ಶ್ಯಾಮಲಾ ಮಾಧವ ಅವರ ‘ತುಷಾರ ಹಾರ’ ಒಡಲ ನೋವಿನ ಕಥನ
‘ಬಹುರೂಪಿ’ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತ ನಾ ದಿವಾಕರ ಅವರ ಬರಹ ಇಲ್ಲಿದೆ.
ಕೃತಿ – ‘ತುಷಾರ ಹಾರ’
ಲೇಖಕರು – ಶ್ಯಾಮಲಾ ಮಾಧವ
ಪ್ರಕಾಶನ – ಬಹುರೂಪಿ
ಕೊಳ್ಳಲು ಸಂಪರ್ಕಿಸಿ
–ನಾ ದಿವಾಕರ
ಸಾವು ಒಂದು ಭೀಕರ ವಾಸ್ತವ ಅಷ್ಟೇ ಆಳ ಸಾವನ್ನು ಅರಗಿಸಿಕೊಳ್ಳುವ ಹೆತ್ತೊಡಲ ವೇದನೆ
(ಶ್ಯಾಮಲಾ ಮಾಧವ ಅವರ “ ತುಷಾರ ಹಾರ ” ಒಡಲ ನೋವಿನ ಕಥನ ಇದು ವಿಮರ್ಶೆಯಲ್ಲ ಮನದಾಳದ ಅಭಿವ್ಯಕ್ತಿ ಇದು)
ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಈ ತತ್ವಶಾಸ್ತ್ರೀಯ ಕಲ್ಪನೆ ಎಷ್ಟೇ ವಾಸ್ತವ ಎನಿಸಿದರೂ, ನಾವು ಬದುಕುವ ಪರಿಸರದಲ್ಲಿ ಘಟಿಸುವ ವ್ಯಕ್ತಿಗಳ ದುರಂತಮಯ ಅಂತ್ಯ ಅಥವಾ ಹಠಾತ್ ನಿರ್ಗಮನ ಎಂತಹ ಗಟ್ಟಿ ಹೃದಯವನ್ನೂ ಕಲಕಿಬಿಡುವ ಸಾಧ್ಯತೆಗಳಿವೆ. “ನೀವು ಕಮ್ಯುನಿಸ್ಟರಾಗಿದ್ದು ಹೇಗೆ ಅಷ್ಟೊಂದು ಭಾವುಕರಾಗುತ್ತೀರಿ ?” ಎಂಬ ಪ್ರಶ್ನೆ ಸ್ನೇಹವಲಯದಲ್ಲಿ ಎದುರಾದಾಗ ಮನಸ್ಸು ಗೊಂದಲದ ಗೂಡಾಗಿಬಿಡುತ್ತದೆ. ಈ ಪ್ರಶ್ನೆಗೆ ಉತ್ತರಿಸುವಾಗ ಹೀಗೆ ಯೋಚಿಸಬಹುದು. ಪ್ರತಿ ವ್ಯಕ್ತಿಯೂ ತನ್ನ ಬದುಕಿನ ಹಾದಿಯಲ್ಲಿ ಏನೋ ಒಂದು ʼಆಗುತ್ತಾನೆ/ಳೆʼ. ಅದರಲ್ಲಿ ಕಮ್ಯುನಿಸ್ಟ್ ಎಂಬ ಸೈದ್ಧಾಂತಿಕ ಲೇಬಲ್ ಸಹ ಒಂದು. ಆದರೆ ಯಾರೂ ಸಹ ಮನುಷ್ಯ-ಮಾನವ ʼಆಗುವುದಿಲ್ಲʼ, ಬದಲಾಗಿ ಹುಟ್ಟುತ್ತಾರೆ. ಈ ಹುಟ್ಟು ನಮ್ಮ ದೇಹದೊಳಗಿನ ಸೂಕ್ಷ್ಮ ಭಾವತಂತುಗಳನ್ನು ನಿರ್ದೇಶಿಸುತ್ತದೆ. ನಾವು ಏನೇ ʼ ಆಗುವುದಾದರೂ ʼ ಈ ಸೂಕ್ಷ್ಮ ತಂತುಗಳು ನಾಶವಾಗುವುದಿಲ್ಲ.
ಈ ಪ್ರಸಂಗವನ್ನು ಸದ್ಯಕ್ಕೆ ಬದಿಗಿಡೋಣ. ಆದರೆ ಜೀವನದ ಪಯಣದಲ್ಲಿ ವ್ಯಕ್ತಿಗತವಾಗಿ ನಮಗೆ ಎದುರಾಗುವ ಹಲವಾರು ಪ್ರಸಂಗಗಳು ನಮ್ಮೊಳಗಿನ ಉತ್ಕಟ ಭಾವನೆಗಳನ್ನು ಸದ್ದಿಲ್ಲದೆ ಹೊರಹಾಕಿಬಿಡುತ್ತವೆ. ಪರಿಚಿತ ವಲಯದಲ್ಲಿ ಸಂಭವಿಸುವ ಸಾವು ನೋವುಗಳಿಗೆ ನೇರವಾಗಿ ಸ್ಪಂದಿಸುವ ಅವಕಾಶಗಳು ವಿಪುಲವಾಗಿರುತ್ತವೆ. ಅಲ್ಲಿ ಸೃಷ್ಟಿಯಾಗುವ ಭಾವನೆಗಳು ಆ ಕ್ಷಣದಲ್ಲೇ ವ್ಯಕ್ತವಾಗಿ ಕ್ರಮೇಣ ವಿಸ್ಮೃತಿಗೆ ಜಾರಿಬಿಡುತ್ತದೆ. ಆದರೆ ನಮ್ಮ ಕಲ್ಪನೆಯ ಸಾಮಾಜಿಕ ಹಂದರ (Social Canvas) ದೊಡ್ಡದಾಗುತ್ತಾ ಹೋದಂತೆ, ಪರಿಚಿತ/ಅಪರಿಚಿತ/ನಿಕಟ/ದೂರ ಇವೆಲ್ಲವೂ ನಗಣ್ಯವಾಗಿ, ನೇರವಾಗಿ ಕಾಣದ, ಮಾತನಾಡದ ದೂರದಲ್ಲೆಲ್ಲೋ ಸಂಭವಿಸುವ ಸಂಕಟಗಳು ನಮ್ಮ ಮನ ಹೃದಯಗಳನ್ನು ವಿಹ್ವಲಗೊಳಿಸುತ್ತವೆ. ಇದನ್ನು ಸೂಕ್ಷ್ಮ ಸಂವೇದನೆ ಎನ್ನಬಹುದು ಅಥವಾ ಸರಳವಾಗಿ ಜೀವಪ್ರೀತಿ ಎಂದೂ ಬಣ್ಣಿಸಬಹುದು.
ಭಾವತಂತುಗಳ ಒಳಹೊರಗು
ಈ ಜೀವ ಪ್ರೀತಿಯ ಉತ್ಕಟತೆ ಹೆಚ್ಚಾಗಿದ್ದಷ್ಟೂ ʼಭಾವುಕತೆʼ ತೀವ್ರವಾಗುತ್ತಲೇ ಹೋಗುತ್ತದೆ. ಒಂದು ಸಿನೆಮಾ, ಒಂದು ಕಾದಂಬರಿ, ಒಂದು ಆತ್ಮಕಥೆ ಅಥವಾ ಎಲ್ಲೋ ಸಂಭವಿಸುವ ಒಂದು ಘಟನೆ ಮನದಾಳದ ಭಾವ ತಂತುಗಳನ್ನು ಮೀಟಲಾರಂಭಿಸುತ್ತದೆ. ಇತ್ತೀಚಿನ ಇಸ್ರೇಲ್—ಇರಾನ್ ಯುದ್ಧದಲ್ಲಿ ಅಮೆರಿಕದ ಕ್ಷಿಪಣಿ ದಾಳಿಯಲ್ಲಿ ಮೃತರಾದ ಇರಾನಿನ 180 ಶಾಲಾ ಮಕ್ಕಳ ಚೀತ್ಕಾರ ಕೇಳದೆ ಹೋದರೂ ವೈಯುಕ್ತಿಕ ಕಂಬನಿಗೆ ಅಡ್ಡಿಯಾಗುವುದಿಲ್ಲ. ಮೈಸೂರಿನಲ್ಲಿ ಬಲೂನು ಮಾರುವ 10 ವರ್ಷದ ಬಾಲೆ ಅತ್ಯಾಚಾರ-ಹತ್ಯೆಗೀಡಾದಾಗ ಮತ್ತದೇ ಕಂಬನಿ ಇಣುಕುತ್ತದೆ. ಈ ಉತ್ಕಟ ಭಾವುಕತೆಯನ್ನು ಮನದಾಳದಲ್ಲಿ ಹುದುಗಿಸಿಟ್ಟುಕೊಂಡು, ಒಬ್ಬ ಕ್ಯಾನ್ಸರ್ ಪೀಡಿತ ವ್ಯಕ್ತಿಯ ಯಾತನೆ, ಆತನ ಸಂಕಟಗಳನ್ನು ಕುರಿತ ಪುಸ್ತಕವನ್ನು ತೆರೆದಾಗ , ಪುಟಪುಟಕ್ಕೂ ಮನಸ್ಸು ತಳಮಳದ ಅಲೆಗಳಲ್ಲೇ ತೇಲುತ್ತಿರುತ್ತದೆ.

ಅಕಾಲ ಮೃತ್ಯುವಿಗೀಡಾಗುವ ಈ ನಿರ್ಭಾಗ್ಯ ವ್ಯಕ್ತಿಯ ನೋವು ಸಂಕಟಗಳನ್ನು ಅಕ್ಷರ ರೂಪದಲ್ಲಿ ತೆರೆದಿಡುವುದು ಆತನ ಹೆತ್ತ ತಾಯಿಯೇ ಆದರೆ, ಆಕೆಯ ತಾಯೊಡಲ ಸಂಕಟಗಳು ಇನ್ನೂ ಗಂಭೀರವಾಗಿ ಕಾಡತೊಡಗುತ್ತವೆ. “ ಪುತ್ರ ಶೋಕಂ ನಿರಂತರಂ ” ಎಂಬ ಪ್ರಾಚೀನ ನಾಣ್ಣುಡಿಯಿದೆ. ಸಮಕಾಲೀನ ದೃಷ್ಟಿಯಲ್ಲಿ ನಾವು ಈ ಪುರುಷಾರ್ಥದ ಪದಗಳಿಗೆ ಪುತ್ರಿಯನ್ನೂ ಸೇರಿಸುವುದು ಅನಿವಾರ್ಯ. ಏನೇ ಆಗಲಿ ತನ್ನ ಒಡಲ ಕುಡಿ ತನ್ನ ಕಣ್ಣೆದುರಿನಲ್ಲೇ ಜೀವಕಂಟಕ ಕ್ಯಾನ್ಸರ್ನಂತಹ ಭೀಕರ ಖಾಯಿಲೆಗೆ ತುತ್ತಾಗಿ ನರಳಾಡುವುದನ್ನು ಸಹಿಸಿಕೊಂಡು, ಆ ನಿರ್ಭಾಗ್ಯನ ಭೌತಿಕ ಯಾತನೆಗಳೆಲ್ಲವನ್ನೂ ತನ್ನ ಅಂತರಾತ್ಮದಲ್ಲಿ ಹುದುಗಿಸಿಟ್ಟುಕೊಂಡು, ಸಾವಿನೊಡನೆ ಸಂಘರ್ಷಿಸುವ ಒಡಲ ಕಂದನ ಕೊನೆಯುಸಿರಿನವರೆಗೂ, ಎದೆಯಾಳದಲ್ಲಿ ಅದುಮಿಟ್ಟುಕೊಳ್ಳುವ , ಆ ತಾಯಿಯ ಸಂಕಟವನ್ನು ಹೇಗೆ ವರ್ಣಿಸಲು ಸಾಧ್ಯ ?
ತಾಯೊಡಲ ಸಂಕಟಗಳ ನಡುವೆ
ಬಹುಶಃ ಇದು ವರ್ಣಿಸಲಾಗದ ಒಂದು ಭಾವನಾತ್ಮಕ ಸೂಕ್ಷ್ಮತೆ. ಥಟ್ಟನೆ ನೆನಪಾಗುವುದು ರಾಜೇಶ್ ಖನ್ನಾ ಮೇರು ಅಭಿನಯದ 1970ರ ಆನಂದ್ ಚಿತ್ರ. ಹೊಸ್ತಿಲಲ್ಲಿರುವ ತನ್ನ ಸಾವನ್ನು ನಗುನಗುತ್ತಲೇ ಸ್ವೀಕರಿಸುತ್ತಾ ಸುತ್ತಲಿನ ಎಲ್ಲರಲ್ಲೂ ಕಂಬನಿಯನ್ನು ಮಾತ್ರ ಉಳಿಸಿ ನಿರ್ಗಮಿಸುವ ಆನಂದ್ ವರುಷಗಳೇ ಕಳೆದರೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಡುತ್ತಾನೆ. ಈ ಸಿನೆಮಾದ ಕೊನೆಯ ದೃಶ್ಯದಲ್ಲಿ (ಎಷ್ಟು ಸಲ ಸಿನಿಮಾ ನೋಡಿದರೂ) ಬುಳಕ್ಕನೆ ಹೊರಬರುವ ಹಾಗೆ , ಇತ್ತೀಚೆಗೆ ಒಂದು ಉತ್ಕೃಷ್ಟ ಜೀವನಗಾಥೆಯನ್ನು ಓದಿ ಮಗಿಸುವಾಗ, ಪುಸ್ತಕದ ಕೊನೆಯಲ್ಲಿ ಬರುವ ʼ ನನ್ನ ಕಂದ ಹೊರಟು ಹೋಗಿದ್ದ ʼ ಎಂಬ ತಾಯಿಯ ನಾಲ್ಕೇ ಪದಗಳು ನನ್ನ ಬೊಗಸೆ ತುಂಬುವಷ್ಟು ಕಂಬನಿಯನ್ನು ಮೂಡಿಸಿದ್ದವು. ಶ್ರೀಮತಿ ಶ್ಯಾಮಲಾ ಮಾಧವ ಅವರ ʼ ತುಷಾರ ಹಾರ ʼ ಈ ಹನಿದ ಕಣ್ಣುಗಳಿಗೆ ಗ್ರಾಂಥಿಕ ಸಾಕ್ಷಿಯಾಗಿತ್ತು.
“ತುಷಾರ ಹಾರ” ಒಂದು ಜೀವನಗಾಥೆ ಅಲ್ಲ ಅಥವಾ ಹೆತ್ತೊಡಲ ವೇದನೆಗಳನ್ನು ಹೊರಹಾಕುವ ಅಕ್ಷರ ಗುಚ್ಛಗಳ ಸಂಕಲನವೂ ಅಲ್ಲ. ಅದೊಂದು ಜೀವಂತ ಕಥನ. ತನ್ನ ಕ್ಯಾನ್ಸರ್ ಪೀಡಿತ ಮುದ್ದು ಮಗನ ನೋವುಗಳೆಲ್ಲವನ್ನೂ ತನ್ನದಾಗಿಸಿಕೊಂಡು ಕೊನೆಯ ಕ್ಷಣದವರೆಗೂ ಆ ಜೀವದ ಉಸಿರು ನಿಲ್ಲದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ , ತನ್ನ ವ್ಯಕ್ತಿಗತ ನೋವು ಸಂಕಟಗಳನ್ನು ನೀರಿನ ಗುಟುಕಿನ ಹಾಗೆ ಹನಿಹನಿಯಾಗಿ (Sip by Sip ) ನುಂಗಿಕೊಳ್ಳುತ್ತಾ ಸಾಗುವ ಒಂದು ಹೆತ್ತೊಡಲಿನ ಒಳವೇದನೆಗಳನ್ನು ಓದುಗರ ಎದೆಯಾಳಕ್ಕಿಳಿಸುವಂತೆ ಅಭಿವ್ಯಕ್ತಿಸುವ ಒಂದು ಪುಸ್ತಕ “ ತುಷಾರ ಹಾರ ”.. ತಮ್ಮ ಮಗುವಿನ ( ತಮ್ಮ ಮಗನನ್ನು ಮಗೂ ಎಂದೇ ಕರೆಯುವ ಶ್ಮಾಮಲಾ ಮಾಧವ್ ಅವರ ಧಾಟಿ ನನ್ನನ್ನು ಕೊನೆಯುಸಿರವರೆಗೂ ಮಗೂ ಎಂದೇ ಕರೆಯುತ್ತಿದ್ದ ನನ್ನಮ್ಮನನ್ನು ನೆನಪಿಸುತ್ತದೆ) ಯಾತನೆಗಳ ಕ್ಷಣಕ್ಷಣವನ್ನೂ ಬದುಕುಳಿಯುತ್ತಾನೆ ಎಂಬ ಭರವಸೆಯೊಂದಿಗೇ ದಾಖಲಿಸುವ ಲೇಖಕಿ ಶ್ಯಾಮಲಾ ಮಾಧವ್ ʼತಾಯಿʼ ಎಂಬ ಉದಾತ್ತ ಕಲ್ಪನೆಯನ್ನು ಸಾಕ್ಷಾತ್ಕರಿಸುತ್ತಾರೆ.
“ತುಷಾರ ಹಾರ” ಒಡಲ ನೋವಿನ ಕಥನ ಎಂಬ ಶೀರ್ಷಿಕೆಯೇ ಇದನ್ನು ಪ್ರಮಾಣೀಕರಿಸುತ್ತದೆ. ಶ್ಮಾಮಲಾ ಅವರ ಆಪ್ತ ಗೆಳತಿ, ಸಾಹಿತಿ ನೇಮಿಚಂದ್ರ ತಮ್ಮ ಬೆನ್ನುಡಿಯಲ್ಲಿ “ ತುಷಾರನಂತೆ ಸತ್ತೂ ಉಳಿದವರ ಕಥೆಯನ್ನು ಶ್ಯಾಮಲಾ ಬರೆದಿದ್ದಾರೆ,,, ಇದು ನೋವಿನ ಗಾಥೆ,,,,, ಕಣ್ಣನ್ನು ತೋಯಿಸುವ ಮನಸ್ಸನ್ನು ಆರ್ದ್ರವಾಗಿಸುವ ತಾಯಿ-ಮಗುವಿನ ಕಥೆಯಿದು ” (ಪುಟ 125) ಎಂದು ಹೇಳುವುದು ಎಷ್ಟು ಅರ್ಥಪೂರ್ಣ. ಕೋವಿದ್ ಸಂಕಟಗಳ ದಿನಗಳಲ್ಲಿ 2021ರ ಮೊದಲ ಒಂಬತ್ತು ತಿಂಗಳಲ್ಲಿ ಶ್ಯಾಮಲಾ ಅವರ ಮಗು ಅನುಭವಿಸುವ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಎಂಬ ಮಾರಣಾಂತಿಕ ಖಾಯಿಲೆ, ಈ ಪುಸ್ತಕದ ಓದುಗರನ್ನು ಎರಡು ರೀತಿಯಲ್ಲಿ ದುಃಖತಪ್ತರನ್ನಾಗಿಸುತ್ತದೆ.
ಒಡಲ ಸಂವೇದನೆಯ ಕಿಚ್ಚು
ಮೊದಲನೆಯದು ಒಬ್ಬ ಮಹತ್ವಾಕಾಂಕ್ಷಿ ಉದ್ಯಮಶೀಲ ವ್ಯಕ್ತಿ, ತಾನು ಕಟ್ಟಿಕೊಂಡ ಕನಸುಗಳೆಲ್ಲವೂ ತನ್ನೆದುರಿನಲ್ಲೇ ಹಂತಹಂತವಾಗಿ ಕುಸಿಯುತ್ತಾ ಹೋಗುವುದನ್ನು ಕಾಣುತ್ತಾ, ಕೊನೆಯ ಗುಟುಕಿನವರೆಗೂ ಬದುಕುವ ಆಸೆಯೊಂದಿಗೆ ತಾಯಿಯ ಮಡಿಲಲ್ಲಿ ಸಾಂತ್ವನ ಕೋರುವ ತುಷಾರನ ಯಾತನಾಮಯ ಪಯಣ. ಎರಡನೆಯದು ಕೋವಿದ್ ಸಂದರ್ಭದ ನಿರ್ಬಂಧಗಳ ನಡುವೆ ಆಸ್ಪತ್ರೆಯಲ್ಲಿರುವ ತನ್ನ ಮಗುವನ್ನು ನೋಡಲೂ ಆಗದೆ ಮನೆಯಲ್ಲೇ ಕುಳಿತು ಅಂತರಂಗದ ವೇದನೆಯನ್ನು ನಿತ್ಯಾಹಾರದ ಹಾಗೆ ನುಂಗಿಕೊಂಡು, ಆ ಮುದ್ದಿನ ಕೂಸು ಎಂದಾದರೊಂದು ದಿನ ಆರೋಗ್ಯವಂತನಾಗಿ ಪುನಃ ಮಡಿಲಲ್ಲಿ ಮಲಗಿ ಸಾಂತ್ವನ ಪಡೆಯುತ್ತಾನೆ ಎಂಬ ನಿರೀಕ್ಷೆಯಲ್ಲೇ ಕಾಲ ಕಳೆಯುತ್ತಾ ಕೊನೆಯ ದಿನಗಳಲ್ಲಿ ಮಗುವಿನೊಂದಿಗೆ ಇರುವ ತಾಯಿಯೊಬ್ಬಳ ವೇದನೆ.
ಪುಸ್ತಕದ ಪದಪದವೂ ಮನದಾಳಕ್ಕೆ ನಾಟುವಂತಿರುವುದಕ್ಕೆ ಕಾರಣ, ಶ್ಯಾಮಲಾ ಮಾಧವ್ ತಮ್ಮ ಮಗುವಿನ ದೈಹಿಕ ಬಾಧೆ, ಆಂತರಿಕ ಯಾತನೆ, ವೈದ್ಯಕೀಯ ಚಿಕಿತ್ಸೆಯಿಂದುಂಟಾಗುವ ಚಿತ್ರಹಿಂಸೆ, ಕಿಮೋದಂತಹ ಚಿಕಿತ್ಸೆಯಿಂದ ಉಂಟಾಗುವ ನೋವು ಇವುಗಳನ್ನು ದಿನಚರಿಯ ಟಿಪ್ಪಣಿಗಳ ಹಾಗೆ ವಿವರಿಸುತ್ತಾ ಹೋಗುವ ಪರಿ. ಇದು ದಿನಚರಿಯಲ್ಲಿ ಬರೆದಿಟ್ಟಿದುದಲ್ಲ, ಮಗುವಿನ ನಿರ್ಗಮನದ ನಂತರ ತಮ್ಮ ಮೊಬೈಲ್ನಲ್ಲಿ ದಾಖಲಾಗಿದ್ದ ದಿನಾಂಕ ಸಹಿತ ವಿವರಗಳನ್ನು ಮತ್ತೊಮ್ಮೆ ಅಕ್ಷರಕ್ಕಿಳಿಸಿದ್ದಾರೆ. ತನ್ನ ಮಗು ಸಾವಿನ ದವಡೆಯಲ್ಲಿದ್ದಾಗ ಜೊತೆಯಲ್ಲೇ ಇದ್ದುಕೊಂಡು ಆ ಕೂಸಿನ ನೋವಿಗೆ ತಾಯೊಡಲ ಮುಲಾಮು ಹಚ್ಚುತ್ತಾ ಭರವಸೆಯ ಬೆಳಕು ಹರಿಸುತ್ತಿದ್ದ ತಾಯಿಯೊಬ್ಬಳ ಸಂಯಮಕ್ಕೆ ಸಾಟಿ ಯಾವುದು ? ಅದೇ ತಾಯ್ಮಮತೆಯ ಸಂಯಮವನ್ನು ಅಕ್ಷರಕ್ಕಿಳಿಸುವ ಸಂದರ್ಭದಲ್ಲೂ ಶ್ಯಾಮಲಾ ಮಾಧವ್ ತೋರಿದ್ದಾರೆ. ಬಹುಶಃ ಇದಕ್ಕೆ ಸಮಾನಾಂತರವಾದ ಉದಾಹರಣೆಗಳು ದೊರೆಯುವುದು ಕಷ್ಟ.
ತಾಯ್ಮಮತೆಯ ಉತ್ಕೃಷ್ಟ ನಿದರ್ಶನ
“ತುಷಾರ ಹಾರ” ಸಂವೇದನಾಶೀಲ ಮನಸ್ಸುಗಳನ್ನು ಕದಡುವುದಕ್ಕೆ ಮತ್ತೊಂದು ಕಾರಣ, ಶ್ಯಾಮಲಾ ಮಾಧವ್ ಅವರು ತಮ್ಮ ಮಗುವಿನ ಚಿಕಿತ್ಸೆಯ ಹಾದಿಯನ್ನು ವಿವರಿಸುತ್ತಲೇ, ಆ ಕೂಸು ಎದುರಿಸಬೇಕಾಗಿದ್ದ, ಎದುರಿಸಿದ್ದ, ಅನುಭವಿಸಿದ್ದ ದೈಹಿಕ ಯಾತನೆಗಳನ್ನೂ ಚಾಚೂ ತಪ್ಪದೆ ವಿವರಿಸಿರುವುದು. ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಎಷ್ಟು ಯಾತನಾಮಯ ಎನ್ನುವುದಕ್ಕೆ ತುಷಾರ್ ಎಂಬ ಮಹತ್ವಾಕಾಂಕ್ಷಿ ಉದ್ಯಮಿ ಸಾಕ್ಷಿಯಾಗುವುದು ಮಹಾ ದುರಂತ. ಆದರೆ ಆತ ಬಲಿಯಾಗುತ್ತಾನೆ. ಕ್ಷೀಣಿಸುವ ದೇಹ, ಶಿಥಿಲವಾಗುವ ಅಂಗಾಂಗಗಳು, ವೈದ್ಯಕೀಯ ಚಿಕಿತ್ಸೆಗಳಿಗೆ ಒಳಗಾಗಿ ನಿರಂತರ ವ್ಯತ್ಯಯಗಳನ್ನು ಅನುಭವಿಸುವ ತುಷಾರನ ಅಂಗಾಂಗಗಳು, ಅಲ್ಲಿ ಆ ಕೂಸು ಯಾರಿಗೂ ಹೇಳಲಾಗದೆ ಅನುಭವಿಸುವ ಅಂತರಂಗದ ನೋವು ಇವೆಲ್ಲವನ್ನೂ ಶ್ಯಾಮಲಾ ಮಾಧವ್ ಈ ಕೃತಿಯಲ್ಲಿ ಬಿಡಿಬಿಡಿಯಾಗಿ ತೆರೆದಿಟ್ಟುಬಿಟ್ಟಿದ್ದಾರೆ.
ಹಾಗಾಗಿಯೇ ನೇಮಿಚಂದ್ರ ಅವರು ಈ ಕೃತಿಯನ್ನು “ಸಾವಿನಾಚೆಗೂ ಕೈಚಾಚಿ ತನ್ನ ಕಂದಮ್ಮನನ್ನು ಅವಚಿಕೊಂಡ ಪರಿ,,,, ನೋವಿನ ದಾರದಲ್ಲಿ ಪೋಣಿಸಿದ ಸವಿನೆನಪುಗಳ ಹಾರ” (ಪುಟ 125) ಎಂದು ಬಣ್ಣಿಸುತ್ತಾರೆ. ಈ ಕೃತಿಯಲ್ಲಿ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಕುರಿತ ವಿವರಗಳು ಇರುವಷ್ಟೇ ವಿಶಾಲವಾಗಿ ಅದಕ್ಕೆ ನೀಡಬಹುದಾದ ಚಿಕಿತ್ಸೆಗಳ, ಶಮನಕಾರಿ ಔಷಧಿಗಳ ಹಾಗೂ ವೈದ್ಯಕೀಯ ಪ್ರಯತ್ನಗಳ ವಿವರಗಳೂ ಇವೆ. ತುಷಾರನ ಪಯಣದ ಕೊನೆಯ ದಿನ (ಸೆಪ್ಟಂಬರ್ 17 2021) ನಡೆದ ಪ್ರಸಂಗಗಳನ್ನು ವಿವರಿಸುವಾಗ ಶ್ಯಾಮಲಾ ಮಾಧವ್ ಒಂದೆಡೆ ” ಅಂದು ಆಗಾಗ ಅಮ್ಮಾ,,,,,ಸಾಕಮ್ಮಾ ಸಾಕು,,, ಎಂದು ಪುನಃ ಪುನಃ ಮಗು ಉದ್ಗರಿಸುವಾಗ ನನ್ನ ಹೃದಯವನ್ನೇ ಕತ್ತರಿಸಿದಂತಾಗುತ್ತಿತ್ತು “ (ಪುಟ 92) ಎಂದು ಹೇಳುತ್ತಾರೆ. ಓದುಗರ ಕಣ್ಣೀರ ಕಟ್ಟೆ ಒಡೆಯಲಾರಂಭಿಸುವುದು ಈ ಸಾಲುಗಳಿಂದಲೇ ಎನಿಸುತ್ತದೆ.
ನೇಮಿಚಂದ್ರ ಅವರು ಹೇಳಿದ ಹಾಗೆ “ತುಷಾರ ಹಾರ” ಎಂಬ ಸವಿನೆನಪುಗಳ ಹಾರ ಸಂವೇದನಾಶೀಲ ಓದುಗರ ಕೊರಳನ್ನೂ ಬಿಗಿಯಾಗಿ ಆವರಿಸಿಕೊಳ್ಳುವುದಕ್ಕೂ ಕಾರಣವಿದೆ. ಅದೇನೆಂದರೆ, ಶ್ರೀಮತಿ ಶ್ಯಾಮಲಾ ಮಾಧವ ಅವರ ಸಂಯಮ ಮತ್ತು ಸಹನೆ. ತಾಯಿ ಎಂದರೆ ಸಹನೆಯ ಕಡಲು, ಸಂಯಮದ ಪರ್ವತ ಎಂದೆಲ್ಲಾ ಬಣ್ಣಿಸುವುದು ಸ್ವಾಭಾವಿಕ. ಆದರೆ ಈ ಸದ್ಭಾವನೆಯ ಗುಣಗಳನ್ನು ಗುರುತಿಸಲು ಮುಂದಾಗಿ, ಶ್ಯಾಮಲಾ ಎಂಬ ತಾಯಿಯ ಹೃದಯ ವೇದನೆಯನ್ನೊಮ್ಮೆ ಗಮನಿಸಿದಾಗ, ಆ ತಾಯಿಯ ಎದೆಬಡಿತವನ್ನು ಒಮ್ಮೆ ಗುಣಿಸಿದಾಗ , ಈ ಪರಿಯ ಸಂಯಮ ಸಾಧ್ಯವೇ ಎಂದು ಅಚ್ಚರಿಯಾಗುತ್ತದೆ. ಇಷ್ಟೆಲ್ಲಾ ವೇದನೆಯನ್ನು ಆ ತಾಯಿ ಹೃದಯ ಹೇಗೆ ತನ್ನೊಳಗಿಟ್ಟುಕೊಂಡು ಅರಗಿಸಿಕೊಳ್ಳಲು ಸಾಧ್ಯವಾಯಿತು ಎಂಬ ಜಿಜ್ಞಾಸೆಯಂತೂ ಮೂಡುತ್ತದೆ.
ಅಕ್ಷರ ಗ್ರಂಥವಲ್ಲ ಅಕ್ಕರೆಯ ಕಡಲು
ಪುಸ್ತಕದ ಉದ್ದಕ್ಕೂ ಶ್ಯಾಮಲಾ ಅವರಿಂದ ಉದ್ಗರಿಸಲಾಗುವ ʼ ಮಗೂ ʼ ಎಂಬ ಕರೆ ನಾನು 36 ವರ್ಷಗಳ ಹಿಂದೆ ಕಳೆದುಕೊಂಡ ಅಮ್ಮನನ್ನು ನೆನಪಿಸಿದ್ದು ಒಂದು ಕಾರಣ. ಮತ್ತೊಂದು ಕಾರಣವೆಂದರೆ ತಾನು ಹೆತ್ತ ಕೂಸು ತನ್ನ ಕಣ್ಣೆದುರಿನಲ್ಲೇ ಹಂತಹಂತವಾಗಿ ಕೊನೆ ತಲುಪುವುದನ್ನು ನೋಡುತ್ತಾ ಕಾಲ ಕಳೆಯುವ ಶ್ಯಾಮಲಾ ಎಂಬ ಮಹಾತಾಯಿಯ ಹಿಮಾಲಯದೆತ್ತರದ ಮಮತೆ ಮತ್ತು ವಾತ್ಸಲ್ಯ. ಈ ಎರಡೂ ಕಾರಣಗಳೊಂದಿಗೆ, ತನ್ನ ಬಾಳ ಸಾರ್ಥಕತೆಯನ್ನು ತನ್ನೊಳಗಿನ ಪ್ರತಿಭೆ, ಕೌಶಲ, ಉದ್ಯಮಶೀಲತೆಯಲ್ಲೇ ಕಾಣುವ ಸುಂದರ ಕನಸು ಕಾಣುತ್ತಿರುವ ತುಷಾರ , ಎಲ್ಲವನ್ನೂ ಬಿಟ್ಟು ಮರಳಿಬಾರದ ಲೋಕಕ್ಕೆ ತೆರಳುವ ಹೃದಯವಿದ್ರಾವಕ ದೃಶ್ಯ. ಈ ಮೂರೂ ಕಾರಣಗಳಿಗಾಗಿ “ ತುಷಾರ ಹಾರ ” ಎದೆಯಾಂತರಾಳದಲ್ಲಿ ಅಚ್ಚಳಿಯದೆ ಉಳಿದುಬಿಡುತ್ತದೆ.
ಇಂತಹ ಒಂದು ದುರಂತ ಗಾಥೆಯನ್ನು ತಾಯಿ-ಮಗನ ನೋವಿನ ಸರಪಳಿ ಎಂದು ಬಣ್ಣಿಸುವುದೋ, ತಾಯ್ಮಮತೆಯನ್ನು ಅಗ್ನಿಪರೀಕ್ಷೆಗೊಡ್ಡುವ ಪ್ರಯೋಗಾಲಯ ಎಂದು ಭಾವಿಸುವುದೋ, ವಿಧಿ-ಕರ್ಮ ಇತ್ಯಾದಿಗಳನ್ನು ನಂಬುವವರ ದೃಷ್ಟಿಯಲ್ಲಿ ತುಷಾರನ ವಿಧಿಯನ್ನು ಹಳಿಯಲು ಸಕಾರಣ ಎಂದು ಭಾವಿಸುವುದೋ ಅಥವಾ ಜೀವನ ಎನ್ನುವುದೇ ಒಂದು ನೀರಿನ ಗುಳ್ಳೆಯಂತೆ ಎಂಬ ಅಧ್ಯಾತ್ಮದ ದೃಷ್ಟಿಯಲ್ಲಿ ನೋಡುವುದೋ ? ಕೃತಿಯ ಕೊನೆಯ ಸಾಲುಗಳನ್ನು ಓದಿ ಮುಗಿಸಿದಾಗ ಇದಾವ ಪ್ರಶ್ನೆಗಳೂ ಉಳಿದಿರುವುದಿಲ್ಲ. ಮನಸ್ಸಿನಲ್ಲಿ ಉಳಿಯುವುದು ಇಬ್ಬರೇ , ತುಷಾರ ಮತ್ತು ಆತನ ತಾಯಿ ಶ್ಯಾಮಲಾ. ತುಷಾರನಿಗೆ ಕುಳಿತಲ್ಲೇ ನಮನ ಸಲ್ಲಿಸುವುದು ಸುಲಭ ಆದರೆ ಶ್ಯಾಮಲಾ ಮಾಧವ ಎಂಬ ತಾಯಿಗೆ ಸಾಂತ್ವನ ಹೇಳುವುದು ಅಸಾಧ್ಯ. ಯಾವುದೇ ಪದ ಬಳಸಿದರೂ ಔಪಚಾರಿಕವಾಗಿಬಿಡುತ್ತದೆ. ಹಾಗಾಗಿಯೇ ಓದು ಮುಗಿಸಿದ ಕೂಡಲೇ ಬೊಗಸೆ ತುಂಬಿದ ಕಂಬನಿಧಾರೆ ನನ್ನ ಮಟ್ಟಿಗೆ ಸಾರ್ಥಕ ಎನಿಸುತ್ತದೆ.
ಪ್ರತಿಯೊಬ್ಬರೂ ಓದಲೇಬೇಕಾದ ಒಂದು ಹೃದಯಸ್ಪರ್ಶಿ ಕೃತಿ “ತುಷಾರ ಹಾರ”.






0 Comments