ಕೆ ನಲ್ಲತಂಬಿ ಅನುವಾದ ಸರಣಿ- ಇಬ್ಬರು ವಾರಿಸುದಾರರು

ಮೂಲ: ಎಸ್ ರಾಮಕೃಷ್ಣನ್  

1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ.

ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಇತಿಹಾಸ, ನಾಟಕ, ಅನುವಾದ ಹೀಗೆ ಅನೇಕ  ಪ್ರಕಾರಗಳ ಬರಹಗಳಲ್ಲಿ ತೊಡಗಿಕೊಂಡಿದ್ದಾರೆ. ಇಂಗ್ಲಿಷ್ ನಲ್ಲೂ ಬರೆಯುತ್ತಾರೆ. 10 ಕಾದಂಬರಿ, 21 ಸಣ್ಣಕಥೆಗಳ ಸಂಕಲನ, ಮೂರು ನಾಟಕ, 22 ಮಕ್ಕಳ ಸಾಹಿತ್ಯ, ಅನೇಕ ಅಂಕಣ ಸಂಕಲನಗಳನ್ನು ಬರೆದಿದ್ದಾರೆ.

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಉತ್ತಮ ಕಾದಂಬರಿ ಪ್ರಶಸ್ತಿ, ಉತ್ತಮ ಪುಸ್ತಕ ಪ್ರಶಸ್ತಿ, ಠಾಗೂರ್ ಸಾಹಿತ್ಯ  ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದುವುಗಳನ್ನು ಗಳಿಸಿದ್ದಾರೆ.

ತಮಿಳಿನ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು.

ಕೆ ನಲ್ಲತಂಬಿ

21

‘ಇತಿಹಾಸದ ಶೋಕ’ ಎಂಬ ಮಾತನ್ನು ಇಂದು ನಾವು ಸುಲಭವಾಗಿ ಬಳಸುತ್ತೇವೆ. ನಮ್ಮ ಮಟ್ಟಿಗೆ ಅದು ಒಂದು ಮಾತು ಮಾತ್ರ. ಆದರೆ, ತಮ್ಮನ್ನು ಬಲಿ ಕೊಟ್ಟು ಇತಿಹಾಸದ ಶೋಕಕ್ಕೆ ಗುರಿಯಾದವರ ಬಗ್ಗೆ ನಾವು ಹೆಚ್ಚು ಅಕ್ಕರೆ ತೋರಿಸುವುದಿಲ್ಲ. 

ಅಂತಹ ಎರಡು ಘಟನೆಗಳು ನನ್ನ ಮನಸ್ಸಿನಲ್ಲಿ ಆರದ ಜ್ವಾಲೆಯಾಗಿ ಉರಿಯುತ್ತಲೇ ಇವೆ. 

ಒಂದು… ಮರುದು ಸಹೋದರರನ್ನು ಬ್ರಿಟೀಷರು ಕೊಂದು, ಪಿನಾಂಗಿಗೆ (Penang –Malaysia) ಗಡಿಪಾರು ಮಾಡಲಾದ ಚಿನ್ನಮರುದುವಿನ ಮಗ ದುರೈಸ್ವಾಮಿಯ ಜೀವನ. ಎರಡನೇಯದು… 3.3 ಕೋಟಿ ವರಾಹಗಳನ್ನು ನಷ್ಟಪರಿಹಾರ ಕೊಡುವವರೆಗೆ, ಒತ್ತೆಯಾಳುಗಳಾಗಿ ಸೆರೆಹಿಡಿಯಲಾದ ಟಿಪ್ಪುಸುಲ್ತಾನಿನ ಮಕ್ಕಳು ಅಬ್ದುಲ್ ಖಾಲಿಕ್ ಮತ್ತು ಮೊಯ್ಸುದೀನ್ ಜೀವನ. 

ಶಿಲಾಶಾಸನಗಳು ಮತ್ತು ಕೋಟೆ ಕೊತ್ತಲಗಳು ಮಾತ್ರ ಇತಿಹಾಸವನ್ನು ನೆನಪು ಮಾಡುವುದಿಲ್ಲ. ಚಿತ್ರಗಳೂ, ಸಾಹಿತ್ಯವೂ ಹಲವು ಸಮಯಗಳಲ್ಲಿ ಇತಿಹಾಸದ ಸತ್ಯಗಳನ್ನು ನಿಖರವಾಗಿ ಹೇಳತ್ತವೆ. ಟಿಪ್ಪುವಿನ ಮಕ್ಕಳನ್ನು ಕಾರನ್ವಾಲೀಸ್ (Corren wallis) ಪ್ರಭುವಿನ ಬಳಿ ಒಪ್ಪಿಸುವುದು ಎಂಬ ರಾಬರ್ಟ್ ಹೋಂ (Robert Home ) ಅವರ ಚಿತ್ರ ಇತಿಹಾಸದ ಸಾಕ್ಷಿಯಾಗಿದೆ. ರಾಬರ್ಟ್ ಹೋಂ ಇಂಗ್ಲೇಂಡಿನಲ್ಲಿ ಹುಟ್ಟಿದ ಚಿತ್ರ ಕಲಾವಿದ. 1791 ರಲ್ಲಿ ಕಾರನ್ವಾಲೀಸ್ ಜತೆಯಲ್ಲಿಯೇ ಪ್ರಯಾಣ ಮಾಡಿ, ಅವರ ಪ್ರಮುಖ ಘಟನೆಗಳನ್ನು ಚಿತ್ರವಾಗಿ ಬರೆಯಲು ರಾಬರ್ಟ್ ಹೋಂ-ಅನ್ನು ನೇಮಕಮಾಡಲಾಯಿತು. ಆದ್ದರಿಂದ, ಸೈನ್ಯ ಹೋಗುವ ಕಡೆಗಳಿಗೆಲ್ಲಾ ರಾಬರ್ಟ್ ಹೋಂ ಜತೆಯಲ್ಲಿಯೇ ಹೋಗಿ, ಚಿತ್ರಗಳನ್ನು ಬಿಡಿಸುತ್ತಿದ್ದರು. 

ಮೂರನೇಯ ಮೈಸೂರು ಯುದ್ಧದಲ್ಲಿ ಬ್ರಿಟೀಷರ ಬಳಿ ಟಿಪ್ಪು ಸೋತುಹೋಗಲು, ಅದಕ್ಕೆ ನಷ್ಟ ಪರಿಹಾರವಾಗಿ ಅವನ ರಾಜ್ಯದ ಒಂದು ಭಾಗವನ್ನು 3.3 ಕೋಟಿ ವರಾಹ ಹಣವನ್ನೂ ಕೊಡುವುದಾಗಿ ಒಪ್ಪಂದ ಮಾಡಿಕೊಳ್ಳಲಾಯಿತು. ಆ ಹಣವನ್ನು ತುಂಬಿಕೊಡುವವರೆಗೆ ಏನನ್ನಾದರೂ ಒತ್ತೆ ಇಡಬೇಕೆಂದ ಕಾರನ್ವಾಲೀಸ್, ಸಾಲವನ್ನು ತೀರಿಸುವವರೆಗೆ ಟಿಪ್ಪುವಿನ ಮಕ್ಕಳನ್ನು ಬ್ರಿಟಿಷ್ ರ ಸರಕಾರ ಸೆರೆಹಿಡಿದು ಇಟ್ಟುಕೊಳ್ಳಬೇಕೆಂದು ಅಪ್ಪಣೆ ಮಾಡಿದ. ಬೇರೆ ದಾರಿ ಕಾಣದೆ, ಟಿಪ್ಪುಸುಲ್ತಾನ್ ಅದಕ್ಕೆ ಒಪ್ಪಿದ. 1792 ಫೆಬ್ರವರಿ 26ನೇಯ ತಾರೀಕು ಮಾತುಕತೆ ನಡೆಸಿ ಮಾಡಿಕೊಂಡ ಒಪ್ಪಂದ, ಮಾರ್ಚ್ 19ನೇಯ ತಾರೀಕು ಸಹಿ ಹಾಕಲಾಯಿತು. ಅದರಂತೆ, ನಿಜಾಂ, ಮರಾಠರು  ಮತ್ತು ಬ್ರಿಟಿಷ್ ರು ಮೂವರಿಗೂ ಮೈಸೂರು ರಾಜ್ಯದಲ್ಲಿ ಅರ್ಧವನ್ನು ಹಂಚಿಕೊಡಲಾಯಿತು. 

ಮೊದಲ ಕಂತಾಗಿ 1 ಕೋಟಿ 65 ಲಕ್ಷ ವರಾಹಗಳನ್ನೂ, 10 ವರ್ಷ ವಯಸ್ಸಿನ ಅಬ್ದುಲ್ ಖಾಲಿಕ್ ಸುಲ್ತಾನ್, 8 ವರ್ಷ ವಯಸ್ಸಿನ ಮೊಯ್ಸುದೀನ್  ಸುಲ್ತಾನ್ ಇಬ್ಬರನ್ನೂ ಬ್ರಿಟಿಷ್ ಸರಕಾರ ಒತ್ತೆ ಆಳುಗಳಾಗಿ ಪಡೆಯಿತು. ಉಳಿದ 1 ಕೋಟಿ 65 ಲಕ್ಷ ವರಾಹವನ್ನು ಮೂರು ಕಂತಿನಲ್ಲಿ ಸಲ್ಲಿಸಬೇಕೆಂದು ಒಪ್ಪಂದ ಮಾಡಿಕೊಳ್ಳಲಾಯಿತು. 

ಈ ಒಪ್ಪಂದದ ಕಾರಣ ಟಿಪ್ಪು ಬಳಿ ಇದ್ದ ದಿಂಡುಗಲ್, ಕೋಯಂಬತ್ತೂರ್, ಸತ್ಯಮಂಗಲಂ, ತೇನ್ಕಣಿಕೋಟ್ಟೈ, ಸೇಲಂ, ಕೃಷ್ಣ ನದಿಯ ದಂಡೆಯ ಪ್ರದೇಶಗಳು ಬ್ರಿಟಿಷ್ ರ ವಶವಾಯಿತು.  

ಒತ್ತೆ ಕೈದಿಗಳಾಗಿ ಹೋದ ಟಿಪ್ಪುವಿನ ಇಬ್ಬರು ಮಕ್ಕಳನ್ನು ಮದರಾಸ್ ಕೋಟೆಯಲ್ಲಿ ಇರಿಸಲಾಯಿತು. ‘ರಾಜಕುಮಾರರಂತೆ ಅವರನ್ನು ನೋಡಿಕೊಳ್ಳುತ್ತೆನೆ’ ಎಂದು ಕಾರನ್ವಾಲೀಸ ಮಾತುಕೊಟ್ಟಿದ್ದ. ಆದರೆ ಹಾಗೆ ನಡೆಸಿಕೊಳ್ಳಲಿಲ್ಲ. ಆದರೆ, ಅವರಿಗೆ ಬ್ರಿಟೀಷ್ ಪ್ರಭುಗಳಂತೆ ಆಹಾರ, ಉಡುಗೆ ತೊಡಿಗೆ, ಸಂಸ್ಕೃತಿ, ನಡತೆಗಳನ್ನು ಕಲಿಸಿಕೊಡಲಾಯಿತು. ಬ್ರಿಟೀಷರ ಮೇಲೆ ಅಭಿಮಾನ ಹುಟ್ಟುವಂತೆ ಭೋಧಿಸಲಾಯಿತು. ಅದೂ ಸಹ ಒಂದು ರೀತಿಯ ರಾಜಕೀಯ ಕುತಂತ್ರವೇ! 

ಮದರಾಸ್ ಕೋಟೆಯಲ್ಲಿ ಎರಡು ವರ್ಷಗಳು ಗೃಹ ಬಂಧನದಲ್ಲಿ ಅವರನ್ನು ಬ್ರಿಟಿಷ್ ಆಡಳಿತ ಇಟ್ಟಿತ್ತು. 1784 ಫಿಬ್ರವರಿ 29ನೇಯ ತಾರೀಕು ದೇವನಹಳ್ಳಿಯಲ್ಲಿ ಮೂರನೇಯ ಕಂತನ್ನು ಸಲ್ಲಿಸಿ ತನ್ನ ಮಕ್ಕಳನ್ನು ಟಿಪ್ಪು ಮರಳಿ ಪಡೆದುಕೊಂಡ. 

ಅಬ್ದುಲ್ ಖಾಲಿಕ್, ಮೊಯ್ಸುದ್ದೀನ್ ಮನೆಗೆ ಹಿಂತಿರುಗಿದ ಸಂತೋಷವನ್ನು ಸಂಭ್ರಮವಾಗಿ ಆಚರಿಸಿದ. ಎರಡು ವರ್ಷಗಳಲ್ಲಿ ತನ್ನ ಮಕ್ಕಳು ತಮ್ಮ ಮತದ ನಂಬಿಕೆಗಳನ್ನು ಕೈಬಿಟ್ಟದ್ದನ್ನು ಕಂಡ ಟಿಪ್ಪುವಿಗೆ ನೋವಾಯಿತು. 

ಬ್ರಿಟಿಷ್ ಸಂಪ್ರದಾಯದಲ್ಲಿ ಹೆಚ್ಚಿನ ಒಲವು ತೋರಿದ ತನ್ನ ಮಕ್ಕಳನ್ನು ತಿದ್ದುವುದಕ್ಕೆ ಉನ್ನತ ಶಿಕ್ಷಣಕ್ಕಾಗಿ ಫ್ರಾನ್ಸಿಗೆ ಕಳುಹಿಸಿಕೊಟ್ಟ, ಶಿಕ್ಷಣ ಮುಗಿಸಿ ಹಿಂತಿರುಗಿದ ಅಬ್ದುಲ್ ಖಾಲಿಕ್ ಮುಂದೆ ಆರಕ್ಕಲ್ ಬೀವಿಯ ಮಗಳನ್ನು ಮದುವೆ ಮಾಡಿಕೊಂಡ. ಟಿಪ್ಪುವಿನ ನಿಧನದ ನಂತರ, ಅವನ ಮಕ್ಕಳೆಲ್ಲರನ್ನೂ ಸೆರೆಹಿಡಿದು ವೇಲೂರ್ ಜೈಲಿನಲ್ಲಿ ಇಡಲಾಯಿತು. 

ಅಲ್ಲಿ ಅವರು ರಾಜಕೀಯ ಕೈದಿಗಳಾಗಿ ನಡೆಸಲಾಯಿತು. ರಾಜ ಮನೆತನದಲ್ಲಿ ಸಂಚು ಮಾಡಿ ಒಬ್ಬರನ್ನೊಬ್ಬರು ದ್ವೇಷಿಸುವಂತೆ ಮಾಡಿತು ಬ್ರಿಟಿಷ್ ಸರಕಾರ. ವೆಲ್ಲೂರ್ ಸೆರೆಮನೆಯಲ್ಲಿ ಉಂಟಾದ ಸ್ವಾತಂತ್ರ್ಯ  ಹೋರಾಟದ ಕಾರಣ, ಟಿಪ್ಪುವಿನ ಮಕ್ಕಳನ್ನು ಸ್ಥಳಾಂತರಿಸಿ ಕಲ್ಕತ್ತಗೆ ಕರೆದುಹೋದರು. ಅಲ್ಲಿ ಅವರನ್ನು ಬ್ರಿಟೀಷರು ಕಟ್ಟಿದ ಕಾಲನಿಯಲ್ಲಿ ಉಳಿಸಿ, ಸರಕಾರ ನೀಡಿದ ಸಹಾಯ ಧನದಿಂದ ಜೀವನ ನಡೆಸಿ, ಕೊನೆಗೆ ಮಡಿದರು. ಇಂದು, ಟಿಪ್ಪುವಿನ ಸಂತತಿಯ ಒಬ್ಬರು ಕಲ್ಕತ್ತಾದಲ್ಲಿ ಆಟೊಮೊಬೈಲ್ ಅಂಗಡಿ ನಡೆಸುತ್ತಿದ್ದಾರೆ ಎಂಬ ಸುದ್ಧಿ ಒಂದು ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಬ್ರಿಟಿಷ್ ರನ್ನು ಎದುರಿಸಿ ಹೋರಾಡಿ ಆಳಿದ ಟಿಪ್ಪುವಿನ ಸಂತಾನ ಗುರುತಿಲ್ಲದವರಾಗಿ ಕಾಲದಲ್ಲಿ ಕರಗಿಹೋದರು. ಅದನ್ನೇ ಬ್ರಿಟಿಷ್ ಸರಕಾರವೂ ಬಯಸಿತು. ಅದನ್ನು ಸಾಧಸಿಯೂ ತೋರಿತು. ಒತ್ತೆ ಆಳುಗಳಾಗಿ ಎರಡು ವರ್ಷ ಬದುಕಿದ ಆ ಮಕ್ಕಳ ಮನಸ್ಥಿತಿ ಹೇಗಿದ್ದಿರಬಹುದು? ಸ್ವಂತ ಮಕ್ಕಳನ್ನು ಒತ್ತೆ ಇಟ್ಟ ಟಿಪ್ಪುವಿನ ಮನಸ್ಥಿತಿ ಹೇಗಿದ್ದಿರಬಹುದು? ಸ್ವಾತಂತ್ರ ಇತಿಹಾಸದ ಕುದಿತದಲ್ಲಿ ಸ್ವಂತ ದುಃಖಗಳು ಏನೂ ಇಲ್ಲದಾಗುತ್ತವೆ ಎಂಬುದು ನಿಜವೇ? ಬ್ರಿಟಿಷ್ ಅಧಿಕಾರದ ಮೇಲೆ ಟಿಪ್ಪುವಿಗೆ ತಡೆಯಲಾಗದ ಕೋಪ ಉಂಟಾಗಲು ತನ್ನ ಮಕ್ಕಳನ್ನು ಸೆರೆಹಿಡಿದದ್ದು ಪ್ರಮುಖವಾದ ಕಾರಣ ಎಂಬುದರಲ್ಲಿ ಸಂಶಯವಿಲ್ಲ. 

ಟಿಪ್ಪುಸುಲ್ತಾನಿಗೆ ಬಹಳ ಹೆಂಡತಿಯರಿದ್ದರು. ಅವನ ಮದಡಿಯರಲ್ಲಿ ಐರೋಪಿಯನ್ನರು, ತುರ್ಕಿ, ಜಾರ್ಜಿಯಾ ಮತ್ತು ಪರ್ಷಿಯದ ಹೆಣ್ಣುಗಳೂ ಇದ್ದರು. ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಂದು ಹಲವಾರು ಮತದವರೂ ಇದ್ದರು. ಅವನ ಅಧಿಕಾರಪೂರಕವಾದ ಮಡದಿಯರಾಗಿ ಅಂಗೀಕರಿಸಲ್ಪಟ್ಟವರು ಋಕ್ಕೈಯ ಬಾನು, ಆರ್ಕಾಡ್ ರೋಷನ್ ಬೇಗಮ್, ಪುರತ್ತಿ ಬೇಗಮ್, ಕತೀಜಾ ಜಮಾನಿ ಬೇಗಮ್ ಮುಂತಾದ ನಾಲ್ವರು ಮಾತ್ರವೇ. 

ಟಿಪ್ಪುವಿಗೆ ಫಥೇ ಹೈದರ್, ಅಬ್ದುಲ್ ಕಾಲಿಕ್, ಮೊಹಿದ್ದೀನ್, ಮೊಯಿಸುದ್ದೀನ್, ಮಹಮ್ಮದ್ ಯಾಸೀನ್, ಮಹಮ್ಮದ್ ಸುಬಾನ್, ಶರೂಕ್ಕಿಲ್ಲಾಹ್, ಸಿರುದ್ದೀನ್, ಗುಲಾಂ ಮಹಮ್ಮದ್, ಗುಲಾಂ ಹಮೀದ್, ಮುನಿರುದ್ದೀನ್, ಜಮೀಯುದ್ದೀನ್ ಎಂಬ ಹನ್ನೆರಡು ಗಂಡು ಮಕ್ಕಳು. ಬೀವಿ ಬೇಗಮ್, ಅಸ್ಮುನ್ನೀಸಾ ಬೇಗಮ್, ಉಮರುನ್ನೀಸ ಬೇಗಮ್, ಕುಲುಮಾ ಬೇಗಮ್, ಕತೀಸ ಬೇಗಮ್ ಎಂದು ಎಂಟು ಹೆಣ್ಣು ಮಕ್ಕಳು. 

ಅವನ ಸೈನ್ಯದಲ್ಲಿ 3,20,000 ವೀರರಿದ್ದರು. ಆನೆಗಳು 900, ಒಂಟೆಗಳು 6,000, ಅರಬ್ ಕುದುರೆಗಳು 25,000, ಮೂರು ಲಕ್ಷ ತುಪಾಕಿಗಳು, 2,24,000 ಖಡ್ಗಗಳು, 929 ಫಿರಂಗಿಗಳು ಮತ್ತು ಹೇರಳವಾದ ಸಿಡಿಮದ್ದುಗಳು ಇದ್ದವು ಎನ್ನುತ್ತದೆ ಒಂದು ಅಂಕಿ ಅಂಶ. ಸೈನ್ಯದಲ್ಲಿ ರಾಕೆಟ್ ತಂತ್ರಜ್ಞಾನವನ್ನು ಬಳಸಿದವರಲ್ಲಿ ಟಿಪ್ಪುಸುಲ್ತಾನ್ ಮುಂಚೂಣಿಯಲ್ಲಿದ್ದನು. 

ಮೈಸೂರು ಸಾಮ್ರಾಜ್ಯದಲ್ಲಿ ಹಿಂದುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕಡಿಮೆ ಸಂಖ್ಯೆಯಲ್ಲಿಯೇ ಮುಸಲ್ಮಾನರಿದ್ದರು. ಒಂದು ವರ್ಷದಲ್ಲಿ ಹಿಂದು ದೇವಸ್ಥಾನಗಳಿಗೆ, ಧರ್ಮ ಸಂಸ್ಥೆಗಳಿಗೆ 1,93,959 ವರಾಹಗಳನ್ನೂ, ಬ್ರಾಹ್ಮಣ ಮಠಗಳಿಗೆ 20,000 ವರಾಹಗಳನ್ನೂ, ಮುಸ್ಲಿಂ ಸಂಸ್ಥೆಗಳಿಗೆ 20,000 ವರಾಹಗಳನ್ನೂ, ಒಟ್ಟು 2,33,959 ವರಾಹಗಳನ್ನು, ಸರಕಾರಿ ಖಜಾನೆಯಿದ ನೀಡಲ್ಪಟ್ಟಿತು. ಇದು, ಅವನ ಮತ ಏಕೈಕತೆಯ ಗುರುತಿನಂತೆ ಇದೆ. 

ಮಲಬಾರ್ ಪ್ರದೇಶದಲ್ಲಿ ಸ್ತ್ರೀಯರು ರವಿಕೆ ತೊಡದ ಪದ್ಧತಿಯನ್ನು ಬದಲಾಯಿಸಿ, ಅವರು ಮೇಲಂಗಿ ತೊಡುವ ಪದ್ಧತಿಯನ್ನು ತಂದನು. ಕೊಡಗು ಪ್ರದೇಶದಲ್ಲಿ ಒಂದು ಹೆಣ್ಣನ್ನು ಹಲವು ಗಂಡಸರು ಮದುವೆಯಾಗುವ ಪದ್ಧತಿಯನ್ನು ತಡೆಯುವ ಕಾನೂನನ್ನು ಮಾಡಿದನು. ದೇವಸ್ಥಾನಗಳಲ್ಲಿ ದೇವದಾಸಿ ಪದ್ಧತಿಯನ್ನು ಅಳಿಸಲು ಕಾನೂನು ಮಾಡಿದ್ದಲ್ಲದೆ, ಮದ್ಯಪಾನವನ್ನು ನಿಷೇಧಿಸಿ, ಅದನ್ನು ತೀವ್ರವಾಗಿ ಚಾಲನೆಗೆ ತಂದನು. 

1750 ನವಂಬರ್ 20ರಲ್ಲಿ ಹೈದರಾಲಿ – ಫಕ್ರುನ್ನಿಸಾ ದಂಪತಿಯರಿಗೆ ಮಗನಾಗಿ ಹುಟ್ಟಿದ ಟಿಪ್ಪುಸುಲ್ತಾನ್, ತನ್ನ 17ನೇಯ ವಯಸ್ಸಿನಲ್ಲಿ ಸೈನ್ಯದ ನೇತೃತ್ವ ವಹಿಸಿ, ವಾಣಿಯಂಬಾಡಿ ಯುದ್ಧದಲ್ಲಿ ಜೋಸಫ್ ಸ್ಮಿತ್ ನೇತೃತ್ವದಲ್ಲಿ ಹೋರಾಡಿದ ಬ್ರಿಟೀಷ್ ಸೈನ್ಯವನ್ನು ಗೆದ್ದನು. 1782 ಡಿಸಂಬರ್ 6ರಲ್ಲಿ ಹೈದರಾಲಿಯ ಮರಣದ ನಂತರ, 1782 ಡಿಸಂಬರ್ 26ರಲ್ಲಿ ತನ್ನ 32ನೇಯ ವಯಸ್ಸಿನಲ್ಲಿ ಟಿಪ್ಪುಸುಲ್ತಾನ್ ಮೈಸೂರು ಅರಸನಾದನು. ಪಶ್ಚಿಮದ ಸಮುದ್ರ ತೀರದಿಂದ ಬ್ರಿಟೀಷರನ್ನು ಓಡಿಸಬೇಕೆಂದು ಶಪಥ ಮಾಡಿ, ಫ್ರೆಂಚ್ ಸೈನ್ಯವನ್ನು ಸೇರಿಸಿಕೊಂಡು ಟಿಪ್ಪುಸುಲ್ತಾನ್ ಹೋರಾಡಿದನು. 

ಆದರೇ, ಫ್ರೆಂಚ್ ರಾಜ 16ನೇಯ ಲೂಯಿ, ಬ್ರಿಟನ್ ಜತೆಯಲ್ಲಿ ಸಂಧಿಮಾಡಿಕೊಂಡದ್ದರಿಂದ, ಟಿಪ್ಪುಸುಲ್ತಾನ್ ನಿರ್ಗತಿಗೆ ಒಳಗಾದನು. 1784ನೇಯ ಇಸವಿ ಮೈಸೂರು ಯುದ್ಧದಲ್ಲಿ ಬ್ರಿಟಿಷ್ ದಳಪತಿಯೊಳಗೊಂಡ 4000 ಸಿಪಾಯಿಗಳನ್ನು ಟಿಪ್ಪುವಿನಿಂದ ಯುದ್ದದ ಕೈದಿಗಳಾಗಿ ಸೆರೆಹಿಡಿದು, ನಂತರ ಬಿಡುಗಡೆ ಮಾಡಿದನು. 

ಕ್ರಿ.ಶ. 1790 ರಿಂದ 1792ರ ವರೆಗೆ ನಡೆದ ಮೂರನೇಯ ಮೈಸೂರು ಯುದ್ದದಲ್ಲಿ, ಜನರಲ್ ಕಾರನ್ ವಾಲಿಸ್ ಟಿಪ್ಪುಸುಲ್ತಾನಿಗೆ ವಿರುದ್ಧವಾಗಿ ಹೋರಾಡಿದಾಗ ಆರ್ಕಾಡಿನ ನವಾಬ್, ತೊಂಡೈಮಾನ್, ಹೈದರಾಬಾದ್ ನಿಜಾಮ್, ಮೈಸೂರು ರಾಜ್ಯದ ಹಿಂದಿನ ಪಾಳೆಯಗಾರರು ಬ್ರಿಟಿಷ್ ರೊಂದಿಗೆ ಸೇರಿಕೊಂಡರು. ಅದರಿಂದ ಕಿಂಚಿತ್ತು ವಿಚಲಿತನಾಗದ ಟಿಪ್ಪು ವೈರಿಗಳನ್ನು ಧೈರ್ಯದಿಂದ ಎದುರಿಸಿದನು. ಆದರೇ, ಯುದ್ದದ ಅಂತ್ಯದಲ್ಲಿ ಸೋತುಹೋದನು. ನಷ್ಟಪರಿಹಾರ ಕೊಡಬೇಕಾದ ಕಡ್ಡಾಯ ಉಂಟಾಯಿತು. 

| ಇನ್ನು ನಾಳೆಗೆ |

‍ಲೇಖಕರು Admin

August 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: