ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಡಿಯೂರಿ ಮೊರೆ..

ಜಿ ಪಿ ಬಸವರಾಜು

ಮೇ ತಿಂಗಳ ಮಧ್ಯಾಹ್ನ: ಕಣ್ಣು ಕುಕ್ಕುವ ಮೇ ಹೂವು

ಮರಕ್ಕೆ ಮರವೇ ಕೆಂಪು, ಒಂದು ಹಸಿರೆಲೆಯೂ ಇಲ್ಲ

ಥಟ್ಟನೆ ತಲೆತಿರುಗಿ, ಕೆಂಪೆಲ್ಲ ಮರದಿಂದ ನೆಲಕ್ಕೆ

ಹರಿದು ಬಂದು, ನೆಲವೆಲ್ಲ ಕೆಂಪು, ರಕ್ತ ಹರಿವಂತೆ

ರಕ್ತ ಚಿಮ್ಮಿದಂತೆ ಕೆಂಪು ಸುತ್ತಿಕೊಂಡಿತು ಎಲ್ಲರನು

 

ಕೊರೊನಾ ರಕ್ತ ಹರಿಸುವುದಿಲ್ಲ, ಉಸಿರು ಕಟ್ಟಿಸುತ್ತದೆ,

ಕೆಮ್ಮಿ ಕ್ಯಾಕರಿಸಿ, ಮೇಲುಸಿರಿಗೆ ಕಣ್ಣುಕಣ್ಣು ಬಿಟ್ಟರೂ,

ಸಿಕ್ಕುವುದಿಲ್ಲ ಗಾಳಿ, ಸಹಜವಾಗಿ ಉಸಿರಾಡಲಾಗದೆ

ಬಿದ್ದುಬಿದ್ದು ಹೊರಳಾಡಿ ಉರುಳಾಡಿ ಮುಚ್ಚಬೇಕು

ಕಣ್ಣು-ಮತ್ತೆ, ಮತ್ತೆಂದೂ ತೆರೆಯದಂತೆ

 

ಧಿಮಾಕಿನಲ್ಲಿ ಮುಗಿದುಹೋದವರು, ವಿನಯವಂತರು,

ಬಡವರು, ನಿರ್ಲಿಪ್ತರು, ಜೀವನ್ಮುಕ್ತರು, ಎಲ್ಲ ಕೊನೆಯಾದರು,

ಉಸಿರು ಉಳ್ಳವರು ಆಕಾಶ ನೋಡಿದರು, ಎಲ್ಲಿಯೂ ಉತ್ತರವಿಲ್ಲ-

ಬಿದ್ದವರನೇಳಿಸಲು; ಹತ್ತು ಪ್ರಶ್ನೆಗಳಿಗೆ ಒಂದಾದರೂ ಉತ್ತರವಿಲ್ಲ

ಹೊತ್ತು ಬಂದಾಗ ಹತ್ತಬೇಕು ರೈಲು ಟಿಕೆಟ್ಟಿಲ್ಲ,ನಿಲ್ದಾಣವೂ ಗೊತ್ತಿಲ್ಲ

ಗೋಡೆಕಟ್ಟಿಕೊಂಡ ಚೀನಾ, ಅಹಂಕಾರದ  ಅಮೆರಿಕ

ನಿಗೂಢ ಅಸ್ತ್ರಗಳ ಇಸ್ರೇಲ್‍-ಎಲ್ಲರೂ ಇಲ್ಲಿ ಮಂಡಿಯೂರಿ

ಮೊರೆಯಿಟ್ಟರೂ ಬಿಡುವುದಿಲ್ಲ ಕೊರೊನಾ, ಭೂಮಿ-ಆಕಾಶ

ಸುತ್ತಿದರೂ ತಿಳಿಯುವುದಿಲ್ಲ ಅದರ ಚಹರೆ, ಚಲನೆ

 

ಎಲ್ಲಿಂದ ಬಂದೆ, ಎತ್ತ ಪಯಣ?- ನಿಲ್ಲು, ನೀರು ಕುಡಿ,

ನಾಕು ಮಾತಾಡು ಎಂದರೆ ಎದೆನಡುಗಿಸುವ ಗುಡುಗು

ಮುಗಿಲಲ್ಲಿ ಸಿಡಿಲು, ಕುಕ್ಕುವುದು ಕಣ್ಣು, ನಿಲ್ಲದ ಕೊರೊನಾ

ಆರ್ಭಟಕ್ಕೆ ತಲ್ಲಣಿಸುವುದು ಲೋಕ

 

ಎಂಥ ಕತ್ತಲು, ಬಾವಲಿಗಳ ರೆಕ್ಕೆ ಸದ್ದೂ ಕೇಳಿಸುವುದಿಲ್ಲ

ನಾವೇ ತಿಂದು ಮುಗಿಸಿದೆವಲ್ಲ ಎಲ್ಲ- ಬಾವಲಿ, ಇಲಿ,

ಜಿಂಕೆ, ಜಿರಲೆ ಹಾವು ಹಕ್ಕಿ ಸಕಲ ಜೀವ ಸಂತಾನ

 

ಯಾರಳಿದರೂ ಚಿಂತೆಯಿಲ್ಲ ಏನಳಿದರೂ ಚಿಂತೆಯಿಲ್ಲ

ನಾವು ಉಳಿಯಬೇಕು, ನಾವು ಚರಿತ್ರೆ ಬರೆಯುವವರು,

ಈ ಭೂಮಿ, ಈ ಆಕಾಶ, ಈ ಗುಡ್ಡ ಬೆಟ್ಟ ಕಾಡು ಕಣಿವೆ

ಕೊಳ ಕೆರೆ ನದಿ ಕಡಲು ಕುಣಿಯುವ ನವಿಲು, ಕೊಡಬೇಕು

ಹುಟ್ಟು ಅವಸಾನಗಳ ಪಟ್ಟಿ, ಬರೆಯಬೇಕು ಇತಿಹಾಸ

ನಮ್ಮ ಹುಟ್ಟು ಗೌರವಿಸು ಕೊರೊನಾ, ಪಟ್ಟು ಸಡಿಲಿಸು

 

 

‍ಲೇಖಕರು avadhi

16 May, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading