-ಸಂತೆಬೆನ್ನೂರು ಫೈಜ್ನಟ್ರಾಜ್
ಮತ್ತೆದ್ದು ನಿಲ್ಲುತ್ತೇವೆ
ಮರದ ಟೊಂಗೆ ಮೇಲೆ ಕೂತ ಹಕ್ಕಿ ನಾನು
ಕಾಂಡ ಕತ್ತರಿಸಿ ನನ್ನ ದನಿ ಉಡುಗಿಸಲಾರೆ
ಹರಿವ ನದಿಯಲ್ಲಿ ಈಜೋ ಮೀನು ನಾನು
ನೀರು ಬೇರಡೆ ತಿರುಗಿಸಿ ನನ್ನ ಹಿಡಿದಿಡಲಾರೆ
ಗಿರಿಶಿಖರದಾಚೆ ಕೇಳಿಸೋ ಅಬ್ಬರದ ಕೂಗು ನಾನು
ಕೊರಳುಗಳ ಕೊಯ್ದು ದನಿಗಳ ಅಡಗಿಸಿ ಇಡಲಾರೆ
ತುತ್ತುಗಳ ಕೂಡಿಸಿ ತುತ್ತಿಟ್ಟು ಹಂಚಿ ಉಣ್ಣುವೆ ನಾನು
ಬೆವರ ಬಸಿವ ನಮ್ಮ ರಟ್ಟೆಗಳ ಎಂದಿಗೂ ಮುರಿಯಲಾರೆ
ಸತ್ತ ಸೋದರರ ಆತ್ಮಗಳ ಜೊತೆ ಕಂಬನಿ ಹರಾಜಿಗಿಟ್ಟಿರುವೆ
ನಿನ್ನ ಕುರ್ಚಿಯ ಕಾಲುಗಳಿಂದ ಎಂದಿಗೂ ಅದ ಖರೀದಿಸಲಾರೆ
ಬಿದ್ದೆವೆಂದುಕೊಂಡೆಯಾ ಈ ನೆಲಕೆ ನಮ್ಮ ತಲೆ ಕೈ ಕಾಲಿನ ರಕ್ತ ಬೀಳಲಿ
ಎದ್ದೇಳಲು ಮತ್ತೆ ಮತ್ತೆ ಬಿದ್ದೇ ಬೀಳುತ್ತೇವೆ ನೀ ಅರಿಯಲಾರೆ
ನಮ್ಮ ರಕ್ತ ನೀರಂತೆ ಕಾಣುವುದು ನಿಮ್ಮ ಪಾಲಿಗೆ ಗೊತ್ತು
ಇಡೀ ದೇಹದಿಂದ ಬಸಿದರೂ ಮತ್ತೆದ್ದು ನಿಲ್ಲುವೆವು ನೀ ನೋಡಲಾರೆ
ಮೋಡ ಚಲಿಸುತ್ತದೆ ಗಾಳಿ ಬೀಸುತ್ತದೆ ಮಳೆ ಹನಿಯುತ್ತದೆ
ಚಕ್ರ ತಿರುಗಿ ಮತ್ತೆ ನ್ಯಾಯ ತಕ್ಕಡಿ ತೂಗುವುದ ನೀ ಜೀರ್ಣಿಸಿಕೊಳ್ಳಲಾರೆ
ಕಟ್ಟು, ಕೊಲ್ಲು, ಚದುರಿಸು, ಎಲ್ಲಾ ಶಕ್ತಿ ಹರಿಸು ದೇಹಗಳ ಮೇಲೆ
ಎದೆಯೊಡ್ಡಿದ್ದೇವೆ…ಸತ್ಯ ಮಾತ್ರ ಉಳಿಯುವುದು ನೀ ತಿಳಿಯಲಾರೆ






0 Comments