ಕುಂವೀ ಅವರ ‘ಸೂರ್ಯನ ಚೂರುಗಳು’
ಈ ಕೃತಿಯನ್ನು ಅಂಕಿತ ಪುಸ್ತಕ ಪ್ರಕಟಿಸಿದೆ.
ಈ ಕೃತಿಯ ಕುರಿತ ಮಧು ವೈ ಎನ್ ಅವರ ಬರಹ ಇಲ್ಲಿದೆ.
-ಮಧು ವೈ ಎನ್
ಇದೊಂದು ಅದ್ಭುತ ಪುಸ್ತಕ.
ಎರಡು ಕಾರಣಗಳಿಗಾಗಿ:
ಒಂದು- ಬಹಳ ವರ್ಷಗಳ ನಂತರ ನನಗೆ ಪುನಃ ಕನ್ನಡ ಸಾಹಿತ್ಯಲೋಕದ ಬಂಡಾಯ ಕಾಲಕ್ಕೆ ಹೋಗಿಬಂದಂತಹ ಅನುಭವದ ರಸದೌತಣ.
ಎರಡು- ಮಲೆಸೀಮೆಯ ಭಾಷೆಯದ್ದು ಒಂದು ರಸವಾದರೆ ಬಯಲುಸೀಮೆಯದ್ದೇ ಇನ್ನೊಂದು ರಸ. ಆಲನಹಳ್ಳಿ ಕೃಷ್ಣ ಅವರ ನಂತರ ಬಯಲುಸೀಮೆಯ ಭಾಷಾಪ್ರಯೋಗದಲ್ಲಿ ಮೆಸ್ಮರೈಜಿಂಗ್ ಅನಿಸುವ ಲೇಖಕ ಕುಂವೀಯವರು. ಹೋಳಿಗೆಯನ್ನು ಕಿವುಚಿಕೊಂಡು ತಿಂದಂತೆಯೇ ವಸ್ತು ಬದಿಗಿಟ್ಟು ಕೇವಲ ಅವರ ಭಾಷೆಯನ್ನು ಆನಂದಿಬಹುದು.
ಹೇಳಿಕೇಳಿ ಬಂಡಾಯದ ಲೇಖಕರಾದ್ದರಿಂದ ಹಿರಿಕಿರಿಯರೆನ್ನದೆ ಎಲ್ಲರನ್ನೂ ವ್ಯಂಗ್ಯ ಮಾಡಿದ್ದಾರೆ. ಕುವೆಂಪು, ಅನಂತಮೂರ್ತಿ, ಅವರ ಸುತ್ತಲಿನ ಭಕ್ತಗಣ ಎಲ್ಲರನ್ನೂ. ತಮ್ಮನ್ನೂ ಗೇಲಿ ಮಾಡಿಕೊಂಡಿದ್ದಾರೆ. ತಾನು ಅವರಿವರ ಕವನಗಳಲ್ಲಿನ ಸಾಲುಗಳನ್ನು ಕದ್ದು ಬರೆಯುತ್ತಿದ್ದಾಗಿಯೂ ಹೇಳಿಕೊಂಡಿದ್ದಾರೆ. ಪ್ರಜಾವಾಣಿಯಲ್ಲಿ ಕವಿತೆ ಬರಲೆಂದು ಸ್ವಾಮೀಜಿ ಶಿಫಾರಸ್ಸು ಅಂಟಿಸಿದ್ದು ಒಪ್ಪಿಕೊಳ್ಳುತ್ತಾರೆ. ಅದು ಬಂಡಾಯದಲ್ಲಿನ ಪ್ರಾಮಾಣಿಕ ಗುಣ.
ನನಗೆ ಬಹಳವಾಗಿ ಕಾಡಿದ್ದು ಸಿದ್ಧಲಿಂಗಯ್ಯನವರ ಅಧ್ಯಾಯ.
ಒಮ್ಮೆ ಕುಂವೀಯವರ ಊರಿನ ಯಾವುದೋ ಕಾಲೇಜಿಗೆ ಗೆಸ್ಟನ್ನು ಸೂಚಿಸಲು ಅಲ್ಲಿನ ಪ್ರಾಂಶುಪಾಲರು ಕುಂವೀಯನ್ನು ಕೇಳಿಕೊಳ್ಳುತ್ತಾರೆ. ಕುಂವೀಗೆ ಸಿದ್ಧಲಿಂಗಯ್ಯನವರ ಮೇಲೆ ಅಭಿಮಾನ. ಅವರನ್ನು ಸೂಚಿಸಿದ್ದಾರೆ. ಪ್ರಾಂಶುಪಾಲರು ಲಿಂಗಾಯತರು, ಅತಿಥಿಗಳ ಹೆಸರು ಲಿಂಗಾಯತರ ಥರ ಇದೆ; ಖುಷಿಯಾಗಿ ಒಪ್ಪಿಕೊಂಡಿದ್ದಾರೆ. ಕವಿಗಳು ಊರಿಗೆ ಬಂದಿದ್ದಾರೆ. ಮೊದಲು ಕುಂವೀ ಮನೆಗೆ ಹೋಗಿದ್ದಾರೆ. ಅಲ್ಲಿ ಅವರ ಅಜ್ಜಿ ಸಹ ಇವರನ್ನು ಲಿಂಗಾಯತರೆಂದೇ ತಪ್ಪಾಗಿ ಭಾವಿಸಿ ಅತಿಯಾಗಿ ಗೌರವಿಸುತ್ತದೆ. ಕವಿಗೆ ಮುಜುಗರ. ಕುಂವೀ ಇಲ್ಲೆಲ್ಲಾ ಲಿಂಗಾಯತರದ್ದೇ ಕಾರುಬಾರು ಹಂಗೆ ಮೇಂಟೇಣ್ ಮಾಡಣ ಸುಮ್ಮನಿರಿ ಅಂದಿದ್ದಾರೆ. ಕಾಲೇಜಲ್ಲೂ ಹಂಗೆ ಆಗಿದೆ. ಅತಿ ಗೌರವ, ಅತಿ ಪ್ರೀತಿ. ಕೊನೆಗೆ ಪ್ರಾಂಶುಪಾಲರು ಮನೆಗೆ ಊಟಕ್ಕೆ ಕರೆದುಕೊಂಡು ಹೋಗಿದ್ದಾರೆ. ಮಗಳಿಂದ ಹೋಳಿಗೆಯನ್ನು ಬಡಿಸಿಸಿದ್ದಾರೆ. ಎಲ್ಲ ಮುಗಿದ ನಂತರ ‘ಎಲ್ಲ ಸರಿಹೋದರೆ ಮಗಳನ್ನು ಬೆಂಗಳೂರಿನಲ್ಲಿ ಪ್ರೊಫೆಸರಾಗಿರುವ ಕವಿಗೆ’ ಮದುವೆ ಮಾಡಿಕೊಡುವ ತನಕ ವಿಚಾರ ಮುಂದುವರೆದಿದೆ. ಆಮೇಲೆ ವಿಷಯ ಗೊತ್ತಾಗಿ ಏನೇನೊ ಆಗಿದೆ ಅದು ಬೇರೆ ವಿಷಯ. ಇವರ ಅಜ್ಜಿ ಸಹ ಕುಂವಿಗೆ ಬಹಿಷ್ಕಾರ ಹಾಕಿ ಮನೆಯನ್ನು ಸಂಪೂರ್ಣ ಸ್ವಚ್ಛಗೊಳಿಸಿ… ಏನೇನೋ ಅಸಹ್ಯಗಳು.
ನನಗೆ ಇದನ್ನು ಓದುವಾಗ ಉದ್ದಕ್ಕೂ ಸಿದ್ಧಲಿಂಗಯ್ಯನವರ ಅಂದಿನ ಮನೋಸ್ಥಿತಿ ಹೇಗಿತ್ತು ಎಂಬುದು ಕಾಡುತ್ತಿತ್ತು. ತನ್ನ ಜಾತಿಯವರೆಂದು ಬಗೆದು ಅತಿಯಾದ ಗೌರವ ಪ್ರೀತಿ ತೋರಿಸಿ ಸತ್ಯ ಗೊತ್ತಾಗಿ ಕೂಡಲೆ ಎಲ್ಲವೂ ಜರ್ರೆಂದು ಸೊನ್ನೆಗೆ ಇಳಿದು ಅದು ಸಿಟ್ಟು ದ್ವೇಷಕ್ಕೆ ತಿರುಗುವುದು! ಇಂಥದನ್ನು ಸ್ಪೋರ್ಟಿವ್ ಆಗಿ ತೆಗೆದುಕೊಂಡು ಕ್ಷಮಿಸಲು ಒಬ್ಬ ಮನುಷ್ಯನಿಗೆ ಎಂಥ ವ್ಯಕ್ತಿತ್ವ ಇರಬೇಕಾಗುತ್ತದೆ! ಇಂಥದನ್ನೆಲ್ಲ ಕೇಳಿದಾಗ ಹಿಂದೂ ಧರ್ಮದ ಮೇಲ್ವರ್ಗದ ತುಂಬ ಪರಮ ಪಾಪಿಗಳೇ ತುಂಬಿದ್ದಾರೆ ಅನಿಸುತ್ತದೆ.
ಇನ್ನು ಪುಸ್ತಕದಲ್ಲಿನ ಒಂದು ಒಪ್ಪದ ಭಾಗ.
ಒಂದು ಅಧ್ಯಾಯದಲ್ಲಿ ಕುಂವೀ ತಮ್ಮ ಹಸಿವಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಅದರಲ್ಲಿ ತರುಣ ಕುಂವೀ ಮೂರು ದಿನಗಳಿಂದ ಉಂಡಿಲ್ಲದಿದ್ದರೂ ಒಬ್ಬ ರೈಲ್ವೇ ಕೂಲಿ ಕಾರ್ಮಿಕ ಇವರನ್ನು ತಟ್ಟಿ ಊಟ ಮಾಡಿದ್ಯಾ ಎಂದು ಕೇಳಿದಾಗ ಹ್ಞೂ ಅನ್ನುತ್ತಾರೆ. ಕಾರಣ ಅವರ ತಂದೆ ಎಂದೂ ಇನ್ನೊಬ್ಬರ ಎದುರು ಉಂಡಿಲ್ಲ ಎನ್ನಬೇಡ ಎಂಬ ಸ್ವಾಭಿಮಾನದ ಪಾಠ ಹೇಳಿಕೊಟ್ಟಿರುತ್ತಾರೆ.( ಈ ಅಧ್ಯಾಯದಲ್ಲಿ ಕಡಲೆ ಬೀಜದ ಪ್ರಸಂಗ ಬಹಳ ಸೊಗಸಾಗಿ ಬರೆದಿದ್ದಾರೆ). ಆದರೆ ಕುಂವೀ ಈ ಅಧ್ಯಾಯವನ್ನು ಬೇರೇನೋ ಕತೆಯನ್ನು ಹೇಳಲು ಬಳಸಿಕೊಳ್ಳುತ್ತಾರೆ. ಅವರಿಗೆ ಕನ್ನಡದ ಹಿರಿಯ ಕಾದಂಬರಿಕಾರರೊಬ್ಬರು ‘ಕಷ್ಟದಲ್ಲಿದ್ದೇನೆ, ಇನ್ನೂರುಪಾಯಿ ಮನಿ ಆರ್ಡರ್ ಮಾಡು’ ಎಂದು ಪತ್ರ ಬರೆದಿರುತ್ತಾರೆ. ಇವರು ಸಹಾಯ ಮಾಡುತ್ತಾರೆ. ಅದೆಲ್ಲ ಸರಿ, ಸೂಕ್ಷ್ಮವಾಗಿ ಅದು ಯಾರೆಂದು ಬಿಟ್ಟುಕೊಡುತ್ತಾರೆ. ಒಬ್ಬರು ನಮ್ಮ ಮೇಲೆ ನಂಬಿಕೆಯಿಟ್ಟು ಸಹಾಯ ಕೇಳಿದಾಗ ಅವರು ತೀರಿಕೊಂಡಿದ್ದರೂ ಸರಿ ಅವರ ಘನತೆ ಉಳಿಸಬೇಕಾದ್ದು ನಮ್ಮ ಕರ್ತವ್ಯವಾಗಿರುತ್ತದೆ. ಓದುಗರ ಕುತೂಹಲ ತಣಿಯಿತು ಹೌದು, ಆದರೆ ಆ ವ್ಯಕ್ತಿ ಇದನ್ನು ಒಪ್ಪುತ್ತಿದ್ದರಾ ಎಂಬುದು ಪ್ರಶ್ನೆ. ಸಾಧ್ಯವಾದರೆ ಈ ಕ್ಲೂವನ್ನು ತೆಗೆಯುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ. ಯಾಕಂದರೆ ಅಧ್ಯಾಯದ ತುಂಬ ಬಡತನದ ಘನತೆಯೇ ತುಂಬಿದೆ!
ಇರಲಿ,
ನಾನು ಬೇಕಂತಲೇ ಓದುಗರ ಆಸಕ್ತಿ ಕೆರಳಲಿ ಎಂದು ಕೆಲವನ್ನು ವಿಸ್ತ್ರತವಾಗಿ ಬರೆದಿರುವೆ. ಇನ್ನೂ ಇಂಥ ಹತ್ತು ಹಲವು ಸ್ವಾರಸ್ಯಕರ ಅಧ್ಯಾಯಗಳು ಪುಸ್ತಕದ ತುಂಬ ಇರುವುದುಂಟು. ಪ್ರತಿ ಅಧ್ಯಾಯವೂ ರುಚಿಕರವೇ.
ಸಾಹಿತ್ಯಾಸಕ್ತರು ಅಗತ್ಯವಾಗಿ ಓದಿ ಆನಂದಿಸಬಹುದಾದ ಪುಸ್ತಕ.






0 Comments