‘ಭಾರತ ಪ್ರಕಾಶಿಸುತ್ತಿದೆ’ ಮತ್ತು ‘ಅಚ್ಛೇ ದಿನ್’ ಎರಡು ನೋಟ

ಎನ್ .ಡಿ ಎ ನೇತೃತ್ವ ವಹಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಆಗಷ್ಟೇ ಪೂರ್ಣಾವಧಿಯ (೧೯೯೯-೨೦೦೪) ಆಡಳಿತ ನಡೆಸಿ ಮರು ಆಯ್ಕೆಗೆ ಜನರ ಮುಂದೆ ಮತ ಯಾಚನೆಗೆ ಹೊರಟಿದ್ದರು. ಜನರ ಮುಂದೆ “ ಭಾರತ ಪ್ರಕಾಶಿಸುತ್ತಿದೆ” ಎಂಬ ಘೋಷವಾಕ್ಯವನ್ನು ಹಿಡಿದು ಮತ ಕೇಳುತ್ತಿದ್ದರು.

ವಾಜಪೇಯಿ ಅವರು ಪ್ರಧಾನಿಯಾಗಿದ್ದ ಕಾಲದಲ್ಲೇ ಪಾಕಿಸ್ಥಾನದೊಂದಿಗೆ ನೇರವಾದ ಕಾರ್ಗಿಲ್ ಯುದ್ಧವನ್ನೆ ಮಾಡಿ ಜಯಸಿಕೊಂಡಿದ್ದರು. ಗುಜರಾತ್ ಗಲಭೆಯಿಂದಾಗಿ ನೊಂದು ನಲುಗಿದ್ದರು. ಹಿಂದೂತ್ವ, ರಾಮಮಂದಿರ ಎನ್.ಡಿ.ಎ ಒಕ್ಕೂಟದ ಅಜೆಂಡಾಗಳಲ್ಲ. ಕೇವಲ ಅಭಿವೃದ್ದಿ ವಿಷಯ ಮಾತ್ರ. ಎಂಬುದಾಗಿ ಜನರ ಮನಸ್ಸನ್ನು ಗೆಲ್ಲಲು ಹೊರಟಿದ್ದರು.

ಅಂತಿಮವಾಗಿ ಜನರ ತೀರ್ಪು ವಿರುದ್ದವಾಗಿತ್ತು. ಹಾಗೆಂದ ಮಾತ್ರಕ್ಕೆ ಜನರು ಅಭಿವೃದ್ದಿ ಅಜೆಂಡಾಕ್ಕೆ ಮತ ನೀಡದೆ ತಿರಸ್ಕರಿಸಿದರು ಎಂದರ್ಥವಲ್ಲ. ಅದಕ್ಕಿಂತ ಮಿಗಿಲಾಗಿ ಯುಪಿಎ ಒಕ್ಕೂಟ ವಾಜಪೇಯಿ ಆಡಳಿತದ ವಿರೋಧಿ ಅಲೆಯನ್ನು ಸಶಕ್ತವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಅದಿರಲಿ, ನಾಲ್ಕು ಮುಕ್ಕಾಲೂ ವರ್ಷ ದೇಶವನ್ನು ಆಳಿದ ವಾಜಪೇಯಿ ಅವರು ಈ ಅವಧಿಯ ತಮ್ಮ ಸರ್ಕಾರದ ಅಡಳಿತವನ್ನು ಜನರ ಮುಂದಿಟ್ಟು ಮತ ಯಾಚಿಸಿದ್ದು ಗಮನಾರ್ಹ. ಅಧಿಕಾರದಲ್ಲಿ ಇದ್ದವರು ತಮ್ಮ ಸಾಧನೆ, ಮಾಡಿರಬಹುದಾದ ಜನಪರ ಕೆಲಸಗಳನ್ನುಮುಂದಿಟ್ಟುಕೊಂಡು ಮತ ಕೇಳುವುದು ಅದೂ ಒಂದು ದೊಡ್ಡ ನೈತಿಕ ಶಕ್ತಿ ಕೂಡ. ಈ ಶಕ್ತಿ ಕಳೆದುಕೊಂಡವರು ಮಾತ್ರ ಜನರ ಮನಸ್ಸನ್ನು ಕದಡುವ ಹೊಸ ಮೋಸದ ಹಾದಿ ತುಳಿದಿರುತ್ತಾರೆ. ‘ಭಾರತ ಪ್ರಕಾಶಿಸುತ್ತಿದೆ’ ಎಂದ ವಾಜಪೇಯಿ ಅವರಲ್ಲಿ ಒಂದು ನೈತಿಕ ಶಕ್ತಿಯಾದರೂ ಇತ್ತು. ಆದರೆ ಅಚ್ಛೇ ದಿನ್ ಎಂದು ಹೇಳುವವರ ಎದೆಯಲ್ಲಿ ದೇಶಾವರಿತನವಲ್ಲದೆ ಮತ್ತೇನು ಕಾಣುತ್ತಿಲ್ಲ.

ಮತ್ತೊಮ್ಮೆ ಮೋದಿ ಮೋದಿ ಎಂದು ಘೀಳಿಡುತ್ತಿರುವವರು ಕಳೆದ ಐದು ವರ್ಷಗಳಲ್ಲಿ ಇದೇ ಮೋದಿ ಪ್ರಧಾನಿಯಾಗಿ ಮಾಡಿದ ಜನಪರ ಕೆಲಸಗಳನ್ನ(?) ಪಟ್ಟಿ ಮಾಡಿ ಜನರ ಮುಂದೆ ಇಡುತ್ತಿಲ್ಲ . ಬದಲಾಗಿ ಹೊಸ ವಿಷಯಗಳನ್ನು ಬಿತ್ತತೊಡಗಿದ್ದಾರೆ. ಅದು ಹಿಂದೂತ್ವ, ದೇಶಪ್ರೇಮ, ಗೋವು.. ವಗೈರೆ ವಗೈರೆ..

ಕಾರ್ಗಿಲ್ ಯುದ್ಧ, ಮುಂಬೈ ಮೇಲಿನ ದಾಳಿ ಈ ಕಾಲಗಳೇ ದೇಶ ತನ್ನ ಅಸ್ತಿತ್ವಕ್ಕಾಗಿ ಯುದ್ಧವನ್ನು ಮತ್ತು ದೇಶಪ್ರೇಮವನ್ನು ಮೆರೆಯಬೇಕಿದ್ದ ಕಾಲವಾಗಿತ್ತು. ಪುಲ್ವಾಮಾ ಘಟನೆ ದುರಂತ ಮತ್ತು ತಮ್ಮ ಆಡಳಿತದ ಭದ್ರತಾವೈಫಲ್ಯ . ಇದನ್ನು ಮರೆಮಾಚಲು ಹರಿಬಿಟ್ಟ ಸಂಗತಿ ಎಂದರೆ ಅದು ದೇಶಭಕ್ತಿ ಎಂಬ ಪ್ರಾಯೋಜಿತ ಸನ್ನಿ. ಇದು ಎಷ್ಟರ ಮಟ್ಟಿಗೆ ಜನರನ್ನು ಮೂರ್ಖರನ್ನಾಗಿಸ ಹೊರಟಿದೆ ಎಂದರೆ ದೇಶದ ಮಾಧ್ಯಮಗಳು ಪಂಚೇಂದ್ರಿಯಗಳನ್ನು ಕಳೆದುಕೊಂಡು ಗುಲಾಮರಂತೆ ಭಜನೆಯಲ್ಲಿ ತೊಡಗಿರುವುದು ವಿಪರ್ಯಾಸ. ಜನಸಮುದಾಯವನ್ನು ಹಿಮ್ಮುಖ ಚಲನೆಗಷ್ಟೆ ಅಲ್ಲದೆ ಯೋಚನಾ ಶಕ್ತಿಯನ್ನೇ ನಾಶ ಮಾಡಿ ಸುಳ್ಳುಗಳನ್ನು ಸತ್ಯವೆಂದು ನಂಬಿಸುವ ಕೆಲಸದಲ್ಲಿ ತೊಡಗಿವೆ.

ಕನ್ನಡದ ನ್ಯೂಸ್ ಚಾನಲ್‌ಗಳನ್ನು ತಿರುವುತ್ತಿದ್ದಾಗ ಟಿವಿಯೊಂದರ ವರದಿಗಾರನೊಬ್ಬ ಧಾರಾವಾಡದ ಪಿ.ಯು ಕಾಲೇಜೊಂದರಲ್ಲಿ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಮತ ಯಾರಿಗೆ ಎಂದು ವಿದ್ಯಾರ್ಥಿಗಳ ಮೂತಿಗೆ ಲೋಗೋ ಹಿಡಿದು ಪ್ರಶ್ನೆ ಮಾಡುತ್ತಿದ್ದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಏನಿದೆ ಎಂಬುದರ ಬಗ್ಗೆ ಸ್ವಲ್ಪ ಕುತೂಹಲಗೊಂಡು ನೋಡತೊಡಗಿದೆ. ಅದರಲ್ಲೂ ಮುಖ್ಯವಾಗಿ ಆ ವರದಿಗಾರ ‘ನಿಮಗೆ ರಾಹುಲ್ ಗಾಂಧಿ ಇಷ್ಟಾನೋ? ನರೇಂದ್ರಮೋದಿ ಇಷ್ಟಾನೋ? ನಿಮ್ಮ ಮತ ಯಾರಿಗೆ…..?’ ಎಂದು ಕೇಳುತ್ತಿದ್ದ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮಗಿಷ್ಟ ಬಂದ ಅಭಿಪ್ರಾಯವನ್ನು ಹೇಳುತ್ತಿದ್ದರು. ಕೆಲವರು ನಂಗೆ ಮೋದಿ ಇಷ್ಟ, ಅವರಿಗೆ ನಾನು ಓಟಾಕೋದು ಎನ್ನುತ್ತಿದ್ದರೆ ಅದನ್ನು ಮತ್ತೆ ಮತ್ತೆ ಕೇಳಿ ಸ್ವತಃ ತಾನೇ ಮೋದಿ ಎಂಬಂತೆ ಪುಳಕಗೊಂಡು ನಿರೂಪಣೆ ಮಾಡುತ್ತಿದ್ದ ಟಿವಿ ವರದಿಗಾರ ಕ್ಯಾಮರಾವನ್ನು ಕದಲಿಸದೆ ಇಂತಹ ಅಭಿಪ್ರಾಯಗಳ ಮುಖಗಳಿಗೆ ಹೆಚ್ಚು ಫೋಕಸ್ ಮಾಡಿ ತೋರಿಸುತ್ತಿದ್ದ.

ವಿದ್ಯಾರ್ಥಿನಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಯನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಳು. ನೋಟು ಅಮಾನ್ಯಿಕರಣ, ಜಿಎಸ್ಟಿ, ಕಪ್ಪು ಹಣ, .. ನಿರುದ್ಯೋಗ ಸಮಸ್ಯೆ, ಎಷ್ಟೆಲ್ಲಾ ಭರವಸೆಗಳನ್ನು ಮೋದಿ ಸರ್ಕಾರ ಮಾಡಲಿಲ್ಲ. ಅಷ್ಟಕ್ಕೂ ಇಂದು ‘ದೇಶಕ್ಕಾಗಿ ಮೋದಿ’ ಎಂದು ಮೋದಿಯನ್ನು ಹಿಂಬಾಲಿಸುವುದಕ್ಕೆ ದೇಶಕ್ಕೆ ಆಗಿರುವ ಗಂಡಾಂತರವಾದರೂ ಏನು? ದೇಶದ ಆಂತರಿಕ, ಬಾಹ್ಯ ಭದ್ರತೆಗೆ ಎಲ್ಲಾದರೂ ಧಕ್ಕೆ ಬಂದಿದೆಯಾ? .

ಇವತ್ತಿನ ಚರ್ಚೆ ಆಗಬೇಕಾದದ್ದು ಮೋದಿಯ ಐದು ವರ್ಷದ ಆಡಳಿತದಲ್ಲಿ ಆಗಿ ಹೋಗಿರುವ ಪ್ರಮಾದಗಳು, ಒಳಿತು-ಕೆಡುಕುಗಳ ಬಗ್ಗೆ ಚರ್ಚೆ ಆಗಬೇಕು, ಈ ವಿಷಯಗಳ ಆಧಾರದ ಮೇಲೆ ಸಂವಾದ ನಡೆಯಬೇಕು, ಅಧಿಕಾರ ಅನುಭವಿಸಿದವರು ಉತ್ತರದಾಯಿಗಳು ಇದೆಕ್ಕೆಲ್ಲಾ. ಆದರೆ ಈ ಬಗ್ಗೆ ಚರ್ಚೆಯೇ ನಡೆಯುತ್ತಿಲ್ಲ. ಕೇವಲ ಮೋದಿ ಮೋದಿ ಎಂಬ ಕಿರಿಚಾಟ ಮಾತ್ರ ಕೇಳುತ್ತಿದೆ ಎಂದು ಹೇಳುತ್ತಿದ್ದ ಆ ವಿದ್ಯಾರ್ಥಿನಿಯ ಫ್ರೌಢಿಮೆ ಕಂಡು ನಾನು ನಿಬ್ಬೆರಗಾಗಿ ಹೋದೆ.

ಹೌದಲ್ವ, ಇಂದು ಚರ್ಚೆ ನಡೆಯ ಬೇಕಾದದ್ದು ಹೀಗೆಯೇ. ದುರಾದೃಷ್ಟ ಜನರನ್ನು ದೇಶಭಕ್ತಿ, ಹಿಂದೂತ್ವ ಎಂಬ ಸಮೂಹಸನ್ನಿಗೆ ಎಳೆದು ತಂದು ನಿಲ್ಲಿಸಿ ತಮ್ಮ ವೈಫಲ್ಯವನ್ನು ಮುಚ್ಚಿಕೊಂಡ ಮಂದಿ ವ್ಯಕ್ತಿ ಪೂಜೆಯಲ್ಲಿ ಮಿಂದು ಮೊರೆಯುತ್ತಿದ್ದಾರೆ. ಒಂದು ಸಂವಾದವನ್ನು. ಪ್ರಶ್ನೋತ್ತರವನ್ನು ಸಹಿಸದೆ ಪ್ರಶ್ನಿಸುವವರನ್ನು ದೇಶದ್ರೋಹಿ ವಧಾಸ್ಥಾನಕ್ಕೆ ತಳ್ಳಿ ಶಿಕ್ಷಿಸುವ ರಣೋತ್ಸಾಹದಲ್ಲಿದ್ದಾರೆ.

ಕಳೆದ ಚುನಾವಣೆಯಲ್ಲಿ ಜನರಿಗೆ ಕೊಟ್ಟ ಪ್ರಣಾಳಿಕೆಯ ಅನುಷ್ಟಾನದ ಮೌಲ್ಯಮಾಪನವೇ ಇಲ್ಲ. ಅದನ್ನು ಕೇಳಲಾರದಷ್ಟು ದೇಶಭಕ್ತಿಯ ಗದ್ದಲದಲ್ಲಿ ಜನರನ್ನು ಪ್ರಜ್ಞಾಶೂನ್ಯರಾಗಿಸುವ ತಂತ್ರಗಳು ನಡೆದಿವೆ. ಮೋದಿ ಕುರಿತಾದ ಪ್ರಶಂಸಾತ್ಮಕ ಘೋಷಣೆಗಳಲ್ಲಿ ಮುಳುಗಿಹೋದ ನನ್ನ ಪರಿಚಯಸ್ಥ ಕೆಲವರನ್ನು ಪ್ರಶ್ನೆ ಮಾಡಿದೆ. ‘ಯಾಕೆ ಮೋದಿ ಮತ್ತೆ ಅಧಿಕಾರಕ್ಕೆ ಬರಬೇಕು’ ? ಎಂದು.

ಅದಕ್ಕೆ ಅವರು ಕೊಟ್ಟ ಉತ್ತರ ಹೀಗಿತ್ತು: ‘ದೇಶಕ್ಕಾಗಿ, ಪಾಕಿಸ್ತಾನಕ್ಕೆ ಬುದ್ದಿಕಲಿಸಲು, ಸಾಬ್ರುದ್ದು ಜಾಸ್ತಿಯಾಗಿದೆ. ಅವರಿಗೆಲ್ಲಾ ತಕ್ಕ ಪಾಠ ಕಲ್ಸಬೇಕಾಗಿದೆ.. ಅದಕ್ಕಾಗಿ ಮತ್ತೊಮ್ಮೆ ಮೋದಿ ಅಧಿಕಾರಕ್ಕೆ ಬರಬೇಕು .’ ಎಂದಿತ್ತು. ಈಗ ಇದೆಲ್ಲಾ ಮುಖ್ಯ ವಿಷಯವಲ್ಲ. ದೇಶದ ಅಭಿವೃದ್ದಿ ಮೋದಿ ಮಾಡಿದ ಕೆಲಸಗಳೇನು? ಮುಂದೆ ಮಾಡದೆ ಉಳಿದ ಕೆಲಸಗಳ್ಯಾವು ಎಂಬ ಮರುಪ್ರಶ್ನೆಗೆ ಮೋಧಿ ಭಕ್ತರಲ್ಲಿ ಉತ್ತರವಿರಲಿಲ್ಲ. ಮೋದಿ , ಮೋದಿ ಎಂದು ಗುಂಪಿನಲ್ಲಿ ಸೇರಿಹೋದರು. ಅವರೊಳಗೆ ಇಂತಹದ್ದೊಂದು ಕಾರ್ಕೋಟ ಜೀವ ವಿರೋಧಿ ವಿಷವನ್ನು ತುಂಬಿದವರು ಅದೆಂತಹ ದುಷ್ಟರಿರಬೇಕು. ಅಧಿಕಾರಕ್ಕಾಗಿ ಜನರನ್ನು ಈ ಮಟ್ಟಿಗೆ ದಿಕ್ಕುತಪ್ಪಿಸಲು ಬಹುಶಃ ಮೋದಿ ಮತ್ತು ಅವರ ಹಿಂದಿರುವ ಮತೀಯ ಶಕ್ತಿಗೆ ಮಾತ್ರ ಸಾಧ್ಯ.

******
ಮಾರ್ಚ್ ೧೭ ರಂದು ನ್ಯೂಜಿಲೆಂಡ್ ಕ್ರೈಸ್ಟ್ ಚರ್ಚ್ ನ ಮಸೀದಿ ಮೇಲೆ ನಡೆದ ದಾಳಿಯಲ್ಲಿ ೫೦ಕ್ಕೂ ಹೆಚ್ಚು ಜನ ಸಾವುಕಂಡು ಇದರ ಹಿಂದೆ ಜನಾಂಗೀಯ ದ್ವೇಷವೊಂದು ಹೆಡೆ ಬಿಚ್ಚಿತ್ತು. ಈ ದೇಶದ ಅಲ್ಪಸಂಖ್ಯಾತರ ಮೇಲೆ ನಡೆದ ಬರ್ಬರ ಕೃತ್ಯವಿದು. ಈ ಕೃತ್ಯಕ್ಕೆ ಇಡೀ ದೇಶ ನಡೆದುಕೊಂಡ ನಡೆ ಅತ್ಯಂತ ಘನತೆಯಿಂದ ಕೂಡಿದ್ದು, ಮಾನವೀಯತೆಯ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿತು.

ಭಾರತದಲ್ಲಿನ ಪುಲ್ವಾಮ ಘಟನೆ ಈ ದೇಶದ ಅಲ್ಪಸಂಖ್ಯಾತರನ್ನು ಕಟಕಟೆಗೆ ನಿಲ್ಲಿಸಿ ನೋಡುವ ಮತ್ತು ದೇಶಭಕ್ತಿಯ ಹೆಸರಿನಲ್ಲಿ ಮತ ಕುಯ್ಲೂ ನಡೆಸುವ ಆತ್ಮವಂಚನೆ ರಾಜಕೀಯ ನಡೆಯುತ್ತಿರುವ ಹೊತ್ತಿನಲ್ಲಿ ನ್ಯೂಜಿಲೆಂಡ್ ನ ಪ್ರಧಾನಿ ಮಸೀದಿ ಮೇಲಿನ ದಾಳಿಯಲ್ಲಿ ತನ್ನವರನ್ನು ಕಳೆದುಕೊಂಡು ದುಃಖತಪ್ತರಾದವರನ್ನು ಎದೆಗವುಚಿಕೊಂಡು ಸಂತೈಸುತ್ತಿದ್ದರು.

ಕಂಗಲಾಗಿದ ಜನಸಮುದಾಯಕ್ಕೆ ಸುರಕ್ಷತೆಯ ಭರವಸೆಯನ್ನು ಬಿತ್ತುತ್ತಿದ್ದರು. ಆ ದೇಶದ ಚರ್ಚ್ ಗಳಲ್ಲಿ , ಬೀದಿಗಳಲ್ಲಿ ಜನ ಕ್ಯಾಂಡಲ್ ಹಚ್ಚಿ ಮೃತರಿಗಾಗಿ ಪ್ರಾರ್ಥಿಸಿದ್ದರು. ಶುಕ್ರವಾರ ವಿಶೇಷ ಪ್ರಾರ್ಥನೆಯಲ್ಲಿ ಧರ್ಮಗುರು ಇಮಾಮ್ ಗಮಾಲ ಫೌಡ್ ಪ್ರಾರ್ಥಿಸಿದ್ದು ಹೀಗೆ.. “ We are broken- hearted, but we are not broken,” we are alive, we are together, we are determined to not let anyone diveide us.”

ಈ ದೇಶ ಸಂಕಷ್ಟದ ಕಾಲದಲೂ ಪ್ರೀತಿ, ಒಗ್ಗಟ್ಟು, ಮಾನವೀಯತೆಯನ್ನು ಮೆರೆಯಿತು, ರಾಜಕಾರಣದ ಕೊಳಕುತನವನ್ನು ಕಿಂಚಿತ್ತೂ ತೋರಲಿಲ್ಲ. ಭಾರತದಲ್ಲಿನ ಪುಲ್ವಮಾ ದಾಳಿ , ಅದಕ್ಕೆ ಪ್ರತಿಯಾಗಿ ನಡೆದ ಸರ್ಜಿಕಲ್ ಸ್ಟ್ರೈಕ್ ಗಳು ಅಧಿಕಾರ ಹಿಡಿಯುವ ರಹದಾರಿಯಾಗಿ ಕಟ್ಟಲ್ಪಡುತ್ತಿವೆ. ಇಲ್ಲಿ ದೇಶಭಕ್ತಿ, ಸೈನಿಕ, ಪ್ರಧಾನಿ ಹುದ್ದೆ ಎಲ್ಲವನ್ನೂ ಮಾರ್ಕೇಟಿಂಗ್ ಮಾಡಲಾಗುತ್ತಿದೆ. ನ್ಯೂಜಿಲೆಂಡ್ ನಿಂದ ಕಲಿಯಬೇಕಾದದ್ದು ಬಹಳಷ್ಟಿದೆ ಎಂದು ಯಾರಿಗಾದರೂ ಅನಿಸಬಾರದೇಕೆ?

‍ಲೇಖಕರು avadhi

March 28, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

  1. ashfaq peerzade

    ಪುಲ್ವಾಮಾ ಘಟನೆ ದುರಂತ ಮತ್ತು ತಮ್ಮ ಆಡಳಿತದ ಭದ್ರತಾವೈಫಲ್ಯ . ಇದನ್ನು ಮರೆಮಾಚಲು ಹರಿಬಿಟ್ಟ ಸಂಗತಿ ಎಂದರೆ ಅದು ದೇಶಭಕ್ತಿ ಎಂಬ ಪ್ರಾಯೋಜಿತ ಸನ್ನಿ.ನಿಜ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: