ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿಟ್ಟು ಹೋದವರ ಚರಮಗೀತೆ

ಆರ್ ಎನ್ ದರ್ಗಾದವರ

ನನ್ನವರ ಮನೆಗಳು ಎಂದೆಂದಿಗೂ ಮನೆಗಳಾಗಿರಲಿಲ್ಲ
ಹೂತ ಶವಗಳ ದಿಬ್ಬದಂತಿದ್ದವು

ಇಲಿ, ಹೆಗ್ಗಣಗಳು ಉಪವಾಸ ನರಳುತ್ತಿದ್ದವು
ಕೆರೋಸಿನ್ ದೀಪದ ಹೊರತು
ಯಾವ ಬೆಳಕು ಸುಳಿಯುತ್ತಿರಲಿಲ್ಲ
ಹೊಟ್ಟೆ ತುಂಬಿದ ಮೇಲೂ ಹಳದಿಕಣ್ಣಿನ
ನಾಯಿಗಳು
ಬೀದಿಯಲಿ ತಿರುಗುತ್ತಿದ್ದವು

ನನ್ನವರು ಆಳುತ್ತಿರಲಿಲ್ಲ, ಆಳಾಗಿದ್ದವರು
ನನ್ನವರು ಅಳುತ್ತಿರಲಿಲ್ಲ
ಅಸಲಿಗೆ ಅಳುವೆ ಬರುತ್ತಿರಲಿಲ್ಲವೆನ್ನಿ,
ಬಹುಶಃ
ಕಣ್ಣೀರು ಬತ್ತಿಯಾಗಿತ್ತು

ಮದ್ಯ ಕುಡಿದವರ ಮಧ್ಯ ಇರುತ್ತಿದ್ದರು,
ಅವರು ಎಸೆದ ಬಾಟಲಿಯಲಿ
ನೃತ್ಯ ಮಾಡುತ್ತಿದ್ದರು
ಬೆವರಿಗೂ, ರಕುತಕೂ ವ್ಯತ್ಯಾಸ
ಅರಿಯದಷ್ಟು ಪಾಪಿಗಳಾಗಿದ್ದರು

ನನ್ನವರು ತಮಗಾಗಿ ಜೋಗುಳ
ಹಾಡಿದವರಲ್ಲ,
ತೊಟ್ಟಿಲ ಕಟ್ಟಿದವರಲ್ಲ ಮಷಿನ್ ನಂತಿದ್ದವರು
ಕಾರ್ಯ ಸ್ಥಗಿತವಾದಗಲೊಮ್ಮೆ
ರಿಪೇರಿಗೊಳಗಾದವರು

ಕನ್ನಡಿ ನೋಡಲು ನಾಚುತ್ತಿದ್ದವರು,
ಗೋಡೆ ಜೊತೆಯಲಿ ಮಾತಿಗಿಳಿಯುತ್ತಿದ್ದರು
ಕತ್ತಲಿಗೂ ತುಂಡು ಮೈಬಟ್ಟೆಯಿಂದ
ಕೌದಿ ಹೊಲೆದು ಬೆಚ್ಚಗಿಟ್ಟಿದ್ದರು
ಮುಂದೊಂದು ದಿನ ಸಾಕ್ಷಿಯಾದೀತೆಂದು
ಡಂಗುರ ಬಡೆಯಲೆತ್ನಿಸುವ ಕೈಗಳಿಗೆ
ಕತ್ತಿ ಮೊನಚಿನಿಂದ ತಡಿಯಲಾಗುತ್ತಿತ್ತು
ನನ್ನವರು ತಾಳ್ಮೆಯನು ಹುಟ್ಟು ಹಾಕುತ್ತಿದ್ದರು

ನನ್ನವರು ಇನ್ನೂ ಜೀವಂತವಾಗಿದ್ದಾರೆ,
ಯಾರದೋ ಕಾಲಿನಲಿ ಪಾದುಕೆಯಾಗಿ,
ಭವ್ಯ ಬಂಗಲೆಯ ಗೋಡೆಯ ಮೇಲೆ
ಆಟಿಕೆಯಾಗಿ
ಉತ್ಸವ ಹೊರಡುವ ದೇವಾಲಯದ
ಮುಂಭಾಗದಲಿರುವ ನಗಾರಿಯಾಗಿ,
ರಣಬೀದಿಯ ನಾಟಕದ ಕಥಾವಸ್ತುವಾಗಿ

ಇನ್ನು ಕೆಲವು ಕಡೆ
ಹೀಗೆ,
ಹೆಣದಂತಿದ್ದರೂ ಉಸಿರುಸುತ್ತಿದ್ದಾರೆ.

‍ಲೇಖಕರು Avadhi

28 March, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading