ಅರ್ಥವಿಲ್ಲ, ಸ್ವಾರ್ಥವಿಲ್ಲ, ಬರಿಯ ಭಾವಗೀತ..

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು.

ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿ ಪಾದ’ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು ಕೇಳುಗರಿಗೆ ಒಂದು ರೀತಿಯ ಕಾಲಕೋಶ. ಹಾಡುಗಳ ಸಿ ಡಿ ಯನ್ನು ‘ಲಹರಿ’ ಹಾಗೂ ‘ಅವಧಿ’ ಜಂಟಿಯಾಗಿ ಹೊರತಂದಿದೆ.

ಈಗ ಸಿರಿ ಪಾದ ಹೆಸರಿನಲ್ಲಿ ಶ್ರೀಪಾದ್ ಭಟ್ ತಮ್ಮ ವಿಶೇಷ ರಂಗ ಅನುಭವವನ್ನು ಮುಂದಿಡಲಿದ್ದಾರೆ.

ನಾನೀಗ ಹೇಳ ಹೊರಟ ಕತೆಯ ಕಾಲ ೨೦೦೩ರ ನಡುವಿನದು. ಆಗ ಉತ್ತರಕನ್ನಡದ ಹೊನ್ನಾವರದಲ್ಲಿರುವ ಎಸ್.ಡಿಎಂ.ಕಾಲೇಜು ಸಾಹಿತ್ಯ, ನಾಟಕ, ಸಂಗೀತ ಕಲಿಕೆಗೆ ಹೆಸರುವಾಸಿಯಾಗಿತ್ತು. ಅಲ್ಲಿ ಪ್ರಾಂಶುಪಾಲರಾಗಿದ್ದ ಸಾಹಿತ್ಯಲೋಕದ ಹಿರಿಯರಾದ ವಿ.ಸೀತಾರಾಮಯ್ಯನವರು ಅದಕ್ಕೊಂದು ಘನತೆ ತಂದಿತ್ತಿದ್ದರು. ಅವರು ನಡೆದ ಮಾರ್ಗದ ಹೆಜ್ಜೆಗಳನ್ನು ಅನುಸರಿಸಿದ ಅನೇಕ ಅಧ್ಯಾಪಕ, ಪ್ರಾಂಶುಪಾಲರಿದ್ದರಲ್ಲಿ. ಅವರೆಲ್ಲರಿಂದಾಗಿ ಕಾಲೇಜೊಂದು ಊರಿನ ಸಾಂಸ್ಕೃತಿಕ ಸಂಘಟನೆಯ ಜವಾಬ್ದಾರಿಯನ್ನು ನಿರ್ವಹಿಸತೊಡಗುತ್ತ ನಿಜಾರ್ಥದಲ್ಲಿ ಶೈಕ್ಷಣಿಕವಾಗಿತ್ತು.

ಡಾ.ಎನ್.ಆರ್.ನಾಯಕರಂತಹ ಜನಪದ ವಿದ್ವಾಂಸರು ಪ್ರಾಂಶುಪಾಲರಾದ ಹೊತ್ತಂತೂ ಕಾಲೇಜಿನ ಚಟುವಟಿಕೆಗಳು ಊರಮಧ್ಯಕ್ಕೂ ಚಂದಕ್ಕೆ ಚಾಚಿತ್ತು. ಜಿ.ಎಸ್.ಅವಧಾನಿಯವರಂತಹ ಅಧ್ಯಾಪಕರು ಅದರ ನೇತೃತ್ವವಹಿಸಿದ್ದರು. ಮತ್ತು ಆ ಸಮಯದಲ್ಲಿ ಕೆಲಸಮಾಡುತ್ತಿದ್ದ ಅನೇಕ ಅಧ್ಯಾಪಕರು ಇಂತಹ ಚಟುವಟಿಕೆಗಳಲ್ಲಿ ನಿರಂತರ ಪಾಲ್ಗೊಳ್ಳುತ್ತಿದ್ದರು. ವಿಚಾರಸಂಕಿರಣಗಳು, ಸಂಗೀತ ಗೋಷ್ಠಿಗಳು, ಉಪನ್ಯಾಸಗಳು, ನಾಟಕಗಳು ಇವೆಲ್ಲ ಒಂದರೊಡನೆ ಒಂದು ಸಂಭಾಷಿಸುತ್ತ ಪರಸ್ಪರ ಉಸಿರು ಪಡೆವ ಕ್ರಿಯೆ ತುಂಬ ಸಹಜವಾಗಿತ್ತಲ್ಲಿ.

ಅಲ್ಲದೇ ಊರಚಟುವಟಿಕೆ ಬೇರೆ, ಕಾಲೇಜು ಚಟುವಟಿಕೆ ಬೇರೆ ಎಂಬ ಭಾವವೇ ಮೂಡದ ಪರಸ್ಪರ ಒಂದನ್ನು ಇನ್ನೊಂದು ಪ್ರಭಾವಿಸುವ ಆ ಪರಿ, ಇಂದಿಗೆ ‘ಸೋಜಿಗ’ ಅನಿಸಿದರೆ ಅದು ನಮ್ಮ ವರ್ತಮಾನದ ಪಾಪ ಅಷ್ಟೆ. ಅಂತದೇ ಸಂದರ್ಭದಲ್ಲಿ ಶ್ರೀನಿವಾಸಪ್ರಭು, ಮುಖ್ಯಮಂತ್ರಿಚಂದ್ರು ಇವರೆಲ್ಲ ಹೊನ್ನಾವರದಲ್ಲಿ ಶಿಬಿರ ನಡೆಸಿ ನಾಟಕ ಆಡಿಸಿದ್ದು.

ಬೆಂಗಳೂರಿನ ಜೋಕುಮಾರ ಸ್ವಾಮಿ ಮರು ರೂಪಾಂತರದೊಡನೆ ಹೊನ್ನಾವರದಲ್ಲೂ ಸೆಟ್ಟೇರಿತ್ತು. ಮುಂದೆ ಇಕ್ಬಾಲ್ ಅಹಮದ್, ಸುರೇಶ ಅನಗಳ್ಳಿ ಇವರೆಲ್ಲ ಕಾಲೇಜಿಗೆ ಬಂದು ರಂಗತರಬೇತಿ ನಡೆಸಿ ನಾಟಕಗಳನ್ನು ಆಡಿಸಿದರು. ಕಾಲೇಜಿನಲ್ಲೊಂದು ಚಂದದ ಬಯಲು ರಂಗಮಂದಿರ ನಿರ್ಮಾಣವಾಯಿತು. ಇಕ್ಬಾಲರ ‘ಮಿಡ್ ಸಮರ್’ ನಾಟಕಕ್ಕಾಗಿ ತನ್ನ ಒಂದು ಚಾವಣಿಯನ್ನೇ ಮುರಿದು ಮರು ಕಟ್ಟಿಸಿಕೊಂಡ ಕಾಲೇಜದು. ತಲೆಮಾರುಗಳ ಕಾಲ ಕಾಲೇಜು ಈ ರಂಗನಂಟನ್ನು ಉಳಿಸಿಕೊಂಡಿತ್ತು.

ಬಹುಶಹ ಮೂರನೇ ತಲೆಮಾರಿನ ಹುಡುಗರವರು; ನಾಟಕದ ಹುಚ್ಚನ್ನು ತುಸು ಹೆಚ್ಚೇ ಹಚ್ಚಿಕೊಂಡವರು. ಕಾಲೇಜಿನಲ್ಲಿ ಓದುತ್ತಿದ್ದ ಆ ಹುಡುಗರು ಸಂಜೆ ಕಾಲೇಜಿನ ಪಾಠಗಳ ಅವಧಿಯ ನಂತರ ಕಾಲೇಜಿನಲ್ಲೇ ರಾತ್ರಿಯೆಲ್ಲ ಉಳಿದು ನಾಟಕದ ತಾಲೀಮು ನಡೆಸುತ್ತಿದ್ದರು. ಸ್ವಾತಂತ್ರ್ಯದೆಡೆಗೆ, ಕಳ್ಳಿಯಲ್ಲಿ ಕೆಂಪು ಹೂ, ಯಾನ ಮುಂತಾದ ನಾಟಕಗಳನ್ನು ಆರ್.ಕೆ.ಶಿವಕುಮಾರ ಅನ್ನುವ ಹುಡುಗನ ನೇತೃತ್ವದಲ್ಲಿ ಕಟ್ಟುತ್ತಿದ್ದರು.

ನಮ್ಮೊಂದಿಗೆ ನಿರಂತರವಾಗಿ ನಾಟಕದಲ್ಲಿ ಪಾಲ್ಗೊಳ್ಳುತ್ತಿದ್ದ ಆ ಹುಡುಗ ನೀನಾಸಂ ತರಬೇತಿಗೂ ಹೋಗಿಬಂದನಂತರ ಹೊನ್ನಾವರ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ರಂಗತರಬೇತಿ ಆರಂಭಿಸಿದ್ದ. ಆ ಸಮಯ ನೌಕರಿ ಕಾರಣಕ್ಕಾಗಿ ಹಾವೇರಿಯ ಹಿರೇಕೆರೂರಿನ ಕಚವಿ ಎಂಬ ಪ್ರೌಢಶಾಲೆಯಲ್ಲಿದ್ದೆ ನಾನು. ಕಾಲೇಜು ಹುಡುಗರ ನಾಟಕ ಪ್ರಯೋಗದ ಮೊದಲ ಕೆಲದಿನಗಳು ತಂಡಕ್ಕೆ ಅಗತ್ಯ ನಿರ್ದೇಶನ ಸಹಾಯಮಾಡಲು ಹೋಗುತ್ತಿದ್ದೆ.

ನನ್ನಲ್ಲಿ ಆಗ ಎಂ.೮೦ ಗಾಡಿ ಇತ್ತು. ಸಂಜೆ ಶಾಲೆ ಮುಗಿದ ಮೇಲೆ ನಾನು ಅದರ ಮೇಲೇರಿ ೧೩೦ಕಿ.ಮೀ. ಪಯಣಿಸಿದರೆ ಹೊನ್ನಾವರ ಕಾಲೇಜು ಸಿಗುತ್ತಿತ್ತು. ನಾನು ರಾತ್ರಿ ೮ ಗಂಟೆಸುಮಾರಿಗೆ ಅಲ್ಲಿ ತಲುಪುತ್ತಿದ್ದೆ. ಅಷ್ಟು ಹೊತ್ತಿಗೆ ಬಯಲಲ್ಲಿ ಒಟ್ಟಿದ್ದ ಕಲ್ಲುಗಳ ಮೇಲೆ ಹತ್ತಾರು ಜನರಿಗೆ ಸಾಕಾಗುವಂತ ಅನ್ನಬೇಯುವಷ್ಟು ದೊಡ್ಡದಾದ ಅಲ್ಯುಮೀನಿಯಂ ಬೊಡ್ಡೆಯೊಂದರಲ್ಲಿ ನಮ್ಮ ಅಡುಗೆ ಬೇಯಲಾರಂಭವಾಗುತ್ತಿತ್ತು.

ಅಕ್ಕಿಯ ಜತೆಗೇ ತರಕಾರಿ ಮತ್ತು ಮೆಣಸು, ಉಪ್ಪು ಸಹ ಬೇಯುತ್ತಿದ್ದುದರಿಂದ ಮತ್ತೆ ಸಾರಿನ ಉಸಾಬರಿ ಅಗತ್ಯವಿರಲಿಲ್ಲ. ಎಲ್ಲವೂ ಬೆಂದ ಮೇಲೆ ಎಲ್ಲರೂ ನ್ಯೂಸ್ ಪೇಪರ್ ಮೇಲೆ ಅದನ್ನು ಮನಸೋ ಇಚ್ಛೆ ಸುರಿದುಕೊಂಡು ತಿನ್ನುತ್ತಿದ್ದೆವು. ನಂತರ ತಾಲೀಮು ಆರಂಭ. ರಾತ್ರಿ ೨ ಅಥವಾ ೩ ರನಂತರ ಅಲ್ಲಿಯ ತರಗತಿಕೋಣೆಯೊಳಗೇ ಮಲಗುವದು. ಮುಂಜಾನೆ ೭ ಗಂಟೆಗೆ ನನ್ನ ಗಾಡಿ ನನ್ನನ್ನು ಹೊತ್ತು ೧೩೦ ಕಿ.ಮೀ. ಪಯಣಿಸುತ್ತಿತ್ತು.

ಕಾಲೇಜಿನ ಕಾವಲುಗಾರನೂ ನಮ್ಮೊಂದಿಗೇ ಉಣ್ಣುತ್ತಿದ್ದ. ಆಗಾಗ ಉಪನ್ಯಾಸಕರು ರಾತ್ರಿ ಬಿಡುವಾದಾಗ ರಿಹರ್ಸಲ್ ನೋಡಲು ಬರುತ್ತಿದ್ದರು. ನಮ್ಮನ್ನೆಲ್ಲ ‘ನಾಟಕದ ನಕ್ಸಲರೆಂದು’ ಅವರೆಲ್ಲ ಪ್ರೀತಿಯಿಂದ ಕರೆಯುತ್ತಿದ್ದರು.

ಆ ಹುಡುಗರಲ್ಲಿ ಐದು ಮಂದಿಯಂತೂ ಅಸಾಧ್ಯರು. ನಾಟಕದ ಹುಚ್ಚಲ್ಲಿ ನನ್ನ ದೊಡ್ಡಪ್ಪಂದಿರು. ಅವರಿಗೆ ಓದುವಾಗ ನಾಟಕವಾಡಲು ದೊರೆತ ಈ ಅರೆಬರೆ ಸಮಯ ಏನೂ ಸಾಲದಂತೆನಿಸಿತು. ಹೀಗಾಗಿ ಮುಂದಿನ ಒಂದು ವರ್ಷಪೂರ್ಣ ನಾಟಕವಾಡಬೇಕೆಂದು ನಿಶ್ಚಯಿಸಿಬಿಟ್ಟರು. ಆ ಸಮಯವಂತೂ ಉತ್ತರಕನ್ನಡದಲ್ಲಿ ಆಧುನಿಕ ರಂಗಭೂಮಿ ಚಟುವಟಿಕೆ ಪೂರ್ಣಪ್ರಮಾಣದ ಹವ್ಯಾಸಿಯಾಗಿತ್ತು. ಆಗ ಅಂತೇನು? ಈಗಲೂ ಇಡೀಯ ಉತ್ತರಕನ್ನಡಜಿಲ್ಲೆಯಲ್ಲಿಯೇ ನಾಟಕವನ್ನಾಡುವ ಒಂದೇ ಒಂದು ಸಿದ್ಧರಂಗಮಂದಿರವಿಲ್ಲ.

ಆಧುನಿಕ ನಾಟಕದ ಬಹುದೊಡ್ಡ ಬೆಳಸೂ ಅಲ್ಲಿಲ್ಲ. ಹೊನ್ನಾವರ, ಸಿರಸಿ, ಸಿದ್ದಾಪುರ, ಅಂಕೋಲಾ ಈ ಕೆಲವು ಸ್ಥಳಗಳಲಷ್ಟೇ ನಾಟಕ ಚಟುವಟಿಕೆ ಅದರಲ್ಲೂ ತಾಲೂಕು ಕೇಂದ್ರವನ್ನು ಆಶ್ರಯಿಸಿ ಬದುಕಿದೆ. ಆಗಲಂತೂ ಕೇಳೋದೇ ಬೇಡ. ಇಂಥ ಸಮಯದಲ್ಲಿ ಈ ಹುಚ್ಚರನ್ನು ರಂಗಭೂಮಿ ಸಲಹೋದೆಂತು? ಅವರಂತೂ ನಾಟಕ ಮಾಡೋದು ತಮ್ಮ ಸಾವು ಬದುಕಿನ ಪ್ರಶ್ನೆ ಎಂಬಂತೆ ನಿಂತೇ ಬಿಟ್ಟಿದ್ದರು. ಆ ದಿನಗಳಲ್ಲಿ ಜತೆಗೇ ಇದ್ದ ಹಿರಿಯ ರಂಗ ನಿರ್ದೇಶಕ ಕಿರಣಭಟ್ ಅದನ್ನು ನೆನಪಿಸಿಕೊಳ್ಳೋದು ಹೀಗೆ.

“ ಇಂಥ ನಾಟಕದ ಹುಚ್ಚರನ್ನ ನಾನು ಕಂಡಿದ್ದೇ ಇಲ್ಲ. ಕಾಲೇಜಿನ ಬಯಲು ರಂಗದಲ್ಲಿ ಸುರೀತಿರೋ ಬೆವರು ಮತ್ತು ಪಕ್ಕದಲ್ಲಿ ಕುದೀತಿರೋ ಅನ್ನದ ಜತೆಗೇ ಕಂಡೆ ನಾನವರನ್ನ. ಕಾಲೇಜು ಮುಗಿಸಿ ರಂಗಭೂಮಿಯನ್ನು ಬದುಕುವ ಅವರ ಇರಾದೆಗೆ ಮಾದರಿಯೊಂದನ್ನು ಹುಡುಕಬೇಕು, ನಾಟಕ ಬರೆಸಬೇಕು, ಆಡಿಸಬೇಕು, ಪರಿಕರ ಹೊಂದಿಸಬೇಕು, ಸಧ್ಯ ಅವರೆಲ್ಲ ಒಂದೆಡೆ ಉಳಿಯುವ ವ್ಯವಸ್ಥೆ ಮಾಡಬೇಕು. . .

ಆದರೆ ಇದಕ್ಕೆಲ್ಲ ಕಾಸು ಕೊಡರ‍್ಯಾರು? ಮತ್ಯಾರು? ಶ್ರೀಪಾದ್ ಮತ್ತು ನಾನು. ಜೇಬಿನಿಂದ ಅಷ್ಟು ಹಣಹಾಕಿ ಆರಂಭಿಸೋಕೆ ನಿರ್ಧರಿಸಿದೆವು. ಆಗ ಬಂದ ಯೋಚನೆ ಪಾಠ ನಾಟಕ ರೆಪರ್ಟರಿ.

ಈ ನಟರುಗಳ ನಟನೆಯ ಹಸಿವನ್ನು ತಣಿಸುವ, ಜತೆಗೆ ಅವರ ದೈನಂದಿನ ಬದುಕಿನ ನಿರ್ವಹಣೆಯನ್ನೂ ತುಸುವಾದರೂ ನಿಭಾಯಿಸುವ ಮತ್ತು ನಮ್ಮ ಇದುವರೆಗಿನ ಅನುಭವ ಮತ್ತು ಆಸಕ್ತಿಗನುಗುಣವಾಗಿ ರಂಗಭೂಮಿ ಮತ್ತು ಶಿಕ್ಷಣದ ಸಮಾಸಕ್ಕಾಗಿ ಪ್ರಯತ್ನಿಸುವ ಹಲವು ಚಿಂತನೆಗಳು ಸೇರಿ ರೂಪುಗೊಂಡಿದ್ದದು ‘ಪಾಠ ನಾಟಕ ರೆಪರ್ಟರಿ’.

ನಿಜ. ಶಿಕ್ಷಣ ಮತ್ತು ರಂಗಭೂಮಿಗೆ ಸಂಬಂಧಿಸಿ ಹಲವು ಚಟುವಟಿಕೆಗಳನ್ನು ಬಿಡಿ ಬಿಡಿಯಾಗಿ ಮಾಡುತ್ತಲೇ ಇದ್ದೆವು ನಾವು. ನಾನು ಅದಾಗಲೇ ಭಾರತ ಜ್ಞಾನವಿಜ್ಞಾನ ಸಮಿತಿಯ ಸಂತಸ ಕಲಿಕೆಯ ಚಿಣ್ಣರ ಮೇಳಗಳಲ್ಲಿ ಪಾಠ ನಾಟಕದ ಕಾರ್ನರ್ ಆರಂಭಿಸಿ ನೂರಾರು ತರಬೇತಿ ನಡೆಸಿದ್ದೆವು, ಡಾ.ಆರ್.ವಿ.ಭಂಡಾರಿಯವರ ಮಕ್ಕಳ ನಾಟಕಗಳನ್ನು ಶಿರಸಿಯ ಹತ್ತಿರದ ಶಾಲೆಗಳಲ್ಲಿ ದೊಡ್ಡವರಿಂದ ಪ್ರದರ್ಶಿಸಿದ್ದೆವು.

ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಶಿಕ್ಷಕರಿಗೆ ರಂಗತರಬೇತಿ ನಡೆಸಿದ್ದೆವು ಅಲ್ಲದೇ ಪ್ರತಿ ವರ್ಷ ಒಂದು ನಿರ್ದಿಷ್ಟ ‘ಥೀಮ್’ ಇಟ್ಟುಕೊಂಡು ವಿಶಿಷ್ಟಬಗೆಯ ಮಕ್ಕಳ ಕ್ಯಾಂಪ್ ಗಳನ್ನು ರಾಜ್ಯದ ಬೇರೆ ಬೇರೆಡೆಗೂ ನಡೆಸುತ್ತಿದ್ದೆವು. ಇವೆಲ್ಲ ಅನುಭವ ಇದೀಗ ನೆರವಿಗೆ ಬಂತು.

ಏನು ಗೊತ್ತಾ? ‘ನಿಜವಾದ’ ಶಾಲೆಯೊಂದರ ಚಟುವಟಿಕೆ ರಂಗಚಟುವಟಿಕೆಯ ಸ್ವರೂಪವನ್ನೇ ಹೊಂದಿರುತ್ತದೆ. ರಂಗಭೂಮಿಯೂ ಅಷ್ಟೆ. ಸಮಾಜ ಶಿಕ್ಷಣದ ಕೇಂದ್ರಗಳವು. ಅಲ್ಲಿ ನಟರು ಪಠ್ಯವೊಂದನ್ನು ಪ್ರೇಕ್ಷಕರಿಗೆ ಸಂವಹನಗೊಳಿಸುವ, ಮುಟ್ಟಿಸುವ ಕ್ರಿಯೆಯಲ್ಲಿ ತೊಡಗುತ್ತಾರೆ. ಶಾಲೆಗಳಲ್ಲಿ ಶಿಕ್ಷಕರು ಪಠ್ಯವನ್ನು ವಿದ್ಯಾರ್ಥಿಗಳಿಗೆ ಸಂವಹಿಸುವ, ಮುಟ್ಟಿಸುವ ಕ್ರಿಯೆಯಲ್ಲಿ ತೊಡಗಿರುತ್ತಾರೆ.

ಸಮಾಜದಂತೆಯೇ ಶಾಲೆಯಲ್ಲಿಯೂ ಕಲಿಸುವ ಕಲಿಯುವ ಪ್ರಕ್ರಿಯೆ ಪರಸ್ಪರ ನಡೆದೇ ಇರುತ್ತದೆ. ರಂಗಕ್ರಿಯೆಯಯ ಮೂಲ ಮಾದರಿಯೇ ಈ ಪ್ರಕ್ರಿಯಾಧಾರಿತವಾದುದು. ಸಂವಹನದ ಅಂತಿಮ ಸಾಧ್ಯತೆಯ ಶೋಧವೇ ರಂಗಭೂಮಿಯದಾದರೆ, ಶಿಕ್ಷಣ ಕ್ಷೇತ್ರ ಸಂವಹನದ ಭಿನ್ನ ಮಾದರಿಗಳನ್ನು ಹುಡುಕಿಕೊಳ್ಳುತ್ತಲೇ ಇರುತ್ತದೆ. ಈ ನಿಟ್ಟಿನಲ್ಲಿ ರಂಗಮುಖೇನ ಶಿಕ್ಷಣ, ಶಿಕ್ಷಣ ಕ್ಷೇತ್ರದ ಅಪಾರ ಸಾಧ್ಯತೆಗಳನ್ನು ಸಾಧ್ಯವಾಗಿಸುವಲ್ಲಿ ನೆರವು ನೀಡುತ್ತದೆ.

ಇದು ಸ್ಥೂಲವಾಗಿ ರಂಗಮುಖೇನ ಶಿಕ್ಷಣದ ತಾತ್ವಿಕ ಗ್ರಹಿಕೆ. ತರಗತಿಕೋಣೆಯಲ್ಲಿ ಶಿಕ್ಷಕರು ನಡೆಸಬಹುದಾದ ರಂಗಚಟುವಟಿಕೆಗಳಿಗೆ ಹಲವು ಮುಖಗಳಿವೆ. ದೈನಂದಿನ ಬೋಧನೆಯಲ್ಲಿ ಅವರು ರಂಗಚಟುವಟಿಕೆಗಳ ಎನರ್ಜಿಯನ್ನು ಬಳಸಿಕೊಳ್ಳುವದು, ಪಾಠನಾಟಕಗಳನ್ನು ಸಿದ್ಧಪಡಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುವದು, ಕಥಾಕಾರ್ನರ್, ಕಾವ್ಯಕಾರ್ನರ್ ಮುಂತಾದ ಚಟುವಟಿಕೆಗಳ ಮೂಲಕ ರಂಗಾತ್ಮಕ ಅನುಭವ ಒದಗಿಸುವದು ಹೀಗೆ ಹಲವು ಮಾದರಿಗಳು ಲಭ್ಯವಿದೆ.

ಶಿಕ್ಷಕರ ಪಠ್ಯ ಪ್ರವೇಶ, ತರಗತಿಯೊಳಗಿನ ಚಲನೆ, ಬೋಧನಾ ಪರಿಕರದ ಸೃಜನಶೀಲ ಬಳಕೆ ಇಂಥ ಹಲವು ಕಡೆಗಳಲ್ಲಿ ರಂಗ ತನ್ನ ಸಾಂಗತ್ಯ ನೀಡಬಲ್ಲದು. ಈ ನಿಟ್ಟಿನಲ್ಲಿ ಪಾಠನಾಟಕ ಪ್ರಯೋಗ ಒಂದು ಮಹತ್ವದ ಚಟುವಟಿಕೆ. ಹಾಗೆ ನೋಡಿದರೆ ನಾವು ಬೇರೆ ಸಾಮಾಜಿಕ ಪಠ್ಯಗಳನಿಟ್ಟುಕೊಂಡೇ ನಾಟಕಪ್ರಯೋಗ ನಡೆಸಬಹುದಿತ್ತು. ಆದರೆ ಆಗ ನಮಗೆ ತಾಂತ್ರಿಕವಾಗಿ ಪಾಠ ನಾಟಕಗಳೇ ಅಗತ್ಯವಾಗಿತ್ತು.

ನಾಟಕ ರೆಪರ್ಟರಿ ನಡೆಸಲು ನಮಗೆ ಶಾಲೆಗಳು ಆ ಕಾಲಕ್ಕೆ ಅಗತ್ಯವಾದ ಪ್ರೇಕ್ಷಕರನ್ನೂ, ಸ್ಥಳವನ್ನೂ ಒದಗಿಸಬಲ್ಲುದಾಗಿತ್ತು. ಆದರೆ ದಿಢೀರ್ ಅಂತ ನಾಟಕವನ್ನು ಎತ್ತಿಕೊಂಡು ಶಾಲೆಗಳೊಳಗೆ ಪ್ರವೇಶಿಸೋದಾರೂ ಹೇಗೆ? ರುಚಿ ಹತ್ತದೇ ಅಭಿರುಚಿ ಮೂಡೋದಕ್ಕೆ ಸಾಧ್ಯಾನಾ? ಹೀಗಾಗಿ ನಾವು ಪಾಠಗಳನ್ನೇ ನಾಟಕವಾಗಿಸಿಕೊಳ್ಳುವ ಯೋಜನೆ ಸಿದ್ಧಪಡಿಸಿದೆವು. ಪಾಠಗಳೇ ಆಗಿರುವದರಿಂದ ಶಾಲೆಗಳೊಳಗೆ ನಮ್ಮ ಪ್ರವೇಶ ಸುಲಭವಾಗುತ್ತದೆ.

ಶಿಕ್ಷಕರನ್ನು ಬೇಗ ವಿಶ್ವಾಸಕ್ಕೆ ತೆಗೆದುಕೊಳ್ಳಬಹುದು. ‘ಇದೂ ಸಹ ಪಠ್ಯವೇ’ ಅಂತ ಅವರಿಗನ್ನಿಸದಿದ್ದರೆ ‘ಸಹಪಠ್ಯ’ ಎನ್ನುವ ಪಠ್ಯೇತರ ಗುಂಪಿನಲ್ಲಿ ಇವನ್ನು ಎತ್ತಿಹಾಕಿ ಬಿಡುತ್ತಾರೆ. ಹೀಗಾಗಿ ಶಾಲೆಗಳ ಪ್ರವೇಶಕ್ಕೆ ನಮಗೆ ಪಾಠಗಳ ನೆವವೂ ಬೇಕಿತ್ತು. ಆದರೆ ನಮ್ಮ ಉದ್ದೇಶ ಶಾಲಾ ಪ್ರವೇಶವೊಂದೇ ಅಲ್ಲವಲ್ಲ. ಭಾಗವಹಿಸುವ ನಟರಿಗೂ ಮತ್ತು ವಿದ್ಯಾರ್ಥಿಗಳಿಗೂ ರಂಗಾನುಭವವೂ ದೊರಕಿಸಿಕೊಡೋದೂ ನಮ್ಮ ಅಗತ್ಯವಾಗಿತ್ತು.

ಅದೇನೋ ಒಂದು ಚಿಕ್ಕ ಚಟುವಟಿಕೆ ಆಯ್ತು ಅಂತಮಾತ್ರ ಆಗದೇ ಅದು ಒಂದು ಅನುಭವವೂ ಆಗಿ ರೂಪುಗೊಳ್ಳುವಂತೆ ಯೋಜಿಸಬೇಕಿತ್ತು. ಅದಕ್ಕಾಗಿ ಆಯ್ದ ಪಾಠಗಳನ್ನು ಪೂರ್ಣಪ್ರಮಾಣದ ನಾಟಕಗಳನ್ನಾಗಿ ಬರೆಸಿದೆವು. ಅದು ಪಾಠವೂ ಆಗಬೇಕು ಮತ್ತು ಅದೇಕಾಲಕ್ಕೆ ನಾಟಕವೂ ಆಗಬೇಕು.

ಅಂತಹ ೨೦ ನಿಮಿಷಗಳ ಪೂರ್ಣಾವಧಿ ನಾಟಕಗಳನ್ನು ಪಾಠಗಳನ್ನಾಧರಿಸಿ ಬರೆದುಕೊಡಲು ಹೂಲಿಶೇಖರ, ಆರ್.ವಿ.ಭಂಡಾರಿ, ಐ.ಕೆ.ಬೊಳುವಾರು, ಮೂರ್ತಿದೇರಾಜೆ, ಯವರನ್ನು ಕೇಳಿಕೊಂಡೆವು. ಆಶುವಿಸ್ತರಣೆಗಾಗಿ ಒಂದೆರಡು ಕವನಗಳನ್ನೂ ಇಟ್ಟುಕೊಂಡೆವು. ತುಂಬ ಚಂದದ ನಾಟಕಗಳು ರಚಿತಗೊಂಡವು.

ಟಿಪ್ಪುವಿನ ಕನಸು, ಅಜ್ಜಿಯ ಜಂಬ, ತಿರುಕನ ಕನಸು, ಉಪಾಯಬಲ್ಲವನಿಗೆ ಅಪಾಯವಿಲ್ಲ ಹಾಗೂ ಬಾವಿಯಲ್ಲಿ ಬಿದ್ದ ಚಂದ್ರ ಕವನ ರೂಪುಗೊಂಡಿತು. ಐ.ಕೆ.ಬೊಳುವಾರು ಅವರು ಪ್ರೀತಿಯಿಂದ ತಾಲೀಮಿನ ದಿನಗಳಿಗೇ ಒದಗಿದರು. ಶಿರಸಿಯ ಸದಾನಂದ ಶ್ಯಾನಭಾಗ (ಪುತ್ತಣ್ಣ) ವಸ್ತ್ರ ವಿನ್ಯಾಸ ಮಾಡಿಕೊಟ್ಟರೆ, ದಾಮೋದರ ನಾಯ್ಕ ಮತ್ತು ಚಂದ್ರು ಉಡುಪಿ ರಂಗಪರಿಕರ ಸಿದ್ಧಮಾಡಿಕೊಟ್ಟರು.

ಹಗಲು ಹೊತ್ತಿನಲ್ಲಿ ಕಾಲೇಜು ಗುಡ್ಡದ ಹಿಂಭಾಗದ ಮರಗಳ ನೆರಳಲ್ಲಿಯೂ, ರಾತ್ರಿವೇಳೆ ಹೊನ್ನಾವರದ ನಮ್ಮ ಸಂಬಂಧಿಯೊಬ್ಬರ ಮನೆ ಮಾಳಿಗೆ ಮೇಲೆಯೂ ತಾಲೀಮು ನಡೆಯಿತು. ಕಾಲೇಜು ಸಮೀಪದ ಒಂದು ಚಿಕ್ಕ ಕೊಠಡಿಯನ್ನು ಕಲಾವಿದರ ನಿವಾಸಕ್ಕಾಗಿ ಬಾಡಿಗೆಗೆ ಪಡೆಯಲಾಯಿತು. ಮನೆಗಳಲ್ಲಿದ್ದ ಹಳೆಯ ಸ್ಟೋ, ಪಾತ್ರೆಗಳು ಆ ಕೊಠಡಿಯ ಪಾಕಶಾಲೆಯನ್ನು ಅಲಂಕರಿಸಿದವು.

ನಾಟಕ ಸಿದ್ಧವಾಯಿತು. ಹೊನ್ನಾವರ ತಾಲೂಕಿನ ಒಂದಿಷ್ಟು ಪರಿಚಿತ ಶಾಲೆಗಳ ಶಿಕ್ಷಕರುಗಳನ್ನು ಸಂಪರ್ಕಿಸಿ ಪ್ರದರ್ಶನಕ್ಕೆ ಸ್ಥಳ ಮತ್ತು ದಿನಾಂಕ ಪಡೆಯಲಾಯಿತು. ಈ ಹಿಂದೆ ಸಾಕ್ಷರತಾ ಆಂದೋಲನದಲ್ಲಿ ಪರಿಚಿತರಾದ ಸಂಬಂಧಿಗಳಾಗಿದ್ದ ಶಿಕ್ಷಕರನ್ನು ಭೇಟಿಯಾಗಿ ಸಹಾಯ ಕೇಳಿದೆವು. ಅವರು ಮಾಡಬೇಕಿದ್ದ ಸಹಾಯವೆಂದರೆ ನಾಟಕ ಪ್ರದರ್ಶನಕ್ಕೆ ಮಕ್ಕಳು ಕುಳಿತುಕೊಳ್ಳಬಹುದಾದ ಸ್ಥಳ ತೋರಿಸುವದು, ಆ ದಿನ ಮಕ್ಕಳಿಗೆ ಸಾಧ್ಯವಾದಷ್ಟು ಚಿಲ್ಲರೆ ಕಾಸು ತರಲು ಹೇಳುವದು, ಸಾಧ್ಯವಾದರೆ ನಟರಿಗೆ ಒಂದು ಊಟಕೊಡುವದು.

೬ ಜನ ನಟರು. ನಾಟಕದಲ್ಲಿ ಅವರು ಹಾಕಿಕೊಳ್ಳುವ ಬಟ್ಟೆ ಮತ್ತು ಪರಿಕರಗಳನ್ನು ಇಟ್ಟುಕೊಳ್ಳಲು ಗುಟಕಾ ಮಾರಾಟಕ್ಕೆಂದು ಬರುತ್ತಿದ್ದ ದೊಡ್ಡ ಸೈಜಿನ ೬ ಚೀಲಗಳು. ಅದು ಅವರ ಪಾತ್ರಗಳ ಆಸ್ತಿ. ಅದರ ಜತೆ ಪಾಠನಾಟಕಗಳ ಪೇಂಟಿಂಗ್ ಮತ್ತು ಕೆಲವು ಮಕ್ಕಳ ಪುಸ್ತಕಗಳು ಇವಿಷ್ಟನ್ನು ಅವರು ತಮ್ಮ ಜತೆಗೆ ಬಸ್ಸಿನಲ್ಲಿ ಒಯ್ಯಬೇಕಿತ್ತು.

ಅವರು ಮುಂಜಾನೆಯ ಬಸ್ಸಿನಲ್ಲಿ ನಿಗಧಿತ ಶಾಲೆಗೆ ಹೋಗುತ್ತಿದ್ದರು, ಪೇಂಟಿಂಗ್‌ಗಳನ್ನು ಪ್ರದರ್ಶಿಸುತ್ತಿದ್ದರು, ಶಾಲೆಯ ವರಾಂಡದ ಮೇಲೆಯೋ, ದೊಡ್ಡಕೋಣೆಯಲ್ಲಿಯೋ ಅಥವಾ ಬಯಲಿನಲ್ಲಿಯೋ ನಾಟಕ ಪ್ರದರ್ಶನ ಮಾಡುತ್ತಿದ್ದರು, ನಂತರ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಸರಳ ಬೆಲೆಯ ಉತ್ತಮ ಪುಸ್ತಕಗಳನ್ನು ಮಾರುತ್ತಿದ್ದರು, ಅಲ್ಲಿ ಮಕ್ಕಳಿಂದ ಮತ್ತು ಶಿಕ್ಷಕರಿಂದ ಸಂಗ್ರಹವಾದ ಚಿಲ್ಲರೆಗಳನ್ನು ಸಂಗ್ರಹಿಸಿ ವಾಪಾಸು ರೂಮಿಗೆ ಬಂದು ಸಮನಾಗಿ ಅವನ್ನು ಹಂಚಿಕೊಳ್ಳುತ್ತಿದ್ದರು. ಅವರ ಬದುಕು ಸರಳವಾಗಿತ್ತು, ಗುರಿ ನೇರವಾಗಿತ್ತು.

ಬಹು ಬೇಗ ಪಾಠ ನಾಟಕಗಳು ಹೆಸರು ಪಡೆದವು. ದಿವಸಕ್ಕೆ ೨ ಪ್ರದರ್ಶನವಂತೂ ಖಾತ್ರಿ. ಶಿಕ್ಷಕ ತರಬೇತಿ ಕೇಂದ್ರಗಳು ಅವರನ್ನು ಕರೆಸಿ ಶಿಕ್ಷಕರಿಗಾಗಿ ಪ್ರದರ್ಶನಗಳನ್ನೂ, ತರಬೇತಿಗಳನ್ನೂ ಮಾಡಿಸಿದರು. ಉತ್ತರ ಕನ್ನಡ ಜಿಲ್ಲೆಯ ನಂತರ ಹಾವೇರಿ ಮತ್ತು ಶಿವಮೊಗ್ಗಗಳಲ್ಲಿಯೂ ನೂರಾರು ಪ್ರಯೋಗಗಳಾದವು. ನಟರೆಲ್ಲ ಅವರು ನಿರ್ವಹಿಸುತ್ತಿದ್ದ ಪಾತ್ರಗಳಿಂದಲೇ ಫೇಮಸ್ಸು ಆಗಿದ್ದೂ ಇದೆ.

ಅಜ್ಜಿಯ ಜಂಬ ನಾಟಕದಲ್ಲಿ ಕೋಳಿಯ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದ ಶ್ರೀನಿವಾಸ ನಾಯ್ಕ, ಇಂದಿಗೂ ನಮ್ಮ ನಡುವೆ ಕೋಳೀಶೀನ ಎಂದೇ ಖ್ಯಾತಿ. ಟಿಪ್ಪು ಸುಲ್ತಾನನಾಗಿದ್ದ ಸಂತೋಷ ಸಂಕೊಳ್ಳಿ, ‘ಸಂಕೊಳ್ಳಿ ಟಿಪ್ಪುʼ ಎಂದೇ ಪ್ರಸಿದ್ದನಾಗಿದ್ದ. ನಾಟಕ ಪ್ರಯೋಗದ ಆ ಮಾದರಿಯೇ ಮುಂದೆ ಬೆಳೆಯುತ್ತ ಕಾವ್ಯರಂಗ , ಪಾಪುಬಾಪು ಮುಂತಾದ ನಾಟಕಗಳಿಗೆ ಬೇಕಾದ ವಿನ್ಯಾಸ ಒದಗಿಸಿತು.

ನಾಲ್ಕು ನಾಟಕ ಮತ್ತೊಂದು ಕವನವನ್ನು ಅಭಿನಯಿಸುತ್ತಿದ್ದೆವಲ್ಲಾ, ಅವುಗಳಲ್ಲಿ ಮಕ್ಕಳಿಗೆ ಯಾವುದು ಇಷ್ಟವಾಗುತ್ತದೆ ಅಂತ ನಾವು ಹುಡುಕೋದಿತ್ತು. ಅನೇಕ ವೇಳೆ ನಮ್ಮ ತೀರ್ಮಾನಗಳು ತಲೆಕೆಳಗಾಗುತ್ತಿದ್ದವು. ಉಧಾ. ‘ಬಾವಿಯಲ್ಲಿ ಬಿದ್ದ ಚಂದ್ರ’ ಕವನದ ರಂಗಪ್ರಯೋಗ ನಮಗೆಲ್ಲ ಅಂದರೆ ದೊಡ್ಡವರಿಗೆಲ್ಲ ಬಹು ಇಷ್ಟವಾಗಿತ್ತು.

ಅದರಲ್ಲಿಯೂ ಶ್ರೀನಿವಾಸನು ಫ್ರಾಕ್, ಸ್ಕರ್ಟ್ ಹಾಕಿ ಹುಡುಗಿಯಾಗಿ ಕುಣಿಯುತ್ತಿದ್ದರೆ ಉಲ್ಲಸಿತವಾದ ಮುಗ್ಧ ಜಗತ್ತು ಕುಣಿದಂತೆ ಭಾಸವಾಗ್ತಿತ್ತು.! ಮಕ್ಕಳಿಗೂ ಅದು ಬಹಳ ಖುಷಿಯಾದ, ಇಷ್ಟವಾದ ಪ್ರದರ್ಶನ ಅಂತ ನಾವಂದುಕೊಂಡಿದ್ರೆ ಅವರಿಗೆ ಅದಕ್ಕಿಂತ ಹೆಚ್ಚಾಗಿ ಟಿಪ್ಪು ಸುಲ್ತಾನ ಫೇವರೇಟ್ ಆಗಿದ್ದ. ದೊಡ್ಡೋರಾಗ್ತಾ ನಾವು ಬಾಲ್ಯಜಗತ್ತನ್ನು ಕಟ್ಟಿಕೊಂಡು ಖುಷಿ ಪಟ್ರೆ ಅವರು ದೊಡ್ಡೋರಾಗೋಕೆ ಇಷ್ಟಪಡ್ತಿದ್ರು! “ನಾನು ಮಾತ್ರ ಇಷ್ಟೇ ಸಣ್ಣ ಯಾಕೋ ಗೊತ್ತಿಲ್ಲ” ಎಂಬ ಮಕ್ಕಳ ಕವನ ನೆನಪಾಗಿತ್ತು ನಂಗೆ.

ಮೊನ್ನೆ ಆಗ ರೆಪರ್ಟರಿಯಲಿದ್ದ ಇಬ್ಬರು ನಟರನ್ನು ಕೇಳಿದೆ. ಏನ್ರಯ್ಯಾ? ಈಗ ಏನನಿಸ್ತದೆ ಆದಿನಗಳ ಬಗ್ಗೆ ಅಂತ. ಅವರಲ್ಲೊಬ್ಬ ಕೋಳಿ ಶೀನ ಖ್ಯಾತಿಯ ಶ್ರೀನಿವಾಸ ನಾಯ್ಕ. ಅವನೀಗ ಕುಮಟಾದಲ್ಲಿರುವ ಮುರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲನಾಗಿ ಕೆಲಸ ಮಾಡ್ತಿದಾನೆ. ನಿರಂತರವಾಗಿ ರಂಗಚಟುವಟಿಕೆಗಳನ್ನು ಶಾಲೆಯಲ್ಲಿ ಸಂಘಟಿಸುತ್ತಲೇ ಇರುತ್ತಾನೆ.

“ಅದೆಷ್ಟೋ ಸಲ ಅರೆಹೊಟ್ಟೆ, ಏನೂ ಉಪಯೋಗಕ್ಕೆಬಾರದವ ಎಂಬರೀತಿಯಲ್ಲಿ ಮನೆಮಂದಿ ಬೀರುವ ಉಘ್ರನೋಟ ಇವು ಹೈರಾಣಾಗಿಸುತ್ತದೆ ನಮ್ಮನ್ನು ಎನಿಸಿದಾಗಲೆಲ್ಲ ಪ್ರದರ್ಶನದಲ್ಲಿ ಸಿಗುವ ಆನಂದ ನಮ್ಮನ್ನು ಕಾಪಾಡುತ್ತಿತ್ತು. ಇಂದು ಶಾಲೆಯೊಂದನ್ನು ಸಮಾಜದ ಜತೆ ಬೆಸೆಯುವ ಕೆಲಸವನ್ನೇನಾದರೂ ನಾನು ಮಾಡಿದ್ದರೆ ಅದಕ್ಕೆ ಕಾರಣ ಆ ಸಮಯದ ಕಲಿಕೆಯೇ ಆಗಿದೆ” ಎಂದ.

ಇನ್ನೊಬ್ಬ, ಸಂತೋಷ ಸಂಕೊಳ್ಳಿ. ಸಂಕೊಳ್ಳಿ ಟಿಪ್ಪುಸುಲ್ತಾನ. ಈಗ ಕಲೆಯನ್ನೇ ಬದುಕಿನ ಮುಖ್ಯ ಆಧಾರವಾಗಿ ಆಯ್ದುಕೊಂಡವನು. ಅವನಂತಾನೆ “ ಪಾಠ ನಾಟಕ ತಿರುಗಾಟ ಮಾಡಿದೆವು ನಿಜ. ಅದರಿಂದ ನಾವು ಕಲಿತ ಪಾಠವೇ ಹೆಚ್ಚು. ಊರಿಂದ ಊರಿಗೆ ಶಾಲೆಯಿಂದ ಶಾಲೆಗೆ ಗೋಣಿಚೀಲದಲ್ಲಿ ಪರಿಕರವನ್ನು ಹೊತ್ತೊಯ್ಯುತ್ತಿದ್ದೆವು.

ನಮ್ಮ ಕೈಚೀಲದಲ್ಲಿ ಬಾವಿಯಲ್ಲಿ ಬಿದ್ದ ಚಂದ್ರನಿದ್ದ, ಟಿಪ್ಪುವಿನ ಖಡ್ಗವಿತ್ತು, ಬಾಯ್ತೆರೆದ ಮೊಸಳೆಯ ಮುಖವಿತ್ತು. ಹೆಗಲಮೇಲೆ ಮುಂದಿನ ಕನಸೂ ಇತ್ತು. ಶಾಲೆಯಲ್ಲಿ ಸಿಕ್ಕ ಚಿಲ್ಲರೆಗಳನ್ನು ಹಂಚಿಕೊಳ್ಳುವಾಗ ದಾರಿ ಸರಿ ಇದೆಯೋ ಇಲ್ಲವೋ ಎಂಬ ಭಯವೂ ಇತ್ತು. ಆದರೆ ಇಂದು ಕಲೆಯನ್ನೇ ನಂಬಿ ಅದನ್ನೇ ವೃತ್ತಿಯಾಗಿಸಿಕೊಂಡು ಎಲ್ಲರಂತೆ ಬದುಕುತ್ತಿದ್ದೇವೆ.

ಪಾಠ ನಾಟಕ ರೆಪರ್ಟರಿ ಬದುಕಿಗೆ ಬೇಕಾದದ್ದು ಎಲ್ಲವನ್ನೂ ಕಲಿಸಿತು ಎಂದು ಹೇಳುತ್ತಿಲ್ಲ, ಬದಲಾಗಿ ಅದು ಬದುಕು ಹೇಗೆಲ್ಲ ಇದೆ ಎಂದು ಕಲಿಸಿತು. ಚಂದ್ರ, ಖಡ್ಗ, ಮೊಸಳೆಯಂತೆ;ಕನಸು, ಹೋರಾಟ,ಭಯಗಳ ಸಮ್ಮಿಶ್ರಣವಿದೆ ಇಲ್ಲಿ. ಇವೆಲ್ಲವನ್ನೂ ಜೊತೆಗೆ ಹೊತ್ತುಕೊಂಡು ಸಾಗುವದೇ ಜೀವನ.”

ರೆಪರ್ಟರಿ ನಡೆಯುತ್ತಿದ್ದ ಆ ಕಾಲದಲ್ಲಿ ಒಮ್ಮೊಮ್ಮೆ ಹಾವೇರಿಯಿಂದ ರಾತ್ರಿಹೊತ್ತಿಗೆ ಒಂದೆರಡು ಟೊಮೆಟೋ, ಆಲೂಗಡ್ಡೆ, ಈರುಳ್ಳಿ, ಮೊಟ್ಟೆ ಹಿಡಿದು ಹೊನ್ನಾವರದ ನಮ್ಮ ನಟರ ಕುಟೀರಕ್ಕೆ ಹೋಗುತ್ತಿದ್ದೆ. ಬಸಿದ ಅನ್ನಕ್ಕೆ ಹಸಿ ಈರುಳ್ಳಿ ಟೊಮೆಟೋ ಕಲಸಿ, ಬೇಯಿಸಿದ ಆಲೂಗಡ್ಡೆ ಮತ್ತು ಮೊಟ್ಟೆಯನ್ನು ನಂಚಿಕೊಳ್ಳುತ್ತ ಅರೆಮುಂಜಾವಿನ ತನಕ ಮಾತನಾಡುತ್ತಿದ್ದೆವು. ಮಾತೆಂದರೆ ಮತ್ತೇನು? ರಂಗದಮಾತೇ.

ರಂಗದ ಮಾಂತ್ರಿಕ, ಮೋಹಕ ಶಕ್ತಿಯ ಪರಿಚಯ ಎಲ್ಲಮಕ್ಕಳಿಗೂ ಆಗುವಂತೆ ಮಾಡಬೇಕು; ಮುಂದೆ ಸಾಧ್ಯವಾದರೆ ಸುಸಜ್ಜಿತ ರೆಪರ್ಟರಿ ನಡೆಸಬೇಕು, ಅದರಲ್ಲಿ ಎಂತಹ ನಾಟಕಗಳನ್ನು ಆಡಬೇಕೆಂದರೆ, ಅದನ್ನು ನೋಡಿದ ಈಗಿನ ಮಕ್ಕಳಿಗೆ ಮುಂದೆ ಅವರು ಹರೆಯಕ್ಕೆ ಬಂದಾಗ ಅವರ ಬದುಕಿಗೆ ಪ್ರಸ್ತುತವಾಗಬಲ್ಲ ವಿಷಯವಿರಬೇಕು .. ಅಂತೆಲ್ಲ, ಎಂತೆಲ್ಲ ಕನಸಿನ ಮಾತುಗಳು ಬಂದುಹೋಗುತ್ತಿದ್ದವಲ್ಲಿ!
ಅರ್ಥವಿಲ್ಲ . . . ಸ್ವಾರ್ಥವಿಲ್ಲ . . . ಬರಿಯಭಾವಗೀತ. . .

‍ಲೇಖಕರು ಶ್ರೀಪಾದ್ ಭಟ್

October 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. ಕಿರಣ ಭಟ್

    ಒಂದ್ ನಮನೀ ಮಳ್ಳು ಅದು. ಈಗ ಯೋಚ್ನೆ ಮಾಡಿದ್ರೆ ನಾವೇನಾ ಇದೆಲ್ಲ ಮಾಡಿದ್ದು ಅನ್ನಿಸ್ತದೆ.
    ಹಾಂ…ಚಂದ್ರು ಉಡುಪಿ ನಮ್ಮನ್ನ ಸೇರ್ಕೊಂಡ್ಮೇಲೆ ‘ ಬಾವಿಯಲ್ಲಿ ಬಿದ್ದ ಚಂದ್ರು’ ವಾಗಿ ಖ್ಯಾತನಾದ!

    ಪ್ರತಿಕ್ರಿಯೆ
  2. SUDHA SHIVARAMA HEGDE

    ಭಾವಗೀತೆ ಹುಟ್ಟುವುದೇ ಹಾಗೆ
    ಅರ್ಥ, ಸ್ವಾರ್ಥಗಳನು ಮೀರಿದ ಗಳಿಗೆ

    ಪ್ರತಿಕ್ರಿಯೆ
  3. SUDHA SHIVARAMA HEGDE

    ಭಾವಗೀತೆ ಹುಟ್ಟುವುದೇ ಹಾಗೆ
    ಅರ್ಥ, ಸ್ವಾರ್ಥವಿಲ್ಲದ ಘಳಿಗೆ

    ಪ್ರತಿಕ್ರಿಯೆ
  4. Prashanth Patgar

    ಶ್ರೀನಿವಾಸ, ಸಂತೋಷನ ಜೊತೆಗೆ ಇದ್ದ ಸದಾನಂದ ನಾಯ್ಕ ಇವರು ಕಳೆದ ವರ್ಷ ಕರ್ನಾಟಕದ ಜಡ್ಜ ಪರೀಕ್ಷೆಯನ್ನು ಉತ್ತೀರ್ಣರಾದ ಏಕೈಕ ವ್ಯಕ್ತಿಯಾಗಿದ್ದಾರೆ. ಗೋಪಾಲ ಹಳ್ಳೇರ ಸಿನೇಮಾ ಕ್ಷೇತ್ರದ ಸಹನಿರ್ದೇಶಕರಾಗಿದ್ದಾರೆ. ನಾಟಕ ಕ್ಷೇತ್ರವು ನಮಗೆ ನಮ್ಮ ವ್ಯಕ್ತಿತ್ವ ನಿರ್ಮಾಣಕ್ಕೆ ಬಹು ಸಹಕಾರಿಯಾಗಿದೆ. ಅದರಲ್ಲೂ ಶ್ರೀಪಾದ ಸರ್ ರವರ ನಿರ್ದೇಶನವು ನಿರ್ದೇಶಕರಿಗೆಲ್ಲ ಮಾದರಿ.
    ಅವರ ಕಾರ್ಯ ವೈಖರಿ ಹಾಗೇನೆ. ನಾನಂತು ಅವಕಾಶ ಸಿಕ್ಕಲ್ಲೆಡೆ ಅವರ ತರಗತಿಗಳಿಗೆ ಹಾಜರಾಗಲು ಸಿದ್ಧನಾಗಿರುತ್ತೇನೆ. ಈಗ ಶಿಕ್ಷಕನಾದರೂ ಭಟ್ಟರ ವೈಖರಿಯೇ ನಮಗೆ ಮಾದರಿ.

    ಗುರುಗಳೇ ನಿಮಗೆ ಈ ಮೂಲಕ ಮತ್ತೊಮ್ಮೆ ನಮನ.
    ಪ್ರಶಾಂತ ಪಟಗಾರ

    ಪ್ರತಿಕ್ರಿಯೆ
  5. Purushothama Bilimale

    ಶ್ರೀಪಾದ ಭಟ್ರೇ, ಕೋಳಿ ಶೀನ ಟಿಪ್ಪು ಮೊದಲಾದವರನ್ನೆಲ್ಲ ನೋಡಬೇಕೆನಿಸಿತು

    ಪ್ರತಿಕ್ರಿಯೆ
  6. Manjukodagu

    ನಾಟಕದ ಕೆಲಸವೇ ಹಾಗೆ .. ಅಡುಗೆಮಾಡಿದಂತೆ… ಶ್ರೀಪಾದರ ಬರಹದ ನಿತ್ಯಓದುಗ. ಪ್ರತಿಬಾರಿಯೂ ಬಳೆಗಾರ ,ವಿವರವಾದ ನೆನಪುಗಳ ಜೋಳಿಗೆಯಿಂದ ಒಂದೊಂದೇ ಬಳೆತೆಗೆದು ಕೈಗೆ ತೊಡಿಸುತ್ತಾನಲ್ಲಾ ಹಾಗೆ…ಬದುಕಿನ ನೆನಪಿನೊಂದಿಗೆ ನಾಟಕದ ಜೀವನದ ರಂಗು- ರಂಗಾದ ಬಳೆತೊಡಿಸುವ ಅವರ ಬರಹ- ನೆನಪುಗಳು ಕಾವ್ಯದಂತೆ. ಇಂಥಾ ಥರಾವರಿ ಸುಖ-ಕಷ್ಟ- ಇಷ್ಟಗಳು ನನಗೂ ಬರಬಾರದೇ – ಅಂತ ಅವರಮೇಲೆ ಹೊಟ್ಟೆಕಿಚ್ಚುಪಡೋದಷ್ಟೆ ನನಗುಳಿದಿರುವ ದಾರಿ…. ಬರಹದ ಅಡುಗೆ ಮುಂದುವರೆಯಲಿ…

    ಪ್ರತಿಕ್ರಿಯೆ
  7. SUDHA SHIVARAMA HEGDE

    ನೀವು ಸಹಯಾನಕ್ಕೆ ಬಂದಾಗ ನಿಮ್ಮೆದುರೇ ಓಡಾಡಿಕೊಂಡಿದ್ರು

    ಪ್ರತಿಕ್ರಿಯೆ
  8. Kavya Kadame

    ಶ್ರೀಪಾದ್ ಭಟ್ ಸರ್, ಎಂಥಾ ಕುದಿವೊಡಲಿನ ಕಥೆಗಳಿವು! ಹ್ಯಾಟ್ಸ್ ಆಫ್ ನಿಜಕ್ಕೂ. ಅನ್ನ, ತರಕಾರಿಗಳ ಜೊತೆ ಬೇಯುತ್ತಿದ್ದ ಅಂದಿನ ಅಡುಗೆಯ ಹದ ಮತ್ತು ಪಕ್ಕದಲ್ಲಿ ನಡೆಯುತ್ತಿದ್ದ ತಾಲೀಮಿನ ಪದ ಎರಡನ್ನೂ ಹತ್ತಿರದಿಂದ ಕಂಡಂತಾಯಿತು. ನಾಟಕ ಆಡಿಸುವ ದೆಸೆಯಿಂದ ಎಂ ೮೦ ಮೇಲೆ ೧೩೦ ಕಿಮಿ ಹೋಗಿ ಮತ್ತೆ ಬೆಳಿಗ್ಗೆ ಎದ್ದು ೧೩೦ ಕಿಮಿ ಬರುವುದೆಂದರೆ, ಅಬ್ಬಾ ನನ್ನಲ್ಲಿ ಮಾತುಗಳೇ ಹೊರಡುತ್ತಿಲ್ಲ. ನಿಮ್ಮಂಥ ಗುರುಗಳು ಎಲ್ಲರಿಗೂ ಸಿಗಬೇಕು ಸರ್.    

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: