-ಅಂಜಿನಪ್ಪ ಡಿ
ಒಮ್ಮೆ ಸುರಿದು ಬಿಡಲಿ ಬೆಂಕಿಯ ಮಳೆಯು!
ಬಿಸಿಲು ಸುರಿಯುತ್ತಿದೆ
ಬಯಲು ಭೂಮಿಯ ತುಂಬ
ಉಸಿರು ಬಿಸಿಯಾಗಿ
ಸುಡುತ್ತಿದೆ ಹಸಿದ ಒಡಲ|
ಹೊಲಗದ್ದೆಯಲಿ ಬೆವರು ಸುರಿಸಿ
ಮೈಮುರಿದು ದುಡಿಯುವ ಅಪ್ಪನ
ಒಡಲ ಬೇಗೆ ಅತಿಯಾಗಿ ಕುಚ್ಚುತ್ತದೆ
ಅವ್ವನ ಮಡಿಲೂ ಕೂಡ ಸುಡುತ್ತಿದೆ|
ಎದೆ ಗೂಡಲಿ ಉರಿಯುತ್ತಿದೆ
ಬದುಕಿನ ಬಿಂಬ
ಕನಸಿನ ರೆಕ್ಕೆಗಳೆಲ್ಲ ಸುಟ್ಟು
ಹುಡಿಯಲಿ ಬೆರೆತು ತೇಲಾಡುತ್ತದೆ|
ಏನಿದೆ ಕನಸು ಕಾಣಲು ಇನ್ನು
ಕಣ್ಣ ದೃಷ್ಟಿ ಮಂಜಾಗಿ
ಕಲ್ಪನೆಯು ಕೂಡ
ಊಹಿಸಿಕೊಳ್ಳಲಾಗದ ಕತ್ತಲಾಗಿದೆ|
ಕತ್ತಲೆಂದರೆ ಬರೀ ಕತ್ತಲಲ್ಲ
ಅದು ಕಾಗ್ಗತ್ತಲು
ಯಾರ ಕಲ್ಪನೆಯೂ ಕೂಡ
ಅದರೊಳಗೆ ಬೆರೆತು ಕಾಣಿಸಲಸಾಧ್ಯವಾಗಿದೆ|
ಹಸಿದು ಬೆಂದ ಒಡಲಿಗೆ ಬೇಕಿದೆ
ಅಂಬಲಿಯ ಸೆಲೆ
ಪ್ರತಿ ಗುಟುಕಿನಲ್ಲೂ ಸದಾ
ಜೀವನ್ಮುಖಿ ಉತ್ಸಾಹದ ನೆಲೆ ಕಾಣುತ್ತಿದೆ|
ಕಣ್ಣೀರ ಸುರಿಸಿದರು
ಚಿಗುರಲಿಲ್ಲ ಅಂಬಲಿಯ ಬಳ್ಳಿ
ಬೆವರು, ರಕ್ತ ಕರಗಿ
ಮಾಂಸಖಂಡವೆಲ್ಲ ಬತ್ತಿದಾಗ
ಇನ್ನೆಲ್ಲಿಯ ಕುಲುಮೆ|
ಬಿಸಿಲು ಕೂಡ ಹಾಗೆ ಸುರಿಯುತ್ತಿದೆ
ಒಳಗಿನ ಉಸಿರು ಕೂಡ ಸುಡುತ್ತಿದೆ
ಒಡಲ ತಣಿಸುವುದಾದರೂ ಹೇಗೆ
ಒಮ್ಮೆ ಸುರಿದು ಬಿಡಲಿ ಬೆಂಕಿಯ ಮಳೆಯು|






0 Comments