-ರೇವಣಸಿದ್ಧಪ್ಪ ಜಿ.ಆರ್
ಕಂಬನಿ
ಮುಗಿಲು ಮಳೆ ಸುರಿದಂತೆ
ಹರಿಯುತ್ತದೆ ಕಂಬನಿ.
ಹರಿಯುವ ನೀರಿಗೆ ಕಟ್ಟಬಹುದು ಆಣೆಕಟ್ಟು,
ಕಂಬನಿಗೆ?
ಒರೆಸಬಹುದು ಕಂಬನಿಯ ಯಾರಾದರೂ,
ತಡೆಯಬಹುದೆ ಅದನು?
ಕಂಬನಿ
ಕಣ್ಣಿಂದ ಜಿನುಗುವ ನೀರಷ್ಟೇ ಅಲ್ಲ;
ಮಾತುಗಳು ಮೂಕವಾದಾಗ
ಹೃದಯದ ಹಾಡು.
ನಗುವಿನ ಮರೆಯಲ್ಲಿ
ಅವಿತು ನಿಂತಿರುವ
ಸತ್ಯದ ಪಾಡು.
ಕಂಬನಿಯ ಹಿಂದೆ
ನೆನಪುಗಳು ಸಾವಿರ;
ನೋವು ಹೇರಳ.
ನೋವರಸವಷ್ಟೇ ಅಲ್ಲ,
ಆನಂದವೂ
ಹರಿಯುತ್ತದೆ ಕಂಬನಿಯಾಗಿ;
ಭಾವಗಳಿಗೆ ಅಭೇದವೆಂದು
ಪ್ರಕೃತಿ ಸಾರುತ್ತದೆ ಪಾಠ.
ಕಂಬನಿ
ದುರ್ಬಲತೆಯ ಕುರುಹಲ್ಲ;
ಭಾರವಾದ ಆತ್ಮವ
ಹಗುರಾಗಿಸುವ ಸೆಳವು.
ಕಂಬನಿ ಜಿನುಗುವ
ನೀರಿನ ಹನಿಯಷ್ಟೇ ಅಲ್ಲ;
ಅಹಂಕಾರ ಅಡಗಿಸಿ
ಮಾನವತೆ ಪೊರೆಯುವ ಅಭಿಷೇಕ.
ಒಮ್ಮೆ ಅತ್ತು ಹಗುರಾದರೆ
ಕೊನೆಯಾಗದ
ಕಂಬನಿಯ ಜಲಪಾತ
ತೋರುತ್ತದೆ
ಮನುಷ್ಯನಿಗೆ ಹೊಸ ದಿಕ್ಕು.






0 Comments