ಭಾರತದ ನಡು ಮುರಿಯಿತೆ?

ನೂತನ ದೋಶೆಟ್ಟಿ

2015ರ ಸಪ್ಟಂಬರಿನಲ್ಲಿ ಮಾಹಿತಿ ಹಕ್ಕಿನ ಅಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ಒಂದು ಪ್ರಶ್ನೆಯನ್ನು ಕೇಳಲಾಗಿತ್ತು. ಅದು ಐಎಎಸ್, ಐಪಿಎಸ್ ಹಾಗೂ ಇತರ ಸೇವೆಗಳಲ್ಲಿ ತರಬೇತಿಗಾಗಿ ಸರ್ಕಾರ ಖರ್ಚು ಮಾಡುವ ಹಣದ ಬಾಬತ್ತಿನ ಬಗ್ಗೆ ಸಾರ್ವಜನಿಕರೊಬ್ಬರು ಕೇಳಿದ ಪ್ರಶ್ನೆ. ಆ ಪ್ರಶ್ನೆಗೆ ಸರ್ಕಾರದಿಂದ ಉತ್ತರವೂ ದೊರಕಿತ್ತು. ಅದರ ಪ್ರಕಾರ 2014-15ನೇ ಸಾಲಿಗೆ ಸರ್ಕಾರ ಭರಿಸಿದ ವೆಚ್ಚ ಒಟ್ಟೂ 4.85 ಕೋಟಿ ರೂಪಾಯಿಗಳು. ಅಂದರೆ ಪ್ರತಿ ಅಧಿಕಾರಿಗೆ ತಲಾ 10ಲಕ್ಷ ರೂಪಾಯಿಗಳು! ಇದು ಸರ್ಕಾರವೇ ನೀಡಿದ್ದ ಮಾಹಿತಿ. 

ಅದರಂತೆ ಒಬ್ಬ ಸೇನಾಧಿಕಾರಿಯನ್ನು ತರಬೇತುಗೊಳಿಸಲು 10ಲಕ್ಷ ಎಂದು ಒಂದು ಅಂದಾಜು ಹೇಳಿದರೆ ಇನ್ನೊಂದು ಅಂದಾಜು 3 ಕೋಟಿ ಎನ್ನುತ್ತದೆ. ಒಬ್ಬ ಪೈಲೆಟ್ ನ ತರಬೇತಿಗೆ 8 ಕೋಟಿ ವ್ಯಯವಾಗುತ್ತದೆ ಎಂದು ಕೆಲ ಲೆಕ್ಕಾಚಾರಗಳು ಹೇಳುತ್ತವೆ. ಇವು ಅಧಿಕೃತವಲ್ಲದ್ದರಿಂದ ಇವುಗಳ ಪರಿಗಣನೆ ಸಿಂಧುವಲ್ಲ. ಆದರೂ ಹಲವಾರು ಲಕ್ಷಗಳಷ್ಟು ಸರ್ಕಾರದ ಹಣ ಅಂದರೆ ಸಾರ್ವಜನಿಕ ಹಣ ವ್ಯಯವಾಗುವುದಂತೂ ನಿಜ. ಇದು ಪೋಲಿಸ್, ಆರೋಗ್ಯ, ಶಿಕ್ಷಣ ಮೊದಲಾದ ಅನೇಕ ಸೇವೆಗಳಿಗೂ ಅನ್ವಯಿಸುತ್ತದೆ. 

ಹೀಗೆ ಸಾರ್ವಜನಿಕ ಹಣದಿಂದ ತರಬೇತುಗೊಂಡು ಸರ್ಕಾರದ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಯೊಬ್ಬ ಎರಡು ಕಾರಣಗಳಿಗೆ ಬಹಳ ಮುಖ್ಯವಾಗುತ್ತಾನೆ. ಒಂದು ಅವನೇ ಸಾರ್ವಜನಿಕ ಆಸ್ತಿಯಾಗುವುದರ ಮೂಲಕ; ಇನ್ನೊಂದು ತನ್ನ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ನಿಸ್ವಾರ್ಥ ಸೇವೆ ಸಲ್ಲಿಸುವುದರ ಮೂಲಕ ಸಾರ್ವಜನಿಕರ ಹಣದ ಸದ್ವಿನಿಯೋಗವಾಗುವಂತೆ ಮಾಡುವ ಕಾರಣಕ್ಕಾಗಿ. ಇವೆರಡೂ ಆದರ್ಶ ಸಂದರ್ಭಗಳು. ಭಾರತದ ಮಟ್ಟಿಗೆ ಹೇಳುವುದಾದರೆ ಆದರ್ಶ ಕಲ್ಪನೆ ಮಾತ್ರವೇ ಸರಿ. ಇದು ರಾಜಕೀಯ ವ್ಯವಸ್ಥೆಗೂ ಹೊಂದುವ ಮಾತು.

90ರ ದಶಕದಿಂದೀಚೆಗೆ ಭಾರತದಲ್ಲಿ ಇಂಥ ಆದರ್ಶ ಸಂದರ್ಭಗಳು ಬಹುತೇಕ ಕಲ್ಪನೆಯಾಗಿವೆ. ಕಪ್ಪುಹಣ, ಭಯೋತ್ಪಾದನೆ, ರಾಜಕೀಯ ಅಸ್ಥಿರತೆ, ಭ್ರಷ್ಟಾಚಾರ ಮೊದಲಾದ ಹತ್ತು ಹಲವು ಜಂಜಡಗಳಲ್ಲಿ ಮುಳುಗಿದ ಈ ದೇಶ ವ್ಯಾಪಾರೀಕರಣ, ಉದಾರೀಕರಣದಿಂದ ಆರ್ಥಿಕವಾಗಿ ಸಾಕಷ್ಟು ತಲೆಎತ್ತಿ ನಿಲ್ಲಬಲ್ಲ ಸಾಮರ್ಥ್ಯವನ್ನು ಬೆಳೆಸಿಕೊಂಡರೂ ಆಡಳಿತಾತ್ಮಕ ಹಿರಿಮೆ ಹಾಗೂ ಸ್ವಚ್ಛತೆಯನ್ನು ಕಾಪಾಡುವಲ್ಲಿ ಬಹಳಷ್ಟು ಹೆಣಗಿದೆ ಎಂದೇ ಹೇಳಬಹುದು.

ಸಾರ್ವಜನಿಕ ಕ್ಷೆತ್ರಗಳಲ್ಲಿ ವ್ಯಾಪಕವಾಗಿ ಇರುವ ಭ್ರಷ್ಟಾಚಾರವನ್ನು ಕೆಲವರು ದಾಳವಾಗಿ ಉಪಯೋಗಿಸಿದರೆ ಕೆಲವರಿಗೆ ಅದು ಉಸಿರುಗಟ್ಟಿಸುವ ವಾತಾವರಣವಾಗಿದೆ. ಸಧ್ಯದ ಕೊರೊನಾ ಸಂದರ್ಭದಲ್ಲಂತೂ ಇದು ಅಕ್ಷರಶಃ ಉಸಿರುಗಟ್ಟಿಸುತ್ತಿದೆ. ಉದ್ಯೋಗಾಕಾಂಕ್ಷಿಗಳ ಜೊತೆ, ವ್ಯಾಪಾರ-ವ್ಯವಹಾರಗಳ ಪೈಪೋಟಿಯಲ್ಲಿ ಜನರ ಭವಿಷ್ಯದ ಜೊತೆ ಚಲ್ಲಾಟವಾಡುತ್ತಿದ್ದ ಆಡಳಿತ ವ್ಯವಸ್ಥೆ ಅಥವಾ ಅಧಿಕಾರಶಾಹಿ ಈ ಸಂದರ್ಭದಲ್ಲಿ ಜೀವಗಳ ಜೊತೆಯೇ ಚೆಲ್ಲಾಟವಾಡುತ್ತಿದೆ.

ಸಾಮಾನ್ಯರ ಸಾವು-ನೋವಿಗೆ ಮೀರಿದ ಸ್ವಾರ್ಥಕ್ಕೆ ಈ ಕಾಲ ಸಾಕ್ಷಿಯಾಗಿ ನಿಂತಿದೆ. ಇದರ ವಿರುದ್ಧ ಸೊಲ್ಲೆತ್ತುವ ಮಾತಿರಲಿ ವ್ಯವಸ್ಥೆಯೇ ಅದನ್ನು ಪುಷ್ಟೀಕರಿಸುತ್ತ ತಾನೂ ಪಾಲುದಾರನಾಗಿದೆಯೇನೋ ಎಂಬ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ. ಸಾವಿನ ಗುತ್ತಿಗೆದಾರ ಎಂದು ಹಿಟ್ಲರ್ ನನ್ನು ಖಂಡಿಸಿದ ಮಾಧ್ಯಮಗಳೇ ಇಂದು ಸಾವನ್ನು ವೈಭವೀಕರಿಸಿ ಅದರ ಮೂಲಕ ತಮ್ಮ ಒಲೆ ಹೊತ್ತಿಸಿಕೊಳ್ಳುತ್ತಿವೆ. ಇಂಥ ಸಾಮಾಜಿಕ ಅಧೋಗತಿಗೆ ಜನ ದಂಗಾಗಿ ಗರಬಡಿದಂತೆ ಆಗಿದ್ದಾರೆ.

1993ರ ಮುಂಬೈ ಬಾಂಬ್ ದಾಳಿಯ ನಂತರ ನಡೆದ ಎಲ್ಲಾ ರಾಜಕೀಯ ಹಾಗೂ ಆಡಳಿತಾತ್ಮಕ ಬೆಳವಣಿಗೆಗಳ ಪ್ರತಿಫಲವನ್ನು ಈ ಕಾಲಘಟ್ಟದಲ್ಲಿ ದೇಶ ಉಣ್ಣಬೇಕಾಗಿ ಬಂದಿದೆ. ಅಂದು ಬೆರಳೆಣಿಕೆಯಷ್ಟು ಉನ್ನತ ಅಧಿಕಾರಿಗಳು ವ್ಯವಸ್ಥೆಯ ವಿರುದ್ಧ ಸಿಡಿದು ಅಧಿಕಾರದಿಂದ ಹೊರನಡೆಯುತ್ತಿದ್ದರು ಅಥವಾ ಅಂಥವರನ್ನು ಸಕಾರಣವಾಗಿ ಅಧಿಕಾರದಿಂದ ಕೆಳಗೆ ಇಳಿಸಲಾಗುತ್ತಿತ್ತು. ನಂತರದಲ್ಲಿ ವ್ಯವಸ್ಥೆಯ ವಿರುದ್ಧ ಸಿಡಿದ ಕೆಲ ಅಧಿಕಾರಿಗಳು ಹತಾಶರಾಗಿ ಸಾವಿಗೆ ಶರಣಾದರು. ಇವರಲ್ಲಿ ಯೋಧರಿಂದ ಹಿಡಿದು ಉನ್ನತ ಅಧಿಕಾರಿಗಳು ಇದ್ದುದು ಕಳವಳಕಾರಿಯಾಗಿತ್ತು.

ಈ ಕೊರೋನಾ ಸಂದರ್ಭದಲ್ಲಿ ಕ್ರಿಮಿ-ಕೀಟಗಳಂತೆ ಜೀವ ಬಿಡುತ್ತಿರುವ ಜನರ ಸಾವಿನಿಂದ ಈ ದೇಶದ ಮಾನವ ಸಂಪನ್ಮೂಲಕ್ಕೆ ತುಂಬಲಾರದ ನಷ್ಟವಾಗುತ್ತಿದೆ ಎಂಬುದನ್ನು ಸಾರ್ವಜನಿಕರಾದಿಯಾಗಿ ಸರ್ಕಾರಗಳೂ ಮನಗಂಡಂತಿಲ್ಲ. ಇಲ್ಲವಾದಲ್ಲಿ ಈ ಪರಿಯಲ್ಲಿ ಸಂಭವಿಸುತ್ತಿರುವ ಸಾವು-ನೋವು ರೋಚಕ ಸುದ್ದಿಗಳಿಗಾಗಿ, ಸರ್ಕಾರಗಳು ಪರ-ವಿರೋಧ ಚರ್ಚೆಗಳಾಗಿ ಮಾತ್ರ ಉಳಿಯುತ್ತಿರಲಿಲ್ಲ. 

ಅತ್ಯಂತ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ಭಾರತ ಮುಂದಿನ ಎರಡು ದಶಕಗಳಲ್ಲಿ ಜಾಗತಿಕವಾಗಿ ಮಾನವ ಸಂಪನ್ಮೂಲ ಒದಗಿಸಬಲ್ಲ ಸಾಮರ್ಥ್ಯ ಹೊಂದಿರುವ ಏಕೈಕ ರಾಷ್ಟ್ರ ಎಂಬ ಹೆಗ್ಗಳಿಕೆಯಿಂದ ಗುರುತಿಸಲ್ಪಟ್ಟಿದೆ. ಈಗಾಗಲೇ ಭಾರತೀಯರು ವಿಶ್ವದಾದ್ಯಂತ ಪ್ರಮುಖ ಹುದ್ದೆಗಳನ್ನು ಹೊಂದಿದ್ದಾರೆ. ಅಮೇರಿಕಾದಂತಹ ಮುಂದುವರೆದ ರಾಷ್ಟ್ರದ ಆರ್ಥಿಕ ಸಬಲತೆಗೆ ಭಾರತೀಯರ ಕೊಡುಗೆ ಅಪಾರ ಎಂದು ಸ್ವತಃ ಅಲ್ಲಿನ ಅಧ್ಯಕ್ಷರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಹೀಗೆ ದೇಶದ ಹೊರಗೆ ಔನ್ನತ್ಯ ಸಾಧಿಸಿರುವ ಭಾರತೀಯರು ದೇಶದ ಒಳಗೆ, ಅದೂ ಇಂದಿನ ಕೊರೋನಾ ಸಂದರ್ಭದಲ್ಲಿ ತಮ್ಮ ರಾಜ್ಯಗಳಲ್ಲೇ ಕ್ಷಮತೆಯನ್ನು ಸಾಧಿಸಲಾಗಿದೆ ದಿಕ್ಕೆಟ್ಟು ಜನರನ್ನು ಕಂಗೆಡಿಸಿ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿರುವುದು ವ್ಯವಸ್ಥೆಯ ದಿವಾಳಿತನವನ್ನು ಸಂಕೇತಿಸುತ್ತಿದೆಯೇ? ಸಾವಿರಾರು ವರ್ಷಗಳ ಭವ್ಯ ಇತಿಹಾಸ, ಪರಂಪರೆ ಹೊಂದಿದೆ ಎಂದು ಬೀಗುವ  ಸಾಮಾಜಿಕ, ಆಡಳಿತಾತ್ಮಕ  ವ್ಯವಸ್ಥೆಯೊಂದು ಹೀಗೆ ಬೆನ್ನೆಲುಬು ಮುರಿದುುಕೊಂಡು ಕೂರುವುದು ಸಾಧುವೆ?  

ವೋಟು ಹಾಕಿದ ಜನರನ್ನು ಕೊರೊನಾ ಬೆದರಿಸಿ, ಅಸಹಾಯಕರನ್ನಾಗಿಸಿ ನಡುಮನೆ ಸೇರಿಸಿಬಿಟ್ಟಿದೆ. ಇದೀಗ ವೋಟು ಪಡೆದುಕೊಂಡರೆಲ್ಲ ಅವರ ನೆರವಿಗೆ ಬರಬೇಕಾಗಿದೆ. ಐದು ವರ್ಷ ಹಿಂದಿರುಗಿ ನೋಡದಿದ್ದರೂ ಏನೂ ಕೇಳದ ಅಮಾಯಕ ಜನ ಈಗಲೂ ಏನೂ ಕೇಳುತ್ತಿಲ್ಲ. ಸಾಧ್ಯವಾದಷ್ಟು ಮಟ್ಟಿಗೆ ಉಸಿರು ಹಿಡಿಯುತ್ತಾರೆ. ಇನ್ನು ಸಾಧ್ಯವಿಲ್ಲ ಎನ್ನಿಸಿದಾಗ ನಿಲ್ಲಿಸುತ್ತಿದ್ದಾರೆ. ಜೀವದ ಬೆಲೆ ಒಂದು ವೋಟಿಗೆ ನೀಡುವ ಬೆಲೆಗಿಂತ ಕಡಿಮೆಯಾಗಿದೆ! ಇದು ಅಮಾನವೀಯ ಅಷ್ಟೇ ಅಲ್ಲ; ಪ್ರಜಾಪ್ರಭುತ್ವಕ್ಕೇ ಆದ ಅವಮಾನ.

‍ಲೇಖಕರು Avadhi

May 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: