ಶೋಭಾ ನಾಯಕ ಓದಿದ ‘ಅಬ್ಬೋಲಿ’

ಡಾ ಶೋಭಾ ನಾಯಕ

ಉತ್ತರ ಕನ್ನಡದ ಇತಿಹಾಸ ಮೌರ್ಯರ ಕಾಲದಿಂದ ಪ್ರಾರಂಭವಾಗುತ್ತದೆ. ಈ ಮಾತನ್ನು ಹೇಳಲು ಕಾರಣ ಪ್ರಸ್ತುತ ಕಥಾ ಸಂಕಲನದ ಮೊದಲ ಕಥೆ ‘ಗಾವ್ಡಿ'ಯ ಸಾಲು.೧೮೯೦ರಲ್ಲಿ ಜನರಿಂದ ಜಂಗಲ್ ಸವಲತ್ತುಗಳನ್ನು ಕಸಿದುಕೊಂಡು ೧೯೧೪-೧೫ರಲ್ಲಿ ರೈತರ ಮೇಲಿನ ವೀಪರಿತ ಕರ ಹಾಗೂ ಮಾರಣಾಂತಿಕ ರೋಗಗಳಿಂದ ಜನಸಂಖ್ಯೆಯ ಇಳಿಕೆ, ಬ್ರಿಟಿಷ ಆಡಳಿತ ಉತ್ತರ ಕನ್ನಡ ಜಿಲ್ಲೆಯ ಜನರನ್ನು ಕೂಪಕ್ಕೆ ತಳ್ಳಿತ್ತು.

ಲೋಕಮಾನ್ಯರ ‘ಕೇಸರಿ’ಯಿಂದ ಸ್ಫೂರ್ತಿ ಪಡೆದ ಜನರು ವಿನೋದಿನಿ, ಕನ್ನಡ ಸುವಾರ್ತೆ, ಹವ್ಯಕ ಸಂಭೋದ, ಕಾನಡಾ ವೃತ್ತ, ನಂದಿನಿ ಸರಸ್ವತಿ, ಕಾನಡಾ ಧುರೀಣ, ಬಾಂಬೆ ಕ್ರಾನಿಕಲ್ ಪತ್ರಿಕೆಗಳಿಂದ ದೇಶ ವಿದೇಶದ ಸುದ್ದಿಗಳನ್ನು ಓದಿ ಆಂಗ್ಲ ಆಡಳಿತದ ವಿರುದ್ಧ ಬಂಡೆದ್ದೆದು ಇತಿಹಾಸ. ಲೋಕಮಾನ್ಯರನ್ನು ಬೆಂಬಲಿಸಿದ ಜಿಲ್ಲೆಯ ಜನ ಅವರ ಮರಣಾಂತರ ಗಾಂಧೀಜಿಯವರ ನಾಯಕತ್ವದಲ್ಲಿ ಸ್ವದೇಶಿ ಚಳುವಳಿ, ಅಸಹಕಾರ ಆಂಧೋಲನ, ಉಪ್ಪಿನ ಸತ್ಯಾಗ್ರಹ, ಕರ ನಿರಾಕರಣೆ ಇವುಗಳನ್ನೆಲ್ಲಾ ಜಾತಿ ಮತಗಳನ್ನು ನೋಡದೇ ಒಗ್ಗಟ್ಟಾದ ಜನ ಆಸ್ತಿ-ಪಾಸ್ತಿ-ಜೀವವನ್ನು ಕಳೆದುಕೊಂಡಿದ್ದಾರೆ.

ಶಿರಸಿ, ಸಿದ್ದಾಪುರ, ಅಂಕೋಲಾ ಹೋರಾಟದ ಕೇಂದ್ರಗಳಾಗಿದ್ದವು. ಅಂಕೋಲಾವನ್ನು ಎರಡನೇ ಬಾರ್ಡೋಲಿ ಎಂದು ಕರೆದರು. ಗಾಂಧೀಜಿಯವರು ಸ್ವತಃ ಅಂಕೋಲೆಗೆ ಭೇಟಿ ನೀಡಿದರು. ಸ್ವಾತಂತ್ರ್ಯ ಚಳುವಳಿಯ ಚರಿತ್ರೆಯಲ್ಲಿ ಅಂಕೋಲೆ ಶಾಶ್ವತವಾಗಿ ನೆನಪುಳಿಯುವಂತಾಯಿತು. ಇಷ್ಟೆಲ್ಲ ಹೇಳಲು ಕಾರಣ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಲೇಖಕಿ ಅಕ್ಷತಾ ಕೃಷ್ಣಮೂರ್ತಿಯವರ ‘ಅಬ್ಬೋಲಿ' ಕಥಾ ಸಂಕಲನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಎಲ್ಲ ಉಪಜಾತಿಗಳ ಭಾಷೆಗಳು ಒಟ್ಟಾಗಿ ಪಡಿಮೂಡಿದ್ದು.

ಕಥೆಗಳಿಗೆ ಭಾರತೀಯ ಪರಂಪರೆಯಲ್ಲಿ ವಿಶಿಷ್ಟವಾದ ಸ್ಥಾನವಿದೆ. ಮೊಮ್ಮಕ್ಕಳಿಗೆ ಅಜ್ಜ-ಅಜ್ಜಿಯರು ಕಥೆ ಹೇಳುವ ಪರಿಪಾಠ ನಮ್ಮಲ್ಲಿ ಮುಂಚಿನಿಂದಲೂ ಇದೆ. ಕನ್ನಡದಲ್ಲಿ ಸಣ್ಣಕಥೆ ಪ್ರಕಾರ ಜನಪ್ರಿಯತೆಯನ್ನು ಹೊಂದಿದ್ದು; ವಡ್ಡಾರಾಧನೆಯಿಂದ ಹಿಡಿದು ಆಧುನಿಕ ಕನ್ನಡ ಸಾಹಿತ್ಯದವರೆಗೂ ಅಸಂಖ್ಯಾತ ಕಥೆಗಾರರಿರುವುದನ್ನು ಕಂಡಿದ್ದೇವೆ ಹಾಗೂ ಕಾಣುತ್ತಲಿದ್ದೇವೆ. ಇದಕ್ಕೆ ಅಬ್ಬೋಲಿ’ ಕಥಾ ಸಂಕಲನದ ಮೂಲಕ ಹೊಸ ಸೇರ್ಪಡೆ ಅಕ್ಷತಾ ಕೃಷ್ಣಮೂರ್ತಿ.

ಅಬ್ಬೋಲಿ' ಕಥಾ ಸಂಕಲನದಲ್ಲಿ ಅಕ್ಷತಾ ಸುತ್ತಮುತ್ತಲಿನ ವ್ಯಕ್ತಿಗಳನ್ನು, ಪಾತ್ರಗಳಲ್ಲಿ ಸ್ಥಳಿಯ ಹೆಸರುಗಳನ್ನು, ಅಕ್ಕಪಕ್ಕದ ಊರುಗಳನ್ನು, ಜನಜೀವನದ ನಿತ್ಯ ದಿನಚರಿಗಳನ್ನು, ಘಟನೆಗಳನ್ನು, ಮಾತುಗಳನ್ನು ಹಿಡಿದಿಡುವ ಎಲ್ಲ ಪ್ರಯತ್ನವೂ ಸಫಲವಾಗಿದೆ. ಪ್ರಸ್ತುತ ಕಥಾ ಸಂಕಲನದ ಮೊದಲ ಕಥೆ ‘ಗಾವ್ಡಿ’ ಮೂಲಕ ಗಾರೆ ಕೆಲಸಗಾರರ ಕರುಣಾಜನಕ ಸ್ಥಿತಿ ಮನಮುಟ್ಟುವಂತೆ ಚಿತ್ರಿತವಾಗಿದೆ.

ಈ ಕಥೆಯಲ್ಲಿ ತಿರುಪತಿಯ ಮೂಲಕ ಅಕ್ಷತಾ ಒಂದು ವಾಕ್ಯ ಪ್ರಯೋಗ ಮಾಡಿರುವುದು ವಿಶಿಷ್ಟವಾಗಿದೆ. ‘ಡಿಬೇರಬರ ಹೊದೇಕಹಾ ಸುವಗ ಖಮು’ ಅಂದರೆ ವಾಕ್ಯವನ್ನು ಉಲ್ಟಾ ಮಾಡಿ ಓದಿದರೆ ಮುಖಗವಸು ಹಾಕದೆ ಹೊರಬರಬೇಡಿ' ಎಂದಾಗುತ್ತದೆ. ಊರ ಜನರೆಲ್ಲ ತಿರುಪತಿಯನ್ನು ಹುಚ್ಚನೆಂದು ಕೂಗಿದರೂ ಅವನೊಳಗೊಂದು ಸೂಕ್ಷ್ಮ ಮನಸ್ಸು ಜಾಗೃತವಾಗಿದೆ ಅನ್ನುವುದನ್ನು ಲೇಖಕಿ ಮೇಲಿನ ವಿಶಿಷ್ಟ ಪ್ರಯೋಗದ ಮೂಲಕ ಹೇಳ ಹೊರಟಿದ್ದಾರೆ.

‘ಮೊಟ್ಟಿ ಕರೋನಾ’ ಕಥೆ ಪ್ರಕೃತಿಯ ಮುನಿಸಿನ ಮುಂದೆ ಮಾನವನನ್ನು ಬಲಿಪಡೆಯುವ ಹಾಗೂ ಕರೋನಾ ಮನುಷ್ಯನ ಜೀವನವನ್ನು ತಿಂದು ತೇಗಿದ್ದನ್ನು ಕಾಣಬಹುದಾಗಿದೆ. ಮಕ್ಕಳ ಭವಿಷ್ಯ, ಸ್ತ್ರೀಯರ ತೊಳಲಾಟ, ಮನುಷ್ಯರ ಮಾನಸಿಕ ನೆಮ್ಮದಿಯನ್ನು ಹಾಳುಮಾಡಿದ ಕರೋನಾದ ರೌದ್ರನರ್ತನದ ಆರ್ಭಟ ಗಾವ್ಡಿ ಕಥೆಯಲ್ಲಿಯೂ ವ್ಯಕ್ತವಾಗಿದೆ.

'ಕೈಯಲ್ಲಿ ಕೆಲಸ ಇಲ್ಲ, ಮಗನ ಪರೀಕ್ಷೆ ಮುಗಿದಿಲ್ಲ ಎಲ್ಲ ಚಿಂತೆ ಸೇರಿ ಸಿಟ್ಟು ಬಂದ ಹಾಗೆ ಅಳು ಬಂದ ಹಾಗೆ ಎಲ್ಲ ಆಗಿ ಕೊನೆಗೆ ಕೂಗಿ ಸಮಾಧಾನ ಪಡೆಯುವುದೇ ಇತ್ತೀಚಿನ ಕೆಲಸ' ಎಂಬ ಮಾತಿನಲ್ಲಿ ಸಮಕಾಲೀನ ಪರಿಸ್ಥಿತಿಯ ಅಸಹಾಯಕತೆಯನ್ನು ಕಥೆಗಾರ್ತಿ ಅಭಿವ್ಯಕ್ತಿಸಿದ್ದಾರೆ. ಆವಂತಿಕಾಳ ಮೂಲಕ ‘ಯಾಕೆ ಹೆದರಬೇಕು ವಸಂತಗಳಿಗೆ’ ಎಂಬ ಸ್ತ್ರೀ ಪರ ಧ್ವನಿಯನ್ನು ಸ್ತ್ರೀ ಬಂಧನದ ಚೌಕಟ್ಟಿನ ವಿರುದ್ಧ ಎತ್ತಿದ್ದಾರೆ.

ವಾಟ್ಸಪ್, ಫೇಸ್‌ಬುಕ್‌ನಂತಹವುಗಳು ಯುವಕ-ಯುವತಿಯರ ಮೇಲೆ ದುಷ್ಪರಿಣಾಮ ಬೀರುವುದರೊಟ್ಟಿಗೆ ಒಳ್ಳೆಯದಕ್ಕೂ ಬಳಸಿಕೊಳ್ಳಬಹುದೆಂದು ಹಾಗೂ ‘ಒಳ್ಳೆಯ ಕಳ್ಳರು' ಕಥೆಯ ಮೂಲಕ ಲೇಖಕಿ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡುವ ಪ್ರಯತ್ನಕ್ಕೆ ಕೈ ಹಾಕಿದಂತಿದೆ.

ಅತಿವೃಷ್ಠಿ-ಅನಾವೃಷ್ಠಿಯ ನಡುವೆ ಕರೋನಾದಂತಹ ಮಹಾಮಾರಿ ಯಾರ‍್ಯಾರನ್ನೋ ಯಾವುದಾವುದೋ ವೃತ್ತಿಯನ್ನು ಆಯ್ಕೆ ಮಾಡುವಂತಹ ಸ್ಥಿತಿಯನ್ನು ತಂದಿರಬಹುದೇನೋ ಎನ್ನುವ ಸೂಕ್ಷ್ಮ ಆಲೋಚನೆಗೂ ದೂಡಿದಂತಿದೆ. ಈ ಕಥೆಯಲ್ಲಿ ಮಾನವೀಯ ಗುಣ, ಸ್ತ್ರೀಗೆ ಗೌರವ ನೀಡುವ ಮನೋಭಾವದ ಕಳ್ಳರನ್ನು ಬಹಳ ಜಾಗೃತರಾಗಿ ಸೃಷ್ಟಿಸುವ ಕಾರ್ಯವನ್ನು ಅಕ್ಷತಾ ಮಾಡಿದ್ದಾರೆ.

ಕಥಾ ಸಂಕಲನದ ಶೀರ್ಷಿಕೆಯನ್ನಿಟ್ಟುಕೊಂಡ ‘ಅಬ್ಬೋಲಿ’ ಕಥೆಯಲ್ಲಿ ವಿಧವಾ ಮಹಿಳೆಯೊಬ್ಬಳು ಸಮಾಜದ ಅನಿಷ್ಟತೆಯನ್ನು ಎದುರಿಸಿ ಸ್ವಸಹಾಯ ಸಂಘಗಳನ್ನು ಕಟ್ಟಿ ಸ್ವಾವಲಂಬನೆಯ ಜೀವನವನ್ನು ರೂಪಿಸಿಕೊಳ್ಳುವುದಾದರೆ; ಗುಬ್ಬಚ್ಚಿ ಗೂಡು ಕಥೆಯಲ್ಲಿ ಹೆಣ್ಣಿನ ಬಯಕೆ, ಅಂತರಾಳದ ತುಮಲುಗಳನ್ನು ಬಿಚ್ಚಿಡುವುದಾಗಿದೆ. ಚಳಿಗಾಲದ ಗೆಳತಿಯಂತೆ ಲೇಖಕಿಯು ‘ಸ್ವೇಟರ್’ನ್ನು ಬಹಳ ಚಂದವಾಗಿ ಹೆಣೆದಿದ್ದಾರೆ. ಇಲ್ಲಿನ ಎಲ್ಲಾ ಕಥೆಗಳಲ್ಲಿ ಲೇಖಕಿ ಸಮಸ್ಯೆಗಳನ್ನು ತಿಳಿಸುತ್ತಾ ಕೆಲವಡೆ ಲಘುವಾಗಿ ಎಡವಿದರೂ ಓದುಗರ ಮನಸ್ಸನ್ನು ಗೆಲ್ಲುವತ್ತ ಹೆಜ್ಜೆ ಹಾಕಿದ್ದಾರೆ. ಕಡ್ಡಾಯ ಶಿಕ್ಷಣ, ನಲಿಕಲಿ, ಸ್ವಸಹಾಯ ಸಂಘ ಮುಂತಾದವುಗಳ ಮೂಲಕ ಮಹಿಳೆಯರಲ್ಲಿ ಧನಾತ್ಮಕ ಪರಿಣಾಮವನ್ನು ಬೀರುವ ಆಶಯವನ್ನು ಕಥೆಗಳು ಹೊಂದಿರುವುದೇ ಕಥಾ ಸಂಕಲನದ ಗೆಲವು ಎನ್ನಬಹುದಾಗಿದೆ.

‘ಅಬ್ಬೋಲಿ’ ಕಥಾ ಸಂಕಲನ ಓದುವಾಗಲೆಲ್ಲ ಉತ್ತರ ಕನ್ನಡ ಜಿಲ್ಲೆಯ ಪರಿಸರ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಪ್ರಸ್ತುತ ಕಥಾ ಸಂಕಲನದಲ್ಲಿ ಅಕ್ಷತಾ ಉತ್ತರ ಕನ್ನಡ ಜಿಲ್ಲೆಯ ಕೆಲವು ಪ್ರಮುಖ ಉಪಭಾಷೆಗಳಾದ ನಾಡೋರ, ಉಪ್ಪು ನಾಡೋರ, ಕೊಮಾರಪಂಥ ಹಾಗೂ ಹಾಲಕ್ಕಿಗಳ ಭಾಷೆಗಳ ಜೊತೆಗೆ ಜೋಯಿಡಾದ ಕುಣಬಿ ಭಾಷೆಯನ್ನು ಬಳಸಿರುವುದನ್ನು ಗಮನಿಸಬಹುದಾಗಿದೆ.

ಒಂದು ಕಾಲದ ಚರಿತ್ರೆ ಹಾಗೂ ಭಾಷೆಯನ್ನು ಆಯಾ ಕಾಲದ ಲೇಖಕರು ಜೀವಂತವಾಗಿಡುವುದರಿಂದಲೇ ಅವುಗಳ ಸಾಂಸ್ಕೃತಿಕ ಅಧ್ಯಯನಕ್ಕೆ ಮುಂದೊಂದು ದಿನ ಸಹಾಯಕವಾಗಬಲ್ಲುದಾಗಿದೆ.

ಜೀವನದಲ್ಲಿ ನಡೆದಿದ್ದ ಅಥವಾ ತನ್ನ ಸುತ್ತಮುತ್ತಲು ನಡೆದ ಘಟನೆಗಳನ್ನು ಯಥಾವತ್ತಾಗಿ ಕಥೆಗಳಲ್ಲಿ ಲೇಖಕಿ ಚಿತ್ರಿಸಿದ್ದಾರೆ. ಕೇವಲ ಮನುಷ್ಯನಷ್ಟೇ ಕಥೆಯ ಭಾಗವಾಗಿರದೇ ಉತ್ತರ ಕನ್ನಡ ಜಿಲ್ಲೆಯ ಪರಿಸರ ಹಾಗೂ ಭಾಷೆಗಳನ್ನು ಕಥೆಗಳಲ್ಲಿ ಬಿಗಿಯಾಗಿ ಬಂಧಿಸಿರುವುದೇ ಅಕ್ಷತಾರವರ ಕಥೆಗಳ ವೈಶಿಷ್ಟ್ಯ. ಅಕ್ಷತಾ ಅವರನ್ನು ಕವಯತ್ರಿಯಾಗಿ ನೋಡಿದ್ದು; ಈ ಕಥಾ ಸಂಕಲನದ ಮೂಲಕ ಹೊಸದೊಂದು ಅಭಿವ್ಯಕ್ತಿಯ ಪ್ರಕಾರಕ್ಕೆ ತೆರೆದುಕೊಂಡಿರುವುದು ಸಂತಸದ ಸಂಗತಿ. ಅವರ ಕಥೆಗಳಲ್ಲಿ ಜೀವನಾನುಕಂಪ, ಮಣ್ಣಿನ ವಾಸನೆ ಹಾಗೂ ವಿಶಿಷ್ಟ ಭಾಷಾ ಪ್ರಯೋಗ ಎದ್ದು ತೋರುತ್ತದೆ.

ಒಂದು ಪ್ರದೇಶದ ವೈವಿಧ್ಯಮಯ ಬದುಕು ಜಾಗತೀಕರಣ, ಉದಾರೀಕರಣ, ಖಾಸಗೀಕರಣ, ಭರಾಟೆಯಲ್ಲಿ ಹೇಗೆ ಬದಲಾಗುತ್ತದೆ ಎನ್ನುವುದನ್ನು ಕೂಡಾ ಪ್ರಸ್ತುತ ಕಥಾ ಸಂಕನಲನ ಅಭಿವ್ಯಕ್ತಿಸುತ್ತದೆ. ಅಕ್ಷತಾ ಕಥೆಗೆ ಆಯ್ದುಕೊಂಡ ಬೇಲೇಕೇರಿ, ಕಾರ್ಟೋಳಿ, ಅಣಶಿ, ಕುಂಬಾರವಾಡ, ಅಂಕೋಲೆಯ ಬಂಡಿಬಜಾರ, ಬಾಕೀತ ಮುಂತಾದ ಊರುಗಳು ಕಡಿಮೆ ಸಂಖ್ಯೆಯಲ್ಲಿ ಮನೆಗಳಿರುವ ಜನವಸತಿಯ ಪ್ರದೇಶ ಅವರುಗಳ ಜೀವನ ಸಂಘರ್ಷವೇ ವಿಭಿನ್ನವಾದದ್ದು.

ಅಂತಹದರಲ್ಲಿ ಈ… ಕರಣಗಳ ಆರ್ಭಟದಲ್ಲಿ ಮೈನ್ಸ್ ನಿಂದಾಗಿ ಬೇಲೇಕೇರಿಯಂತಹ ಊರು ಜಗತ್ತಿನ ನಕಾಶೆಯಲ್ಲಿ ಕಂಗೊಳಿಸುವಂತಾದರೂ ಇಲ್ಲಿನ ಭಾಷೆ, ಜನಜೀವನದಲ್ಲಿನ ಸೂಕ್ಷ್ಮ ಬದಲಾವಣೆಗಳನ್ನು ಕಥೆಗಳು ವ್ಯಕ್ತಪಡಿಸುತ್ತವೆ. ಇನ್ನಷ್ಟು ಮತ್ತಷ್ಟು ಕರಾವಳಿ ಪರಿಸರ ಹಾಗೂ ವಿಶಿಷ್ಟವಾದ ಜಿಲ್ಲೆಯ ಭಾಷೆಗಳು ಓದುಗರಿಗೆ ತಲುಪುವಂತೆ ಅಕ್ಷತಾರ ಲೇಖನಿಯ ಮೂಲಕ ಅಭಿವ್ಯಕ್ತವಾಗಲಿ.

‍ಲೇಖಕರು Admin

August 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: