ಬೆನಾಲಿಮ್..

ಸಂತೋಷಕುಮಾರ ಮೆಹೆಂದಳೆ ಅವರ ಹೊಸ ಕಾದಂಬರಿ – ಬೆನಾಲಿಮ್

ಸ್ನೇಹ ಬುಕ್ ಹೌಸ್ ಪ್ರಕಟಿಸಿರುವ ಪುಸ್ತಕ ಈಗ ಮಾರುಕಟ್ಟೆಯಲ್ಲಿದೆ.

ಈ ಕೃತಿಯ ಆಯ್ದ ಒಂದು ಭಾಗ ನಿಮ್ಮ ಓದಿಗಾಗು-ಓದಿಗಾಗಿ-

ಸಂತೋಷಕುಮಾರ ಮೆಹೆಂದಳೆ

ಜಗತ್ತಿನಲ್ಲಿ ಪ್ರತಿ ಬಾರಿಯೂ ಯಾಮಾರಿಸಬಹುದಾದ ಐಟಂ ಅಂತಿದ್ದರೆ ಅದು ಗಂಡಸು ಎಂದರಿವಾಗೋಕೆ ಹುಡುಗಿ ‘ದೊಡ್ಡವಳೆ’ ಆಗಬೇಕೇ..?ನನ್ನ ನೆತ್ತಿ ಮಾಸು ಹಾರುವ ಮೊದಲೇ ಒಂದು ವಿಷಯ ಅರಿವಾಗಿ ಬಿಟ್ಟಿತ್ತು. ಗಂಡಸರಿಗೆ ಮೊದಲಿಗೆ ಕಣ್ಣು ಬೀಳುವುದೇ ಹೆಂಗಸರ ಎದೆಯ ಮೇಲೆ… ಅದ್ಯಾಕೆ..? ನನಗಿವತ್ತಿಗೂ ಅರಿವಾಗದ ಸತ್ಯ ಅದು. ಚಪ್ಪಟೆಯ ಕೇರಂ ಬೋರ್ಡಿನಿಂದ ಹಿಮಾಲಯದ ಅವಳಿ ಶಿಖರಗಳವರೆಗಿನ ಕೆ.ಜಿ. ಲೆಕ್ಕದ ಹೆಂಗಸರ ಗುಂಪಿನಲ್ಲೂ ಇದ್ದು ಗಮನಿಸಿದ್ದೇನೆ.

ಪ್ರತಿ ಗಂಡಸಿನ ಅಂಕೆ ತಪ್ಪಿದ ಕಣ್ಣು, ಹೆಣ್ಣಿನ ಎದೆಯ ಮೇಲೆಯೇ ಹೊರಳುತ್ತದೆ..? ಉಹೂಂ.. ಅದಕ್ಕೇ ಅವನು ಹೆಣ್ಣಿನ ಎದುರಿಗೆ ಪೇಲವವಾಗುವುದು ಎಂದು ಅದರ ಹಿಂದಿಂದೆ ಅರಿವಿಗೆ ಬಂದಿತ್ತು. ಹಾಗಾಗಿ ಬಹುಶಃ ಈ ಮುಜುಗರ ಎದುರಿಸದ ಹೆಂಗಸಿನ ಮತ್ತು ಹಾಗೆ ದೃಷ್ಟಿಯನ್ನು ಕದ್ದು ಹಾಕದ ಗಂಡಸರ ಸಂಖ್ಯೆ ಬೆರಳೆಣಿಕೆ ದಾಟಿರಲಿಕ್ಕಿಲ್ಲ ಈ ಜಗತ್ತಿನಲ್ಲಿ. ನನ್ನ ಮಟ್ಟಿಗಂತೂ ಹಾಗೆ ಒಬ್ಬನಾದರೂ ಇದ್ದಾನಾ ಎಂದು ತಮಾಷಿಯ ಲೆಕ್ಕಕ್ಕೆ ಬಿದ್ದರೆ ದಕ್ಕುತ್ತಿದ್ದುದು ಸೊನ್ನೆ ಯಾವಾಗಲು. ಕಾರಣ ನಾನು ಅರ್ಧ ರಾಜ್ಯಕ್ಕೆ ಬೆಂಕಿ ಇಡುವಷ್ಟು ಕಾವಾಗಿರುತ್ತಿದ್ದೆ, ರಾವಾಗಿದ್ದೆ.

ಹಾಗಿದ್ದಾಗ ಈ ಹೆಸರು ಬದಲಾಯಿಸುವ ದಫ್ತರಿನ ಅಧಿಕಾರಿ ಯಾವ ಲೆಕ್ಕ. ನನ್ನ ಎದೆಯ ಮೇಲಲ್ಲದೆ ಇನ್ನೆಲ್ಲಿ ಕಣ್ಣು ಹಾಕಿಯಾನು ಅವನು.
ಅದವತ್ತೂ ಹಾಗೇ ಆಗಿತ್ತು. ಅಪ್ಪ ಅದ್ಯಾಕೋ ..ಡಯಾನ..ಪುಟ್ಟಾ.. ಎಂದು ಪ್ರೀತಿಯಿಂದ ಮೇಲುಪ್ಪರಿಗೆಯ ಮೇಲೆ ಸಮುದ್ರ ಉಪ್ಪುಗಾಳಿಗೆ ಮುಖವೊಡ್ಡಿ ನೊರೆ ಬೀಯರು ಹೀರುತ್ತಾ ಕರೆದದ್ದೇ ನೆನಪು. ಮತ್ಯಾವತ್ತೂ ನನ್ನ. ‘ಮಿಲಿ..’ ಎನ್ನುವ ಮೂಲ ಹೆಸರನ್ನೇ ಜ್ಞಾಪಿಸಿಕೊಂಡಿರಲಿಲ್ಲ.
ರಿಜಿಸ್ಟ್ರಾರ ಕಛೇರಿಗೆ ನುಗ್ಗಿ ಹೋಗಿದ್ದೆ. ಹೇಗೆ ಏನು ಮಾಡುವುದೂ ಗೊತ್ತಿರದಿದ್ದರೂ ನನ್ನೆದೆಯ ಮೇಲಿಂದ ಪ್ರಯಾಸದಿಂದ ದೃಷ್ಟಿ ಕದಲಿಸುತ್ತಿದ್ದ ಅಧಿಕಾರಿಯ ಎದುರಿಗೆ ನನ್ನ ಹೆಸರು ಬದಲಿಸಿ ಕೊಡಲು ವಾಗ್ವಾದಕ್ಕೆ ಬಿದ್ದಿದ್ದೆ.

ಇನ್ಮೇಲೆ ನಾನು ಡಯಾನ ಎಂದಿದ್ದೆ. ಆದರೆ ಅವನ ಉಸಿರು ಮೇಲೂ ಕೆಳಗೂ ಆಡುತ್ತಿತ್ತು. ಆಗಿದ್ದೆ ಬೇರೆ. ಹೌದು.. ಅವನ ಮುಜುಗರಕ್ಕೂ ಮೊದಲೇ ನಾನೇ, ‘..ಆಯ್ತು ಅಪ್ಪನನ್ನು ಕರೆತರುತ್ತೇನೆ ಲಾಯರ್ ನೋಟೀಸು ಕೊಡಿಸುತ್ತೇನೆ..’ ಎಂದಿತ್ಯಾದಿ ರಪರಪನೇ ಹೇಳಿ ಅವನ ಉಸಿರು ತಿದಿಯೊತ್ತುವ ಮೊದಲೇ ಕಛೇರಿಯಿಂದ ಹೊರಬಿದ್ದಿದ್ದೆ. ಆವತ್ತು ನನಗಿನ್ನೂ ಸರಿಯಾಗಿ ಹದಿನೈದು ತುಂಬಿತ್ತಾ ಹದಿನಾರರ ಬಿಸಿ ಊಟೆಯಾಗಿದ್ದೆನಾ..? ನೆನಪಿಲ್ಲ. ಆದರೆ ನಮ್ಮ ಕುಪ್ಪೆಂನ ಫ್ರೆಂಚ್ ಕಾಲನಿಯಿಂದ ಹಿಡಿದು, ಶರಂಪರ ಬೀಸು ಬೀಳುತ್ತಿದ್ದ ಬೇನಾಲಿಂ ವರೆಗೂ ನಾನು ಡಯಾನ ಆಗುವುದಕ್ಕೇ ಹೆಚ್ಚು ಸಮಯ ಬೇಕಿರಲಿಲ್ಲ. ನನ್ನ ನೆತ್ತಿ ಮಾಸು ಹಾರುವ ಮೊದಲೇ ಒಂದು ವಿಷಯ ಅರಿವಾಗಿ ಬಿಟ್ಟಿತ್ತು.

ಗಂಡಸು ಸೌಂದರ್ಯಕ್ಕೆ ಮತ್ತು ಹೆಣ್ಣಿನ ಸಖ್ಯಕ್ಕೆ ಏನೂ ಮಾಡಲು ಸಿದ್ಧನಾಗಿ ಬಿಡುತ್ತಾನೆ. ಜಗತ್ತಿನಲ್ಲಿ ಅತಿ ಹೆಚ್ಚು ಬಾರಿ ಮತ್ತು ಪ್ರತಿ ಬಾರಿಯೂ ಯಾಮಾರಿಸಬಹುದಾದ ಐಟಂ ಇದ್ದರೆ ಅದು ಗಂಡಸು ಎಂದರಿವಾಗೋಕೆ ಹುಡುಗಿ ದೊಡ್ಡವಳಾಗ್ಬೇಕೆಂದೆನೂ ಇರಲಿಲ್ಲ. – ಹಾಲಿನ ಪ್ಯಾಕೆಟ್ ಪ್ಲಾಸ್ಟಿಕ್ಕಿಗಿಂತಾ ರಬ್ಬರಿನ ಕಾಂಡೋಮು ಹೆಚ್ಚಿನ ಸಂಖ್ಯೆಯಲ್ಲಿ ಬಿಕರಿಯಾಗುತ್ತದೆ. ‘..ಇದು ನೋಡು ನಿಮ್ಮದೇ ಚಿಕ್ಕಮಂಗ್ಳೂರಿನ ರಬ್ಬರು, ವಾಪಸ್ಸು ನಮಗೆ ಇಪ್ಪತ್ರೂಪಾಯಿಗೆ ಮೂರು ಮಾರುತ್ತಾರೆ ಮಾರಾಯಾ..’ ಎನ್ನುವ ಕುಹಕಕ್ಕೆ ಅಲ್ಲಿ ದೊಡ್ಡ ನಗೆಯ ಅಲೆ ಕದಲುತ್ತಿರುತ್ತದೆ.
ಹಾಲಿನಷ್ಟೆ ದುಡ್ಡಿಗೆ ಲಭ್ಯವಾಗುವ ಜಗತ್ತು ಸುಡುವ ಪೆಟ್ರೋಲು ಇಲ್ಲಿ ಸೋವಿ ಮತ್ತು ಸಲೀಸು. ಮನುಷ್ಯರಿಗಿಂತ ವಸ್ತುಗಳಿಗೆ ಕಿಮ್ಮತ್ತು ಜಾಸ್ತಿ ಇಲ್ಲಿ. ನಶೆ ಇಲ್ಲದೆ, ಪ್ರತೀ ನಜರಿನಲ್ಲೂ ಕಂಡೂ ಕಾಣದ ನಿಮಿರುವಿಕೆ ಇಲ್ಲದೆ ಗೋವೆ ಇಲ್ಲ.

ಹರಿದ ಜೀನ್ಸಿಗೆ ಇರುವಷ್ಟೆ ಬೆಲೆ ಅದನ್ನು ಸಲೀಸಾಗಿ ಬಿಚ್ಚುವವರಿಗೂ ಸಲ್ಲುತ್ತದೆ. ಮಾತೇ ಬೇಕಿಲ್ಲದೆ ಮನಸ್ಸಿಗೂ ಮೈಗೂ ನಶೆ ಹಚ್ಚಬಲ್ಲ ಐಟಮ್ಮು ಪ್ರತೀ ಗುಡಿಸಲಿನ ತಡಿಕೆಯ ಹಿಂದೆ ಮೀನು ಬುಟ್ಟಿಗಳಲ್ಲಿ ಅವಿತು ಕೂತು ಚಿಪ್ಪಾಗುತ್ತಿರುತ್ತವೆ. ಗೋವೆಯಲ್ಲಿ ಉಸಿರು ಮೇಲಕ್ಕೇರುವುದೆ ಸಂಜೆಯ ಮಬ್ಬಿನ ತರ.

ದಿವಿನಾಗುವುದು ಮಧ್ಯರಾತ್ರಿಯ ಹೊತ್ತಿಗೆ. ಹಗಲಿನಲ್ಲಿ ಶುದ್ಧ ಪಾಳು ಬಿದ್ದ ನಗರಿಗಳಂತೆ ಪ್ರತಿ ದಂಡೆ ಒಣಮೀನಿನ ವಾಸನೆಯ ಆಗರ. ಹಾಲಿಗಿಂತ ಅಲ್ಕೋಹಾಲು ಸಮೃದ್ಧ ಮತ್ತು ಶುದ್ಧ. ಕುಡಿಯುವ ನೀರು, ಬಾವಿಗಳಿಗಿಂತಾ ಹೆಚ್ಚಾಗಿ ಬಾಟಲ್‌ಗಳಲ್ಲಿದೆ. ಲೈಟು ಮತ್ತು ಮ್ಯೂಸಿಕ್ಕುಗಳು ರಾತ್ರಿಯಾದರೆ ಗಲ್ಲಿಗಳಲ್ಲೂ ಶುದ್ಧ ವೈಯ್ಯಾರದ ರತಿಯರಂತೆ ಉಬುಕಿ ನಿಲ್ಲುತ್ತವೆ. ಅವಕ್ಕೆ ಹಗಲಿನ ರಣ ಬಿಸಿಲು ಮರೆತು ಹೋಗಿರುತ್ತದೆ.

ಪಕ್ಕದಲ್ಲಿ ಹಾಯುವ ಯಾವ ಪ್ರವಾಸಿ ಮತ್ತು ಸ್ಥಳೀಯನಿಗೂ ಯಾರ ಸೊಂಟದಲ್ಲಿ ಯಾವ ಕಳವಳಿಕೆಗಳು ಕದಲುತ್ತಿವೆ, ಯಾವನ ಮನಸ್ಸಿನಲ್ಲಿ ಯಾವ ಪರಮ ವಿಕಾರ ಹುಕಿಗಳ ಉತ್ಪತ್ತಿಯಾಗುತ್ತಿವೆ ಉಹೂಂ.. ಯಾವನಿಗೂ ಬೇಕಾಗಿಲ್ಲ. ಅಷ್ಟಕ್ಕೂ ಗೋವೆಗೇ ಅದರ ಬಗ್ಗೆ ಆಸಕ್ತಿ ಇಲ್ಲ. ಸ್ವತ: ತನ್ನ ಹೆಗಲುಗಳ ಮೇಲೆ ಪರಮ ಹಾದರಗಳೂ, ಅಪರಮಿತ ಪ್ರೀತಿಯ ಸಂಬಂಧಗಳು ಬೆಸೆಯುತ್ತಿದ್ದರೂ ಗೋವೆ ಯಾರನ್ನೂ ನೀವ್ಯಾಕೆ ಬಂದೀರಿ ಯಾವತ್ತೂ ಕೇಳಿದ್ದಿಲ್ಲ. ಯಾಕೆ ವಾಪಸ್ಸು ಹೊರಟಿರಿ, ಖುಷಿಯಾಗಿಲ್ಲವಾ ಎಂದು ಮರೆತೂ ವಿಚಾರಿಸಿಕೊಳ್ಳುವುದಿಲ್ಲ.

ಪ್ರತೀ ಮಸಾಜು ಮಾಡುವವನಿಗೂ ಇಂಡಿಯನ್, ರಶಿಯನ್, ಬ್ರಾಜಿಲಿಯನ್ ಹುಡುಗಿಯರ ನಂಬರುಗಳು ಯಾವ ತೀರದಲ್ಲೂ ಸ್ವರ್ಗ ಸೃಷ್ಠಿಸಬಲ್ಲ ವ್ಯವಸ್ಥೆಗೆ ಪಕ್ಕಾಗಿರುತ್ತವೆ. ಸಮುದ್ರ ದಂಡೆಗುಂಟ ಹುಟ್ಟಿ ಅಲ್ಲೇ ಲೀನವಾಗುವ ಸುಖದ ನರಳುವಿಕೆಯಿಂದ ಹಿಡಿದು ಒಲ್ಲದ ಉನ್ಮಾದದವರೆಗಿನ ಅಪ್ಪಟ ಖಾಸಗಿ ಶಬ್ಧಗಳಿಗೆ ಯಾರೂ ಕಿವಿಯಾಗುವುದಿಲ್ಲ. ಕತ್ತಲು ಅಡರುವ ಹೊತ್ತಿಗೆ ಸರಿಯಾಗಿ ಉನ್ಮಾದಕ್ಕಡರುತ್ತಾ, ಕಂಡ ಬಂಡೆಗಳ ಅರೆಗೆ ಸ್ಥಳ ಹಿಡಿದು ಕೂಡುವ ಜೋಡಿಗಳಿಗೆ ಕತ್ತಲಿಗೂ ಮೊದಲೇ ಬೆತ್ತಲಾಗುವ ಸಂಭ್ರಮ. ಸುಖದ ಸೊಲ್ಲನ್ನು ಸೂರೆ ಹೊಡೆಯುವ ಅಪರಿಮಿತ ಆಸೆ, ಬದುಕಿನಲ್ಲೂಮ್ಮೆ ಹೀಗೆ ಬದುಕಿ ಬಿಡಬೇಕೆನ್ನುವ ಅಪ್ಪಟ ಖಾಸಗಿ ವಾಂಛೆಯ ಫ್ಯಾಂಟಸ್ಸಿಗಳಿಗೆ ತೋರಣ ಕಟ್ಟಬಲ್ಲ ತೀರವೆಂದರೆ ಅದು.

ಬೆನೋಲಿಯಂ..
ಕಂಡೂ ಕಾಣದಂತೆ ಅವರನ್ನೆಲ್ಲಾ ಕಾಯ್ದು ನಿಡುಸುಯ್ದು ಮನೆಗೋಗುವ ಗೋವೆಯ ಪೋಲಿಸರಿಗೆ ಮಾತ್ರ ಕಾಯಲೇಬೇಕಾದ ಅನಿವಾರ್ಯತೆ. ಅದೇ ನೌಕರಿ, ಚಾಕರಿ ಅದೇ ಸರಕಾರ ವಿಧಿಸಿದ ಹೊಟ್ಟೆ ಪಾಡು. ಅದಿಲ್ಲದಿದ್ದರೆ ಪಬ್ಲಿಕ್ಕು ಮತ್ತು ಟೂರಿಸ್ಟು ಗೋವೆಯನ್ನು ಮೂಸಿಯೂ ನೋಡುವುದಿಲ್ಲ. ಹಾಗೇನಾದರೂ ಆದಲ್ಲಿ ಗೋವೆಯ ಮೊದಲ ಹೊಡೆತ ಅದರ ಆರ್ಥಿಕ ಸ್ಥಿತಿಯ ಮೇಲೆ ಬೀಳುತ್ತದೆ. ಹಾಗಾಗುತ್ತಿದ್ದಂತೆ ನೆಲಕಚ್ಚುವ ಪ್ರವಾಸೋದ್ಯಮ ಸಂಪೂರ್ಣ ಗೋವೆಯನ್ನು ಆಪೋಶನವಾಗಿಸಿಕೊಳ್ಳುತ್ತದೆ.

ಹಾಗಾಗಿ ಗೋವೆ ಮತ್ತು ಬೆನೋಲಿಯಮ್ಮು ಯಾವತ್ತೂ ಜಗತ್ತಿನ ಕಂಡು ಕೇಳರಿಯದ ಜನರಿಗೆ ನಶೆಯ ಸಲಾಮು ಒಪ್ಪಿಸುತ್ತವೆ. ಶರಧಿಯ ಮೊರೆತದ ದನಿಯಲ್ಲಿ ಎಲ್ಲ ಲೀನವಾಗುತ್ತಲೆ ಇರುತ್ತವೆ. ಅಧಿಕೃತವೋ ಅನಧಿಕೃತವೋ ಸುಖಕ್ಕೆ ಗೋವೆ ಹೆಬ್ಬಾಗಿಲು..

‍ಲೇಖಕರು Avadhi

May 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: