-ಡಾ. ಚೇತನ ಮಲ್ಲಿಗೆರೆ ಗುರುರಾಜು
ಅಭಿವ್ಯಕ್ತಿಸೆಂಟರ್ ಫಾರ್ ಆರ್ಟ್ ಅಂಡ್ ಕಲ್ಚರ್ ತಂಡವು ವಿಶ್ವಕುಟುಂಬಿ ಎಂಬ ಭರತನಾಟ್ಯ ರೂಪಕವನ್ನು ಪ್ರದರ್ಶನ ಮಾಡಿತು. ನವೆಂಬರ್ ೧ ೨೦೨೬ ಭಾನುವಾರ ಸಂಜೆ, ಜಗನ್ನಾಥ ಸೆಂಟರ್ ಫಾರ್ ಆರ್ಟ್ ಅಂಡ್ ಕಲ್ಚರ್ (JCAC) ವಿಜಯನಗರ ಮೈಸೂರು ಇಲ್ಲಿ ಮೊದಲ ಪ್ರದರ್ಶನ ಕಂಡಿತು. ಕನ್ನಡದ ಉತ್ತಮ ಸಾಹಿತ್ಯವನ್ನು ಭರತನಾಟ್ಯದ ರೂಪಕವಾಗಿ “ವೇದಿಕೆಯ ಮೇಲೆ” ತಂದ ಪ್ರಯೋಗ ಇದಾಗಿತ್ತು.
ಕಾರ್ಯಕ್ರಮದ ಪ್ರಾರಂಭದಲ್ಲಿ H S ರಾಘವೇಂದ್ರ ರಾವ್ ಅವರು ಪುತಿನ ಅವರನ್ನು ಜನರಿಗೆ ಪರಿಚಯಿಸಿದರು. ಕವನಗಳ ಹಲವು ಆಯಾಮಗಳನ್ನು ಸರಳ ಭಾಷೆಯಲ್ಲಿ ಪ್ರೇಕ್ಷಕರ ಮುಂದೆ ಇಟ್ಟರು. ೮೦ ವರ್ಷಗಳ ಹಿಂದಿನ ಕವನಗಳು ಇಂದೀಕರಿಸಿ ಸರಳಮಾಡಿಕೊಟ್ಟರು. ನೃತ್ಯಕ್ಕಾಗಿ ಕಾದು ಕುಳಿತಿದ್ದ ಪ್ರೇಕ್ಷಕರಿಗೆ ಇವರ ೨೭ ನಿಮಿಷದ ಮುನ್ನುಡಿ ಕೇಳುವಾಗ ಉದ್ದವೆನಿಸುತ್ತಿತ್ತು. ನೃತ್ಯರೂಪಕವನ್ನು ನೋಡುವಾಗ ಆ ಮಾತುಗಳು ಹೂವಿನ ಜೊತೆ ಸೇರಿದ ದಾರವಾಗಿ ಇಡೀ ರೂಪಕವನ್ನು ಚಂದದ ಹೂಮಾಲೆ ಮಾಡಿ ನಮ್ಮ ಮುಂದಿಟ್ಟಂತೆ ಅನಿಸಿತು.
ಗೀತನಾಟಕಗಳನ್ನು ಕನ್ನಡಕ್ಕೆ ನೀಡಿದ ಪೂತಿನ ಅವರು ರಚಿಸಿರುವ ಕವಿತೆಗಳು ನೃತ್ಯ ರೂಪಕವಾಗಿ ಪ್ರೇಕ್ಷಕರ ಮುಂದೆ ತಂದವರು ಸುಹಾಸಿನಿ ಕೌಲಗಿ ಅವರು. ಇವರ ಪರಿಕಲ್ಪನೆಯು ಕನ್ನಡ ಸಾಹಿತ್ಯ, ಸಂಗೀತ ಮತ್ತು ನೃತ್ಯಗಳ ಸಮ್ಮಿಲನಕ್ಕೆ ಇರುವ ಅಪಾರ ಅವಕಾಶಗಳನ್ನು ತೆರೆದಿಡುತ್ತದೆ. ಸಮೀರ್ ರಾವ್ ಅವರು ಭರತನಾಟ್ಯಕ್ಕೆ ಸೂಕ್ತವಾಗುವ ರೀತಿಯಲ್ಲಿ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ.
ನಿತಿನ್ ರಾಜಾರಾಮ್ ಶಾಸ್ತ್ರಿ ಮತ್ತು ಅಶ್ವಿನಿ ಟಿ ಎನ್ ಅವರ ಧ್ವನಿಯಲ್ಲಿ ಹಾಡುಗಳು ಮಾಧುರ್ಯದ ಜೊತೆಗೆ ಮನಸ್ಸಿನಲ್ಲಿಯೂ ಉಳಿಯುತ್ತವೆ.
ಸುಹಾಸಿನಿ ಕೌಲಗಿ ಅವರ ಸಂಯೋಜನೆಯು ಹಲವಾರು ಹೊಸ ಪ್ರಯೋಗಗಳಿಗೆ ಮುನ್ನುಡಿಯಾಗಿದೆ. ನಾಟ್ಯ-ನೃತ್ಯ ಗಳೆರಡನ್ನು ಹದವಾಗಿ ಬೆರೆಸುವಲ್ಲಿ ಯಶಸ್ವಿಯಾಗಿದ್ದಾರೆ. ‘ಹಾಡು, ಅಭಿನಯವೇ ಹೆಚ್ಚಾಯಿತೇನೋ ಎನಿಸುವ ವೇಳೆಗೆ ಜತಿಗಳ ಜೊತೆಗೆ ನೃತ್ಯ ಮೇಳೈಸಿ ಬರುತ್ತಿತ್ತು.ಹೆಚ್ಚು ಆಡಂಬರವಿಲ್ಲದ ಸರಳವಾದ ಉಡುಗೆ, ತೊಡುಗೆ ಅಭಿವ್ಯಕ್ತಿ ತಂಡದ ವಿಶೇಷತೆಯಾಗಿ ಇಲ್ಲಿಯೂ ಮುಂದುವರೆದಿದೆ. ತಂಡದ ಸದಸ್ಯರೆಲ್ಲರೂ ನೃತ್ಯದ ಜೊತೆಗೆ, ಅಭಿನಯವನ್ನು ಸಮರ್ಥವಾಗಿ ನಿರ್ವಹಿಸಿದರು. ವೀಣೆ ಮೈಸೂರು ರಾಜಲಕ್ಷ್ಮಿ, ಮೃದಂಗ ಮತ್ತು ಖಂಜರ ವೆಂಕಟೇಶ್ ಸುಬ್ರಮಣ್ಯನ್, ಪಿಟೀಲು ಪ್ರಥ್ವಿ ಭಾಸ್ಕರ್ ಅವರುಗಳು ವಾದ್ಯ ಸಹಕಾರದಲ್ಲಿ ಹಾಡುಗಳ ಮುದ್ರಿಕೆ ಕೇಳುಗರಿಗೆ ಇಷ್ಟವಾಗುತ್ತವೆ. ಸಂಭಾಷಣೆಗಳಿಗೆ ಧನಿಯಾದವರು ಭರ್ಟಿ ಒಲಿವೆರ ಮತ್ತು ಕುಮಾರಿ ಅನ್ವಿತ. ಇವರ ನಿರೂಪಣೆ ಬಿಡಿ-ಬಿಡಿ ಕವನಗಳನ್ನು ಹೆಣೆಯುವ ಸೇತುವೆಯಾಗಿ ದಡ ಮುಟ್ಟಿಸಿತು. ಕಾಜು ಗುತ್ತಲ್ ಅವರು ಬರೆದಿರುವ ಮೇಲುಕೋಟೆ ದೇವಸ್ಥಾನದ ಗೋಪುರ ಚಿತ್ರ ನೋಡುಗರನ್ನೇ ಬೆಟ್ಟದ ಚಾರಣ ಮಾಡಿಸುತ್ತಿದ್ದಂತೆ ಇತ್ತು. ಈ ಒಳ-ಹೊರ ಆಟವನ್ನು ಹೊಕ್ಕು ನೋಡಲು ಬೆಳಕಿನ ವಿನ್ಯಾಸ ಮಾಡಿರುವುದು ಜೀವನ ಕುಮಾರ್ ಹೆಗ್ಗೋಡು.
ಎಲ್ಲಾ ವಯಸ್ಸಿನ ಜನರು ಕಾರ್ಯಕ್ರಮವನ್ನು ನೋಡಲು ಬಂದಿದ್ದು ಒಂದು ವಿಶೇಷವೆನಿಸಿತು. ಮಕ್ಕಳು ಸಾಮಾನ್ಯಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಇದ್ದರು. ಸುಮಾರು ಒಂದುವರೆ ತಾಸಿನ ಕಾರ್ಯಕ್ರಮ ಮಕ್ಕಳಿಂದ ಹಿರಿಯರ ವರೆಗೆ ಎಲ್ಲರಿಗೂ ಆಪ್ತವೆನಿಸಿದವು. ಮೊದಲ ಪ್ರದರ್ಶನವಾದ್ದರಿಂದ ಹಲವಾರು ಗಣ್ಯರು ಈ ಕಾರ್ಯಕ್ರಮವನ್ನು ನೋಡಲು ಬಂದಿದ್ದರು. “ದೇವರು ಇದ್ದಾನೋ ಇಲ್ಲವೋ” ಎಂಬ ಜಿಜ್ಞಾಸೆಯ ಪ್ರಶ್ನೆಗೆ ಉತ್ತರವಾಗಿ ಕೊಟ್ಟಿರುವ ನಿರೂಪಣೆ ಉದ್ದವೆನಿಸುತ್ತದೆ. ಬೇರೆ ರೀತಿಯಲ್ಲಿ, ಬೇರೆ ಪದಗಳ ಮೂಲಕ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಿದ ಹಾಗೆ ಅನಿಸುತ್ತದೆ. ಸಂಭಾಷಣೆ ಉದ್ದವಾದ್ದರಿಂದ ಸ್ಟೇಜ್ ಖಾಲಿ ಎನಿಸುತ್ತದೆ. ಒಂದೆರಡು ನಿಮಿಷ ಸಂಭಾಷಣೆ ತೆಗೆಯಬಹುದು ಅಥವಾ ಸಂಕ್ಷಿಪ್ತಗೊಳಿಸಬಹುದು. ನೃತ್ಯಗಾರರು ಮುಂದಿನ ಪ್ರದರ್ಶನಗಳಿಗೆ ಮತ್ತಷ್ಟು ಪಕ್ವವಾಗುವ ಅವಕಾಶಗಳು ಖಂಡಿತ ಇವೆ. ಒಟ್ಟಾರೆ ಸುಮಾರು ಒಂದುವರೆ ತಾಸಿನ ಈ ಪ್ರದರ್ಶನ ನೋಡುಗರನ್ನು ಗಟ್ಟಿಯಾಗಿ ಹಿಡಿದಿಟ್ಟಿತು. ಕನ್ನಡದ ಉತ್ತಮ ಪ್ರಯೋಗವಾದ ವಿಶ್ವಕುಟುಂಬಿ ಕಾರ್ಯಕ್ರಮವು ನೂರಾರು ಪ್ರದರ್ಶನಗೊಳ್ಳಲಿ ಲಕ್ಷಾಂತರ ಜನರನ್ನು ತಲುಪುವಂತೆ ಆಗಲಿ ಎಂದು ಆಶಿಸುತ್ತೇನೆ.






0 Comments