-ಕವಿತಾ ವಿರುಪಾಕ್ಷ
ನಾ ನಿನ್ನಪರ ವಕಾಲತ್ತು ವಹಿಸುತ್ತೇನೆ ಗೆಳತಿ…!
ನಾ ನಿನ್ನಪರ
ವಕಾಲತ್ತು ವಹಿಸುತ್ತೇನೆ ಗೆಳತಿ,
ಕಾಲಗತಿಸಿದರೇನು..?
ಬುದ್ಧನಂತವರು ಇಂದಿಗೂ ಇದ್ದಾರೆ
ಅಲ್ಲೀ.. ಇಲ್ಲೀ…!!
ಜಗತಿದ್ದಿದ ತಥಾಗತನ
ಸಂಭ್ರಮದಲ್ಲಿ
ನಾ ನಿನ್ನ ಸಂತಾಪವ
ಸಾಯಲು ಬಿಡಲೊಲ್ಲೆ…!
ಬದ್ಧತೆ ಇರದೆ
ನಡುರಾತ್ರಿ ಎದ್ದುಹೋಗಿ
ಬುದ್ಧನಾಗುವಷ್ಟು ಸುಲಭವೇ
ಹೆಣ್ಣಾಗಿ ಬದುಕುವುದು…??
ಅದೂ
ಪರೀತ್ಯಕ್ತೆಯೆಂಬ ಬಿರುದಹೊತ್ತು..!!
ಜಗ ತಿದ್ದುವ ಭರದಲಿ
ನಿನ್ನ ಬಗ್ಗೆ ಅಜೀಬಾತ್ ಯೋಚಿಸದವ ಬುದ್ಧನಾಗುವುದಾದರೆ…,
ಅವನಿಗಾಗಿಯೇ
ಹಗಲಿರುಳು ಕಾದು
ಅವನೆಲ್ಲಾ ಹೆಗಲೆಣೆಯ ಭಾರವ ಹೊತ್ತು;ಅವನನ್ನೇ ಜಗಕೆ
ಬಿಟ್ಟುಕೊಟ್ಟ
ಇನ್ನು ನೀನೇನಾಗಬೇಡ…!!!?
ದೊಡ್ಡವನಾಗುವ ಭರದಲ್ಲಿ
ದಡ್ಡನಾಗಿಬಿಟ್ಟನೇನೋ
ಎಲ್ಲವ ತಿಳಿದ ಬುದ್ಧ…!
ಕಣ್ಮುಚ್ಚಿ ಕುಳಿತ ಅವನ
ಅಂತಃಚಕ್ಷುಗಳಿಗೆ ,
ಚೂರಾದರೂ
ಗೋಚರಿಸಬೇಕಿತ್ತು
ನಿನ್ನ ಪರಿತ್ಯಕ್ತ ಬದುಕಿನ
ಈ ಪರಿಯ ತ್ಯಾಗ..!!
ಕಿತ್ತೆಸೆ ಮೊದಲು
ಆ ಹಣೆಪಟ್ಟಿಯ..
ಬದ್ಧತೆಯಿರದವನ ಮಹಾಪರಿತ್ಯಾಗಕ್ಕಿಂತ
ಬಿಟ್ಟುಕೊಟ್ಟ ನಿನ್ನ ಪರಿತ್ಯಾಗ ದೊಡ್ಡದು…!!
ನನಗೂ
ಗೊತ್ತು ಗೆಳತಿ…,
ಕಟಕಟೆಯಲ್ಲಿ ನಿಂತ
ಬುದ್ಧನಾ ಹಿಂದೆ;ಅವ ಗೆದ್ದ
ಇಡೀ ಜಗವೇ ನಿಂತಿರುತ್ತದೆ ಎಂದು….!
ಆದರೂ….,
ನಾ ನಿನ್ನಪರ ವಕಾಲತ್ತು
ವಹಿಸುತ್ತೇನೆ ಗೆಳತಿ,
ಗೆಲ್ಲುತ್ತೇನೆoದಲ್ಲಾ;ನಾನೂ
ಹೆಣ್ಣೆಂಬ ಮಾತ್ರಕ್ಕೆ….!!!






0 Comments