ಏನೆಂದು ಹೆಸರಿಡಲಿ…

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮೆರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಗಂಟೆ ಎಂಟು ದಾಟಿತ್ತು. ಜೈಸಲ್ಮೇರಿನ ಆ ಸಾರ್ವಜನಿಕ ಪಾರ್ಕಿನಲ್ಲಿ ನನ್ನನ್ನು ಇಳಿಸಿ ಮಹೇಶ ಕಾರಿಗೆ ಪೆಟ್ರೋಲ್‌ ಹಾಕಿಸಿ ಬರಲು ಹೋದ. ಅಲ್ಲಿಂದ ಜೈಸಲ್ಮೇರ್‌ ಕೋಟೆಯ ಹಿಂಬದಿ ಹೊಂಬಣ್ಣದಲ್ಲಿ ಮಿಂದೆದ್ದಂತೆ ಚಂದ ಕಾಣುತ್ತಿತ್ತು. ಮೊದಲೇ ಗೋಲ್ಡನ್‌ ಸಿಟಿ! ತನ್ನ ಅನ್ವರ್ಥದಂತೆ, ರಾತ್ರಿಯ ಬೆಳಕಿನಲ್ಲಿ ಮರಳುಗಾಡಿನ ಹೊಂಬಣ್ಣ ಇನ್ನೂ ರಂಗಾಗಿ ಮನೋಹರವಾಗಿ ಕಾಣುವುದನ್ನು ಕ್ಯಾಮರಾದಲ್ಲಿ ಸೆರೆಹಿಡಿಯಬೇಕೆಂದು, ಹಾಗೂ ಆ ಪಾರ್ಕಿನಿಂದ ಒಳ್ಳೆ ಫ್ರೇಂ ಸಿಗುತ್ತದೆಂದು ಬೆಳಿಗ್ಗೆ ಆ ದಾರಿಯಲ್ಲಾಗಿ ಸಾಗುವಾಗ ಅಂದಾಜಿಸಿದ್ದರಿಂದ ಅಲ್ಲಿ ಇಳಿದಿದ್ದೆ.

ನಾನು ಕ್ಯಾಮರಾ ಕೈಯಲ್ಲಿ ಹಿಡಿದು, ಒಂದೆರಡು ಕ್ಲಿಕ್ಕಿಸಿ, ಯಾಕೋ ತೃಪ್ತಿಯಾಗದೆ, ಎಲ್ಲಿಂದ ತೆಗೆದರೆ ಸರಿಯಿದ್ದೀತು ಎಂದು ಲೆಕ್ಕಾಚಾರ ಹಾಕುತ್ತಾ, ಯಾವುದೋ ಎತ್ತರದ ಜಾಗದಿಂದ ಎಲ್ಲರೂ ಜೈಸಲ್ಮೇರ್‌ ಫೋಟೋ ತೆಗೆಯುತ್ತಾರಿರಬೇಕು ಎಂದುಕೊಳ್ಳುತ್ತಾ ಸುತ್ತಲು ಎತ್ತರದ ಕಟ್ಟಡವೇನಾದರೂ ಇದೆಯಾ ಎಂದು ನಿಂತಲ್ಲಿಂದಲೇ ಭೂಮಿ ತಿರುಗಿದ ಹಾಗೆ ಒಂದು ಸುತ್ತು ಹೊಡೆದು ನೋಡಿದೆ. ಅಷ್ಟರಲ್ಲಿ ದೂರದಲ್ಲಿ ಅವರೊಬ್ಬರು ನಿಂತು ನನ್ನನ್ನೇ ನೋಡುವುದು ಕಾಣಿಸಿತು.

ʻಅರೆ, ಇವರ್ಯಾಕಪ್ಪಾ ನಿಂತು ಹೀಗೆ ನೋಡುತ್ತಿದ್ದಾರೆʼ ಎಂದು ಅನಿಸಿದರೂ ನಾನು ನನ್ನ ಕೆಲಸದ ಕಡೆ ಗಮನ ಹರಿಸಿ, ಅನುಮಾನ ಬಂದು ಮತ್ತೆ ನೋಡಿದರೆ, ಆತ ಇನ್ನೂ ಅಲ್ಲೇ ನಿಂತು ನೋಡುತ್ತಿದ್ದಾರೆ! ʻಅರೆ, ಇದೊಳ್ಳೆ ಕಥೆಯಾಯ್ತಲ್ಲ. ಈ ಮನುಷ್ಯನಿಗೇನಾಯ್ತು, ಅದೂ ಇಷ್ಟೊತ್ತಲ್ಲಿ ಹಿಂಗೆ ನೋಡ್ತಾ ಇದ್ದಾರಲ್ಲಾʼ ಅಂದುಕೊಳ್ಳುತ್ತಾ ನನ್ನ ಕೆಲಸಕ್ಕೆ ಮರಳುವಾಗಲೇ, ಆತ ಸೀದಾ ನನ್ನೆಡೆಗೆ ಬರುತ್ತಿರುವುದು ಕಾಣಿಸಿತು.

ʻಕೋಟೆ ಫೋಟೋ ತೆಗೀತಿದೀರಾ?ʼ ಅಂದರು. ಹುಂ ಎಂದೆ ಚುಟುಕಾಗಿ. ʻಇಲ್ಲಿಂದ ತೆಗೆಯೋದಲ್ಲ, ಚೆಂದದ ಫೋಟೋ ತೆಗೆಯಲು ಜೈಸಲ್ಮೇರಿನಲ್ಲಿ ಬಹಳ ಜಾಗಗಳಿವೆʼ ಎಂದರು. ಆತನ ಅತಿ ಉತ್ಸಾಹ ನನ್ನಲ್ಲಿ ನಿರುತ್ಸಾಹ ತರಿಸಿದ್ದಕ್ಕೆ ʻಒಕೆʼ ಎಂದಷ್ಟೆ ಉತ್ತರಿಸಿದೆ. ನನ್ನ ನಿರ್ಲಕ್ಷ್ಯ ಆತನ ಮಾತನ್ನು ನಿಲ್ಲಿಸುವ ಲಕ್ಷಣ ಕಾಣಿಸಲಿಲ್ಲ. ಈ ಕೋಟೆಯ ಜೊತೆಗೆ ಇಡೀ ಜೈಸಲ್ಮೇರನ್ನು ತೆಗೆಯಬಹುದಾದ ಜಾಗ ಇದೆ. ನೀವು ಈಗ್ಲೇ ಹೋದ್ರೆ, ರಾತ್ರಿ ದೃಶ್ಯ ಅದ್ಭುತವಾಗಿ ಕಾಣುತ್ತದೆ ಅಲ್ಲಿಂದ. ಅಲ್ಲಿ ಸ್ವಲ್ಪ ಕತ್ತಲಿದೆ. ನಿಮಗೆ ಕಷ್ಟ. ಹುಷಾರಾಗಿ ಹೋಗಬೇಕು, ನೀವು ಹೂಂ ಅಂದರೆ ಕರ್ಕೊಂಡು ಹೋಗುವೆʼ ಎಂದರು.

ʻಎಲಾ ಇವರಾ! ಸ್ವಲ್ಪ ಅತಿಯಾಯ್ತಲ್ಲ ಇವ್ರದ್ದುʼ ಅಂತನಿಸಿ, ನೋಡಿದ್ರೆ ಸಭ್ಯ ಮಧ್ಯವಯಸ್ಕ ಹೀಗೆಲ್ಲಾ ಮಾತಾಡೋದಾ ಅಂತ ಸಿಟ್ಟೂ ಕೂಡಾ ಬಂದು, ಆಮೇಲೆ ಸ್ವಲ್ಪ ಸಮಾಧಾನ ತಂದುಕೊಂಡು, ʻಫ್ಯಾಮಿಲಿ ಇದೆ, ಇನ್ನೇನು ಬರ್ತಾರೆ, ಜೊತೆಗೇ ಹೋಗ್ತೀವಿ, ಜಾಗದ ಹೆಸರು ಹೇಳಿ ಸಾಕು. ನಾವೇ ಹುಡುಕ್ಕೊಂಡು ಹೋಗ್ತೀವಿ. ನೀವ್ಯಾಕೆ ತೊಂದ್ರೆ ತೆಗೋತೀರಿʼ ಎಂದೆ.

ʻಇದ್ರಲ್ಲಿ ತೊಂದ್ರೆ ಏನ್ಬಂತು? ಫೋಟೋಗ್ರಾಫರುಗಳಿಗೆ ಸಹಾಯ ಮಾಡೋದು ನನ್ನ ಅಭ್ಯಾಸ. ನೀವು ಇಲ್ಲಿಂದ ನಿಂತು ಫೋಟೋ ತೆಗೀವಾಗಲೇ ಅರ್ಥವಾಯ್ತು ನಿಮ್ಮ ಉದ್ದೇಶ. ಅದ್ಕಾಗಿ ಬಂದು ಹೇಳುವ ಅಂತನಿಸಿತುʼ ಎಂದರು. ʻನೋಡಿ, ಇಲ್ಲಿಗೆ ಯಾರೇ ಫೋಟೋಗ್ರಾಫರು ಬಂದರೂ ನನ್ನನ್ನು ಸಂಪರ್ಕಿಸದೆ ಹೋಗಲ್ಲ. ನಾನೂ ಕೂಡಾ ಅವರ ಜೊತೆ ನಾಲ್ಕಾರು ದಿನ ಸುತ್ತಿ ಅವರಿಗೆ ಜಾಗಗಳನ್ನೆಲ್ಲ ತೋರಿಸಿ ಖುಷಿ ಪಡುತ್ತೇನೆ. ಹಾಂ, ಅಂದಹಾಗೆ, ಇದಕ್ಕೆ ನಾನು ಚಾರ್ಜು ಮಾಡುತ್ತೇನೆ ಅಂದ್ಕೋಬೇಡಿ. ದುಡ್ಡಿಗಾಗಿ ಮಾಡೋದಲ್ಲ. ನನ್ನ ಸಂತೋಷಕ್ಕಾಗಿʼ ಎಂದು ದೊಡ್ಡ ನಗೆ ನಕ್ಕರು. ನನಗೆ ನಗು ಬರಲಿಲ್ಲ.

ಅಯ್ಯೋ ಈ ಮನುಷ್ಯ ಗಂಟು ಬಿದ್ದನಲ್ಲಪ್ಪಾ! ಈತನನ್ನು ನಂಬೋದೋ ಬಿಡೋದೋ ಅರ್ಥವಾಗ್ತಿಲ್ವಲ್ಲಾ ಎಂಬ ಲೆಕ್ಕಾಚಾರದಲ್ಲಿ ನಾನು ಹೆಚ್ಚು ಪ್ರಶ್ನೆ ಹಾಕದೆ ಸುಮ್ಮನೆ ತಲೆಯಲ್ಲಾಡಿಸುತ್ತಾ ನಿಂತೆ. ನನ್ನ ಕಡಿಮೆ ಮಾತು ಅವರನ್ನೇನೂ ಕುಗ್ಗಿಸಿದಂತೆ ಅನಿಸಲಿಲ್ಲ. ಅವರು ಇನ್ನೂ ಹೇಳುತ್ತಾ ಹೋದರು!

ʻನೋಡಿ. ಮೊನ್ನೆ ತಾನೇ ನಾಲ್ಕು ಜನ ಫೋಟೋಗ್ರಾಫರುಗಳು ಬಂದಿದ್ದರು. ಅವರನ್ನು ಇಡೀ ಜೈಸಲ್ಮೇರು ಸುತ್ತಿಸಿದೆ. ನೀವಿನ್ನೂ ಗಡೀಸರ್‌ ಸರೋವರದ ಬಳಿ ಹೋಗಿಲ್ವಾ? ಅಲ್ಲಿ ಸೂರ್ಯೋದಯ ಸಮಯದಲ್ಲಿ ಹೋದ್ರೆ ಭರ್ಜರಿ ಫೋಟೋಗಳು ಸಿಗ್ತವೆ. ನೀವು ಹೂಂ ಅಂದ್ರೆ, ನಾಳೆ ಕರ್ಕೊಂಡು ಹೋಗುವೆ. ಇವತ್ತು ಆ ಬೆಟ್ಟದ ಮೇಲಿನ ದೇವಸ್ಥಾನಕ್ಕೆ ಹೋದ್ರೆ ಅಲ್ಲಿಂದ ಅದ್ಭುತ ಚಿತ್ರ ಬರ್ತವೆ ನೋಡಿ ಎಂದರು.

ತಲೆಯಲ್ಲಿ ಒಂದರ ಮೇಲೊಂದು ಮಡಕೆ ಹೊತ್ತು, ಮುಖಕ್ಕೆ ಸೆರಗು ಹೊದ್ದ ಸಾಂಪ್ರದಾಯಿಕ ರಾಜಸ್ಥಾನಿ ದಿರಿಸಿನಲ್ಲಿ ಮರುಳುಗಾಡಿನಲ್ಲಿ ನಡೆವ ಹೆಂಗಸರ ಫೋಟೋ ತೆಗೀಬೇಕಾ ಹೇಳಿ? ನಿಮ್ಗೆ ಯಾವ ಥರದ ಫೋಟೋ ಬೇಕು ಹೇಳಿ. ಅದಕ್ಕೆಲ್ಲ ಜನ ಸಿಗ್ತಾರೆʼ ಅಂದರು. ʻರಾಜಸ್ಥಾನ ಫೋಟೋಗ್ರಫಿ ಅಂತ ಗೂಗಲ್‌ ಸರ್ಚ್‌ ಕೊಟ್ಟರೆ ಸಾಕು, ಮೊಗೆಮೊಗೆದು ಬೀಳುವ ಇಂತಹ ಚಂದ ಚಂದದ ಚಿತ್ರಗಳು ನೆನಪಾಗಿ, ಓಹೋ, ಅಂಥ ಫೋಟೋಗಳಿಗಾಗಿ ಪ್ರೊಫೆಷನಲ್‌ ಫೋಟೋಗ್ರಾಫರುಗಳು ಹೀಗೆಲ್ಲ ಒದ್ದಾಡ್ತಾರಾ, ಇಂಟರೆಸ್ಟಿಂಗ್‌! ಅಂತನಿಸಿದರೂ, ʻಅದೆಲ್ಲ ಬೇಡ ಬಿಡಿ, ನಾನು ಕ್ಯಾಂಡಿಡ್‌ ಸಿಕ್ಕಿದ್ದನ್ನು ತೆಗೋತೇನೆ. ತೀರ ಮಾಡೆಲ್‌ ಗೀಡೆಲ್‌ ಎಲ್ಲ ಕರ್ಸಿ ಫೋಟೋ ತೆಗೆಯೋದೆಲ್ಲ ಬೇಕಾಗಿಲ್ಲ, ನಾನು ಸುಮ್ನೆ ಖುಷಿಗಾಗಿ ಫೋಟೋ ತೆಗೆಯೋದು ಅಷ್ಟೇʼ ಅಂದೆ.

ಒಂದ್ನಿಮಿಷ ಸುಮ್ಮನಿದ್ದು ಮತ್ತೆ ಅದೇ, ʻನಾಳೆ ಏನ್ಮಾಡೋಣ ಹೇಳಿʼ ಅಂದರು.

ನನ್ನ ತಾಳ್ಮೆ ನಿಧಾನವಾಗಿ ಕಟ್ಟೆಯೊಡೆಯಲು ಶುರುವಾಗಿತ್ತು. ʻನೋಡಿ, ನಮ್ಮ ನಾಳೆಯ ಪ್ಲಾನು ಇನ್ನೂ ಆಗಿಲ್ಲ. ಬಹುಶಃ ನಾಳೆ ಇಲ್ಲಿಂದ ಹೊರಡಬೇಕು. ಬೆಳ್ಳಂಬೆಳಗ್ಗೆ ಗಡೀಸರ ಲೇಕಿಗೆ ಹೋಗಲು ಟ್ರೈ ಮಾಡುವೆ ಎಂದೆ. ಅವರು ಉತ್ತೇಜಿತರಾಗಿ, ʻನೋಡಿ, ಇದೆಲ್ಲ ಅದೇ ಜಾಗದ ಫೋಟೋಗಳು ಎನ್ನುತ್ತಾ, ತಮ್ಮ ಫೋನಿನಲ್ಲಿ ಅವರ ಜೊತೆ ಹೋದ ಫೋಟೋಗ್ರಾಫರುಗಳು ತೆಗೆದ ಫೋಟೋಗಳನ್ನೆಲ್ಲ ತೋರಿಸಿದರು. ಅದ್ಭುತ ಚಿತ್ರಗಳವು. ಚೆನ್ನಾಗಿದೆ ಎಂದೆ. ʻಬೆಳಿಗ್ಗೆ ಎಷ್ಟು ಗಂಟೆಗೆ ಹೋಗ್ತೀರಿ ಹೇಳಿ ಬರ್ತೇನೆ ಬೇಕಿದ್ರೆʼ ಎಂದರು.

ಅಯ್ಯೋ ಬೇಡ ಬಿಡಿ. ನಾವಿನ್ನೂ ಏನೂ ಡಿಸೈಡ್‌ ಮಾಡಿಲ್ಲ. ಮಾತಾಡ್ಕೊಂಡು ಡಿಸೈಡ್‌ ಮಾಡ್ಬೇಕು. ಹುಡ್ಕೊಂಡು ಹೋಗ್ತೀವಿ ಬಿಡಿ. ನೀವ್ಯಾಕೆ ತೊಂದ್ರೆ ತೆಗೋತೀರಿ. ಬಿಡಿ ಎಂದೆ. ಇದ್ರಲ್ಲಿ ತೊಂದ್ರೆ ಏನ್ಬಂತು ಹೇಳಿ ಎಂದು ಮತ್ತೆ ಪೀಠಿಕೆ ಹಾಕಲು ಹೊರಟಾಗ ಕರೆಕ್ಟಾಗಿ ಪುಣ್ಯಕ್ಕೆ ಮಹೇಶನೂ ಬಂದ. ಅವರಿಬ್ಬರನ್ನು ಮಾತನಾಡಲು ಬಿಟ್ಟು ನಾನು ಮೆಲ್ಲನೆ ನುಣುಚಿಕೊಂಡೆ. ಮತ್ತೆ ಹತ್ತು ನಿಮಿಷ ಮಹೇಶನ ತಲೆಗೂ ಹುಳ ಬಿಟ್ಟು ಕೊನೆಗೂ ಅವನೂ ಅವರಿಂದ ತಪ್ಪಿಸಿಕೊಂಡು ಬಂದದ್ದಾಯ್ತು.

ಇಬ್ಬರೂ ತಲೆಯೊಳಗೆ ಹುಳ ಬಿಟ್ಟಿಸಿಕೊಂಡಾಗಿತ್ತು. ʻಅದ್ಯಾವುದೋ ಬೆಟ್ಟದ ತುದಿ ದೇವಸ್ಥಾನ, ಅಲ್ಲಿಂದ ಇಡೀ ಜೈಸಲ್ಮೇರ್‌ ರಾತ್ರಿಯ ದೃಶ್ಯ ಚಂದ ಕಾಣುತ್ತದೆ ಎಂದರಲ್ಲ, ಸುಮ್ಮನೆ ಹೋಗಿ ನೋಡುವ ಅಂತ ಕಾರು ಯು ಟರ್ನ್‌ ಮಾಡಿದೆವು. ಎಲ್ಲೋ ಸುತ್ತಿ ಏರಿ, ಇಳಿದು ಕೊನೆಗೂ ತಲುಪಿದರೆ, ಅದ್ಯಾವುದೋ ದೇವಸ್ಥಾನ, ಸುತ್ತ ಯಾವ ಕೋನದಲ್ಲೂ ಸಿಟಿ ಕಾಣದು. ಇದೆಲ್ಲೋ ತಪ್ಪಿ ಬಂದಿದ್ದೇವೆ ಅಂತ ಮತ್ತೆ ತಿರುಗಿಸಿ, ಇನ್ಯಾರನ್ನೋ ಕೇಳಿ ಆ ದಾರಿಯತ್ತ ಹೊರಳಿದಾಗ ಕಗ್ಗತ್ತಲ ನಿಗೂಢ ರಸ್ತೆಯಲ್ಲಿ ನಾವು ಮಾತ್ರ ಅಂತಾದಾಗ, ಸಣ್ಣಗೆ ಬೆವರತೊಡಗಿತ್ತು. ಇನ್ನೇನಾದರೂ ಈತನೂ ಜೊತೆಗಿದ್ದರೆ ಖಂಡಿತ ಆತನ ಮೇಲೆ ಬಂದ ಅನುಮಾನ ಆ ಜಾಗದಲ್ಲಿ ಯಾವ ರೂಪ ಪಡೆಯುತ್ತಿತ್ತೋ!

ಆತ ಹೇಳಿದ ಜಾಗದ ಮೇಲೆ ಸಣ್ಣ ಅನುಮಾನವಿಟ್ಟುಕೊಂಡೇ ಹೊರಟಿದ್ದ ನಮಗೆ ಆ ಅನುಮಾನ ಆ ಒಂಭತ್ತರ ರಾತ್ರಿಯಲ್ಲಿ ಆ ಒಂಟಿ ಖಾಲಿ ರಸ್ತೆ, ಏರು ದಾರಿ, ಒಂದು ಬೆಳಕಿನ ಚುಕ್ಕಿಯೂ ಕಾಣದ ಕಾರಿನ ಹೆಡ್‌ ಲೈಟಷ್ಟೆ ಮುಂದಿನ ಹೆಜ್ಜೆಯ ಮೇಲೆ ತೋರುವ ಬೆಳಕು ಎಂಬಂತಾದಾಗ ಆ ಅನುಮಾನ ಇನ್ನೂ ಗಟ್ಟಿಯಾಗದೆ ಹೇಗಿದ್ದೀತು. ಸ್ವಲ್ಪ ಹೊತ್ತಿನ ಇಂಥ ಅನುಮಾನದ ಸಂತೆ ಮುಗಿದಾಗ ಕಂಡ ಬೆಳಕಿನ ಚುಕ್ಕಿ, ಮುಂದೆ ಇಡೀ ಜೈಸಲ್ಮೇರನ್ನು ನಕ್ಷತ್ರ ಪುಂಜದ ಹಾಗೆ ತೋರಿಸಿತು. ಆತ ಹೇಳಿದ ಮಾತು ನಿಜವಾಗಿತ್ತು!

ಒಂದ್ಹತ್ತು ಊರವರು ಬಿಟ್ಟರೆ, ಪ್ರವಾಸಿಗರು ಎಡತಾಕದ ಆ ಪ್ರಶಾಂತ ಪುಟಾಣಿ ದೇವಸ್ಥಾನ, ಅಲ್ಲಿ ನಿಂತರೆ ಕಾಣುವ ಇಡೀ ಜೈಸಲ್ಮೇರ್‌ ಆ ರಾತ್ರಿಯನ್ನು ಸೊಗಸಾಗಿಸಿಬಿಟ್ಟಿತ್ತು. ಹಿತವಾದ ತಂಗಾಳಿ ಬೀಸುವ ಕತ್ತಲ ಆ ಎತ್ತರದಲ್ಲಿ ಸುಮ್ಮನೆ ಒಂದರ್ಧ ಗಂಟೆ ಕೂತು ಇಳಿದು ಬಂದೆವು. ಬೇಗ ಎದ್ದು ಆತ ಹೇಳಿದಂತೆ ಗಡೀಸರ ಲೇಕಿಗೂ, ಈ ಜಾಗಕ್ಕೂ ಬಂದು ಸೂರ್ಯೋದಯ ನೋಡುವ ಅಂದುಕೊಂಡು, ವೃಥಾ ಆತನ ಮೇಲೆ ಅನುಮಾನ ಪಟ್ಟೆವಲ್ಲ, ಒಂದೊಳ್ಳೆ ಜಾಗ ಹೇಳಿದ್ದಕ್ಕೆ ಥ್ಯಾಂಕ್ಸ್‌ ಹೇಳಲು ಆತನ ನಂಬರ್‌ ಕೂಡ ಕೇಳಿ ಪಡೆದಿಲ್ಲ ಅಂದುಕೊಳ್ಳುತ್ತಾ ನಮ್ಮೊಳಗಿದ್ದ ಸಂಶಯ ಪಿಶಾಚಿಯನ್ನು ಬೈಯುತ್ತ ಮರಳಿದೆವು.

ಮರುದಿನ ಬೆಳಗ್ಗೆ ಹೊರಡಲೇಬೇಕಾಗಿತ್ತು. ಆದರೂ, ಈಗ ಹೋಗಿ ಬಂದ ಜಾಗ ಬಿಡಲು ಮನಸಾಗದೆ, ಕತ್ತಲಲ್ಲಿ ನೋಡಿದ ಜಾಗವನ್ನು ಬೆಳಗಿನಲ್ಲೂ ನೋಡುವ ಅಂದುಕೊಂಡು ಮರುದಿನದ ಪ್ಲಾನನ್ನು ಸ್ವಲ್ಪ ಬದಲಾಯಿಸಿಕೊಂಡು, ಸೂರ್ಯ ಏಳುವ ಮೊದಲೇ ಎದ್ದು ಗಡೀಸರ ಲೇಕಿಗೂ, ರಾತ್ರಿ ಹೋದ ಈ ಜಾಗಕ್ಕೂ ಹೋಗಿ, ಫತೇ ಕಾ ಕಚೋಡಿಯವನ ಕೈಯಿಂದ ಅಮೋಘ ಕೊನೆಯ ಬಾರಿ ಕಚೋಡಿ ಹೊಟ್ಟೆಗಿಳಿಸಿಕೊಂಡೇ ಹೊರಡುವುದು ಎಂದು ತೀರ್ಮಾನ ಮಾಡಿಕೊಂಡು, ಮಲಗಿ ಎದ್ದು ಬೆಳಿಗ್ಗೆ ಈ ಎರಡೂ ಜಾಗಗಳಿಗೆ ಅಂದುಕೊಂಡ ಹಾಗೇ ಹೋದೆವು. ಗಡೀಸರ ಲೇಕೂ ಕೂಡಾ ನನ್ನ ಕ್ಯಾಮರಾಕ್ಕೆ ಮೋಸ ಮಾಡಲಿಲ್ಲ. ಚೆಂದದ ಬೆಳಗು, ಹಕ್ಕಿಗಳು, ಜೊತೆಗೆ ಇಂದಿಷ್ಟು ಫೋಟೋಗಳೊಂದಿಗೆ ಫತೇ ಕಾ ಕಚೋಡಿಯಲ್ಲಿ ಕಚೋಡಿ ಹೊಟ್ಟೆಗಿಳಿಸುವ ಅಂತ ಬಂದರೆ..!

ಪ್ರಪಂಚ ಚಿಕ್ಕದು ನೋಡಿ. ಊರಿಗೆ ಬಂದವಳು ನೀರಿಗೆ ಬರದೇ ಇರುತ್ತಾಳಾ ಅನ್ನೋ ಗಾದೆ ಮಾತಿನ ಹಾಗಾಯ್ತು ನಮ್ಮ ಕಥೆ. ಜೈಸಲ್ಮೇರಲ್ಲಿ ಇದ್ದ ಮೇಲೆ ಫತೇ ಕಾ ಕಚೋಡಿ ಕಡೆ ಬರದೇ ಇದ್ದಾರೇ..! ʻಅರೆ, ನೀವಿಲ್ಲಿ! ನಾ ಹೇಳಿದ ಕಡೆಯೆಲ್ಲಾ ಹೋಗಿ ಬಂದ್ರಾʼ ಎನ್ನುತ್ತಾ ಯಾವುದೋ ಹಳೇ ಪರಿಚಯ ಇದ್ದ ಹಾಗೆ ಮಾತು-ಕತೆ- ಕಚೋಡಿ- ಚಹಾ ಸಮಾರಾಧನೆಯೂ ಆಯಿತು. ನಂಬರು ಕೂಡಾ ಅದಲು ಬದಲಾಗಿ ಬೀಳ್ಕೊಡಲಾಯಿತು.

ಈಗ, ರಾಜಸ್ಥಾನದ ದಿಕ್ಕಿನತ್ತ ಕಾರು ಎಲ್ಲೇ ತಿರುಗಿದ್ರೂ ಈತನಿಗೆ ಕರೆ ಹೋಗುತ್ತದೆ. ಈತನ ಜೇಬು ತುಂಬ ನಾವೆಲ್ಲ ನೋಡದ ಜಾಗಗಳ ಬಗ್ಗೆ ಕೇಳದ ಕಥೆಗಳಿವೆ. ಜೈಸಲ್ಮೇರಿಗೆ ಯಾರೇ ಬೈಕೇರಿ, ಕ್ಯಾಮರಾ ನೇತಾಕಿಕೊಂಡು ಬರಲಿ, ಅವರ ಮೇಲೆ ಈತನಿಗೊಂದು ಪ್ರೀತಿ. ತಾನೇ ಪ್ರೀತಿಯಿಂದ ಯಾವ ಅಪೇಕ್ಷೆಗಳೂ ಇಲ್ಲದೆ, ಅವರಿಗೆ ಬೇಕಾದ ಫೋಟೋ ಸಿಗುವಂತೆ ಮಾಡಲು ತಮ್ಮ ಅಮೂಲ್ಯ ಸಮಯವನ್ನೆಲ್ಲ ಧಾರೆಯೆರೆಯುತ್ತಾರೆ. ಹೀಗೆ ಫೋಟೋಗ್ರಾಫರುಗಳ ಜೊತೆ ಓಡಾಡಿ ಇವರೂ ಚಂದದ ಚಿತ್ರಗಳನ್ನೇ ತೆಗೆಯಲು ಶುರು ಮಾಡಿದ್ದಾರೆ. ಆಗಾಗ ಮರುಭೂಮಿಯ ಚೆಂದ ಚೆಂದನೆಯ ಬೆಳಗುಗಳು ನಮ್ಮ ಅಂಗೈಗೇ ಸಿಗುತ್ತಿರುತ್ತವೆ.

ಇದೊಂದು ಕೇವಲ ಉದಾಹರಣೆ ಅಷ್ಟೆ. ಅದೆಲ್ಲೋ ಚಾರಣದಲ್ಲಿ ಸಿಕ್ಕವರು ಅಲಹಾಬಾದಿನ ಅವರೂರು ದಾಟಿಕೊಂಡು ಹೋದರೆ, ʻಛೇ ಅಲ್ಲೆಲ್ಲ ಯಾಕೆ ಉಳಕೊಂಡಿರಿ? ನಮ್ಮ ಮನೆ ಇತ್ತಲ್ಲ, ಇಲ್ಲೇ ಉಳಿಬಹುದಿತ್ತುʼ ಎಂದು ಪ್ರೀತಿಯಿಂದ ಹೇಳುವಾಗ, ಇನ್ಯಾರೋ ಅವರೂರಿಗೆ ಬಂದಿದ್ದೇವೆಂದು ತಿಳಿದು, ಎಲ್ಲಿದ್ದೆವೋ ಅಲ್ಲಿಗೇ ಬಂದು ಮಾತಾಡಿಸಿಕೊಂಡು ಹೋಗುವಾಗ, ದೂರದ ಕಾಶ್ಮೀರದ ಮುಳ್ಳಿನ ಹಾಸಿಗೆಯಲ್ಲಿ ಕೂತು, ʻನೀವು ಹೇಗಿದ್ದೀರಿ?ʼ ಎಂದು ಆಗಾಗ ಮೆಸೇಜು ಮಾಡುವಾಗ, ʻಛೇ, ಇವರೆಲ್ಲ ಯಾರು? ಏನಾಗಬೇಕು ನಮಗೆ?ʼ ಅಂತ ಭಾವುಕರಾಗಿಬಿಡುತ್ತೇವೆ.

ಮನುಷ್ಯ ಮನುಷ್ಯನ ನಡುವೆ ನಂಬಿಕೆಗಳೇ ಉಳಿದಿಲ್ಲ ಎಂದು ಎಲ್ಲರೂ ಹೇಳುವಾಗಲೆಲ್ಲ ನನಗೆ ʻಜಗತ್ತು ಚೆನ್ನಾಗಿದೆʼ ಅನಿಸುವುದೂ ಇದೇ ಕಾರಣಕ್ಕೆ. ತಿರುಗಾಟ ಮಾತ್ರ ಮನುಷ್ಯ ಮನುಷ್ಯನ ನಡುವೆ ನಂಬಿಕೆ ಎಂಬ ಜೀವಜಲ ಎರೆದು ಪೋಷಿಸೀತು. ಇಲ್ಲದಿದ್ದರೆ, ಒಂದೇ ಜಾಗದಲ್ಲಿ ಕೂತು, ಅಲ್ಲಿಂದ ಕದಲದೆ, ʻಓ, ಅವರಾ, ಅವರು ಹೀಗೆ… ಇವರಾ? ಇವರ ಕಥೆಯೂ ಅಷ್ಟೆ..ʼ ಎಂಬ ಮಾತುಗಳಲ್ಲೇ ಕಳೆದುಹೋಗುತ್ತೇವೆ.

ಅದಕ್ಕೇ… ತಿರುಗಾಟವೆಂಬುದು ಬರೀ ತಿರುಗಾಟವಷ್ಟೇ ಅಲ್ಲ!

‍ಲೇಖಕರು Admin

August 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: