ಬಿದಲೋಟಿ ರಂಗನಾಥ್ ಕವಿತೆಗಳು ನೋವಿನ ನೇಗಿಲು..

ಕವಿತೆ ಬಂಚ್

ಅವಧಿಯ ಮಹತ್ವದ ಪ್ರಯೋಗಗಳಲ್ಲಿ ಮುಖ್ಯವಾದದ್ದು ‘Poet of the Week’

ಹೊಸ ಬನಿಯ ಕವಿತೆಗಳನ್ನುಪರಿಚಯಿಸುವ, ಆ ಮೂಲಕ ಕನ್ನಡ ಕಾವ್ಯ ಲೋಕವನ್ನು ಪ್ರವೇಶಿಸುತ್ತಿರುವ ಕವಿಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ.

ಅಷ್ಟೇ ಅಲ್ಲದೆ ಪ್ರಕಟಿಸಿದ ಕವಿತೆಗಳನ್ನು ಕಾವ್ಯ ಪ್ರಿಯರಿಗೆ ಕಳಿಸಿಕೊಟ್ಟು ಅವರ ಅಭಿಪ್ರಾಯವನ್ನು ಪ್ರಕಟಿಸುವುದು. ಇದರಿಂದ ಕವಿಗಳಿಗೆ ಮೊದಲ ಅಭಿಪ್ರಾಯವನ್ನು ಧಕ್ಕಿಸಿಕೊಟ್ಟು ಅವರು ಇನ್ನಷ್ಟು ಬರೆಯಲು ಕುಮ್ಮಕ್ಕು ನೀಡುವುದು ಉದ್ಧೇಶ.

ಈ ವಾರದ POET OF THE WEEK ನಲ್ಲಿ ಬಿದಲೋಟಿ ರಂಗನಾಥ್ ಅವರ ಕವಿತೆಗಳು ನಿಮಗಾಗಿ 

‘ಬಿ ರಂ’ ಎಂದೇ ಹೆಸರುವಾಸಿಯಾದ ರಂಗನಾಥ ಬಿ ಎಂ ಅವರು ‘ಅವಧಿ’ಗೆ ಚಿರಪರಿಚಿತರು. ತಮ್ಮದೇ ಬಾನಿಯ ಕವಿತೆಗಳ ಮೂಲಕ ಗಮನ ಸೆಳೆದವರು. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬಿದಲೋಟಿಯಲ್ಲಿ ಹುಟ್ಟಿ ಬೆಳೆದವರು, ಪ್ರಸ್ತುತ ವಕೀಲರು. ಕೋರ್ಟ್ ನ ಕೊಠಡಿಯ ಒಳಗೆ ಕವಿತೆಯೆಂಬ ಗುಬ್ಬಚ್ಚಿಯೂ ಇದ್ದರೆ..!! ಅಂತಹ ಒಂದು ಕಾವ್ಯ ಗುಬ್ಬಿ ಬಿದಲೋಟಿ ರಂಗನಾಥ್.

ಮಣ್ಣಿಗೆ ಬಿದ್ದ ಹೂಗಳು’ ‘ಬದುಕು ಸೂಜಿ ಮತ್ತು ನೂಲು’ ಎಂಬ ಎರಡು ಕವನ ಸಂಕಲನಗಳನ್ನು ರಚಿಸಿದ್ದಾರೆ. ಇವರ ಕಾವ್ಯಕ್ಕೆ ‘ಸಂಕ್ರಮಣ’ ಬಹುಮಾನ ಹಾಗೂ ತಾಲೂಕು ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿವೆ.

ಬೆಳಕಿನ ಚೂರುಗಳ ತಲಾಸು 

ಒಳಗೊಳಗೆ ಉರಿದು ಬೂದಿಯಾದೆ
ಉರಿಯುವಾಗ ನೀರು ಚಿಮುಕಿಸಲಿಲ್ಲ ಯಾರೂ
ಬಿಂದಿಗೆಯಲಿ ನೀರ ಸುರಿಯಲೋದವರು
ಕನ್ನಡಿಯೊಳಗಿನ ಬಿಂಬವಾದರು

ಕಣ್ಣೊಳಗಿನ ಜಾಡು ಹುಡುಕಲೋಗಿ
ಒಳಗಿನ ಹುಲ್ಲುಹಾಸಿನ ಮೇಲೆ ಮಿಡತೆ ಕಣ್ಣು
ಮಾತು ಚರಂಡಿಯೊಳಗೆ ಬಿದ್ದು
ಮೌನದ ದೀಪವಾಯಿತು

ನೋವಿನ ಅಲೆಯೆದ್ದು ಹೃದಯವನು ಹಿಂಡುವಾಗ
ಅವ್ವ ನೆನಪಾದಳು
ಬಿದ್ದೆನೆಂದು ಬೀಳದ ಕನಸು
ಮುರುಟಿದ್ದು ಕಂಡು ಕಾಮನಬಿಲ್ಲು ಕರಗಿತು

ನಾಲಗೆ ಮೇಲೆ ನುಡಿದ ಮಾತು
ಸೋತು ನಿಂತಿದ್ದ ಕಂಡು
ಬಾನ ದಾರಿಯಲಿ ಕಂಡ ಹೂ
ಪಕಳೆಗಳ ಚಲ್ಲಿ ಅಂದ ಕೆಡಿಸಿತು

ಎದೆಯ ಬಾರದ ನೋವಿಗೆ
ಚಂದ್ರ ಕಾಂತಿಯ ಬೆಳಕು
ಕಾಲು ಮುರಿದುಕೊಂಡು
ಮನಸೆಂಬ ನವಿಲ ಕಣ್ಣಲ್ಲಿ ನೀರು

ಬಯಲ ಬೇಗುದಿಯಲಿ
ಅಚಲ ನಿಲುವು ತಾಳಿದರೂ
ನೆಟ್ಟ ನಂಬಿಕೆಯ ಗಿಡದ
ನೆರಳ ದಾರಿಯ ಮೇಲೆ
ಬಿಸಿಲ ಕಣ್ಣು ಬಿದ್ದು
ಉಸಿರು ಗಟ್ಟಿದ ತಾಳ್ಮೆಯ
ತಲೆ ಓಳಾಯಿತು
ಕನಸು ಚೂರಾಗಿ
ನೀಡಿದ ಕರದ ಮುಂದೆ
ಮನಸು ಕೈ ಕಟ್ಟಿ
ಮೌನದ ಕತ್ತಲೆಯಲಿ
ಬೆಳಕಿನ ಚೂರುಗಳ ತಲಾಸು…

 

ಕಣ್ಣ ಪಟಲದಲಿ ಅವನದೇ ಚಿತ್ರ

ಮಟ ಮಟ ಮಧ್ಯಾಹ್ನ
ಕಣ್ಣ ಕೀಲಿ ತೆರೆಯುತ್ತ…
ಲೋಕದ ಸುಪ್ತ ಭಾವದ ಜಾಡು
ಹಸಿವಿನ ಕದ ತೆರೆದಿತು

ಕರ್ಣಗಳು ನೆಟ್ಟಗಾದವು
ಹೊರಗಿನ ನೋವಿನ ಅಳುವ ದ್ವನಿ ಅಪ್ಪಳಿಸಿ
ಓಡಿದೆ ಒಂದೇ ಉಸಿರಿಗೆ ಧ್ವನಿಯತ್ತ
ಹೌದು ಅವನು ಅಳುತ್ತಿದ್ದಾನೆ
ಹರಿದ ಮಾಸಲು ಪಂಚೆ ಟವಲ್ಲು
ಎಣ್ಣೆ ನೀರು ಕಾಣದ ಕಳೆಗೆಟ್ಟ ಕೂದಲು
ಕೊರಳಿಗೆ ನೇತಾಕಿಕೊಂಡಿದ್ದ ಶನಿದೇವರ ಪಟ

ನೋಡುತ್ತಿದ್ದೆ ಗೇಟ ಮೇಲೆ ಕೈಯಿಟ್ಟು

ಅವನ ನೋವಿನ ಹಾಡಿಗೆ
ಭೂಮಾತೆ ಅಯ್ಯೋ ಅನ್ನುತ್ತಿದ್ದಳು
ನೀಡುವ ಕೈಗಳು ಕಾಣಲಿಲ್ಲ

ನನಗೂ ಏನಾದರು ಕೊಡಬೇಕೆನಿಸಿ ಒಳ ಬಂದೆ
ರೂಪಾಯಿ ಅಂಗೈಲಿಡಿದು ಹೋದೆ
ಅವನು ಆಗಾಗಲೇ ಬೆನ್ನು ತೋರಿಸಿದ್ದ
ಅದು ಇಳಿ ವಯಸ್ಸಿನ ಮೆದು ನಡಿಗೆ
ಅಯ್ಯೋ ಅವನು ತಿರುಗಲೂ ಇಲ್ಲ
ಯಾಕೆ ಹುಟ್ಟಿಸಿದೆ ದೇವರೆ ಭೂಮಿ ಮ್ಯಾಲೆ
ಎಂಬ ಅವನ ಹಾಡು ನನ್ನ ಕೂಗನು ನುಂಗಿತ್ತು

ಸರ್ಕಾರ ಕೊಡುವ ಉಚಿತ
ಅಕ್ಕಿಗೆ ಕಿಮ್ಮತ್ತಿಲ್ಲದೆ

ಬಯಲ ಮೇಲಿನ ಭಿಕ್ಷೆ
ಮೂಕ ದೇವರ ಪಟದೊಂದಿಗೆ
ನಾಡ ನಡುವಿನ ಕೂಗು
ಸಾಗುತ್ತಲೇ ಇತ್ತು…
ನಾನು ಅವನ ನೋವನ್ನು ಒಂದಿಷ್ಟು ಖರಿದಿಸಬೇಕಿತ್ತು
ರೂಪಾಯಿ ನನ್ನಲ್ಲೇ ಉಳಿಯಿತು
ಒಡಲ ನೋವು ಕವಿತೆಯಾಯಿತು

 

ಬುದ್ದ ನೀನು ಮತ್ತೆ ಬೇಕು  ನೆಲಕೆ

ಅಳಬೇಡ ಬುದ್ಧಮಹಾತ್ಮನೆ
ಹೊಳಾದ ಭರತ ಖಂಡ ಕೈಲಿಡಿದು
ಎಷ್ಟಂತ ಹೊಲೆಯುತ್ತೀಯ
ಹೊಲೆದೊಲೆದು ಬೆರಳು ನೋವುಂಡರು
ಹೊಲೆದೋದ ಕಡೆಯಿಂದ ಮತ್ತೆ ಬಿಚ್ಚಿಕೊಳ್ಳುತ್ತಿದೆ
ಮಣ್ಣ ಕಣ್ಣಿಗೆ ಯುದ್ದದ ವಾಸನೆ

ತುಪಾಕಿಯ ಸದ್ದಿಗೆ
ಪಾರಿವಾಳಗಳು ರೆಕ್ಕೆ ಬಿಚ್ಚಿವೆ
ನಿನ್ನೆದೆಯೊಳಗೆ ನೂರಾರು ನೋವಿನ ತೊರೆಗಳು
ಕಾಮಬಿಲ್ಲು ಕಲಸಿದ ಚಿತ್ರಕೆ ಕಲಾವಿದನಿಲ್ಲ

ನಿದ್ದೆ ಮರೆತ
ಸತ್ಯದ ಹೆಜ್ಜೆಗಳ ಮೇಲೆ ಬೆಂಕಿ ಹಾಕಲಾಗಿದೆ
ಒಡಲುರಿಯ ನೋವಿಗೆ ಮುಲಾಮಿಲ್ಲ
ಕಹಿ ನೆರಳ ಕನಸು ಸಾವಿನ ಬೆನ್ನೇರಿ
ಸಾವು ಸವರುವ ಮನೆಗಳಲ್ಲಿ ಬೆಳಕುಡುಗಿ
ನೆತ್ತಿ ಮೇಗಳ ಬುತ್ತಿ ಬಿಚ್ಚಲು ಕೈ ನಡುಕ
ನೀನು ಉಸಿರಾಡಿದ ಭರತ ಭೂಮಿ ಮೇಲೆ
ನಂಜಾದ ಚಂದ್ರನ ಬೆಳಕು
ನೀನು ಕೂತೆದ್ದ ಆಲದ ನೆರಳಡಿಯ
ಅರಿವಿನ ಕರುಳ ಮೇಲೆ ಚೂರಿಗಳ  ನೆರಳು
ಯಾವುದೋ ಆಲಾಪದ ಸದ್ದುಗಳು

ಆಸೆಗಳು ಹಸಿರಾಗಿ
ಮನಸುಗಳು ಬರುಡಾಗಿವೆ
ಕನಸಿಗೆ ಕಣ್ಣುಗಳಿಲ್ಲ
ಎದೆಯ ಗೂಡಲಿ ಮಮಕಾರ ಕರುಣೆ ಸತ್ತಿವೆ
ಬುದ್ಧ ನೀನು ಮತ್ತೆ ಬೇಕು ಈ ನೆಲಕೆ
ತೊಟ್ಟ ಅಷ್ಟೂ ದ್ವೇಷ ಅಸೂಯೆ ಆಸೆಗಳ ತೊಳೆಯಲು

 

ನುಡಿ ಹೊತ್ತ ನಿನ್ನ ಹೆಗಲಿಗೆ ಶರಣು

ನಿನ್ನ ನಗುವ ತುಟಿಗಳಲ್ಲಿ
ನನ್ನ ನೆಮ್ಮದಿ ಉಸಿರಾಡುತ್ತಿದೆ
ಭಾವಗೂಡನು ಹೆಣೆದ ಆ ಕಣ್ಣುಗಳಲ್ಲಿ
ಎಷ್ಟೊಂದು ಬೆಳಕಿನ ದಾರಿಗಳು

ಮರೆತ ಮಾತುಗಳಿಗೆ
ತೆರೆದ ಮನಸಗನ್ನಡಿಯಲ್ಲಿ
ನೆರೆತ ಬದುಕಿನ ಸಿರಿ
ಕಾದ ಹೃದಯದ ಕುದುರೆಗೆ
ಮೂರ್ಛೆ ರೋಗ

ಮರದಡಿಯ ಮೆಲು ನುಡಿ
ಹಿತ ಸ್ಪರ್ಶದ ಕಾವಿನಲಿ ಅರಳಿದ ಪಾರಿವಾಳ
ಭವಿಷ್ಯದ ಕಣ್ಣಿಗೆ ಪ್ರೀತಿಯ ಪೊರೆ ಅಡ್ಡಿ
ಕಣ್ಣ ಕಣಿವೆಯಲ್ಲೇ ಮಡಿಚಿಟ್ಟ ಆಕಾಶ
ಚಂದ್ರ ನಕ್ಷತ್ರಗಳ ಹಿತ ಬೆಳಕು

ಮಣ್ಣ ಮನಸಿನಲಿ ಹೂತು ಹೋಗುವ
ಬೆವರ ಘಮಲು
ನೀ ಬರೆದ ಕವಿತೆಗೆ
ನನ್ನದೇ ತಲೆಬರಹ

ಇರುವೆ ಕಾಲಿಗಂಟಿದ
ನಮ್ಮವೇ ಹೆಜ್ಜೆ ಗುರುತುಗಳು
ಇರುವೆ ಬರೆದ ಚಿತ್ರದಲಿ
ನನ್ನದೊಂದು ಕಣ್ಣು ನಿನ್ನದೊಂದು ಕಣ್ಣು

ಮೊನ್ನೆ ನೋಡಿದೆ
ಅದೇ ತಾವಿನ ಮಣ್ಣಗೂಡಲಿ
ನಮ್ಮದೇ ನುಡಿಗಳ ಹೊತ್ತು ನಡೆವ
ಅದೇ ಇರುವೆಯ ನಡಿಗೆಯನ್ನು
ಅದಕ್ಕೆ ತಲೆಬಾಗಿ ನಮಸ್ಕರಿಸಿದೆ
ನಮ್ಮ ನುಡಿಗಳ ಹೊತ್ತು ನಡೆವ
ನಿನ್ನ ಹೆಗಲಿಗೆ ಶರಣು

ಯಾಕೋ ಮುಟ್ಟಬೇಕೆನಿಸಿ
ಸಕ್ಕರೆ ಪುಡಿ ಮುಂಗೈ ತೋರು ಬೆರಳ ಮೇಲಿಟ್ಟೆ
ನೆಕ್ಕಿ ಅಲ್ಲೇ ಕೂತು ಬಿಟ್ಟಿತು
ಯಾವುದೋ ಭಾಂದವ್ಯದ ಉಸಿರ ಕೊಂಡಿಯಂತೆ
ಕೇಳಿತು ಕಣ್ಣಲ್ಲೇ ಹೇಗಿದ್ದಾಳೆ ಅವಳು
ನನ್ನ ಮೌನ ಕಣ್ಣೀರು
ಬಹುಶಃ ಉತ್ತರವಾಗಿರಬಹುದು
ಎದೆಗೆ ನೋವು ತಾಕಿ
ಗೋಣ ಚೆಲ್ಲಿತು

ಹೆಣ ಭಾರವಲ್ಲ
ಉಸಿರ ಭಾರದ ಮುಂದೆ

ಒಮ್ಮೆ ನೋಡಲೇ ಬೇಕು ನೀನು
ಅಕ್ಕರೆಯಲ್ಲಿ ಬೆಂದ ಶರೀರ ಮತ್ತು ಮನಸನು
ಬಿಸಾಟು ಬರಲು ಮನಸಿಲ್ಲ
ತಂದಿರುವೆ ಶವವಾದ ಇರುವೆಯ
ನೀ ಬರೆದ ಕವಿತೆ ಸಾಲುಗಳ ನಡುವೆ ಮಲಗಿದೆ
ಶಾಂತವಾಗಿ…
ಬೇಗ ಬಂದು ಬಿಡು
ಮತ್ತೆ ಚಿಟ್ಟೆಯಾಗಿ ಹಾರಿ ಹೋಗಿ ಬಿಡಬಹುದು
ನೆನಪುಗಳ ಬುತ್ತಿ ಹೊತ್ತುಕೊಂಡು
ನೀ ಬಂದು ಸ್ಪರ್ಶಿಸುವ ಮೊದಲೇ.

ಎಲ್ಲಾ ದೇವರಂತೆ ನೀವೂ ಮೌನಿ

ಹೊರಗಣ್ಣು ಮುಚ್ಚಿದ್ದರೂ
ಒಳಗಣ್ಣು ತೆರೆದೇ ಇದೆ
ನೋಡುವ ಮನಸುಗಳ ಚಲನೆಗೆ
ಜ್ಞಾನಶಕ್ತಿಯ ಕೊರತೆ

ಅಂತರ್ಮುಖಿಯಾಗಿ ಬಿತ್ತಿದ ಭಾವ
ಜೋಳಿಗೆಯಿಂದೆದ್ದು ಬಿತ್ತರವಾಗಿದೆ
ನಡು ರಾತ್ರಿಯ ಮೌನ
ಎದೆಗೂಡಲಿ ಬೆಳೆದ ಪಕ್ಷಿಗಳ‌ ಆಕ್ರಂದನ
ನಡುಗಿದ ಮೌನ ಬೆಳದಿಂಗಳು

ಕನಸುಗಳ ದಾರಿಯಲ್ಲಿ
ಮನಸುಗಳ ವ್ಯಸನ
ಅಲ್ಲಿನ ಬಂಡೆಗಳ ಕಣ್ಣಗಳೂ ಒದ್ದೆ
ಒಡೆಯನ  ಹಂಸ ಹಾರಿದ ಹೊತ್ತು
ನಿಶ್ಯಬ್ದ ಉಸಿರು ನಿರಾಕಾರ ಹೆಜ್ಜೆ

ನೂರನ್ನೊಂದು ದಾಟಿ
ನೂರನ್ನೆರಡರ ಗಡಿ
ಮಕ್ಕಳ ಹಸಿವನ್ನು ನೆನೆದು
ಜೀವದುಸಿರನೇ ಮುಚ್ಚಿಟ್ಟ ಸಂತ

ನೀವು ಕುಂತ ಕುರ್ಚಿ ಬರಿದಾದರು
ಅಲ್ಲಿವೆ ನಿಮ್ಮವೇ  ಬಿಕ್ಕಳಿಕೆ
ಒಳಗಣ್ಣ ದರ್ಶನದ ಹೊಳಪು
ನಿಮ್ಮೆಜ್ಜೆ ಮೇಲಿನ
ನಿಶ್ಚಲ ನಿರ್ಮಲ ಪಿಸು ದ್ವನಿಗಳು
ಉಸಿರಾಡುತ್ತಿವೆ ಸದ್ದಿಲ್ಲದೆ
ಎದುರಿನ ಗೋಡೆಯ ಗಡಿಯಾರದ
ಟಿಕ್ ..ಟಿಕ್…ಸದ್ದು ಕೇಳುತ್ತಲೇ ಇದೆ.

ಎಷ್ಟೊಂದು ಒಡಲುಗಳ
ಹಸಿವ ತಣಿಸಿದ ಅನ್ನದಾತ
ಕಳೆ ತುಂಬಿದ ಕಳೇಬರ ಹೊತ್ತು
ಹೊರಟಿದೆ ಮೆರವಣಿಗೆ…..
ಸಿದ್ದಗಂಗಾ ಮಠದ ತುಂಬಾ
ನಿಟ್ಟುಸಿರ ಸದ್ದುಗಳು
ಬಸಿದಿವೆ ನೋವಿನ ಭಾವರಸ

ನಡೆದಾಡುವ ದೇವರು
ನಡೆಯದೇ ಕೂತು ಬಿಟ್ಟಿದ್ದೀರಿ
ಧ್ಯಾನಕ್ಕೆ ಕೂತವರಂತೆ
ಎಲ್ಲಾ ದೇವರಂತೆ ನೀವೂ ಮೌನಿ
ಮಾತಿಲ್ಲದ ದೇವರ ಗುಡಿಗೆ
ಹೇಗೆ ಬರಲಿ….?

ಮಾತು ಕೇಳದ ಮನಸು
ದಿಟ್ಟಿಸಿ ನೋಡಿತು
ಜನಸಾಗರದ ನಡುವೆ
ಅಗೋ ಅಲ್ಲೇ,
ಸಾಧನೆಯ ಶಿಖರದಲ್ಲಿ
ತುಟಿ ಬಿಚ್ಚದ ನಗು ಕಾಣುತ್ತಲಿದೆ
ತೆರೆದ ಬಾಹುಗಳು
ಮಕ್ಕಳ ಆಲಿಂಗನಕ್ಕೆ ಆಶಿರ್ವಾದಕ್ಕೆ ಅಣಿಯಾಗಿವೆ
ನೀವಿಲ್ಲವೆಂದರೆ ಅಸತ್ಯವಾದಿತು.

 

‍ಲೇಖಕರು Avadhi Admin

March 28, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: