ಬಿಸಿ ­ಕಡುಬು ­ಮತ್ತು ­ಕೋಳಿ ­ಸಾರಿನ ­ಊಟ…

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಅವರು ಇಂದಿನ ʼನನ್ನಕುಪ್ಪಳಿʼ ಅಂಕಣದಲ್ಲಿ ಮಲೆನಾಡಿನ ಮಳೆಯಲ್ಲಿ ಕುವೆಂಪು ­ಸಮಗ್ರ ­ಕಾವ್ಯದಲ್ಲಿನ ಮಳೆಗಾ­ಲದ ಮರ್ಮವನ್ನು, ವೈಭ­ವವನ್ನು ಸಾರುವ ಕವಿತೆಗಳನ್ನು ಓದಿದ ಅನುಭವವನ್ನು ಹಂಚಿಕೊಂಡಿದ್ದಾರೆ.

ಬಿಸಿ ­ಕಡುಬು ­ಮತ್ತು ­ಕೋಳಿ ­ಸಾರಿನ ­ಊಟ…

|ಕಳೆದ ಸಂಚಿಕೆಯಿಂದ ।

ಸದ್ಯ ­ಅಂದು ಹೇಮಾಂಗ­ಣದ ­ಅಂಗಳ ಸಾಗರದಂತೆ ­ಇರಲಿಲ್ಲ. ರೌದ್ರಾ­ವತಾರ ಕಡಿಮೆಯಾದ ­ಕಾರಣ ­ನೀರು ­ಹೆಚ್ಚು ­ನಿಲ್ಲದೆ ­ಹರಿದು ಹೋಗುತ್ತಿತ್ತು. ­ಮಳೆ ­ಇನ್ನು ಕಡಿಮೆಯಾಗಬಹುದು ­ಎಂಬುದು ­ನನ್ನ ಊಹೆಯಾ­ಗಿತ್ತು. ­ಅಷ್ಟರಲ್ಲಿ ಕವಿಶೈ­ಲದ ಕಾವಲುಗಾರ ­ಮಾನಪ್ಪ ­ಬಂದ. 

‘­ಏನು ­ಮಾನಪ್ಪ ಸಮಾಚಾರ? ­ಮಳೆ ­ಸಾಕಾ?’ ­ಎಂದೆ. ‘­ಅಯ್ಯೋ ಸಾಕಾ­ಗಿದೆ ­ಸಾರ್ ­ನಿಮಗೆ ­ಗೊತ್ತಾ? ­ಇವತ್ತು ಬೆಳಗ್ಗೆಯಿಂದ ತೀರ್ಥ­ಹಳ್ಳಿ ಶಿವಮೊಗ್ಗ ­ರಸ್ತೆ ­ಬಂದ್ ­ಆಗಿದೆ. ­ತುಂಗಾ ­ನದಿಯ ­ನೀರು ಮಂಡಗಳಲೆ ಪಕ್ಷಿಧಾಮವೂ ಸೇರಿದಂತೆ ಅನೇಕ ­ಕಡೆ ­ನುಗ್ಗಿದೆ. ­ರಾಷ್ಟ್ರೀಯ ಹೆದ್ದಾ­ರಿಯಲ್ಲಿ ಬಹಳಷ್ಟು ­ಕಡೆ ­ರಸ್ತೆ ಮುಳುಗಿದೆ. ­ಎಂಥ ­ಮಾಡ್ತರೋ ಗೊತ್ತಿಲ್ಲಪ್ಪ’ ­ಎಂದು ­ಮಳೆ ಅವಾಂತರವನ್ನು ­ಮಾನಪ್ಪ ಬಣ್ಣಿ­ಸಿದ. 

­ಹಿಂದಿನ ­ಕೆಲವು ವರ್ಷಗಳಲ್ಲಿ ­ಎಷ್ಟೋ ­ಬಾರಿ ­ಹೀಗೆಯೇ ­ರಸ್ತೆ ­ಮುಳುಗಿ ­ಸಂಚಾರ ರದ್ದಾಗುತ್ತಿದ್ದುದನ್ನು ­ನಾನೂ ಪತ್ರಿಕೆಯಲ್ಲಿ ಓದುತ್ತಿದ್ದೆ. ­ಅಂಥ ಸಂದರ್ಭಗಳಲ್ಲಿ ಮಂಡಗಳಲೆಯ ­ಪುಟ್ಟ ಪಕ್ಷಿಧಾಮವೂ ಮುಳುಗುತ್ತದೆ. ­ಈಗ ­ನನ್ನ ಧ್ಯಾನವೆಲ್ಲ ­ಆ ಪಕ್ಷಿಧಾಮದ ­ನೀರ ನಡುವಿನ ­ಗಡ್ಡೆಗೆ ಕೇಂದ್ರೀಕೃತವಾಯಿತು.

­ದೂರದ ದೇಶಗ­ಳಿಂದ ­ಬಿಚ್ಚಿದ ­ರೆಕ್ಕೆಯನ್ನು ­ಮುಚ್ಚದೇ ­ಸಾವಿರಾರು ­ಮೈಲು ­ದೂರ ­ಹಾರಿ ­ಬರುವ ­ಪಕ್ಷಿಗಳು ಮಂಡಗದ್ದೆಯ ­ತುಂಗಾ ­ನದಿಯ ನಡುಗಡ್ಡೆಗೆ ­ಬಂದು ­ತಂಗುತ್ತವೆ. ­ತುಂಗಾನದಿಯ ಹರಿವಿನ ­ನಡುವೆ ಮೈತಳೆ­ದಿರುವ ನಡುಗಡ್ಡೆಗಳಲ್ಲಿ ಬೆಳೆ­ದಿರುವ ­ವಿವಿಧ ­ಬಗೆಯ ಮರಗಳಲ್ಲಿ ಗೂಡು ಕಟ್ಟುತ್ತವೆ. 

­ಅವು ­ಕೇವಲ ­ಮೇವು ­ಅರಸಿ ಬರುವು­ದಿಲ್ಲ. ­ಆ ನಡುಗಡ್ಡೆಯಲ್ಲಿ ­ತಮ್ಮ ಸಂತಾ­ನಾ­ಭಿವೃ­ದ್ಧಿಯನ್ನೇ ಮಾಡಿಕೊಳ್ಳುತ್ತವೆ. ಪುಟ್ಟ ಮರಿಗಳ ­ರೆಕ್ಕೆ ಬಲಿಯುವ­ವರೆಗೆ ­ಅಲ್ಲೇ ­ನೆಲೆ ­ನಿಂತು, ­ಆಹಾರ ಹುಡುಕುವ ಕ್ರಮಗಳನ್ನು ­ಕಲಿಸಿ ­ಮತ್ತೆ ಮರಿಗಳ ­ಜೊತೆ ­ತಮ್ಮ ­ದೂರದ ­ನೆಲಕ್ಕೆ ಹಿಂತಿರುಗುತ್ತವೆ. 

­ನೀರ ನಡುವಿನ ­ಜಾಗ ಸುರಕ್ಷಿತ­ವಷ್ಟೇ ­ಅಲ್ಲ, ­ಮೀನು ­ಮಿಡತೆ ­ಮುಂತಾಗಿ ­ಸಮೃದ್ಧ ಆಹಾರವೂ ಸಿಗುತ್ತದೆ ­ಎಂಬ ಕಾರಣವೇ ಹಕ್ಕಿಗಳ ­ಈ ವಲ­ಸೆಗೆ ಕಾರಣ. ­ಆದರೆ ­ಅವು ­ಸುರಕ್ಷ ­ಎಂದು ಭಾವಿ­ಸಿದ ­ಜಾಗ ­ಒಮ್ಮೊಮ್ಮೆ ­ಈ ­ರೀತಿ ಕೈಕೊಡುತ್ತದೆ. 

ನಿರಂತರ ­ಮಳೆಗೆ ­ಉಂಟಾಗುವ ­ಪ್ರವಾಹ ಗಿಡಮರ ಬಳ್ಳಿಗಳನ್ನೂ ಸುತ್ತುವರಿದು ­ಹಕ್ಕಿ ಮರಿಗಳ ­ಸಮೇತ ಗೂಡುಗಳನ್ನು ­ಕೊಚ್ಚಿಕೊಂಡು ಹೋಗುತ್ತದೆ. ಬದುಕುಳಿದ ­ಹಕ್ಕಿಗಳು ಒಡ­ನಾ­ಡಿಗಳು ­ಮತ್ತು ­ಮಕ್ಕಳನ್ನು ಕಳೆದುಕೊಂಡ ­ದುಃಖ ದುಮ್ಮಾನದಲ್ಲಿಯೇ ­ತಮ್ಮ ­ತಾಯ್ನಾಡಿಗೆ ತೆರಳುತ್ತವೆ. ಇಷ್ಟೆಲ್ಲದರ ನಡುವೆಯೂ ಹಕ್ಕಿಗಳ ­ಈ ­ನಿಗೂಢ ­ವಲಸೆ ಮುಂದುವರಿದೇ ­ಇರುತ್ತದೆ.

ಸುಧಾ­ಕರ ­ಅಂದು ­ಸಂಜೆಗೆ ­ನನ್ನ ಆಫೀಸಿಗೆ ­ಬಂದು ‘­ಸಾರ್ ­ಇವತ್ತು ­ಊಟ ­ತರುವುದು ­ಸ್ವಲ್ಪ ತಡವಾಗುತ್ತದೆ, ಮನೆಯಲ್ಲಿ ­ನೆಂಟರು ಬಂದಿದ್ದಾರೆ’ ಎಂದು ­ಹೇಳಿ ­ಹೋಗಿದ್ದ. ­ಮಧ್ಯಾಹ್ನ ­ಅವನ ಕ್ಯಾಂಟಿನ್‌­ನಲ್ಲೇ ­ಚೆನ್ನಾಗಿ ತಿಂದಿದ್ದ­ರಿಂದ ­ಹೊಟ್ಟೆ ಹಸಿಯುವ ­ಪ್ರಶ್ನೆ ­ಇರಲಿಲ್ಲ. ­‘ಆಯ್ತು, ಸಾವಕಾ­ಶ ವಾಗಿ ­ಬಾ ­ಮಾರಾಯ’ ­ಎಂದಿದ್ದೆ. 

­ಮತ್ತೆ ­ಕಗ್ಗತ್ತಲು, ­ಜಡಿ ­ಮಳೆ, ­ಅದೇ ನೀರ­ವತೆ, ­ಓದಲು ­ಬರೆಯಲು ­ಕರೆಂಟ್ ದೀಪಗ­ಳಿಲ್ಲ. ­ಹೆಚ್ಚು ­ಕಡಿಮೆ ­ಹತ್ತನೇ ತರಗತಿ­ವರೆಗೆ ಸೀಮೆಎಣ್ಣೆ ­ಬುಡ್ಡಿ ದೀಪದ ಬೆಳ­ಕಿ­ನಲ್ಲಿಯೇ ­ಓದಿದ್ದ ­ನನಗೆ ­ಅಥವಾ ­ನನ್ನ ­ಹಾಗೇ ­ಎಷ್ಟೋ ­ಜನಕ್ಕೆ ­ಇಂದು ಕರೆಂಟ್ ಇಲ್ಲದಿದ್ದರೆ ಜೀವ­ನವೇ ­ಇಲ್ಲ. ­ಕರೆಂಟ್ ­ಅಷ್ಟೇ ಅಲ್ಲ, ಆಧುನಿ­ಕತೆಯ ­ಅದೆಷ್ಟೋ ಆವಿಷ್ಕಾರಗಳು ­ನಮ್ಮನ್ನು ಅಸಹಾಯಕರನ್ನಾಗಿ ಮಾಡಿ­ಬಿಟ್ಟಿವೆ.

­ಮೊಬೈಲ್ ­ಇಲ್ಲದೆ ­ಈಗ ­ಜೀವನ ­ಉಂಟೆ? ­ಸದ್ಯ ­ನನ್ನ ­ಅದೃಷ್ಟಕ್ಕೆ ಕುಪ್ಪಳಿಯಲ್ಲಿ ­ಮೊಬೈಲ್ ­ಕೆಲಸ ಮಾಡುತ್ತಿಲ್ಲ. ಕವಿಶೈಲದ ­ನೆತ್ತಿಗೆ ­ಹೋದರೆ ಅಲ್ಲಿ ­ಒಂದಿಷ್ಟು ­ಸಿಗ್ನಲ್ ಸಿಗುತ್ತದೆ. ಬೆಳ­ಗಿನ ವಾಕಿಂಗ್‌­ನಲ್ಲಿ ­ಹೆಂಡತಿ ಮಕ್ಕ­ಳಿಗೆ ­ಒಂದು ­ಪೋನ್ ಹೊಡೆದರೆ ­ಮುಗಿಯಿತು. ­ಇನ್ನು ­ಇಡೀ ­ದಿನ ಅದರ ­ಅಸಂಗತ ­ಗಲಾಟೆ ಇರುವು­ದಿಲ್ಲ. 

­ಟಿ ವಿ ನೋಡಿಯಂತೂ ­ಕೆಲವು ತಿಂಗಳುಗಳೇ ­ಕಳೆದು ­ಹೋಗಿವೆ. ­ಇವೆಲ್ಲ ­ಇಲ್ಲದೆಯೂ (­ಅಥವಾ ಇಲ್ಲದಿರುವುದ­ರಿಂದಲೇ) ­ನಾನೆಷ್ಟು ಸಂತೋ­ಷ ವಾ­ಗಿದ್ದೇ­ನಲ್ಲಾ ­ಎಂದು ನನಗನ್ನಿಸಿತು!

­ಅತಿಥಿ ­ಗೃಹದ ­ನನ್ನ ಕೊಠ­ಡಿಯಲ್ಲಿ ಕಿಟ­ಕಿಗೆ ಅಭಿಮುಖ­ವಾಗಿ ­ಕುಳಿತು ­ಆ ­ಅಗಾಧ ­ಕತ್ತಲನ್ನು, ಹನಿಗಳ ಸಪ್ಪಳವನ್ನು, ಹೆಂಚಿನ ದೋಣಿಗಳಲ್ಲಿ ಹರಿಯುವ ­ನೀರ ಸಂಗೀತವನ್ನು ಪರೋ­ಕ್ಷ­ವಾಗಿ ಆಲಿಸುತ್ತಾ ಆಧುನಿಕ ಆವಿಷ್ಕಾರಗಳ ­ಒಳಿತು ಕೆಡಕುಗಳ ಶೇಕಡಾವಾರು ­ಪಟ್ಟಿಯನ್ನು ಮನಃಪಟಲದಲ್ಲಿ ಮೂಡಿ­ಸಿಕೊಳ್ಳುತ್ತಾ ­ಕುಳಿತ ­ನನಗೆ ­ರಾತ್ರಿ ­ಹತ್ತು ಗಂಟೆ­ಯಾದದ್ದು ಗಮನಕ್ಕೇ ಬಂದಿರ­ಲಿಲ್ಲ.

ಸುಧಾ­ಕರನ ­ಟಾರ್ಚ್‌ ­ಬೆಳಕು ­ಮಳೆ ಹನಿಗಳನ್ನು ಭೇದಿ­ಸಿಕೊಂಡು ­ನನ್ನನ್ನು ಸಮೀಪಿಸಿತು. ­ರೈನ್ ­ಕೋಟನ್ನು ­ತೆಗೆದು ಕೊಡವುತ್ತಾ ‘­ಸಾರಿ ­ಸಾರ್ ಲೇಟ್ ­ಆಯ್ತು’ ­ಎನ್ನುತ್ತಾ ­ತಾನೇ ­ತಂದಿದ್ದ ­ಸ್ಟೀಲ್ ­ತಟ್ಟೆಯಲ್ಲಿ ­ಊಟ ಬಡಿ­ಸತೊಡ­ಗಿದ.  ಪಾತ್ರೆಯ ­ಮುಸುಕು ತೆಗೆಯುತ್ತಿದ್ದಂತೆಯೇ ­ಕೋಳಿ ­ಸಾರಿನ ಗಮಲು ­ಮೂಗಿನ ­ಹೊಳ್ಳೆಗೆ ­ನುಗ್ಗಿ ­ಇಡೀ ­ದೇಹ ­ಚೈತನ್ಯ ಪೂರ್ಣವಾಯಿತು. 

­ಅದು ಸುಧಾ­ಕರನ ­ಕ್ಯಾಂಟೀನ್ ­ಊಟವಲ್ಲ, ಬದಲಾಗಿ ­ಅವರ ಮನೆಯಲ್ಲಿ ­ಮಾಡಿದ ­ಬಿಸಿ ­ಕಡುಬು ­ಮತ್ತು ­ಕೋಳಿ ­ಸಾರಿನ ಅಪ್ಯಾಯಮಾನ ಊಟ. ­ಮಳೆಯ ವಾತಾ­ವರಣ ­ಊಟದ ­ಹಿತವನ್ನು ­ಮತ್ತಷ್ಟು ಹೆಚ್ಚಿ­ಸಿತ್ತು.

­ಕೋಳಿಸಾರು ­ಕಡುಬನ್ನು ಮನ­ಸಾರೆ ­ತಿಂದು ­ಗಡದ್ದು ­ನಿದ್ದೆಗೆ ­ಜಾರಿದ್ದ ­ನನಗೆ ಸರಿಸುಮಾರು ­ರಾತ್ರಿ ­ಒಂದು ­ಗಂಟೆ ಸಮಯಕ್ಕೆ ­ಮತ್ತೆ ಎಚ್ಚರವಾಯಿತು. ಕಿವಿಯಗ­ಲಿಸಿ ಕೇಳಿದರೆ ­ಮತ್ತದೇ ­ಬಿರು ­ಮಳೆ, ­ಅದೇ ­ಸುರಿವ ­ನೀರು, ­ಬ್ಯಾಟರಿ ಬೆಳ­ಕಿನ ನೋಟದಲ್ಲಿ ­ಅದೇ ­ನೀರಿನ ­ಸಾಗರ. 

­ನಿದ್ದೆ ಬರುವಂತೆ ­ತೋರಲಿಲ್ಲ. ­ಮೊಂಬತ್ತಿಯನ್ನು ­ಹಚ್ಚಿದೆ. ­ಕುವೆಂಪು ­ಸಮಗ್ರ ­ಕಾವ್ಯವನ್ನು ­ಬಿಚ್ಚಿ ಮಳೆಗಾ­ಲದ ಮರ್ಮವನ್ನು ವೈಭ­ವವನ್ನು ಸಾರುವ ಕವಿತೆಗಳನ್ನು ­ಎಷ್ಟು ­ಸಾಧ್ಯವೋ ­ಅಷ್ಟು ­ಜೋರಾಗಿ ಓದಿಕೊಳ್ಳತೊಡ­ಗಿದೆ.

­ಮೋಡಗಳು

­ಪ್ರಕೃತಿ ­ಕಲೆಗಿಂ ­ಮಿಗಿಲೆ ನರಕೃತಿಯ ­ಕಲೆ? ­ನೋಡ,

ಆಶ್ವೀ­ಜದಾಕಾ­ಶದಮೃತ ­ಚಿತ್ರದ ­ಶಾಲೆ

­ಸೃಷ್ಟಿ ­ಶಿಲ್ಪಿಯ ಹೃದಯಪಿಂಡ ­ಕುಂಡ ­ಜ್ವಾಲೆ

ಕಡೆ­ದಿಟ್ಟ ಕೃತಿಗಳಿಂ ಭೀಮರಮ್ಯಂ! ­ಮೋಡ

ಅರಳೆರಾಸಿಗಳಂತೆ, ­ಬೆಣ್ಣೆ ಬಂಡೆಗಳಂತೆ,

­ಘೇನ ­ಮೃದು ರಜತ­ಗಿರಿ ­ಶಿಖರ ಪದ್ಮಗಳಂತೆ,

­ಕಡೆದ ಹಾಲ್ಗಡಲೆದ್ದು ಸಾಲ್ಗೊಂಡಲೆಗಳಂತೆ

ಶೋಭಿ­ಸಿವೆ, ಶರದಭ್ರ ಶುಭ್ರ­ಚಿಂತೆಗಳಂತೆ!

­ಆವ ಕವಿಗಾವ ­ಶಿಲ್ಪಿಯ ಕೌಶ­ಲಕೆ ­ಸಾಧ್ಯ

­ಈ ­ಬೃಹತ್, ­ಈ ­ಮಹತ್, ­ಈ ರೂಪವೈ­ವಿಧ್ಯ?

ಬರಿಯ ಮೋಡಗಳಲ್ಲ ­ಇವು ­ಬಿಳಿಯ ಆತ್ಮಗಳ್,

­ಕ್ರಿಸ್ತ ­ಬುದ್ಧರ ­ಪೋಲ್ವ ­ವಿಶ್ವದ ಮಹಾತ್ಮಗಳ್:

­ಹಿಂದೆ ­ಬಂದುವೊ ­ಮುಂದೆ ಬರ­ಲಿ­ಹವೊ ಪ್ರಾಣಗಳ್,

­ಧ್ಯಾನಗಳ್, ಭಾವಗಳ್, ­ಲೋಕ ಕಲ್ಯಾ­ಣಗಳ್!

­ಕಾರಿರುಳು­ಕಾರ್ಮಿಂಚು

­ಕಾಂತಿಯ ­ಕೊಲ್ಲುವ ­ಕಾಳಿಯ ­ಕಾಯದ

­ಕಪ್ಪನು ­ಕರೆದುದು ­ಕಾರಿರುಳು;

­ಕಾಳಿಯ ­ಕಂಗಳ ­ಕೋಪದ ಕಿಡಿಗಳ

ಜೋತಿಯ ­ಜರೆದುದು ­ಕಾರ್ಮಿಂಚು.

­ಕಾಳಿಯು ­ಉಟ್ಟಿಹ ಕುರುಡಿನ ­ಸೀರೆಯ

­ಕಾಳಿಯು ­ತೊಟ್ಟಿಹ ­ಕೈಗಳ ಬಳೆಗಳ

ಕುಡಿಮಿಂಚಾದುದು ­ಕಾರ್ಮಿಂಚು.

­ಕಾಳಿಯು ಕೆದ­ರಿದ ­ಕೇಶದ ­ಕೂರಾ-

ದೊಡ್ಡಂತಾದುದು ­ಕಾರಿರುಳು;

­ಕಾಳಿಯು ಮುಡಿ­ದಿಹ ­ಕಿಚ್ಚಿನ ಮುಗುಳಿನ

ಥಳಕಂತೆಸೆದುದು ­ಕಾರ್ಮಿಂಚು.

­ಕಾಳಿಯ ­ಸಿಟ್ಟಿನ ­ಕಾಳ ಕರಾಳದ

ಮೊಗದೊಲು ­ಮೆರೆದುರು ­ಕಾರಿರುಳು;

­ಕಾಳಿಯ ­ಆಸ್ಯದ ­ಹಾಸ್ಯದ ­ಹಾಸ ­ವಿ-

ಲಾಸವ ­ಹೋಲಿತು ­ಕಾರ್ಮಿಂಚು.

­ಮುಂಗಾರು

ಪಡುವಲ ಕಡ­ಲಿನ ­ಮಿಂಚನು ­ಗುಡುಗನು ­ನುಂಗಿ ಬಸಿ­ರಿ­ನಲಿ, ಮುಡಿಗೆದರಿ,

ಮುಂಗಾರಸುರಿಯು ರಕ್ಕ­ಸ­ವಜ್ಜೆಗ­ಳಿಕ್ಕುತ ­ಬಂದಳು ­ಬಲು ­ಗದರಿ!

ಗುಟುರನು ­ಹಾಕಿತು ­ಮುಂಗಾರ್ ­ಗೂಳಿ!

ಘೀಳಿಟ್ಟೊರಲಿತು ಘನಘಟೆ­ಯಾಳಿ!

ಬುಸುಗುಟ್ಟಿತು, ­ಬೀಸಿತು ಬಿರುಗಾಳಿ!

ಸುತ್ತಲು ­ಮುತ್ತಿತು ­ಕಾರ್ಮೋಡ!

ಹರಿಯುವ ­ಹಾವಿನ ­ತೆರದಲಿ ­ಕತ್ತಲೆ ­ಮೆಲ್ಲನೆ ­ನುಂಗಿತು ಮಲೆ­ನಾಡ!

ಹಿಂಜ­ರಿದುರಿ­ಬಿ­ಸಿ­ಲಂಜುತ­ಲಡಗಿತು, ರವಿಮಂಡಲ ಕಣ್ಮರೆ­ಯಾಯ್ತು;

­ಕಾಳಿಯ ­ಕೇಶದ ತಿಮಿರವು ­ಮುಸುಗಿತು, ­ಶಾಂತಿಯು ಗಲಭೆಗೆ ಸೆರೆ­ಯಾಯ್ತು.

ಕೈ ಹೊಂಬಳೆಗಳ ­ಹೊಸ ಹೊಗರಂತೆ,

ಮಿಂಚುಗಳೆ­ಸೆದುವು ಗೊಂಚ­ಲಲಿ!

ಹೊಳೆದುವು, ­ಅಳಿದುವು, ಸುಳಿಸುಳಿದಲೆದುವು ­ಮುತ್ತುವ ಮೋಡಗಳಂ­ಚಿ­ನಲಿ!

ಜಡಿಮಳೆ

­ಮುಸಲ ­ವರ್ಷ ­ಧಾರೆ

ಮುಗಿ­ಲಿ­ನಿಂದ ­ಸೋರೆ

­ಕುಣಿವ ­ನವಿಲು ­ನನ್ನ ­ಮನಂ,

ನಲ್ಮೆಯುಕ್ಕಿ ­ಮೀರೆ!

­ಹಸುರು ­ಬಯಲ ­ಮೇಲೆ

­ಬಾಣ ಜಾಲದೋಲೆ

­ಮಳೆಯ ಹನಿಗಳೆರಗಲೊಡಂ

­ತುಂತುರಾವಿ ­ಲೀಲೆ!

­ತಲೆಯ ­ಕೆದರಿ ­ಕಾಳಿ

­ಕುಣಿವ ­ತರೆನ ­ತಾಳಿ

­ಪವನ ­ಹರಿಯು ಗರ್ಜಿ­ಸಿಹಂ

­ವಿಪಿನ ­ಕರಿಯ ­ಸೀಳಿ!

­ನೀರು, ­ನೀರು, ­ನೀರು!

­ಕಾರುತಿಹುದು ­ಕಾರು!

ನೋಡುತಿರುವ ­ಕವಿ ­ನಯನಂ

ನಂದ­ದಿಂದೆ ­ನೀರು!

­ಬಹುಶಃ ­ಕುವೆಂಪು ­ಬಾಲ್ಯ ಕಾಲದಲ್ಲಿ ­ಕಂಡ ­ಆ ­ಅಸದೃಶ ­ಮಳೆ ­ಇಂದು ­ಇಲ್ಲವೇನೋ. ­ಕುವೆಂಪು ­ಮತ್ತು ­ಅವರ ­ಹಿರಿಯರು ಮಳೆರಾಯನ ­ಅದೆಷ್ಟು ಅವತಾರಗಳನ್ನು ಕಂಡಿರಬಹುದು. 

­ಈ ­ಮಳೆರಾಯ ­ಎಷ್ಟು ಹಿತಕಾ­ರಿಯೋ ­ಅಷ್ಟೇ ಅಪಾಯಕಾ­ರಿಯೂ ­ಹೌದು. ಮಳೆರಾಯನ ­ಸೌಮ್ಯ ವೇಷಗಳೆಷ್ಟೋ ಬಣ್ಣದ ವೇಷಗಳೂ ­ಅಷ್ಟೆ. ಅವನೆಷ್ಟು ಸುಂದರನೋ ­ಅಷ್ಟೇ ಭೀಭತ್ಸಕನೂ ­ಹೌದು. ­

ಆದರೆ ­ಇಂದು ಬದುಕಿರುವ ­ಹಿರಿಯರು ಹೇಳುವಂತೆ ­ಅಂದಿನ ­ಆ ಕಾಲ­ದಲ್ಲಿ ಬೀಳುತ್ತಿದ್ದ ­ಮಳೆ ­ಈಗಿಲ್ಲ. ­ಬಂದರೆ ­ಒಮ್ಮೆಲೇ ­ಸೇಡು ತೀರಿಸಿಕೊಳ್ಳುವಂತೆ ­ಸುರಿದು ­ಏನೆಲ್ಲ ­ಅನಾಹುತ ಸೃಷ್ಟಿಸುತ್ತದೆ. ಇಲ್ಲದಿದ್ದರೆ ಕುಡಿಯುವ ­ನೀರಿಗೂ ­ಅಭಾವ ತಂದಿಡುತ್ತದೆ. 

ನಿಯತ­ವಾದ ಮಾರುತಗಳು ­ಈಗೀಗ ­ದಿಕ್ಕು ­ತಪ್ಪುತ್ತಿವೆ. ಪರಿ­ಸರ ­ತಜ್ಞರ ­ಪ್ರಕಾರ ­ಇದು ­ಕಾಡಿನ ­ನಾಶದ ­ಪರಿಣಾಮ. ವಿಜ್ಞಾ­ನಿಗಳ ­ಪ್ರಕಾರ ಭೂಖಂಡದ ­ಶಾಖ ಹೆಚ್ಚುತ್ತಿರುವ ­ಪರಿಣಾಮ. ಒಟ್ಟಿ­ನಲ್ಲಿ ­ಎಲ್ಲವೂ ನನಗಾಗಿ ­ಎಂಬ ಮನುಷ್ಯನ ಅಹಂಕಾರ ­ಹಾಗೂ ಅವನ ­ತಣಿಯದ ­ದಾಹ ­ಈ ಮಲೆ­ನಾಡನ್ನೂ ಆಪೋಷನ ತೆಗೆದುಕೊಳ್ಳುತ್ತಿದೆ.

।ಮುಂದಿನ ವಾರಕ್ಕೆ..।

October 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. T S SHRAVANA KUMARI

    ಕುಪ್ಪಳ್ಳಿಗೆ ಹೋಗಿ ಮಳೆಯಲ್ಲಿ ಮಿಂದು ಬಂದಂತಾಯಿತು

    ಪ್ರತಿಕ್ರಿಯೆ
  2. T S SHRAVANA KUMARI

    ಕುಪ್ಪಳ್ಳಿಗೆ ಹೋಗಿ ಮಳೆಯಲ್ಲಿ ಮಿಂದಂತಾಯಿತು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: