ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಸ್ತಕ ಅಂಕಣ – ಕನಸಿನ ಲೋಕದ ಸಾಹಸಯಾತ್ರೆ

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು.ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ ನಡೆಸಿದ್ದಾರೆ.೧೬ ಕೃತಿಗಳು ಪ್ರಕಟವಾಗಿವೆ.ಪ್ರಸ್ತುತ ಕಲಬುರಗಿಯ ಸರಕಾರಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಇದೀಗ ಅವಧಿಯ ಪುಸ್ತಕ ಅಂಕಣದೊಂದಿಗೆ ಬರುತ್ತಿದ್ದಾರೆ.

ಅಂಕಣ – ೨ ೩

ಕೃತಿ –ಒಂದು ಕನಸಿನ ಪಯಣ

ಲೇಖಕರು – ನೇಮಿಚಂದ್ರ

ನೇಮಿಚಂದ್ರ ಅವರ ಯುರೋಪಿನ ಪ್ರವಾಸದ ಅನುಭವ ಕಥನವೇ ಒಂದು ಕನಸಿನ ಪಯಣ. ಇದನ್ನು ಕೇವಲ ಕನಸಿನ ಪಯಣವೆನ್ನದೆ, ಇದೊಂದು ಸಾಹಸದ, ರೋಚಕ ಅನುಭವ ಕಥನ ಎಂದರೆ ತಪ್ಪಾಗದು. ಮೂರು ದಶಕಗಳ ಹಿಂದೆ ಲೇಖಕಿ ನೇಮಿಚಂದ್ರ ಅವರು ವಿದೇಶಿ ಪ್ರಯಾಣವನ್ನು ಮಾಡಬೇಕು,ಒಂಟಿಯಾದರು ಸರಿ ಹೋಗಬೇಕೆಂದು ಆಶಿಸಿದ್ದು ಆಗ ಜಂಟಿಯಾಗಿದ್ದು ವಕೀಲೆ ಹೇಮಲತಾ ಅವರು. ಇಬ್ಬರು ಮಹಿಳೆಯರು ಮೂರು ದಶಕಗಳ ಹಿಂದೆ, ಅದರಲ್ಲೂ ಇಂದಿನ ಹಾಗೆ ಯಾವುದೇ ಆಧುನಿಕ ತಂತ್ರಜ್ಞಾನದ ಸಹಾಯವಿಲ್ಲದೆ ಹಲವು ರಾಷ್ಟ್ರಗಳನ್ನು ಸುತ್ತಿ ಬಂದದ್ದು ಸೋಜಿಗದ ಸಂಗತಿ. ಕಾರಣ ಇಂದು ಗೂಗಲ್ ಎಂಬ ಮಾಯ ಕಿನ್ನರಿಯೊಂದಿಗೆ ಭಾಷೆ, ದಿಕ್ಕು, ದಿಸೆ ಏನೂ ತಿಳಿಯದೆ ಇದ್ದರೂ ಜಗತ್ತನ್ನೇ ಸುತ್ತಬಲ್ಲೆವು ಎಂಬ ವಿಶ್ವಾಸ ಇಂದು ನಮ್ಮದಾಗಿದೆ. ಆದರೆ ಲೇಖಕಿ ಸುರಕ್ಷಿತವಾದ ಸಂಘಟಿತ ಪ್ರವಾಸ( conducted tour) ಮಾಡದೆ, ತಾವೇ ನಿರ್ಧರಿಸಿದ, ತಮಗೆ ಬೇಕಾದ ಸ್ಥಳಗಳನ್ನು, ಊರುಗಳನ್ನು ಆಯ್ಕೆ ಮಾಡಿಕೊಂಡು ಮಿತವ್ಯಯದಲ್ಲಿ ಲೋಕ ಸಂಚಾರ ಮಾಡಿದ್ದು ವಿಶೇಷ.

ಲೇಖಕಿ ತಾವು ಪ್ರವಾಸ ಮಾಡಬೇಕಾದ ಸ್ಥಳಗಳ ಬಗ್ಗೆ ಪೂರ್ವಭಾವಿಯಾಗಿ ನೀಲಿ ನಕ್ಷೆ ತಯಾರಿಸಿಕೊಂಡು,  ತಮ್ಮ ಅಧ್ಯಯನ ಮತ್ತು ಬರವಣಿಗೆಗೆ ಅನುಕೂಲವಾಗುವಂತೆ ಪ್ರವಾಸವನ್ನು ಯೋಚಿಸಿದ್ದು ಅವರ ಚಿಕಿತ್ಸಕ ಬುದ್ಧಿಗೆ ಸಾಕ್ಷಿ. ಅವರು ಹೆಚ್ಚಾಗಿ ವಿಜ್ಞಾನಿಗಳು, ಕಲಾವಿದರು, ಕವಿಗಳನ್ನು ಅರಿಸಿ ಹೊರಟಿದ್ದು ಅದರಲ್ಲೂ ವಿಶೇಷವಾಗಿ ಮಹಿಳಾ ವಿಜ್ಞಾನಿಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯುವುದೇ ಅವರ ಪ್ರವಾಸದ ಉದ್ದೇಶವಾಗಿತ್ತು ಎಂದರೆ ತಪ್ಪಾಗದು. ಲೇಖಕಿ ತಮ್ಮ ಮನೋಭಿಲಾಷೆಯಂತೆ  ಪಯಣಿಸಿ, ಕನಸನ್ನು ಸಾಕಾರಗೊಳಿಸಿ ಕೊಂಡಿದ್ದಾರೆ. ಹೀಗೆ ಎಲ್ಲರ ಕನಸುಗಳು ಸಾಕಾರಗೊಳ್ಳುವುದು ಅಪರೂಪ ಆದರೆ ಮನಸಿದ್ದಲ್ಲಿ ಮಾರ್ಗ ಎಂಬಂತೆ ಸುಮಾರು ಒಂದುವರೆ ತಿಂಗಳುಗಳ ಕಾಲ ತಮ್ಮ ಕುಟುಂಬ, ವೃತ್ತಿ ಮತ್ತು ಎಲ್ಲ ಜವಾಬ್ದಾರಿಗಳನ್ನು ಬದಿಗೊತ್ತಿ ಅರಿವಿನ ಕ್ಷಿತಿಜವನ್ನು ವಿಸ್ತರಿಸಿಕೊಳ್ಳಲು, ಏನೆಲ್ಲಾ ಅನುಭವ ದಕ್ಕಿಸಿಕೊಳ್ಳಲು ಹೊರಟ ಈ ಪಯಣ ನಿಜಕ್ಕೂ ರೋಮಾಂಚನಕಾರಿ. 

ಇಡೀ ಕೃತಿ ಉದ್ದಕ್ಕೂ ಹಲವು ಕವಿಗಳು, ವಿಜ್ಞಾನಿಗಳು, ಇತಿಹಾಸದಲ್ಲಿ ಕಳೆದು ಹೋದ ಪಾತ್ರಗಳನ್ನು ಪರಿಚಯಿಸುತ್ತಾ, ಅವರಿಗೆ ಮರುಜೀವ ನೀಡಿದ್ದಾರೆ. ತಾವು ಬಾಲ್ಯದಲ್ಲಿ ಓದಿದ ಕವಿಗಳಾದ ಕೀಟ್ಸ, ವರ್ಡ್ಸ್ ವರ್ಥ್, ಬ್ರಾಂಟೆ ಮತ್ತು ಷೇಕ್ಸ್‌ಪಿಯರ್ ಅವರ ಪರಿಸರ ಸ್ಮಾರಕಗಳನ್ನು ಕಾಪಿಟ್ಟ ಬಗೆ ಎಲ್ಲವನ್ನು ವಿವರವಾಗಿ ಮಾಹಿತಿ ನೀಡಿದ್ದಾರೆ. ಅದರಲ್ಲೂ ವಿಜ್ಞಾನಿಗಳ ಬಗ್ಗೆ ಅವರಿಗಿದ್ದ ಕುತೂಹಲ, ಅದಕ್ಕಾಗಿ ಭಾಷೆ ಬಾರದ ನೆಲದಲ್ಲಿ ಹುಡುಕಾಟ ಏನೆಲ್ಲಾ ಶತ ಪ್ರಯತ್ನ ಪಟ್ಟು ಅವರ ಪ್ರಯೋಗಾಲಯ ಸ್ಮಾರಕಗಳ ಬಗ್ಗೆ ಪರಿಚಯಿಸುತ್ತಾ ಹೋಗುತ್ತಾರೆ. ಕ್ಯಾರೋಲಿನ್ ಹರ್ಷಿಲ್ ಧೂಮಕೇತುಗಳನ್ನು ಕಂಡು ಹಿಡಿದ ಮೊದಲ ಮಹಿಳೆ ಮತ್ತು
ರೋಸ್ ಲಿಂಡ್, ಲಿಮೆಟ್ನರ್ ವಿಜ್ಞಾನಿಗಳ ಬಗ್ಗೆ ಸಾಕಷ್ಟು ಮಾಹಿತಿ ತಿಳಿಸುತ್ತಾರೆ.ಅದರಲ್ಲೂ ವಿಶೇಷವಾಗಿ ಮೇರಿ ಕ್ಯೂರಿಯನ್ನು ಅರಸಿ ಹೊರಟಾಗ, ಅವರಿಗೆ ಐಫಲ್ ಟವರ್ ಗಿಂತ ಅವಳ ಪ್ರಯೋಗಾಲಯ ವೀಕ್ಷಿಸುವುದೆ ಮುಖ್ಯವಾಗಿ ಕಾಣುತ್ತದೆ ಎನ್ನುವರು. ಸ್ತೀವಾದಿ ಲೇಖಕಿ ಆಫ್ರಾಳ ಕುರಿತು ಏನೆಲ್ಲಾ ಮಾಹಿತಿಯನ್ನು ನೀಡಿದ್ದಾರೆ ಹೀಗೆ ಕವಿ ಕಲಾವಿದರು, ವಸ್ತು ಸಂಗ್ರಹಾಲಯ ಎಲ್ಲವನ್ನು ವಿವರಿಸುತ್ತಾ ಓದುಗನ ಮುಂದೆ ಅಲ್ಲಿನ ಸಂಗತಿಗಳನ್ನು ಸಾದ್ಯಂತವಾಗಿ ಉಣಬಡಿಸಿದ್ದಾರೆ.

ಲೇಖಕಿ ತಮ್ಮ ಪ್ರವಾಸದಲ್ಲಿ ಎಲ್ಲೂ ಸಮಯವನ್ನು ವ್ಯರ್ಥ ಮಾಡದೆ ಪ್ರತಿಯೊಂದು ಘಳಿಗೆಯನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ತಮಗೆ ಸಿಕ್ಕ ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕೆಂದು ಹಗಲು ರಾತ್ರಿ ಎನ್ನದೆ ಊರುಗಳನ್ನು ಸುತ್ತಿದ್ದಾರೆ. ಕಾಲ್ನಡಿಗೆ, ರೈಲು, ಬಸ್ಸು ಏನೆಲ್ಲಾ ಸಂಚಾರಿ ವ್ಯವಸ್ಥೆಗಳನ್ನು ಬಳಸಿ, ತಮಗೆ ದಕ್ಕಿದಷ್ಟು ಮಾಹಿತಿಯನ್ನು, ಅನುಭವಗಳನ್ನು ಬಾಚಿಕೊಂಡು, ಓದಗನಿಗೆ ಮೂಟೆ ಕಟ್ಟಿಕೊಟ್ಟಿದ್ದಾರೆ.

ಇಡೀ ಕೃತಿ ಉದ್ದಕ್ಕೂ ಹಲವು ರೋಚಕ ಸಂಗತಿಗಳು ಮೆಲಕು ಹಾಕುವಂತಿವೆ. ಉದಾಹರಣೆ, ಭಾರತದಿಂದ ಅವರ ಪಯಣ ನೇರವಾಗಿ ಇಂಗ್ಲೆಂಡಿಗೆ ಹೋಗದೆ, ಓಮನ್ ಮತ್ತು ಬೆಹರೆನ್ ಮೂಲಕ ಹೋಗುವಾಗ ಸಾಕಷ್ಟು ಸಮಸ್ಯೆ ಆತಂಕ ಅನುಭವಿಸಿದರು ಕೂಡ, ಆ ಸಂದಿಗ್ಧ ಸಂದರ್ಭವನ್ನು ಕೂಡ ಸದ್ಬಳಕೆ ಮಾಡಿಕೊಂಡವರು. ಮತ್ತೆ ಎರಡು ಹೊಸ ತಾಣಗಳನ್ನು ಕಾಣಲು ಸಿಕ್ಕಿತು ಎಂದು ಖುಷಿ ಪಟ್ಟವರು. ಪ್ರವಾಸದಲ್ಲಿ ಎಲ್ಲೇ ಪ್ರಯಾಸವಾದರೂ, ಸಂಕಟದಲ್ಲೂ ಸಂಭ್ರಮ ಪಟ್ಟವರು, ಸಕಾರಾತ್ಮಕವಾಗಿ ಸ್ವೀಕರಿಸಿದವರು. ಇನ್ನು ಅವರ ಲೆಕ್ಕಾಚಾರದ ಶಿಸ್ತು ಅನುಕರಣಿಯ ಪ್ರತಿಯೊಂದು ಪೈಸೆಗೂ ಬೆಲೆ ಇದೆ ಎಂದು ಅಳೆದು ತೂಗಿ ಖರ್ಚು ಮಾಡುವ ಅವರ ಮನಃಸ್ಥಿತಿ, ಮಿತವ್ಯಯದಲ್ಲಿಯೇ ತಮ್ಮ ಕನಸನ್ನು ನನಸಾಗಿಸಿಕೊಂಡವರು. ಅದಕ್ಕೆ ಹೇಮಲತಾ ಅವರು ಸಾತ್ ನೀಡಿದ್ದು ವಿಶೇಷ. ಸಾಧ್ಯವಾದಷ್ಟು ಮಿತವ್ಯಯ ಮಾಡಿ, ಪುಸ್ತಕ ಮತ್ತು ಮಾಹಿತಿ ಸಂಗ್ರಹಣಿಗಾಗಿ ವ್ಯಯಮಾಡಿದ್ದು ಅರ್ಥಪೂರ್ಣ.

ಲೇಖಕಿ ಕೇವಲ ವ್ಯಕ್ತಿ ಚಿತ್ರಣ ಮಾತ್ರ ನೀಡದೆ ಅಲ್ಲಿನ ಪ್ರಕೃತಿಯ ವರ್ಣನೆ, ಇತಿಹಾಸದ ಘಟನಾವಳಿಗಳು ಅದರಲ್ಲೂ ಲಂಡನ್ ರಾಜನ ಕುರಿತು ಮತ್ತು ವಿಶೇಷವಾಗಿ ಹಿಟ್ಲರ್ ನ ಪೖಶಾಚಿಕ ಕೃತ್ಯಕ್ಕೆ ಸಾಕ್ಷಿಯಾದ ಸ್ಥಳಗಳಿಗೆ ಭೇಟಿ ನೀಡಿದ್ದು, ಆನ್ ಫ್ರಾಂಕ್ ಳ ಡೈರಿಯ ಅರಸಿ ಹೊರಟಿದ್ದು ಎಲ್ಲವೂ ಮಾಹಿತಿ ಪೂರ್ಣ. ಅಲ್ಲಿನವರ ಶಿಸ್ತು, ಸಮಯ ಪ್ರಜ್ಞೆ, ಸಾಧಕರ ಮಾಹಿತಿ, ಎಲ್ಲವನ್ನು ಕಾಪಿಡುವ ಅವರ ಮನಸ್ಸು ಮಾತ್ರ ಬಣ್ಣಿಸದೆ, ಜೊತೆ ಜೊತೆಯಲ್ಲಿ ಅಲ್ಲಿನ ನ್ಯೂನ್ಯತೆಗಳನ್ನು ಹೇಳುವಲ್ಲಿ ಹಿಂದೇಟು ಹಾಕಿಲ್ಲ. ಅಲ್ಲಿಯೂ ಬಿಕ್ಷಾಟನೆ, ವೇಶ್ಯಾವೃತ್ತಿ, ಸಂಬಂಧಗಳಲ್ಲಿನ ಶಿಥಿಲತೆ, ಅನಿವಾಸಿ ಭಾರತೀಯರ ಮನಸ್ಥಿತಿ ಹೀಗೆ ಎಲ್ಲವನ್ನೂ ಕೂಡ ನೇರವಾಗಿ ಹೇಳಿದ್ದಾರೆ.

ತಮ್ಮ ಪಯಣದ ಕೊನೆಯಲ್ಲಿ, ‘ಜಗತ್ತನ್ನೆಲ್ಲ ಸುತ್ತಿದರು ಕೂಡ ನಮ್ಮ ನೆಲ ನಮಗೆ ಶ್ರೇಷ್ಠವೆಂದು’ ತಾಯ್ನಾಡನ್ನು ಮನದುಂಬಿ ಸ್ಮರಿಸುತ್ತಾರೆ. ಅವರ ಬರವಣಿಗೆಯ ಶೈಲಿಯು ಸರಳ ಮತ್ತು ಸ್ಪಷ್ಟ ಜೊತೆಗೆ ನವಿರಾದ ಹಾಸ್ಯ ಮತ್ತು ವ್ಯಂಗ್ಯ ಮಿಶ್ರಿತ ಧಾಟಿ ಓದುಗನ ಮುಖ ಅರಳುವಂತೆ ಮಾಡುತ್ತದೆ. 350 ಪುಟಗಳ ಈ ಕಥನವು, ಪ್ರತಿಯೊಂದು ಪುಟವು ಮಾಹಿತಿ ಪೂರ್ಣವಾಗಿದೆ. ಓದುಗ ಅವರೊಟ್ಟಿಗೆ ಪ್ರವಾಸ ಕೈಗೊಂಡಂತೆ, ಮುಂದೇನು ಎಂಬ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಸಾಕಷ್ಟು ಚಿತ್ರಪಟಗಳನ್ನು ನೀಡಿ ಇನ್ನಷ್ಟು ಪೂರಕ ಮಾಹಿತಿ ನೀಡುವಂತೆ ಮಾಡಿದ್ದಾರೆ. ಅವರೇ ಹೇಳುವಂತೆ “ತುಮಕೂರಿನ ಸಣ್ಣೂರು ಗ್ರಾಮದವಳು ಖಂಡಗಳನ್ನು ಮೀರಿ ಹಾರಿದ್ದು ಕನಸಿನ ಪಯಣವೇ ಸರಿ” ಎನ್ನುವರು. ಅದು ಅಕ್ಷರಶಃ ಸತ್ಯದ ಮಾತು. ಕಾರಣ ಇಬ್ಬರೂ ಮಹಿಳೆಯರು ಖಂಡಾಂತರವನ್ನು ದಾಟಿ ತಿಂಗಳುಗಳ ಕಾವ ಸುತ್ತಿದ್ದು ಸಾಹಸವೇ ಸರಿ.

ಪ್ರವಾಸ ಕಥನ ಎಂದರೆ ಕೇವಲ ಲೇಖಕರ ಆತ್ಮರತಿ ಆಗಿರದೆ, ಅದೊಂದು ಮಾಹಿತಿ ಪೂರ್ಣ ಸೃಜನ ಬರವಣಿಗೆಯೆ ಸರಿ. ಒಳ್ಳೆಯ ಪ್ರವಾಸ ಕಥನ ಏನೆಲ್ಲಾ ಮಾಹಿತಿ ನೀಡುತ್ತದೆ ಎನ್ನುವುದಕ್ಕೆ ಈ ಕೃತಿಯೇ ಸಾಕ್ಷಿ. ನೂರಾರು ಸ್ಥಳಗಳು, ವ್ಯಕ್ತಿಗಳು, ಇತಿಹಾಸ, ಸಾಹಿತ್ಯ, ಪ್ರಕೃತಿ, ಜನಜೀವನ, ನಂಬಿಕೆ, ಆಚರಣೆ ಒಂದೇ ಎರಡೇ ಹಲವು ಮಾಹಿತಿಗಳು ಒಂದೇ ಕೃತಿಯಲ್ಲಿ ಲಭಿಸುವುದು. ಅರಿವನ್ನು ವಿಸ್ತರಿಸಿಕೊಳ್ಳುವವರಿಗೆ ಇದೊಂದು ಮಾಹಿತಿ ಕಣಜವೇ ಸರಿ. ಒಂದು ಕನಸಿನ ಪಯಣದ ಕಥನವು , ಎಲ್ಲರೂ ಪಯಣದ ಕನಸು ಕಾಣುವಂತೆ ಪ್ರೇರೇಪಿಸುವಂತ ಉತ್ತಮ ಪ್ರವಾಸ ಕಥನ ಇದಾಗಿದೆ.

‍ಲೇಖಕರು Admin

11 November, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading