ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭೆಟ್ಟಿ ಆಗುವಿಕೆ

ಇಂದು ಅಮೃತಾ ಪ್ರೀತಮ್ ಅವರ ಜನ್ಮದಿನ ಹಿನ್ನೆಲೆ ಅವರ ‘ಮುಲಾಕಾತ್’ ಕವಿತೆಯನ್ನು ಉತ್ತರ ಕರ್ನಾಟಕದ ಜವಾರಿ ಕನ್ನಡದಲ್ಲಿನ ಭಾವಾನುವಾದ ಇಲ್ಲಿದೆ.

ಮೂಲ : ಅಮೃತಾ ಪ್ರೀತಮ್
ಭಾವಾನುವಾದ: ರುಕ್ಮಿಣಿ ನಾಗಣ್ಣವರ

ಭೆಟ್ಟಿ ಆಗುವಿಕೆ

ಮೂಲ ಕವಿತೆ: ಅಮೃತ ಪ್ರೀತಮ್
ಭಾವಾನುವಾದ: ರುಕ್ಮಿಣಿ ನಾಗಣ್ಣವರ

ಭೆಟ್ಟಿ ಆಗುವಿಕೆ

ಒಂದು ಘಳಿಗಿಗಾದ್ರೂ
ಮುಗಿಲನ್ನ ಭೆಟ್ಟಿ ಆಗಬೇಕಂತಿತ್ತು
ಆದ್ರ ಈ ಮೋಡಗಳ ಗುಂಪಿನ್ಯಾಗ
ಯಾವ ದಿಕ್ಕಿಗಿ ಹೆಜ್ಜಿ ಇಡ್ಲಿ ಅಂತ
ಅಲ್ಲೇ ನಿಂತುಬಿಟ್ಟಿದ್ದೆ

ಒಂದssಸು ಮೋಡಗಳು
ಕರ್ರಗ ಕವಿದಿದ್ದವು
ಯಾವ ಕಾಲದವು
ಯಾವ ಸಂಸ್ಕಾರದವು
ನನ್ನ ದೈವಕ್ಕss ಗೊತ್ತು

ಒಂದೀಸು
ಗುಡುಗಾಕ ಹತ್ತಿದವು
ದಾರೀಲಿ ಹೋಗಾವ್ರ ನಸೀಬ
ಇಂಥದ್ದೇ ಅಂತ
ಮ್ಯಾಲಿಂದನ ಬರೆದುಬಿಟ್ಟಂಗ

ಇನ್ನೊಂದಷ್ಟು ಮೋಡಗಳು
ಸುತ್ತಿ, ಗಿರಕಿ ಹೊಡಕೋಂತ
ಕುಸಿದ ಗೋಡೆಗಳ ಬಿರುಕಿನೊಳಗಿಂದ
ಮತ್ತss ಎದ್ದು ಬರೋ ಕುತ್ತಿನಂಗಿದ್ದವು
ಇನಸು ಏಳ್ಕೊಂತ, ಬೀಳ್ಕೋಂತ
ಹಿರೀಕರು ಬಿಟ್ಟು ಹ್ವಾದ
ಹರಿದ ಚೀಟಿಗಳಂಗ

ಒಂದೀಸು
ನನ್ನ ಸುತ್ತಕೂ ಘೇರಾವಿಸಿ
ನನ್ನನ್ನss ಧುರಗುಟ್ಟಿ ನೋಡತಿದ್ವು
ಪೂರಾ ಮುಗಿಲನ್ನ
ತಮದ ಮುಟಿಗ್ಯಾಗ ಹಿಡಿದಿಟ್ಟವರಂಗ
ಈ ಹಾದೀಲಿ ಬರಾವ್ರು
ತಮ್ಮ ಹೆಜ್ಜಿನೂ ತಮ್ಮದಾಗಿಟ್ಟುಕೊಳ್ಳದೆ
ಕೊಂಡುಕೊಂಡ ಗುಲಾಮರಂಗ
ತಲಿಬಾಗ್ಕೊಂಡೇ ಬರಬೇಕೆಂಬಂಗ

ನಾನು ಏನ ಹೇಳಲಿ?
ಯಾರಿಗಿ ಹೇಳಲಿ?

“ತನುವಿನೊಳಗೂ ಒಂದು ಮುಗಿಲು ಇರ್ತದ
ಮತ್ತ ಅದರ ಪ್ರೀತಿಯ ಬೇಡಿಕೆ
ಈ ಬ್ರಹ್ಮಾಂಡದ ಮುಗಿಲನ್ನ
ಒಮ್ಮೆರ ದಿಟ್ಟಿಸಿ ನೋಡಬೇಕಂತದ…”

ಆದ್ರ
ಮೋಡಗಳ ಈ ಗುಂಪಿನ ಚಿಂತಿ
ಅಂವಂದಾಗಿರಲಿಲ್ಲ
ಅದು ನಂದೇ ಆಗಿತ್ತು
ಅಂವ ಇಶ್ಕಿನ ಒಂದು ಕಣ ತಿಂದಿದ್ದ
ದರ್ವೇಶನಂಗ
ನನ್ನ ಉಸಿರಿನ್ಯಾಗ
ತನ್ನ ಧೂನಿಯನ್ನ ಹಚಗೊಂಡಿದ್ದ

ನಾ ಅಂವನ ಹಂತ್ಯೇಕ ಕುಂತು,
ಧೂನಿಯ ಬೆಂಕಿನ ಕೆದಕಿ ಹೇಳಿದ್ಯಾ

“ಇವು ನಿನ್ನ-ನನ್ನ ಮಾತುಗಳು
ಆದ್ರ ಈ ಮಾತುಗಳನ್ನು
ಮೋಡಗಳ ಈ ಗುಂಪು ಕೇಳಿದ್ರ
ಆಗ ಹೇಳು ಯೋಗಿ
ನಂದೇನಾಗಬೇಕು?”

ಅಂವ ನಕ್ಕ
ಒಂದು ನೀಲಿ
ಮುಗಿಲಿನಷ್ಟು ನೀಲಿಯಾದ ನಗು

ನಕ್ಕು ಹೇಳಿದ

“ಇವು ಹೊಗೆಯ ರಾಶಿಗಳು
ಘೇರಾವಿಸೋದು ಗೊತ್ತು
ಗುಡುಗೋದು ಗೊತ್ತು
ಕಣ್ಣೋಟಗಳನ್ನ ತಡ್ಯೋದು ಗೊತ್ತು
ಆದ್ರ ಇವುಕುರ
ಈ ಸೊಕ್ಕು-ಸಿಡುಕು
ನಕ್ಷತ್ರಗಳೊಳಗ ಎಂದೂ ಮೊಳೆಯೋದಿಲ್ಲ
ನೀಲಿ ಮುಗಿಲಿನ ಕಾಯದ ಮ್ಯಾಲ
ಅಪವಾದ ಎಂದೂ ಅಂಟುದಿಲ್ಲ…”

ನಾ ಮತ್ತ ಕೇಳಿದ್ಯಾ

“ನಿನ್ನನ್ನ ಎದಿಗಪ್ಪಿಕೊಂಡು
ಮೋಡಗಳ ಈ ಗುಂಪಿನ್ಯಾಗ
ಹ್ಯಾಂಗ ದಾಟಿ ಹೋಗಲಿ?
ಸುತ್ತಿ, ಗಿರಕಿ ಹೊಡೆಯೊ
ಈ ಮೋಡಗಳಿಂದ
ನಾ ಹ್ಯಾಂಗ ದಾರಿ ಕೇಳಲಿ?”

ನನ್ನ ದೈವಕ್ಕss ಗೊತ್ತು

ಅಂವ ಎಂಥಾ ತವಕ ಕುಡಿದಿದ್ದನೋ!

ಮಿಂಚಿನ ಗೆರಿ ಹಾಂಗ
ನನ್ನ ನೋಡಿದ
ಹೇಳಿದ—

“ನೀ ಯಾರನ್ನೂ ದಾರಿ ಕೇಳಬ್ಯಾಡ
ಯಾವ ಗ್ವಾಡಿಗೂ ಕೈ ಹಚ್ಚಬ್ಯಾಡ
ಗಾಬರ್ಯಾಗಬ್ಯಾಡ
ಯಾರ ಮಾತಿಗೂ ಮಳ್ಳ ಆಗಬ್ಯಾಡ
ಮತ್ತ ಮೋಡಗಳ ಈ ಗುಂಪಿನ್ಯಾಗ
ನೀ ಗಾಳಿಯಂಗ ತೂರಿಹೋಗು.”

‍ಲೇಖಕರು Admin

31 August, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading