ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭಿನ್ನ ದೃಷ್ಟಿಕೋನದಿಂದ ಬರೆದ ಪ್ರವಾಸ ಕಥನ

ಶಶಿಧರ ಹಾಲಾಡಿಯವರ ‘ಕಯಹುಗ ನಯಾಗರ’

‘ಅಭಿನವ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ಡಾ.ಪಾರ್ವತಿ ಜಿ.ಐತಾಳ್ ಅವರ ಬರಹ ಇಲ್ಲಿದೆ.

-ಡಾ.ಪಾರ್ವತಿ ಜಿ.ಐತಾಳ್

ಒಂದೇ ಜಾಗವನ್ನು ನೋಡಿದ ಬೇರೆ ಬೇರೆ ವ್ಯಕ್ತಿಗಳ ಪ್ರವಾಸಕಥನಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಳ್ಳುವುದಕ್ಕೆ ಕಾರಣ ಅವರ ವಿಭಿನ್ನ ದೃಷ್ಟಿಕೋನಗಳು ಮತ್ತು ಒಳನೋಟಗಳು. ಯಾರಿಗೆ ಯಾವುದು ಹೆಚ್ಚು ಮುಖ್ಯವಾಗಿ ಕಾಣಿಸುತ್ತದೋ ಅದು ಅವರ ಬರವಣಿಗೆಯಲ್ಲೂ ಜಾಗಪಡೆಯುವುದು ಸಹಜ. ಶಶಿಧರ ಹಾಲಾಡಿಯವರ ‘ಕಯಹುಗ ನಯಾಗರ’ ಎಂಬ ಅಮೆರಿಕಾ ಪ್ರವಾಸ ಕಥನವು ಇದುವರೆಗೆ ಬಂದ ಹತ್ತಾರು ಅಮೆರಿಕಾ ಕಥನಗಳಿಗಿಂತ ಭಿನ್ನವಾಗುವುದು ಇದೇ ಕಾರಣಕ್ಕೆ. ಇತರ ಅನೇಕರಂತೆ ಅವರಿಗೆ ಕೇವಲ ಬಾಹ್ಯ ಕಣ್ಣುಗಳಿಗೆ ಗೋಚರಿಸುವ ವಸ್ತುಗಳು. ವಿದ್ಯಮಾನಗಳು ಮತ್ತು ಹೋಲಿಕೆಗಳು ಸಾಕಾಗುವುದಿಲ್ಲ. ಅಲ್ಲಿನ ಜನಜೀವನ ಹೇಗಿದೆ, ಅವರು  ಹೇಗೆ ಬದುಕುತ್ತಾರೆ, ಅವರ ಗುಣ ಸ್ವಭಾವಗಳು ಹೇಗಿವೆ, ಅವರ ಇತಿಹಾಸ-ಪರಂಪರೆಗಳೇನಿವೆ, ಅಲ್ಲಿ ಪ್ರಚಲಿತವಿರುವ ಕಥೆಗಳೇನಿವೆ -ಎಂಬಿತ್ಯಾದಿ ಸಾಂಸ್ಕೃತಿಕ ವಿಚಾರಗಳನ್ನು ತಿಳಿಯುವ ಕುತೂಹಲ ಅವರಿಗಿದೆ.‌ ಅದೇ ರೀತಿ ಭೇಟಿಯಾದ ಬಂದು-ಮಿತ್ರರು, ಹೊಸಬರು, ಅಪರಿಚಿತರು, ಅವರ ಪ್ರೀತಿ, ಆತಿಥ್ಯ, ನಡವಳಿಕೆ ಎಲ್ಲವೂ ಅವರಿಗೆ ಮುಖ್ಯವಾಗುತ್ತದೆ.‌ ಮಾತ್ರವಲ್ಲದೆ, ಅಮೆರಿಕಾವನ್ನು ನೋಡದಿರುವ ತಮ್ಮ ಊರಿನ ಓದುಗರ ಜತೆಗೆ ತಮ್ಮ ಮೊದಲ ಅನುಭವಗಳನ್ನು ಸರಳ ವಿವರಣೆಗಳ ಮೂಲಕ ಹಂಚಿಕೊಳ್ಳುವ ಉತ್ಸಾಹವೂ ಇದೆ.. ಈ ಎಲ್ಲ ಅಂಶಗಳೂ ಸೇರಿ ಅವರ ಪ್ರವಾಸ ಕಥನವು ಒಂದು ಭಿನ್ನ ಸ್ವರೂಪವನ್ನು ಪಡೆದಿದೆ ಅನ್ನಬಹುದು.

ವಿದೇಶ ಪ್ರವಾಸದ ಮೊದಲ ಹಂತ ವೀಸಾ ಪಡೆದುಕೊಳ್ಳುವುದು. ಅದಕ್ಕಾಗಿ ತಾವು ಹೇಗೆಲ್ಲಾ ಕಷ್ಟಪಡಬೇಕಾಯಿತು ಅನ್ನುವುದನ್ನು ಆರಂಭದಲ್ಲೇ ವಿವರಿಸಿ ಮುಂದೆ ತಮ್ಮ ವಿಮಾನ ಪ್ರಯಾಣದ ಬಗ್ಗೆ ಹೇಳತೊಡಗುತ್ತಾರೆ. ಡೆಟ್ರಾಯಿಟ್ ಗೆ ಹೋಗಲು ಲುಫ್ತಾನ್ಸಾ ಏರ್ ಲೈನ್ಸ್ ಹತ್ತಿ ಫ್ರಾಂಕ್‌ಫರ್ಟ್ ನಲ್ಲಿ ಇಳಿದಾಗ ಅಲ್ಲಿನ ಜನರ ವರ್ತನೆ ಅವರಿಗೆ ಹಿಡಿಸುವುದಿಲ್ಲ. ಆದರೆ ಡೆಟ್ರಾಯಿಟ್ ವಿಮಾನ ನಿಲ್ದಾಣದಲ್ಲಿ  ಅವರಿಗೆ ಸಿಕ್ಕಿದ ಸ್ನೇಹಪೂರ್ಣ ಸ್ವಾಗತದಿಂದ ಅವರಿಗೆ ಸಂತೋಷವಾಗುತ್ತದೆ. ನಂತರ ಮಗಳು ಅಪ್ಪ-ಅಮ್ಮ ಇಬ್ಬರನ್ನೂ ತನ್ನ ಫ್ಲಾಟ್ ಇದ್ದ ಫಾರ್ಮಿಂಗ್ ಟನ್ ಹಿಲ್ಸ್ ಗೆ ಕರೆದೊಯ್ಯುತ್ತಾಳೆ. ಇಲ್ಲಿಂದಾಚೆ ಮಗಳು ಜತೆಗೆ ಇದ್ದುದರಿಂದ ಅವರ ಪ್ರವಾಸ ಸುಗಮವಾಗುತ್ತದೆ. 
    
ನ್ಯೂಯಾರ್ಕ್ ಎಂಬ ಮಹಾನಗರಿಯ ನೂರು ವರ್ಷ ಹಳತಾದರೂ ಹಾಳಾಗದ ನೂರಾರು ಗಗನ ಚುಂಬಿ ಕಟ್ಟಡಗಳು, ಒಂದು ಕಾಲದಲ್ಲಿ ಪ್ರಪಂಚದಲ್ಲೇ ಅತಿ ಎತ್ತರವಾದದ್ದೆಂದು ಪ್ರಸಿದ್ಧಿ ಪಡೆದಿದ್ದ ಎಂಪೈರ್ ಸ್ಟೇಟ್ ಬಿಲ್ಡಿಂಗ್,  ರಸಿಕರ ಮೋಜಿನ ತಾಣವಾದ ಟೈಮ್ ಸ್ಕ್ವೇರ್, ಕಡಲಿನಷ್ಟು ವಿಶಾಲವಾದ ಸರೋವರಗಳು, ನಯವಾದ ಮರಳತೀರಗಳು, ವಾಷಿಂಗ್ಟನ್‌, ಶ್ವೇತಭವನ, ಕಾಪಿಟಾಲ್, ನ್ಯಾಷನಲ್ ಪಾರ್ಕ್, ನಾಚುರಲ್ ಹಿಸ್ಟರಿ ಮ್ಯೂಸಿಯಂ, ನಯಾಗರಾ ಜಲಪಾತ -ಹೀಗೆ ೧೧ ವಾರಗಳು ಅಲ್ಲಿದ್ದ ಅವಧಿಯಲ್ಲಿ ಅನೇಕ ಸ್ಥಳಗಳನ್ನು ಅವರು ನೋಡುತ್ತಾರೆ.‌ ಮಗಳು ಇಡೀ ವಾರ ತನಗೆ ಡ್ಯೂಟಿ ಇದ್ದರೂ ವಾರಾಂತ್ಯಗಳಲ್ಲಿ ತಪ್ಪದೆ ತನ್ನ ಅಪ್ಪ-ಅಮ್ಮರನ್ನು ಕಾರಿನಲ್ಲಿ ಕುಳಿತುಕೊಳ್ಳಿಸಿಕೊಂಡು ಗೈಡ್ ನಂತೆ ತನಗೆ ತಿಳಿದಿರುವ ಅನೇಕ ವಿಷಯಗಳನ್ನು ವಿವರಿಸುವ ಬಗ್ಗೆ ಹೇಳುವಾಗ ಲೇಖಕರ ಮಾತುಗಳಲ್ಲಿ ಮಗಳ ಬಗ್ಗೆ ಹೆಮ್ಮೆ ಹಣಿಕಿಕ್ಕುತ್ತದೆ. ಕಯಹುಗ ನ್ಯಾಷನಲ್ ಪಾರ್ಕ್ ನೋಡಲು ಹೋಗಿದ್ದಾಗ ಬಿಳಿಯರು ಅಮೆರಿಕಕ್ಕೆ ಬರುವ ಮೊದಲು ಅಲ್ಲಿ ವಾಸವಾಗಿದ್ದ ರೆಡ್ ಇಂಡಿಯನ್ನರನ್ನು ಅಲ್ಲಿಂದ ಓಡಿಸಿ ಅವರ ಜಾಗವನ್ನು ಆಕ್ರಮಿಸಿಕೊಂಡ ಬಿಳಿಯರ ಕ್ರೌರ್ಯದ ಬಗ್ಗೆ ದುಃಖವೆನ್ನಿಸಿದರೂ ಅವರು ಅನಂತರ ಆಧುನಿಕ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ದೇಶವನ್ನು ಇಷ್ಟರ ಮಟ್ಟಿಗೆ ಅಭಿವೃದ್ಧಿ ಪಡಿಸಿದ್ದು ನೋಡಿ ಅಚ್ಚರಿಯಾಗುತ್ತದೆ. ದೇಶವು ಸಾಧಿಸಿದ ಪ್ರಗತಿ,  ಪಡುತ್ತಾ ಇರುವ ಪರಿಶ್ರಮ, ಅಚ್ಚುಕಟ್ಟಾದ ಸಾರಿಗೆ ವ್ಯವಸ್ಥೆ, ನಗರಗಳು ಬೆಳೆದ ರೀತಿ,  ವ್ಯಾಪಾರ ವ್ಯವಹಾರಗಳ ರೀತಿ, ಕಾನೂನು ಪಾಲನೆ, ಎಲ್ಲಿ ನೋಡಿದರೂ ಕಾಣುವ ಸ್ವಚ್ಚತೆ ಹಾಗೂ ಅಚ್ಚುಕಟ್ಟುತನ – ಮೊದಲಾದವುಗಳನ್ನು ನೋಡುವಾಗ ಲೇಖಕರಿಗೆ ತಮ್ಮ ದೇಶ ಎಷ್ಟು ಹಿಂದುಳಿದಿದೆ ಎಂದು ಅನ್ನಿಸದಿರುವುದಿಲ್ಲ. ಮತ್ತು ಅದಕ್ಕೆ ಕಾರಣ ಅಮೆರಿಕಾದಲ್ಲಿ ಅಭಿವೃದ್ಧಿ ನಡೆಯುತ್ತಿದ್ದ ಕಾಲದಲ್ಲಿ ಭಾರತವಿನ್ನೂ ಬ್ರಿಟಿಷರ ಬಿಗಿಮುಷ್ಟಿಯಿಂದ ಬಿಡಿಸಿಕೊಳ್ಳಲು ಒದ್ದಾಡುತ್ತಿತ್ತು, ಒಂದು ದೇಶದ ಅಭಿವೃದ್ಧಿಗೆ ಸ್ವಾತಂತ್ರ್ಯ ಅನ್ನುವುದು ಬಹಳ ಮುಖ್ಯ ಅನ್ನಿಸದಿರುವುದಿಲ್ಲ. ಆದರೂ ಜನಸಾಮಾನ್ಯರಿಗೆ ಅಲ್ಲಿ ನೀಡಲಾಗಿರುವ ಸ್ವಾತಂತ್ರ್ಯ ಸ್ವಲ್ಪ ಹೆಚ್ಚೇ ಅಯಿತು ಎಂದೂ ಅನ್ನಿಸುತ್ತದೆ. ಉದಾಹರಣೆಗೆ ಸಾರ್ವಜನಿಕ ಸ್ಥಳಗಳಲ್ಲಿ ಮರುವಾನ್ ಎಂಬ ಗಾಂಜಾ ಸೇವನೆ, ತಾಳ್ಮೆ ಕಳೆದುಕೊಂಡಾಗ ಅನಾಹುತಕ್ಕೆ ಎಡೆಮಾಡಿಕೊಡಬಹುದಾದ ಬಂದೂಕುಗಳನ್ನು ಹೊಂದುವ ಸ್ವಾತಂತ್ರ್ಯ ಇತ್ಯಾದಿ.

ಬ್ರೂಕ್ಲಿನ್ ಸೇತುವೆ ಯಲ್ಲಿ ಪ್ರೇಮಿಗಳು ತಮ್ಮ ಪ್ರೀತಿಯನ್ನು ಶಾಶ್ವತಗೊಳಿಸುವ ಉದ್ದೇಶದಿಂದ ಸರಳುಗಳಿಗೆ ಬೀಗ ಹಾಕಿಡುವ ದೃಶ್ಯ, ಮತ್ತು ‘ಇಲ್ಲಿ ಜ್ಯೋತಿಷ್ಯ ಹೇಳಲಾಗುವುದು’ ಅನ್ನುವ ಬೋರ್ಡುಗಳು ಮೂಢನಂಬಿಕೆಗಳು ಜಗತ್ತಿನೆಲ್ಲೆಡೆ ಸಾಮಾನ್ಯವೆಂಬ ಭಾವನೆಯನ್ನು ಲೇಖಕರಲ್ಲಿ ಮೂಡಿಸುತ್ತವೆ.. ಅವರ ಸಂವೇದನಾಶೀಲ ಮನಸ್ಸು ಫ್ಲಾಟಿನ ಅಂಗಳದಲ್ಲಿ ಆಡುವ ಮಕ್ಕಳನ್ನೂ ಅಲ್ಲೇ ಸುತ್ತಲಿನ ಪರಿಸರವನ್ನೂ ಬೀಸುವ ತಂಗಾಳಿ-ಗಿಡಮರಗಳನ್ನೂ ಪ್ರತಿದಿನ ವೀಕ್ಷಿಸುವಂತೆ ಮಾಡುತ್ತದೆ. ಅಲ್ಲೇ ಪಾರ್ಕಿನಲ್ಲಿ ಕುಳಿತಿದ್ದ ವಿಕಾಸ್ ಜೋಷಿ ಎಂಬ ವ್ಯಕ್ತಿ ಹಾಡುತ್ತಿದ್ದ ಹಿಂದಿ  ಹಾಡುಗಳನ್ನು ಇಷ್ಟಪಟ್ಟು ಅತನೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸುವುದು ಮನುಷ್ಯ ಸಂಬಂಧಗಳ ಬಗ್ಗೆ ಲೇಖಕರ ಕಾಳಜಿಯ ದ್ಯೋತಕ. ಅದರೆ ಕಾರಣಾಂತರಗಳಿಂದ ಅದು ಸಾಧ್ಯವಾಗುವುದಿಲ್ಲ. ಲೇಖಕರು ಅಲ್ಲಿದ್ದರೂ ಭಾರತದ ನೆನಪು ಜತೆಗೇ ಇರುತ್ತದೆಂಬುದಕ್ಕೆ ಸಾಕ್ಷಿ ಅವರ ದೇವಸ್ಥಾನಗಳ ಭೇಟಿ ಮತ್ತು ಅಲ್ಲಿ ಸಿಗುವ ಭಾರತೀಯ ತಿನಿಸುಗಳಿಗಾಗಿ ಆಸೆ ಪಡುವುದೇ ಸಾಕ್ಷಿ. ಯಾವುದಾದರೂ ವಸ್ತುವಿನ ಬೆಲೆಯನ್ನು ಡಾಲರ್ ಗಳಲ್ಲಿ ಹೇಳಿದಾಗ ತಕ್ಷಣವೇ ಅದನ್ನು ರೂಪಾಯಿಗೆ ಬದಲಾಯಿಸಿ ಯೋಚನೆ ಮಾಡದಿದ್ದರೆ ಅವರಿಗೆ ತೃಪ್ತಿಯಿಲ್ಲ. ದುಬಾರಿಯೆನ್ನಿಸಿದರೆ ಅವರಿಗೆ ಅದು ಬೇಡವೆನ್ನಿಸುತ್ತದೆ. ಯಾಕೆಂದರೆ ಅದು ಅವರು ಬೆಳೆದು ಬಂದ ಜೀವನಕ್ರಮ. ಅವರು ಎಷ್ಟು ಸರಳರು ಅಂದರೆ ಬಸ್ಸುಗಳಲ್ಲಿ ಹೋಗುವುದು ಕಷ್ಟವಾದರೂ ಅದೂ ಒಂದು ಅನುಭವ ಅಂದುಕೊಂಡು ಅನೇಕ ಕಡೆಗಳಲ್ಲಿ ಟ್ಯುಬ್ ರೈಲು, ‘ಹಾಪ್ ಇನ್ ಅಂಡ್ ಹಾಪ್ ಔಟ್’ಬಸ್ಸುಗಳಲ್ಲಿ ಹೋಗುತ್ತಾರೆ. ಅನುಭವವಷ್ಟೇ ಅವರಿಗೆ ಮುಖ್ಯ ಹೊರತು ಪ್ರತಿಷ್ಠೆಯೋ ಪ್ರದರ್ಶನವೋ ಅಲ್ಲ.. ಕಾದಂಬರಿಕಾರನಾದ ತನ್ನನ್ನು ಅಲ್ಲಿನ ಸಾಹಿತ್ಯ ಸಂಘಟನೆಗಳು ಮುಖ್ಯ ಅತಿಥಿಯಾಗಿ ಕರೆದಾಗ ಅವರಿಗೆ ತುಂಬಾ ಸಂತೋಷವಾಗುತ್ತದೆ. ಲಾನ್ದೂಸಿಂಗ್ರ ನಲ್ದಲಿ ಕಾಲಮಿತಿ ಯಕ್ಷಗಾನದ ಒಂದು ಅಚ್ಚುಕಟ್ಟಾದ ಪ್ರದರ್ಶನ ನೋಡಿ ದೂರ ದೇಶದಲ್ಲಿ ತಮ್ಮೂರಿನ ಯಕ್ಷಗಾನದಂಥ ಉನ್ನತ ಕಲೆಯನ್ನು ಪಸರಿಸಲು ಹೋರಾಡಿದವರ ಬಗ್ಗೆ ಅವರ ಮನಸ್ಸು ಮೆಚ್ಚುಗೆಯಿಂದ ತುಂಬಿಕೊಳ್ಳುತ್ತದೆ..

ತಾವು ನೋಡಿದ ಪ್ರತಿಯೊಂದು ಜಾಗ, ವಸ್ತು, ವಿದ್ಯಮಾನಗಳ ಬಗ್ಗೆ ಹಾಲಾಡಿಯವರು ತಮ್ಮ  ಜಿಜ್ಞಾಸೆ, ಅನಿಸಿಕೆ-ಅಭಿಪ್ರಾಯಗಳನ್ನು ಹೇಳುತ್ತ ಹೋಗುತ್ತಾರೆ. ಉದ್ದಕ್ಕೂ ಮಗಳು ಮತ್ತು ಮಡದಿ ನೀಡಿದ ಸಹಕಾರವನ್ನು ಪ್ರೀತಿಯಿಂದ  ನೆನಪಿಸಿಕೊಳ್ಳುತ್ತಾರೆ. ಆದರೆ ಅವರ ಹೆಸರುಗಳನ್ನು ಎಲ್ಲಿಯೂ ಉಲ್ಲೇಖಿಸದಿರುವುದಕ್ಕೆ ಕಾರಣ ಗೊತ್ತಾಗುವುದಿಲ್ಲ.‌ ಮನುಷ್ಯನ ಅಸ್ಮಿತೆಯ ಬೇರುಗಳು ಇರುವುದೇ ಹೆಸರಿನಲ್ಲಿ. ಹೆಸರುಗಳ ಮೂಲಕ ಪಾತ್ರಗಳು ನಮಗೆ ಹೆಚ್ಚು ಆಪ್ತರಾಗುತ್ತಾರೆ. ಇಲ್ಕಿ ಹೆಸರುಗಳಿಲ್ಲದಿರುವುದು ತುಸು ಆಭಾಸವೆನ್ನಿಸುತ್ತದೆ.

ಅಮೆರಿಕದ ಜೀವನ ಶೈಲಿಯ ಬಗ್ಗೆ ಹಲವಾರು ಹೊಸ ವಿಚಾರಗಳಿಂದ ತುಂಬಿರುವ ಅವರ ‘ಕಯಹುಗ ನಯಾಗರ’ ಎಂಬ ಈ ಪ್ರವಾಸ ಕಥನವು ತನ್ನ ಸುಂದರ ನಿರೂಪಣಾ ಶೈಲಿಯಿಂದಾಗಿ ಓದುವ ಖುಷಿಯನ್ನು ಕೊಡುತ್ತದೆ.

‍ಲೇಖಕರು Admin

3 November, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading