“ನಾನು ಮುಂಚೆ ಹುಡುಗನಾಗಿದ್ದೆ, ಈಗ ಹುಡುಗಿ..”

ಈಕೆ ‘ಜಯನಗರದ ಹುಡುಗಿ’.ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ.

ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ ಎಂಜಿನಿಯರ್ ತಂದೆ ಸುಧೀಂದ್ರ ಹಾಲ್ದೊಡ್ಡೇರಿ, ತಾತ, ಖ್ಯಾತ ಪತ್ರಕರ್ತ ಎಚ್ ಆರ್ ನಾಗೇಶರಾವ್ ಅವರಿಂದ ಪಡೆದದ್ದು ಬಹಳಷ್ಟು.

ಪ್ರಸ್ತುತ ಬಾರ್ಸಿಲೋನಾದಲ್ಲಿ ತಾವು ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಕಂಡ ನೋಟಗಳ ಚಿತ್ರಣ ಇಲ್ಲಿದೆ.

| ಕಳೆದ ವಾರದಿಂದ|

ಡ್ರೈಯರಿನಲ್ಲಿ ಬಟ್ಟೆ ಯಾಕೋ ಸಿಕ್ಕಿಹಾಕಿಕೊಂಡಿತ್ತು. “ಅಯ್ಯೋ ಇವರ ಕಥೆ ಕೇಳಿದಾಗಲ್ಲೆಲ್ಲ ಬರಿ ನಂಗೆ ಏನಾದರೊಂದು ಅನಾಹುತ ಆಗೇ ಆಗತ್ತೆ. ಈ ಕತಲೂನ್ಯಾದ ಕಥೆಯಷ್ಟೇ ಪಝಲ್ಲಾಗಿ ನನ್ನ ಬಟ್ಟೆಗಳೂ ಸಿಕ್ಕಿಹಾಕೊಂಡಿದೆ ಎಂದು ಹುಡುಗಿ ಗೋಳಾಡುತ್ತಿದ್ದಳು. ಬೆಂಗಳೂರಿನಲ್ಲಿ ಇಂಥದಕ್ಕೆಲ್ಲಾ ನಯಾಪೈಸೆ ತಲೆಕೆಡಿಸಿಕೊಳ್ಳದೇ ಆರಾಮಾಗಿ ಇದ್ದ ಹುಡುಗಿಗೆ ಇದು ಒಂದು ತಲೆನೋವಾಗಿ ಪರಿಣಮಿಸಿತು.

ಒಮ್ಮೆ ಯಾವುದೋ ಸಂಬಧಿಕರ ಮನೆಗೆ ನಾಲ್ಕೈದು ದಿವಸ ಇರುವುದಕ್ಕೆ ಹೋದಾಗ, ಅವರು “ಒಳ ಉಡುಪುಗಳನ್ನ ಬೇರೆ ಒಗೆದುಕೋ, ಎಲ್ಲರ ಮುಂದೆ ಇಂಅಗಿಹಾಕಬೇಡ” ಎಂದು ಹೇಳಿದ್ದು ನೆನಪಾಯ್ತು. “ಇಲ್ಲಿ ಅದೆಷ್ಟೊಂದು ಜನ ಇದ್ದಾರಲ್ಲ, ಅವರ ಮುಂದೆ ಹೇಗಪ್ಪಾ ನನ್ನ ಕಥೆ” ಎಂದು ಬೇಜಾರು ಮಾಡಿಕೊಂಡು ಡ್ರೈಯರಿನ ಹತ್ತಿರ ನಡೆದು ಬಂದಳು. ಅವಳ ಹಿಂದೆ ಇದ್ದ ಹುಡುಗರು, “ಏನಾದರೂ ಪ್ರಾಬ್ಲಮ್ಮಾ ? ನಾವು ಸಹಾಯ ಮಾಡುತ್ತೇವೆ” ಎಂದು ಹೇಳಿದರು.

“ಅಯ್ಯೋ ಅಂಥೆದ್ದೇನು ಇಲ್ಲಪ್ಪ, ನನ್ನ ಬಟ್ಟೆ ನಾ ನೋಡಿಕೊಳ್ಳುತ್ತೇನೆ” ಎಂದು ಅಂದು ಅಲ್ಲಿಗೆ ಬಂದಳು. ಲಾಂಡ್ರಿ ಅಂಗಡಿಯಲ್ಲಿ  ಸಹಾಯ ಮಾಡುವವರು “ನಾಳೆ ಬಾ” ಎಂದು ಬೋರ್ಡ್ ಹಾಕಿಕೊಂಡಿದ್ದರು. ಅತ್ಯಂತ ರೊಮ್ಯಾಂಟಿಕ್ ಪ್ರೇಮ ಕಥೆಗಳು ಇಲ್ಲಿ ನಡೆಯುತ್ತದೆ ಅನ್ನುವ ಕಲ್ಪನೆಯಲ್ಲಿ ಬಂದಿದ್ದ ಹುಡುಗಿಗೆ .

“ಲಾಂಡ್ರಿ ಅಂಗಡಿಯಲ್ಲಿ ನನ್ನ ಬಟ್ಟೆ ಸಿಕ್ಕಿಹಾಕೊಂಡಿತ್ತು” ಎಂಬ ನೆನಪೇ ಬರುವುದಕ್ಕೆ ತನ್ನನ್ನು ಶಪಿಸಿಕೊಂಡಳು. ಒಂದು ನಾಲ್ಕು ಕಾಸಿನ ಡಿಸ್ಕೌಂಟಿಗೆ ಇಷ್ಟೆಲ್ಲಾ ಕಥೆ ಆಯ್ತಲ್ಲಾ ನಂದು, ಈ ಗೌಹರ್ ಮತ್ತು ಆನಾಗೆ ಹೊಡೆಯಬೇಕು, ಈಗ ಅದ್ಯಾರು ಸಹಾಯ ಮಾಡುತ್ತಾರೆ” ಎಂದು ಅಲವತ್ತುಕೊಳ್ಳುತ್ತಲೇ ಇದ್ದರು.

ಅಷ್ಟರಲ್ಲಿ ನೂರಿ ಬಂದಳು. “ಸಹಾಯ ಬೇಕಾ ?” ಎಂದು ಕೇಳಿದಳು. ಅವಳ ರೇನ್ಬೋ ಬ್ಯಾಡ್ಜಿನ ಮೇಲೆ ನೂರಿ ಎಂಬ ಹೆಸರೂ ಇತ್ತ. “ಇಲ್ಲಿ ನನ್ನ ಬಟ್ಟೆ ಎಲ್ಲಾ ಡ್ರೈಯರಲ್ಲಿ ಸಿಕ್ಕಿಹಾಕೊಂಡಿದೆ, ಸ್ವಲ್ಪ ಸಹಾಯ ಮಾಡಿ” ಎಂದು ಬೇಡಿಕೊಂಡಳು. ನೂರಿ ಚಕಚಕನೆ ಬೇರೆ ಯಾವುದೋ ಪ್ರೋಗ್ರಾಮ್ ಆನ್ ಮಾಡಿ ಬಟ್ಟೆ ಸದಲಿಸಿಕೊಳ್ಳುವ ಹಾಗೆ ಮಾಡಿದಳು.

ಮುಂದೆ ಹೀಗಾದರೆ ಹೀಗೆ ಮಾಡಬೇಕು ಎಂದು ಹೇಳಿಕೊಟ್ಟು ತಾನೇ ಬಾಗಿಲು ತೆಗೆದು ಬುಟ್ಟಿಗೆ ಬಟ್ಟೆಯನ್ನ ತುಂಬಿಸಿದಳು. “ನೀನು ಹಾಗೆಲ್ಲ ಇಂತಹ ಸಣ್ಣ ವಿಷಯಕ್ಕೆ ವರಿ ಮಾಡಿಕೊಳ್ಳಬಾರದು” ಎಂದು ಬೆನ್ನು ತಟ್ಟಿ ಬುಟ್ಟಿ ಎತ್ತಿಕೊಟ್ಟಳು.

“ಥ್ಯಾಂಕ್ಸ್ ನೂರಿ” ಎಂದು ಹುಡುಗಿ ಹಗ್ ಮಾಡಿದಳು. “ನಿನ್ನ ಹಿಂದೆ ಇದ್ದ ಹುಡುಗರನ್ನ ಯಾಕೆ ನೀನು ಸಹಾಯಕ್ಕೆ ಕರೆಯಲ್ಲಿಲ್ಲ, ಇಲ್ಲಿ ಇರುವ ಎಲ್ಲರಿಗೂ ಬಟ್ಟೆ ಸಿಕ್ಕಿಹಾಕಿಕೊಂಡರೆ ಏನು ಮಾಡಬೇಕು ಎಂದು ಗೊತ್ತಿದೆ. ಸೋ ನಿನಗೇನಾದರೂ ಬಯಾಸ್ ಇತ್ತಾ ?” ಎಂದು ಕೇಳಿದಳು. “ಹಾಗಲ್ಲ ಸಾಧಾರಣ ಹುಡುಗರನ್ನ ನಾನು ಹಾಗೆ ಕರೆಯೋದಿಲ್ಲ, ಅವರಿಗೇನು ಅನ್ನಿಸುತ್ತದೋ” ಎಂಬ ಭಾರತೀಯ ಬಯಾಸನ್ನ ಮನಸಲ್ಲೇ ತುಂಬಿಕೊಂಡು ಸಮಾನತೆಗೆ ಹೋರಾಡುವ ಹುಡುಗಿಯ ಬಾಯಿಂದ ಅಣಿಮುತ್ತುಗಳು ಉರುಳಿದವು.

ನೂರಿ ತಣ್ಣಗೆ, “ನನ್ನ ಪಾಸ್ಟ್ ಲೈಫ್ ಗೊತ್ತಿದ್ದರೆ ನೀನೂ ನನ್ನನ್ನ ಕರೆಯುತ್ತಿರಲ್ಲಿಲ್ಲ ಅಲ್ವಾ ?” ಎಂದು ನಗುತ್ತಾ ಹೇಳಿದಳು. “ನನಗೆ ಮರುಜನ್ಮ ಅಂಥದೆಲ್ಲಾ ನಂಬಿಕೆಯೇ ಇಲ್ಲ, ಅವೆಲ್ಲಾ ನಾ ನಂಬಲ್ಲಪ್ಪ, ಇಲ್ಲಿದ್ದಾಗ ಅದು ಹೇಗೆ ಇರಬೇಕೋ ಹಾಗೆ ಇರಬೇಕು, ಅದೇನು ಹಿಂದಿನ ಜನ್ಮ ಅಂತೆ, ಮುಂದಿನ ಜನ್ಮ ಅಂತೆ ನಾನ್ಸೆನ್ಸ್” ಎಂದು ಹುಡುಗಿ ತನ್ನ ವಿಶಾಲ ಚಿಂತನೆಯ ಹಾದಿಯನ್ನೇ ಬಿಚ್ಚಿಡುತ್ತಾ ಹೋದಳು.

ನೂರಿ ನಕ್ಕು, “ಹಹಹಹ ಪಾಸ್ಟ್ ಅನ್ನೋದು ಹಿಂದಿನ ಜನ್ಮ ಅಲ್ಲ, ಹಲವು ವರ್ಷಗಳೇ ಆಗಿರಬಹುದು ಏನಂತೀಯಾ?” ಎಂದು ಕೇಳಿದಳು. ನಯಾಪೈಸೆ ಅರ್ಥ ಆಗದೇ ಅವಳು ಕಣ್ಣುಕಣ್ಣು ಬಿಟ್ಟು ನೋಡಿದಳು. “ಇವಳೇನಾದರೂ ಡಾನ್ ಆಗಿದ್ದಳಾ ಅಥವಾ ಯಾರನ್ನಾದರೂ ಕೊಲೆ ಮಾಡಿದ್ದಳಾ, ಇಲ್ಲಿನ ಡ್ರಗ್ ದಂಧೆಯಲ್ಲಿ ಭಾಗವಹಿಸಿದ್ದಳಾ ಅಥವಾ ಕತಲೂನ್ಯಾ ಹೋರಾಟದಲ್ಲಿ ಜೈಲು ಸೇರಿದ್ದಳಾ ಅಥವಾ ಮಹಾನ್ ಕಳ್ಳಿಯಾ?, ಏನಪ್ಪಾ ಇದು ನನ್ನ ಕಥೆ, ಒಂದು ಬಟ್ಟೆ ಸಿಕ್ಕಿಹಾಕಿಕೊಂಡಿದ್ದಕ್ಕೆ ಅವಳು ನನ್ನನ್ನು ಶೂಟೆ ಮಾಡಿಬಿಡುತ್ತಾಳಾ” ಎಂದು ಹೆದರಿಕೊಂಡು ತನ್ನ ಬುಟ್ಟಿಯನ್ನ ಮೆಲ್ಲಗೆ ಎತ್ತಿಕೊಂಡು ಹೊರಡಲಿ ಅಣಿಯಾದಳು.

“ರಿಲ್ಯಾಕ್ಸ್” ಎಂದು ಅಗ್ನಿ ಐಪಿಎಸ್ ಟೋನಿನಲ್ಲಿ ಹೇಳಿದಾಗಲೇ ಅವಳಿಗೆ ಭಯ ಆಯ್ತು. “ಸಾರಿ ನೂರಿ, ನನಗೆ ನಿನ್ನ ಪಾಸ್ಟ್ ತಿಳಿಯಲು ಆಸಕ್ತಿ ಇಲ್ಲ, ನೀನು ಮುಂಚೆ ಏನೇ ಆಗಿರಬಹುದು ಆದರೆ ನೀನು ನನ್ನ ಮನಸಿನಲ್ಲಿ ಬಹಳ ಒಳ್ಳೆ ಕೆಲಸ ಮಾಡಿದ ಹುಡುಗಿಯಾಗಿಯೇ ಉಳಿಯುತ್ತೀಯ” ಎಂದು ರಾಜಕಾರಣಿಯ ಹಾಗೆ ಭಾಷಣ ಮಾಡಿ ನುಣುಚಿಕೊಳ್ಳಲು ಪ್ರಯತ್ನ ಮಾಡಿದಳು.

“ನೋ ನೋ, ಇಲ್ಲಿ ಕೇಳು” ಎಂದು ಹುಡುಗಿಯನ್ನ ಪಕ್ಕಕ್ಕೆ ಎಳೆದುಕೊಂಡು ಕೂತಳು. “ನಾನು ಮುಂಚೆ ಹುಡುಗನಾಗಿದ್ದೆ, ಈಗ ಹುಡುಗಿ, ಅದೇ ನನ್ನ ಪಾಸ್ಟ್ ಲೈಫ್, ನೀನು ನಿನ್ನ ಹಿಂದೆ ನಿಂತಿದ್ದ ಹುಡುಗರನ್ನ ಸ್ವಲ್ಪ ಕೂಡ ಜಡ್ಜ್ ಮಾಡದೇ ಮಾತಾಡಿಸಿದ್ದನ್ನ ನೋಡಿ ನನಗೆ ನಿನ್ನ ಓಪನ್ ಮೈಂಡ್ ಇಷ್ಟವಾಯಿತು. ಅದಕ್ಕೆ ನಾನು ನಿನ್ನನ್ನ ಮಾತಾಡಿಸೋಣ” ಎಂದು ಅನಿಸಿದ್ದು ಎಂದು ನೂರಿ ಹೇಳಿದಾಗ ಒಂದು ನಿಮಿಷ ಅವಕ್ಕಾದಳು.

ಹುಡುಗ ಮತ್ತೆ ಹುಡುಗಿಯ ಹಾಗೆ ಬದಲಾಗುವ ಪ್ರಕ್ರಿಯೆಯನ್ನ ಬಹಳ ಇನ್ಸೆನ್ಸಿಟೀವ್ ಆಗಿ ತನ್ನ ದೇಶದಲ್ಲಿ ನೋಡಿದ್ದಳು. ಅಂದರೆ ಆ ಪ್ರಕ್ರಿಯೆಯನ್ನು ಬಹಳ ಅಸಹ್ಯವಾಗಿಯೋ ಅಥವಾ ಹಾಸ್ಯಾಸ್ಪದವಾಗಿಯೋ ನೋಡಿದ್ದಳು.

ಇಲ್ಲಿ ನೂರಿ ಬಹಳ ಕಾನ್ಫಿಡೆಂಟಾಗಿ ಮಾತಾಡುತ್ತಿದ್ದಳು. “ನನ್ನಂಥಹವರಿಗೆ ಈ ಕತಲೂನ್ಯಾ ಸ್ವಾತಂತ್ರ್ಯ ಬಹಳ ಮುಖ್ಯ, ಜಗತ್ತಿನ ನಮ್ಮ ಎಲ್ಲಾ ಸ್ವಾತಂತ್ರ್ಯ ಹೋರಾಟ ಬರೀ ಒಂದು ಗಂಡು ಹೆಣ್ಣು ಪ್ರಬೇಧಕ್ಕೆ ಮಾತ್ರ ಸೇರುತ್ತದೆ, ಅವರಿಗೇನು ಅನುಕೂಲ, ಅವರಿಂದ ಏನು ಸಾಧನೆಯಾಯಿತು ಅದಷ್ಟೇ ಮಾತಾಡುತ್ತಾರೆ, ನಮಗೆ ಸ್ವತಂತ್ರ್ಯ ದೇಶದಲ್ಲೂ ಕೆಲವೊಮ್ಮೆ ಸ್ವಾತಂತ್ರ್ಯ ಇರುವುದಿಲ್ಲ, ಅಷ್ಟಕ್ಕೂ ಸ್ವಾತಂತ್ರ್ಯ ಎಂದರೇನು?

ಒಬ್ಬ ಮನುಷ್ಯ ಯಾವುದೇ ಭಯವಿಲ್ಲದೇ ತಾನು ಹೇಗಿದ್ದೀನೋ(ಕಾನೂನಿನ ಚೌಕಟ್ಟಿನಲ್ಲಿ) ಅದನ್ನು ಹಾಗೇ ಇರಬಹುದುದಾದ ಪ್ರಕ್ರಿಯೆ. ಅವನು ಇರುವ ಹಾಗೆ ಬಿಡುವುದೇ ಸ್ವಾತಂತ್ರ್ಯ” ಎಂದು ನೂರಿ ಹೇಳಿದಾಗ, “ತಾನು ಎಷ್ಟು ಸ್ವತಂತ್ರಳು” ಎಂಬ ಪ್ರಶ್ನೆ ಹುಡುಗಿಗೆ ಬಂದಿತು.

“ನೀನು ಹೆಣ್ಣು, ಹೆಣ್ಣುಮಕ್ಕಳಿಗೆ ಗಂಡುಮಕ್ಕಳಿಗಿಂತ ಸ್ವಾತಂತ್ರ್ಯ ಕಡಿಮೆ, ಅವರಿಗೆ ನಮಗೆ ಸರಿಸಮಾನವಾದ ಹಕ್ಕು ಬೇಕು ಎಂದು ನೀನು ಆರಾಮಾಗಿ ರಸ್ತೆಗೆ ಇಳಿಯಬಹುದು ಆದರೆ ನಾನು ಮತ್ತು ನಿನ್ನ ಹಿಂದೆ ಇದ್ದರಲ್ಲ ಅವರು ರಸ್ತೆಗಿಳಿಯೋದಕ್ಕೆ ಭಯ ಪಡುತ್ತಿದ್ದೆವು, ನೀನು ಹೆಣ್ಣಾಗಿದ್ದಕ್ಕೆ ಕಾನೂನು ಯಾವತ್ತೂ ಶಿಕ್ಷಿಸಿಲ್ಲ ಆದರೆ ನಾವು ಇರುವುದಕ್ಕೆ ಸಮಾಜ ಬಿಡು  ಕಾನೂನು ಸಹ ನಮ್ಮನ್ನು ಹಿಂಸಿಸುತ್ತಿತ್ತು.

ಈ ಸಲ ಅದಕ್ಕೆ ಹೋರಾಡುವ ವಿಷಯ ಬಂದಾಗ ಗಂಡು ಮಕ್ಕಳು, ಹೆಣ್ಣು ಮಕ್ಕಳು ಯಾರೂ ನಮಗೆ ನ್ಯಾಯ ಒದಗಿಸೋಲ ಎಂಬ ಅರಿವನ್ನು ಪಡೆದುಕೊಂಡೇ ನಾವು ರಸ್ತೆಗಿಳಿದ್ದದ್ದು, ನಮಗೆ ಕಾನೂನು ರೀತಿಯ ಪರಿಹಾರಗಳು, ಸಹಾಯ ಇಲ್ಲದಿದ್ದರೆ ಸ್ವತಂತ್ರವಾಗಿಯೂ ಏನು ಪ್ರಯೋಜನ” ಎಂದು ನೂರಿ ಹೇಳಿದಾಗ, “ಹೆಣ್ಣು ಮಕ್ಕಳು ಮಾತ್ರ ಶೋಷಿತರು , ಅವರಿಗೆ ಹಕ್ಕೇ ಇಲ್ಲ” ಎಂದೆಲ್ಲಾ ದೊಡ್ಡದಾಗಿ ಭಾಷಣ ಬಿಗಿಯುತ್ತಿದ್ದ ಹುಡುಗಿಗೆ ಅದಕ್ಕೂ ಕೆಳಮಟ್ಟವನ್ನ ನೂರಿ ತೋರಿಸಿದಳು.

“ನಿನಗೆ ಗೊತ್ತಾ ನಾವು ಟ್ರಾನ್ಸ್ ಅಂತಲೋ, ಗೇ ಅಂತಲೋ, ಲೆಸ್ಬಿಯನ್ ಅಂತಲೋ ಎಂದು ಹೇಳಿಕೊಂಡಾಗ ನಮ್ಮನ್ನು ಕನ್ವರ್ಷನ್ ಥೆರಪಿಗೆ ಕಳಿಸುತ್ತಿದ್ದರು ಮನೆಯವರು, ಕೆಲವು ಸರ್ಕಾರ ಕೃಪಾಪೋಷಿತವೇ, ನಮಗೆ ಕೌನ್ಸಲಿಂಗ್ ಮಾಡಿ ನಾವು ಮಾಡುತ್ತಿರುವ ಕೆಲಸ ಪ್ರಕೃತಿಗೆ ವಿರುದ್ಧವಾದ್ದದ್ದು, ದೇವರನ್ನು ನಂಬುವುವವರಾದರೆ ಅವರಿಗೆ ದೇವರಿಗೆ ಶಾಪ ಕೊಡುತ್ತಾನೆ ಎಂಬುದನ್ನು, ನಂಬದಿದ್ದ ನನ್ನಂಥವರಿಗೆ ಸಾಮಾಜಿಕ ಬಹಿಷ್ಕಾರ ಹಾಕಿಸೋದು, ಎರಡನೂ ನುಂಗಿಕೊಂಡವರನ್ನ “ಅನ್ ನ್ಯಾಚುಅರಲ್” ಎಂದು ಹೇಳಿ ಜೈಲಿಗೇ ಕಳಿಸುತ್ತಿದ್ದರು.

ನಮ್ಮ ಸಾವು, ನೋವಿಗೆ ಸರ್ಕಾರಿ ದಾಖಲೆಗಳೂ ಇಲ್ಲ. ತೀರ ಜುಲೈ 2016ರಲ್ಲಿ ಇದನ್ನೆಲ್ಲಾ ಬ್ಯಾನ್ ಮಾಡಿದ್ದು ಅದಕ್ಕೂ ಮುನ್ನ ಇವೆಲ್ಲವೂ ಲೀಗಲ್ ಆಗಿತ್ತು” ಅಂದಾಗ ಹುಡುಗಿ ಅವಕ್ಕಾಗಿ ನೋಡಿದಳು. ಅವಳ ಬಾಯಿಂದ ಮಾತೇ ಹೊರಡಲ್ಲಿಲ್ಲ.

“ಈಗ ಹೇಳು ಈ ಸ್ವಾಯತ್ತತೆ , ಸ್ವಾತಂತ್ರ್ಯ ಅನ್ನೋದು ಬರಿ ಭಾಷೆ, ಪ್ರಾಂತ್ಯ ಎಂಬುದನ್ನ ಮೈಮೇಲೆ ಹಾಕಿಕೊಂಡು ಕೆಚ್ಚೆದೆಯಿಂದ ಹೋರಾಡುತ್ತಾರೆ, ಯಾವುದೇ ಗಂಡು ಹೆಣ್ಣು ನಮ್ಮ ಹಕ್ಕಿಗಾಗಿ ಹೋರಾಡಲಿ ನೋಡೋಣ, ಮಾಡಲ್ಲ, ಯಾಕೆಂದರೆ ಅವರಿಗೇನೂ ಆಗಬೇಕಿಲ್ಲ, ಇಲ್ಲಿನ ಹೋರಾಟಗಳೂ ಅಷ್ಟೇ , ಬರಿ ಅವರವರದ್ದೇ ನೋಡಿಕೊಂಡು ಹೋಗುತ್ತಾರೆ, ನೀನು ಬರೀ ಗಂಡು ಕೇಂದ್ರಿತ ಹೋರಾಟ ಅನ್ನಬಹುದು.

ನಾನು ಇದು ಬರಿ ಗಂಡು ಹೆಣ್ಣು ಹೋರಾಟ ಎಂದಷ್ಟೇ ಅನ್ನುತ್ತೇನೆ, ಯಾವ ಸ್ವಾಯತ್ತತೆ ಬಂದರೂ ನಾನು ಆರಾಮಾಗಿ ಫ್ರೀ ಆಗಿ ಇರಬಹುದಾ ? ಅದು ನನ್ನ ಪ್ರಶ್ನೆ, ನನ್ನ ಹೋರಾಟ ಅದಷ್ಟಕ್ಕೆ, ನೀನು ಬಾರ್ಸಿಲೋನಾದಿಂದ ನಿನ್ನ ದೇಶಕ್ಕೆ ಹೋದಾಗ ಬಾರ್ಸಾ ನಿನ್ನ ಕನಸಿನ ಊರು ಎಂದು ಮಾತ್ರ ಹೇಳಿಕೊಂಡು ಹೋಗಬಾರದು, ಇಲ್ಲಿನ ಕಷ್ಟ, ನಷ್ಟಗಳನ್ನೂ ತಿಳಿದುಕೊಳ್ಳಲೇ ಬೇಕು, ಹಾಗೆ ನನ್ನ ಹೋರಾಟಕ್ಕೆ ನಿನ್ನ ಬೆಂಬಲವೂ ಬೇಕು” ಎಂದು ರೈನ್ ಬೋ ಬ್ಯಾಂಡ್ ಕಟ್ಟಿ ಮತ್ತೆ ನೂರಿ ಹಗ್ ಮಾಡಿದಳು. ಹುಡುಗಿ ಕಣ್ಣಲ್ಲಿ ಧಳ ಧಳ ನೀರು….

। ಮುಂದಿನ ವಾರಕ್ಕೆ ।

October 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಹುಡುಗಿ ಕಣ್ಣಲ್ಲಿ ಮಾತ್ರವೇ! ನನ್ನ ಕಣ್ಣೂ ನೀರಿಂದ ತುಂಬಿತು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: