ಕನಕರಾಜ್ ಆರನಕಟ್ಟೆ ಕಂಡಂತೆ ಜೀವನದಿ ಯೋಗಪ್ಪನವರ್…

ಕನಕರಾಜ್ ಆರನಕಟ್ಟೆ

ಜೀವನದಿ ಎಸ್‌ ಎಫ್ ಯೋಗಪ್ಪನವರ್ ರವರ ಸಾವಿನ ಸುದ್ದಿಯನ್ನು ನುಂಗಿಕೊಳ್ಳಲು ವರುಷಗಳೇ ಬೇಕಾಗಬಹುದು.. ಈ. ಚಂದ್ರ ತಾಳೀಕಟ್ಟೆಯವರ ಜೊತೆ ಅವರನ್ನು ನೋಡಲು ವಿಧಾನಸೌಧದ ಅವರ ಕಛೇರಿಗೆ ಹೋದಾಗೆಲ್ಲ ಸದಾ ಓದುತ್ತಲೇ ಕೂತಿರುತ್ತಿದ್ದ ಅವರನ್ನು ನೋಡುವುದೇ ಸ್ವರ್ಗ…

ಪಿ.ಲಂಕೇಶರನ್ನು ನೇರವಾಗಿ ಕಂಡಿರದ ನನ್ನಂತಹವರಿಗೆ ಎಸ್ ಎಫ್ ವೈ, ದ್ವಾರಕನಾಥ್, ಅಗ್ರಹಾರ ಕೃಷ್ಣಮೂರ್ತಿ, ಶೂದ್ರ ಶ್ರೀನಿವಾಸ್ ಮತ್ತು ಸತೀಶ್, ಈ ಚಂದ್ರ ರಂತಹವರು ಉತ್ಸಾಹದ ಚಿಲುಮೆಗಳು. ಇವರುಗಳನ್ನು ಮಾತನಾಡಿಸುವಾಗ ಎದೆಯೂ ವೈಚಾರಿಕಗೊಳ್ಳುವುದ ಅನುಭವಿಸಿದ್ದೇನೆ. ಇವರೊಂದಿಗಿನ ಮಾತುಗಳು ಬತ್ತದ ಸದಾ ಉಕ್ಕುವ ನದಿಯ ಉಗಮ.

ನನ್ನ ಬರಹಗಳನ್ನು ಪತ್ರಿಕೆಗಳಲ್ಲಿ ಓದಿದ್ದೇ ಅಂತರಾಷ್ಟ್ರೀಯ ಕರೆ ಎಂದೂ ಲೆಕ್ಕಿಸದೇ ತಕ್ಷಣ ಫೋನ್ ಮಾಡಿ ತುಂಬಾ ಚೆಂದ ಬರೆದಿದ್ದೀರಿ ಎಂದು ಲೇಖನಗಳ ಬಗ್ಗೆ ಸುಮಾರು ಹೊತ್ತು ಮಾತನಾಡುತ್ತಿದ್ದ ಅವರ ಧ್ವನಿ ನನ್ನೆದೆಯೊಳಗೆ ಬೇರಾಗಿವೆ. ನಾನೇ ಕರೆ ಮಾಡ್ತೀನಿ ಸರ್, ಎಂದರೂ ಕಿವಿಗೆ ಹಾಕಿಕೊಳ್ಳದೆ ಮಾತನಾಡುತ್ತಿದ್ದ ಅವರ ಓಘವನ್ನು ಬಣ್ಣಿಸುವುದು ಸಾಧ್ಯವಿಲ್ಲ.

ಎಂ ಜಿ ರಸ್ತೆಯ ಕೋಶಿಸ್ ನೆನೆಸಿಕೊಂಡರೆ ಹೊಟ್ಟೆ ತೊಳೆಸುತ್ತದೆ. ಎಸ್ ಎಫ್ ವೈ ಅವರ ಜೊತೆ ಅಲ್ಲಿ ಬೀರ್ ಸೇವಿಸುತ್ತಾ ಫ್ರೆಂಚ್ ಬರಹಗಾರರನ್ನು, ಟಾರ್ಕೊವಸ್ಕಿ, ಗೊಡಾರ್ಡ್, ಬ್ರೆಸ್ಸಾನ್ ಮುಂತಾದ ಸಿನಿಮಾ ತಿಮಿಂಗಲಗಳನ್ನು ಮೀನಿನ ಜೊತೆ ಸೇವಿಸುತ್ತಿದ್ದ ಗಳಿಗೆಗಳನ್ನು ಮರೆಯಲು ಸಾಧ್ಯವೇ ಇಲ್ಲ.

‘ರಷ್ಯಾಕ್ಕೆ ಒಮ್ಮೆ ಹೋಗೋಣ್ ನಡೀರಿ, ಟಾರ್ಕೊವಸ್ಕಿ ನಡೆದಾಡಿದ ಜಾಗಗಳನ್ನು ನೋಡೋಂವ್’ ಎಂದಿದ್ದು ಮನಸ್ಸಿನ ಕಣ್ಣುಗಳೊಳಗೆ ಜೋಪಾನವಾಗಿವೆ. ೨೦೧೮ರ ರಜೆಯಲ್ಲಿ ಅವರ ಜೊತೆ ಜೋಗವನ್ನು ನೋಡಲು ಈ.ಚಂದ್ರ ನನ್ನನ್ನು ಒತ್ತಾಯಿಸುತ್ತಿದ್ದರು. ಹಾಳಾದ ನನ್ನ ಕಿರು ಸಿನಿಮಾ ಕೆಲಸಗಳಿಂದ ಅದು ಸಾಧ್ಯವೇ ಆಗಲಿಲ್ಲ… ನಾ ಬಿಡುವುದಾಗ ‘ಸಾಹೇಬ್ರು’ ತುಂಬಾ ಬ್ಯುಸಿಯಾದರು…

ಅವರ ನೀಲು ಪುಸ್ತಕದ ಲೇ ಔಟ್ ನಡೆಯುತ್ತಿರುವಾಗ ಮಾತನಾಡಿದ್ದೇ ಕಡೆಯ ಮಾತು… ನೆನೆಸಿಕೊಂಡರೆ ಜೀವ ಪತರುಗುಟ್ಟುತ್ತಿದೆ.
‘ಆ ಕಲೆಗಾರ ಹಾದಿಮನಿ ಸತಾಯಿಸ್ತಾನೆ ಕಣ್ರಿ… ಬೇಗ ಚಿತ್ರಗಳನ್ನು ಕೊಡುತ್ತಿಲ್ಲ..’ ಎಂದು ಸದ್ದಿಲ್ಲದೆ ಫೋನಿನಲ್ಲಿ ನಕ್ಕ ಅವರ ಮುಖ ಆರಂಭವಾಗುತ್ತಿರುವ ಬೇಸಿಗೆಯಲ್ಲಿ ತಣ್ಣಗೆ ದೇಹವನ್ನು ಕೊರೆಯುತ್ತಿದೆ.

ಎಷ್ಟು ಬರೆದರೂ ಮುಗಿಯದ ಅವರ ಒಡನಾಟವನ್ನು ಹೇಳಿಕೊಂಡರೆ ಇಲ್ಲಿ ಅದು ಸ್ವ ಪ್ರದರ್ಶನವಾಗಿಬಿಡುತ್ತದೆ… ಇದನ್ನೂ ಬರೆಯಬಾರದೆಂದೇ ಇದ್ದೆ.. ಆದರೆ ಅಂತಹ ಒಂದು ‘ವಿಶ್ವಕೋಶ’ದ ಬಗ್ಗೆ ಈ ಹೊತ್ತಲ್ಲಿ ನಾ ಎರಡು ಮಾತು ಬರೆಯಲಿಲ್ಲವೆಂದರೆ ಅವರಿಗೆ ಮರ್ಯಾದೆ ಕೊಟ್ಟಂತೆ ಆಗುವುದಿಲ್ಲ ಎಂದೇ ಎದೆ ಬಡಿತವನ್ನು ನಿಮಗೂ ಕೇಳಿಸಿದ್ದೇನೆ.

ಈ. ಚಂದ್ರ ಅವರೊಂದಿಗೆ ಹಲವು ಬಾರಿ ಅವರು ಹೇಳಿದ್ದರಂತೆ : ‘ಈ ಹುಡುಗ ಚೆಂದ ಬರೀತಾನೇ ಕಣ್ರಿ… ಇವನ ಪುಸ್ತಕಕ್ಕೆ ಮುನ್ನುಡಿ ಬರೆಯಲೇ ಬೇಕು,’ ಎಂದು. ಈ. ಚಂದ್ರರವರೂ ಅದನ್ನು ತೀವ್ರ ಬಯಸಿದ್ದರೂ ಕೂಡ, ನನ್ನಂತೆಯೇ!

ಕಳೆದ ವರ್ಷ ನನ್ನ ಕಿರುಕಾದಂಬರಿಯ ಹಸ್ತಪ್ರತಿಯನ್ನು ಅವರಿಗೆ ಕಳುಹಿಸಿದ್ದೆ. ಗೆಳೆಯರೂ ನನ್ನ ಪ್ರತಿ ಕೆಲಸಗಳ ಜೊತೆ ಸದಾ ನಿಲ್ಲುವ ಜಿಪಿಒ ಚಂದ್ರು ಅದನ್ನು ಅವರಿಗೆ ತಲುಪಿಸಿದ್ದರು…

‘ಫೆಬ್ರವರಿ ನಂತರ ಬರೆದು ಕಳುಹಿಸುತ್ತೇನೆ, ಕಣ್ರಿ ಕನಕರಾಜ್…’
ನೋವು ನದಿಯೊಳಗೆ ಕರಗಿ ಹೋಗಲು ಸಾಕಷ್ಟು ದಿನಗಳು ಬೇಕಾಗಬಹುದು.

‍ಲೇಖಕರು Avadhi

May 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: