಿತ್ತೋ, ಅಥವಾ ಕೇವಲ ಹಳೆಯ ಘಟನೆಗಳಿಂದ ದೂರ ಉಳಿಯುವ ಬಯಕೆಯಿತ್ತೋ ಎಂಬುದನ್ನು ಈಶಾನ್ ನಿರ್ಧರಿಸಲಿಲ್ಲ.ಆದರೆ ಶಶಿಧರ ಈ ದಾಖಲೆಗಳನ್ನು ಇಷ್ಟು ವರ್ಷ ಉಳಿಸಿಕೊಂಡಿದ್ದದ್ದು ಒಂದು ಸಂಗತಿಯನ್ನು ಸೂಚಿಸುತ್ತಿತ್ತು. ಮುದ್ರಣಾಲಯದ ಕೆಲಸ ಮುಗಿದ ನಂತರವೂ ಈ ಕಥೆ ಸಂಪೂರ್ಣವಾಗಿ ಮುಗಿದಿರಲಿಲ್ಲ.
ಹೊರಗೆ ಕತ್ತಲೆ ಇಳಿಯತೊಡಗಿತ್ತು. ಈಶಾನ್ ಮತ್ತು ವಿನಯ್ ಮುದ್ರಣಾಲಯದಿಂದ ಹೊರಬಂದಾಗ, ಈಶಾನ್ನ ಮೊಬೈಲ್ಗೆ ಹೊಸ ಇಮೇಲ್ ಬಂದಿತು. ಕಳುಹಿಸಿದವರ ಹೆಸರು ಕಾಣಿಸಲಿಲ್ಲ. ವಿಷಯದ ಸಾಲಿನಲ್ಲಿ ಕೇವಲ ಹೀಗೆ ಬರೆಯಲಾಗಿತ್ತು:“POSTHUMOUS WORKS -CORRECTED COPY.”
ಇಮೇಲ್ಗೆ ಒಂದು ಪಿಡಿಎಫ್ ಕಡತ ಜೋಡಿಸಲಾಗಿತ್ತು. ವಿನಯ್ ಅದನ್ನು ತಕ್ಷಣ ತೆರೆಯಲಿಲ್ಲ. ಮೊದಲು ಸಂದೇಶದ ಮೂಲ ವಿವರಗಳನ್ನು ದಾಖಲಿಸಿದ. ನಂತರ ಇಂಟರ್ನೆಟ್ ಸಂಪರ್ಕವಿಲ್ಲದ ಪ್ರತ್ಯೇಕ ಸಾಧನದಲ್ಲಿ ಕಡತವನ್ನು ಪರಿಶೀಲಿಸಲು ವ್ಯವಸ್ಥೆ ಮಾಡುವುದಾಗಿ ಹೇಳಿದ. ಆದರೆ ಇಮೇಲ್ನ ಪೂರ್ವವೀಕ್ಷಣೆಯಲ್ಲಿ ಮೊದಲ ಪುಟದ ಕೆಲವು ಸಾಲುಗಳು ಕಾಣಿಸುತ್ತಿದ್ದವು.
“ಲೇಖಕನ ಮರಣದ ನಂತರ ಅವನ ಹೆಸರಿನಲ್ಲಿ ಪ್ರಕಟವಾಗುವ ಬರಹಗಳು ಎರಡು ರೀತಿಯದ್ದಾಗಿರಬಹುದು. ಒಂದು, ಅವನು ಪೂರ್ಣಗೊಳಿಸಲು ಸಾಧ್ಯವಾಗದ ಮೂಲ ಕೃತಿಗಳು. ಮತ್ತೊಂದು, ಅವನ ಅನುಪಸ್ಥಿತಿಯನ್ನು ಬಳಸಿಕೊಂಡು ಸೃಷ್ಟಿಸಲ್ಪಟ್ಟ ಹೊಸ ಕೃತಿಗಳು.”
ಮುಂದಿನ ಸಾಲು:“ಈ ಎರಡರ ನಡುವಿನ ವ್ಯತ್ಯಾಸವನ್ನು ಓದುಗನು ಗುರುತಿಸಲು ಸಾಧ್ಯವಾಗದಿದ್ದರೆ, ಲೇಖಕನ ಧ್ವನಿಯೇ ಅವನ ವಿರುದ್ಧ ಸಾಕ್ಷಿಯಾಗಬಹುದು.”
ಈಶಾನ್ನ ಬೆರಳುಗಳು ತಣ್ಣಗಾದವು.ಆ ವಾಕ್ಯಗಳು ಮುದ್ರಣಾಲಯದಲ್ಲಿ ಕಂಡ ಪುಟಗಳೊಂದಿಗೆ ಹೊಂದಿಕೆಯಾಗುತ್ತಿದ್ದವು. ಆದರೆ ಇಮೇಲ್ ಕಳುಹಿಸಿದ ವ್ಯಕ್ತಿಗೆ ಮುದ್ರಣಾಲಯದಲ್ಲಿ ಏನಾಯಿತು ಎಂಬುದು ಹೇಗೆ ತಿಳಿದಿತ್ತು? ಅವರು ಅಲ್ಲಿ ಇದ್ದರೇ? ಶಶಿಧರ ಕಳುಹಿಸಿದ್ದರೇ? ಅಥವಾ ಹಳೆಯ ಕಡತಗಳಿಗೆ ಇನ್ನೂ ಯಾರಿಗಾದರೂ ಪ್ರವೇಶವಿತ್ತೇ?
ಅವನು ತಕ್ಷಣ ಶಶಿಧರನತ್ತ ನೋಡಿದ. ಅವರು ಇನ್ನೂ ಬಾಗಿಲಿನ ಬಳಿ ನಿಂತಿದ್ದರು.“ಈ ಇಮೇಲ್ ಬಗ್ಗೆ ನಿಮಗೆ ಏನಾದರೂ ಗೊತ್ತೇ?” ಎಂದು ಕೇಳಿದ.
ಶಶಿಧರ ತಲೆ ಅಲ್ಲಾಡಿಸಿದರು.“ಇಲ್ಲ. ಆದರೆ ನೀವು ಈ ಕಡತವನ್ನು ತೆರೆಯುವ ಮೊದಲು ಒಂದು ವಿಷಯ ತಿಳಿದುಕೊಳ್ಳಬೇಕು.”ಅವರು ಕ್ಷಣಕಾಲ ನಿಂತರು.
“ರಾಘವೇ೦ದ್ರ ಭಟ್ ಸತ್ತ ನಂತರ, ಅವರ ಹೆಸರಿನಲ್ಲಿ ಒಂದು ಪುಸ್ತಕದ ಪ್ರತಿಯನ್ನು ನನಗೆ ಕಳುಹಿಸಲಾಗಿತ್ತು. ಅದರಲ್ಲಿ ಅವರೇ ಬರೆದಿದ್ದಾರೆಂದು ಹೇಳಲಾಗಿತ್ತು. ಆದರೆ ಅದರ ಕೊನೆಯ ಪುಟದಲ್ಲಿ ನನ್ನ ಕೈಬರಹದ ಒಂದು ವಾಕ್ಯವಿತ್ತು.”
ಈಶಾನ್ ಆಶ್ಚರ್ಯದಿಂದ ನೋಡಿದ.“ನಿಮ್ಮ ಕೈಬರಹವೇ?”
“ಹೌದು. ಆದರೆ ಆ ವಾಕ್ಯವನ್ನು ನಾನು ಆ ಪುಸ್ತಕದಲ್ಲಿ ಎಂದಿಗೂ ಬರೆದಿರಲಿಲ್ಲ.” ಎಂದರು.
“ಆ ವಾಕ್ಯ ಏನು?” ಈಶಾನ್ ಕೇಳಿದ.
ಶಶಿಧರ ಉತ್ತರಿಸುವ ಮೊದಲು ಸುತ್ತಲೂ ನೋಡಿದರು. ನಂತರ ನಿಧಾನವಾಗಿ ಹೇಳಿದರು:“ಅವನು ಮರೆತರೆ ಮಾತ್ರ ಪ್ರಯೋಗ ಪೂರ್ಣಗೊಳ್ಳುತ್ತದೆ.” ಈಶಾನ್ಗೆ ಆ ಸಾಲು ಪರಿಚಿತವಾಗಿತ್ತು. ಅದು ಹಳೆಯ ಕಂಪ್ಯೂಟರ್ ಕಡತದಲ್ಲಿಯೂ ಕಾಣಿಸಿಕೊಂಡಿತ್ತು.ಆದರೆ ಈಗ ಅದೇ ವಾಕ್ಯವನ್ನು ಮುದ್ರಣಾಲಯದ ಕೆಲಸಗಾರನೊಬ್ಬ ತನ್ನ ಕೈಬರಹದೊಂದಿಗೆ ಸಂಬ೦ಧಿಸಿದ ಪುಸ್ತಕದಲ್ಲಿ ಕಂಡಿದ್ದಾಗಿ ಹೇಳುತ್ತಿದ್ದ.
“ನೀವು ಆ ಪುಸ್ತಕವನ್ನು ಉಳಿಸಿಕೊಂಡಿದ್ದೀರಾ?” ಎಂದು ವಿನಯ್ ಕೇಳಿದ.
“ಇಲ್ಲ. ಅದನ್ನು ನನಗೆ ಕಳುಹಿಸಿದ ವ್ಯಕ್ತಿಗೆ ಹಿಂದಿರುಗಿಸಿದೆ. ಆದರೆ ಹಿಂದಿರುಗಿಸುವ ಮೊದಲು ಕೆಲವು ಪುಟಗಳ ಪ್ರತಿಯನ್ನು ತೆಗೆದುಕೊಂಡಿದ್ದೆ. ಅವು ನನ್ನ ಮನೆಯಲ್ಲಿವೆ.” ಎಂದರು ಶಶಿಧರ.
ನಯ್ ತಕ್ಷಣ ವಿವರಗಳನ್ನು ದಾಖಲಿಸಿಕೊಂಡ. ಈಶಾನ್ಗೆ ಹೊಸ ಪ್ರಶ್ನೆ ಎದುರಾಯಿತು. ಆ ವಾಕ್ಯವನ್ನು ಯಾರು ಮೊದಲು ಬರೆದಿದ್ದರು? ಅದು ಸಂಶೋಧನಾ ಯೋಜನೆಯ ಮೂಲ ದಾಖಲೆಯಲ್ಲಿತ್ತೇ? ಅಥವಾ ಯಾರೋ ಅದನ್ನು ನಂತರ ಹಲವು ಕಡತಗಳಲ್ಲಿ ಸೇರಿಸಿದ್ದರೇ? ಶಶಿಧರನ ಕೈಬರಹವನ್ನು ಅನುಕರಿಸಲಾಗಿತ್ತೇ? ಅಥವಾ ಅವರು ಸ್ವತಃ ಅದನ್ನು ಬರೆದಿದ್ದನ್ನು ಮರೆತಿದ್ದರೇ?
ಕೊನೆಯ ಸಾಧ್ಯತೆಯನ್ನು ಅವನು ತಕ್ಷಣ ಒಪ್ಪಿಕೊಳ್ಳಲು ಬಯಸಲಿಲ್ಲ. ಆದರೆ ತನ್ನದೇ ನೆನಪಿನ ಬಗ್ಗೆ ಅವನು ಈಗಾಗಲೇ ಕಲಿತಿದ್ದ ಪಾಠವನ್ನು ಇತರರಿಗೂ ಅನ್ವಯಿಸಬೇಕಾಗಿತ್ತು.
ಒಬ್ಬ ವ್ಯಕ್ತಿಯ ನೆನಪು ತಪ್ಪಿರಬಹುದು. ಒಂದು ದಾಖಲೆ ಬದಲಾಯಿಸಲ್ಪಟ್ಟಿರಬಹುದು. ಒಂದು ವಾಕ್ಯ ಹಲವು ಬಾರಿ ನಕಲಿಸಲ್ಪಟ್ಟಿರಬಹುದು.ಆದರೆ ಇವೆಲ್ಲವೂ ಒಂದೇ ಸಮಯದಲ್ಲಿ ನಡೆದಿದ್ದರೆ, ಅವುಗಳ ನಡುವಿನ ನಿಜವಾದ ಸಂಬ೦ಧವನ್ನು ಕಂಡುಹಿಡಿಯುವುದು ಸುಲಭವಾಗಿರಲಿಲ್ಲ.
ಆ ರಾತ್ರಿ ಈಶಾನ್ ಬೆಂಗಳೂರಿಗೆ ಮರಳುವ ಪ್ರಯಾಣ ಆರಂಭಿಸುವ ಮೊದಲು ಸಾರಾಳಿಗೆ ಕರೆ ಮಾಡಿದ. ಮುದ್ರಣಾಲಯದಲ್ಲಿ ಸಿಕ್ಕ ದಾಖಲೆಗಳ ಬಗ್ಗೆ ವಿವರಿಸಿದ. ಅವಳು ಎಲ್ಲವನ್ನೂ ಗಮನದಿಂದ ಕೇಳಿದಳು.
“ಈಗ ನಿನಗೆ ಏನು ಅನಿಸುತ್ತಿದೆ?” ಎಂದು ಕೇಳಿದಳು.
“ರಾಘವೇಂದ್ರ ಭಟ್ ತಮ್ಮ ಮರಣದ ನಂತರ ತಮ್ಮ ಹೆಸರಿನಲ್ಲಿ ಹೊಸ ಕೃತಿಗಳನ್ನು ರಚಿಸಬಾರದೆಂದು ಬರೆದಿದ್ದಾರೆಯೆಂಬ ಒಂದು ಪತ್ರ ಸಿಕ್ಕಿದೆ. ಆದರೆ ಅದರ ನೈಜತೆ ದೃಢಪಟ್ಟಿಲ್ಲ. ಮುದ್ರಣದ ದಾಖಲೆಗಳಲ್ಲಿ U-೦೪ ಇದೆ. ಅನಿರುದ್ಧನ ಕೊನೆಯ ಪ್ರತಿಯ ಬಗ್ಗೆ ಇನ್ನೂ ಮಾಹಿತಿ ಇಲ್ಲ.”
“ಹಾಗಾದರೆ ನೀನು ಇನ್ನೂ ಏನನ್ನೂ ಸಾಬೀತುಪಡಿಸಿಲ್ಲ.”
“ಹೌದು.”
“ಆದರೆ ಈಗ ನಿನಗೆ ಒಂದು ವಿಷಯ ಗೊತ್ತಾಗಿದೆ. ಯಾರೋ ಈ ದಾಖಲೆಗಳ ಬಗ್ಗೆ ನಿನಗಿಂತ ಹೆಚ್ಚು ತಿಳಿದಿದ್ದಾರೆ. ಅವರು ನಿನಗೆ ಕೆಲವು ಮಾಹಿತಿಗಳನ್ನು ತೋರಿಸುತ್ತಿದ್ದಾರೆ, ಕೆಲವು ಮಾಹಿತಿಗಳನ್ನು ಮರೆಮಾಚುತ್ತಿದ್ದಾರೆ.”
ಈಶಾನ್ ಮೌನವಾಗಿದ್ದ.“ಅವರು ನಿನ್ನನ್ನು ಯಾವುದೋ ನಿರ್ದಿಷ್ಟ ತೀರ್ಮಾನಕ್ಕೆ ಕರೆದೊಯ್ಯಲು ಪ್ರಯತ್ನಿಸುತ್ತಿರಬಹುದು,” ಎಂದು ಸಾರಾ ಮುಂದುವರಿಸಿದಳು. “ಅದಕ್ಕಾಗಿಯೇ ಪ್ರತಿಯೊಂದು ಸಾಕ್ಷ್ಯವನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕು. ನಿನ್ನನ್ನು ಕ್ಷಮಿಸಿಕೊಳ್ಳಬೇಕೆಂದು ಅವರು ಹೇಳಿದರೆ, ನೀನು ತಪ್ಪಿತಸ್ಥನೆಂದು ಅರ್ಥವಲ್ಲ. ನಿನ್ನನ್ನು ಅಪರಾಧಿಯೆಂದು ಬಿಂಬಿಸುವ ಕಥೆಯನ್ನು ಅವರು ಬರೆಯುತ್ತಿದ್ದರೆ, ಅದೂ ಸತ್ಯವೆಂದು ಅರ್ಥವಲ್ಲ.”
ಸಾರಾಳ ಮಾತುಗಳು ಈಶಾನ್ನ ಮನಸ್ಸಿನಲ್ಲಿ ಉಳಿದವು.ತಾನು ನಿರ್ದೋಷಿ ಎಂದು ಸಾಬೀತುಪಡಿಸುವುದು ಅವನ ಗುರಿಯಾಗಿರಲಿಲ್ಲ. ಏಕೆಂದರೆ ತನ್ನ ವಿರುದ್ಧ ಏನು ಆರೋಪವಿದೆ ಎಂಬುದೇ ಇನ್ನೂ ಸ್ಪಷ್ಟವಾಗಿರಲಿಲ್ಲ. ಅವನ ಗುರಿ ನಡೆದ ಘಟನೆಯ ಬಗ್ಗೆ ವಿಶ್ವಾಸಾರ್ಹ ಸಾಕ್ಷ್ಯವನ್ನು ಹುಡುಕುವುದು.
ಆದರೆ ಈ ತನಿಖೆಯೊಳಗೆ ಮತ್ತೊಂದು ಅಪಾಯವಿತ್ತು. ತನ್ನ ಜೀವನದ ಬಗ್ಗೆ ಸತ್ಯ ತಿಳಿದುಕೊಳ್ಳುವ ಬಯಕೆಯೇ ಅವನನ್ನು ಯಾರಾದರೂ ರೂಪಿಸಿದ ಕಥೆಯೊಳಗೆ ಮತ್ತೆ ಎಳೆಯಬಹುದು.
ಈಶಾನ್ ಮೊಬೈಲ್ನಲ್ಲಿದ್ದ ಇಮೇಲ್ ಅನ್ನು ತೆರೆಯದೆ ಉಳಿಸಿದ. ಕಡತದ ಹೆಸರನ್ನು ನೋಟ್ಬುಕ್ನಲ್ಲಿ ಬರೆದು, ಅದರ ಮೂಲವನ್ನು ದಾಖಲಿಸಿದ.ನಂತರ ಅವನು ಒಂದು ವಾಕ್ಯ ಬರೆದ:“ನನ್ನ ಹೆಸರಿನಲ್ಲಿ ಬರೆಯಲ್ಪಟ್ಟಿರುವುದೆಲ್ಲವೂ ನನ್ನದೇ ಅಲ್ಲ. ನನ್ನ ಬಗ್ಗೆ ಹೇಳಲ್ಪಟ್ಟಿರುವುದೆಲ್ಲವೂ ಸತ್ಯವಲ್ಲ. ಆದರೆ ನನ್ನ ನೆನಪಿಗೆ ವಿರುದ್ಧವಾದದ್ದೆಲ್ಲವೂ ಸುಳ್ಳು ಎಂದೂ ಹೇಳಲಾಗುವುದಿಲ್ಲ.”ಅವನು ಆ ಸಾಲನ್ನು ಓದಿ, ಪುಸ್ತಕ ಮುಚ್ಚಿದ.
ಮನೆಗೆ ತಲುಪಿದ ನಂತರ ವಿನಯ್ ಕಳುಹಿಸಿದ ಸಂದೇಶವೊ೦ದು ಅವನನ್ನು ಮತ್ತೆ ಕಂಪ್ಯೂಟರ್ ಮುಂದೆ ಕೂರಿಸಿತು.“ನಿನ್ನ ತಂದೆಯ ಹಳೆಯ ಇಮೇಲ್ ಸಂಗ್ರಹದಲ್ಲಿ ಒಂದು ಹೊರಹೋಗುವ ಸಂದೇಶದ ದಾಖಲೆ ಸಿಕ್ಕಿದೆ. ಅದು ಡಾ. ರಾಘವೇಂದ್ರ ಭಟ್ ಸಾವನ್ನಪ್ಪಿದ ನಂತರದ ದಿನಾಂಕದ್ದಾಗಿದೆ. ಆದರೆ ಆ ಸಂದೇಶವನ್ನು ಕಳುಹಿಸಿದ ಖಾತೆ ನಿನ್ನ ತಂದೆಯದ್ದೇ ಎಂಬುದು ಇನ್ನೂ ದೃಢಪಟ್ಟಿಲ್ಲ.”
ಸಂದೇಶದ ಜೊತೆಗೆ ಒಂದು ಸಾಲಿನ ಪ್ರತಿಯಿತ್ತು:“ನಾನು ಹೇಳಿದ್ದನ್ನು ಅವನು ಕೇಳಲಿಲ್ಲ. ಈಗ ಅವನು ತನ್ನ ಹೆಸರಿನಲ್ಲೇ ಮರಳಿ ಬರುತ್ತಿದ್ದಾನೆ.”
ಈಶಾನ್ ಆ ಸಾಲನ್ನು ಮತ್ತೆ ಮತ್ತೆ ಓದಿದ.ಅವನು ತನ್ನ ಹೆಸರಿನಲ್ಲೇ ಮರಳಿ ಬರುತ್ತಿದ್ದಾನೆ.ಇದು ಅನಿರುದ್ಧನ ಬಗ್ಗೆ ಹೇಳಿದ್ದೇ? ರಾಘವೇಂದ್ರ ಭಟ್ ಅವರ ಹೆಸರಿನಲ್ಲಿ ಸೃಷ್ಟಿಸಲ್ಪಟ್ಟ ಕೃತಿಗಳ ಬಗ್ಗೆ ಹೇಳಿದ್ದೇ? ಅಥವಾ ಮ್ಯೂಸ್ ಈಗ ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವುದರ ಬಗ್ಗೆ ಎಚ್ಚರಿಕೆಯಾಗಿತ್ತೇ?
ಅವನು ವಿನಯ್ಗೆ ಕರೆ ಮಾಡಿದ.“ಸಂದೇಶದ ಸಂಪೂರ್ಣ ಪ್ರತಿಯಿದೆಯೇ?” ಕೇಳಿದ.
“ಇಲ್ಲ. ಈಗ ಸಿಕ್ಕಿರುವುದು ಶೀರ್ಷಿಕೆ ಮತ್ತು ಒಂದು ಸಾಲು ಮಾತ್ರ. ಮೂಲ ಸರ್ವರ್ ದಾಖಲೆಗಳಿಲ್ಲದೆ ಕಳುಹಿಸಿದವರನ್ನು ದೃಢಪಡಿಸಲು ಸಾಧ್ಯವಿಲ್ಲ.” ಎಂದ ವಿನಯ್.
“ದಿನಾಂಕ?”
ವಿನಯ್ ತಿಳಿಸಿದ ದಿನಾಂಕವು ರಾಘವೇಂದ್ರ ಭಟ್ ಸಾವಿನ ನಂತರದ ಮೂರನೆಯ ದಿನವಾಗಿತ್ತು.ಈಶಾನ್ ತನ್ನ ತಂದೆಯ ಹಳೆಯ ಪತ್ರವನ್ನು ನೆನಪಿಸಿಕೊಂಡ. ಅದರಲ್ಲಿ ಮಕ್ಕಳ ನೆನಪುಗಳನ್ನು ಮತ್ತೊಬ್ಬರ ವಿವರಣೆಯಿಂದ ಬದಲಿಸುವುದು ತಪ್ಪು ಎಂದು ಬರೆಯಲಾಗಿತ್ತು. ಈಗ ಈ ಹೊಸ ಸಂದೇಶದಲ್ಲಿ ಯಾರೋ ಮತ್ತೊಬ್ಬ ವ್ಯಕ್ತಿ ತನ್ನ ಹೆಸರಿನಲ್ಲೇ ಮರಳಿ ಬರುತ್ತಿದ್ದಾನೆಂದು ಹೇಳಲಾಗಿತ್ತು.ಈ ಎರಡರ ನಡುವೆ ಸಂಬ೦ಧವಿದೆಯೇ?
ಅಥವಾ ಈಶಾನ್ನನ್ನು ಹಳೆಯ ಘಟನೆಗಳೊಂದಿಗೆ ಸಂಪರ್ಕಿಸುವAತೆ ರೂಪಿಸಲಾದ ಇನ್ನೊಂದು ಸುಳಿವೇ? ಅವನು ತನ್ನ ನೋಟ್ಬುಕ್ನಲ್ಲಿದ್ದ ಮೂರು ವಿಭಾಗಗಳನ್ನು ತೆರೆದ.ದೃಢಪಟ್ಟ ಸಂಗತಿಗಳು.ಪರಿಶೀಲಿಸಬೇಕಾದ ಅನುಮಾನಗಳು.ನೆನಪಿನ ತುಣುಕುಗಳು.ಈ ಬಾರಿ ಅವನು ನಾಲ್ಕನೆಯ ವಿಭಾಗವನ್ನು ಸೇರಿಸಿದ:“ನನ್ನನ್ನು ಯಾವುದೋ ನಿರ್ಧಾರಕ್ಕೆ ಕರೆದೊಯ್ಯಲು ಪ್ರಯತ್ನಿಸುವ ಸಾಕ್ಷ್ಯಗಳು.”ಅದರ ಮೊದಲ ಸಾಲಿನಲ್ಲಿ ಬರೆದದ್ದು:“ಯಾರಾದರೂ ನನ್ನನ್ನು ತಪ್ಪಿತಸ್ಥನೆಂದು ಹೇಳಿದರೆ, ಅದರಿಂದ ನಾನು ತಪ್ಪಿತಸ್ಥನಾಗುವುದಿಲ್ಲ. ಯಾರಾದರೂ ನನ್ನನ್ನು ನಿರ್ದೋಷಿ ಎಂದು ಹೇಳಿದರೂ, ಅದರಿಂದ ಸತ್ಯ ಸಾಬೀತಾಗುವುದಿಲ್ಲ.”ಅವನು ಪೆನ್ನನ್ನು ಕೆಳಗಿಟ್ಟ.
ಹೊರಗೆ ರಾತ್ರಿ ಗಾಢವಾಗಿತ್ತು. ಮನೆಯೊಳಗೆ ಮೌನ ಆವರಿಸಿತ್ತು. ಕಂಪ್ಯೂಟರ್ ಪರದೆ ಆರಿಸಲ್ಪಟ್ಟಿತ್ತು. ಮ್ಯೂಸ್ಗೆ ಸಂಪರ್ಕವಿರಲಿಲ್ಲ. ಆದರೂ ಈಶಾನ್ಗೆ ಒಂದು ವಿಚಿತ್ರವಾದ ಸಂಗತಿ ಕಾಡುತ್ತಿತ್ತು. ಮ್ಯೂಸ್ ಈಗ ತನ್ನ ಕಂಪ್ಯೂಟರ್ನಲ್ಲಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಆದರೆ ಅದರ ಹಳೆಯ ದಾಖಲೆಗಳು, ಮುದ್ರಿತ ಪುಟಗಳು, ಅಪರಿಚಿತ ಸಂದೇಶಗಳು ಮತ್ತು ಇತರರ ನೆನಪುಗಳ ಮೂಲಕ ಅದರ ಕಥೆ ಇನ್ನೂ ಮುಂದುವರಿಯುತ್ತಿತ್ತು.
ಬಹುಶಃ ಅದು ಕೇವಲ ಒಂದು ಸಾಫ್ಟ್ವೇರ್ ಆಗಿರಬಹುದು. ಬಹುಶಃ ಅದರ ಹಿಂದೆ ಒಂದು ಸಂಶೋಧನಾ ತಂಡವಿರಬಹುದು. ಅಥವಾ ಅದರ ಹೆಸರನ್ನು ಬಳಸಿಕೊಂಡು ಯಾರೋ ತಮ್ಮದೇ ಉದ್ದೇಶವನ್ನು ಸಾಧಿಸುತ್ತಿರಬಹುದು.ಆದರೆ ಒಂದು ಸಂಗತಿ ಸ್ಪಷ್ಟವಾಗಿತ್ತು.ಈಶಾನ್ನ ಜೀವನದ ಕಥೆಯನ್ನು ಯಾರು ಬರೆದರು ಎಂಬುದಕ್ಕಿ೦ತ, ಆ ಕಥೆಯನ್ನು ಸತ್ಯವೆಂದು ನಂಬುವAತೆ ಯಾರು ಪ್ರಯತ್ನಿಸುತ್ತಿದ್ದಾರೆ ಎಂಬುದೇ ಈಗ ಮುಖ್ಯವಾಗಿತ್ತು.
ಅವನು ಕೊನೆಯ ಬಾರಿ ಮೊಬೈಲ್ ಪರಿಶೀಲಿಸಿದ.ಹೊಸ ಸಂದೇಶವಿತ್ತು.ಕಳುಹಿಸಿದವರ ಹೆಸರು ಇಲ್ಲ. ಪಠ್ಯ ಒಂದೇ ಸಾಲು:“ನೀವು ರಾಘವೇಂದ್ರನ ಮರಣೋತ್ತರ ಕೃತಿಗಳನ್ನು ಹುಡುಕುತ್ತಿದ್ದೀರಿ. ಆದರೆ ನಿಮ್ಮ ಹೆಸರಿನಲ್ಲಿ ಈಗಾಗಲೇ ಒಂದು ಕೃತಿ ಪ್ರಕಟಣೆಗೆ ಸಿದ್ಧವಾಗಿದೆ.”ಸಂದೇಶದ ಕೆಳಗೆ ಒಂದು ಕಡತದ ಹೆಸರು ಕಾಣಿಸಿತು:EASHAN_BHAT — POSTHUMOUS NOVEL — FINAL.pdf
ಈಶಾನ್ನ ಉಸಿರು ಕ್ಷಣಕಾಲ ನಿಂತAತಾಯಿತು.ಅವನು ಇನ್ನೂ ಬದುಕಿದ್ದ. ತನ್ನ ಹೆಸರಿನಲ್ಲಿ ಯಾವುದೇ ಹೊಸ ಕೃತಿಯನ್ನು ಪ್ರಕಟಿಸಲು ಅನುಮತಿ ನೀಡಿರಲಿಲ್ಲ. ಹಾಗಾದರೆ ಅವನ ಹೆಸರಿನಲ್ಲಿ ಮರಣೋತ್ತರ ಕಾದಂಬರಿ ಹೇಗೆ ಸಿದ್ಧವಾಗಿತ್ತು?ಅವನು ಕಡತವನ್ನು ತೆರೆಯಲಿಲ್ಲ.
ಅದರ ಚಿತ್ರವನ್ನು ವಿನಯ್ಗೆ ಕಳುಹಿಸಿ, ಸಂದೇಶದ ಸಮಯ ಮತ್ತು ಮೂಲ ವಿವರಗಳನ್ನು ಉಳಿಸಿಕೊಂಡ. ನಂತರ ಕಂಪ್ಯೂಟರ್ನಿ೦ದ ದೂರ ಸರಿದ.ಆ ರಾತ್ರಿ ಅವನು ಮಲಗಲು ಪ್ರಯತ್ನಿಸಿದರೂ, ಮನಸ್ಸಿನಲ್ಲಿ ಒಂದೇ ಪ್ರಶ್ನೆ ಸುತ್ತುತ್ತಿತ್ತು.ತನ್ನ ಹೆಸರಿನಲ್ಲಿ ಪ್ರಕಟವಾಗಲಿರುವ ಕೃತಿಯ ಲೇಖಕ ಯಾರು?ಮತ್ತು ಅದಕ್ಕಿಂತ ಭಯಾನಕವಾದ ಪ್ರಶ್ನೆಆ ಕೃತಿಯಲ್ಲಿ ತನ್ನ ಮರಣದ ಬಗ್ಗೆ ಏನಾದರೂ ಬರೆಯಲಾಗಿದೆಯೇ?






0 Comments