ಕಥೆಗಾರ ಎಸ್ ಎಫ್ ಯೋಗಪ್ಪನವರ್ ಇನ್ನಿಲ್ಲ

ತಾಯಿಯಂಥ ಜೀವ ಯೋಗಪ್ಪನವರ್ ಸರ್ ಹೋಗಿ ಬಿಟ್ಟರು..ನಿಮ್ಮಂಥವರು ಮತ್ತೆ ಸಿಗಲಾರರು..

ಪಲ್ಲವ ವೆಂಕಟೇಶ್

ಯೋಗಪ್ಪನವರ್,

ನೀವು ವಯಸ್ಸಿನಲ್ಲಿ ನನಗೆ ಹಿರಿಯರೊ ಕಿರಿಯರೊ ಕಾಣೆ. ನಿಮ್ಮನ್ನು ಕಂಡಂದಿನಿಂದಲೂ ನನ್ನ ಬಗೆಗೆ ಮಮಕಾರ ತೋರಿದಿರಿ. ನಲವತ್ತು ವರ್ಷಗಳಲ್ಲಿ ನಾವು ಭೆಟ್ಟಿಯಾದದ್ದೇ ನಾಲ್ಕೈದು ಬಾರಿ ಅಲ್ಲವಾ ! ನೀವು ದೊಡ್ಡ ಹುದ್ದೆಯಲ್ಲಿದ್ದಾಗ ನನ್ನವರೊಬ್ಬರಿಗೆ ಒಂದು ಸಹಾಯ ಕೇಳಲು ಬಂದಾಗ ನೀವು ಎದ್ದು ನಿಂತು ಎದುರುಗೊಂಡು ಆ ಗಳಿಗೆಯಲ್ಲಿಯೇ ನಮ್ಮ ಕೆಲಸಮಾಡಿ ಬಾಗಿಲವರೆಗೂ ಬಂದು ಬೀಳ್ಕೊಟ್ಟು ಕಳಿಸಿದ್ದನ್ನು ನಾನು ಎಂದಾದರೂ ಮರೆಯಲು ಸಾಧ್ಯವೇ ?

ನೀವು ನಾವೆಲ್ಲ ಲಂಕೇಶರಿಗೆ ಹತ್ತಿರದವರಾಗಿದ್ದೆವು. ಅವರಿಗೆ ತಮ್ಮ ಸುತ್ತಲಿನ ಹುಡುಗ ಹುಡುಗಿಯರು ಬರವಣಿಗೆಯಲ್ಲಿ ತೊಡಗಿಕೊಂಡಿರಬೇಕೆಂಬ ಆಸೆಯಿತ್ತು. ನೀವು ಅದನ್ನು ಸಮರ್ಥವಾಗಿ ಮಾಡಿದಿರಿ. ಏಕಾಗ್ರತೆಯಿಂದ ಮಾಡಿದಿರಿ. ಕನ್ನಡಕ್ಕೆ ಮೊಟ್ಟ ಮೊದಲು ಬೋದಿಲೇರನನ್ನು ಕೊಟ್ಟ ಅವರ ಅಪ್ರತಿಮ ಅನುವಾದಲ್ಲೇ ಮುಳುಗಿಹೋದ ನನ್ನಂಥ ಸಾವಿರಾರು ಜನರಂಥಲ್ಲದೆ, ಅವರಿಗೆ ಪ್ರಿಯನಾಗಿದ್ದ ಬೋದಿಲೇರ್ ಬಗ್ಗೆ ನೀವು ಇನ್ನಷ್ಟು ತೀವ್ರವಾಗಿ ಒಳಗೊಂಡು ಬರೆದಿರಿ.

ಅವರು ನನ್ನಂಥ ಅನೇಕರಿಗೆ ಪುಸ್ತಕ ಕೊಟ್ಟು ಓದಿಸಿದ್ದ Catcher in the Rye ಕಾದಂಬರಿಯನ್ನ ನೀವು ಸದ್ದಿಲ್ಲದೆ ಕನ್ನಡಕ್ಕೆ ಅನುವಾದಿಸಿ ಕೊಟ್ಟಿರಿ. ನಾನು ಅದನ್ನು ಕಳಿಸಲು ಕೇಳಿದ ಕೂಡಲೇ ಗೆಳೆಯ ಪಲ್ಲವ ವೆಂಕಟೇಶ್ ಹಣ ಪಡೆಯದೇ ಕಳಿಸಿಕೊಟ್ಟರು. ಅದೊಂದು ವಿಶಿಷ್ಟವಾದ ಮತ್ತು ವಿಶಿಷ್ಟ ಭಾಷಿಕ ಶೈಲಿಯುಳ್ಳು ಕೃತಿ. ಅದನ್ನು ನೀವು ನಿಮ್ಮ ಪ್ರಾದೇಶಿಕ ಜವಾರಿಯನ್ನೊಳಗೊಂಡ ಭಾಷೆಯಲ್ಲಿ ಅತ್ಯುತ್ತಮ ರೀತಿಯಲ್ಲಿ ಅನುವಾದಿಸಿಬಿಟ್ಟಿರಿ.

ಲಂಕೇಶ್ ಕನ್ನಡಕ್ಕೆ ಪರಿಚಯಿಸಿದ ‘ನೀಲು’ ಈಗ ಒಂದು ಪಾತ್ರ ಅನಿಸಿಕೊಳ್ಳುವುದಿಲ್ಲ. ಅದೊಂದು ಪ್ರಕಾರವೇ ಆಗಿದೆ. ಆ ಪ್ರಕಾರವನ್ನು ನೀವು ಹಲವು ಆಯಾಮಗಳಲ್ಲಿ ಮಥಿಸಿ ಒಂದು ಪುಸ್ತಕವನ್ನೇ ಬರೆದುಬಿಟ್ಟಿರಿ. ಅದನ್ನು ಎರಡು ವಾರಗಳ ಹಿಂದೆ ನನ್ನ ಮನೆ ವಿಳಾಸ ಕೇಳಿ ಪಡೆದು ಕಳಿಸಿಕೊಟ್ಟಿರಿ.

ನಾವೆಲ್ಲ ಲಂಕೇಶ್ ಬಗ್ಗೆ ಮಾತಾಡುತ್ತಲೇ ಕಾಲ ಕಳೆದೆವು. ಬರೆದರೂ ನಮ್ಮ ತುತ್ತೂರಿಗಳನ್ನೇ ಊದಿದೆವು. ಹಾಗೆ ನೋಡಿದರೆ ಮೇಲೆ ನಾನು ಹೇಳಿದ ಎಲ್ಲ ಅಂಶಗಳ ದೃಷ್ಟಿಯಿಂದ ನೀವು ಲಂಕೇಶರ ನಿಜವಾದ ಶಿಷ್ಯ. ಅವರ ಹಾಗೆಯೇ ಬರವಣಿಗೆಯ ನಡುವೆಯೇ ಅಗಲಿ ಹೋಗಿದ್ದೀರಿ. ಭೇಟಿಯಾದ ನಾಲ್ಕೈದು ಬಾರಿಯೂ ಬಿಡುವಾಗಿ ಕುಳಿತು ಮಾತಾಡೋಣ ಅಂದುಕೊಂಡಿದ್ದೆವು. ಒಮ್ಮೆ ಮಾತ್ರ ಕ್ರಿಕೆಟ್ ಕ್ಲಬ್ಬಿನಲ್ಲಿ ಕುಳಿತು ‘ಬೋದಿಲೇರ’ರಾಗಿದ್ದು ಬಿಟ್ಟರೆ ಮತ್ತೆಂದೂ ನಾವು ಕೂಡಲೇಯಿಲ್ಲ.

ಈಗ ನಿಮ್ಮನ್ನು ಕಳೆದುಕೊಂಡಿದ್ದೇವೆ. ನೀವು ನಕ್ಕು ತೋರುತ್ತಿದ್ದ ನಿಸ್ಪೃಹತೆ, ಅಕ್ಕರೆ, ಮಮಕಾರ ನನ್ನ ನೆನಪಿನಲ್ಲಿ ಶ್ರೀಮಂತವಾಗಿರುತ್ತದೆ. ನಮಸ್ಕಾರ ಗೆಳೆಯ ಯೋಗಪ್ಪನವರ್ ಅವರೆ.

ಅಗ್ರಹಾರ ಕೃಷ್ಣಮೂರ್ತಿ

ಕನ್ನಡದ ಸೂಕ್ಷ್ಮ ಮನಸ್ಸಿನ ವಿಮರ್ಶಕ, ಬರಹಗಾರ, ಲಂಕೇಶರ ಅತ್ಯಂತ ಪ್ರೀತಿ ಪಾತ್ರರಾದ ಯೋಗಪ್ಪನವರ್ ನಿಧನರಾದ ಸುದ್ದಿ ಕೇಳಿ ದಂಗುಬಡಿದುಹೋದೆ..!!

ಸಿ ಎಸ್ ದ್ವಾರಕಾನಾಥ್

ತಾಯ್ತನದ ಜೀವ, ರೂಪಕಗಳ ಮೈವೆತ್ತಂತೆ ಕತೆ, ಕಾದಂಬರಿಗಳನ್ನು ಬರೆಯುತ್ತಿದ್ದ ಯೋಗಪ್ಪನವರ್ ಸರ್ ಇನ್ನಿಲ್ಲ ಅನ್ನೋದನ್ನ ನಂಬಲಿಕ್ಕಾಗ್ತಿಲ್ಲ. ಕೊರೊನಾದಿಂದಾಗಿ ಇನ್ನು ಏನೇನೋ ಕಾದಿದೆಯೋ.

ಹನಮಂತ ಹಾಲಗೇರಿ

‍ಲೇಖಕರು Avadhi

May 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: