ಅಭಿಮನ್ಯು ತತ್ವ, ರಾಜಕೀಯ ಗಾಳದ ನಡುವೆ..

ಅನುಪಮಾ ಪ್ರಸಾದ್

ಬಾಲ್ಯದಲ್ಲಿ ಮುಸ್ಸಂಜೆ ಹೊತ್ತಲ್ಲಿ ಮನೆ ಜಗಲಿಯಲ್ಲಿ ಮಿಣಿಮಿಣಿ ಚಿಮಣಿ ದೀಪ ಉರಿಯುತ್ತಿದ್ದರೆ, ಮೂಲೆಯಲ್ಲಿರುವ ಮಂಚದ ಮೇಲೆ ಕುಳಿತು ವಿಶ್ರಾಂತಿ ಪಡೆಯುತ್ತಿದ್ದ  ಅಜ್ಜ (ತಾಯಿಯ ತಂದೆ))ನ ಬಳಿ ಕಥೆ ಹೇಳೆಂದು ಪೀಡಿಸುತ್ತಿದ್ದೆ.

ಅಜ್ಜ ಮಹಾಭಾರತ ಕಥೆಯಾದೀತೋ ರಾಮಾಯಣವಾದೀತೋ ಕೇಳುತ್ತಿದ್ದರು. ಯಾಕೋ ಏನೋ ನಂಗೆ ಕೃಷ್ಣ-ದ್ರೌಪದಿ ತತ್ವದ ಮಹಾಭಾರತವೇ ಇಷ್ಟವಾಗುತ್ತಿತ್ತು. ಕೆಲವೊಮ್ಮೆ ಮತ್ತೆ ಮತ್ತೆ ಹೇಳಿದ ಅಧ್ಯಾಯವನ್ನೇ ಪುನರಾವರ್ತಿಸುವಂತೆ ಮಾಡುತ್ತಿದ್ದೆ. ಭಾವರಸ ತಾಜಾ ಇರುತ್ತಿತ್ತು. ಕಥೆ, ಕಥೆಯ ತತ್ವ ಬದಲಾಗುತ್ತಿರಲಿಲ್ಲ.

ಅದರಲ್ಲಿ ಅಭಿಮನ್ಯು ಪ್ರಸಂಗವೂ ಒಂದು.

ದಿನಕ್ಕೊಂದು ಅಧ್ಯಾಯ ಹೇಳುತ್ತಿದ್ದರು. ಹಾಗಾಗಿ ಮರುದಿನ ಸಂಜೆಯಾಗುವುದನ್ನೇ ಕಾಯುತ್ತಿದ್ದ ನಾನು ಹಾಗು ತಮ್ಮ ಮುಸ್ಸಂಜೆಗೆ ಕೈಕಾಲು ತೊಳೆದು ಬಂದು ಒಪ್ಪಿಸಬೇಕಾದ ಬಾಯಿಪಾಠದ ಹರಕೆ ಸಲ್ಲಿಸಿ ಮಂಚ ಏರಿ ಅಜ್ಜನ ಆಸುಪಾಸು ಕುಳಿತುಬಿಡುತ್ತಿದ್ದೆವು. ಒಮ್ಮೆ ಬಂದರೆ ಹದಿನೈದೋ ಇಪ್ಪತ್ತೋ ದಿನ ಉಳಿಯುತ್ತಿದ್ದ ಅಜ್ಜ ಹೊರಟು ನಿಂತರೆ ನಮಗೆ ಭಣಭಣ. ಅಜ್ಜ ಭಾವ ಪ್ರಧಾನವಾಗಿ ಹೇಳುತ್ತಿದ್ದ ಒಂದೊಂದು  ಪ್ರಸಂಗದ ರಸವೂ ಮುಂದೆ ನಾನು ಓದುವಾಗ ಕಣ್ಣಿಗೆ ಕಟ್ಟುತ್ತಿತ್ತು. ರಾಮಾಯಣ, ಮಹಾಭಾರತವನ್ನುದ್ಧರಿಸುತ್ತ ಸಂಸ್ಕೃತಿ ಪಾಠ ಹೇಳುತ್ತ  ರಾಜಕಾರಣ ಮಾಡುವುದು ಈ ನೆಲಕ್ಕೆ ಹೊಸದಲ್ಲ. ಈಗಂತು ಚುನಾವಣ ಕಣದಲ್ಲಿ ತುಪತುಪನೆ ಅಪಭ್ರಂಶವಾಗಿ ದಿನದಿನವೂ ಕಿವಿಗೆ ಕಾದ ಸೀಸದಂತೆ ಸುರಿಯುತ್ತಿದೆ.

ತಾಯಿಯನ್ನೂ, ವಯೋವೃದ್ಧ – ಜ್ಞಾನವೃದ್ಧರನ್ನೂ ಗೌರವಿಸುವ, ಮನ್ನಣೆ ನೀಡುವ ಸಂಸ್ಕೃತಿ ಇಂದು  ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಜೋರು ಜೋರಾಗಿ ಮಾತಾಡುವವರಿಂದಲೇ ತುಳಿತಕ್ಕೊಳಗಾಗುತ್ತಿರುವದಕ್ಕೆ ನಾವೆಲ್ಲ ಮೂಕ ಸಾಕ್ಷಿಗಳಾಗಿದ್ಧೇವೆ. ಅದಕ್ಕಾಗಿ ಕನ್ನಡದ ಹೊರಗೆ ನೋಡಬೇಕಾಗಿಲ್ಲ. ಪಕ್ಷಪಾತಿಯಾಗಲ್ಲದೆ ಪಕ್ಷಾತೀತವಾದ ಸಾಕ್ಷಿಪ್ರಜ್ಞೆಯನ್ನಿಟ್ಟುಕೊಂಡು ಗಮನಿಸಿದರೆ, ಕನ್ನಡದ ರಾಜಧಾನಿಯಲ್ಲೇ ಎರಡು ಸಂಗತಿಗಳಲ್ಲೇ ಎಲ್ಲವೂ ಕಣ್ಣಿಗೆ ರಾಚುತ್ತಿದೆ. ರಾಜಧಾನಿಯಲ್ಲಿ ಸಂಭವಿಸಿದ ಇಬ್ಬರು  ಪ್ರತಿಷ್ಠಿತರ ಸಾವಿನ ಮನೆಯಲ್ಲೇ ಘಟಾನುಘಟಿಗಳ ನಡೆಯಲ್ಲಿದ್ದಿದ್ದು ಗಳ ಲೆಕ್ಕಾಚಾರವಾಗಿತ್ತೆಂಬುದು ಈಗ ಅತಿ ಸಾಮಾನ್ಯರಿಗೂ ಸ್ಪಷ್ಟವಾಗಿ ಅರ್ಥವಾಗುತ್ತಿದೆ.

ಒಂದೆಡೆ ಅಧಿಕಾರದ ಎಲ್ಲಾ ಸವಲತ್ತುಗಳನ್ನು ಕೈಯಲ್ಲಿಟ್ಟುಕೊಂಡು ತನ್ನ ಮಗನನ್ನ ಚುನಾವಣೆಗೆ ನಿಲ್ಲಿಸಿ, ಕೀಳು ದರ್ಜೆಯ ತಂತ್ರಗಾರಿಕೆಯನ್ನೆಲ್ಲ ಬಳಸಿ, ಅದೂ ಸಾಲದೆಂಬಂತೆ ವಿರೋಧಿ ಅಭ್ಯರ್ಥಿಯ ಹೆಸರಿನ ಮೂರು ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸುವಂತೆ ನೋಡಿಕೊಂಡು ಕೀಳು ಅನ್ನುವುದಕ್ಕಿಂತಲೂ ಕೆಳಮಟ್ಟಕ್ಕಿಳಿದು, ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಮಗನ ಪಕ್ಕ ನಿಂತು, “ನನ್ನ ಮಗ ಅಭಿಮನ್ಯುವಿನಂತೆ” ಅಂದಾಗ ನಗುವುದೋ ಅಳುವುದೋ ನೀವೇ ಹೇಳಿ ಎಂಬಂತಾಗುತ್ತಿದೆ. ಅಧಿಕಾರ ಪೀಠದಲ್ಲಿದ್ದು ಬಲಿಷ್ಟವಾಗಿದ್ದ ದ್ರೋಣಾಚಾರ್ಯ ಕೂಟ ಅಭಿಮನ್ಯುವಿನ ಸಾಮಾರ್ಥ್ಯವನ್ನೆದುರಿಸಲಾಗದೆ ಅವನನ್ನು ಬಲಿ ಹಾಕಿದ್ದು ಯಾವ ರೀತಿಯಲ್ಲಿ?

ಅಭಿಮನ್ಯು ಎಂಬುದನ್ನ ಒಂದು ಸಂಕೇತವಾಗಿ ನೋಡಿದರೆ, ತತ್ವವಾಗಿ ನೋಡಿದರೆ ನಿಜವಾದ ಅಭಿಮನ್ಯು ಈ ಸಂದರ್ಭದಲ್ಲಿ ಎದುರಾಳಿ ಅಭ್ಯರ್ಥಿಯಲ್ಲವೆ. ಇನ್ನು ಮಾತೆಯ ಬಗ್ಗೆ, ಸ್ತ್ರೀ ಸಬಲೀಕರಣದ ಬಗ್ಗೆ ಸದಾ ಮಾತಾಡುವವರು, ಅನುಭವದಲ್ಲೂ, ವಯಸ್ಸಲ್ಲೂ, ಸಾಮಾಜಿಕ ಕೆಲಸದಲ್ಲೂ ತೊಡಗಿಕೊಂಡು, ಪಕ್ಷ ಹಾಗು ಗಂಡನ ರಾಜಕೀಯ ಬದುಕಿಗೂ ಶಕ್ತಿಯಾಗಿ ನಿಂತಿದ್ದ, ಸಂಸ್ಕೃತಿ ಭಾಷೆಯಲ್ಲೇ ಹೇಳುವುದಾದರೆ ಅಂತಹ ಮಾತೆಯನ್ನು ಅವಮಾನಿಸಿ, ಬದಿಗೆ ಸರಿಸಿದ್ದನ್ನು ನೋಡುವಾಗ ಎತ್ತ ಸಾಗಿದ್ದೇವೆ, ಸಾಗುತ್ತಿದ್ದೇವೆ ಎಂಬುದರ ಕುರುಹು ಸರಿಯಾಗಿಯೇ ಸಿಗುತ್ತಿದೆ.

ಮಾತಿಗೆ ನಿಂತಾಗ ನಾಲಿಗೆಯನ್ನು ಬೇಕಾಬಿಟ್ಟಿ ಹೊರಳಲು ಬಿಡದೆ ಪ್ರಬುದ್ಧರಂತೆ ತೋರುತ್ತಿರುವ ಈ ಇಬ್ಬರು ತಾಯಂದಿರಾದ ಸುಮಲತಾ ಅಂಬರೀಷ್ ಆಗಲಿ, ತೇಜಸ್ವಿನಿ ಅನಂತ ಕುಮಾರ್ ಆಗಲಿ ಸ್ವಹಿತ ರಾಜಕೀಯದ ಗಾಳದೊಂದಿಗೆ ಕಣ್ಣೊರೆಸಲು ಕರವಸ್ತ್ರ ಹಿಡಿದು ಬರುವ ಕೀಳು ಅಭಿರುಚಿಯ ರಾಜಕಾರಣದ ಕಾಡ್ಗಿಚ್ಚಿನತ್ತ ಸಾಗದ ಪ್ರಜ್ಞಾವಂತಿಕೆಯನ್ನ ತೋರಿಸಬೇಕಾಗಿದೆ.

‍ಲೇಖಕರು avadhi

March 28, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: