ಮೇಘನಾ ಸುಧೀಂದ್ರ ಕಾಲಂ: ಎಲ್ಲಾ ಏಷಿಯನ್ನರಿಗೂ ಒಂದೇ ಥರದ ಸಿಟ್ಟು..

ಹುಡುಗಿ ತನ್ನ ದೇಶದ ಜನರಿಗೇ ಇಷ್ಟೆಲ್ಲಾ ಪ್ರಶ್ನೆಗಳನ್ನ ಕೇಳಿರಲ್ಲಿಲ್ಲ. ಅವಳ ದೇಶದಲ್ಲೂ ಇವರೇ ಕನ್ನಡಿಗರು, ಇವರೇ ಭಾರತೀಯರು ಎಂದು ವರ್ಗೀಕರಣ ಮಾಡುವ ಎಲ್ಲಾ ಗುಂಪುಗಳು ಬಹಳ ಸಕ್ರಿಯವಾಗಿಯೇ ಇದೆ. ಓಬೀರಾಯನ ಕಾಲದ ಪುರಾಣಗಳನ್ನ ಪುಂಗಿಕೊಂಡು ಮನುಷ್ಯನ್ನನ್ನ ಮನುಷ್ಯನ್ನನ್ನಾಗೊ ನೋಡದೆ ಅವರನ್ನ ಜಾತಿ, ಧರ್ಮದ ಹಣೆಪಟ್ಟಿ ಹಾಕಿ ಅವರನ್ನ ಆದರಿಸೋದೋ ಬೇಡವೋ ಎಂಬ ಪ್ರಶ್ನೆಯನ್ನ ಮನಸಿನಲ್ಲಿಯೇ ಹಾಕಿಕೊಂಡು ನಂತರ ಮಾತಾಡುವಷ್ಟು ಕೆಲವರಿಗೆ ಮನಸ್ಸು ಕಂಡೀಷನ್ ಆಗಿರತ್ತೆ ಎಂದು ಅರಿತರೂ ಬೇರೆ ದೇಶದವರ ಮುಂದೆ “ನಾವು ಹುಟ್ಟಿನಿಂದಲೇ ಸೆಕ್ಯುಲರ್, ನಮ್ಮ ವೈಶಾಲ್ಯತೆ ಅಷ್ಟು, ನಾವು ಹೆಣ್ಣುಮಕ್ಕಳನ್ನ ದೇವತೆಯಂತೆ ನೋಡುತ್ತೇವೆ, ನಮ್ಮಲ್ಲಿ ಲಿಂಗ ಸಮಾನತೆ ಇದೆ, ನಮ್ಮದೆಲ್ಲಾ ಪರ್ಫೆಟ್” ಎಂದೇ ಹೇಳಿಕೊಂಡು ಯಾವುದೋ ಬಬ್ಬಲ್ ನಲ್ಲಿ ಇರುವುದು ಸುಳ್ಳಲ್ಲ. ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳುವ ಮೊದಲ ಸ್ಟೆಪ್ ಎಂದರೆ ಸಮಸ್ಯೆ ಮೊದಲು ಇದೆ ಎಂದು ಒಪ್ಪಿಕೊಳ್ಳುವುದು, ಪುಸ್ತಕದಲ್ಲಿ ಅಥವಾ ಮೂಲತಃ ಏನೇ ಇರಬಹುದು ಅದು ಎಷ್ಟರ ಮಟ್ಟಿಗೆ ಸಾಮಾನ್ಯ ಜನರಿಗೆ ತಲುಪಿದೆ, ಅದು ಆಚರಣೆಯಲ್ಲಿದೆ ಎಂಬುದನ್ನ ನೋಡಿದರೆ ನಮ್ಮ ನಮ್ಮ ಬಂಡವಾಳಗಳು ನಮಗೆ ಗೊತ್ತಾಗುತ್ತದೆ” ಎಂದು ಅಂದುಕೊಂಡೇ ಎಲೆನಾಳಿಗೆ ಬಾಯ್ ಹೇಳಿ ಮನೆ ಕಡೆಗೆ ಹೊರಟಳು.

ಎಲೆನಾಳ ಹಳ್ಳಿಯನ್ನು ಬಿಡುವಾಗ ಹುಡುಗಿಗೆ ಒಂದು ಥರಹ ಆಗಿತ್ತು. ಅವಳ ಹಾನೆಸ್ಟ್ ಹೋರಾಟವನ್ನ ಇಷ್ಟೊಂದು ಕಾಲು ಎಳೆದ್ದದ್ದು ಕೊಂಚ ಬೇಜಾರೂ ಆಯಿತು. ತನಗಿಂತ ೩ ೪ ವರ್ಷ ಕಿರಿಯಳು ತನ್ನ ದೇಶದ ಸಮಸ್ಯೆಯನ್ನ ಅರಿತು ಅದು ಎಷ್ಟೇ ಕಷ್ಟವಾದರೂ ತನ್ನ ಜೀವನವನ್ನು ಕೆಲವೊಮ್ಮೆ ತ್ಯಾಗ ಮಾಡಿಯೇ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ್ದಳು. ಅವಳಿಗೆ ೫೦ ವರ್ಷವಾದಾಗ “ನನ್ನ ದೇಶಕ್ಕಾಗಿ ನಾನು ಸ್ವಲ್ಪವಾದರೂ ಗಲಾಟೆ ಮಾಡಿದೆ” ಎಂಬ ಖುಷಿ ಇರುತ್ತದೆ. ಅವಳ ಗಲಾಟೆ, ಅವಳ ಮಾತು ಸಂವಿಧಾನದಲ್ಲಿ ಒಂದು ಬದಲಾವಣೆಯನ್ನಾದರೂ ತರುತ್ತದೆ ಎಂಬ ನಂಬಿಕೆಯಲ್ಲಿ ಹೊಡೆದಾಡುತ್ತಿದ್ದಾಳೆ. ಅವಳ ಪ್ರಯತ್ನ ಆದರೂ ಅಲ್ಲಿದೆ, ನಮ್ಮದೇನು ಕಥೆ ಎಂದು ತನ್ನ ಪಾಡಿಗೆ ತಾನೇ ಅಂದುಕೊಂಡು ಟ್ರೈನಿನಲ್ಲಿ ಕೂತಿದ್ದಳು.

“ಒಲಾ ಚಿಕಾಆಆ” ಎಂದು ಯಾರೋ ಕರೆದ ಹಾಗಾಯಿತು. ನೋಡಿದರೆ ಜಿಮ್ಮಿ. ಜಿಮ್ಮಿ ಅವಳ ಕ್ಲಾಸಿನಲ್ಲೇ ಓದುತ್ತಿರುವ ಲೆಬನಾನ್ ದ ಹುಡುಗ. ಒಂದೇ ಕ್ಲಾಸಿನಲ್ಲಿ ಅದೆಷ್ಟು ದೇಶದ ಹುಡುಗ ಹುಡುಗಿಯರು ಇದ್ದಾರೆ. ಎಲ್ಲರ ದೃಷ್ಟಿಯಲ್ಲಿ ಬೇರೆ ಬೇರೆ ಥರಹದ್ದು. ಕೆಲವರಿಗೆ ಅವರ ದೇಶದ ಹಾಗೇ ಇದೆ ಎಂದು ಅಂದುಕೊಂಡು ಸುಮ್ಮನಿದ್ದಾರೆ, ಇನ್ನು ಕೆಲವರು ಇಲ್ಲಿಂದ ಲಂಡನ್ನಿಗೆ ಹೋದರೆ ಜೀವನ ಸುಗಮ ಎಂದೆಲ್ಲಾ ಯೋಚನೆ ಮಾಡುತ್ತಾರೆ. ಆದರೆ ಜಿಮ್ಮಿಯ ದೇಶ ಬಹಳ ಕಷ್ಟದಲ್ಲಿದೆ. ಅಂದರೆ ಅವನ ದೇಶ ಇರುವುದು ಇಸರೇಲ್, ಪಾಲೆಸ್ಟೈನ್ ಮತ್ತು ಸಿರಿಯಾ ಮಧ್ಯದಲ್ಲಿ. ದಿನ ನಿತ್ಯ ಬಂದೂಕಿನ ಶಬ್ದ ಕೇಳಿಯೇ ಅವನ ನಿದ್ದೆ ಮುರಿಯೋದು.

ಸಿರಿಯಾದ ಐಸಿಸ್ ಯುದ್ಧ, ಇಸ್ರೇಲ್, ಪಾಲಸ್ಟೀನ್ ದಿನ ನಿತ್ಯದ ಜಗಳ ಇವೆಲ್ಲದರ ಬಗ್ಗೆ ಬಹಳ ನಿರರ್ಗಳವಾಗಿ ಮಾತಾಡುವ ವ್ಯಕ್ತಿ. ಯುದ್ಧದ ಬಗ್ಗೆ ಎಳ್ಳಷ್ಟೂ ಆಸಕ್ತಿಯಿರದ ಹುಡುಗ ಜಿಮ್ಮಿ. ಇವನ ದೇಶದಲ್ಲಿ ಎಲ್ಲರೂ ಇಸ್ಲಾಮ್ ಧರ್ಮ ಪರಿಪಾಲನೆ ಮಾಡಿದರೂ ಇವನ ಮಾತೃಭಾಷೆ ಫ್ರೆಂಚ್. “ನಮಗೆ ಅರ್ಧ ಈ ಮೂಲಭೂತವಾದಿಗಳ ಮಾತು ಅರ್ಥವಾಗದಿರುವುದು ನಾವು ನಯಾಪೈಪೈಸೆ ಅರೇಬಿಕ್ ಮಾತನಾಡದಿರುವುದಕ್ಕೆ, ಪೂರ್ತಿ ಫ್ರೆಂಚ್ ಮಯ , ಇದಕ್ಕಾಗಿ ಯುರೋಪಿಯನ್ನರಿಗೆ ನಾವು ಧನ್ಯವಾದ ಹೇಳಲೇ ಬೇಕು. ಅದಕ್ಕೆ ನಾವು ಯಾರು ಏನೇ ಬಡಿದುಕೊಳ್ಳಲಿ ನಮ್ಮ ಪಾಡಿಗೆ ನಾವಿರುತ್ತೇವೆ” ಎಂದು ಹುಡುಗಿಗೆ ಹೇಳಿದ್ದ. ಯುರೋಪಿಗೆ ಬರುವ ಎಲ್ಲಾ ಏಷಿಯನ್ನರಿಗೂ (ಚೈನಾ, ಜಪಾನ್) ರನ್ನ ಹೊರತು ಪಡಿಸಿ ಒಂದೆ ತೆರನಾದ ಸಿಟ್ಟಿದ್ದೇ ಇರುತ್ತದೆ. ಯುರೋಪಿನವರು ಅವರ ಧರ್ಮ, ಸಂಸ್ಕೃತಿ ಮತ್ತು ಭಾಷೆಯನ್ನ ಹಾಳು ಮಾಡಿದ್ದ ಮಹಾಶೂರರು ಎಂದು. ನಾವೆಲ್ಲಾ ವಸಾತುಶಾಹಿಯ ಪ್ರಾಡಕ್ಟುಗಳು ಎಂದು ಹೇಳಿಕೊಂಡೇ ಇರುತ್ತಾರೆ. ಆದರೆ ಜಿಮ್ಮಿ ಮಾತ್ರ ಅದನ್ನ ವರವಾಗಿಯೇ ಕಂಡುಕೊಂಡಿರುವುದು.

ಎಲೆನಾ ಮತ್ತು ಹುಡುಗಿಯ ನಡುವೆ ಆಗುವ ಮಾತುಕತೆಗಳು ಮತ್ತು ವಾಗ್ಯುದ್ಧಗಳನ್ನ ಗಮನಿಸುತ್ತಿದ್ದ ಜಿಮ್ಮಿ ಮಾತ್ರ “ಕಮಾನ್ ಯಾರ್ ಇಷ್ಟೆಲ್ಲಾ ಮಾತಾಡಿಕೊಂಡು ಏನು ಕ್ವೀನ್ ಎಲೆಝಿಬತ್ ಆಗುತ್ತೀಯಾ” ಎಂದು ಕಾಲೆಳೆಯುತ್ತಿದ್ದ. ಹುಡುಗಿ ಮತ್ತು ಅವನು ಪಾಕಿಸ್ತಾನಿ ಹೋಟೆಲಿನಲ್ಲಿ ಸಮೋಸಾ ಮತ್ತು ಶಾರುಖ್ ಖಾನ್, ಎಸ್ ಡಿ ಬರ್ಮನ್, ಹೇಮಂತ್ ಕುಮಾರ್, ರಫಿ,  ಆರ್ ಡಿ ಬರ್ಮನ್ ಸಂಗೀತದ ಬಗ್ಗೆ ಮಾತಾಡುವಷ್ಟು ಗೆಳೆಯರಾಗಿದ್ದರು. ರಾಂಬ್ಲಾಸಿನಲ್ಲಿ ಇಳಿದು, ಸಮೋಸಾ ತೆಗೆದುಕೊಂಡು ಹೋಗೋಣ ಎಂದು ಮಾತುಕತೆಯನ್ನೂ ಆಡಿದರು.

“ಸೀ ಚಿಕಾ, ನೀನು ತುಂಬಾ ಗಂಭೀರವಾಗಿ ಇದೆಲ್ಲಾ ಯೋಚನೆ ಮಾಡುತ್ತಿರುತ್ತೀಯ, ಅಲ್ಲಾ ನಿಂಗೇನ್ ಆಗಬೇಕು, ನಾವಿಲ್ಲಿ ಬ್ಲಡಿ ಮೈಗ್ರೆಂಟ್ಸ್ ಅಷ್ಟೆ, ನಾನು ಚೆನ್ನಾಗಿ ಫ್ರೆಂಚ್ ಮಾತಾಡುತ್ತೀನಿ, ನೋಡೋಕೂ ಬಿಳಿಯ ಆದರೇ ಅವರಿಗೆ ನಾನು ಏಷಿಯನ್ ಅಷ್ಟೆ, ನಿನ್ನನ್ನೂ ಅವರು ಆದರಿಸೋದು ಅಷ್ಟರಲ್ಲೇ ಇದೆ, ನೀನ್ಯಾಕೆ ಇವರ ಕಥೆಗಳನ್ನೆಲ್ಲಾ ತಲೆ ಮೇಲೆ ಹೊತ್ತಿಕೊಂಡು ತಿರುಗೋದು, ಅವಳು ಅವಳ ದೇಶದಬಗ್ಗೆ ಕಂಡದ್ದೆಲ್ಲಾ ಕುಯ್ಯುತ್ತಾಳೆ, ನೀನು ಅದಕ್ಕೆ ಪ್ರಶ್ನೆ ಮಾಡುತ್ತೀಯ , ಒಟ್ಟಿನಲ್ಲಿ ಅವಳ ದೇಶ ಉದ್ಧಾರವಾಯ್ತು, ನಿನ್ನ ಉದ್ಧಾರ ಏನಾಯ್ತು” ಎಂದು ಥೇಟ್ ಡಿ ವಿ ಜಿಯ ಕಗ್ಗದ ಹಾಗೆ, “ನಿನ್ನುದ್ಧಾರ ಎಷ್ಟಾಯ್ತೋ” ಎಂದು ಕೇಳಿದಂತೆ ಭಾಸವಾಯ್ತು.

ಸುಮ್ಮನೆ ನಕ್ಕು ಸಮೋಸಾ ತಿನ್ನುತ್ತಾ ಕೂತರು. ಅಲ್ಲೇ ಟಿಶ್ಯೂ ಪೇಪರ್ ಮೇಲೆ ಜಿಮ್ಮಿ ಏನ್ನನ್ನೋ ಗೀಚುತ್ತಾ ಕೂತ. ಅದು ಹುಡುಗಿಯ ಚಿತ್ರವೇ ಆಗಿತ್ತು. “ನೋಡು ಈ ಬಾರ್ಸಾದಲ್ಲಿ ಪಿಕಾಸೋಗಿಂತ ಚೆನ್ನಾಗಿ ಯಾರಾದರೂ ಚಿತ್ರ ಬಿಡಿಸುತ್ತಾರೆ ಎಂದರೆ ನಂಬುತ್ತೀಯಾ?” ಎಂದ. ಜಿಮ್ಮಿ ತನ್ನನ್ನ ತಾನೆ ಹೊಗಳಿಕೊಳ್ಳುತ್ತಿದ್ದಾನೆ ಎಂದು , “ಸಾಕು ಸುಮ್ನಿರು ನೀ ಅಷ್ಟೆಲ್ಲಾ ಚೆನ್ನಾಗಿ ಏನು ಮಾಡಿಲ್ಲ” ಎಂದಾಗ “ಹಲೋ ಮೇಡಮ್ ನಾನು ಇಲ್ಲಿ ಮಾತಾಡುತ್ತಿರೋದು ಲುಯಿಸಾ ವಿದಾಲ್ ಬಗ್ಗೆ. ಇಬ್ಬರು ಫೆಮಿನಿಸ್ಟ್ ಗಳು ಜಗತ್ತನ್ನ ಉದ್ಧಾರ ಮಾಡುವ ಹಾಗೆ ಕತಲೂನ್ಯ ಹೋರಾಟದ ಬಗ್ಗೆ ಮಾತಾಡುತ್ತಿರುತ್ತೀರಲ್ಲ, ಲುಯಿಸಾ ವಿದಾಲ್ ಬಗ್ಗೆ ಏನು ಗೊತ್ತು ನಿಂಗೆ, ಆಕೆ ಪಿಕಾಸೋ ಸಮಯದಲ್ಲೇ ಇದ್ದವಳು. ಪ್ಯಾರಿಸಿನಲ್ಲಿ ಚಿತ್ರಕಲೆಯನ್ನ ಶಿಸ್ತುಬದ್ಧವಾಗಿ ಕಲಿತವಳು. ಪ್ಯಾರಿಸಿನಲ್ಲಿ ಚಿತ್ರಕಲೆಯನ್ನು ಕಲಿತ ಮೊದಲ ಸ್ಪಾನಿಷ್ ಹೆಣ್ಣುಮಗಳು, ಇಲ್ಲಿನ ಫೆಮಿನಿಸಮ್ ನ ಹರಿಕಾರಳೂ ಅವಳೇ, ಬಾರ್ಸಾದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆದಷ್ಟು ಹೆಣ್ಣುಮಕ್ಕಳನ್ನ ರಸ್ತೆಗಿಳಿಸಿದವಳು.

ಅವಳ ಚಿತ್ರಕಲೆ ಹೆಣ್ಣುಮಕ್ಕಳನ್ನ ಇನ್ನಷ್ಟು ಉತ್ತೇಜಿತಗೊಳಿಸುತ್ತಿತ್ತು. ಎಲ್ಲಾ ಚಿತ್ರದಲ್ಲೂ ಒಂದು ಕಡೆ ಫೆಮಿನಿಸಮ್ ಮತ್ತೊಂದು ಕಡೆ ಸ್ವಾತಂತ್ರ್ಯದ ಬಗ್ಗೆ ನಿರ್ಭಯದಿಂದ ಬರೆದು ಎಲ್ಲಾ ಕಡೆ ಪ್ರದರ್ಶನ ಮಾಡುತ್ತಿದ್ದಳು. ಅವಳು ಹೆಣ್ಣು ಎಂದು ಬರೆಯುತ್ತಿದ್ದ ನ್ಯೂಡ್ ಚಿತ್ರಗಳಿಗೆ ಅನುಮೋದನೆ ಕೊಡುತ್ತಿರಲ್ಲಿಲ್ಲ. ಗಂಡಸಿನ ಥರಹ ಚಿತ್ರಕಲೆ ಬಿಡಿಸುತ್ತಾಳೆ ಎಂದು ಮೂದಲಿಸಿ ಅವಳನ್ನ ಮಾನ್ಯ ಮಾಡಿರಲ್ಲಿಲ್ಲ ಆದರೆ ಅವಳು ಈ ನೆಲದ ಹೆಣ್ಣುಮಕ್ಕಳನ್ನ ಮುಖ್ಯವಾಹಿನಿಗೆ ತಂದವಳಲ್ಲಿ ಪ್ರಮುಖಳು”

ಅಷ್ಟರಲ್ಲಿ ಹುಡುಗಿಯ ಚಿತ್ರ ಅರ್ಧ ಬರೆದು ಮೂಗನ್ನ ತಿದ್ದುವಾಗ, “ಈ ದಪ್ಪ ಮೂಗಿನ ಮೇಲೆ ಕತಲೂನ್ಯಾದ ಮ್ಯಾಪ್ ಬರೆಯಬಹುದು” ಎಂದು ತಮಾಷೆ ಮಾಡಿ, “ಕ್ಯಾಥರೀನಾ ಅಲ್ಬೆರ್ಟಾ ಪರದೀಸ್ ಅಂತಹ ಭಯಂಕರ ಲೇಖಕಿಯನ್ನ ನೀನು ಮರೆಯೋದಕ್ಕೆ ಸಾಧ್ಯವೇ ಇಲ್ಲ. ಅವಳು ಲೊ ಲಿಬ್ರೆ ನೋ ಎಂಬ ಪದ್ಯಕ್ಕೆ ದೊಡ್ಡ ಪ್ರಶಸ್ತಿಯನ್ನೇ ಪಡೆದಿದ್ದಳು. ಅದರಲ್ಲೂ ಕ್ರಾಂತಿ ಮತ್ತು ಪ್ರೇಮವನ್ನ ಅಗಾಧವಾಗಿ ಬರೆದು ಅದೆಷ್ಟೋ ಹುಡುಗ ಹುಡುಗಿಯರನ್ನ ಈ ಹೋರಾಟಕ್ಕೆ ಇಳಿಸಿದ್ದಳು. ಸರ್ವಾಧಿಕಾರವನ್ನ ಖಡಾಖಂಡಿತವಾಗಿ ವಿರೋಧಿಸಿ ಆ ಸನ್ನಿವೇಶಗಳನ್ನ ತನ್ನ ಪದ್ಯಗಳಲ್ಲಿ ತಂದು ಈ ಹೋರಾಟಕ್ಕೆ ಒಂದು ಹಾದಿಯನ್ನೇ ನಿರ್ಮಾಣ ಮಾಡಿದ್ದಾರೆ.

‘ಎಲ್ ಕಾಂತೆ ದೆಲ್ ಮೆಸೋಸ್’ ಪುಸ್ತಕದ ಪದ್ಯಗಳನ್ನ ಓದೋದೆ ಚೆಂದ. ಕೆಂಪು ಜುಲೈ ಪದ್ಯದಲ್ಲಿ ಜುಲೈ ತಿಂಗಳ ಬಾರ್ಸಾದ ರಕ್ತಸಿಕ್ತ ವಾತಾವರಣವನ್ನ ಹೇಗೆಲ್ಲಾ ವಿವರಿಸಿದ್ದಾರೆ ಗೊತ್ತಾ, ಕಣ್ಣು ಕೆಂಪಾಗುತ್ತದೆ, ಮನಸ್ಸು ಉದ್ರೇಕಗೊಳ್ಳುತ್ತದೆ, ನನ್ನ ದೇಶಕ್ಕಾಗಿ ರಕ್ತ ಹರಿಸಲು ಹೋಗುತ್ತೇನೆ, ನನ್ನ ಸುತ್ತಮುತ್ತ ಬರೀ ಕೆಂಪೇ ಇದೆ ಎಂದು ಉಗ್ರವಾಗಿ ಪದ್ಯ ಬರೆದು ಹುಡುಗರನ್ನ ರೊಚ್ಚಿಗೆಬ್ಬಿಸಿದ ಬರಹಗಾರ್ತಿ ಅವಳು.

ಇನ್ನು ‘ಅಕ್ಟೋಬರ್ ಸಾಂಗ್’ ಪದ್ಯದಲ್ಲಿ ಬಾರ್ಸಾದ ಶಾಂತಿಯನ್ನ ಬಯಸುತ್ತಾ ಬರೆದಿದ್ದಾಳೆ. ಇವರನ್ನೆಲ್ಲಾ ಓದಿದೆಯಾ ?” ಎಂದು ನಕ್ಕು “ಈ ನ್ಯಾಪ್ ಕಿನ್ ಮೇಲಿನ ನಿನ್ನ ಚಿತ್ರವನ್ನ ಎಸೆಯಬಹುದು ಇಲ್ಲ ಇಟ್ಟುಕೊಳ್ಳಬಹುದು” ಎಂದು ಹೇಳಿದಾಗ, “ಇಲ್ಲ ಇದು ಅಲ್ಬೆರ್ಟಾಗೋಸ್ಕರ ಇಟ್ಟುಕೊಳ್ಳುತ್ತೇನೆ” ಎಂದು ಹುಡುಗಿ ಹೇಳಿದಾಗ, “ಬಾ ಮ್ಯೂಸಮ್ ತೋರಿಸುತ್ತೇನೆ” ಎಂದು ಜಿಮ್ಮಿ ಕರೆದೊಯ್ಯುತ್ತಾನೆ…. ಅಲ್ಬೆರ್ಟಾ ಪದ್ಯಕ್ಕಾಗಿ …

‍ಲೇಖಕರು avadhi

May 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

  1. Suresha B

    ತುಂಬಾ ಸಂತೋಷ ಕೊಟ್ಟ ಓದು ಇದು…
    ಮೊದಲಿಗೆ ಇಲ್ಲಿ ಇರುವ ವಿವರಗಳು ಮತ್ತು ವಿಭಿನ್ನ ಹಿನ್ನೆಲೆಯ, ವಿಭಿನ್ನ ದೇಶದ ಪಾತ್ರಗಳು ಮನಸ್ಸಿಗೆ ತಾಗುತ್ತವೆ…
    ಎರಡನೆಯದು, ಇಲ್ಲಿ ಚರ್ಚಿತವಾಗಿರುವ ವಸಾಹತುಶಾಹಿ ಮನಸ್ಥಿತಿ, ಫೆಮಿನಿಸಂ ಕುರಿತ ವಿವರಗಳು ಎಲ್ಲವೂ ಸಲೀಸಾಗಿ ನದಿಯಂತೆ ಹರಿದು ಎದೆಗೆ ಇಳಿಯುತ್ತವೆ.

    ಥ್ಯಾಂಕ್ಸ್ @ಜಯನಗರದ ಹುಡುಗಿ, ಈ ಲಾಕ್‌ಡೌನ್. ಕಾಲದಲ್ಲಿ ಒಳ್ಳೆಯ ಓದಿಗೆ ಅವಕಾಶ ಒದಗಿಸಿದ್ದಕ್ಕೆ.
    ಹೀಗೆ ಬರೆಯುತ್ತಿರು. ನಿನ್ನ ಆಕಾಶದ ಅನುಭವ ದಾಟುಸುತ್ತಿರು, ಕೂಸೇ…
    – ಬಿ.ಸುರೇಶ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: