ಸುಲಿದ ಕಿತ್ತಳೆಯ ಸಿಪ್ಪೆ ಮತ್ತು ಉಪ್ಪುಗಾಳಿ

ರಾಜೇಂದ್ರ ಪ್ರಸಾದ್

**

Salt of this Sea (2008) ತನ್ನ ನಾಡಿಗೆ ವಾಪಸು ಬರುವ ಮತ್ತು ಆ ನಾಡಿನಿಂದ ಬಿಡುಗಡೆ ಪಡೆಯುವ ಎರಡು ಭಿನ್ನ ಮನಸಿನ ಪಾತ್ರಗಳ ಜೀವನ ದೃಶ್ಯಗಳಿಂದ ಸಿನಿಮಾ ಶುರುವಾಗುತ್ತದೆ. ಒಂದು ದೇಶ, ಅಲ್ಲಿನ ಪ್ರಜೆ ಮತ್ತೊಂದು ದೇಶದ ಆಕ್ರಮಣ, ನಿರಂತರ ದೌರ್ಜನ್ಯ, ಮಿಲಿಟರಿ ನಿರ್ಬಂಧಗಳು ಪುಂಖಾನುಪುಂಖವಾಗಿ ಕಾಣಿಸಿಕೊಳ್ಳಲು ಶುರುವಾದಂತೆ ಮಧ್ಯಪ್ರಾಚ್ಯದ ಸಾಮಾಜೋ ರಾಜಕೀಯ ಸ್ಥಿತಿಯೂ ಅನಾವರಣಗೊಳ್ಳುತ್ತದೆ. ಈ ಸ್ಥಿತಿಯು ಪ್ರಜಾಪ್ರಭುತ್ವದ ಸ್ವಾತಂತ್ರ್ಯಸ್ವರ್ಗವನ್ನ ಅನುಭವಿಸುತ್ತಿರುವ ನಮಗೆ ಗಾಬರಿಯನ್ನು ಹುಟ್ಟಿಸದೇ ಇರಲಾರದು. ಆಕ್ರಮಣ, ಹೇರಿಕೆ ಮತ್ತು ದೌರ್ಜನ್ಯಗಳನ್ನು ಅನುಭವಿಸುವ ಹಲವು ಸಣ್ಣ ದೇಶಗಳ ಜನರ ಪ್ರತಿರೋಧ, ಪ್ರತಿಭಟನೆಗಳನ್ನ ಕೇವಲ ಸುದ್ದಿ ಮಾಧ್ಯಮ ಮತ್ತು ಪತ್ರಿಕೆಗಳಲ್ಲಿ ಓದಿಯಷ್ಟೇ ಬಲ್ಲ ನಾವು ಅದನ್ನ ಸಿನಿಮಾದ ಮೂಲಕ ನೋಡುವ ಬಗೆಯು ಅಲ್ಲಿನ ವಾಸ್ತವವನ್ನು ಇಲ್ಲಿ ಕಲ್ಪಿಸಿಕೊಳ್ಳಲು ಸೇತುವಾಗಬಹುದು.

ಒಂದು ದೇಶದ ಪ್ರವೇಶ ಅಥವಾ ನಿರ್ಗಮನ ಇಷ್ಟು ಕಷ್ಟವೇ! ತನ್ನದೇ ನಾಡಿಗೆ ಹೋಗಲು ಅಥವಾ ಅಲ್ಲಿ ಸ್ವತಂತ್ರವಾಗಿ ಓಡಾಡಲು, ಮಾತಾಡಲು ಈ ತರಹದ ನಿರ್ಬಂಧಗಳು ಯಾಕೆ? ಎಂಬುದೆಲ್ಲವನ್ನು ಕಬ್ಬಿಣದ ಸುತ್ತು ಸರಳುಗಳಲ್ಲಿ ಬಿಗಿದು ಒಬ್ಬಿಬ್ಬರಲ್ಲದೇ ಒಂದು ಜನರ ಗುಂಪು ಎಂದಿಗೂ ಮುನ್ನುಗ್ಗಲು ಸಾಧ್ಯವಾಗದ ಅಸಾಧ್ಯ ಪ್ರವೇಶದ್ವಾರಗಳನ್ನು ಸಿದ್ದಪಡಿಸಿಕೊಂಡಿರುವ ಬಗೆಯೇ ಎಲ್ಲವನ್ನು ತೋರಿ ಮಾತಾಡುತ್ತಿದೆ. ಅಲ್ಲಿ ಜನರನ್ನು ಬೆತ್ತಲುಗೊಳಿಸಿ ಅಪಾಯ ಪತ್ತೆ ಹಚ್ಚುವ ಸಾಧನಗಳು, ಪ್ರಶ್ನೆಗಳ ಸುರಿಮಳೆಗೈಯುವ ಭದ್ರತಾ ಪಡೆಯ ಅಧಿಕಾರಿಗಳು, ಬೀದಿ ಬೀದಿಗಳಲ್ಲಿ ಗಸ್ತು ತಿರುಗುತ್ತಿರುವ ಮಿಲಿಟರಿ ಪಡೆಗಳು, ಸದಾ ಕಾಲ ಗುರುತಿನ ಚೀಟಿ ಹಿಡಿದುಕೊಂಡೇ ಓಡಾಡಬೇಕಾದ ಜನರು! ಈ‌ ಎಲ್ಲ ಭಯಗ್ರಸ್ತ ದೃಶ್ಯಗಳೇ ಸಿನಿಮಾದ ನೈಜಪಾತ್ರಗಳಂತೆ ಭಾಸವಾಗುತ್ತವೆ.

ಅನ್ನಾಮೇರಿ ಜಾಸೀರ್

**

ಅಮೆರಿಕೆಯ ಬ್ರೂಕ್ಲಿನ್ ನಲ್ಲಿ ಸ್ವತಂತ್ರವಾಗಿರುವ ಸುರಯಾ ಪ್ಯಾಲೆಸ್ಟೈನ್ ನ ತನ್ನೂರು, ತನ್ನಜ್ಜನ ಮನೆಯ ಹುಡುಕಿಕೊಂಡು ಅಲ್ಲಿ ಸೇರಿ ಬದುಕ ಬೇಕೆಂದು ಹಂಬಲಿಸಿದರೆ, ಪ್ಯಾಲೆಸ್ಟೈನ್ ನ ರಮಲ್ಲಾ ದಲ್ಲಿರುವ ಎಮದ್ ತನ್ನ 17 ವರ್ಷಗಳ ನಗರ ಬಂಧನದಿಂದ ಬಿಡುಗಡೆ ಪಡೆದುಕೊಂಡು ಕೆನಡಾ ದೇಶಕ್ಕೆ ಹೋಗಲು ಬಯಸುತ್ತಾನೆ. ಆಕೆಗೆ ವಾಪಸು ತನ್ನೂರಿನ ಬರುವ ಧಾವಂತವಾದರೆ ಇವನಿಗೆ ತನ್ನೂರನ್ನ ಸುತ್ತುವರೆದಿರುವ ಇಸ್ರೇಲ್ ಮಿಲಟರಿ ಪಡೆಗಳನ್ನ ದಾಟಿ ಮತ್ತೆಲ್ಲಿಗೋ ಹೋಗಿ ನೆಮ್ಮದಿಯಾಗಿ ಬದುಕಬೇಕೆಂಬ ಹಂಬಲ. ಹೀಗಿರುವಾಗ ರಮಲ್ಲಾದಲ್ಲಿ ಇವರಿಬ್ಬರೂ ಭೇಟಿಯಾಗುತ್ತಾರೆ. ಈ ಭೇಟಿ ಪರಸ್ಪರ ಪ್ರೀತಿ ಮತ್ತು ವಿಮೋಚನೆ ಗಳಿಗೆ ಬೇಕಾದ ಬೆಂಬಲ ಎರಡನ್ನೂ ಉಂಟುಮಾಡುತ್ತದೆ. ಸುರಯಾ ತನ್ನೂರು, ತನ್ನ ಮನೆ ಮತ್ತು ತನ್ನ ತಾತನ ಬ್ಯಾಂಕ್ ಖಾತೆಯ ಹಣವನ್ನು, ಬರೋಬ್ಬರಿ ಐದು ದಶಕಗಳ‌ ನಂತರ ‘ಬ್ರಿಟಿಷ್ ಪ್ಯಾಲೇಸ್ಟಿನ್ ಬ್ಯಾಂಕ್’ ನಿಂದ ತೆಗೆಯಲು ನಡೆಸುವ ವಿಫಲ ಯತ್ನವು ಪ್ಯಾಲೆಸ್ಟೈನ್ ನಡೆಸುತ್ತಿರುವ ‘ರಾಜಕೀಯ ಮಾತುಕತೆ’ ಗಳ ರೂಪಕದಂತೆ ಕಾಣುತ್ತದೆ.

ಎಲ್ಲ ದಾಖಲೆಗಳನ್ನು ಇಟ್ಟು ಕೊಂಡು ಎಲ್ಲ ಅಧಿಕಾರಸ್ಥರ ಬಳಿ ವಾದಿಸುವ ಆಕೆಗೆ ‘ಯುದ್ಧ’ ಎಲ್ಲವೂ ಕಳೆದುಹೋಗಿದೆ ಎನ್ನುವ ಮಾತು ಮತ್ತು ಬೇರೆ ದಾರಿಗಾಣದೇ ತನಗೆ ನ್ಯಾಯವಾಗಿ ಸಲ್ಲಬೇಕಿದ್ದ ಹದಿನೈದು ಸಾವಿರದ ಹದಿನಾರು ಸೆಂಟ್, ಡಾಲರ್ ಗಳನಷ್ಟನ್ನು ಅದೇ ಬ್ಯಾಂಕಿನಿಂದ ದರೋಡೆ ಮಾಡುವ ಕ್ರಮವನ್ನು ನಾವು ಪ್ರತಿರೋಧ ಎಂದು ಪರಿಗಣಿಸಬೇಕಲ್ಲವೇ? ಅದನ್ನು ಅಪರಾಧ ಎನ್ನಲಾದೀತೇ? ಇದನ್ನೇ ಪ್ಯಾಲೆಸ್ಟೈನ್ ಹೋರಾಟಕ್ಕೂ ಅನ್ವಯಸಬಹುದೇ? ಎಲ್ಲ ದಾಖಲೆಗಳಲ್ಲಿಯೂ ಅಸ್ತಿತ್ವದಲ್ಲಿದ್ದ, ಇರುವ ‘ಪ್ಯಾಲೆಸ್ಟೈನ್ ದೇಶ’ ಯುದ್ಧದಲ್ಲಿ ಕಳೆದುಹೋದ ಬಗೆಗೆ ಇದು ರೂಪಕವೇ ಸರಿ. ಸಿನಿಮಾದಲ್ಲಿ ಮೂರು ಬಗೆಯ ರಾಷ್ಟ್ರೀಯತೆಗಳಿವೆ : ಒಂದು ಅಮೆರಿಕಾ, ಅದಕ್ಕೆ ಎಲ್ಲ ಸಾಂಸ್ಥಿಕ ಗುರುತುಗಳು, ಬಂಡವಾಳ-ಮಿಲಿಟರಿ ಭದ್ರತೆಗಳಿವೆ. ಮತ್ತು ದ್ವಿಪಕ್ಷೀಯ ಮಾತುಕತೆಗಳ ಕಾನೂನುಗಳಿವೆ. ಹಾಗಾಗಿ ಸುರಯಾಳನ್ನು ಏನೂ ಮಾಡಲಾಗದು. ಗಡಿಪಾರು ಮಾಡುವ ಹೊರತಾಗಿ. ಇದು ಲೋಕದ ‘ಪ್ರಬಲ ರಾಷ್ಟ್ರೀಯತೆ’. ಮತ್ತೊಂದು ಪ್ಯಾಲೆಸ್ಟೈನ್, ಇದನ್ನ ಒಂದು ದೇಶ ಎಂದು ಗುರುತಿಸುವ ಯಾವುದೇ ಸಾಂಸ್ಥಿಕ ಗುರುತುಗಳಿಲ್ಲ, ಬಂಡವಾಳದ ಭದ್ರತೆಗಳಿಲ್ಲ. ಇಸ್ರೇಲ್ ಮಿಲಟರಿ ಪಡೆಗಳು ವಶಕ್ಕೆ ತೆಗೆದುಕೊಂಡ ಎಮದ್ ಕುರಿತು ಒಂದು ಪ್ರಬಲವಾದ ಧನಿ ಎತ್ತಲು ಸಾಧ್ಯವಿಲ್ಲದ ಒಂದು ‘ಅಸಹಾಯಕ ರಾಷ್ಟ್ರೀಯತೆ’ ಪ್ಯಾಲೆಸ್ಟೈನ್ ನದ್ದು.

ಸುಹೈರ್ ಹಮದ್

**

ಎಮದ್ ಏನಾಗಬಹುದು ಎಂದು ನಾವ್ಯಾರೂ ಊಹಿಸಲು ಸಾಧ್ಯವಿಲ್ಲ, ಸಾವಿನ ಹೊರತಾಗಿ. ಇಂತಹ ಸಾವಿರಾರು ಸಾವುಗಳು, ನಾಪತ್ತೆ ಪ್ರಕರಣಗಳು ರಮಲ್ಲಾ, ವೆಸ್ಟ್ ಬ್ಯಾಂಕ್ ಗಡಿಗಳಲ್ಲಿ, ಗಡೀ ಮೀರಿ ಬಂದ ಅಕ್ರಮ ವಲಸಿಗ ಎನ್ನುವ ಹಣೆಪಟ್ಟಿಗಳ ಸಂದರ್ಭಗಳಲ್ಲಿ ನಡೆಯುತ್ತಲೇ ಇವೆ ಇನ್ನೊಂದು ಇಸ್ರೇಲ್. ಇತಿಹಾಸದಲ್ಲಿ ರಾಷ್ಟ ವೆಂಬ ಗುರುತೇ ಇಲ್ಲದ, ನಿರಾಶ್ರಿತರಾಗಿ ಬಂದು ನೆಲೆಗೊಂಡ ದೇಶವನ್ನೇ ಹಂತಹಂತವಾಗಿ ಕಬಳಿಸಿಕೊಳ್ಳುತ್ತಾ, ಸಾಂಸ್ಥಿಕವಾಗಿ ತನ್ನ ಅಸ್ತಿತ್ವವನ್ನು ಎಲ್ಲಡೆಯು ಪ್ರತಿಸ್ಥಾಪನೆ ಮಾಡುತ್ತಾ ಅದರೊಟ್ಟಿಗೆ ಮಿಲಿಟರಿ ಬಲವನ್ನು ಪ್ರಬಲಗೊಳಿಸಿಕೊಳ್ಳುತ್ತಾ ಬಹುಬಗೆಯ ದೌರ್ಜನ್ಯಗಳನ್ನು ಪ್ಯಾಲೆಸ್ಟೈನ್ ನ ಪ್ರಜೆಗಳ ಮೇಲೆ ಮಾಡಿಯೂ ಅದನ್ನ ತನ್ನದೇ ಕಾರಣಗಳನ್ನಿಟ್ಟು ಸಮರ್ಥಿಸಿಕೊಳ್ಳುತ್ತಾ ಮುಂದುವರಿಯುತ್ತಿರುವ ‘ಬಾಹುಳ್ಯದ ರಾಷ್ಟ್ರೀಯತೆ’. ಸುರಯಾ ಪಾತ್ರ ನಿರ್ವಹಿಸಿದ ‘ಸುಹೈರ್ ಹಮದ್ ‘- ಸ್ವತಃ ಪ್ಯಾಲೇಸ್ಟಿನಿಯನ್ ಆಕ್ಟಿವಿಸ್ಟ್ ಮತ್ತು ಕವಿ. ಸುಹೈರ್ ಈ ಸಿನಿಮಾವನ್ನ ನಿರ್ದೇಶಿಸಿದ ಅನ್ನಾಮೇರಿ ಜಾಸೀರ್ ಕೂಡ ಪ್ಯಾಲೇಸ್ಟಿನಿಯನ್ ಹೋರಾಟಗಾರ್ತಿ. ಎಮದ್ ಪಾತ್ರ ನಿರ್ವಹಿಸಿದ ಬಕ್ರಿ ಕೂಡ ಇದೇ ಹಿನ್ನೆಲೆಯವರು. ಇವರೆಲ್ಲರ ವೈಯುಕ್ತಿಕ ಹಿನ್ನೆಲೆ ಮತ್ತು ಭಾವನಾತ್ಮಕ ನೆಲೆಗಳು ಪ್ಯಾಲೆಸ್ಟೈನ್ ನೊಂದಿಗೆ ಬೆಸೆದುಕೊಂಡಿವೆ.

ಸಿನಿಮಾ ಹೆಚ್ಚು ಸೂಕ್ಷ್ಮವಾಗಿ ಅಭಿವ್ಯಕ್ತಿಗೊಳ್ಳಲು ಇದು ಪೂರಕವಾಗಿ ಎಂದು ಭಾವಿಸುತ್ತೇನೆ. ಮನುಷ್ಯನ ಬದುಕನ್ನ ರೂಪಿಸುವಲಲ್ಲಿ ಆತನ ಬಾಲ್ಯ ಅದರ ನೆನೆಪು ಬಹುಮುಖ್ಯ ಪಾತ್ರ ವಹಿಸುತ್ತವೆ ಎಂಬುದು ನನ್ನ ನಂಬುಗೆ ಕೂಡ. ಸಿನಿಮಾದಲ್ಲಿ ಸುರಯಾ ಹುಡುಕುವ ಈಗಾಗಲೇ ಇಸ್ರೇಲ್ ಭಾಗವಾಗಿಬಿಟ್ಟಿರುವ ಯಾಫಾ (Jaffa) ಎಮದ್ ನೆನೆಪಾಗಿರುವ ಅದಾವಯಿಮ (Ad-Dawayima) ನಾವು ಕೂಡ ಹೋಗಲು ಬಯಸುವ, ಇರಲು ಇಷ್ಟಪಡುವ ನಮ್ಮ ಪೂರ್ವಜರ ಊರುಗಳೇ ಆಗಿವೆ. ನಾವು ಯಾರೂ ಅನ್ಯರಿಂದ ಹೊರಹಾಕಲ್ಪಟ್ಟವರಲ್ಲ. ದೌರ್ಜನ್ಯಕ್ಕೆ ಒಳಗಾದವರಲ್ಲ. ಬದಲಿಗೆ ಬದುಕನ್ನ ಅರಿಸಿಕೊಂಡು ಹೊರಟ ವಲಸೆ ನಮ್ಮದಾಗಿದೆ. ವರ್ತಮಾನದ ಲಭ್ಯವಿರುವ ಸ್ವಾತಂತ್ರ್ಯದ ಕಾಲದಲ್ಲೇ ನಾವುಗಳಾರು ನಮ್ಮ ಪೂರ್ಜರ ಊರು-ಮನೆಗಳಿಗೆ ಮರಳಿ ಬದುಕುವುದು ದುಸ್ಸಾಧ್ಯವಾಗಿದೆ. ಅದಕ್ಕಿರುವ ಸಮಾಜೋ-ರಾಜಕೀಯ ಕಾರಣಗಳು ಬೇಕಾದಷ್ಟಿವೆ. ಇಲ್ಲಿ ಯಾಫ ಮತ್ತು ಅದಾವಯಿಮ ಅದರ ಸ್ಪಷ್ಟ ನಿದರ್ಶನಗಳಾಗಿ ಕಾಣುತ್ತವೆ. ರಮಲ್ಲಾದ ಗಡಿಭದ್ರತೆಗಳನ್ನು ದಾಟಿಕೊಂಡು ಜೆರುಸೆಲಂ ತಲುಪುವ ಸುರಯಾ, ಎಮದ್ ಮತ್ತೊಬ್ಬ ಗೆಳೆಯ ಸ್ವಾತಂತ್ರ್ಯವನ್ನು ಅನುಭವಿಸುವ, ಪರಿಭಾವಿಸುವ ರೀತಿಯ ಎರಡು ರಾಷ್ಟ್ರೀಯತೆಗಳ ನಡುವೆ ಸಿಕ್ಕಿಕೊಡಿರುವ ವ್ಯಕ್ತಿತ್ವದ ಬಂಧನದ ವ್ಯಾಪ್ತಿಯನ್ನ ತೋರಿದಂತೆ ಅನಿಸ್ತದೆ.

ಜೆರುಸೇಲಂ ನಲ್ಲಿ ಕಿತ್ತು ಸುಲಿದು ತಿನ್ನುವ ಕಿತ್ತಳೆ (ಅದು ಅಲ್ಲಿ ಪ್ರಸಿದ್ದ, ಅದರಲ್ಲೂ ಸುರಯಾಳ ‘ಯಾಫಾ’ ಪ್ರದೇಶವು ಕಿತ್ತಳೆಗೆ ಪ್ರಸಿದ್ದ.) ಹಾಗೆಯೇ ಎಮದ್ ಬಯಸುವ ಸಮುದ್ರ. ಅಲ್ಲಿ ಬೀಸುವ ಗಾಳಿ ಬೀಸುವ ಗಾಳಿಯ ಸದ್ದನ್ನ ಕೇಳುತ್ತಾ ತನ್ಮಯ ಗೊಳ್ಳುವ ಎಮದ್ ಮತ್ತೆರಡು ನಿಗೂಢ ರೂಪಕಗಳಾಗಿ ಗೋಚರಿಸುತ್ತವೆ. ಸಿನಿಮಾ ನೋಡುತ್ತಿರುವಾಗ ಸುರಯಾ ಒಂದು ಕಡೆಗೆ ಹಾಫಿಯ ಬಗ್ಗೆ ಹೇಳುವುದು ಕೇಳಿಸಿತು, ಅಲ್ಲಿ ಘಸಲ್ ಕನ್ಫನಿಯ Return to Hafia ಕಾದಂಬರಿ ನೆನೆಪಾಯಿತು. ಸಿನಿಮಾ ಕಡೆಯಲ್ಲಿ ಇಬ್ಬರೂ ಪ್ರೇಮಿಗಳು ಚೆಕ್ ಪೋಸ್ಟ್ ನಲ್ಲಿ ಸಿಕ್ಕಿಕೊಳ್ಳುತ್ತಾರೆ. ಸುರಯಾ ಪೋಲಿಸರ ಜೊತೆಯಲ್ಲಿ ಏರ್ಪೋರ್ಟ್ ಗೆ ಮರಳುತ್ತಾಳೆ, ಆಕೆ ಅಮೇರಿಕನ್ ಪ್ರಜೆ. ಅವಳಿಗೆ ಏನಾದರು ಆದರೆ ಅದಕ್ಕೆ ಇಸ್ರೇಲು ಉತ್ತರದಾಯಿ ಆಗುತ್ತದೆ, ಆದ್ರೆ ಎಮದ್?! ಅವನು ಏನಾಗುತ್ತಾನೆ? ಅವನಿಗೇನಾದರೂ ಉತ್ತರದಾಯಿಗಳು ಯಾರು? ಅಥವಾ ಅವನಂತೆ ಕಣ್ಮರೆಯಾದ ಸಾವಿರಾರು ಜನರು ಏನಾದರು? ಪ್ರಶ್ನೆಗಳು ಬೆಳೆಯುತ್ತಲೇ ಹೋಗುತ್ತವೆ. ಯಾವಕ್ಕು ಉತ್ತರವಿಲ್ಲ.

‍ಲೇಖಕರು Admin MM

May 7, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: