ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಳ್ಳಿ ಚುಕ್ಕಿಗಳು..

-ರಂಜನಿ ಪ್ರಭು

1.ಅರರೇ!
ಆಡುತ್ತಾಡುತ್ತಾ
ಮುಗಿಲಿಂದ ಜಾರಿದ
ತಾರೆಗಳೆರಡು
ನಿನ್ನ ಕಣ್ಣುಗಳಲ್ಲಿ
ಅಡಗಿಬಿಟ್ಟಿವೆಯಲ್ಲಾ…

2.ನನ್ನ ಕಣ್ಣಂಚಲ್ಲಿ
ಇಣುಕಿದಾ ಕವಿತೆ
ನಿನ್ನ ಕಣ್ ಬೆಳಕಿಗೆ
ನಾಚಿ ಒಳ ಸೇರಿತು

3.ನಾ ಬರೆದ ಕವಿತೆಗಳೆಲ್ಲ
ಬಂಧಿಸಲು ಸೋತ
ಒಲವನು
ಸೆರೆಹಿಡಿಯಿತು
ನಿನ್ನೊಂದು ಆಲಿಂಗನ
4.ಪಕ್ವವಾಗುವುದು
ಬಹಳ ನಿ..ಧಾ..ನ
ಪ್ರೇಮದ ಹಣ್ಣು
ಅದಕ್ಕೇ ರುಚಿಯೂ
ಹೆಚ್ಚು

5,ಕೊಳದೊಳಗೆ
ಸಂಚಲನ ಅಪರೂಪವಾದರೂ ಸರಿ
ಈಜುವುದು ಮಾತ್ರ
ರಾಜಹಂಸವೇ
ಆಗಬೇಕು

6.ಮನದೊಳಗೆ ಪ್ರೇಮ ಉಸಿರಾಗಿದ್ದರೆ
ಹಸಿರಾಗಿರುವುದು
ಪ್ರಣಯ ಕಡೆತನಕ

7.ಸುಕ್ಕುಗಟ್ಟಿದ
ಕೆನ್ನೆಯ ಮೇಲೂ ಮುತ್ತು ಮೂಡಬೇಕಾದರೆ
ಮಂದಬೆಳಕಿನ
ಕಂಗಳಲ್ಲೂ ಇರಬೇಕು ಪ್ರೀತಿಯ
ತೈಲ

8.ಮನದೊಳಗೆ ಹಸಿಮಣ್ಣ ಘಮಲು
ಆದರೆ ಇನ್ನೂ
ಮೊದಲ ಮಳೆ
ಬಂದಿಲ್ಲ..
ನೀನು ಬಂದಿರಬಹುದು
ಅಂಗಳದಲಿ.

9.ಬಹು ದೂ…ರ
ಜೊತೆಯಾಗಿ
ಕ್ರಮಿಸಿದ ಮೇಲೆ
ಅನಿಸಿದ್ದು ಹೀಗೆ
ಹಾದಿ ಸುಗಮವಾದದ್ದು
ಮಾತುಗಳ ವೇದದಲ್ಲಲ್ಲ
ಮೌನದ ನಾದದಲ್ಲಿ.

‍ಲೇಖಕರು Admin

2 April, 2026

1 Comment

  1. ಶ್ರೀನಾಥ್ ಮಾಗಡಿ

    ರಂಜಿನಿ ಪ್ರಭು ರವರ 9 ಕಿರುಕವಿತೆಗಳು ಚೇತೋಹಾರಿಯಾಗಿವೆ.
    ಪದಗಳ ಅರ್ಥವನ್ನು ನಿಧಾನವಾಗಿ ಒಳಗಿಳಿಸಿಕೊಂಡರೆ ಮತ್ತಷ್ಟು ಖುಷಿಕೊಡುತ್ತವೆ..
    ಸರಳ ಸುಂದರ ಪದಗಳು ಸುಮಧುರ ಭಾವವನ್ನು ಕಟ್ಟಿಕೊಡುತ್ತವೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading