ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎರಗುತ್ತದೆ ಗಿಡುಗ..

-ಗೋವಿಂದ ಹೆಗಡೆ

ಗಜ಼ಲ್-೧

ಹೇಗೆ ಸದ್ದೇ ಇರದೇ ಎರಗುತ್ತದೆ ಗಿಡುಗ
ದುರ್ಬಲರ ಗುರಿಯಾಗಿಸುತ್ತದೆ ಗಿಡುಗ

ಇಷ್ಟು ಹೊತ್ತು ಎಲ್ಲಿತ್ತು ತಿಳಿಯುವುದೇ ಇಲ್ಲ
ಥಟ್ಟನೆ ಬಲಿಯನ್ನು ಆಕ್ರಮಿಸುತ್ತದೆ ಗಿಡುಗ

ಪಿಳ್ಳೆ, ತಾಯಿಕೋಳಿ ಯಾರನ್ನೂ ಬಿಡದು
ಬೇಟೆಯನ್ನು ಹೊತ್ತೊಯ್ಯುತ್ತದೆ ಗಿಡುಗ

ತಡೆವರು ಯಾರಿಲ್ಲ, ದುರ್ಬಲರೇ ಎಲ್ಲ
ಚೂಪು ಕೊಕ್ಕಲ್ಲಿ ಇರಿಯುತ್ತದೆ ಗಿಡುಗ

ಈಗ ಇದ್ದವರು, ಅರೆ! ಕ್ಷಣದಲ್ಲಿ ಮತ್ತಿಲ್ಲ
ಶೂನ್ಯವುಳಿಸಿ ಮರೆಯಾಗುತ್ತದೆ ಗಿಡುಗ

ಈ ಪ್ರಾಣಪಕ್ಷಿ ಎಷ್ಟು ಅನಾಥ ‘ಜಂಗಮ’
ತನ್ನ ಕರಿನೆರಳನ್ನು ಚಾಚುತ್ತದೆ ಗಿಡುಗ

ಗಜ಼ಲ್-೨

ಹರಿಯುವ ನದಿಯನು ಹಿಡಿಯಲಿ ಹೇಗೆ ಹೇಳುವವರೆ ಇಲ್ಲ
ಅಡ್ಡನೆ ಕಟ್ಟೆಯ ಒಡೆದು ಧುಮುಕಿದರು ಅಪ್ಪುವವರೆ ಇಲ್ಲ

ಸುಣ್ಣದ ಭಟ್ಟಿಯು ಕುದಿಯುತ್ತಲೆ ಇದೆ ಯಾರಿಗಿದೆ ಗಮನ
ಹನಿನೀರಿಗು ಭಗ್ಗೆನ್ನುವ ಎದೆ- ತಂಪನು ಉಣಿಸುವವರೆ ಇಲ್ಲ

ನಿಂತರು ಮಳೆ ನಿಂತಿಲ್ಲ ಮರದ ಹನಿ ಸುರಿದಿದೆ ಕಂಬನಿಯು
ದಾವಾಗ್ನಿಯ ದಾಹಕೆ ಕೊನೆಯೇ ಇಲ್ಲ ತಣಿಸುವವರೆ ಇಲ್ಲ

ಎಂತಹ ಹುರುಡು ಎಂತಹ ಕುರುಡು ಎಂಥ ಅಟ್ಟಹಾಸ
ಕತ್ತಲೆ ಹದ್ದಿಗೆ ಬೆಳಕಿನ ಬಲಿಯು ಬಿಡಿಸುವವರೆ ಇಲ್ಲ

ಯಾರೋ ಆಡುವ ಆಟಕೆ ಅಯ್ಯಾ ‘ಜಂಗಮ’ ಮೂಕ ಬಲಿ
ರಕ್ಕಸ ನರ್ತನ ತಧಿಕಿಟ ಧಿಂಗಣ ತಡೆಯುವವರೆ ಇಲ್ಲ

‍ಲೇಖಕರು Admin

2 April, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading