ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ.ವಿ.ಕಾರಂತ ಮತ್ತು ಗಂಗಾಧರ ಸ್ವಾಮಿ ನೆನಪು..

ಇಂದು ಸೆಪ್ಟೆಂಬರ್ 1 ಬಿ ವಿ ಕಾರಂತರು ನಮ್ಮನ್ನಗಲಿದ ದಿನ. (2002 ಸಪ್ಟಂಬರ್ 1)

ಬಿ ವಿ ಕಾರಂತರು ಮತ್ತು ಗಂಗಾಧರ ಸ್ವಾಮಿಯವರ ನೆನಪಿನಲ್ಲಿ

ಬಿವಿ ಕಾರಂತರ ಜೊತೆಗಿನ ತಮ್ಮ ದೀರ್ಘಕಾಲದ ಒಡನಾಟಗಳನ್ನು ನೆನಪಿಸಿಕೊಂಡು ಗಂಗಾಧರಸ್ವಾಮಿ ಅವರು ಹೇಳಿದ ಮಾತುಗಳ ಸಾಲುಗಳನ್ನು ಐ ಕೆ ಬೊಳುವಾರು ಅವರು ಇಲ್ಲಿ ಹಂಚಿಕೊಂಡಿದ್ದಾರೆ.

ಐ ಕೆ ಬೊಳುವಾರು

ರಂಗಭೂಮಿಯಲ್ಲಿ ತೊಡಗಿಸಿಕೊಂಡವರೆಲ್ಲರೂ ಬಿ.ವಿ. ಕಾರಂತರನ್ನು ನೆನಪಿಸಿಕೊಳ್ಳಬೇಕಾದ ದಿನ. ಮೊನ್ನೆ ಮೊನ್ನೆ (29-08-2026) ನಮ್ಮನ್ನಗಲಿದ ಹಿರಿಯ ರಂಗ ನಿರ್ದೇಶಕ ಗಂಗಾಧರ ಸ್ವಾಮಿಯವರು ಬಿ.ವಿ. ಕಾರಂತರ ಜೊತೆ ದೀರ್ಘಕಾಲದ ಒಡನಾಟ ಇರಿಸಿ ಕೊಂಡವರು.

ಸಿನೆಮಾ ನಿರ್ದೇಶಕ ಪಿ .ಎನ್. ರಾಮಚಂದ್ರ, ಫಿಲಂ ಡಿವಿಜನ್ ನವರಿಗಾಗಿ BV KARANTH BABA ಎನ್ನುವ ಸಾಕ್ಷ್ಯ ಚಿತ್ರ ನಿರ್ಮಾಣದ ಸಂದರ್ಭದಲ್ಲಿ… ಬಿವಿ ಕಾರಂತರ ಕುರಿತು 69 ರಂಗ ಕಲಾವಿದರನ್ನು ಸಂದರ್ಶಿಸಿ ಚಿತ್ರ ನಿರ್ಮಿಸುತ್ತಾರೆ. ಮತ್ತು ಅವರೆಲ್ಲರ ಮಾತುಗಳ ಆಡಿಯೋ ಲಿಂಕನ್ನು ಎಲ್ಲರಿಗೂ ಉಚಿತವಾಗಿ ಸಿಗುವ ಹಾಗೆ ಹಂಚಿಕೊಂಡಿದ್ದಾರೆ.

ಅದರಲ್ಲಿ ಮೊನ್ನೆ ಮೊನ್ನೆ ನಮ್ಮನ್ನಗಲಿದ ರಂಗ ನಿರ್ದೇಶಕ ಗಂಗಾಧರ ಸ್ವಾಮಿಯವರೂ ಒಬ್ಬರು. ಅವರು ಬಿವಿ ಕಾರಂತರ ಜೊತೆಗಿನ ತಮ್ಮ ದೀರ್ಘಕಾಲದ ಒಡನಾಟಗಳನ್ನು ನೆನಪಿಸಿಕೊಂಡು ಮಾತುಗಳ ಮೂಲಕ ಹಂಚಿಕೊಂಡಿದ್ದಾರೆ.

ಗಂಗಾಧರ ಸ್ವಾಮಿಯವರ ಮಾತುಗಳು…

ಬಿವಿ ಕಾರಂತರು ನನಗೆ ಪರಿಚಯವಾದದ್ದು ಬೆಂಗಳೂರಿನಲ್ಲಿ. ಆಗ ಅವರು ಸತ್ತವರ ನೆರಳು ನಾಟಕ ನಿರ್ದೇಶನ ಮಾಡ್ತಾ ಇದ್ರು. ಅದೇ ಸಂದರ್ಭದಲ್ಲಿ ಆ ನಾಟಕದಲ್ಲಿ ನಟಿಸುವುದಕ್ಕಾಗಿ ಉತ್ತರ ಕರ್ನಾಟಕದ ಭಾಷೆ ಬರುವವರನ್ನು ಹುಡುಕುತ್ತಿದ್ದರು.

ನನಗೂ ಕಾರಂತರ ಜೊತೆ ಕೆಲಸ ಮಾಡುವ ಆಸೆ ಇತ್ತು. ಹಾಗಾಗಿ ಆ ತಂಡದ ಜೊತೆ ಸೇರಿಕೊಂಡೆ. ಸತ್ತವರ ನೆರಳು ನಾಟಕದ 35 ಪ್ರದರ್ಶನಗಳಲ್ಲಿ ನಾನು ಭಾಗಿಯಾಗಿದ್ದೆ ಕೂಡ….
ಇದೇ ಸಮಯದಲ್ಲಿ ಕಾರಂತರ ಹತ್ತಿರ ಚರ್ಚೆ ಮಾಡುತ್ತಾ ನಮಗೆ ಬದುಕಲು ದುಡ್ಡು ಬೇಕಲ್ಲ ಎಂದಿದ್ದೆ. ಆಗ ಅವರು ರಂಗಭೂಮಿಯವರು ದುಡ್ಡು ಕೇಳಬಾರದು. ಹೀಗೇ ಬದುಕಬೇಕು. ಎಂದಿದ್ದರು.

ನಟನೆ ಮಾಡುವುದನ್ನೇ ಬಿಟ್ಟರೆ ಹೇಗೆ ? ಎಂದು ಕೇಳಿದ್ದೆ . ಆಗ ಅವರು ನೀನು ಹಾಗೆ ಮಾಡಬಹುದು . ನಟನೆಯೇ ಆಗಬೇಕಾಗಿಲ್ಲ. ಬ್ಯಾಕ್ ಸ್ಟೇಜ್ ನಂತಹ ಇತರೇ ಕೆಲಸಗಳು ಇದೆಯಲ್ಲ… ಅಂದಿದ್ದರು. ಆಮೇಲೆ ಪರಿಕರ, ಸೆಟ್ಟು, ಲೈಟು, ಇತ್ಯಾದಿ ಕೆಲಸಗಳನ್ನು ಮಾಡಲು ಶುರು ಮಾಡಿದೆ. ಮುಖ್ಯವಾಗಿ ಲೈಟಿಂಗ್ ನಲ್ಲಿ ಹೆಚ್ಚು ತೊಡಗಿಸಿಕೊಂಡೆ. ಮತ್ತೆ ಕಾರಂತರೊಂದಿಗೆ ಕೆಲವು ಸಮಯ ಸಂಬಂಧ ಇಟ್ಟುಕೊಂಡಿರಲಿಲ್ಲ.

ಆ ಬಳಿಕ ಸಮುದಾಯ ಮತ್ತು ಪ್ರಸನ್ನರ ಜೊತೆ ಒಡನಾಟ ಆರಂಭವಾಯಿತು. ನಾನು ಪೂರ್ಣಪ್ರಮಾಣದಲ್ಲಿ ರಂಗಭೂಮಿಯಲ್ಲಿ ತೊಡಗಿಸಿಕೊಂಡೆ.
ಕೆಲವು ಸಮಯದ ಬಳಿಕ ಕಾರಂತರು ಬರಹೇಳಿದರು ಅಂತ ಮಕ್ಕಳ ನಾಟಕ ಇಸ್ಪೀಟ್ ರಾಜ್ಯಕ್ಕೆ ಸೆಟ್ ಕೆಲಸ ಮಾಡಿದೆ.

ನಂತರ ರಂಗಾಯಣ ಪ್ರಾರಂಭವಾಯಿತು. ಆಮೇಲೆ ಪುನಃ ಕಾರಂತರ ಭೇಟಿಯಾಯಿತು. ಅವರ ಜೊತೆ ನಿರಂತರ ಕೆಲಸ ಮಾಡಬಹುದಲ್ಲ… ಅಂತ ರಂಗಾಯಣಕ್ಕೆ ಸೇರಿದೆ . ರೆಪರ್ಟರಿ ಮುಖ್ಯಸ್ಥರಾಗಿ ಬಸವಲಿಂಗಯ್ಯ, ನಟನಾ ಶಿಕ್ಷಕರಾಗಿ ರಘುನಂದನ, ಹಾಗೂ ಬ್ಯಾಕ್ ಸ್ಟೇಜ್ ಗಾಗಿ ನಾನು ಕಾರಂತರ ಜೊತೆ ಖುಷಿಯಲ್ಲಿ ಸೇರಿದೆ.

ಅಲ್ಲಿಯೂ ಕಾರಂತರು ಹೇಳುತ್ತಿದ್ದುದು ಇಷ್ಟೇ … ಯಾರೂ ರಂಗಭೂಮಿಯನ್ನು ಕಟ್ಟಿ ಹಾಕಬಾರದು. ಆತ್ಮೀಯವಾಗಿ ಕೆಲಸ ಮಾಡಲು ಸಿಗುವ ಖುಷಿಯೇ ಮುಖ್ಯ. ಒಂದು ಓಪನ್ ಸ್ಪೇಸ್ ಎಲ್ಲರಿಗೂ ಇರಬೇಕು.

ಆಗ ಇಲ್ಲಿ ಈ ಜಾಗ ಒಂದು ಹಾಳು ಕೊಂಪೆಯ ಹಾಗೆ ಇತ್ತು. ಅದನ್ನು ಒಂದು ರಂಗಭೂಮಿಯಾಗಿ ಬದಲಾಯಿಸುವ ಉದ್ದೇಶ ಕಾರಂತರಿಗಿತ್ತು.
ಅವರು ಹೇಳುತ್ತಿದ್ದರು. ಎಲ್ಲಿಯೂ ಗೋಡೆಗಳನ್ನು ಕಟ್ಟಬಾರದು. ತುಂಬಾ ಸ್ಪೇಸ್ ಬೇಕು. ಅಲ್ಲಿಯೂ ಒಂದೇ ಕಡೆ ಯಾರೂ ಫಿಕ್ಸ್ ಆಗಬಾರದು. ಅಂತ ಹೇಳಿದ್ದರು. ಮನುಷ್ಯನಿಗೆ ಸೆಕ್ಯೂರಿಟಿ ಇರಬಾರದು ಎಂದೇ ಅವರಿಗೆ ಆಲೋಚನೆ ಇತ್ತು.

ಮುಂದೆ ನಾವು ರಂಗಾಯಣ ಕಲಾವಿದರು ನಮಗೆಲ್ಲ ಒಳ್ಳೆಯ ಸಂಬಳ ಬರಬೇಕು, ನಮ್ಮನ್ನು ಪರ್ಮನೆಂಟ್ ಮಾಡಬೇಕು, ಎನ್ನುವ ಬೇಡಿಕೆಗಳ ಬಗ್ಗೆ ದೀರ್ಘ ಚರ್ಚೆ ಆರಂಭವಾಯಿತು.
ಕಾರಂತರು ಪರ್ಮನೆಂಟ್ ಬೇಡ… ನಾವೆಲ್ಲ ಬೇಕು… ಅಂತ ಜಗಳವೇ ಶುರು ಆಯ್ತು.
ನೀವೆಲ್ಲ ಯಾಕೆ ಹಾಗೆ ಕೇಳ್ತೀರಿ? ರಂಗಭೂಮಿಯಲ್ಲಿ ಸಂಬಳ ಕೇಳಲೇ ಬಾರದು ಎಂದು ಹೇಳಿದ ಕಾರಂತರು ಮುಂದೆ ಇಲ್ಲಿ ಬರೋದನ್ನೇ ಕಮ್ಮಿ ಮಾಡಿದ್ದರು .ಮತ್ತು ಅವರದೇ ಆದ ರೀತಿಯಲ್ಲಿ ಹಠ ಹಿಡಿದು ಹೊರಟು ಹೋದರು.
ಹಾಗಿದ್ದರೂ … ಬಿವಿ ಕಾರ೦ತರು ಯಾವತ್ತೂ ಕೂಡ ಕ್ರಿಯೇಟಿವ್ ಕೆಲಸ ಮಾಡುವವರಿಗೆ ತುಂಬಾ ಸಹಕಾರ ನೀಡುವ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ರಂಗ ಭೂಮಿಗೆ ಆಸ್ತಿಯೇ ಆಗಿದ್ದರು.

ಕಾರಂತರು ನಿರ್ದೇಶಿಸುತ್ತಿದ್ದ ನಾಟಕಗಳು ಮತ್ತು ಪ್ರಯೋಗಗಳಿಗೆ ರಂಗಮಂದಿರದಲ್ಲಿ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಮತ್ತು ಮನ್ನಣೆ ಸಿಗುತ್ತಿತ್ತು.
ಕಾರಂತರು ವ್ಯಕ್ತಿತ್ವದಲ್ಲಿ ಮತ್ತು ಸಾಧನೆಯಲ್ಲಿ ಅತ್ಯಂತ ದೊಡ್ಡ ವ್ಯಕ್ತಿಯಾಗಿದ್ದರು.
*****
ರಂಗಭೂಮಿಗಾಗಿ ಬದುಕಿನ ಉದ್ದಕ್ಕೂ ವಿಶೇಷ ಕೆಲಸ ಮಾಡಿರುವ, ಬಿ ವಿ ಕಾರಂತರು ಮತ್ತು ಗಂಗಾಧರ ಸ್ವಾಮಿಯವರನ್ನು ನೆನಪಿಸುವ ಗೌರವದೊಂದಿಗೆ….

ಗಂಗಾಧರಸ್ವಾಮಿ ಅವರು ಹೇಳಿದ ಮಾತುಗಳ ಸಾಲುಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಈ ಮಾತುಕತೆಯ ಆಡಿಯೋ ಲಿಂಕ್ ಕೂಡ ಇಲ್ಲಿದೆ. ಆಸಕ್ತರು ಅದನ್ನು ಕೇಳಬಹುದು.

https://youtu.be/uCTzqwSfXyI?si=SiqdL_ZsdNAwhYv-

‍ಲೇಖಕರು Admin

1 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading