ಭೂತಯ್ಯನ‌ ಮಗ ಅಯ್ಯು ಸಿನಿಮಾ ಮತ್ತು ನಮ್ಮ ದೆಹಲಿಯ ದಿನಗಳು

 ಸಾಯಿಲಕ್ಷ್ಮಿ

ಈಚೆಗೆ ರೇಡಿಯೋದಲ್ಲಿ‌ ‘ಭೂತಯ್ಯನ  ಮಗ ಅಯ್ಯು’‌ ಸಿನಿಮಾ ಆಧರಿಸಿದ ಕಾರ್ಯಕ್ರಮ‌ ರಜತಾಂತರಂಗ ವಿವಿಧ ಭಾರತಿಯಲ್ಲಿ ಅರ್ಧ ಗಂಟೆಯ ಹಲವಾರು‌ ಕಂತುಗಳಲ್ಲಿ‌ ಪ್ರಸಾರವಾಗುತ್ತಿತ್ತು . ಅದರಲ್ಲಿ‌ ಒಂದು ಹಾಸ್ಯ ಸನ್ನಿವೇಶ. ಗುಳ್ಳನ‌ ಪಾತ್ರಧಾರಿ ವಿಷ್ಣುವರ್ಧನ  ಕೋರ್ಟ್‌ ಮೆಟ್ಟಲೇರಿದ ಭೂ ವ್ಯಾಜ್ಯದ ನಿಮಿತ್ತ ಬೆಂಗಳೂರಿಗೆ ಬಂದಿರುತ್ತಾನೆ. ಅವನಿಗೆ ಇತರ ನಾಲ್ವರು ಸಂಗಡಿಗರು. ಕೋರ್ಟ್ ಕಲಾಪದಲ್ಲಿ ಸೋತು ಹಣ್ಣಾಗಿ‌ ನಿರಾಸೆಯ‌ ಮುಖ ಹೊತ್ತ ಗುಳ್ಳ ಹೊರಬರುತ್ತಾನೆ.

ಅವರಿಗೆಲ್ಲ ಪಾಪ ಹಸಿವು. ಗುಳ್ಳ ತನ್ನ‌ ಬಳಿ ಉಳಿದಿದ್ದ ಎರಡು ರೂಪಾಯಿ ಅವರ‌ ಕೈಗೆ ಹಾಕಿ “ನನಗೆ ಹಸಿವಿಲ್ಲ. ನೀವೆಲ್ಲ ಹೋಗಿ ಊಟ ಮಾಡಿ” ಎನ್ನುತ್ತಾನೆ. ದಿನೇಶ‌ ನೇತೃತ್ವದಲ್ಲಿ‌ ಹೋಟೆಲಿಗೆ ಜೊತೆಗಾರರು ಬರುತ್ತಾರೆ. ಫುಲ್ ಮೀಲ್ಸ್ ಎರಡು ರೂಪಾಯಿ ಎಂಬ ಬೋರ್ಡ‌ ನೋಡಿ ಒಬ್ಬರ ತಪ್ಪಾ ಒಬ್ಬರು‌ ತಲೆಯ‌ ಮುಸುಕು‌ ಬದಲಾಯಿಸಿಕೊಳ್ಳುತ್ತ ಅನುಮಾನ ಬಾರದಂತೆ ಹೊಟ್ಟೆ ತುಂಬ‌ ಊಟ ಮಾಡುತ್ತಾರೆ. ಮಾಣಿ‌ ಬಡಿಸಿ ಬಡಿಸಿ ಸುಸ್ತಾಗುತ್ತಾನೆ.

ನೋಡುಗರ ಕಣ್ಣಿಗೆ ಒಬ್ಬನೇ‌ ಊಟ‌ ಮಾಡುವಂತೆ. ಕಡೆಗೆ ಅನ್ನ, ಹುಳಿಯ‌ ತಪ್ಪಲೆಗಳು ಬರಿದಾಗುತ್ತವೆ. ಅದರೆ “ಅನ್ನ ಅನ್ನ” ಎಂಬ ಹಾಹಾಕಾರ ಈ ಬರಗೆಟ್ಟವರ‌ ಬಾಯಿಂದ‌ ಬರುತ್ತಲೇ ಇರುತ್ತದೆ. ಪರಿಸ್ಥಿತಿ ಕೈ ಮೀರಿದ್ದು ಕಂಡ ಹೋಟೆಲ್ ಯಜಮಾನ ಮಾಣಿಗೆ ಆದೇಶಿಸುತ್ತಾನೆ “ಫುಲ್ ಮೀಲ್ಸ್ ಬೋರ್ಡ್ ತೆಗೆದು ಹಾಕು. ನಾಳೆಯಿಂದ‌ ಬರೀ‌ ಪ್ಲೇಟ್‌ ಮೀಲ್ಸ್” ಇದು ‘ಭೂತಯ್ಯನ‌ ಮಗ ಅಯ್ಯು’ ಸಿನಿಮಾದಲ್ಲಿ‌ ತೆರೆಯ‌ ಮೇಲೆ ರಸಮಯವಾಗಿ ಮೂಡಿ ಬಂದಿರುವ‌ ದೃಶ್ಯ.

ರೇಡಿಯೋದಲ್ಲಿ‌ ಕೇಳುವಾಗ ನನ್ನ ಮನಸ್ಸು ಇಪ್ಪತ್ತೇಳು ವರುಷಗಳ ಹಿಂದಕ್ಕೆ ಓಡಿತು. ಆಗ‌ ನಾನು ದೆಹಲಿಯ ರೇಡಿಯೋ ಕಾಲೋನಿಯಲ್ಲಿ ಆಯೋಜಿಸಿದ್ದ ಆಕಾಶವಾಣಿಯ ಒಂದು ತಿಂಗಳ Basic Training programme ನಲ್ಲಿ ಭಾಗವಹಿಸಲು‌ ಮಂಗಳೂರು ಆಕಾಶವಾಣಿ‌ ಕೇಂದ್ರದಿಂದ ನಿಯೋಜನೆಗೊಂಡಿದ್ದೆ. ನನ್ನೊಡನೆ‌  ಕರ್ನಾಟಕ‌ ಪ್ರತಿನಿಧಿಸಲೆಂದು ಕೆ.ಎಸ್.ಪುರುಷೋತ್ತಮ, ಊರ್ಮಿಳಾ, ಗೋಪಾಲ ನಾಯಕ್ ಸಹ ಬಂದು ಸೇರಿದ್ದರು.

ದೇಶದ‌ ನಾನಾ ಭಾಗದಿಂದ‌ ಒಟ್ಟು ‌ಇಪ್ಪತ್ತೆರಡು‌‌‌ ಬೇರೆ ಬೇರೆ ಭಾಷೆಯ ಕಾರ್ಯಕ್ರಮ ನಿರ್ವಾಹಕರು ಅಲ್ಲಿ ಕಲೆತು‌ ಕರ್ನಾಟಕ ತಂಡ ವಿಶೇಷ ಮೆಚ್ಚುಗೆ ಗಳಿಸಿತ್ತು. ದೂರದ‌ ನೆಲದಲ್ಲಿ ನಮ್ಮಲ್ಲಿ ಅಷ್ಟು‌ ಒಗ್ಗಟ್ಟು. ಇಡೀ ದಿನ ಒಂದು ಗಂಟೆ ಅವಧಿಯ ಬೇರೆ‌ ಬೇರೆ ತರಗತಿಗಳು ಬಗೆಬಗೆಯ ಸಂಪನ್ಮೂಲ ವ್ಯಕ್ತಿಗಳಿಂದ. ಹಾಯಾಗಿ ಬಾನುಲಿ ನಿಲಯಗಳಲ್ಲಿ‌ ಓಡಾಡಿಕೊಂಡು‌ ಕಾರ್ಯ ನಿರ್ವಹಿಸುತ್ತಿದ್ದ ನಮ್ಮ‌ ಪಾಲಿಗೆ ಕಟ್ಟಿ ಹಾಕಿದ ಅನುಭವ. ಬಲು ತೂಕಡಿಕೆಯ ಸಮಯ. ಸಾಲದ್ದಕ್ಕೆ ದೆಹಲಿಯ ಅಗಸ್ಟ್ ತಿಂಗಳ‌ ಬಿಸಿಲ ತಾಪ ಬೇರೆ. ನಾನಂತೂ‌ ಕನ್ನಡಕ ಏರಿಸಿ ನಿದ್ದೆ‌ ಮಾಡುತ್ತಿದ್ದೆ. ಇಲ್ಲ ಆತ್ಮೀಯರಿಗೆ ಕಾಗದ ಬರೆಯುತ್ತ ಕೂರುತ್ತಿದ್ದೆ. ಒಮ್ಮೊಮ್ಮೆ ನನ್ನ ಮಾತೃ ಇಲಾಖೆಯಾದ ಬೆಂಗಳೂರು ದೂರವಾಣಿಯ ಮಿತ್ರೆಯರು‌ ಕರೆ ಮಾಡುತ್ತಿದ್ದರು. ಪೋನ್ ಇದ್ದದ್ದು ತುಸು ದೂರದ ಪ್ರಿನ್ಸಿಪಾಲ್ ಕೋಣೆಯಲ್ಲಿ. ಜವಾನ ಬಂದು ಹೆಸರು ಕೂಗುತ್ತಿದ್ದ. ತಕ್ಷಣ ನಾನು ಹೋಗಿ‌ ಮಾತನಾಡುವಾಗ ಅವರೋ “ಪಾಪ ಕ್ಲಾಸ್ ನಲ್ಲಿ ಇದ್ದೆ ಅನ್ನಿಸತ್ತೆ. ತೊಂದರೆ ಆಯಿತೇನೋ” ಎಂದರೆ ನಾನು “ಖಂಡಿತ ಇಲ್ಲ ಹೀಗೆ ಮಾಡ್ತಾ ಇರಿ ಖುಷಿಯಾಗತ್ತೆ” ಎಂದು ಅವರನ್ನು‌ ಹುರಿದುಂಬಿಸುತ್ತಿದ್ದೆ.

ಆಗ ಟ್ರಂಕಾಲ್ ಎಂದರೆ ದುಬಾರಿ  ವಿಷಯ.. ನನಗೆ ಹೀಗೆ ದಿನ ಕರೆ ಬರುತ್ತಿದೆ ಎಂದರೆ ಅದು ಆ ಗುಂಪಲ್ಲಿ ನನ್ನ ವರ್ಚಸ್ಸು ಹೆಚ್ಚಿಸಿದ್ದು‌ ನಿಜ.
ನಮ್ಮ ಬಳಗದಲ್ಲಿ ಒಂದು‌ ಒಳ ಒಪ್ಪಂದವಿದ್ದು ನಾನು‌ ಫೋನಿಗಾಗಿ ಹೋಗಿ ಮರಳುವಾಗ ಮತ್ತೊಬ್ಬರ ಹೆಸರನ್ನು‌ ಬಂದು‌ ಕೂಗುತ್ತಿದೆ. ಚಾರು‌ಖಾರೆ ಎಂತಲೋ ರಾಧಾಕೃಷ್ಣ ಎಂತಲೋ ಯಾರಿಗೆ ಹೆಚ್ಚು ನಿದ್ರೆ ಆವರಿಸುತ್ತಿದೆಯೋ ಅವರು ಕರೆಯ ನೆಪದಲ್ಲಿ ಕಾಲಾಡಿ ಬರುವರು. ‌ಮತ್ತೊಬ್ಬರ ಹೆಸರನ್ನು ಕೂಗುತ್ತಲೇ ತರಗತಿ ಪ್ರವೇಶಿಸುವರು. ಸಂಪನ್ಮೂಲ ವ್ಯಕ್ತಿಗಾಗಲಿ ಕೋ-ಆರ್ಡಿನೇಟರ್ ಶರ್ಮಾಗಾಗಲಿ ಅನುಮಾನ ಬಾರದಂತೆ ಸಹಜವಾಗಿ ಕೋ ಕೊಡುತ್ತಿದ್ದೆವು.

ನನಗೆ ಬರುತ್ತಿದ್ದ ಕರೆ‌ ಮಾತ್ರ‌ ನಿಜದ ಕರೆ ಎಂದು ಎಲ್ಲರ ಅರಿವಿಗೂ ಬಂದಿತ್ತು. ಈ‌ ಕುತಂತ್ರ ಸೂತ್ರಗಳಿಂದ ಎಲ್ಲರೂ‌ ಬೇಗ ಹೊಂದಿಕೊಂಡು ಬಿಟ್ಟೆವು. ಅಲ್ಲಿಯ‌ ಕ್ಯಾಂಟೀನಿನ ತಿಂಡಿ‌ ಊಟದ‌‌ ರುಚಿಯ ಸೊಗಸು ಬಣ್ಣಿಸಲು‌ ಬಾಯಿಲ್ಲ. ಶುರು ದಿನಗಳಲ್ಲಿ‌ ನಾನು ತೆಗೆದುಕೊಂಡು ಹೋಗಿದ್ದ ಚಟ್ನಿಪುಡಿ,‌ ಉಪ್ಪಿನಕಾಯಿ, ಚಿತ್ರಾನ್ನದ ಗೊಜ್ಜಿನ‌ ಜನಪ್ರಿಯತೆ ಮುಗಿಲು ಮುಟ್ಟಿತ್ತು. ಎಲ್ಲರು ಊಟದ ಸಮಯದಲ್ಲಿ ನನ್ನ ಟೇಬಲ್ ಸುತ್ತಲೇ. ಮಕ್ಕಳ ಕೈಯಿನ ಐ‌ಸ್ಕ್ರೀಂ, ಚಾಕೋಲೇಟಿನ ಹಾಗೆ ಅವೆಲ್ಲ‌ ಕರಗತೊಡಗಿದವು.

ವಾರಾಂತ್ಯಕ್ಕೆ ನಾನು ಯುನಿವರ್ಸಿಟಿ ಕ್ವಾರ್ಟರ್ಸನಲ್ಲಿದ್ದ ದೂರದ ಬಳಗದ ಪಾಚಾಲಿ ಅಂಕಲ್, ಶಾಂತಾ ಆಂಟಿ‌ಮನೆಯಲ್ಲಿದ್ದು ವಾಪಾಸ್ ಬರುವಾಗ ದೊಡ್ಡ ಹಾರ್ಲಿಕ್ಸ್ ಬಾಟಲಿನಲ್ಲಿ ಮೆಣಸಿನ ಸಾರೋ, ವೆತ್ತ ಕೊಳಂಬೋ ತುಂಬಿ ತರುತ್ತಿದ್ದೆ. ಭೋಜನದ ವಿರಾಮದಲ್ಲಿ ಸಹಪಾಠಿಗಳ‌ ಮೊಗ ಮೊರದಗಲ.‌ ಒಟ್ಟಲ್ಲಿ ಮನೆಯಿಂದ ದೂರ ಬಂದ‌ ಪ್ರತಿಯೊಬ್ಬರ ಬಾಯಿ ಬರಗೆಟ್ಟು ಹೋಗಿತ್ತು. ಕ್ಯಾಂಟೀನ್ ಊಟ ಯಾರಿಗೂ ರುಚಿಸದು. ಇಂತಹ ಗತಿಗೆಟ್ಟ ಸಮಯದಲ್ಲಿ‌ ನನ್ನ ರುಚಿಪ್ರಿಯತೆ ಆಸ್ವಾದಿಸಿದ್ದ ಆ ಎಲ್ಲರೂ ಸಂಜೆ‌ ಲಾನ್‌ನಲ್ಲಿ‌ ಕುಳಿತಿದ್ದಾಗ ಸಲಹೆ‌ ನೀಡಿದರು.

“ನೀವೇಕೆ ನಮಗೆ ನಿಮ್ಮ ಸೌತ್ ಇಂಡಿಯನ್ ಸಾಂಬಾರ್‌ ಮಾಡಿ‌ಕೊಡಬಾರದು? ಹೇಗೂ ಕ್ಯಾಂಟೀನಿನಲ್ಲಿ ಎಲ್ಲ ಸೌಕರ್ಯಗಳಿವೆ”
ನನ್ನನ್ನು ಒಪ್ಪಿಸಿದ್ದೇ ಅಲ್ಲದೆ ಕ್ಯಾಂಟಿನ್ ಯಜಮಾನನ ಅನುಮತಿಯನ್ನು‌ ಪಡೆದುಬಿಟ್ಟರು. ಅವರೇ‌ ಹೋಗಿ ಬೇಳೆ, ತರಕಾರಿ, ತೆಂಗಿನಕಾಯಿ ಸಮೀಪವಿದ್ದ‌ ‘ಕಿಂಗ್ಸ್ ವೇ‌ ಕ್ಯಾಂಪ್’ ನಿಂದ‌ ತಂದು ಅಣಿಮಾಡಿದರು. ಸರಿ ಗೆಳತಿ ಊರ್ಮಿಳಾ ಸಹಕಾರದಲ್ಲಿ ದೊಡ್ಡ‌ ಕೊಳದಪ್ಪಲೆಯಲ್ಲಿ ಗಮಗಮಿಸುವ ಹಬೆಯಾಡುವ ಹೋಳುಭರಿತ ಚಿತ್ತಾಕರ್ಷಕ ಬಣ್ಣದ ಸಾಂಬಾರ್ ಭುಜಿಸಲು ಸಿದ್ಧವಾಯಿತು. ನಮ್ಮೊಡನೆ‌ ಇನ್ನು ಅನೇಕರು ಉಂಡು ಖುಷಿಪಟ್ಟರು. ದಿನ ‘ಚಾವಲ್’ ಅಂದರೆ  ‘ಅನ್ನ’ ಎಲ್ಲರ ತಾತ್ಸಾರಕ್ಕೊಳಗಾಗಿ ಉಳಿದು ಹೋಗುತ್ತಿದ್ದದ್ದು ಅಂದು ವಿಶೇಷ‌ ಬೇಡಿಕೆ ಪಡೆದುಕೊಂಡು ತಪ್ಪಲೆ ಬಳಿದು ಹಾಕುವ ಸ್ಥಿತಿ ತಲುಪಿತು.‌ ಕೆಲವರಂತೂ ಕೈ ತೊಳೆಯಲು ಮನವೇ ಬಾರದಂತೆ ಕುಳಿತಂತೆ ಕಂಡಿತು.

ಅಂತಹ ಯಶಸ್ವೀ ಪಾಕಪ್ರಯೋಗ. ಎರಡು ದಿನ ಸಾಂಬಾರ್ ರುಚಿಯ ನೆನಪಲ್ಲಿ ಮೈಮರೆತಿರಬೇಕು ಮತ್ತೊಂದು ಸಂಜೆ ಅವರಲ್ಲೊಬ್ಬರಿಗೆ ‘ಅವಿಯಲ್’ ತಿನ್ನುವ ಬಯಕೆ ಬಹಳ ವರ್ಷಗಳಿಂದ‌ ಕಾಡುತ್ತಿರಬೇಕು. ಅವರು ಅವಿಯಲ್ ಹೆಸರು ಹೇಳಿ ಸಾ ಎನ್ನುತ್ತಿರುವಂತೆ ಉಳಿದವರು ಸೋ ಎಂದು ದನಿಗೂಡಿಸಿದರು. ಮತ್ತೊಮ್ಮೆ ಆಯ್ದ ತರಕಾರಿ ತೆಂಗಿನ ಒಕ್ಕೂಟ. ಅಂದು ರಾತ್ರಿಯು‌ ಪೊಗದಸ್ತಾದ ಊಟ ‌ಮಾಡಿ ಸಹಪಾಠಿಗಳು ತೃಪ್ತಿಯಿಂದ ತಣಿದರೆ ಚಾವಲ್ ಅಷ್ಟು‌ ಮಂಗಮಾಯ. ಕ್ಯಾಂಟಿನಿನವನು ಅನ್ನ ತೋಡಿ ತೋಡಿ ಸುಸ್ತಾಗಿ ಹೋದ.
ಮಾರನೆಯ ದಿನ ಟೀ ಸ್ವೀಕರಿಸಲು ಹೋದಾಗ ನನ್ನನ್ನು‌ ಮರೆಗೆ ಕರೆದು‌ ವಿನಂತಿಸಿಕೊಂಡ. “ಆಜ್ ಸೇ‌ ಬಾದ್ ಆಪ್ ಕಿಚನ್ ಸೆ ಅಂದರ್ ಮತ್ ಆನಾ‌ ಮೇಡಂ” ಎಂದು ವಿನಂತಿಸಿಕೊಂಡ. ನನಗೆ ಅದರ ಹಿಂದಿನ‌ ಅನ್ನ ಹೊಂಚುವಲ್ಲಿನ ಅವನ‌ ಪರದಾಟದ‌ ಕಾರಣ ತಿಳಿಯದೇ.

ನಂತರ ಕೆಲವು ಸಂಜೆ ಹೊರಗಡೆ ಹುಲ್ಲುಗಾವಲಿನ ಮೇಲೆ ನಮ್ಮ fire less cooking ಕಾರ್ಯಕ್ರಮ‌ ನಡೆದು ಕೋಸಂಬರಿ, ಫ್ರೂಟ್ ಸಲಾಡ್, ತರಕಾರಿ ಸಲಾಡ್, ರಸಾಯನ, ಚುರುಮುರಿ ಮುಂತಾದ ತರತರದ ರಸವುಕ್ಕಿಸುವ ಆಹಾರ ಪದಾರ್ಥಗಳು ಅವರ‌ ಜಿಹ್ವಾ ಚಾಪಲ್ಯ ತಕ್ಕಮಟ್ಟಿಗೆ ತಣಿಸಿದವು. ‘ಭೂತಯ್ಯನ ಮಗ ಅಯ್ಯು’ ಚಿತ್ರದ ದೃಶ್ಯ ರೇಡಿಯೋದಲ್ಲಿ ಕೇಳುವಾಗ ಈ ಘಟನೆ ಕಣ್ಮುಂದೆ ಸುಳಿದು ನಗು ತೇಲಿತು. ಹಸಿವು, ನಿದ್ದೆ, ಬಾಯಿರುಚಿ, ಅನಾರೋಗ್ಯ ಮೊದಲಾದ ಹಲಕೆಲವು ರಕ್ತಗತವಾದ ಅಂಶಗಳು ಎಲ್ಲರ ಅನುಭವಕ್ಕೂ ಒಂದೇ ಅಲ್ಲವೇ?

‍ಲೇಖಕರು nalike

May 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Vasundhara k m

    ಸೊಗಸಾದ ಬರಹ.. ನಿಮ್ಮ ಹದವಾದ ಬರಹ ಓದಿನ ಚಾಪಲ್ಯ ಹೆಚ್ಚಿಸಿದೆೆ. ಬರೆಯುತ್ತಿರಿ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: