
ಮೂಲ : ಖಲೀಲ್ ಗಿಬ್ರಾನ್ ನ ಮೂರು ಕವನಗಳು
ಕನ್ನಡಕ್ಕೆ: ಪ್ರತಿಭಾ ನಂದಕುಮಾರ್
ಕಹ್ಲಿಲ್ ಜಿಬ್ರಾನ್ ಅಥವಾ ಜನಪ್ರಿಯವಾಗಿ ಬಳಕೆಯಲ್ಲಿರುವ ಖಲೀಲ್ ಗಿಬ್ರಾನ್ ಕವನಗಳನ್ನು ಅಸಂಖ್ಯಾತ ಜನರು ಅಸಂಖ್ಯಾತ ಮಾದರಿಗಳಲ್ಲಿ ಅನುವಾದಿಸಿದ್ದಾರೆ. ನಾನೂ ಪದೇ ಪದೇ ಗಿಬ್ರಾನ್ ಕವನಗಳಿಗೆ ಮರಳುತ್ತೇನೆ. ಇಲ್ಲಿ ಮತ್ತೆ ಮೂರು ಕವನಗಳು ಕನ್ನಡಕ್ಕೆ:
1.ಭಯ
ಕಡಲು ಸೇರುವ ಮೊದಲು ನದಿ
ಭಯದಲ್ಲಿ ಕಂಪಿಸುತ್ತದೆ
ಒಮ್ಮೆ ಹೊರಳಿ ನೋಡುತ್ತದೆ
ಪರ್ವತಗಳ ಶಿಖರದಿಂದ ಉದ್ಭವಿಸಿ ಹಾದುಬಂದ
ಕಾಡು ಮೇಡುಗಳ ಅಂಕಿಡೊಂಕಿನ ಹಾದಿಯನ್ನು
ಎದುರಿಗೆ ಕಾಣಿಸುತ್ತದೆ ವಿಶಾಲ ಕಡಲು.
ಒಮ್ಮೆ ಹೊಕ್ಕರೆ ಮುಗಿಯಿತು
ತನ್ನ ಅಸ್ಮಿತೆಯನ್ನೇ ಕಳೆದುಕೊಂಡು ಲೀನವಾಗಬೇಕು
ಆದರೆ ಬೇರೆ ದಾರಿಯಿಲ್ಲ
ನದಿಗೆ ಹಿಂದಿರುಗಲಾಗುವುದಿಲ್ಲ.
ಯಾರಿಗಾದರೂ ಸರಿ ಹಿಂದಿರುಗುವುದು ಆಗದು.
ವಾಸ್ತವದಲ್ಲಿ ಹಿಂದಿರುಗುವುದು ಅಸಾಧ್ಯ.
ನದಿ ಎದುರಿಸಲೇ ಬೇಕು ಕಡಲನ್ನು ಹೊಗುವ ಅಪಾಯವನ್ನು.
ಆಗಲೇ ಇಲ್ಲವಾಗುವುದು ಭಯ.
ನದಿಗೆ ಅರಿವಾಗುವ ಗಳಿಗೆ ಎಂದರೆ
ಕಡಲಿನಲ್ಲಿ ತಾನು ಲೀನವಾಗುವುದಲ್ಲ
ತಾನೇ ಕಡಲಾಗುವುದು.
*
2.ಬೆದರುಗೊಂಬೆ
ಒಮ್ಮೆ ಒಂದು ಬೆದರುಗೊಂಬೆಗೆ ಹೇಳಿದೆ,
“ಈ ಏಕಾಂತ ಹೊಲದಲ್ಲಿ ನಿಂತು ನಿಂತು ನಿನಗೆ ದಣಿವಾಗಿರಬೇಕು.”
ಅದು ಹೇಳಿತು, “ಜನರನ್ನು ಹೆದರಿಸುವುದೊಂದು ಮಜಾ, ಅದ್ಭುತ ಆನಂದ,
ಅದಕ್ಕೆ ನನಗೆ ಎಂದಿಗೂ ದಣಿವಿಲ್ಲ.”
ಸ್ವಲ್ಪ ಯೋಚಿಸಿ ನಾನಂದೆ “ನಿಜ; ನಾನೂ ಸಹ ಆ ಆನಂದವನ್ನು ಅನುಭವಿಸಿದ್ದೇನೆ.”
ಅದು ಹೇಳಿತು, “ಒಳಗೆ ಹುಲ್ಲು ತುಂಬಿದವರಿಗೆ ಮಾತ್ರ ಅದನ್ನು ತಿಳಿಯಲು ಸಾಧ್ಯ.”
ನಾನದನ್ನು ಬಿಟ್ಟು ಹೊರಟೆ: ಅದು ನನ್ನನ್ನು ಹೊಗಳಿತೋ ಅಥವಾ ಕೀಳಾಗಿ ಕಂಡಿತೋ ಎಂದು ತಿಳಿಯದೇ.
ಒಂದು ವರ್ಷ ಕಳೆಯಿತು, ಆ ಅವಧಿಯಲ್ಲಿ ಬೆದರುಗೊಂಬೆಯು ತತ್ವಜ್ಞಾನಿಯಾಯಿತು.
ನಾನು ಮತ್ತೆ ಅದರ ಬಳಿ ಹಾದು ಹೋದಾಗ, ಎರಡು ಕಾಗೆಗಳು
ಅದರ ಟೋಪಿಯ ಕೆಳಗೆ ಗೂಡು ಕಟ್ಟುತ್ತಿರುವುದನ್ನು ಕಂಡೆ.
*
3.ಮೂರು ಇರುವೆಗಳು
ಬಿಸಿಲಿನಲ್ಲಿ ನಿದ್ರಿಸುತ್ತಿದ್ದ ಒಬ್ಬ ಮನುಷ್ಯನ ಮೂಗಿನ ಮೇಲೆ ಮೂರು ಇರುವೆಗಳು ಭೇಟಿಯಾದವು.
ತಮ್ಮ ಸಮುದಾಯದ ಪದ್ಧತಿಯಂತೆ ಒಂದನ್ನೊಂದು ಸ್ವಾಗತಿಸಿದ ನಂತರ, ಅಲ್ಲಿ ನಿಂತು ಮಾತನಾಡತೊಡಗಿದವು.
ಮೊದಲನೆಯ ಇರುವೆ ಹೇಳಿತು, “ನಾನು ಕಂಡ ಬೆಟ್ಟ-ಬಯಲುಗಳಲ್ಲಿ ಇದು ಅತ್ಯಂತ ಬರಡಾದದ್ದು. ಒಂದು ಕಾಳು ಹುಡುಕಿ ದಿನವಿಡೀ ತಿರುಗಾಡಿದೆ, ಆದರೆ ಏನೂ ಸಿಗಲಿಲ್ಲ.”
ಎರಡನೆಯ ಇರುವೆ ಹೇಳಿತು, “ನಾನೂ ಸಹ ಪ್ರತಿಯೊಂದು ಮೂಲೆ ಮೂಲೆಯನ್ನು ಹುಡುಕಿದೆ, ಆದರೆ ಏನೂ ದೊರಕಲಿಲ್ಲ. ಜನರು ಇದನ್ನು ‘ಬರಡು ನೆಲ, ಇಲ್ಲಿ ಏನೂ ಬೆಳೆಯುವುದಿಲ್ಲ’ ಎನ್ನುತ್ತಾರೆ, ನಿಜ, ಈಗದನ್ನು ನಾನು ನಂಬುತ್ತೇನೆ.”
ಆಗ ಮೂರನೆಯ ಇರುವೆ ತಲೆ ಎತ್ತಿ ಹೇಳಿತು, “ಮಿತ್ರರೇ, ನಾವು ಈಗ ನಿಂತಿರುವುದು ಸರ್ವೋಚ್ಚ ಇರುವೆಯ ಮೂಗಿನ ಮೇಲೆ. ಆ ಶಕ್ತಿಶಾಲಿ ಮತ್ತು ಅನಂತ ಇರುವೆಯ ಮೇಲೆ, ಇದರ ದೇಹವೆಷ್ಟು ಮಹತ್ತೆಂದರೆ ನಾವು ಅದನ್ನು ಪೂರ್ಣ ಕಾಣಲಾರೆವು, ಇದರ ನೆರಳು ಎಷ್ಟು ವಿಶಾಲ ಎಂದರೆ ನಾವು ಅದನ್ನು ಪೂರ್ತಿ ಗುರುತಿಸಲಾರೆವು, ಇದರ ಧ್ವನಿ ಎಷ್ಟು ಗಟ್ಟಿ ಎಂದರೆ ನಾವು ಅದನ್ನು ಕೇಳಲಾರೆವು. ಇದು ಸರ್ವವ್ಯಾಪಿ.”
ಮೂರನೆಯ ಇರುವೆ ಹೀಗೆ ಹೇಳಿದಾಗ, ಉಳಿದ ಎರಡು ಇರುವೆಗಳು ಒಂದನ್ನೊಂದು ನೋಡಿ ನಕ್ಕವು.
ಅದೇ ಕ್ಷಣದಲ್ಲಿ ಆ ಮನುಷ್ಯನು ಅಲುಗಾಡಿ, ನಿದ್ರೆಯಲ್ಲಿಯೇ ಕೈ ಎತ್ತಿ ಮೂಗು ಕೆರೆದುಕೊಂಡ. ಮೂರೂ ಇರುವೆಗಳು ಜಜ್ಜಿಹೋದವು.






0 Comments