ಮಡಚಿದ ಬದುಕಿನ ಹಾಳೆಯ ತುಳಿದು…

ಬಿದಲೋಟಿ ರಂಗನಾಥ್

ಕೊರಗಿ ಕರಗುತ್ತಿದ್ದಳು ಅವಳು
ಆ ಪತ್ರದ ಮೇಲೆ ಇರುವೆ ಹರಿಯುವುದ ಕಂಡು
ಮುಟ್ಟಿದರೆ ಕಾಲ್ಹೆತ್ತಿ
ಮಿಲನ ಸುಖವ ಉಂಡಂತೆ ಅಂಗಾತ ಒದ್ದಾಡಿ
ನಡೆಯುತಿಹದು ಆ ದುಂಡಕ್ಷರದ ಮೇಲೆ

ನಿದ್ದೆ ಮುರಿದು ನೋಡುತ್ತಲೇ ಇದ್ದಳು
ಇರುವೆಯ ಎದೆ ಬಗೆದು
ಗದ್ದೆಬಯಲಗುಂಟ ಕೈ ಮಿಲಾಸಿ ನಡೆದು
ಅಲ್ಲೆಲ್ಲೋ ಪೊಟರೆಯಲ್ಲಿ ಕೂತು ಆಲಿಂಗಿಸಿ
ಸೂರ್ಯನನ್ನು ಗರ್ಭದಲ್ಲಿ ಕಡೆದ ಸುಖವ

ಖಾಲಿಕೊಡದ ಮೇಲೆ ಬರೆದ ಹೆಸರನ್ನು ಹೊತ್ತು ನಡೆಯುತ್ತಿದ್ದ ಇರುವೆ
ಥಟ್ಟನೆ ನಿಂತು ಕಲಸಿದ ಅಕ್ಷರ ಜೋಡಿಸಿ
ಕೊಂಬು ಕೋಡು ತಿದ್ದಿ ವಿರಹದ ಉಸಿರೆಳೆದು
ಮತ್ತೆ ನಡೆಯುತಿತ್ತು
ಮಡಿಚಿದ ಬದುಕಿನ ಹಾಳೆಯ ತುಳಿದು…

ಅವಳು ನೋಡುತ್ತಲೇ ಇದ್ದಳು
ಇರುವೆ ಕಣ್ಣ ಕನ್ನಡಿಯಲ್ಲಿ ನರೆದ ಕೂದಲನ್ನು
ಮುಖ ಮೂತಿ ತೀಡಿ ತಿದ್ದಿಕೊಂಡು
ಭಾವದ ಚಾವಡಿಯಲಿ ಪ್ರೀತಿ ಹಾಸಿಕೊಂಡು

ಅವಳು ನೋಡುತ್ತಿದ್ದ ನೋಟದಲಿ
ಜಾತಿಬೀಜ ಕರಗಿ ಕಟ್ಟೆ ಒಡೆದು
ಮರ್ಮಾಂಗದ ಹೊಳೆಯಲಿ ತೇಲಿ
ಹೆಪ್ಪುಗಟ್ಟುತ್ತಿತ್ತು ಅವನದೇ ಚಿತ್ರ
ಇರುವೆ ಬಿಟ್ಟು ನಡೆದ ಉಸಿರಿನಲಿ…

ಮತ್ತೆ ಮತ್ತೆ ನೋಡಿದ ಇರುವೆ ನಡೆಯಲಿ
ನೂರಾರು ಬಣ್ಣ ಕಲಸಿದ
ಗೋಜಲ ಸಿಂಬಾಲಿಕ್ ಚಿತ್ರಗಳು
ಅವನದೇ ಅಂಗಿ ತೊಟ್ಟು
ಏರುಪೇರಾಗಿದ್ದ ಭಾವ ತರಂಗಗಳು

ಅವಳು ನೋಡುತ್ತಲೇ ಇದ್ದಳು
ಬದುಕಿನ ಪುಟದ ತುಟ್ಟ ತುದಿಯವರೆಗೂ
ಚಲಿಸುತ್ತಲೇ ಇತ್ತು ಇರುವೆ
ಇಡೀ ದೇಹದ ತುಂಬಾ…
ಬರೆದ ಪತ್ರದ ಸಾಲುಗಳು ಕರಗಿ
ನಕ್ಷತ್ರಗಳು ರೆಕ್ಕೆ ಬಿಚ್ಚಿ ನಡೆದು
ಉಸಿರ ಹಕ್ಕಿಗೆ ಅವನದೇ ಹೆಸರಿಟ್ಟು
ತಾನು ಹಚ್ಚಿಟ್ಟ ದೀಪದ ಬತ್ತಿ ಕ್ಷೀಣಿಸುವವರೆಗೂ.!

‍ಲೇಖಕರು avadhi

August 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: