ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘವು ಸೆಪ್ಟೆಂಬರ್ ೦೫, ೨೦೨೬, ಶನಿವಾರ, ಬೆಳಿಗ್ಗೆ ೧೧ ಗಂಟೆಗೆ ನಾಡಿನ ಹಿರಿಯ ವ್ಯಂಗ್ಯಚಿತ್ರಕಾರ ಎಲ್.ಎನ್. ರಾವ್ ಅವರ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ ಸಹಕಾರವಿದೆ.
ಪ್ರಶಸ್ತಿ ಪುರಸ್ಕೃತರ ಪರಿಚಯ:
ಲಕ್ಷ್ಮೀ ನಾರಾಯಣ ರಾವ್ ಎಂ. (ಎಲ್.ಎನ್.ರಾವ್) ಕಾಸರಗೋಡು ಜಿಲ್ಲೆಯ ಕುಂಟಾಪುರದವರು.
ಉಡುಪಿಯಲ್ಲಿ ಲಾ ಕಲಿತರು. ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿ, ಆದರೆ ನಾಡಿಗ್, ಕೆ ಆರ್ ಸ್ವಾಮಿ ಅವರಿಂದ ಪ್ರಭಾವಿತರಾಗಿ ಕಾರ್ಟೂನ್ ರಚನೆ ಆರಂಭಿಸಿದರು. ಮೊಟ್ಟ ಮೊದಲ ಕಾರ್ಟೂನ್ 1980 ರಲ್ಲಿ ಮಯೂರದಲ್ಲಿ ಪ್ರಕಟವಾಯ್ತು. “ನಗೆ ಮುಗುಳು” ಪತ್ರಿಕೆಯ ರಾಜ್ಯಮಟ್ಟದ ಪ್ರಶಸ್ತಿ ಹಾಗೂ ಹಿಂದೂಸ್ತಾನ್ ಟೈಮ್ಸ್ ಅವಾರ್ಡ್ ಗಳಲ್ಲದೇ ಹಲವಾರು ಬಹುಮಾನಗಳು ಲಭ್ಯವಾಗಿವೆ. ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಸದಸ್ಯರಾಗಿದ್ದು ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.
ಶ್ರೀಕಾಂತ್ ಸ್ಮರಣಾರ್ಥ ದತ್ತಿ ಪ್ರಶಸ್ತಿ
ತುಮಕೂರಿನ ರಾಜನ್ ಅವರ ಮಗ ಶ್ರೀಕಾಂತ್ ಅವರ ಸ್ಮರಣಾರ್ಥ ದತ್ತಿ ಹಾಗೂ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಸಹ-ಪ್ರಾಯೋಜತ್ವದಲ್ಲಿ ಹತ್ತು ಸಾವಿರ ನಗದು ಸಹಿತ ಜೀವಮಾನದ ಪ್ರಶಸ್ತಿಯ ಪ್ರದಾನ ಮಾಡಲಾಗುತ್ತಿದೆ.
ಏಕವ್ಯಕ್ತಿ ಪ್ರದರ್ಶನ:
ಇಲ್ಲಿ ಜೀವಮಾನ ಪ್ರಶಸ್ತಿಗೆ ಪಾತ್ರರಾಗುತ್ತಿರುವ ಎಲ್ ಎನ್ ರಾವ್ ಅವರ ಆಯ್ದ ವ್ಯಂಗ್ಯಚಿತ್ರಗಳ ಪ್ರದರ್ಶನವನ್ನೂ ಇದೇ ಸಭಾಂಗಣದಲ್ಲಿ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘವು ಆಯೋಜಿಸಿದೆ.
ಈ ಏಕವ್ಯಕ್ತಿ ವ್ಯಂಗ್ಯಚಿತ್ರಗಳ ಪ್ರದರ್ಶನದ ಉದ್ಘಾಟನೆಯನ್ನು ನಾಡಿನ ಹಿರಿಯ ಚಿತ್ರಕಲಾವಿದ ಹಾಗೂ ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ಕೋಬಾಲ್ಟ್ ಆರ್ಟ್ ಗ್ಯಾಲರಿಯ ಸ್ಥಾಪಕರಾದ ಗಣಪತಿ ಎಸ್. ಹೆಗ್ಡೆ ಅವರು ಮಾಡಲಿದ್ದಾರೆ.

ಗೌರವ ಅತಿಥಿಗಳಾಗಿ ನಾಡಿನ ಖ್ಯಾತ ಹಿರಿಯ ವ್ಯಂಗ್ಯಚಿತ್ರಕಾರರು ಹಾಗೂ ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿಗಳೂ ಆದ ವ್ಹಿ ಜಿ. ನರೇಂದ್ರ ಅವರು ಆಗಮಿಸಲಿದ್ದಾರೆ.
ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಅಧ್ಯಕ್ಷರಾದ ವೈ. ಎಸ್. ನಂಜುಂಡ ಸ್ವಾಮಿ ಅವರು ನಿರ್ವಹಿಸಲಿದ್ದಾರೆ.
ಸಂಘದ ಸರ್ವ ಸದಸ್ಯರ ಸಭೆ:
ಈ ಸಮಾರಂಭದ ನಂತರ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ವಾರ್ಷಿಕ ಕಾರ್ಯಕಾರಿ ಸಭೆಯೂ ನಡೆಯಲಿದೆ.
ಪ್ರಶಸ್ತಿಗೆ ಪಾತ್ರರಾದ ಎಲ್ ಎನ್ ರಾವ್ ಅವರ ಈ ಏಕವ್ಯಕ್ತಿ ವ್ಯಂಗ್ಯಚಿತ್ರ ಪ್ರದರ್ಶನವು ಸೆಪ್ಟೆಂಬರ್ ೧೯, ೨೦೨೬ ರವರೆಗೆ ಸಾರ್ವಜನಿಕರ ವೀಕ್ಷಣೆಗಾಗಿ ತೆರೆದಿರುತ್ತದೆ.
ಸ್ಥಳ: ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ, #೧, ಮಿಡ್‌ಫೋರ್ಡ್ ಹೌಸ್, ಮಿಡ್‌ಫೋರ್ಡ್ ಗಾರ್ಡನ್, ಎಂ.ಜಿ. ರಸ್ತೆ (ಟ್ರಿನಿಟಿ ಮೆಟ್ರೋ ನಿಲ್ದಾಣದ ಪಕ್ಕ) ಬೆಂಗಳೂರು- ೫೬೦೦೦೧






0 Comments