-ತಿರುಪತಿ ಭಂಗಿ
ಮಾರುತಿ ಗುರುಗಳು ತುಂಬಾ ಸೌಮ್ಯ ಸ್ವಭಾವದವರಾಗಿದ್ದರು. ಅವರು ಮಾಡುವ ವಿಜ್ಞಾನ ಪಾಠ ಮಕ್ಕಳ ಮನಸ್ಸಿನಲ್ಲಿ ಅಚ್ಚೊತ್ತಿದಂತೆ. ಪ್ರಾಯೋಗಿಕವಾಗಿ ಹೇಳಿದ ವಿಷಯವಂತೂ ಮಕ್ಕಳೆಂದೂ ಮರೆಯುತ್ತಿರಲಿಲ್ಲ. ಜೀವಶಾಸ್ತ್ರ, ರಸಾಯನ ಶಾಸ್ತ್ರದಲ್ಲಿ ಅವರು ತುಂಬಾ ಪರಿಣಿತರು. ಮಕ್ಕಳಲ್ಲಿ ಒಂದಿಲ್ಲೊಂದು ವಿಷಯದ ಜ್ಞಾನವನ್ನು, ತಿಳುವಳಿಕೆಯನ್ನು, ಸದಾ ಮೂಡಿಸುವಲ್ಲಿ ನಿಸ್ಸೀಮರಾಗಿದ್ದರು. ಮಕ್ಕಳ ಮನಸ್ಸನ್ನು ಒಂದೇ ಕಡೆ ಕೇಂದ್ರಿಕರಿಸುವಲ್ಲಿ ಅವರ ಬೋಧನಾ ಕೌಶಲ್ಯ ವಿಭಿನ್ನವಾಗಿತ್ತು. ಕಪ್ಪು ಹಲಗೆಯ ಮೇಲೆ ದುಂಡಾಗಿ ಬರೆಯುವ ಅವರ ಹಸ್ತಾಕ್ಷರ ಮಕ್ಕಳಲ್ಲಿ ಗುಣಾತ್ಮಕ ಚೈತನ್ಯದ ಅಲೆ ಎಬ್ಬಿಸಿದ್ದವು. ಆಗಾಗ ಮಕ್ಕಳಿಗೆ ಬೇಸರವಾಗದಂತೆ ಬೋಧನೆಯ ನಡು ನಡುವೆ ಅವರು ಮಾಡುವ ತುಂಟ ಹಾಸ್ಯ ಚಟಾಕಿಗಳಿಂದ ಎಲ್ಲ ವಿದ್ಯಾರ್ಥಿಗಳು ನಗೆಯ ಕಡಲಿನಲ್ಲಿ ಎಷ್ಟೋ ಹೊತ್ತು ತೇಲುತ್ತಿದ್ದರು.
ಯಾವತ್ತೂ ಅವರ ಕೈಯಲ್ಲಿ ಮಯೂರ, ತುಷಾರ, ಸುಧಾ, ಕರ್ಮವೀರ, ತರಂಗ, ಕಸ್ತೂರಿಯಂಥ ಸಾಹಿತ್ಯ ಪತ್ರಿಕೆಗಳ ಆಗರವೇ ಇರುತ್ತಿದ್ದವು. ಬೋಧನೆ ಇಲ್ಲದ ಹೊತ್ತಲ್ಲಿ ಆ ಪತ್ರಿಕೆಯನ್ನು ಕೆದರಿ ಕೆದರಿ ಓದಿ ಅದರಳೊಗಿನ ಸಾಹಿತ್ಯದ ಹುಡಿಯಲ್ಲಿಯೇ ಮೈಮರೆಯುತ್ತಿದ್ದರು. ಖರ್ಚುಮಾಡಿ ಒಂದು ಹಾಳೆಯನ್ನು ಖರೀದಿಸದ ಶಾಲೆಯ ಉಳಿದ ಶಿಕ್ಷಕ ಮಹಾಶಯರು ಅವರು ಓದಿ ಟೇಬಲ್ ಮೇಲೆ ಇಟ್ಟ ಆ ಮ್ಯಾಗ್ಜಿನ್‌ಗಳಿಂದಲೇ “ಇಂದು ಎಷ್ಟೊಂದು ಶಕೆಯಲ್ಲವೇ” ಅನ್ನುತ್ತ ಕೈಯಲ್ಲಿ ಹಿಡಿದುಕೊಂಡು ಗಾಳಿಬೀಸುವಾಗ ಮಾರುತಿ ಗುರುಗಳ ಮನಸ್ಸು ಕೊತ ಕೊತ ಕುದಿಯುತ್ತಿತ್ತು. ಆದರೂ ಏನೂ ಮಾಡುವ ಸ್ಥಿತಿಯಲ್ಲಿ ಅವರು ಇರುತ್ತಿರಲಿಲ. ಹೀಗಾಗಿ ಅವರು ಓದಿದ ಮೇಲೆ ಯಾವುದೇ ಪುಸ್ತಕವನ್ನ ಎಲ್ಲ ಶಿಕ್ಷಕರ ಎದುರಿಗಿರುವ ಟೇಬಲ್ ಮೇಲೆ ಇಡದೇ ತಮ್ಮ ಕಬೋರ್ಡನಲ್ಲಿ ಇಡುವುದನ್ನು ರೂಢಿಮಾಡಿಕೊಂಡರು.
ವಿಜ್ಞಾನದ ಜೊತೆಗೆ ಸಾಹಿತ್ಯದ ಓದಿನ ರುಚಿ ಹಿಡಿಸಿಕೊಂಡಿದ್ದ ಮಾರುತಿ ಶಿಕ್ಷಕರು ಕತೆ, ಕವನ ಬರೆಯುತ್ತಿದ್ದರು. ಅವರು ಬರೆದ ಕತೆ ಕವನ ನಾಡಿನ ದಿನ ಪತ್ರಿಕೆಯಲ್ಲಿ, ಮಾಸ ಪತ್ರಿಕೆಗಳಲ್ಲಿ ಆಗಾಗ ಪ್ರಕಟವಾಗುತ್ತಿದ್ದವು. ಯುಗಾದಿ ಕವನ ಸ್ಪರ್ಧೆಯಲ್ಲಿ ಅವರಿಗೆ ಮೊದಲ ಬಹುಮಾನ ಸಿಕ್ಕಾಗ ಪತ್ರಿಕೆಯವರು ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ಸನ್ಮಾನಿಸಿ, ಪ್ರಶಸ್ತಿ, ಪದಕ ನೀಡಿ ಗೌರವಿಸಿ ಕಳಿಸಿದ್ದರು. ಅವರಲ್ಲಿರುವ ಸಾಹಿತ್ಯ ಅಭಿರುಚಿ, ಅವರ ಬೆಳವಣಿಗೆಯನ್ನು ಸಹಿಸದ ಸಹ ಸಿಬ್ಬಂದಿ ಶಿಕ್ಷಕರಾದ ಪರಮೇಶಿ ಮತ್ತು ತಿಮ್ಮನಗೌಡರು ಅವರನ್ನು ಆಗಾಗ ಲಘುವಾಗಿ ಟೀಕಿಸಿ ಹಲ್ಲುಕಿಸಿದು ನಕ್ಕು ಸಂಭ್ರಮಿಸುತ್ತಿದ್ದರು. “ನಾಯಿ ಬೊಗಳಿದರೆ ದೇವಲೋಕ ಹಾಳಾಗದು” ಸತ್ಯ ಸಿದ್ಧಾಂತ ಬಲ್ಲವರಾದ ಮಾರುತಿ ಗುರುಗಳು ಅವರ ವ್ಯಂಗ ಮಾತಿಗೆ ಹುಸಿನಗೆ ಚೆಲ್ಲಿ ಮಕ್ಕಳಿಗೆ ಮಾಡಬೇಕಾದ ಬೋಧನೆಯತ್ತ ತಮ್ಮ ಚಿತ್ತ ಹರಿಬಿಡುತ್ತಿದ್ದರು.
ಒಂದು ಸಲ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಅವರ ಮಾರ್ಗದರ್ಶನದಿಂದ ಮೂರು ವಿದ್ಯಾರ್ಥಿಗಳು ಭಾಗವಹಿಸಿ ಮೊದಲ ಬಹುಮಾನ ಗಿಟ್ಟಿಸಿದ್ದರು. ಶಾಲೆಗೆ ಮತ್ತು ತಮ್ಮೂರಿಗೆ ಕೀರ್ತಿ ತಂದಿರುವ ಆ ಮಕ್ಕಳ ಸಾಧನೆ ಕುರಿತು ಶಿಕ್ಷಣ ಅಧಿಕಾರಿಗಳು, ಊರಿನ ಮುಖಂಡರು, ಬಹುಮಾನಿತ ಮಕ್ಕಳ ತಂದೆ ತಾಯಿಗಳು ಶಾಲೆಗೆ ಬಂದು ಮಾರುತಿ ಗುರುಗಳನ್ನು ಸನ್ಮಾನಿಸಿದರು.
ವಿಜ್ಞಾನದಲ್ಲಿ ಸಾಧನೆ ಮಾಡಿದ ಮಕ್ಕಳ ಕೀರ್ತಿ ನಾಡಿನ ಪತ್ರಿಕೆ ತುಂಬೆಲ್ಲ ಸುದ್ದಿ ಹರಿದಾಡುತ್ತಿತ್ತು. ಪತ್ರಿಕೆಯವರು ಮಾರ್ಗದರ್ಶಕ ಮಾರುತಿ ಶಿಕ್ಷಕರ ಕುರಿತು ಒಂದೆರಡು ಸಾಲು ಪ್ರಶಂಸನೀಯವಾಗಿ ಹೊಗಳಿ ಬರೆದಿದ್ದರು. ಆ ಶಾಲೆಯ ಸಹ ಶಿಕ್ಷಕರಾದ ತಿಮ್ಮನಗೌಡರಿಗೆ ಅದು ಹಿಡಿಸಿರಲಿಲ್ಲ. ಕೊಠಡಿಯಲ್ಲಿ ಯಾರೂ ಇಲ್ಲದಾಗ ಸುದ್ದಿ ಮಾಡಿದ ಪತ್ರಿಕೆಯ ವರದಿಗಾರನನ್ನೂ, ಮಾರುತಿಗುರುಗಳನ್ನುಬಾಯಿಗೆ ಬಂದಂತೆ ಬೈಯ್ಯುತ್ತ, ಮುಂದಿದ್ದ ಪತ್ರಿಕೆಯನ್ನು ಉಂಡಿಗಟ್ಟಿ ಶಾಲೆಯ ಹಿಂದಿನ ಕಿಡಕಿಯಲ್ಲಿ ತೂರಿದ್ದರು. ಆಗ ಅವರ ಮನದಲ್ಲಿರುವ ಮತ್ಸರತೆ ಕೊಂಚ ಕರಗಿತ್ತು.
ಪರಮೇಶಿ ಮತ್ತು ತಿಮ್ಮನಗೌಡರಿಗೆ ವಿಜ್ಞಾನ ಶಿಕ್ಷಕ ಮಾರುತಿಯವರ ಮೇಲೆ ಅಷ್ಟೊಂದು ಶೀತಲಸಮರ ನೆಡೆಯಲು ಕನ್ನಡ ಶಿಕ್ಷಕಿ ಆಶಾ ಮೇಡಂ ಅವರೇ ಕಾರಣ. ನವ ತರುಣಿ ಆಶಾ ಮೇಡಂ ಅವರು ಯಾವತ್ತೂ ಮಾರುತಿ ಗುರುಗಳ ಹೆಜ್ಜೆ ತುಳಿಯುತ್ತಿದ್ದಳು, ಅವರೊಟ್ಟಿಗೆ ನಗುತ್ತಲೇ ಮಾತಾಡುವುದು, ಅವರೊಟ್ಟಿಗೇ ಊಟದ ಸಮಯದಲ್ಲಿ ಹಂಚಿಕೊಂಡು ತಿನ್ನುವುದು, ಸಾಹಿತ್ಯದ ವಿಷಯವನ್ನು ಗಹನವಾಗಿ ಚರ್ಚಿಸುವುದು, ಕುವೆಂಪು, ಬೇಂದ್ರೆಯವರ ಸಾಹಿತ್ಯದ ತೌಲನಿಕ ಚರ್ಚೆಯಲ್ಲಿ ಇಬ್ಬರೂ ಸಾಹಿತ್ಯ ಆಸಕ್ತರು ತೊಡಗಿಕೊಂಡು ಲೋಕವನ್ನೇ ಮರೆತಾಗ ಪರಮೇಶಿ ಮತ್ತು ತಿಮ್ಮನಗೌಡರಿಬ್ಬರೂ ಅವರ ಕುರಿತು ಕಳ್ಳಸಂಬಂಧದ ಕತೆ ಹೆಣೆದು ಊರ ತುಂಬೆಲ್ಲ ಪುಕಾರ ಹಬ್ಬಿಸಿ ಅಲ್ಲೂ ಸೋತು ಮುಖ ಬಾಡಿಸಿಕೊಂಡಿದ್ದರು.
ಪರಮೇಶಿ ಮತ್ತು ತಿಮ್ಮನಗೌಡರಿಬ್ಬರೂ ಸಣ್ಣತನದ ಬುದ್ದಿವುಳ್ಳವರೆನ್ನುವ ಸತ್ಯ ವಿದ್ಯಾರ್ಥಿಗಳಿಂದ ಹಿಡಿದು ಇಡೀ ಊರಿನ ಜನತೆಗೂ ಗೊತ್ತಾಗಿತ್ತು. ಅವರು ಯಾವುದೇ ಪುರಾಣ ಹೆಣೆದು ಹೇಳಿದರೂ, ಕತೆ ಕಟ್ಟಿ ಕುಟ್ಟಿದರೂ ಅವರ ಮಾತಿನತ್ತ ತಲೆಕೆಡಿಸಿಕೊಳ್ಳಲೂ ಯಾರೂ ಹೋಗುತ್ತಿರಲಿಲ್ಲ. ಹೀಗಾಗಿ ಅವರಿಬ್ಬರಿಗೆ ಮಾರುತಿ ಗುರುಗಳನ್ನು ಕಂಡರೆ ಸಹಿಸಲಾಗುತ್ತಿರಲಿಲ್ಲ. ಹೇಗಾದರೂ ಮಾಡಿ ಮಾರುತಿ ಶಿಕ್ಷಕರನ್ನು ಒಂದು ದೊಡ್ಡ ಬಲೆಯಲ್ಲಿ ಸಿಕ್ಕಾಕಿಸಿ ಅವರ ಘನತೆ, ಗೌರವ ಮಣ್ಣುಗೂಡಿಸಬೇಕೆನ್ನುವ ಸಾಕಷ್ಟು ಪ್ರಯತ್ನ ಮಾಡಿದ್ದರೂ ಯಾವತ್ತೂ ಫಲ ಸಿಕ್ಕಿರಲಿಲ್ಲ.
ಅಂದು ಕನ್ನಡ ರಾಜ್ಯೋತ್ಸವ. ಕನ್ನಡ ಶಿಕ್ಷಕಿ ಆಶಾ ಮೇಡಂ ಅವರು ಸೂರ್ಯೋದಯದ ಮುನ್ನವೇ ಬಂದು ಶಾಲೆಯನ್ನು ತಳಿರು ತೋರಣಗಳಿಂದ ಕೆಲವು ವಿದ್ಯಾರ್ಥಿಗಳ ಸಹಾಯದಿಂದ ಅಚ್ಚುಕಟ್ಟಾಗಿ ಸಿಂಗರಿಸಿದ್ದರು. ಕೆಲವು ಮಕ್ಕಳು ಜ್ಞಾನಪೀಠ ವಿಜೇತರ ಭಾವಚಿತ್ರಗಳನ್ನು, ಇನ್ನೂ ಕೆಲವು ಮಕ್ಕಳು ಪಂಪ ಪ್ರಶಸ್ತಿ ಪಡೆದ ಸಾಹಿತಿಗಳ ಭಾವಚಿತ್ರಗಳನ್ನು ಸಂಗ್ರಹಿಸಿ ಅಲ್ಲಲ್ಲಿ ನಯವಾಗಿ ಗೋಡೆಗೆ ಅಂಟಿಸಿದ್ದರು. ಮಾರುತಿ ಗುರುಗಳು ಭಾಷಣ ಮಾಡುವ ಹುಡುಗರಿಗೆ, ನಿರೂಪಣೆ ಮಾಡುವ ಹುಡುಗಿಯರಿಗೆ, ಮಾರ್ಗದರ್ಶನ ಮಾಡುತ್ತ ಹುಡುಗರೊಂದಿಗೆ ಹುಡುಗರಾಗಿದ್ದರು. ಪರಮೇಶಿ “ಈ ರಾಜ್ಯೋತ್ಸವ ಕನ್ನಡ ಶಿಕ್ಷಕರಿಗೆ ಸಂಬಂಧಪಟ್ಟದ್ದು ಇದರಾಗೂ ಆ ಮಗಾ ಹೊಕ್ಕೊಂಡಾನ ನೋಡ” ಎಂದು ಖುರ್ಚಿಯಲ್ಲಿ ತನ್ನ ಬಾಜೂ ಕುಳಿತ ತಿಮ್ಮನಗೌಡರಿಗೆ ಹೇಳಿ ನಗುತ್ತಿದ್ದರು. “ಆ ಮಗನಿಗೆ ಪ್ರಚಾರ ಬೇಕು, ಪುಕಾರವೂ ಬೇಕು ಅದಕ್ಕೆ ಅವನು ಎಲ್ಲಾ ವಿಷಯದಲ್ಲೂ ಮೂಗುತೂರಿಸುತ್ತಾನೆ” ಎಂದು ಕೊಕ್ಕಾಡಿಸಿ ತಿಮ್ಮನಗೌಡರು ನಗತೊಡಗಿದರು.
ಆಶಾ ಮೇಡಂ ಅವರು ಅರಶಿನ ಬಣ್ಣದ ಸೀರೆ , ಕುಂಕುಮ ಬಣ್ಣದ ಜಂಪರ ತೊಟ್ಟು ಥೇಟ್! ಕನ್ನಡ ಮಾತೆಯಂತೆ ಕಾಣುತ್ತಿದ್ದರು. ಅವರ ಸುತ್ತಲು ಮುಗಿಬಿದ್ದ ಮಕ್ಕಳು ಅವರು ಹೇಳಿದ ಕೆಲಸ “ಟಕಾಟಕ್” ಮಾಡಿ ಮುಗಿಸುತ್ತಿದ್ದರು. ಕನ್ನಡದ ಹಬ್ಬಕ್ಕೆ ನಾಡಿನ ಶ್ರೇಷ್ಠ ಜನಪದ ಕವಿಯನ್ನು ಮುಖ್ಯ ಅತಿಥಿಯಾಗಿ ಶಾಲೆಯ ಮುಖ್ಯಗುರುಗಳು ಆಹ್ವಾನಿಸಿದ್ದರು. ಜನಪದ ಸಾಹಿತಿ ಮಕ್ಕಳಿಗೆ ನಾಡು, ನುಡಿ, ಸಾಹಿತ್ಯದ ಅರಿವಿನ ನುಡಿಯನ್ನು ಮಕ್ಕಳ ಎಳೆಯ ಮೆದುಳಿನಲ್ಲಿ ಅಚ್ಚೊತ್ತಿದಂತೆ ಹೇಳುತ್ತಿದ್ದರು. ಎಲ್ಲರೂ ಅವರ ಮಾತು ಆಲಿಸುತ್ತ ಮೈಮರೆತಿದ್ದರು.
ಏದುಸಿರು ಬಿಡುತ್ತ ಒಂದು ಹುಡುಗಿ ಬಂದವಳೇ ಮಾರುತಿ ಗುರುಗಳ ಕಿವಿಯಲ್ಲಿ ಏನೇನೋ ಗುಣುಗಿದಳು. ಗುರುಗಳು ಗಾಬರಿಗೆಟ್ಟು ನಡೆಯುವ ಬದಲು ಓಡತೊಡಗಿದರು. ಅವರ ಹಿಂದಿಂದೆ ಆ ಹುಡುಗಿಯೂ ಓಡುತ್ತಿತ್ತು. ಕಾರ್ಯಕ್ರಮ ತನ್ನ ಪಾಡಿಗೆ ಅದು ಶಾಂತವಾಗಿ ನಡೆದಿತ್ತು.
ಪರಮೇಶಿ ಮತ್ತು ತಿಮ್ಮನಗೌಡರೂ “ಆ ಮುಟ್ಟಾಳ ಅತ್ತಾಗ್ಯಾಕ ಹ್ವಾದ” ಎಂದು ಅವರೂ ಎದ್ದು ಹೋದರು. ಮಾರುತಿ ಗುರುಗಳು ಬಿಳಿ ಬಣ್ಣದ ಬಟ್ಟೆ ತೊಟ್ಟ ಹನ್ನೆರಡು ವರುಷದ ಹುಡುಗಿಯನ್ನು ಎತ್ತಿಕೊಂಡು ಬರುತ್ತಿದ್ದರು. ತಿಮ್ಮನಗೌಡರು ಆ ದೃಶ್ಯವನ್ನು ಹಾಗೇ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದರು. ಮಾರುತಿ ಗುರುಗಳು ಆ ಹುಡುಗಿಯನ್ನು ಒಂದು ಕೋಣೆಗೆ ಒಯ್ದು ಹಾಕಿದರು. ನಿಧಾನವಾಗಿ ಆ ಹುಡುಗಿ ತೊಟ್ಟ ಕೊರಳಿನಲ್ಲಿ ಗಟ್ಟಿಯಾದ ಗುಂಡಿಯನ್ನು ಬಿಚ್ಚಿದರು. ಹುಡುಗಿಯ ಕೈ-ಕಾಲು ಹಿಡಿದು ಗಸ ಗಸ ತಿಕ್ಕಿದರು, ಮುಖಕ್ಕೆ ಒಂದಿಷ್ಟು ನೀರು ಚಿಮುಕಿಸಿ ಅಲುಗಾಡಿಸಿದರು. ಇದನೆಲ್ಲವನ್ನು ಕಿಡಕಿಯ ಮರೆಯಲ್ಲಿ ನಿಂತು ಇಬ್ಬರೂ ವಿಡಿಯೋ ಮಾಡುತ್ತಿದ್ದರು. ದ್ಯಾನ ತಪ್ಪಿದ ಹುಡುಗಿಗೆ ಅರಿವು ಬರಲು ಮಾರುತಿ ಗುರುಗಳು ಹರ ಸಾಹಸವೇ ನಡಿಸಿದರೂ ಹುಡುಗಿ ಮಿಸುಗಾಡಲಿಲ್ಲ. “ಅಯ್ಯೋ ಹುಡುಗಿಯ ಜೀವಕ್ಕೇನಾದರೂ ಅಪಾಯ ಆಯಿತೇ” ಎಂದು ಮಾರುತಿ ಗುರುಗಳ ಕೈ ಕಾಲು ಥರ ಥರ ನಡುಗತೊಡಗಿದವು. “ಯಾರಾದರೂ ಇದ್ರ ಇಲ್ಲಿ ಲಗೂನ ಬನ್ರೀ” ಎಂದು ಜೋರಾಗಿ ಕಿರಚಿದರು. ಸನಿಹದಲ್ಲಿ ಯಾರೂ ಇರಲಿಲ್ಲ. ಕಾರ್ಯಕ್ರಮದ ಸೌಂಡನಲ್ಲಿ ಮಾರುತಿ ಗುರುಗಳು ಕಿರಚಾಡಿದ್ದು ಯಾರಿಗೂ ಕೇಳಲಿಲ್ಲ. ಕಿಡಕಿ ಮರೆಯಲ್ಲಿದ್ದ ಇಬ್ಬರೂ ಅವರು ಕೂಗಾಡಿದ್ದು ಕೇಳಿ ಮುಳುಮುಳು ನಕ್ಕರು. ಮಾರುತಿ ಗುರುಗಳು ಮಗುವಿನ ಎದೆಬಡಿತವಾದರೂ ಇದೆಯೋ ಇಲ್ಲವೋ ಎಂದು ಮತ್ತೊಮ್ಮೆ ಎದೆಯ ಮೇಲೆ ಕೈಯಿಟ್ಟು ನೋಡಿದರು. ಹುಡುಗಿ ಹಸಿ ಕಟ್ಟಿಗೆಯಂತೆ ಅಂಗಾತ ಬಿದ್ದುಕೊಂಡಿತ್ತು.
ಆ ಕಡೆಯಿಂದ ಎಚ್ಚರ ತಪ್ಪಿ ಮಲಗಿದ ಹುಡುಗಿಯ ತಂದೆ ತಾಯಿ ಎದೆ ಬಾಯಿ ಬಡೆದುಕೊಂಡು ಬರುತ್ತಿರುವುದನ್ನು ನೋಡಿದ ತಿಮ್ಮನಗೌಡರು ಬರ್ರನೆ ಬರಗುಡುತ್ತ ಕಾರ್ಯಕ್ರಮ ನಡೆದಲ್ಲಿ ಹೋಗಿ “ನಮ್ಮ ಮಾರುತಿ ಸರ್ ಏಳನೆ ಕ್ಲಾಸ್ ತುಂಗವ್ವನ ಅತ್ಯಾಚಾರ ಮಾಡಿದ, ಆ ಹುಡುಗಿ ಸತ್ತ ಹೋಗೇತಿ” ಎಂದು ದೊಡ್ಡದನಿ ತಗೆದು ಕೂಗಿದರು. ತಾನೂ ಮೊಬೈಲ್‌ದಲ್ಲಿ ಮಾಡಿಕೊಂಡ ವಿಡಿಯೋ ಮುಖ್ಯಗುರುಗಳಿಗೆ, ಅತಿಥಿಗಳಿಗೆ ಮುಂದೆ ಹಿಡಿದರು. ಇವರು ಬೆನ್ನಲ್ಲಿ ಚೂರಿ ಹಾಕುವ ನಯ ವಂಚಕರೆನ್ನುವುದು ಮುಖ್ಯಗುರುಗಳಿಗೆ ತಿಳಿದಿದ್ದರೂ ತೋರಿಸಿದ ಅರೆ ಬರೆ ವಿಡಿಯೋ ನೋಡಿ ಅವರು ನಂಬಲೇ ಬೇಕಾಯಿತು. ಆಶಾ ಮೇಡಂ “ಅಯ್ಯೋ ಈ ಚೆಂಡಾಲರೂ ಮಾರುತಿ ಗುರುಗಳ ಬದುಕಿನ ಬುಡಕ್ಕೆ ಕೊಡಲಿ ಹಾಕಿದರು” ಎಂದು ಕಣ್ಣೀರಿಟ್ಟರು.
ಕಣ್ಣು ಮುಚ್ಚಿ ಕಣ್ಣು ತಗೆಯುವುದರಲ್ಲಿ ಮಾರುತಿ ಗುರುಗಳ ಮಾನಾ, ಸನ್ಮಾನಗಳೆಲ್ಲವೂ ಊರಿನವರ ಹೊಡೆತದಿಂದ ಉದುರಿ ಮಣ್ಣುಗೂಡಿದ್ದವು. ಎಚ್ಚರ ತಪ್ಪಿ ಬಿದ್ದ ಹುಡುಗಿ ನಿಧಾನವಾಗಿ ಕಣ್ಣು ತೇರೆದು “ಇಲ್ಲಿ ಏನು ನಡಿಯುತ್ತಿದೆ” ಎಂದು ತಿಳಿಯದೆ ಅವರ ತಂದೆ-ತಾಯಿ ಕೈ ಹಿಡಿದುಕೊಂಡು ಮನೆಯತ್ತ ನೆಡೆದಳು.
ಮಾರುತಿ ಗುರುಗಳ ಕಿವಿಯಲ್ಲಿ “ಸರ್ ತುಂಗವ್ವ ಪೀಡ್ಸ ಬಂದ ಮೂರ್ಚೆ ಹೋಗ್ಯಾಳ ಲಗೂನ ಬರ್ರೀ” ಎಂದು ಹೇಳಿದ ಆ ಹುಡುಗಿ “ನಮ್ಮ ಸರ್ ಏನೂ ಮಾಡಿಲ್ಲ ಅವರ ತಪ್ಪೇನೂ ಇಲ್ಲಾ” ಎಂದು ಒಂದೇ ಸಮನೇ ಮುಗಿಲು ಹರಿದು ಬೀಳುವಂತೆ ಕಿರಚುತ್ತಿದ್ದರೂ ಊರಿನ ಮೂರ್ಖ ಜನರ ಕಿವಿಯಲ್ಲಿ ಆ ದನಿ ಕೇಳದೇ ಕ್ಷೀಣವಾಗಿತ್ತು.
ಜನ ಮರಳೋ ಜಾತ್ರೆ ಮರುಳೋ , ಹಿಂದು ಮುಂದು ವಿಚಾರಿಸದೇ ಊರಿನವರೆಲ್ಲರೂ ಸೇರಿ ಅಪರಾಧಿ ಎಂದು ಪಟ್ಟಕಟ್ಟಿ , ಕೈಗೊಂದೊಂದು ಏಟು ಹಾಕಿ ಮಾರು ಗುರುಗಳನ್ನು ಊರಿನಿಂದ ಛೀಮಾರಿ ಹಾಕಿ ಕಳಿಸಿದರು. ತಿಮ್ಮನಗೌಡ ಮತ್ತು ಪರಮೇಶಿ ಅವರು ಕದ್ದು ಮುಚ್ಚಿ ಮಾಡಿದ ವಿಡಿಯೋ ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿ ಖುಷಿಪಟ್ಟಿದ್ದರು. ಅಕ್ಷರ ಕಲಿಸಿಕೊಡುವ ಗುರುಗಳೇ ಹೀಗೆ ಹೇಸಗಿ ತಿನ್ನುವ ಕೆಲಸ ಮಾಡಿದರೆ ಏನು ಆಗಬಾರದಾಗಿತ್ತೋ ಅದು ಮಾರುತಿ ಗುರುಗಳ ಜೀವನದಲ್ಲಿ ಪ್ರಾಯೋಗಿಕ ವಿಜ್ಞಾನದಂತೆ ಘಟಿಸಿ ಹೋಯಿತು.
ಎರಡು ದಿನಗಳ ನಂತರ ತಂಗೆವ್ವ ನಿಚ್ಚಳಾಗಿದ್ದಳು.“ನಮ್ಮ ಸರ್ ನನ್ನ ಪ್ರಾಣಾ ಉಳಿಸಿದ್ರು, ನನ್ನ ಕಾಪಾಡಿದ್ರು ಅವರನ್ನು ನಾನು ಭೇಟಿಯಾಗಿ ಅವರ ಆಶೀರ್ವಾದ ಪಡಿಯಬೇಕು” ಮನೆಯಲ್ಲಿ ಅವರವ್ವ ಅಪ್ಪನ ಮುಂದೆ ಒಂದೇ ಸಮನೇ ಹಲಬತೊಡಗಿದಳು. ಮಗಳ ಮಾತು ಕೇಳಿದ ಪಾಲಕರ ಎದೆಗೆ ಹಾರಿ ಚುಚ್ಚಿದಂತಾಯಿತು. ತಂಗೆವ್ವನ ಬಾಯಿಂದ ಸತ್ಯ ತಿಳಿದ ಮೇಲೆ ಇಡೀ ಊರ ಜನರೆಲ್ಲರೂ ಮೋತಿಗೆ ಮಸಿ ಹಚ್ಚಿಕೊಂಡವರಂತೆ ಕುಳಿತರು. ಮೂರ್ಖರ ಮಾತು ನಂಬಿ “ನಮ್ಮೂರಿನ ಪುಣ್ಯವನ್ನೇ ನಾವೇ ಹೊರಗಟ್ಟಿದೆವು” ಎಂದು ಕುಂತ-ನಿಂತಲ್ಲಿ ಇಡೀ ಊರಿಗೂರೇ ಮರುಗತೊಡಗಿತು. ಆಗ ಕಾಲ ಸರಿದು ಹೋಗಿತ್ತು. ಏನೂ ಮಾಡುವಂತಿರಲಿಲ್ಲ. ಮಾರುತಿ ಗುರುಗಳು ತರಗತಿಯಲ್ಲಿ ಹೇಳಿದ “ಸತ್ಯ ಹರಿಶ್ಚಂದ್ರ” ಕಾವ್ಯದ “ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ” ಸಾಲೊಂದನ್ನು ನೆನಸಿಕೊಂಡು ತಂಗೆವ್ವ ಒಂದೇ ಸಮನೆ ಬಿಕ್ಕತೊಡಗಿದಳು. ಅವಳ ದುಃಖ ಎಷ್ಟು ಅತ್ತು ಕಣ್ಣೀರ ಸುರಿಸಿದರೂ ಕಡಿಮೆಯಾಗಲೇ ಇಲ್ಲ.
*****






0 Comments