ಸುಮಾ ಆನಂದರಾವ್ ಸರಣಿ: ಕಣ್ಣಿಗೆ ಕಟ್ಟಿದ ಹಾಗಿದೆ..

। ನಿನ್ನೆಯಿಂದ ।

ನೆನಪಿನಾಗಸದಿ ನವಿರಾದ ನಕ್ಷತ್ರ ಮನಸಿನಾಳದಿ ಪ್ರಜ್ವಲಿಸುತಲಿದೆ, ಮಸುಕಾಗದಿರುವುದೇ ಸೋಜಿಗದ ಸಂಗತಿ.

ಅರ್ಧವಾರ್ಷಿಕ ಪರೀಕ್ಷೆಗಳಲ್ಲಿ ಮುತುವರ್ಜಿಯಾಗಿ ಓದಿ ಬರೆದರೆ ಮಾತ್ರ ನಾಗಸಮುದ್ರದ ರಂಬಳಿ ಎಂಬ ಅಪ್ಪನ ಗಂಭೀರವಾದ ಧ್ವನಿ ಇಂದಿಗೂ ಕಿವಿಯಲ್ಲಿ ಕೇಳಿಸಿದಂತಿದೆ, ಅಪ್ಪ ಹೇಳಿದ್ದೆಲ್ಲ ನನಗೆ ವೇದವಾಕ್ಯ. ವಿದ್ಯೆಯ ಮಹತ್ವಹೇಳುತ್ತಲೇ ಇರುತ್ತಿದ್ದರು.  ಪರೀಕ್ಷಾನಂತರ ನಾಗಸಮುದ್ರಕ್ಕೆ ಸಂಭ್ರಮದ ಪಯಣ. 

ದೀಪಾವಳಿಯ ಬಲಿಪಾಡ್ಯಮಿಯಿಂದ ಸುಮಾರು ಹತ್ತು ದಿನಗಳವರೆಗೆ ಪ್ರತಿದಿನವೂ ಊರಿನ ಎಲ್ಲಾ ವರ್ಗದ ಜನರು ಕಲೆತು ಹಗರಿಗೆ ಹೋಗಿ ಆಡಿ ಕುಣಿದು ಸಂಭ್ರಮಿಸುವುದೇ ರಂಬಳಿ. ಇದೊಂದು ಬಗೆಯ ಹೊರಸಂಚಾರ ಸಂಜೆಮೂರು ಗಂಟೆಯಿಂದ ಅಮ್ಮ ಅತ್ತೆ ನಮಗೆಲ್ಲ ಹೊಸಬಟ್ಟೆ ಹಾಕಿ  ಅಲಂಕಾರ ಮಾಡಿ ತಾವೂ ಹೊಸದಿರಿಸುಗಳನ್ನು ತೊಟ್ಟುಕೊಂಡು ಹೊರಡಲು ಅಣಿಯಾಗುತ್ತಿದ್ದರು.  

ನಮಗೆಲ್ಲ ನಮ್ಮ ಉಡುಪುಗಳ ಬಗ್ಗೆ ಬಹಳ ಕಾಳಜಿ, ಒಬ್ಬರಿಗೊಬ್ಬರು ಪ್ರತಿಸ್ಪರ್ದಿಗಳಂತೆ ತಯಾರಾಗುತ್ತಿದ್ದೆವು.  ಅಡುಗೆಮನೆಯಲ್ಲಿ ರುಚಿಯಾದ ವ್ಯಂಜನಗಳು ದೊಡ್ಡ ದೊಡ್ಡ ಸ್ಟೀಲಿನ ಪಾತ್ರೆಗಳಲ್ಲಿ ಕುಳಿತು ಉತ್ಸುಕತೆಯಲ್ಲಿ ಕಾಯುತ್ತಿವೆ.  ನಮ್ಮ ತಾತನವರ ಮನೆ ಊರ ಮುಂದೇ ಇತ್ತು, ಹಾಗಾಗಿ ಊರಿನ ಎಲ್ಲರು ನಮ್ಮ ಮನೆಯ ಮುಂದೇ ಹೋಗಬೇಕಿತ್ತು .

ಕೊನೇ  ಕಟ್ಟೆಗೆ ನಿಂತು ನೋಡುತ್ತಿದ್ದರೆ ಕಣ್ಣಿಗೆ ಹಬ್ಬ. ಎಷ್ಟೊಂದು ವರ್ಣಮಯ ಉಡುಪುಗಳು! ಮಕ್ಕಳು ಹಿರಿಯರು ವ ಎಂಬ ಭೇದವಿಲ್ಲದೆ ಉತ್ಸಾಹದಿಂದ ಹೊರಟಿದ್ದಾರೆ. ಎಲ್ಲರ ಕೈಯಲ್ಲೂ ಬಣ್ಣ ಬಣ್ಣದ ಪ್ಲಾಸ್ಟಿಕ್ ವಯರಿನಿಂದ ಹೆಣೆದ ಬುಟ್ಟಿಗಳು, ಅದರಲ್ಲಿ ಬಗೆ ಬಗೆಯ ತಿನಿಸುಗಳು  ಜಾತ್ರೆಯೋಪಾದಿಯಲ್ಲಿ  ಸಾಗುತ್ತಿದ್ದಾರೆ.   ಒಳಗಡೆಯಿಂದ  ಬಂದ ಕೂಗಿಗೆ ಒಂದೇ ಓಟದಲ್ಲಿ ಓಡಿ ಪಾದರಕ್ಷೆಗಳನ್ನು ತೊಟ್ಟು ಹೊರಟೆವು.

ನಮ್ಮೆಲ್ಲಾ ಮನೆಗಳಿಂದ ಇಪ್ಪತ್ತು ಜನರ ಗುಂಪು ಹೊರಟಿತು. ನಾವೆಲ್ಲಾ ಓಡುತ್ತಾ, ಕುಣಿಯತ್ತ ಕಿವಿಗಳಲ್ಲಿ ಪಿಸುಗುಡುತ್ತ, ಕೇಕೆಹಾಕುತ್ತ ಸಾಗುತ್ತಿದ್ದರೆ ಅರ್ಧ ಮೈಲಿ ಇರುವ  ಹಗರಿಯ ದೂರ ನಮಗೆ ತಿಳಿಯುತ್ತಿರಲಿಲ್ಲ. ನಮ್ಮ ಗಮನವೆಲ್ಲ ತಲುಪುವ ಗಮ್ಯದೆಡೆಗೇ ನೆಟ್ಟಿತ್ತು. ಎಡಕ್ಕೆ ಮಾರೆಮ್ಮನ ಗುಡಿ ದಾಟಿಕೊಂಡು ಇಕ್ಕೆಲದಲ್ಲೂ ಹಚ್ಚ ಹಸಿರಿನಿಂದ ಬೆಳೆದು ನಿಂತ ಗದ್ದೆಗಳ ಮಧ್ಯೆ ನಡೆದು ಹೋಗಬೇಕು. 

ಮುದ್ದು ಮಾತಿಗೆ ಪುಳಕಿತಳಾಗಿದ್ದ ಸಸ್ಯ ಶ್ಯಾಮಲ ಧಾರಿಣಿಯ ಮೇಲೆ ಅತ್ಯದ್ಭುತವಾದ ಒಂದು ಗೈರಿಕ ಶಾಂತಿ ಹಬ್ಬಿತ್ತು.  ಆಶ್ಚರ್ಯ ಆನಂದಗಳನ್ನು ಸೂಚಿಸುವ ಒಂದೆರೆಡು ಶಬ್ದಗಳನ್ನು ಉಚ್ಛರಿಸುತ್ತ ಬೇಗ ಬೇಗನೆ ಹೆಜ್ಜೆ ಹಾಕಿದೆವು.  ಹಾದಿಯಲಿ ಮಡಿವಾಳರ ಉಲಿಯನ್ನು ಆಲಿಸುತ್ತ ಸುಮಾರು ಅರ್ಧ ಗಂಟೆಯ ನಂತರ ಹಗರಿ ತಲುಪುವ ವೇಳೆಗೆ ಸಂತಸದಿ ಹೃದಯ ತುಂಬಿ ಬಂದಿತ್ತು.   .

ಅಬ್ಬಾ! ಮೈ ನವಿರೇಳಿಸುವ ದೃಶ್ಯ ಸೀಮೆ ! ಅನಂತವಾಗಿ, ಅಪಾರವಾಗಿ, ಅಸೀಮವಾಗಿ, ಅಧ್ಭುತವಾಗಿ ನಮ್ಮೆದಿರು ಪ್ರಸರಿಸಿತ್ತು. ನರನಾಡಿಗಳಲ್ಲಿ ನೆತ್ತರು ವೇಗವಾಗಿ ಹರಿಯತೊಡಗಿತು. ಆನಂದಾವೇಶಗಳ ಭರದಲ್ಲಿ ಕಣ್ಣುಗಳರಳಿದವು. ವದನ ಅಂತರಂಗದ ಭಾವಗಳನ್ನು ಪ್ರತಿಬಿಂಬಿಸಿ ಉಜ್ವಲವಾಯಿತು.  ಮಾತು ಮೌನತಳೆಯಿತು.

ನಿಧಾನವಾಗಿ ಹಗರಿಯಲಿ ಇಳಿಯಬೇಕು. ತೊರೆಯೋಪಾದಿಯಲಿ ನೀರು ಎರೆಡು ಮೂರು ಕಡೆ ಹರಿಯುತಲಿದೆ. ಹರಿವ ತೊರೆಯ ಮಧ್ಯದಿ ಶುಭ್ರವಾದ ಮರಳು. ಮರಳಿನಲ್ಲಿ ಅಲ್ಲಲ್ಲಿ ಕಪ್ಪೆಚಿಪ್ಪು ಶಂಖುಗಳು. ನೀರಿನಲ್ಲಿ ಪಾದ  ನೆನೆಸಿಕೊಂಡು  ತಂದಿರುವ ಪರಿಕರಗಳನ್ನೆಲ್ಲ ಒಂದೆಡೆ ಇರಿಸುತ್ತಿದ್ದೆವು. ಸಂತಸವು ಎಲ್ಲೇ ಮೀರುತ್ತಿತ್ತು.

ಅಮ್ಮ ನಮ್ಮ ಭದ್ರತೆಯ ಬಗ್ಗೆ ಕಾಳಜಿವಹಿಸುತ್ತಿದ್ದಳು. ಪಶ್ಚಿಮಕ್ಕೆ ಸಾಗಿದಂತೆಲ್ಲ ಹಗರಿ ವಿಶಾಲವಾಗುತ್ತಿತ್ತು. ಎಡಗಡೆ ಸುಮಾರು ಆರು ಅಡಿ ಎತ್ತರದಿ ದಟ್ಟವಾಗಿ ಬೆಳೆದ ಗಿಡಮರಗಳ ಗುಂಪು ಕಂಡು ಬರುತ್ತಿತ್ತು. ಬಲಗಡೆ ವಿಶಾಲ ಬಯಲು ಅಲ್ಲಲ್ಲಿ ಗಿಡಮರಗಳು. ಅದು ರಾಯಪುರದಿಂದ ಬರುವ ಹಾದಿಯಾಗಿತ್ತು. ಏಕೋ ಆ ಹಾದಿಯು ಮನದಲಿ ನೂರೆಂಟು ಪ್ರಶ್ನೆಗಳನ್ನು ಹುಟ್ಟುಹಾಕುವಂತಿತ್ತು. ಅಮ್ಮ ಚಿಕ್ಕವಳಾಗಿದ್ದಾಗ ತಾತ ತನ್ನ ಶಿಕ್ಷಕ ವೃತ್ತಿಯನು ಮುಗಿಸಿ  ರಾಯಪುರದಿಂದ ಹಾಗೇ ರಂಬಳಿಗೆ ಬರುತ್ತಿದ್ದರು ಎಂದು ಹೇಳಿದ್ದೆ ನೆನಪಾಗುತ್ತಿತ್ತು.

ನಮ್ಮ ಆಟಕ್ಕೆ ಮಿತಿಯೇ ಇಲ್ಲ. ಮರಳಿನಲ್ಲಿ ಕುಳಿತುಕೊಂಡು ಕಾಲನ್ನು ನೆಲಕ್ಕೆ ಊರಿ ಸುತ್ತಲೂ ಮರಳನ್ನು ಒತ್ತುತ್ತಾ ಪಾದವನ್ನು ಬಚ್ಚಿಟ್ಟು ಮೆಲ್ಲನೆ ಕಾಲು ತೆಗೆದರೆ ಮರಳಿನ ಮನೆಯಾಕೃತಿಯು ರೂಪುಗೊಳ್ಳುತ್ತಿತ್ತು, ಗುಬ್ಬಿಗೂಡು ಎಂದು ಕೂಗುತ್ತ ಸಂಭ್ರಮಿಸುತ್ತಿದ್ದರೆ ತುಂಟ ಮಕ್ಕಳ ಗುಂಪು ಅದನ್ನು ಕೆಡವಲು ಬರುತ್ತಿದ್ದರು .

ಗೂಡುಗಳು ಬೀಳದಂತೆ ಕಾಯುತ್ತಿದ್ದೆವು. ಮರಳಿನಲ್ಲಿ  ಓಡಿ ಒಬ್ಬರನ್ನೊಬ್ಬರು ಹಿಡಿಯುವುದು, ಮುಗ್ಗರಿಸಿ ಬೀಳುವುದು, ಎದ್ದು ಮರಳು ಕೊಡವಿ ಓಡುವುದು ಹೀಗೇ ಹಲವಾರು ಆಟಗಳನ್ನು ಆಡುತ್ತಿದ್ದೆವು.

ಅಲ್ಲಿಯ ವಿಶೇಷವೆಂದರೆ ಮದುವೆಯಾದ ಹೆಣ್ಣುಮಕ್ಕಳು ರಂಬಳಿಗಾಗಿ ಬರುತ್ತಿದ್ದರು. ಹಾಗೆ ನಮ್ಮಮ್ಮನೂ ಸಹ ನಮ್ಮನ್ನೆಲ್ಲ ಕರೆದುಕೊಂಡು ಬರುತ್ತಿದ್ದಳು. ಅಮ್ಮನ ಗೆಳತಿಯರು ಎಲ್ಲರೂ ಬಂದಿರುತ್ತಿದ್ದರು. ಹೀಗಾಗಿ ವರ್ಷಕ್ಕೊಮ್ಮೆ ರಂಬಳಿಯಲ್ಲಿ ಅವರೆಲ್ಲರ ಭೇಟಿ. ಓಡುತ್ತ,  ಆಡುತ್ತಾತಮ್ಮ ವಯಸ್ಸನ್ನೇ ಮರೆಯುತ್ತಿದ್ದರು.

ಅಮ್ಮಅತ್ತೆ ಅಷ್ಟು  ಸಂಭ್ರಮದಿ  ಆಡುವುದನ್ನು ಅಲ್ಲಿ ಮಾತ್ರ ನೋಡಲು ಸಾಧ್ಯವಾಗುತ್ತಿತ್ತು. ಎಂತಹ ಸಂತಸದ ಕ್ಷಣಗಳು ಅವು. ಮೂಗು ಚುಚ್ಚುವ ಆಟ, ಹರಳಿಡುವ ಆಟ ಆಡಿದನಂತರ ರಸಗವಳವನ್ನು ಮೆಲ್ಲುವಸಮಯ .

ಮರಳಿನಲ್ಲಿ ಒಂದು ಅಡಿ ಆಳಕ್ಕೆ ತೋಡಿದರೆ ನೀರು ಬರುತ್ತಿತ್ತು. ಸ್ವಲ್ಪ ಹೊತ್ತು ಬಿಟ್ಟು ತಿಳಿಗೂಡಿದ  ನಂತರ  ಮೇಲಿನ ತಿಳಿಯಾದ ಸ್ವಚ್ಛವಾದ ನೀರನ್ನು ಕುಡಿಯಲು ಸಿದ್ಧಮಾಡುತ್ತಿದ್ದೆವು. ಹಿರಿಯರೆಲ್ಲ ತಟ್ಟೆಗಳಲ್ಲಿ ಬಡಿಸಿ ಕೊಡುತ್ತಿದ್ದರು. ನಾವೆಲ್ಲಾ ಒಬ್ಬರಿಗೊಬ್ಬರು ಹಂಚಿಕೊಂಡು ಹಲವು ಬಗೆಯ ತಿನಿಸುಗಳ ರುಚಿಯನ್ನು ಸವಿಯುತ್ತಿದ್ದೆವು.

ಒಂದು ಗಂಟೆಯಹೊತ್ತು ಕುಳಿತುಕೊಂಡು, ಓಡಾಡಿಕೊಂಡು, ಕಾಲಿನಲ್ಲಿ ಹರಿವ ನೀರನ್ನು ಚಿಮ್ಮುತ್ತ, ತಂಗಾಳಿಯ ತಂಪಿನಲಿ ತೂಗುತ್ತ, ಮುಸ್ಸಂಜೆಯ ಮಬ್ಬಿನಲಿ ಮೀಯುತ್ತ ಸವಿಯುತ್ತಿದ್ದ ಆ ರಸಸ್ವಾದವ ನಾನೆಂದೂ ಮರೆಯಲು ಸಾಧ್ಯವೇ ಇಲ್ಲ.

ಮರಳಿನಲ್ಲಿ ಚವ್ಕಾಬಾರಕ್ಕಾಗಿ ಶಂಖು ಕಪ್ಪೆಚಿಪ್ಪುಗಳನ್ನು ಆರಿಸಿಕೊಂಡು ವಾಪಸ್ಸು ಹೊರಡುತ್ತಿದ್ದೆವು ಮೇಯಲು ಹೋದ ರಾಸುಗಳು ನಮ್ಮ ಜೊತೆಯೇ ಹೆಜ್ಜೆ ಹಾಕುತ್ತಿದ್ದವು. ನಾವೆತ್ತ ಸಾಗಿದರು ನಮ್ಮತ್ತಲೇ ಬರುತ್ತಿದ್ದವು. ಸರಸರನೆ ಹೆಜ್ಜೆ ಹಾಕುತ್ತ  ಹಾದಿಯಲಿ ಸಿಗುವ ಲಕ್ಕಿ ಸೊಪ್ಪನ್ನು ತಂದು ಮಾರೆಮ್ಮನ ಗುಡಿಯ ಮುಂದೆ ಇದ್ದ ಬುಡ್ಡೇಕಲ್ಲಿಗೆ ಹಾಕಿ ಬರುವ ಪರಿಪಾಠ.

 ಆಹಾ ಎಂಥ ತಂಪಾದ ಪ್ರತ್ಯುಷೆಯ ತಂಗಾಳಿ !ದೂರದ ಗಿರಿ ಪಂಕ್ತಿಗಳಂತೂ ಆಗಲೇ ಮಾಸಲು ಮಾಸಲಾಗಿ ನೀಲ ಮೇಘಗಳಂತೆ ಗೋಚರಿಸುತ್ತಿವೆ, ಹತ್ತಿರದಲ್ಲಿ ಅಲ್ಲಲಿ ಕಣಿವೆ, ಗದ್ದೆ, ಮನೆಗಳು ಕಾಣುತ್ತಿವೆ. ಅದರ ಸೌಂದರ್ಯ ಮಹಿಮೆಗಳಿಗೆ ಪದಗಳೇ ಸಾಲವು. ಆ ಸ್ವರ್ಗೀಯ ದೃಶ್ಯದ ಮಹಾವಿಗ್ರಹ ನನ್ನ ಮನೋಮಂದಿರದಿ ಚಿರವಾಗಿ ಸ್ಥಾಪಿತವಾಗಿದೆ ಅದಕ್ಕೆ ದಿನದಿನವೂ ಆರಾಧನೆ ನಡೆಯುತ್ತಿದೆ.

ಆರೋಗ್ಯದ, ಉತ್ಸಾಹದ ಚಿಲುಮೆ ತಾತ , ಮಮತೆಯ ಮುಗ್ದೆ ಅವ್ವನ ಪ್ರೀತಿ ವಾತ್ಸಲ್ಯಗಳ ಸವಿಯೋಣವೇ ?

ಹಳ್ಳಿಯ ಜೀವನವನ್ನು ಸಾಮಾನ್ಯವಾಗಿ ನಿರುದ್ವಿಗ್ನ ಎಂದು ಕರೆಯಬಹುದು. ನಗರಗಳಲ್ಲಿರುವಂತೆ ಮೋಟಾರು ಮೊದಲಾದ ಆತುರದ ವಾಹನಗಳ ಗಡಿಬಿಡಿ ಇಲ್ಲ. ಸಿನೆಮಾ ಮಾರುಕಟ್ಟೆಗಳ ಉದ್ವೇಗವಿಲ್ಲ. ಅಲ್ಲಿರುವುದು ಕೇವಲ ಶಾಂತಿ, ಮೌನವನ್ನೇ ಮಲಗಿಸುವ ಜೋಗುಳದಂತಿರುವ ಹಕ್ಕಿಗಳ ಸವಿದನಿ. ತಲೆಯೆತ್ತಿ ನೋಡಿದರೆನೀಲಾಕಾಶ, ಅನಂತ ಅಪಾರ ಪ್ರಶಾಂತ.

ಅಲ್ಲಿ ಸುತ್ತುವ  ಬೆಳ್ಮುಗಿಲಿನ ತುಂಡುಗಳೂ ಕೂಡ ಮೆಲ್ಲಗೆ ಚಲಿಸುತ್ತ ಜಗತ್ತನ್ನು ಸ್ವಪ್ನದಿಂದ ಹೊದಿಸುವಂತೆ ತೋರುತ್ತವೆ. ಅಲ್ಲಲ್ಲಿ ತೊರೆಗಳೇನೋ ಹರಿಯುವುವು, ಆದರೆ ಆ ಹರಿದಾಟದಲ್ಲಿರುವುದು ಯೋಗಿಯ ನಿಷ್ಕಾಮ ಕರ್ಮ.

ಇಂತಹ ಪ್ರಶಾಂತ ಪರಿಸರದಲ್ಲಿರುವುದು ನಮ್ಮ ತಾತನ ಮನೆ. ತಾತ ಸಾಧಾರಣ ಎತ್ತರದ ಗೋಧಿ ಬಣ್ಣದ ಕಟ್ಟು ಮಸ್ತಿನ ಆಳು. ಚುರುಕಾದ ಕಂಗಳು, ತಲೆ ತುಂಬಾ ಬಿಳಿ ಕೂದಲು. ಪಾದರಸದಂತೆ ಚುರುಕಾಗಿರುತ್ತಿದ್ದ. ದಣಿವರಿಯದ ವ್ಯಕ್ತಿ. ಚಿಕ್ಕಂದಿನಲ್ಲಿ ವ್ಯಾಯಾಮ ಶಾಲೆಯಲ್ಲಿ  ಕಲಿತ ವಿದ್ಯೆಯನ್ನು ಬಹು ವಿಧವಾಗಿ ಬಣ್ಣಿಸಿ ಹೇಳುತ್ತಿದ್ದ. ಹಾಗಾಗಿ  ದೃಢಕಾಯನಾಗಿದ್ದ.

ಪ್ರತಿದಿನ ಬೆಳಿಗ್ಗೆ ಆಳುಗಳು ಇದ್ದರು ಸಹ ಹಾಲು ಕರೆಯುತ್ತಿದ್ದರು. ನಾವೆಲ್ಲಾ ಮಕ್ಕಳು ಲೋಟಕ್ಕೆ ಸಕ್ಕರೆ ಹಾಕಿಕೊಂಡು ಹೋದರೆ ಆಕಳ ನೊರೆಹಾಲು ಕರೆದುಕೊಡುತ್ತಿದ್ದ. ನೊರೆಹಾಲು ಕುಡಿದರೆ ಗಟ್ಟಿಮುಟ್ಟಾಗುತ್ತೀರಾ ಬನ್ನಿರಿ ಎಂದು ಕರೆಯುತ್ತಿದ್ದ. ಈಗಿನಂತೆ ನೂರೆಂಟು ಕಾಯಿಲೆಗಳ ಅರಿವಿಲ್ಲ.

ಸ್ನಾನದ ನಂತರ ಪೂಜೆ.  ದಿನಕ್ಕೆ ಎರೆಡು ಬಾರಿ ಸಂಧ್ಯಾವಂದನೆ. ಅದಕ್ಕಾಗಿಯೇ ಒಂದು ರೇಷ್ಮೆ ಮಡಿ ಇರುತ್ತಿತ್ತು. ಅವ್ವ ಅಷ್ಟೊತ್ತಿಗಾಗಲೇ ಸ್ನಾನ ಮಾಡಿ ಬಾವಿಯಿಂದ ನೀರು ಸೇದಿ ಅಡುಗೆ ಮಾಡಲು ಸೌದೆ ಒಲೆಯನ್ನು  ಅಣಿಗೊಳಿಸುತ್ತಿದ್ದಳು. ತಾತನಿಗೆ ಹನ್ನೊಂದಕ್ಕೆ ಊಟ ಬಡಿಸಿ ಬಿಡಬೇಕು. ಊಟವಾದ ಮೇಲೆ ಪ್ರತಿ ದಿನವೂ ೯  ಮೈಲಿ ದೂರದ ಮೊಳಕಾಲ್ಮುರುವಿಗೋ ೬  ಮೈಲಿ ದೂರದ ರಾಂಪುರಕ್ಕೊ ಹೋಗಲೇಬೇಕಾಗತ್ತು.

ಒಂದು ಮೈಲಿ ದೂರದ ಬಸ್ ನಿಲ್ದಾಣಕ್ಕೆ ಬಿರು ಬಿಸಿಲಿನಲ್ಲಿ ನಡೆದೇ ಹೋಗಬೇಕಿತ್ತು. ಸಂಜೆ ವಾಪಸ್ಸು ಬರುತ್ತಿದ್ದರು. ತಮ್ಮ ಶಕ್ತಿಯ ಬಗ್ಗೆ ಹೆಮ್ಮೆ ಪಡುತ್ತಾ ತಾವು T.C.H. ಓದುವಾಗ ಹೊಸಪೇಟೆಯಿಂದ ಬಳ್ಳಾರಿ ಮಾರ್ಗವಾಗಿ ಸುಮಾರು ಎಪ್ಪತ್ತು ಮೈಲಿ ದೂರದ ಹಾದಿಯನ್ನು ಬೈಸಿಕಲ್ಲಿನಲ್ಲಿ ಹೇಗೆ ಕ್ರಮಿಸುತ್ತಿದ್ದರು ಎಂಬುದನ್ನು ಬ ಹು ಸೊಗಸಾಗಿ ಹೇಳುತ್ತಿದ್ದರು.

ಪಡಸಾಲೆಯಲ್ಲಿ ಒಂದು ನೀಲಿ ಬಣ್ಣದ ಗೂಡು ಇತ್ತು. ಅದಕ್ಕೆ ಬೀಗ ಹಾಕುತ್ತಿದ್ದರು. ಪ್ರತಿ ದಿನ ಬೆಳಗ್ಗೆ  ಗೂಡನ್ನು ತೆಗೆದು ಪತ್ರಗಳನ್ನು ಹರಡಿಕೊಂಡು ಕುಳಿತು ತಮ್ಮಲ್ಲೇ ಲೆಕ್ಕಾಚಾರ ಹಾಕುತ್ತಿದ್ದರು. ಮತ್ತೆ ಬೀಗ ಹಾಕುತ್ತಿದ್ದರು.ಅದೊಂದು ಕುತೂಹಲದ ಗಣಿಯಂತಿತ್ತು. ಮನೆಯ ಎದುರಿಗೆ ಮಂಡಕ್ಕಿ ಹುರಿಯುವ ಭಟ್ಟಿಗಳು.  ಬಿಸಿ ಬಿಸಿ ಮಂಡಕ್ಕಿ ತಂದು ಉಪ್ಪು ಖಾರ ಹಚ್ಚಲು ಅತ್ತೆಗೆ ಕೊಡುತ್ತಿದ್ದರು ತಾತ.

ಹೀಗೆ ಚಿಕ್ಕ ಚಿಕ್ಕ ಕೆಲಸಗಳಲ್ಲೂ ಉತ್ಸಾಹ ತುಂಬಿ ತುಳುಕುತ್ತಿತ್ತು. ಮಾವಿನ ಹಣ್ಣುಗಳನ್ನು ಚಿಕ್ಕ ಕೋಣೆಯಲ್ಲಿ ಹುಲ್ಲುಹಾಸಿ ಮೇಲೆ ಗೋಣಿ ಚೀಲ ಹಾಸಿ ಜೋಡಿಸುವ ಪರಿಯೂ ಅದ್ಭುತ. ಹಣ್ಣು ಮಾಗಿದ ನಂತರ ತೊಳೆದು ಒರೆಸಿ ದೊಡ್ಡ ಪಾತ್ರೆಯ ತುಂಬಾ ಅಚ್ಚುಕಟ್ಟಾಗಿ ಸೀಕರಣೆ ಸಿದ್ಧಗೊಳಿಸುವ ಕೆಲಸ ತಾವೇ ಮಾಡಬೇಕು. ಆ ಸಹನೆ ಉಮೇದು ಇನ್ಯಾರಲ್ಲೂ ನಾನು ಕಂಡಿಲ್ಲ.

ಅವ್ವ ಎಲ್ಲರಿಗು ಅಡುಗೆ ಮಾಡಿ ಬಡಿಸಿ ಗಾಡಿಯಲ್ಲಿ ಹೆಣ್ಣಾಳುಗಳ ಜೊತೆ ಹೊಲಕ್ಕೆ ಹೊರಟರೆ ನಾವು ಮೆತ್ತಗೆ ಗಾಡಿ ಹತ್ತಿ ಕೂತಿರುತ್ತಿದ್ದೆವು. ಅಲಸಂದೆ ಹೆಸರುಕಾಳು ಬಿಡಿಸಲು ಅವ್ವ ಹೆಜ್ಜೆ ಹಾಕುತ್ತಿದ್ದಾರೆ ಮರದ ಕೆಳಗೆ ಕುಳಿತುಕೊಂಡು ತಂದ ಕುರುಕುಲುಗಳನ್ನು ಬಾಯಿಗೆ ಎಸೆದುಕೊಳ್ಳುತ್ತಾ ಸಂಭ್ರಮಿಸುತ್ತಿದ್ದರೆ, ಹೊಂಗೆಮರದ ತಂಗಾಳಿಯು ಮೈ ಮನಗಳನ್ನು ಮುದಗೊಳಿಸುತ್ತಿದ್ದನ್ನು ನೆನೆದರೆ ಇಂದಿಗೂ ರೋಮಾಂಚನವಾಗುತ್ತದೆ.

ಅವ್ವ ಒಂದು ಬಾರಿಯೂ ತನ್ನ ಮನದ ತುಮುಲಗಳನ್ನು ಹೊರಹಾಕದೆ ಹೇಗೆ ಶಾಂತಸಾಗರದಂತೆ ಇರುತ್ತಿದ್ದಳು ಎಂಬುದೇ ಒಮ್ಮೊಮ್ಮೆ ಬಿಡಿಸಲಾಗದ ಒಗಟಾಗಿ ಕಾಡುತ್ತಿರುತ್ತದೆ. ದಿನಪತ್ರಿಕೆಯ ಒಂದೊಂದು ಅಕ್ಷರವನ್ನು ಬಿಡದೆ ಓದುತ್ತಿದ್ದುದು, ಇತಿಹಾಸದ ಪುಸ್ತಕಗಳನ್ನು ತಾನು ಪರೀಕ್ಷೆಗೆ ಸಿದ್ಧಳಾಗುವವಳ ಹಾಗೆ ಗಂಭೀರ ಅಧ್ಯಯನ ಮಾಡುತ್ತಿದ್ದುದು, ಹೂ ಬತ್ತಿ ಮಾಡಲು ಕುಳಿತರೆ ಸಂಜೆ ತನಕವೂ ಏಳದೆ ಇರುತ್ತಿದ್ದುದು ಹೀಗೆ ಒಂದೇ ಎರಡೇ ಆಧರ್ಶ ಮಹಿಳೆಗೆ ಮಾದರಿಯಾಗಿದ್ದಳು.

ರಜೆ ಮುಗಿಸಿ ಊರಿಗೆ ಹೊರಡುವ ನಾಲ್ಕು ದಿನ ಮುಂಚಿನಿಂದಲೇ ಬೇಸನ್ನು,ಕೋಡುಬಳೆ, ಅತ್ತಿರಸ ಸಿದ್ಧವಾಗುತ್ತಿದ್ದವು. ಒಂದೊಂದು ಬೇಸನ್ನು ಕೈತುಂಬಾ ಹಿಡಿದು ತಿನ್ನಬೇಕುಹಾಗಿರುತ್ತಿತ್ತು. ಅವ್ವ ಬೇಸನ್ನು ಉಂಡೆ ಕಟ್ಟಲು ಬಾಗಿಲು ಹಾಕಿಕೊಂಡು ಕುಳಿತರೆ ನಾವೆಲ್ಲಾ ಗವಾಕ್ಷಿಯಿಂದ ಬಗ್ಗಿ ನೋಡುತ್ತ,ಕೂಗುತ್ತಾ ಗಲಾಟೆ ಮಾಡುತ್ತಿದ್ದೆವು. ಅತ್ತಿರಾಸ ತುಪ್ಪದಲ್ಲಿ ಕರೆಯುತ್ತಿದ್ದಳು. ಊರಿಗೆ ಹೋದಮೇಲೆ ದಿನವೂ ಅತ್ತಿರಸ ತಿನ್ನುವಾಗ ಅದರ ಮೇಲೆ ಹೆತ್ತ ತುಪ್ಪವನ್ನು ನೋಡಿದ ಹಾಗೆಲ್ಲ ಅವ್ವನ ಪ್ರೀತಿಯೇ ಹೆತ್ತು ತುಪ್ಪವಾಗಿದೆಯೇನೋ ಎನಿಸುತ್ತಿತ್ತು.

ತಾತ ಪದಾರ್ಥಗಳನ್ನು ಒದಗಿಸುವುದು ಅವ್ವ ತಿಂಡಿ ತೀರ್ಥ ತಯಾರಿಸುವುದು ಎಲ್ಲವೂ ಅದ್ಭುತ. ಅವರಿಬ್ಬರ ಹೊಂದಾಣಿಕೆಯೇ ಹಾಗೆ ಹಾಲುಜೇನಿನಂತೆ. ನಾವೆಲ್ಲಾ ಊರಿಗೆ ಹೊರಟರೆ  ಅವ್ವ ಕಟ್ಟೆಯ ಕೊನೆಗೆ ಬಂದುಹಣೆಗೆ ಕೈ ಅಡ್ಡಲಾಗಿಟ್ಟು ತೇವವಾದ ಕಣ್ಣಿನಿಂದ ಗಾಡಿ ಮರೆಯಾಗುವವರೆಗೂ ಬಗ್ಗಿ ನೋಡುತ್ತಿರುವುದು ಕಣ್ಣಿಗೆ ಕಟ್ಟಿದ ಹಾಗಿದೆ.

ಒಂದೇ ಎರಡೇ ಅವ್ವ ತಾತ ನ ಪ್ರೀತಿ , ಅಮ್ಮ ಅತ್ತೆ ಮಾಮ ಅವರುಗಳ ಭಾಂದವ್ಯ, ನಮ್ಮ ಮಕ್ಕಳ ಸೈನ್ಯದ ಸಂಭ್ರಮ ಎಲ್ಲವು ನೆನಪುಗಳ ಒರತೆಯಲಿ ಜಿನುಗುತ್ತಲೇ ಇರುತ್ತವೆ. ಮನಸ್ಸು ನಿರಂಕುಶ ಪ್ರಭು.

ಜೀವನದ ಅನುಭವಗಳನ್ನು ಆಯ್ದಿಟ್ಟುಕೊಳ್ಳುವ ಶಕ್ತಿ ಇದೆ. ಜೀವನದ ಸಂಪತ್ತು ಅನುಭವಗಳಲ್ಲಿದೆ. ನೆನಪು ಆ ಅನುಭವಗಳ ನಿಧಿ.


                       

‍ಲೇಖಕರು Avadhi

October 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shyamala Madhav

    ನಿಮ್ಮ ಸಿಹಿ ನೆನಪುಗಳು ನಮ್ಮ ಹೃದಯಕ್ಕೂ ತಂಪೆರೆದುವು, ಸುಮಾ. ಅಭಿನಂದನೆ. ನಾನೂ ನೆನಪನ್ನೇ ಉಸಿರಾಡುವವಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: